Saturday, September 8, 2007

ಚಿರತೆ ಊರಿಗೆ ಯಾಕೆ ಬರುತ್ತೆ ?

ಇದೆಲ್ಲ ಪೂರ್ಣಚಂದ್ರ ತೇಜಸ್ವಿ ಅವರ ಕತೆಗಳಲ್ಲಿ ಮಾತ್ರ ನಡೆಯುವಂಥದು. ಅಷ್ಟೊಂದು ಅಸಂಗತ. ಆದರೂ ನಡೆಯಿತು.
ಒಂದು ಮುಂಜಾನೆ ಮಂಗಳೂರು ಮಹಾನಗರದ ನಟ್ಟ ನಡುವೆ ಚಿರತೆಯೊಂದು ಪ್ರತ್ಯಕ್ಷವಾಗಿಬಿಟ್ಟಿತು. ಅರ್ಧ ಕಟ್ಟಿದ ಕಟ್ಟಡವೊಂದರ ಪಿಲ್ಲರುಗಳ ನಡುವೆ ಅದು ಮಲಗಿತ್ತು. ಬೆಳಗ್ಗೆ ನೀರು ಹಾಕಲು ಬಂದ ಕೆಲಸಗಾರರಿಗೆ ಚಿರತೆ ಕಂಡಿತು. ಅರೆಕ್ಷಣವಾದರೂ ಅವರಿಗೆ, ತಾವು ದಟ್ಟಾರಣ್ಯದ ನಡುವಿನ ಪಾಳು ಭವನಕ್ಕೆ ಬಂದುಬಿಟ್ಟಿದ್ದೇವೆ ಅನಿಸಿದ್ದರೆ ಆಶ್ಚರ್‍ಯವಿಲ್ಲ.
ಅಲ್ಲಿಂದ ಓಡಿಹೋದ ಅವರು ಸುದ್ದಿ ಹಬ್ಬಿಸಿ ಜನ ಸೇರಿಸಿದರು. ಮನುಷ್ಯನನ್ನು ಕಂಡು ಭಯಪಡದಿರಲು ಅದೇನು ಮೃಗಾಲಯದಿಂದಾಗಲೀ, ಸರ್ಕಸ್ಸಿನಿಂದಾಗಲೀ ತಪ್ಪಿಸಿಕೊಂಡ ಚಿರತೆಯಲ್ಲ. ಅವರೆಲ್ಲ ಅಲ್ಲಿಗೆ ಬರುವಷ್ಟರಲ್ಲಿ ಚಿರತೆ ಮತ್ತೊಂದು ಕಟ್ಟಡ ಹುಡುಕಿಕೊಂಡು ಹೋಗಿತ್ತು. ಜನ ಅಲ್ಲಿಗೂ ನುಗ್ಗಿದರು. ಬಲೆ ಹರಡಿ ಚಿರತೆ ಹಿಡಿಯುವ ಕೆಲಸ ಶುರುವಾಯಿತು. ಆದರೆ ಚಿರತೆ ಭಲೇ ಚುರುಕು. ಅದು ಜನರ ಗಮನ ತನ್ನ ಮೇಲೆ ಬೀಳುವಷ್ಟರಲ್ಲೇ ಇನ್ನೊಂದೆಡೆಗೆ ಮಿಂಚಿನಂತೆ ನುಗ್ಗಿಬಿಡುತ್ತಿತ್ತು. ಜನ "ಅದೋ ಅಲ್ಲಿ’ ಎಂದು ಕೈತೋರಿಸುತ್ತಿದ್ದಾಗಲೇ ಯಾವುದೋ ಮಾಯಕದಲ್ಲಿ ಮತ್ತೊಂದು ಕಂಪೌಂಡ್ ಹಾರಿ ಅವಿತು ಕುಳಿತುಬಿಡುತ್ತಿತ್ತು.
ಅದೊಂದು ಅಸಂಗತ ಮುಖಾಮುಖಿ. ದಟ್ಟ ಕಾಡಿನ ಮಧ್ಯದಿಂದೆಲ್ಲಿಂದಲೋ ಬಂದ ಚಿರತೆ. ಅದನ್ನು ನೋಡಲು ಮುಗಿಬಿದ್ದ ನಗರದ ಜನತೆ. ಚಿರತೆ ಬೋನಿನೊಳಗಿದ್ದರೆ ಅಷ್ಟೊಂದು ಮಂದಿ ನೋಡಲು ಬರುತ್ತಿದ್ದರೋ ಇಲ್ಲವೋ. ಚಿರತೆ ಸ್ವತಂತ್ರವಾಗಿ ಓಡಾಡುತ್ತಿದೆ ಎಂಬುದೇ ಎಲ್ಲರಿಗೂ ಕುತೂಹಲ, ವಿಸ್ಮಯ, ಭಯ ಬೆರೆತ ಸನ್ನಿವೇಶ.
ಕೊನೆಗೂ ಅದನ್ನು ಹಿಡಿದರು. ಅರಿವಳಿಕೆ ಮದ್ದು ಚುಚ್ಚಿಸಿಕೊಂಡು ಪ್ರಜ್ಞೆ ತಪ್ಪಿದ ಚಿರತೆಯ ಮುಂದೆ ಒಂದಷ್ಟು ಧೀರರು ಫೋಟೋ ಹೊಡೆಸಿಕೊಂಡರು. ವಿಪರ್‍ಯಾಸವೆಂದರೆ, ನಿಸರ್ಗಧಾಮವೊಂದಕ್ಕೆ ಕೊಂಡೊಯ್ಯಲಾದ ಚಿರತೆ ಮುಂದಿನೆರಡು ದಿನಗಳಲ್ಲಿ ಸತ್ತುಹೋಯ್ತು. ಹಿಡಿಯುವಾಗ ಆದ ದೈಹಿಕ ಹಾಗೂ ಮಾನಸಿಕ ಆಘಾತವೇ ಸಾವಿಗೆ ಕಾರಣ ಅಂತ ಗೊತ್ತಾಯಿತು.
ಅದಿರಲಿ, ಚಿರತೆ ನಗರದ ನಟ್ಟ ನಡುವಿಗೆ ಹೇಗೆ ಬಂತು ?ಅದು ಯಾರಿಗೂ ಗೊತ್ತಾಗಲಿಲ್ಲ. ಶಿರಾಡಿ ಘಾಟಿಯಲ್ಲಿ ನಿಲ್ಲಿಸಿದ ಕೋಳಿ ಫಾರಂ ಲಾರಿಗೆ ವಾಸನೆ ಹಿಡಿದು ಏರಿದ ಚಿರತೆ, ಕೆಳಗಿಳಿಯಲಾಗದೆ ಅಲ್ಲೇ ಸಿಕ್ಕಾಕಿಕೊಂಡು ನಗರಕ್ಕೆ ಬಂದಿರಬೇಕು. ಅಥವಾ ನಗರದ ಪಕ್ಕ ಉಳಿದಿರುವ ಕುರುಚಲು ಕಾಡೊಗಳೊಳಗೆಲ್ಲೋ ಅದು ಇದ್ದಿರಬೇಕು ಎಂಬ ಅಭಿಪ್ರಾಯಗಳು ಕೇಳಿಬಂದವು.
ಕಾರಣಗಳು ಬಹುತೇಕ ಬಾರಿ ಚಿಲ್ಲರೆ. ಪರಿಣಾಮಗಳು ಯಾವಾಗಲೂ ಘೋರ.
ಇಂಥ ಘಟನೆಗಳು ರಾಜ್ಯದ ನಾನಾ ಕಡೆ ಆಗಾಗ ನಡೆಯುತ್ತಲೇ ಇವೆ. ಪಡುಬಿದ್ರಿಯಲ್ಲಿ ನಾಯಿ ಹಿಡಿಯಲು ರಾತ್ರಿ ಬಂದ ಚಿರತೆ ಬಾವಿಗೆ ಬಿತ್ತು. ಶಿಬಾಜೆಯಲ್ಲಿ ಅರಿವಳಿಕೆ ಕೊಡಲು ಬಂದ ವೈದ್ಯರಿಗೆ ಕಚ್ಚಿ ಗಾಯಗೊಳಿಸಿ ಬಳಿಕ ಸತ್ತುಹೋಯ್ತು. ಕುಂದಾ[ರದ ಹಳ್ಳಿಯೊಂದಕ್ಕೆ ಬಂದ ಚಿರತೆಯನ್ನು ಜನ ಕಲ್ಲು ಹೊಡೆದೇ ಸಾಯಿಸಿದರು.
ಪ್ರಶ್ನೆ ಇರುವುದು ಇದು : ನಾಗರಿಕ ಸಮಾಜ ಹಾಗೂ ವನ್ಯಜೀವಿಗಳ ಮುಖಾಮುಖಿ ಯಾವಾಗಲೂ ಯಾಕೆ ದುರಂತದಲ್ಲೇ ಕೊನೆಗೊಳ್ಳಬೇಕು ?
ದಟ್ಟ ಕಾಡಿದ್ದ ಪ್ರದೇಶದಲ್ಲಿ ಬಂದು ಮನೆ ಕಟ್ಟಿದ ಕಾಲದ ಕತೆಗಳನ್ನು ನಮ್ಮಜ್ಜಿ ಹೇಳುತ್ತಿದ್ದರು. ಕಾಡಿನ ದಾರಿಗಳಲ್ಲಿ ಓಡಾಡುವಾಗ ಹುಲಿ ಎದುರಾಗುತ್ತಿತ್ತಂತೆ. ಹಾಗೆ ಎದುರಾದ ಹುಲಿ ಮನುಷ್ಯನತ್ತ ನಿರ್ಲಕ್ಷ್ಯದಿಂದ ನೋಡಿ ಬೆನ್ನು ತಿರುಗಿಸಿ ಕಾಡಿನೊಳಗೆ ಮಾಯವಾಗುತ್ತಿತ್ತಂತೆ.ಅದು ಮಾನವ ಸಮುದಾಯಕ್ಕೂ ಮೃಗಲೋಕಕ್ಕೂ ನಡೆಯುವ ಆರೋಗ್ಯಕರ ಮುಖಾಮುಖಿ. "ನನ್ನ ಸೀಮೆಗೆ ನೀನು ಬರಬೇಡ, ನಿನ್ನ ಊರಿಗೆ ನಾನು ಕಾಲಿಡುವುದಿಲ್ಲ’ ಎಂಬ ಮೌನ ಒಪ್ಪಂದ, ಘನತೆಯ ನಡವಳಿಕೆ.
ಈ ಒಪ್ಪಂದ, ಘನತೆಯನ್ನು ಮನುಷ್ಯ ಮೊದಲು ಮುರಿದ. ಊರು ದಾಟಿ ಕಾಡಿನೊಳಗೆ ಹೋಗಿ ಕಂಡದ್ದನ್ನೆಲ್ಲ ಬಾಚಿದ, ತಿನ್ನಬಹುದಾದ್ದನ್ನು ತಿಂದ, ಉಳಿದದ್ದನ್ನು ಮಾರಿದ. ಈಗ ಮೃಗಗಳು ಊರಿಗೆ ಬರಬಾರದೆಂದು ಯಾಕೆ ಹೇಳುತ್ತೀರಿ ? ಒಪ್ಪಂದವನ್ನು ಮನುಷ್ಯನೇ ಮೊದಲು ಮುರಿದ ಮೇಲೆ, ಮೃಗಗಳು ಮುರಿಯಬಾರದೆಂದು ಹೇಳುವ ಹಕ್ಕು ಎಲ್ಲಿದೆ ?
ಇಲ್ಲೊಂದು ಕುತೂಹಲಕರ ವಿಚಾರವಿದೆ. ಅದೇನೆಂದರೆ, ನಾಡಿಗೆ ಮೃಗ ಬಂದಾಗ ನೋಡಲು ಜನಸಾಗರವೇ ನೆರೆಯುತ್ತದೆ. ಕಾಡಿಗೆ ಮನುಷ್ಯ ಹೋದಾಗ ಮೃಗಗಳೆಲ್ಲಾ ಆಸುಪಾಸಿನಿಂದ ಪೇರಿ ಕೀಳುತ್ತವೆ. ಅವುಗಳಿಗೆ ಮನುಷ್ಯನೆಂದರೆ ಅಷ್ಟೊಂದು ಹೇವರಿಕೆಯಾ ?

1 comment:

ಸುಧನ್ವಾ ದೇರಾಜೆ. said...

bantamale kaniveyinda akshara kanivege bandu biddare olleyadu!!