Thursday, August 6, 2009

ಅಡಿಗ ಮತ್ತು ಇಂಗ್ಲಿಷ್ ಸಾಹಿತ್ಯ


“ಮಂಗಳೂರು, ಭಾರತದ ಕರಾವಳಿಯ ಪಟ್ಟಣ. ಅಲ್ಲಿ ನಾನು ಸುಮಾರು ೧೬ ವರ್ಷ ವಯಸ್ಸಾಗುವವರೆಗೆ ಇದ್ದೆ. ಈಗ ಅದು ಮಾಲ್‌ಗಳು, ಕಾಲ್‌ಸೆಂಟರ್‌ಗಳಿಂದ ತುಂಬಿರುವ ಬೆಳೆದ ನಗರವಾಗಿದೆ. ೧೯೮೦ರ ದಶಕದಲ್ಲಿ ಅದು ಸಮಾಜವಾದಿ ದೇಶವೊಂದರ ದೇಸೀ ಮಾದರಿಯ ಪೇಟೆಯಾಗಿತ್ತು. ಪುಸ್ತಕಗಳು ಅಂದು ದುಬಾರಿಯೆನಿಸಿದ್ದವು. ಕೊಂಡುಕೊಳ್ಳುವವರು ಕಡಿಮೆ ಇದ್ದರು. ನಾವು ಸರ್ಕ್ಯುಲೇಟಿಂಗ್ ಲೈಬ್ರರಿಗಳಿಗೆ ಸೇರಿ ಪುಸ್ತಕ ತಂದು ಓದುತ್ತಿದ್ದೆವು- ಹದಿನೈದು ದಿನಕ್ಕೊಂದು ಕಾದಂಬರಿಗೆ ಎರಡು ರೂಪಾಯಿ, ಕಾಮಿಕ್ಸ್‌ಗೆ ೫೦ ಪೈಸೆ ಬಾಡಿಗೆ."

“ದೇಶಭಕ್ತಿಯ ಚರ್ಚೆಗಳು ನನ್ನ ತಲೆಮಾರಿಗಾಗಲೇ ಅಪ್ರಸ್ತುತವಾಗಿದ್ದವು. ನನ್ನ ಅಜ್ಜಂದಿರು ಹೇಳುತ್ತಿದ್ದ ‘ಕಿಂಗ್ಸ್ ಇಂಗ್ಲಿಷ್’ ನಮ್ಮ ಮಟ್ಟಿಗೆ ‘ನೆಹರೂ ಇಂಗ್ಲಿಷ್’ ಆಗಿತ್ತು. ೧೯೪೭ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಪ್ರಧಾನಿ ಮಾಡಿದ ಭಾಷಣದ ‘ವಿಯ ಜತೆ ಒಪ್ಪಂದ’, ಗಾಂಜಿ ಅವರ ಹತ್ಯೆಯಾದಾಗ ಅವರು ನುಡಿದ ‘ನಮ್ಮ ಜೀವನಗಳಿಂದ ಬೆಳಕು ಹೊರಟುಹೋಗಿದೆ’- ಇತ್ಯಾದಿಗಳು ಅಲ್ಲಲ್ಲಿ, ನಮ್ಮ ಪಠ್ಯಪುಸ್ತಕಗಳಲ್ಲಿ, ರೇಡಿಯೋಗಳಲ್ಲಿ, ಪತ್ರಿಕೆಗಳಲ್ಲಿ ತುಣುಕು ತುಣುಕಾಗಿ ಕಣ್ಣಿಗೆ ಬೀಳುತ್ತಿದ್ದವು."

“ದಕ್ಷಿಣ ಭಾರತೀಯ ಭಾಷೆಯಾದ ಕನ್ನಡ, ಭಾರತೀಯ ಪದಗಳಲ್ಲಿ ಹೇಳುವುದಾದರೆ ನನ್ನ ‘ಮಾತೃಭಾಷೆ’ (ಅಂದರೆ ಸಾಮಾನ್ಯವಾಗಿ ತಂದೆ ಮಾತನಾಡುತ್ತಿದ್ದ ಭಾಷೆ), ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಸೃಜಿಸಿದೆ. ಆದರೆ ಅದರ ಕವಿಗಳು ಹಾಗೂ ಸಾಹಿತಿಗಳಲ್ಲಿ ನನ್ನನ್ನು ಪ್ರಭಾವಿಸಿದವರು ಒಬ್ಬರು ಮಾತ್ರ- ಯು.ಆರ್.ಅನಂತಮೂರ್ತಿ (ಭಾರತದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು). ಅದೂ ಕೂಡ ಅವರ ಒಂದು ಕಾದಂಬರಿ ಸಿನೆಮಾ ಆಗಿದೆ ಎಬ ಕಾರಣದಿಂದ. ನನ್ನ ಹೈಸ್ಕೂಲ್ ಸಹಪಾಠಿಗಳಲ್ಲಿ ತರಗತಿಯಿಂದ ಆಚೆಗೆ ಕನ್ನಡ ಪುಸ್ತಕ ಓದುತ್ತಿದ್ದವರು ಅಪರೂಪ. ಅಲ್ಲಿ ನಮಗೆ ಒತ್ತಾಯದಿಂದ ಪದ್ಯ ಹಾಗೂ ಗದ್ಯದ ತುಣುಕುಗಳನ್ನು ಜೀವವೇ ಇಲ್ಲದ ನೀರಸ ರೀತಿಯಲ್ಲಿ, ೮೦ರ ದಶಕದ ಟಿಪಿಕಲ್ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಕಲಿಸಲಾಗುತ್ತಿತ್ತು. ನಮ್ಮನ್ನು ಸೆಳೆಯುತ್ತಿದ್ದ ಆಕರ್ಷಕ ಬರಹಗಳೆಲ್ಲ ಇಂಗ್ಲಿಷ್‌ನಲ್ಲಿದ್ದವು."

‘ಬಿಳಿ ಹುಲಿ’ಗೆ ಬೂಕರ್ ಪ್ರಶಸ್ತಿ ಪಡೆದ ಅರವಿಂದ್ ಅಡಿಗ ಈ ಬಾರಿ ‘ಬಿಟ್ವೀನ್ ದಿ ಅಸಾಸಿನೇಶನ್ಸ್’ ಎನ್ನುತ್ತ ಪ್ರತ್ಯಕ್ಷರಾಗಿದ್ದಾರೆ. ಇದು ೧೯೮೪ರಲ್ಲಿ ನಡೆದ ಇಂದಿರಾ ಗಾಂ ಹತ್ಯೆ ಹಾಗೂ ೧೯೯೧ರಲ್ಲಿ ನಡೆದ ರಾಜೀವ್ ಗಾಂ ಕಗ್ಗೊಲೆಗಳ ನಡುವಿನ ಕಾಲದಲ್ಲಿ ‘ಕಿತ್ತೂರು’ ಎಂಬ ಕಾಲ್ಪನಿಕ ಪಟ್ಟಣದಲ್ಲಿ ನಡೆಯುವ ಕತೆಗಳ ಸಂಕಲನ.

ಮಂಗಳೂರಿನ ಪರಿಸರ-ಬಾಲ್ಯ- ಸಾಹಿತ್ಯ ಪ್ರೇರಣೆ ಇತ್ಯಾದಿಗಳ ಬಗ್ಗೆ ಅವರು ಬರೆದುಕೊಂಡ ‘ಇಂಗ್ಲಿಷ್ ಸಾಹಿತ್ಯ ನನ್ನನ್ನು ಹೇಗೆ ರೂಪಿಸಿತು ?’ ಎಂಬ ಲೇಖನದಿಂದ ಆಯ್ದ ಭಾಗಗಳಿವು. ಇಡೀ ಲೇಖನ ಓದಬೇಕಾದರೆ ಇಲ್ಲಿದೆ : http://www.independent.co.uk/arts-entertainment/books/features/aravind-adiga-how-english-literature-shaped-me-1749429.html

Saturday, August 1, 2009

ಆ ಬರಹ ಮಾರ್ಕ್ವೆಜ್‌ನದಲ್ಲ !


ಮೊದಲ ಬಾರಿಗೆ, ನನ್ನ ಬರಹದ ಬಗ್ಗೆ ನನಗೇ ನಾಚಿಕೆಯಾಗುವಂಥ ಪರಿಸ್ಥಿತಿ ಬಂದಿದೆ. ಹೇಗೆ ಪಿಗ್ಗಿ ಬಿದ್ದೆ ಎಂಬುದನ್ನು ನೆನೆಸಿಕೊಂಡರೆ ಈಗ ನಗುವೂ ಬರುತ್ತಿದೆ.

ಕಳೆದ ಬಾರಿ ‘ಮಾರ್ಕ್ವೆಜ್ ಗುಡ್‌ಬೈ ಹೇಳುತ್ತಿದ್ದಾನೆ’ ಲೇಖನ ಪೋಸ್ಟ್ ಮಾಡಿದ್ದೆನಲ್ಲ. ಆ ಲೇಖನ ಮಾರ್ಕ್ವೆಜ್‌ನದಲ್ಲವೇ ಅಲ್ಲ ! ಅದು ‘ಜಾನ್ ವೆಲ್ಷ್’ ಎಂಬ ಹೆಸರಿನ ಎರಡನೇ ದರ್ಜೆಯ ಕವಿ ಬರೆದು ಮಾರ್ಕ್ವೆಜ್ ಹೆಸರಿನಲ್ಲಿ ತೇಲಿಬಿಟ್ಟದ್ದು. ಮೇಲ್ ಕಳಿಸಿದ ಮಿತ್ರರೇ ಇದನ್ನೂ ನನಗೆ ತಿಳಿಸಿದರು, ಆದರೆ ಗೊತ್ತಾಗುವಷ್ಟರಲ್ಲಿ ಅನಾಹುತ ಆಗಿಬಿಟ್ಟಿತ್ತು.

೨೦೦೦ನೇ ಇಸವಿಯಲ್ಲಿ ಪೆರುವಿನ ‘ಲಾ ರಿಪಬ್ಲಿಕಾ’ ಎಂಬ ಹೆಸರಿನ ಪತ್ರಿಕೆಯಲ್ಲಿ ಈ ಕವನ ಮೊದಲ ಬಾರಿ ಮಾರ್ಕ್ವೆಜ್ ಹೆಸರಿನಲ್ಲಿ ಪ್ರಕಟವಾಯಿತು. ಬಹಳ ಜನ ಇದನ್ನು ನಂಬಿಯೂಬಿಟ್ಟರು. ಹಾಗೇ ಅದು ಅಲ್ಲಿಂದ ಅಂತರ್ಜಾಲಕ್ಕೆ ಬಂತು. ಮೇಲ್‌ಗಳು ಹರಿದಾಡತೊಡಗಿದವು. ಹೇಗೂ ಮಾರ್ಕ್ವೆಜ್ ಅಸ್ವಸ್ಥ ಎಂಬ ಸುದ್ದಿ ನಿಜವೇ ಇತ್ತಲ್ಲ , ಇದೂ ನಿಜವೇ ಇರಬಹುದೆಂದುಕೊಂಡರು ಜನ.

ಇದು ಮಾರ್ಕ್ವೆಜ್ ಗಮನಕ್ಕೆ ಬಂದಾಗ ಆತ ನೊಂದುಕೊಂಡ. ಮೇಲ್ ಅನ್ನು ನೋಡಿ- “ಬರಿ ಸೆಂಟಿಮೆಂಟಲ್ ಕ್ರಾಪ್ ! ಇಂಥದ್ದನ್ನು ನಾನು ಬರೆದೇನು ಎಂದು ನೀವು ನಂಬುವಿರಾದರೂ ಹೇಗೆ !" ಎಂದನಂತೆ ಆತ !

ಇಂಟರ್‌ನೆಟ್ ಇಂಥ ಮಿಥ್‌ಗಳನ್ನು ಹರಡುವ ಕೇಂದ್ರವಾಗಿದೆ ಎಂಬುದು ಕೂಡ ನಮ್ಮ ಎಚ್ಚರಕ್ಕೆ ಹೊಸ ಕಾರಣವನ್ನು ಈಗ ಸೇರಿಸಿದೆ. ನನ್ನ ದುಡುಕಿಗೆ ಸಾಕ್ಷಿಯಾಗಿ ಈ ಬರಹ ಇರಲಿ ಎಂದು ಬ್ಲಾಗ್‌ನಲ್ಲಿ ಅಳಿಸದೇ ಹಾಗೇ ಬಿಟ್ಟಿದ್ದೇನೆ.

ಈ ಕವನದ ಹಿನ್ನೆಲೆ ಮುನ್ನೆಲೆಗಳ ಬಗ್ಗೆ ಇನ್ನಷ್ಟು ತಿಳಿಯಬೇಕಾದರೆ ಈ ಲಿಂಕ್ ನೋಡಿ: http://www.vahidnab.com/marquez.pdf

Sunday, July 26, 2009

ಮಾರ್ಕ್ವೆಜ್ ಗುಡ್‌ಬೈ ಹೇಳುತ್ತಿದ್ದಾನೆ


ಲ್ಯಾಟಿನ್ ಅಮೆರಿಕದ ಕಾದಂಬರಿಕಾರ ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್, ಸಾಹಿತ್ಯದ ಮೇಲೆ ಪ್ರೀತಿ ಹೊಂದಿದವರಿಗೆಲ್ಲ ಗೊತ್ತು.

ಆತನಿಗೀಗ ಮೆದೋಜೀರಕ ಗ್ರಂಥಿಯ ಕ್ಯಾನ್ಸರ್. ಎರಡನೆಯದೋ ಮೂರನೆಯದೋ ಹಂತದಲ್ಲಿರುವ ಅದು ಆತನ ಜೀವ ಹಿಂಡುತ್ತಿದೆ.

ಹಾಗಾಗಿ ಆತ ಸಾರ್ವಜನಿಕ ಜೀವನಕ್ಕೆ ಗುಡ್‌ಬೈ ಹೇಳಿದ್ದಾನೆ. ಇನ್ನು ಆತ ಭಾಷಣ ಮಾಡುವುದಿಲ್ಲ, ಫೋಟೋಗೆ ಪೋಸ್ ನೀಡುವುದಿಲ್ಲ, ಸಂದೇಶಗಳನ್ನು ಕೊಡುವುದಿಲ್ಲ.

ಬಹುಶಃ, ಏನನ್ನೂ ಬರೆಯುವುದೂ ಇಲ್ಲ.

‘ನೂರು ವರ್ಷದ ಏಕಾಂತ’ಕ್ಕೆ ತೆರಳುವ ಮುನ್ನ ತನ್ನ ಗೆಳೆಯರಿಗೆ, ಆತ್ಮೀಯರಿಗೆ ಸಂದೇಶವೊಂದನ್ನು ಕಳಿಸಿದ್ದಾನೆ. ಅದನ್ನು ನನ್ನ ಆತ್ಮೀಯರೊಬ್ಬರು ನನಗೆ ಕಳಿಸಿದರು. ನಿಮಗೆ ಅದನ್ನು ಹಂಚದೆ ಇರಲು ನನ್ನಿಂದ ಸಾಧ್ಯವೇ ಇಲ್ಲ ಅನಿಸಿತು.

ಅದು ಹೀಗಿದೆ :

“ನಾನೊಂದು ಕೇವಲ ಗೊಂಬೆ ಎಂಬುದನ್ನು ಮರೆತು, ದೇವರು ನನಗೆ ಇನ್ನೊಂದು ಜೀವನದ ತುಣುಕನ್ನು ನೀಡಿದರೆ, ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ರೀತಿಯಲ್ಲಿ ಅದನ್ನು ವಿನಿಯೋಗಿಸಲು ಯತ್ನಿಸುವೆ.

ನಾನು ಯೋಚಿಸಿರುವುದನ್ನೆಲ್ಲ ಹೇಳಲು ಆಗುತ್ತದೋ ಇಲ್ಲವೋ. ಆದರೆ ಹೇಳುವುದನ್ನೆಲ್ಲ ಯೋಚಿಸಿರುತ್ತೇನೆ.
ಯೋಚನೆಗಳು, ವಸ್ತುಗಳು ಎಷ್ಟು ಬೆಲೆ ಬಾಳುತ್ತವೆಂದಲ್ಲ, ಏನನ್ನು ಪ್ರತಿನಿಸುತ್ತವೆ ಎಂದು ಮೌಲ್ಯ ಕಟ್ಟುತ್ತೇನೆ.

ಕಡಿಮೆ ನಿದ್ರಿಸುತ್ತೇನೆ, ಹೆಚ್ಚು ಕನಸುತ್ತೇನೆ. ನಾವು ಕಣ್ಣು ಮುಚ್ಚಿಕೊಂಡಿರುವ ಪ್ರತಿ ನಿಮಿಷಕ್ಕೂ ೬೦ ಸೆಕೆಂಡುಗಳಷ್ಟು ಬೆಳಕು ನಷ್ಟವಾಗುತ್ತಿರುತ್ತದೆ.
ಎಲ್ಲ ಇತರರು ನಿಂತಿರುವರೋ ಅಲ್ಲಿ ಮುಂದುವರಿಯುವೆ ; ಎಲ್ಲಿ ಇತರರು ಮಲಗಿರುವರೋ ಅಲ್ಲಿ ಎದ್ದಿರುವೆ.

ಇನ್ನೊಂದು ತುಣುಕು ಜೀವನವನ್ನು ನನಗೆ ದೇವರು ನೀಡಿದರೆ...ಸರಳವಾಗಿ ಬಟ್ಟೆ ಧರಿಸಿ, ಕಿರಣಗಳಲ್ಲಿ ಹೊರಳಾಡಿ, ದೇಹವನ್ನಷ್ಟೇ ಅಲ್ಲ ಆತ್ಮವನ್ನೂ ಬೆಳಕಿಗೆ ತೆರೆದುಕೊಂಡಿರುತ್ತೇನೆ.

ವೃದ್ಧರಾದಂತೆ ಪ್ರೇಮಿಸುವುದು ಕಡಿಮೆಯಾಗುತ್ತದೆ ಎಂಬ ತಿಳಿವಳಿಕೆ ಎಷ್ಟು ತಪ್ಪೆಂದೂ, ಪ್ರೇಮಿಸದಿರುವುದರಿಂದಲೇ ವೃದ್ಧರಾಗುತ್ತೇವೆಂದೂ ಸಾಸಿ ತೋರಿಸುತ್ತೇನೆ.

ಮಕ್ಕಳಿಗೆ ರೆಕ್ಕೆಗಳನ್ನು ನೀಡುತ್ತೇನೆ, ಆದರೆ ಸ್ವತಂತ್ರವಾಗಿ ಹಾರಲು ಬಿಡುತ್ತೇನೆ.
ವಯಸ್ಸಾದಂತೆ ಸಾವು ಸನಿಹವಾಗುವುದಲ್ಲ, ಅದು ವಿಸ್ಮೃತಿಯಿಂದ ಎಂದು ವೃದ್ಧರಿಗೆ ತಿಳಿಹೇಳುತ್ತೇನೆ.

ನಾನು ನಿಮ್ಮಿಂದ ಎಷ್ಟೊಂದು ಕಲಿತೆ...

ಏರುವ ಪರಿಶ್ರಮದ ಕುರಿತು ಚಿಂತಿಸುವುದನ್ನು ಮರೆತು ಎಲ್ಲರೂ ಬೆಟ್ಟದ ತುದಿಯಲ್ಲಿ ಬದುಕಬೇಕು ಎಂದು ಚಿಂತಿಸುತ್ತಾರೆ ಎಂಬುದನ್ನು ; ಹಸುಳೆಯೊಂದು ತಂದೆಯ ಹೆಬ್ಬೆರಳು ತಬ್ಬಿಕೊಂಡರೆ ಅದು ಶಾಶ್ವತ ಬಾಂಧವ್ಯ ಬಯಸುತ್ತಿದೆ ಎಂಬುದನ್ನು ; ತನ್ನಿಂದ ಕೆಳಗಿರುವವರನ್ನು ನೋಡುವ ಹಕ್ಕು ಅವರನ್ನು ಎತ್ತಬಯಸುವವನಿಗೆ ಮಾತ್ರ ಇರುತ್ತದೆ ಎಂಬುದನ್ನು...


ಯಾವತ್ತೂ ನೀವು ಸ್ಪಂದಿಸಿರುವುದನ್ನೇ ಹೇಳಿ, ಯೋಚಿಸಿರುವುದನ್ನೇ ಮಾಡಿ.


ಇದೇ ಕೊನೆಯ ಬಾರಿಗೆ ನಾನು ನಿಮ್ಮನ್ನು ನೋಡುತ್ತಿರುವುದು ಎಂದು ನನಗೆ ಗೊತ್ತಾದರೆ, ಆಗ ನಾನು ನಿಮ್ಮ ಆತ್ಮದ ಪೋಷಕನಂತೆ ಬಿಗಿಯಾಗಿ ತಬ್ಬಿಕೊಳ್ಳುವೆ. ಇವೇ ನನ್ನ ಕೊನೆಯ ಕ್ಷಣಗಳು ಎಂದು ನನಗೆ ಗೊತ್ತಾದರೆ ನಾನು ನಿಮಗೆ ‘ಐ ಲವ್ ಯು’ ಎಂದು ಹೇಳಬಯಸುವೆ. ಅದು ನಿಮಗೆ ಅರ್ಥವಾಗುತ್ತದೋ ಇಲ್ಲವೋ ಎಂಬುದನ್ನು ಯೋಚಿಸಲಾರೆ.


ಯಾವಾಗಲೂ ಇನ್ನೊಂದು ಬೆಳಗು ಇರುತ್ತದೆ ; ಎಲ್ಲವನ್ನು ಉತ್ತಮಗೊಳಿಸಲು ಜೀವನ ನಮಗೆ ಮತ್ತೊಂದು ಅವಕಾಶ ಕೊಡುತ್ತದೆ.


ಯಾವಾಗಲೂ ನಿಮ್ಮ ಪ್ರೀತಿಪಾತ್ರರ ಸನಿಹದಲ್ಲಿರಿ ; ನೀವು ಅವರನ್ನು ಎಷ್ಟೊಂದು ಪ್ರೀತಿಸುತ್ತೀರಿ ಹಾಗೂ ನಿಮಗೆ ಅವರ ಅಗತ್ಯ ಎಷ್ಟಿದೆ ಎಂಬುದನ್ನು ಹೇಳುತ್ತಿರಿ ; ನಿಮಗೆ ಗೊತ್ತಿರುವ ಎಲ್ಲ ಪ್ರೀತಿ ತುಂಬಿದ ಪದಗಳನ್ನು ಬಳಸಿ.


ನಿಮ್ಮ ಯೋಚನೆಗಳು ಗುಪ್ತವಾಗಿಯೇ ಇದ್ದರೆ ನಿಮ್ಮನ್ನು ಯಾರೂ ನೆನೆಯಲಾರರು ; ಅವುಗಳನ್ನು ಅಭಿವ್ಯಕ್ತಿಗೊಳಿಸಿ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ತೋರಿಸಿ.


ಈ ಸಂದೇಶವನ್ನು ನೀವು ಪ್ರೀತಿಸುವ ಎಲ್ಲರಿಗೆ ಕಳಿಸಿ.

ನೀವು ಕಳಿಸದಿದ್ದರೆ, ನಾಳೆಯು ಕೂಡ ಇಂದಿನಂತೆಯೇ ಇರುತ್ತದೆ.

ಇದೀಗ ನಿಮ್ಮ ಸಂದೇಶದ ಸಮಯ.


ನಿಮ್ಮ ಪ್ರೀತಿಯ -
- ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್"

Sunday, July 12, 2009

ಅವರು ಮೊದಲು ಕಮ್ಯುನಿಸ್ಟರಿಗಾಗಿ ಬಂದರು...


ಅವರು ಮೊದಲು ಕಮ್ಯುನಿಸ್ಟರಿಗಾಗಿ ಬಂದರು.
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕಮ್ಯುನಿಸ್ಟನಾಗಿರಲಿಲ್ಲ.

ಆಮೇಲೆ ಅವರು ಯಹೂದಿಗಳಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ.

ನಂತರ ಅವರು ಕಾರ್ಮಿಕರಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕಾರ್ಮಿಕನಾಗಿರಲಿಲ್ಲ.

ಬಳಿಕ ಅವರು ಕೆಥೊಲಿಕ್ಕರಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಪ್ರೊಟೆಸ್ಟೆಂಟನಾಗಿದ್ದೆ.

ಕೊನೆಗೆ ಅವರು ನನಗಾಗಿಯೇ ಬಂದರು
ಆ ಹೊತ್ತಿಗೆ ನನ್ನ ಪರ ಮಾತನಾಡಲು
ಯಾರೂ ಉಳಿದಿರಲಿಲ್ಲ.

*
ಈ ಪದ್ಯವನ್ನು ಬರೆದವನು ಜರ್ಮನಿಯ ಮಾರ್ಟಿನ್ ನೀಮ್ಯುಲರ್ (೧೮೯೨- ೧೯೮೪) ಎಂಬ ಪಾದ್ರಿ. ನಾಝಿ ದೌರ್ಜನ್ಯ ಹಾಗೂ ಯಹೂದಿ ಜನಾಂಗಹತ್ಯೆಯ ವಿರುದ್ಧ ಮಾತನಾಡಿದವನು. ಈತ ಬರೆದ ಈ ಪದ್ಯ ಈತನಿಗಿಂತ ಪ್ರಸಿದ್ಧ.

*
ಮೈಸೂರಿನಲ್ಲಿ ನನ್ನ ಒಬ್ಬ ಗೆಳೆಯನಿದ್ದಾನೆ. ಆತ ನಿನ್ನೆ ಫೋನ್ ಮಾಡಿ ಹೀಗೆ ಹೇಳಿದ :

ಅವರು ಮೊದಲು ಅಯೋಧ್ಯೆಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಅಯೋಧ್ಯೆಯಲ್ಲಿರಲಿಲ್ಲ.

ಬಳಿಕ ಅವರು ಗುಜರಾತಿಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಗುಜರಾತಿನಲ್ಲಿರಲಿಲ್ಲ.

ನಂತರ ಅವರು ಕರಾವಳಿಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕರಾವಳಿಯಲ್ಲೂ ಇರಲಿಲ್ಲ.

ಕೊನೆಗೆ ಅವರು ಮೈಸೂರಿಗೇ ಬಂದರು
ನಾನು ಈಗಲೂ ಮಾತನಾಡುವುದಿಲ್ಲ
ಯಾಕೆಂದರೆ ಅವರು ಬಂದದ್ದು ನನಗಾಗಿಯಲ್ಲ !

*
ಇತರರು ‘ಮೈಸೂರು’ ಎಂದಿದ್ದಲ್ಲಿ ತಮ್ಮ ಊರಿನ ಹೆಸರು ಸೇರಿಸಿ ಓದಿಕೊಳ್ಳಬಹುದು.

Monday, June 8, 2009

ಮಾಧವಿ ಕುಟ್ಟಿಯ ಒಂದು ಕತೆ


ತುಪ್ಪದ ಪಾಯಸ
ಸರಳವಾದ ಶವಸಂಸ್ಕಾರ ಮುಗಿಸಿಕೊಂಡು ಆತ ಮನೆಗೆ ಮರಳುತ್ತಿದ್ದ. ನಾವು ಅವನನ್ನು ಸರಳವಾಗಿ ಅಚ್ಚನ್ ಎಂದು ಕರೆಯೋಣ. ಈ ನಗರದಲ್ಲಿ ಅವನ ಬೆಲೆ ತಿಳಿದವರು ಮೂವರು ಮಕ್ಕಳು ಮಾತ್ರ. ಅವರು ಅವನನ್ನು ಅಚ್ಚ ಎಂದೇ ಕರೆಯುತ್ತಾರೆ.
ಬಸ್ಸಿನಲ್ಲಿ ಅಪರಿಚಿತರ ನಡುವೆ ಕುಳಿತಿದ್ದ ಅವನು ಅಂದಿನ ದಿನದ ಪ್ರತಿಯೊಂದು ಗಳಿಗೆಯನ್ನೂ ನೆನೆದುಕೊಳ್ಳಬಲ್ಲವನಾಗಿದ್ದ.
ಬೆಳಗ್ಗೆ ಎಚ್ಚರವಾದದ್ದೂ ಅವಳ ದನಿಗೇ. “ಉನ್ನಿ, ಹಾಗೆ ಮುಸುಕು ಹಾಕಿ ಮಲಗಬೇಡ. ಇಂದು ಸೋಮವಾರ" ಆಕೆ ಮೊದಲ ಮಗನಿಗೆ ಹೇಳುತ್ತಿದ್ದಳು. ಬಳಿಕ ಅಡುಗೆಮನೆಗೆ ನಡೆದಳು. ಅವಳ ಬಿಳಿ ಸೀರೆ ಸರಪರಗುಟ್ಟಿತು. ದೊಡ್ಡ ಲೋಟದಲ್ಲಿ ತುಂಬ ಕಾಫಿ ತಂದುಕೊಟ್ಟಳು. ಬಳಿಕ ? ಆಮೇಲೇನಾಯಿತು ? ಮರೆಯಬಾರದಂಥದು ಏನಾದರೂ ಆಕೆ ಹೇಳಿದಳೆ ?
ಎಷ್ಟು ನೆನಪಿಸಿಕೊಂಡರೂ ಅವನಿಗೆ ನೆನಪಾಗಲಿಲ್ಲ. ‘ಉನ್ನಿ, ಹಾಗೆ ಮುಸುಕು ಹಾಕಿ ಮಲಗಬೇಡ. ಇಂದು ಸೋಮವಾರ’ ಈ ಮಾತುಗಳಷ್ಟೇ ರಿಂಗಣಿಸಿದವು. ಅದೊಂದು ಪ್ರಾರ್ಥನೆ ಎಂಬಂತೆ ಗುನುಗುನಿಸಿದ. ಅವನು ಅದನ್ನು ಮರೆತರೆ ಅದು ಭರಿಸಲಸಾಧ್ಯ ನಷ್ಟವಾಗುತ್ತಿತ್ತು.
ಬೆಳಗ್ಗೆ ಅವನು ಕೆಲಸಕ್ಕೆ ಹೊರಟಾಗ ಮಕ್ಕಳೂ ಹೊರಟಿದ್ದವು. ಪುಟ್ಟ ಅಲ್ಯುಮಿನಿಯಂ ಡಬ್ಬಿಗಳಲ್ಲಿ ಮಕ್ಕಳಿಗೆ ತಿಂಡಿ ತುಂಬಿಕೊಟ್ಟಿದ್ದಳು. ಬಲಗೈಯಲ್ಲಿ ಹುಣಿಸೆಹಣ್ಣಿನ ಕಲೆಯಿತ್ತು. ಕೆಲಸದ ವೇಳೆ ಅವಳ ನೆನಪೂ ಆಗಿರಲಿಲ್ಲ.
ಒಂದೆರಡು ವರುಷಗಳ ಪ್ರೇಮ ಪ್ರಕರಣದ ಬಳಿಕ ಅವರಿಬ್ಬರೂ ಮದುವೆಯಾಗಿದ್ದರು. ಈ ಮದುವೆ ಇಬ್ಬರ ಹೆತ್ತವರಿಗೂ ಇಷ್ಟವಿರಲಿಲ್ಲ. ಅದಕ್ಕಾಗಿ ಅವರಿಗೆಂದೂ ವಿಷಾದವಾಗಲಿಲ್ಲ. ಆದರೆ ಹಣದ ಕೊರತೆ, ಮಕ್ಕಳ ಅನಾರೋಗ್ಯ- ಇಬ್ಬರನ್ನೂ ಸಾಕಷ್ಟು ಕಂಗೆಡಿಸಿದ್ದವು. ತನ್ನ ಸೌಂದರ್‍ಯದ ಬಗೆಗಿನ ಅವಳ ಕಾಳಜಿ ಕುಂದಿತ್ತು. ಅವನ ನಗುವಿನ ಸಾಮರ್ಥ್ಯವೂ ಕುಸಿದಿತ್ತು.
ಇಷ್ಟಿದ್ದೂ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮೂವರು ಮಕ್ಕಳೂ ತಂದೆತಾಯಿಯನ್ನು ಇಷ್ಟಪಡುತ್ತಿದ್ದರು. ಮೂವರೂ ಹುಡುಗರು- ಉನ್ನಿಗೆ ಹತ್ತು ವರ್ಷ, ಬಾಲನ್‌ಗೆ ಏಳು ಮತ್ತು ರಾಜನ್‌ಗೆ ಐದು. ಮೂವರ ಮುಖಗಳೂ ಯಾವಾಗಲೂ ಕೊಳೆಯಾಗಿರುತ್ತಿದ್ದವು. ಮೂವರಲ್ಲೂ ಅಂಥ ಚೆಲುವಾಗಲೀ ಬುದ್ಧಿವಂತಿಕೆಯಾಗಲೀ ಇರಲಿಲ್ಲ. ಆದರೆ ಅವರ ತಂದೆ ತಾಯಿ ಮಾತಾಡಿಕೊಳ್ಳುತ್ತಿದ್ದುದು ಹೀಗೆ-
“ಉನ್ನಿ ಹೊಸದೇನಾದರೂ ಮಾಡುತ್ತಲೇ ಇರುತ್ತಾನೆ. ಅವನಲ್ಲಿ ಇಂಜಿನಿಯರ್ ಆಗುವ ಲಕ್ಷಣಗಳಿವೆ"
“ಬಾಲನ್‌ನನ್ನು ಡಾಕ್ಟರ್ ಮಾಡಬೇಕು. ಅವನ ಹಣೆ ನೋಡು- ಅವನು ಬುದ್ಧಿವಂತ ಎಂದೇ ಅಷ್ಟೊಂದು ಅಗಲ"
“ರಾಜನ್ ಕತ್ತಲೆಗೆ ಹೆದರುವುದಿಲ್ಲ. ಧೈರ್‍ಯವಂತ. ಅವನು ಸೈನ್ಯ ಸೇರಬಹುದು"
ಪಟ್ಟಣದ ಕಿರಿದಾದ ಬೀದಿಯೊಂದರಲ್ಲಿ ಅವರು ವಾಸಿಸುತ್ತಿದ್ದರು. ಅಕ್ಕಪಕ್ಕದಲ್ಲಿ ಮಧ್ಯಮ ವರ್ಗದವರ ಮನೆಗಳಿದ್ದವು. ಮೊದಲ ಫ್ಲೋರ್‌ನಲ್ಲಿರುವ ಮೂರು ರೂಮು ಹಾಗೂ ಇಬ್ಬರು ನಿಲ್ಲಬಹುದಾದ ವರಾಂಡ ಹೊಂದಿರುವ ಫ್ಲ್ಯಾಟು. ಅಲ್ಲಿ ಆಕೆ ಕುಂಡದಲ್ಲಿ ಒಂದು ಪನಿನೀರ್ ಗಿಡ ಬೆಳೆಸುತ್ತಿದ್ದಳು. ಅದು ಇನ್ನೂ ಹೂಬಿಟ್ಟಿರಲಿಲ್ಲ.
ಅಡುಗೆಮನೆಯಲ್ಲಿ ಹಿತ್ತಾಳೆಯ ಸೌಟುಗಳು ಮತ್ತು ಚಮಚಗಳು ಗೋಡೆಯಿಂದ ತೂಗುಬಿದ್ದಿದ್ದವು. ಸ್ಟವ್‌ನ ಬಳಿ ಒಂದು ಮರದ ಮಣೆ. ಅವನು ಕೆಲಸದಿಂದ ಹಿಂದಿರುಗುತ್ತಿದ್ದಾಗ ಆಕೆ ಚಪಾತಿ ಮಾಡುತ್ತ ಅಲ್ಲಿ ಕುಳಿತಿರುತ್ತಿದ್ದಳು.
ಬಸ್ಸು ನಿಂತಾಗ ಅದರಿಂದ ಇಳಿದ. ಮೊಣಕಾಲಿನಲ್ಲಿ ನೋವು ಗಿರಿಗಿರಿಗುಟ್ಟಿತು. ಸಂವಾತ ಶುರುವಾಯಿತೆ ? ನಾನು ಹಾಸಿಗೆ ಹಿಡಿದರೆ ಮಕ್ಕಳನ್ನು ನೋಡಿಕೊಳ್ಳುವವರಾದರೂ ಯಾರು ? ತಕ್ಷಣ ಕಣ್ಣಿನಿಂದ ಹನಿ ಉದುರಲು ಶುರುವಾಯಿತು. ಕೊಳೆಯಾದ ಕರ್ಚೀಫಿನಿಂದ ಮುಖ ಒರೆಸಿಕೊಂಡು ಬೇಗಬೇಗನೆ ಹೆಜ್ಜೆ ಹಾಕಿದ.
ಮಕ್ಕಳು ನಿದ್ದೆ ಮಾಡಿರಬಹುದೆ ? ಹೊಟ್ಟೆಗೆ ಏನಾದರೂ ಹಾಕಿಕೊಂಡಿರಬಹುದೇ ಅಥವಾ ಹಸಿದು ಹಾಗೇ ನಿದ್ದೆ ಹೋಗಿರಬಹುದೆ ? ಇದು ಅವರಿಗೆ ಅರ್ಥಮಾಡಿಕೊಳ್ಳುವ ಪ್ರಾಯವಲ್ಲ. ನಾನು ಆಕೆಯನ್ನು ಟ್ಯಾಕ್ಸಿಗೆ ಹಾಕುವಾಗ ಉನ್ನಿ ಬಾಗಿಲಲ್ಲಿ ನಿಂತು ನೋಡುತ್ತಿದ್ದ. ಸಣ್ಣವ ಮಾತ್ರವೇ ಅತ್ತದ್ದು. ನಾನೂ ಟ್ಯಾಕ್ಸಿಗೆ ಹತ್ತಬೇಕೆಂಬ ಹಟದಿಂದಷ್ಟೇ ಆತ ಅತ್ತದ್ದು. ಸಾವಿನ ಅರ್ಥ ಅವುಗಳಿಗೆ ಗೊತ್ತಾಗದು.
ನನಗಾದರೂ ಗೊತ್ತಾಗಿದೆಯೆ ? ಒಂದು ಸಂಜೆ ಆಕೆ ದಿಢೀರನೆ ಕೆಳಗೆ ಬಿದ್ದು ಸಾಯುವಳೆಂದು ನಾನಾದರೂ ಕಲ್ಪಿಸಿದ್ದೆನೆ ? ಯಾರಿಗೂ ಒಂದು ಮಾತೂ ಹೇಳದೆ ?
ಕೆಲಸದಿಂದ ಮರಳಿ ಬಂದಾಗ ಆತ ಅಡುಗೆಮನೆಯ ಕಿಟಕಿಯಲ್ಲಿ ದೃಷ್ಟಿ ಹಾಯಿಸಿದ್ದ. ಒಳಗೆ ಆಕೆ ಕಂಡಿರಲಿಲ್ಲ. ಹೊರ ಜಗಲಿಯಲ್ಲಿ ಮಕ್ಕಳು ಆಡುತ್ತಿದ್ದವು. ‘ಫಸ್ಟ್ ಕ್ಲಾಸಾಗಿ ಹೊಡೆದೆ...’ ಎಂದು ಉನ್ನಿ ಚೀರುತ್ತಿದ್ದುದು ಕೇಳಿಸುತ್ತಿತ್ತು.
ತನ್ನ ಕೀ ತೂರಿಸಿ ಬಾಗಿಲು ತೆರೆದ. ಆಗಲೇ ಆತ ಆಕೆಯನ್ನು ನೋಡಿದ್ದು. ನೆಲದಲ್ಲಿ ಬಿದ್ದಿದ್ದಳು. ತುಟಿಗಳು ಒಡೆದಿದ್ದವು. ಜಾರಿ ಬಿದ್ದಿರಬೇಕು ಎಂದು ಊಹಿಸಿದ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಹೇಳಿದ್ದೇ ಬೇರೆ : “ಈಕೆ ಸತ್ತು ಒಂದೂವರೆ ಗಂಟೆಯಾಗಿದೆ. ಹೃದಯಸ್ತಂಭನ"
ಭಾವಗಳ ಹೆದ್ದೆರೆಯಲ್ಲಿ ಆತ ಕೊಚ್ಚಿಹೋದ. ನಿಷ್ಕಾರಣವಾಗಿ ಆಕೆಯ ಮೇಲೆ ಕೋಪವುಕ್ಕಿತು. ಹೇಗೆ ತಾನೆ ಹೋಗಬಹುದು ಆಕೆ- ಯಾವುದೇ ಸೂಚನೆಯಿಲ್ಲದೆ ? ಎಲ್ಲ ಹೊಣೆಗಾರಿಕೆಯನ್ನೂ ನನ್ನೊಬ್ಬನ ಮೇಲೇ ಹೊರಿಸಿ ! ಈಗ ಮಕ್ಕಳಿಗೆ ಮೀಸುವವರಾರು ? ಯಾರು ಅಟ್ಟು ಉಣ್ಣಿಸುವವರು ? ಹುಷಾರು ತಪ್ಪಿದರೆ ನೋಡಿಕೊಳ್ಳುವವರ್‍ಯಾರು ?
‘ನನ್ನ ಮಡದಿ ಸತ್ತಳು’ ಆತ ತನ್ನೊಳಗೆ ಗುಣುಗುಟ್ಟಿಕೊಂಡ, “ಇಂದು ದಿಢೀರನೆ ನನ್ನ ಪತ್ನಿ ಹಾರ್ಟ್ ಫೇಲ್ ಆಗಿ ಸತ್ತುಹೋದಳು. ನನಗೆ ಎರಡು ದಿನಗಳ ರಜೆ ಬೇಕು"
ಎಂಥ ರಜಾ ಅರ್ಜಿ ! ರಜೆ, ಪತ್ನಿಯ ಅಸ್ವಾಸ್ಥ್ಯಕ್ಕಾಗಿ ಅಲ್ಲ. ಸತ್ತದ್ದಕ್ಕಾಗಿ. ಬಾಸ್ ನನ್ನನ್ನು ಅವನ ಕೋಣೆಗೆ ಕರೆಯಬಹುದು. ಶೋಕ ವ್ಯಕ್ತಪಡಿಸಬಹುದು. ಅವನ ಅನುಕಂಪ ಯಾರಿಗೆ ಬೇಕು ? ಬಾಸ್‌ಗೆ ಅವಳ್ಯಾರೋ ಗೊತ್ತಿಲ್ಲ. ಅವಳ ಗುಂಗುರು ಮುಂಗುರುಳು, ದಣಿವಿನ ನಗು, ಮಿದು ಹೆಜ್ಜೆಗಳು ಅವನಿಗೆ ಗೊತ್ತಿಲ್ಲ. ಅದನ್ನೆಲ್ಲ ಕಳೆದುಕೊಂಡದ್ದು ನಾನು.
ಬಾಗಿಲು ತೆರೆದಾಗ ಸಣ್ಣ ಮಗ ಓಡುತ್ತ ಬಂದ. ನೋಡಿ, ‘ಅಮ್ಮ ಇನ್ನೂ ಬಂದಿಲ್ಲ’ ಎಂದ.
ಎಷ್ಟು ಬೇಗ ಮರೆತುಬಿಟ್ಟ ! ಟ್ಯಾಕ್ಸಿಯಲ್ಲಿ ಎತ್ತಿಕೊಂಡು ಹೋದ ದೇಹ ಮರಳಿ ನಡೆಯುತ್ತ ಬರುವುದೆಂದು ಆತ ತಿಳಿದಿದ್ದನೇ.
ಮಗನನ್ನು ಆತ ಅಡುಗೆಮನೆಗೆ ಕರೆದೊಯ್ದ. ‘ಉನ್ನಿ’ ಕರೆದ.
‘ಏನಚ್ಚಾ ?’ ಉನ್ನಿ ಒಳಗೆ ಬಂದ. ‘ಬಾಲನ್ ಮಲಗಿದ್ದಾನೆ.’
‘ಸರಿ. ಏನಾದರೂ ತಿಂದಿರಾ ?’
‘ಇಲ್ಲ’
ಪಾತ್ರೆಗಳನ್ನು ಮುಚ್ಚಿದ್ದ ತಟ್ಟೆಗಳನ್ನು ಆತ ಒಂದೊಂದಾಗಿ ಸರಿಸಿದ. ಚಪಾತಿ, ಅನ್ನ, ಬಟಾಟೆ ಕರಿ, ಚಿಪ್ಸ್ ಹಾಗೂ ಮೊಸರು ಅದರಲ್ಲಿದ್ದವು. ಗ್ಲಾಸ್ ಬೋಗುಣಿಯೊಂದರಲ್ಲಿ ತುಪ್ಪದ ಪಾಯಸವಿತ್ತು.
ಇಲ್ಲ, ಇದನ್ನೆಲ್ಲ ಇವರು ಉಣ್ಣಬಾರದು. ಇವಕ್ಕೆ ಸಾವಿನ ಸ್ಪರ್ಶವಾಗಿದೆ.
‘ಇವೆಲ್ಲ ತಣ್ಣಗಾಗಿವೆ. ನಾನು ಸ್ವಲ್ಪ ಉಪ್ಪಿಟ್ಟು ಮಾಡುತ್ತೇನೆ’ ಎಂದ.
‘ಅಚ್ಚಾ’ ಅದು ಉನ್ನಿಯ ದನಿ.
‘ಹೂಂ’
‘ಅಮ್ಮ ಯಾವಾಗ ಬರುತ್ತಾಳೆ ? ಅವಳಿಗೆ ಆರೋಗ್ಯವಿಲ್ಲವಾ ?’
ಸತ್ಯ ಇನ್ನೊಮ್ಮೆ ಯಾವತ್ತಾದರೂ ಗೊತ್ತಾಗಲಿ, ಆತ ಯೋಚಿಸಿದ. ಇಂದು ಮಕ್ಕಳನ್ನು ಶೋಕಕ್ಕೆ ತಳ್ಳುವುದರಲ್ಲಿ ಅರ್ಥವಿಲ್ಲ.
‘ಅಮ್ಮ ಬರುತ್ತಾಳೆ’ ಆತ ಹೇಳಿದ.
ತೊಳೆದಿಟ್ಟ ತಟ್ಟೆಗಳನ್ನು ನೆಲದ ಮೇಲಿಟ್ಟ. ಎರಡು ತಟ್ಟೆಗಳು. ‘ಬಾಲನ್ ಮಲಗಿರಲಿ’ ಎಂದ.
‘ಅಚ್ಚಾ, ತುಪ್ಪ ಪಾಯಸ’ ರಾಜನ್ ಖುಷಿಯಿಂದ ಉದ್ಗರಿಸಿದ. ತನ್ನ ಬೆರಳನ್ನು ಅದಕ್ಕೆ ಅದ್ದಿದ.
ಮಡದಿ ಕುಳಿತುಕೊಳ್ಳುತ್ತಿದ್ದ ಮರದ ಮಣೆಯ ಮೇಲೆ ಆತ ಕುಳಿತುಕೊಂಡ.
‘ಉನ್ನಿ, ನೀನು ಬಡಿಸುತ್ತೀಯ ? ಅಚ್ಚನ್‌ಗೆ ಇಂದ್ಯಾಕೋ ಹುಷಾರಿಲ್ಲ. ತಲೆನೋವು’
ಮಕ್ಕಳು ಈ ಊಟ ಮಾಡಲಿ. ಅವರು ಮುಂದೆಂದೂ ತಾಯಿಯ ಅಡುಗೆ ಉಣ್ಣಲಾರರು.
ಮಕ್ಕಳು ಪಾಯಸ ಚಪ್ಪರಿಸತೊಡಗಿದರು. ಆತ ಸ್ತಬ್ದನಾಗಿ, ಅವರನ್ನು ನೋಡುತ್ತ ಕುಳಿತಿದ್ದ.
‘ಅನ್ನ ಬೇಕೆ, ಉನ್ನಿ ?’
‘ಬೇಡ, ಪಾಯಸ ಸಾಕು. ಇದು ಬಹಳ ಸಿಹಿಯಾಗಿದೆ’
‘ಅಮ್ಮ ಎಷ್ಟೊಂದು ಸೊಗಸಾಗಿ ತುಪ್ಪದ ಪಾಯಸ ಮಾಡಿದ್ದಾಳೆ’ ಖುಷಿಯಿಂದ ರಾಜನ್ ಹೇಳಿದ.
ಅವನು ಎದ್ದು ನಿಂತು ಬಾತ್‌ರೂಮಿನೆಡೆಗೆ ಧಾವಿಸಿದ.

ಅನುವಾದ: ಹರೀಶ್ ಕೇರ

Sunday, March 15, 2009

ಕಣ್ಣು


ಸಂಜೆ. ಸಣ್ಣ ಗುಡುಗು. ಮಳೆ ಹೊಯ್ಯುವಂತಿದೆ.
ದನಿ ಮಾಡದೆ ಧಾವಿಸುವ ಮೆಲ್ಲನೆ ಗುಡ್ಡದ ತುದಿಗೆ
ಇದೊ ಈ ಮರದ ಬುಡದಲ್ಲಿ ಕುಳ್ಳಿರುವ.
ನಿನಗೊಂದು ಅಚ್ಚರಿ ತೋರಿಸಬೇಕು ಈಗ.


ಸಣ್ಣಗೆ ಮಳೆ ಹನಿಯುತ್ತಿದೆಯ
ಈ ಗುಡ್ಡದ ಬುಡದ ಪೊದರುಗಳೊಳಗಿಂದ
ಮೈ ನಡುಗಿಸುವ ಕೇಕೆ ಕೇಳುತ್ತಿದೆಯ
ರೆಕ್ಕೆ ಕೊಡವುತ್ತ ಹೆಣ್ಣು ನವಿಲೊಂದು
ಹೊರಬಂದಿದೆಯ
ಹೆಣ್ಣ ಬೆನ್ನಟ್ಟಿ ಒಂದು ಗಂಡು ನವಿಲು ತನ್ನ
ಸಾವಿರ ಕಣ್ಣುಗಳ ದಿಟ್ಟಿ ಹೆಣ್ಣ ಮೇಲೇ
ನೆಟ್ಟು


ಅಹಹ ! ಒಂದು ಹೆಣ್ಣು
ನೂರು ಕಣ್ಣು
ನೋಡಿ
ಕೇಳಿ


ಮುಸ್ಸಂಜೆ. ಮಳೆ ಇನ್ನೂ ಜೋರಾಗಿ ಸುರಿಯುತ್ತಿದೆ.
ಕೊಂಚ ಹತ್ತಿರ ಬಾ.
ನಿನ್ನೊಡನೆ ಏನೋ ಹೇಳಬೇಕು.
ಅಥವಾ
ಹೇಳದಿದ್ದರೂ ನಡೆಯುತ್ತದೆ.

Sunday, February 22, 2009

ನಾಲಗೆಯ ಮೇಲೆ ಕುರುಕ್ಷೇತ್ರ

ಮಹಾಭಾರತದ ಹರಿಕತೆ ನಡೆದಿರುವಾಗ
ದಾಸರು ನಾಲಗೆ ತಪ್ಪಿ
ನಾಗರಿಕತೆ ಎಂದರೆ ಹಿಂಸೆಯ ಕತೆ
ಎಂದುಬಿಟ್ಟರು

ಆಮೇಲೆ ಚಡಪಡಿಸಿದರು
ತಮ್ಮ ಮಾತನ್ನು ಅಲ್ಲೇ ಬಿಡುವುದೋ
ವ್ಯಾಖ್ಯಾನಿಸುವುದೋ ಅರಿಯದ ಸಂದಿಗ್ದದಲ್ಲಿ
ಮುಂದೆ ಕುಳಿತ ಮಂದಿಯ ಮುಖ ನೋಡಿದರು

ಉದ್ದ ಅಡ್ಡ ನಾಮಗಳು ಮುದ್ರೆಗಳು
ಮುಗಿದ ಕೈಗಳು ಬೋಳಿಸಿದ ತಲೆಗಳು
ಬಿಟ್ಟ ಮೈ ಹೊದ್ದ ಶಲ್ಯ ಇಣುಕುವ ಜನಿವಾರ
ಬೊಜ್ಜು ಮೈ ಹುಳಿ ತೇಗು
ತರಹೇವಾರಿ ಶಿಖೆಗಳು
ಕಾಸಿನಗಲದ ಕುಂಕುಮ ತಲೆಗೆ ಸೆರಗು
ಮುತ್ತೈದೆಯರ ಸಕಲ ಭೂಷಿತಗಳು

ಮಾತುಗಳು ಗಂಟಲಲ್ಲೇ ಉಳಿದವು
ಕುರುಕ್ಷೇತ್ರದ ನೆತ್ತರ ನದಿ ಹಾಗೇ ಮುಂದುವರಿಯಿತು

ಬಾಯಿ ಬಿಡುವ ಭೂಮಿ ಎದೆ ಸೀಳಿದ ಗದೆ
ನೀರ ತಡಿಯಲ್ಲಿ ಅನಾಥ ಹೆಣ ಕತ್ತಲಲ್ಲಿ ಕುಣಿವ ಕತ್ತಿ
ಧರ್ಮದ ವಿಜಯಕ್ಕೆ ನಾರಿಯರ ಆರ್ತನಾದದ ಬೆಂಬಲ
ಭಗ್ನ ಬ್ರಹ್ಮಾಸ್ತ್ರಕ್ಕೆ ಅರ್ಧ ಭ್ರೂಣ

ಇತ್ತೀಚೆಗೆ ದಾಸರು
ವಿಪರೀತ ತಡವರಿಸುತ್ತಾರೆ
ಅನ್ನುತ್ತಾರೆ ಎಲ್ಲರೂ

Friday, February 13, 2009

ಸಂಪೂರ್ಣ ರಕ್ಷಣೆ

ಒಂದು ವ್ಯಾಪಾರಿ ಸಂಸ್ಥೆಯ ನೌಕರರು ವರ್ಷಾಂತ್ಯದ ಪ್ರವಾಸ ಹೊರಟಿದ್ದರು. ಮೈಸೂರು, ಬೆಂಗಳೂರು, ಊಟಿ.
ಅಲ್ಲಿ ಹಿಂದೂಗಳಿದ್ದರು. ಮುಸ್ಲಿಮರು, ಕ್ರೈಸ್ತರು ಕೂಡ.
ಬಸ್ಸು ನಗರ ಬಿಡುತ್ತಿದ್ದಂತೆ ಅದನ್ನು ಗುಂಪೊಂದು ನಿಲ್ಲಿಸಿತು. ಕೆಂಪು ತಿಲಕ ಹಚ್ಚಿ ದೊಣ್ಣೆ ಹಿಡಿದ ಗುಂಪು ಒಳಗೆ ನುಗ್ಗಿತು.
ಕಾರಣ : ಹಿಂದೂ ಹುಡುಗಿಯರು ಮುಸ್ಲಿಮರ ಜತೆಗೆ ಪ್ರವಾಸ ಹೊರಟದ್ದು.
ದಾಳಿ ಮಾಡಿದವರು : ಯಥಾಪ್ರಕಾರ, ಸಂಸ್ಕೃತಿ ರಕ್ಷಕರು.
ಪರಿಣಾಮ : ಹುಡುಗ- ಹುಡುಗಿಯರ ಮೇಲೆ ಹಲ್ಲೆ. ಅವರು ಧರಿಸಿದ್ದ ಆಭರಣಗಳ ಲೂಟಿ.
ಗುಂಪಿನ ನಾಯಕನ ಕಣ್ಣು ಒಬ್ಬ ಮಹಿಳೆ ಧರಿಸಿದ್ದ ಆಭರಣದ ಮೇಲೆ ಬಿತ್ತು. ‘ಅದನ್ಯಾಕೆ ಬಿಟ್ಟಿದ್ದೀ, ಕಿತ್ತುಕೋ...’ ಕಾರ್‍ಯಕರ್ತನಿಗೆ ಆದೇಶಿಸಿದ.
"ಅಣ್ಣಾ, ಅದು ತಾಳಿ..."
"ಏನಾದರೇನು, ಚಿನ್ನ ತಾನೆ ? ಕಿತ್ತುಕೋ"
ತಾಳಿಯನ್ನು ಕಿತ್ತುಕೊಂಡು ಸಂಸ್ಕೃತಿ ರಕ್ಷಣೆಯನ್ನು ಸಂಪೂರ್ಣಗೊಳಿಸಲಾಯಿತು.
(೨೦೦೬ರಲ್ಲಿ ಮಂಗಳೂರಿನಲ್ಲಿ ನಡೆದ ನಿಜ ಘಟನೆ)

Friday, February 6, 2009

ಸಾಹಿತ್ಯ ಸಮ್ಮೇಳನ : ವರದಿಯಾಗದ ಸಂಗತಿಗಳು

ಬಿಸಿಲು, ಧೂಳು, ಸೆಕೆ ; ಊಟ ಸಿಗಲಿಲ್ಲ ಎಂಬ ಆರ್ತನಾದಕ್ಕೆ ಕರಗದ ದುರ್ಗದ ಕಲ್ಲುಗಳು ; ಮುಷ್ಕರಗಳು ; ಕಸಾಪ ಘಟಕಗಳ ನಡುವೆ ಭಿನ್ನಮತ ; ಆಯೋಜಕರ ಬೇಜವಾಬ್ದಾರಿ ; ಮೆರೆದ ಖಾದಿ, ಕಾವಿಗಳು...

ಇವೆಲ್ಲ ಎಲ್ಲ ಪತ್ರಿಕೆಗಳಲ್ಲಿ, ಚಾನೆಲ್‌ಗಳಲ್ಲಿ ಈಗಾಗಲೇ ವರದಿಯಾಗಿವೆ. ನಮ್ಮ ದೃಷ್ಟಿ ಏನಿದ್ದರೂ ವರದಿಯಾಗದ ಸಂಗತಿಗಳ ಕಡೆಗೆ.

***

ಸಮ್ಮೇಳನ ಉದ್ಘಾಟನೆಯ ಸಂದರ್ಭ. ಮಾನ್ಯ ಮುಖ್ಯಮಂತ್ರಿಗಳು ದೀಪ ಬೆಳಗಬೇಕು. ಆಚೆಗೂ ಈಚೆಗೂ ಎರಡು ಮೂರು ಮಾನ್ಯ ಶ್ರೀಶ್ರೀಶ್ರೀಗಳು, ಉಸ್ತುವಾರಿ ಸಚಿವರು, ಶಾಸಕರು, ಸ್ಥಳೀಯ ಪುಢಾರಿಗಳು, ಕಸಾಪ ಅಧ್ಯಕ್ಷರು... ಎಲ್ಲರೂ ಸೇರಿ ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಅವರನ್ನು ಹಿಂದಕ್ಕೆ ತಳ್ಳಿಬಿಟ್ಟರು. ಮುಖ್ಯಮಂತ್ರಿ ದೀಪ ಉರಿಸುತ್ತಿದ್ದಾರೆ, ಬಸವರಾಜು ಕಾಣಿಸುತ್ತಲೇ ಇಲ್ಲ.

ಕಡೆಗೆ ಯಾರೋ ಮಾಧ್ಯಮದವರು ಕೂಗಿದರು. "ಅಧ್ಯಕ್ಷರು, ಅಧ್ಯಕ್ಷರು..."

ಈಗ ವೇದಿಕೆಯ ಮೇಲಿದ್ದವರಿಗೆ ಜ್ಞಾನೋದಯ. ಹಿಂದೆಲ್ಲೋ ನೂಕಲ್ಪಟ್ಟಿದ್ದ ಬಸವರಾಜು ಅವರನ್ನು ಮತ್ತೆ ದೀಪದ ಹತ್ತಿರಕ್ಕೆ ದೂಡಲಾಯಿತು.

ಖಾದಿ ಮತ್ತು ಕಾವಿ. ಇದರ ನಡುವೆ ಕಡೆಗಣಿಸಲ್ಪಡುವ ಸಾಹಿತಿ. ಇದು ನಮ್ಮ ರಾಜ್ಯದ ಇಂದಿನ ಸ್ಥಿತಿಗೆ ರೂಪಕ ಅಂತ ನಿಮಗೆ ಅನಿಸುತ್ತಿಲ್ಲವೆ ?

***

ಮಾನ್ಯ ಉಸ್ತುವಾರಿ ಸಚಿವರು- ಕರುಣಾಕರ ರೆಡ್ಡಿಯವರು- ಉದ್ಘಾಟನೆ ಸಂದರ್ಭ ಭರ್ರನೆ ಹೆಲಿಕಾಪ್ಟರ್‌ನಲ್ಲಿ ಬಂದರು. ಅಂದ ಹಾಗೆ, ದುರ್ಗದಲ್ಲೇ ಇರುವ ಅವರ ಮನೆಗೂ ಸಮ್ಮೇಳನದ ಸ್ಥಳಕ್ಕೂ ಎರಡು ಮೈಲಿಗಿಂತ ಹೆಚ್ಚು ದೂರವಿಲ್ಲ. ಇಷ್ಟು ದೂರಕ್ಕೂ ಅವರು ಕಾರು ಬಳಸುವುದಿಲ್ಲ. ಎಲ್ಲಿಗೆ ಹೋಗುವುದಾದರೂ ಹೆಲಿಕಾಪ್ಟರ್. ಇದರಲ್ಲೇ ಮುಖ್ಯಮಂತ್ರಿ ಕೂಡ ಪ್ರಯಾಣಿಸಿದರು. ನೆರೆದ ಜನ ನಿಬ್ಬೆರಗಾಗಿ ನೋಡಿದರು. ಯಾರಪ್ಪನ ಮನೆ ದುಡ್ಡು !

***

ಬರೆಯುವುದಾದರೆ ಮಧ್ಯಮ ಪ್ರತಿನಿಗಳದೇ ಒಂದು ದೊಡ್ಡ ರಾಮಾಯಣ. ಸಮ್ಮೇಳನದ ಹಿಂದಿನ ದಿನ ಬೆಂಗಳೂರಿನಿಂದ ಬಂದ ರಿಪೋರ್ಟರ್‌ಗಳಿಗೆ ಹೊಟೆಲ್ ಕೊಠಡಿ ಬುಕ್ ಮಾಡಲಾಗಿತ್ತು. ರಾತ್ರಿಯಾಗಿತ್ತು. ಆಯೋಜಕರ ಮೇಲೆ ಕೂಗಾಡಿ ಕೆಲವು ವರದಿಗಾರರು ತೈಲಾಭ್ಯಂಗ ಮಾಡಿಸಿಕೊಂಡಿದ್ದರು. ಹೀಗೆ ಟೈಟಾಗಿ ತೂರಾಡುತ್ತಿದ್ದ ತಮಿಳು ಮೂಲದ ಟಿವಿಯೊಂದರ ವರದಿಗಾರ- ಹೆಸರು ಹನುಮಂತ ಎಂದಿಟ್ಟುಕೊಳ್ಳಿ- ಬೇರೊಂದು ಟಿವಿ ಚಾನೆಲ್ ವರದಿಗಾರ್ತಿಗೆ ಎಂದು ನಿಗದಿಪಡಿಸಲಾಗಿದ್ದ ಕೊಠಡಿಗೆ ನುಗ್ಗಿ ಬಟ್ಟೆ ಬಿಚ್ಚಿ ಬಿದ್ದುಕೊಂಡ.

ಕೊಂಚ ತಡವಾಗಿ ಆಗಮಿಸಿದ ವರದಿಗಾರ್ತಿ ಈತನ ಅವತಾರ ಕಂಡು ದಂಗಾದಳು. ಕೊಠಡಿ ಬಿಟ್ಟುಕೊಡುವಂತೆ ಎಷ್ಟು ಒತ್ತಾಯಿಸಿದರೂ ಈ ಆಸಾಮಿ ಕದಲಲು ಸಿದ್ಧನಿಲ್ಲ. ಕಡೆಗೂ ಆ ವರದಿಗಾರ್ತಿಗೆ ಆಯೋಜಕರು ಬೇರೆ ರೂಮಿನ ವ್ಯವಸ್ಥೆ ಮಾಡಬೇಕಾಯಿತು. ಇನ್ನು ಈತನ ಉಳಿದ ಮೂರು ದಿನಗಳ ಅವತಾರದ ಬಗ್ಗೆ ಬರೆಯಹೋದರೆ ಅದು ಮಹಾಭಾರತ !

***

ಹೆಚ್ಚಿನ ವರದಿಗಳು ಆಗಮಿಸಲಿವೆ !

Friday, January 30, 2009

ಖಯ್ಯಾಮನ ದುರಂತ

‘ಹೆಂಡ, ಹೆಣ್ಣು , ತಣ್ಣೆಳಲು, ರೊಟ್ಟಿಯ ತುಂಡು- ನನಗಿಷ್ಟು ಸಾಕು’ ಎಂದ ಕವಿ, ದಾರ್ಶನಿಕ ಉಮರ್ ಖಯ್ಯಾಮ್ ಇದೀಗ ಪಡಖಾನೆಯಲ್ಲಿ ಮಧು ಹೀರಿ ಉನ್ಮತ್ತ. ಜೀವೋತ್ಸಾಹ ತುಂಬಿದ ಒಂದಿಷ್ಟು ಹುಡುಗ- ಹುಡುಗಿಯರ ನರ್ತನ ಅವನ ಸುತ್ತ.

ಯಾರೋ ಎಚ್ಚರಿಸಿದರು : ‘ಏಳಯ್ಯ ಖಯ್ಯಾಮ್, ಸಂಸ್ಕೃತಿಯ ರಕ್ಷಕರು ಬರುತ್ತಿದ್ದಾರೆ. ಈ ತರುಣಿಯರು, ಅವರ ಕುಡಿತ, ಜತೆಗೆ ನೀನು ! ಅವರು ಒಂದಿಷ್ಟೂ ಸಹಿಸುವುದಿಲ್ಲ !’

ಖಯ್ಯಾಮ್ ಕಡೆಗಣ್ಣಿನಿಂದ ನೋಡಿ ಕುಡಿತ ಮುಂದುವರಿಸಿದ.

ಕೊಂಚ ಹೊತ್ತಿನಲ್ಲೇ ಹೊರಗೆ ಗದ್ದಲ ಜೋರು ಜೋರಾಗತೊಡಗಿತು. ಜತೆಗಿದ್ದ ತರುಣರು ಓಡುತ್ತಾ ಕೂಗಿದರು- ‘ಖಯ್ಯಾಮ್, ಓಡಿ ಜೀವ ಉಳಿಸಿಕೋ. ಅವರು ಬಂದೇ ಬಿಟ್ಟರು. ಇಲ್ಲೇ ಇದ್ದರೆ ದುರಂತ ಖಂಡಿತ’

ಖಯ್ಯಾಮ್ ಕಡೆಗಣ್ಣು ತೆರೆದು ಹೇಳಿದ : "ಮೂರ್ಖರೇ ! ದುರಂತ ಎಂದೋ ಆರಂಭವಾಗಿದೆ. ಚಲಿಸುತ್ತಿದೆ. ಅದು ಶುರುವಾದಾಗ ನೀವೆಲ್ಲ ನಿದ್ರಿಸುತ್ತಿದ್ದಿರಿ ! ಈಗ ಅದನ್ನು ನೀವಾದರೂ ಹೇಗೆ ತಡೆಯಬಲ್ಲಿರಿ ?!"

ಅಷ್ಟು ಹೇಳಿ ಮತ್ತೆ ಮತ್ತೊಂದು ಬಾಟಲಿ ಬಿರಡೆ ಬಿಚ್ಚಿದ.