Sunday, May 11, 2008

ಮತದಾನ ಪ್ರಸಂಗ

ಅರ್ಜಿಯಲ್ಲಿ ನನ್ನ ಹೆಸರನ್ನು ಸರಿಯಾಗಿಯೇ ಬರೆದು ಕೊಟ್ಟಿದ್ದೆ ; ಇತರ ವಿವರಗಳನ್ನೂ ಸ್ಪಷ್ಟವಾಗಿ ಕಾಣುವಂತೆ ನಮೂದಿಸಿದ್ದೆ. ಆದರೆ ಮತದಾರರ ಪಟ್ಟಿ ತಯಾರಿಸುವ ಅಕಾರಿಗಳು ನನ್ನ ಹೆಸರನ್ನು ‘ಹರೀಶ್ ಕೀರೆ’ ಅಂತ ಬರೆದು ಅಧ್ವಾನ ಮಾಡಿಬಿಟ್ಟಿದ್ದರು. ಪಕ್ಷವೊಂದರ ಕಾರ್‍ಯಕರ್ತರು ಮನೆಗೆ ಬಂದು ಹೆಸರಿದ್ದ ಚೀಟಿ ಕೊಟ್ಟಾಗಲೇ ನನಗೆ ಮೈ ಉರಿದು ಹೋಗಿತ್ತು. ತಿದ್ದುಪಡಿಗೆ ನೀಡಲು ಸಮಯವಿರಲಿಲ್ಲ ; ಅದನ್ನೇ ಹಿಡಿದುಕೊಂಡು ಮತಗಟ್ಟೆಗೆ ಹೋದೆ.

ಜನರೇ ಇರಲಿಲ್ಲ. ಒಂದು ಕ್ಷಣ ಇಲ್ಲಿ ಮತದಾನ ನಡೆಯುತ್ತಿದೆಯೇ ಇಲ್ಲವೇ ಅಂತ ಅನುಮಾನ ಬಂತು. ಶಾಲೆಯ ಹೊರಗಿದ್ದ ಪೊಲೀಸರನ್ನೂ ಒಳಗೆ ನಾನಾ ಚಟುವಟಿಕೆಗಳನ್ನೂ ಕಂಡು ಅನುಮಾನ ಪರಿಹಾರವಾಯಿತು. ಒಳಗೆ ನುಗ್ಗಿ ಅಕಾರಿಗೆ ಚೀಟಿ ತೋರಿಸಿದೆ. ಆತ ನನ್ನ ಮುಖ ಕೂಡ ನೋಡದೆ, ಮತದಾರರ ಪಟ್ಟಿ ನೋಡುತ್ತ ಏನನ್ನೋ ಗಾಢವಾಗಿ ಹುಡುಕಿದ. ಬಳಿಕ ‘ಹರೀಶ್ ಕೀರೆ’ ಅಂತ ಘೋಷಿಸಿ, ಈತ ಯಾರೋ ದಕ್ಷಿಣ ಆಫ್ರಿಕಾದ ಪ್ರಜೆಯೇ ಇರಬೇಕು ಎಂಬ ಗುಮಾನಿಯಿಂದ ತಲೆ ಎತ್ತಿ ನೋಡಿದ.

ನಾನು ಪೆಚ್ಚು ನಗು ನಕ್ಕು ‘ಹರೀಶ್ ಕೇರ’ ಅಂದೆ.

‘ಹರೀಶ್ ಕೀರೆ’ ಅಂತ ಒತ್ತಿ ಹೇಳುತ್ತ ಆತ ಅನುಮಾನದಿಂದ ನನ್ನನ್ನೇ ನೋಡಿದ.

‘ಕೀರೆ ಅಲ್ಲ ಕೇರ’

‘ಮತ್ತೆ ಇಲ್ಲಿ ಕೀರೆ ಅಂತಿದೆ’

‘ಇರುತ್ತೆ, ಕನ್ನಡ ಸರಿಯಾಗಿ ಗೊತ್ತಿಲ್ಲದೋರು ಲಿಸ್ಟ್ ಮಾಡಿದರೆ ಹಾಗೇ ಇರುತ್ತೆ’ ಇಷ್ಟು ಹೊತ್ತಿಗೆ ನನ್ನ ಸಹನೆ ಮುಗಿದಿತ್ತು.

‘ನಿಮ್ಮ ಐಡಿ ಕಾರ್ಡ್ ತೋರಿಸಿ’ ಆತ ಕೇಳುವ ಮೊದಲೇ ಡ್ರೈವಿಂಗ್ ಲೈಸೆನ್ಸ್ ತೆಗೆದು ಕೊಟ್ಟೆ . ಆತ ಫೋಟೋ ತಾಳೆ ಹಾಕಿ ಓಕೆ ಅಂದ. ಅವನ ಪಕ್ಕ ಕೂತಿದ್ದ ಹೆಂಗಸು ನನ್ನ ಎಡ ತೋರು ಬೆರಳಿಗೆ ನಾಮ ಹಾಕಿದಳು. ಅದು ಚುನಾವಣಾ ಆಯುಕ್ತ ಗೋಪಾಲಸ್ವಾಮಿ ನಾಮದಂತೆಯೇ ಉದ್ದಕ್ಕಿತ್ತು.

ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನ ಮುಂದೆ ನಿಂತೆ. ಹೆಸರುಗಳು ಒಂದೊಂದಾಗಿ ಕಂಡವು- ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಚ್.ಎಂ.ರೇವಣ್ಣ, ಲೋಕೇಶ್ ಗೌಡ, ಮಲ್ಲಿಕಾರ್ಜುನ ಬೊಮ್ಮಾಯಿ...

ಒಬ್ಬ ಭೂಗಳ್ಳ. ಬೆಂಗಳೂರು ಸುತ್ತಮುತ್ತಲಿನ ಭೂಮಿಯನ್ನು ಹರಿದು ಹಂಚಿ ಸ್ವಲಾಭಕ್ಕೂ ಜಾತಿವಸ್ತರಿಗೂ ಪಕ್ಷದವರಿಗೂ ನೀಡಿ ಕೋಟಿಗಟ್ಟಲೆ ಕೊಳ್ಳೆಹೊಡೆದವನು. ಇನ್ನೊಬ್ಬ ಅವನಿಗಿಂತ ಕಡಿಮೆಯಿಲ್ಲದ ಅತ್ಯಾಚಾರಿ. ಮತ್ತೊಬ್ಬ ಪುಡಿ ರೌಡಿಗಳನ್ನು ಇಟ್ಟುಕೊಂಡು ಪ್ರದೇಶದಲ್ಲಿ ದಾಂಧಲೆ ಎಬ್ಬಿಸುವವನು. ಮಗದೊಬ್ಬ ನರಸತ್ತವನು...

ಮಹಾ ಭ್ರಷ್ಟರು, ನೀಚರು, ದಗಲ್ಬಾಜಿಗಳು ತುಂಬಿಹೋಗಿರುವ ಆ ಪಟ್ಟಿಯಿಂದ ಒಂದೇ ಒಂದು ಸಭ್ಯ, ದೂರದರ್ಶಿತ್ವ ಉಳ್ಳ ನಾಯಕನನ್ನು ಹೆಕ್ಕಿ ತೆಗೆಯುವುದು ನನಗೆ ಅಸಾಧ್ಯವೆನ್ನಿಸತೊಡಗಿತು. ದಗಾಕೋರರಿಂದ ತುಂಬಿಹೋಗಿರುವ ಈ ದೇಶಕ್ಕೆ ಭವಿಷ್ಯವೇ ಇಲ್ಲ ಅಂತ ತೀವ್ರವಾಗಿ ಅನ್ನಿಸಿತು. ಹಿಂದೆ ಬೋ ಮರದ ಕೆಳಗೆ ನಿಂತ ಸಿದ್ಧಾರ್ಥನಿಗೆ ಆಗಿತ್ತಲ್ಲ ; ಅಂಥದೇ ಒಂದು ಮಹತ್ ದರ್ಶನ ಈ ಯಃಕಶ್ಚಿತ್ ಯಂತ್ರದ ಮುಂದೆ ನಿಂತುಕೊಂಡು ನನಗೆ ಆಗತೊಡಗಿತ್ತು. ಈ ನಾಲಾಯಕ್ ಮಂದಿಯಲ್ಲಿ ಯಾರಿಗೆ ಮತ ಹಾಕಲಿ ? ನಾನು ಮತ ಹಾಕಿದ ವ್ಯಕ್ತಿ ಒಂದೇ ಒಂದು ಮತದ ಅಂತರದಿಂದ ಆರಿಸಿ ಬಂದರೂ ನನ್ನನ್ನು ಜೀವನಪರ್‍ಯಂತ ಪಾಪಪ್ರಜ್ಞೆ ಕಾಡಬಹುದು ಅನ್ನಿಸಿ ಕಣ್ಣು ಸುತ್ತಿ ಬಂತು.

ನಾನು ಯಂತ್ರದ ಮುಂದೆ ನಿಂತು ಧ್ಯಾನಮಗ್ನನಾದುದನ್ನು ಕಂಡು ಅಲ್ಲಿ ಕುಳಿತಿದ್ದ ಅಕಾರಿ ಎದ್ದು ‘ಎನಿ ಪ್ರಾಬ್ಲಮ್ ?’ ಎನ್ನುತ್ತ ನನ್ನ ಕಡೆಗೆ ಬರತೊಡಗಿದ. ನಾನು ಎಚ್ಚೆತ್ತುಕೊಂಡು, ‘ಏನೂ ಪ್ರಾಬ್ಲಮ್ ಇಲ್ಲ ಕಣ್ರೀ, ಈ ಕಳ್ಳ ನನ್ ಮಕ್ಕಳಲ್ಲಿ ಯಾರಿಗೆ ಹಾಕೋದು ಗೊತ್ತಾಗ್ತಾಯಿಲ್ಲ’ ಅಂದೆ.

ನನ್ನ ಪ್ರಶ್ನೆಗೆ ಆತ ಕಕ್ಕಾಬಿಕ್ಕಿಯಾದ. ರೂಮಿನೊಳಗೆ ಸಣ್ಣ ನಗೆಯ ಅಲೆಗಳು ಎದ್ದವು. ಕಣ್ಣು ಮುಚ್ಚಿ ಒಂದು ನೀಲಿ ಬಟನ್ ಒತ್ತಿ ಈಚೆ ಬಂದೆ.

ಹೊರಗೆ ‘ನನ್ನ ಹೆಸರು ಪಟ್ಟಿಯಿಂದ ಕಿತ್ತು ಹಾಕಿದ್ದಾರೆ’ ಎಂದು ಒಬ್ಬ ಗಲಾಟೆ ಮಾಡತೊಡಗಿದ್ದ. ಈಗ ತಾನೇ ವ್ಯಾನಿನಿಂದ ಇಳಿದ ಚಾನೆಲ್ ಒಂದರ ಹುಡುಗಿ ಮೈಕ್ ಹಿಡಿದುಕೊಂಡು ಅವನ ಕಡೆ ಧಾವಿಸುತ್ತಿದ್ದಳು.

ಚುನಾವಣೆ ರಾಜಕೀಯದ ಬಗ್ಗೆ ಆಳವಾಗಿ ಚಿಂತಿಸುವ ಪ್ರಗತಿಪರರ ಕಳವಳಗಳು, ರಜೆ ಇದ್ದರೂ ಮತ ಹಾಕಲು ಹೋಗದ ವಿದ್ಯಾವಂತರ ಸಂಕಟಗಳು ಕೊಂಚ ಕೊಂಚವಾಗಿ ಅರ್ಥವಾಗತೊಡಗಿದ್ದವು.

Thursday, May 8, 2008

ಮೌಲ್ಯ

"ಸಾರ್, ನನಗೆ ರಕ್ಷಣೆ ನೀಡಿ"
"ಏನಾಯಿತು, ಯಾರು ನೀನು ?"
"ನಾನು ಬೀದಿಯಲ್ಲಿ ಬರುತ್ತಿದ್ದಾಗ ಹಲವಾರು ಮಂದಿ ತಲವಾರು ಝಳಪಿಸುತ್ತ ನನ್ನ ಬೆನ್ನು ಹತ್ತ್ತಿದರು. ಅವರಿಂದ ಪಾರಾಗಲು ಗಲ್ಲಿ ಬಿದ್ದು ಇಲ್ಲಿಗೆ ಬಂದೆ"
"ನಿನ್ನ ಹೆಸರೇನು ?"
"......"
"ಹೆದರಬೇಡ. ಶರಣಾಗತರಿಗೆ ರಕ್ಷಣೆ ನೀಡಬೇಕೆಂದು ನಮ್ಮ ಧರ್ಮದಲ್ಲಿದೆ. ಬಾ ಇಲ್ಲಿ ಅವಿತುಕೋ"
ಸ್ವಲ್ಪವೇ ಹೊತ್ತಿನಲ್ಲಿ ಕ್ರೋಧದಿಂದ ಉನ್ಮತ್ತವಾಗಿದ್ದ ಒಂದು ಗುಂಪು ಅಲ್ಲಿಗೆ ಬಂತು.
"ಇತ್ತ ಕಡೆ ಓಡಿ ಬಂದ ಆ ನೀಚ ಎಲ್ಲಿ ಹೋದ ?"
"ಸುಳ್ಳು ಹೇಳಬಾರದೆಂದು ನಮ್ಮ ಧರ್ಮದಲ್ಲಿ ಹೇಳಿದೆ. ಇದೋ ಇಲ್ಲಿ ಅವಿತಿದ್ದಾನೆ ನೋಡಿರಿ"