Friday, September 19, 2008

ಒಲಿಂಪಿಕ್‌ನಲ್ಲಿ ಕಾಣದ ಭಾಮಿನಿಯರು





ಹಿಂಸೆ ದುರ್ಬಲರ ಅಸ್ತ್ರ ಅಂತ ಮಹಾತ್ಮರು ತುಂಬ ಹಿಂದೆಯೇ ಹೇಳಿದ್ದರು ; ಆದರೆ ಹಿಂಸೆ ಯಾವಾಗಲೂ ದುರ್ಬಲರ ಅಸ್ತ್ರವೇನಲ್ಲ. ಅದು ಅಕಾರದಲ್ಲಿರುವವರು ತಮ್ಮಿಂದ ಕೆಳಗಿರುವವರ ಮೇಲೆ ಅಪತ್ಯ ಸ್ಥಾಪಿಸಲು ; ಸಾಮಾಜಿಕವಾಗಿ ಸ್ಥಾಪಿತ ಸ್ಥಾನದಲ್ಲಿರುವವರು ಇತರರ ಮೇಲೆ ಹಿಡಿತ ಸಾಸಲು ಬಳಕೆಯಾಗುವುದೂ ಹೌದು. ಇದಕ್ಕೆ ಅತಿ ಸುಲಭವಾಗಿ ದೊರೆಯುವ ಉದಾಹರಣೆ ಗಂಡು ಹೆಣ್ಣಿನ ಮೇಲೆ ಸಾಸುವ ಆಡಳಿತ ಮತ್ತು ಅದನ್ನು ಹೊಂದಲು ಪ್ರಯೋಗಿಸುವ ನಾನಾ ಬಗೆಯ ಹಿಂಸೆಗಳು.
ಈ ಹಿಂಸೆಯ ಅನೇಕ ಮುಖಪರದೆಗಳನ್ನು ಸರಿಸುವ ಎರಡು ಪುಸ್ತಕಗಳನ್ನು ಮೇಫ್ಲವರ್ ಮೀಡಿಯಾ ಹೌಸ್‌ನ ಪ್ಯಾಪಿರಸ್ ಪ್ರಕಾಶನ ಪ್ರಕಟಿಸಿದೆ. ಒಂದು- ಲೀಲಾ ಸಂಪಿಗೆಯ ‘ಒಲಿಂಪಿಕ್ಸ್ ಎಂಬ ಕೆಂಪು ದೀಪ’, ಇನ್ನೊಂದು ಚೇತನಾ ತೀರ್ಥಹಳ್ಳಿಯ ‘ಭಾಮಿನಿ ಷಟ್ಪದಿ’.
ಆಧುನಿಕ ಸ್ತ್ರೀ ಉದ್ಯೋಗ ಹಾಗೂ ಮನೆ ಎರಡರಲ್ಲೂ ತನ್ನ ಅಸ್ತಿತ್ವ ಸಾಸಲು ಗಂಡಸಿಗಿಂತ ಹಲವು ಪಟ್ಟು ಹೆಣಗಬೇಕಾಗಿ ಬಂದಿರುವುದು ; ಉಪಭೋಗವಾದದ ವಿಜೃಂಭಣೆಯ ಹಿನ್ನೆಲೆಯಲ್ಲಿ ಆಕೆ ಒಂದು ಸರಕಾಗಿ ಮಾರ್ಪಟ್ಟಿರುವುದು ; ಹೆಸರಿಗೆ ಎಲ್ಲ ಬಗೆಯ ರಕ್ಷಣೆಗಳಿದ್ದರೂ ನಿಜಕ್ಕೂ ಆಕೆಗೆ ಯಾವ ರಕ್ಷಣೆಗಳೂ ಇಲ್ಲದಿರುವುದು ; ‘ಮಾತೆಯರು’ ಎಂದು ಬಾಯ್ತುಂಬ ಕರೆಯುವ, ಆದರೆ ಅವಕಾಶ ಸಿಕ್ಕಿದಲ್ಲೆಲ್ಲ ಪದ್ಮಪ್ರಿಯರನ್ನೂ ಜಯಲಕ್ಷ್ಮಿಯರನ್ನೂ ಸೃಷ್ಟಿಸುವ ಆತುರ ಹೊಂದಿರುವ ಮಂದಿ ರಾಜ್ಯದಲ್ಲಿ ಅಕಾರಕ್ಕೆ ಬಂದಿರುವುದು- ಇಂಥ ಸನ್ನಿವೇಶದಲ್ಲಿ ಕನ್ನಡದ ಸಂದರ್ಭದಲ್ಲಿ ಈ ಎರಡು ಪುಸ್ತಕಗಳು ಹೊರಬಂದಿರುವುದು ಕಾಕತಾಳೀಯವಷ್ಟೇ ಅಂತ ನಾನು ತಿಳಿಯಲಾರೆ.
ಈ ಎರಡೂ ಕೃತಿಗಳು ಗಂಡು ಹೆಣ್ಣಿನ ಮೇಲೆ ಪ್ರಯೋಗಿಸುವ ಹಿಂಸೆಯ ಎರಡು ಮುಖಗಳನ್ನು ಪ್ರಕಟಿಸುತ್ತವೆ ; ಅದರಲ್ಲಿ ಒಂದು, ಗಂಡು ಒಂದು ಸಮುದಾಯವಾಗಿ ತನ್ನ ದೈಹಿಕ ಸುಖಕ್ಕಾಗಿ ಹೆಣ್ಣು ಸಮುದಾಯವನ್ನು ತನಗೆ ಬೇಕಾದಂತೆ ಮಾರ್ಪಡಿಸಿರುವುದು, ಅಂದರೆ ವೇಶ್ಯಾ ಸಮುದಾಯವಾಗಿ ಅಭಿವೃದ್ಧಿಪಡಿಸಿರುವುದು. ಇನ್ನೊಂದು, ಹೀಗೆ ನೇರ ಮಾರ್ಪಡಿಸುವಿಕೆಯ ಅವಕಾಶವಿಲ್ಲದಲ್ಲಿ, ಮೇಲ್ನೋಟಕ್ಕೆ ತೀರ ಸಭ್ಯವೂ ಸಾಮಾಜಿಕವಾಗಿ ಒಪ್ಪಿತವೂ ಎನಿಸುವ ಸಾಂಸಾರಿಕ- ಗೃಹ ಹಿಂಸೆಯ ಮಾರ್ಗವನ್ನು ಹಿಡಿದಿರುವುದು. ಇದರಲ್ಲಿ ‘ಒಲಿಂಪಿಕ್ಸ್’ ಮೊದಲನೆಯದು- ಸಾಮಾಜಿಕ ಹಿಂಸೆಯ ಅನಾವರಣ ; ‘ಭಾಮಿನಿ’ ಎರಡನೆಯದು- ಗೃಹ ಹಿಂಸೆಯ ತೋರುಗನ್ನಡಿ.
*
ಸಾವಿರಾರು ಕ್ರೀಡಾಪಟುಗಳು, ಲಕ್ಷಾಂತರ ಕ್ರೀಡಾಪ್ರೇಮಿಗಳು ಸಂಗಮಿಸುವ ಒಲಿಂಪಿಕ್ಸ್‌ನಲ್ಲಿ ಕ್ರೀಡೆಯ ಜತೆಗೆ ಕಾಮಕ್ರೀಡೆ ಕೂಡ ತನ್ನ ಆಟವನ್ನು ಎಂಥ ಬೃಹತ್ ಅನಿಸುವ ರೀತಿಯಲ್ಲಿ ಆಡುತ್ತದೆ ಎಂಬ ವಿವರವಾದ ಚಿತ್ರಣ ಲೀಲಾ ಸಂಪಿಗೆಯ ಪುಸ್ತಕದಲ್ಲಿದೆ ; ಕನ್ನಡದಲ್ಲಿ ಕುಸುಮಾ ಶ್ಯಾನುಭಾಗ್ ಅವರಂಥ ಒಂದಿಬ್ಬರನ್ನು ಬಿಟ್ಟರೆ ಬೇರ್‍ಯಾರೂ ಕಾಲಿಡದ ಕ್ಷೇತ್ರದಲ್ಲಿ ಓಡಾಡಿ ಬೀದಿ ಹೆಣ್ಣು ಮಕ್ಕಳ ನೋವುಗಳನ್ನು ಕಂಡವರು ಅವರು ; ಆದ್ದರಿಂದ ಈ ವಿಷಯದ ಬಗ್ಗೆ ಅಕಾರಯುತವಾಗಿ ಬರೆಯಬಲ್ಲರು.
ಪುಸ್ತಕ ಪುಟ್ಟದಾಗಿದೆ ; ಆದರೆ ಒಲಿಂಪಿಕ್ಸ್‌ನ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ವೇಶ್ಯಾವಿಲಾಸದ ವಿರಾಟ್ ದರ್ಶನವನ್ನೇ ಮಾಡಿಸುತ್ತದೆ. ಇಂಥ ವಿಚಾರದಲ್ಲಿ ಬರೆಯುವವರು ಓದುಗರ ಒಲುಮೆಗಾಗಿ ರೋಚಕ ಶೈಲಿ ಹಾಗೂ ವಿವರಗಳಿಗೆ ಮೊರೆ ಹೋಗುವುದು ಸಾಮಾನ್ಯ ; ಆದರೆ ಈ ಕ್ಷೇತ್ರದಲ್ಲಿ ಅಂತಃಕರಣವುಳ್ಳವರಿಗೆ ಅದು ಸಹ್ಯವೆನಿಸಲಾರದು, ಲೀಲಾ ಅವರಿಗೆ ಅನಿಸಿಲ್ಲ.
ಅದಕ್ಕಿಂತ ಮುಖ್ಯವಾಗಿ, ‘ಲೈಂಗಿಕತೆಯ ರಾಜಕೀಯ’ ಅಂತೇನು ಹೇಳುತ್ತೇವಲ್ಲ, ಅದರ ಅರ್ಥ, ಸ್ವರೂಪ ಈ ಕೃತಿಯಿಂದ ಗೊತ್ತಾಗುತ್ತದೆ. ಈ ದಂಧೆಯ ಭಯಾನಕ, ವಿಸ್ತೃತ ರಾಜಕೀಯ ಮುಖ ಈ ಕೆಳಗಿನ ಕೆಲವು ವಿವರಗಳಿಂದಲೇ ಗೊತ್ತಾಗಬಹುದು :
“ಜಗತ್ತಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಮತ್ತು ಇಂಟರ್‌ನೆಟ್ ಜಾಲದಲ್ಲಿ ವೈವಿಧ್ಯಮಯ, ದೃಢಕಾಯದ, ಹದಿಹರೆಯದ, ಸುಂದರ ಹೆಣ್ಣುಗಳ ಲಭ್ಯತೆಯ ಬಗ್ಗೆ ಜಾಹಿರಾತು ಪ್ರಕಟವಾದವು. ಸೆಕ್ಸ್ ಉದ್ಯಮ ಕೋಟ್ಯಂತರ ರೂ. ವಹಿವಾಟು ನಡೆಸಿತು. ಇದರಿಂದ ಆಸ್ಟ್ರೇಲಿಯದ ಬೊಕ್ಕಸವೂ ತುಂಬಿತು !"
“ವೇಶ್ಯಾವಾಟಿಕೆ ಈಗ ಜಾಗತಿಕ ಉದ್ಯಮ. ಅಪಾರ ಪ್ರಮಾಣದ ಹಣ ಹೂಡಿಕೆ, ಲಾಭಕೋರತನ ಇಲ್ಲಿ ಸಾಗಿದೆ. ಹಲವು ರಾಷ್ಟ್ರಗಳಲ್ಲಿ ವೇಶ್ಯಾವಾಟಿಕೆ ಕಾನೂನುಬಾಹಿರವಾಗಿದ್ದರೆ, ಹಲವೆಡೆ ಲೈಂಗಿಕ ವೃತ್ತಿ ಹೆಸರಿನಲ್ಲಿ ಕಾನೂನು ಮಾನ್ಯತೆ ಪಡೆದಿದೆ. ಈ ಸೆಕ್ಸ್‌ಟ್ರೇಡ್ ಎನ್ನುವುದೇ ದೊಡ್ಡ ಭೂಗತ ಜಗತ್ತು."
“ಇಂಡೋನೇಷ್ಯಾದ ೧.೫ ಶೇಕಡ ಮಹಿಳೆಯರು ವೇಶ್ಯಾವೃತ್ತಿಯಲ್ಲಿದ್ದಾರೆ. ಮಲೇಷಿಯಾ, ಫಿಲಿಪ್ಪೈನ್ಸ್, ಥೈಲ್ಯಾಂಡಿನಲ್ಲೂ ಇಷ್ಟೇ ಪ್ರಮಾಣದ ಮಹಿಳೆಯರು ಈ ವೃತ್ತಿಯಲ್ಲಿದ್ದು ರಾಷ್ಟ್ರೀಯ ಆದಾಯದ ಶೇ. ೧೪ ಭಾಗವನ್ನು ಪೂರೈಸುತ್ತಾರೆ. ಥೈಲ್ಯಾಂಡಿನಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಶಸ್ತ್ರ ಕಳ್ಳಸಾಗಣೆಯ ಬಳಿಕ ಅತ್ಯಂತ ಲಾಭದ ದಂಧೆ ಎಂದರೆ ವೇಶ್ಯಾವಾಟಿಕೆ. ರಾಷ್ಟ್ರೀಯ ಮಹಿಳಾ ಆಯೋಗದ ವರದಿ ಪ್ರಕಾರ ಭಾರತದಲ್ಲೂ ವಾರ್ಷಿಕ ೨೦೦ರಿಂದ ೫೦೦ ಕೋಟಿ ಆದಾಯ ಇದರಿಂದ ಸಲ್ಲುತ್ತದೆ."
“ಮಾವೋ ಕಾಲದ ಸಾಂಸ್ಕೃತಿಕ ಕ್ರಾಂತಿ ಚೀನಾದಲ್ಲಿ ನೈತಿಕ ಪ್ರಶ್ನೆಯನ್ನು ಮುಖ್ಯವಾಗಿರಿಸಿಕೊಂಡಿತ್ತು. ಲೈಂಗಿಕತೆ ಬಗ್ಗೆ ಬಹಿರಂಗ ಚರ್ಚೆ ಸಾಧ್ಯವೇ ಇರಲಿಲ್ಲ. ಆದರೆ ಇದೀಗ ಜಾಗತೀಕರಣಕ್ಕೆ ತೆರೆದುಕೊಂಡಿರುವ ಚೀನಾದ ನಗರ ಪ್ರದೇಶದ ಚಿತ್ರಣ ಬದಲಾಗಿದೆ. ಲೈಂಗಿಕ ಉದ್ಯಮ ಅಲ್ಲಿನ ಆರ್ಥಿಕತೆಗೆ ಶೇ. ೬ ವರಮಾನ ತಂದುಕೊಡುತ್ತಿದೆ."
ವಿವರಗಳನ್ನು ನೀಡುವ ಜತೆಗೆ ಲೀಲಾ, ಮಾನವ ಸಾಗಾಟ ಮುಂತಾದವುಗಳ ಬಗ್ಗೆ ಚರ್ಚಿಸುತ್ತಾರೆ ; ಇವೆಲ್ಲವುಗಳನ್ನು ತಡೆಯಲು ಅಗತ್ಯವಾದ ಕ್ರಮಗಳ ಬಗ್ಗೆ ಕೂಡ ಚರ್ಚಿಸುತ್ತಾರೆ. ಕನ್ನಡದಲ್ಲಿ ಮುಂದೆ ಲೈಂಗಿಕ ವೃತ್ತಿಯ ಬಗೆಗೆ ಮಾತನಾಡುವವರು, ಬರೆಯುವವರು ಅವಶ್ಯವಾಗಿ ಗಮನಿಸಬೇಕಾದ ಕೃತಿ ಇದು.
*
ಟಾಲ್‌ಸ್ಟಾಯ್‌ನ ಒಂದು ಜನಪ್ರಿಯ ಸೂಕ್ತಿಯನ್ನು ಇಲ್ಲಿ ನೆನೆಯಬಹುದಾದರೆ, ಅದು ಹೀಗಿದೆ- ‘ಎಲ್ಲ ಸುಖೀ ಕುಟುಂಬಗಳೂ ಒಂದೇ ಥರ ; ಆದರೆ ಪ್ರತಿಯೊಂದು ಕುಟುಂಬವೂ ಅದರದೇ ಆದ ರೀತಿಯಲ್ಲಿ ದುಃಖಿ.’ ಭಾರತೀಯ ಸಂದರ್ಭದಲ್ಲಿ ಈ ದುಃಖದ ದೇಖರೇಖಿ ಯಾವಾಗಲೂ ಹೆಣ್ಣಿಗೆ. ಪ್ರೇಮವನ್ನು ಪದೇ ಪದೇ ಸಾಬೀತು ಪಡಿಸಬೇಕಾದ ಗಂಡು ; ಎಂದೂ ಎಲ್ಲೂ ಇಲ್ಲದ ಆದರ್ಶ ಪ್ರೇಮಕ್ಕಾಗಿ ನೋಯುವ ಹೆಣ್ಣು ಜತೆಯಾಗಿಬಿಟ್ಟರಂತೂ ಆ ದಾಂಪತ್ಯ ನರಕ. ಈ ನರಕದ ಮಗ್ಗುಲುಗಳಿಂದ ಎತ್ತಿಕೊಂಡ ಹೂಗಳೇ ಈ ಭಾಮಿನಿ ಷಟ್ಪದಿ.
ಚೇತನಾರ ಬರಹಗಾರಿಕೆಯ ಬಗ್ಗೆ ಎರಡು ಮಾತಿಲ್ಲ ; ಅವಶ್ಯವಿಲ್ಲದಿದ್ದಲ್ಲಿ ಅವರು ಉದ್ದ ವಾಕ್ಯಗಳನ್ನು ಹಾಕಲು ಹೋಗುವುದಿಲ್ಲ. ಕೆಲವು ವಾಕ್ಯಗಳು ಎರಡೇ ಪದಗಳಿಗೆ ಮುಗಿಯುತ್ತವೆ. ಹೆಣ್ಣಿನ ಮನೋಧರ್ಮಕ್ಕೆ ಸಾಮಾನ್ಯವಾಗಿ ವಿರುದ್ಧವಾದ ಗುಣ ಇದು ; ಆದರೆ ಈ ಬಗೆಯ ಶೈಲಿ ಮತ್ತು ಕಾವ್ಯಾತ್ಮಕತೆ ವೈದೇಹಿ ಅವರಲ್ಲಿ ಕೂಡ ಕಾಣುತ್ತದಾದ್ದರಿಂದ ತೀರ ಅಪರೂಪ ಅಂದುಕೊಳ್ಳಬೇಕಿಲ್ಲ.
ನರೇಂದ್ರ ಪೈ ಗುರುತಿಸಿದಂತೆ, ಗಂಡಿನಂತೆ ಹೆಣ್ಣು ಅನುಭವ ಲೋಕವೊಂದನ್ನು ಹುಡುಕಿಕೊಂಡು ಹೋಗದಿರಲು ಆಕೆಯ ಭೌತಿಕ ಸ್ಥಿತಿ ಮತ್ತು ಸಾಮಾಜಿಕ ಪರಿಸ್ಥಿತಿಗಳು ಕೂಡ ಕಾರಣ. ಆದರೆ ಆಕೆ ಅನುಭವದ ಒಳಲೋಕವೊಂದನ್ನು ತನಗೆ ತಾನೆ ಸೃಷ್ಟಿಸಿಕೊಳ್ಳುವುದರಿಂದ, ಗಂಡಿನ ಜತೆ ಅದನ್ನು ಸಮೀಕರಿಸಬೇಕಿಲ್ಲ. ಹೀಗೆ ಪ್ರತ್ಯೇಕಿಸುವುದು ಕೂಡ ಲೇಖಕಿಯರಿಗೆ ಅನ್ಯಾಯ ಮಾಡಲು ಹಿರಿಯ ವಿಮರ್ಶಕರು ಕಂಡುಕೊಂಡಿದ್ದ ಒಂದು ದಾರಿ.
ಚೇತನಾ ಅವರ ಪುಸ್ತಕದ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆಯಲು ನನಗೆ ಇಷ್ಟ. ಆದರೆ ಜೋಗಿ, ಹುಳಿಯಾರ್, ನರೇಂದ್ರ ಪೈ ಸೇರಿದಂತೆ ಎಲ್ಲರೂ ಈಗಾಗಲೇ ಅದನ್ನು ಸಾಕಷ್ಟು ಹೊಗಳಿದ್ದಾಗಿದೆ. ಚೇತನಾ ಕನ್ನಡದ ಒಳ್ಳೆಯ ಲೇಖಕಿಯರಲ್ಲಿ ಒಬ್ಬರು ಎಂಬುದನ್ನು ಒಪ್ಪಿಕೊಳ್ಳುತ್ತಲೇ, ಅವರ ಬರಹದ ಬಗೆಗೆ ನನಗಿರುವ ಕೆಲವು ತಕರಾರುಗಳನ್ನು ಇಲ್ಲಿ ದಾಖಲಿಸಲು ಬಯಸುತ್ತೇನೆ.
ಒಂದು : ಹಿಂಸೆಯಲ್ಲಿ ರಮಿಸುವ, ಹಿಂಸೆಯಲ್ಲೇ ವಿರಮಿಸುವ ಗುಣ. ಇದು ಎಂ.ವ್ಯಾಸರಲ್ಲಿ ತುಂಬಾ ಇತ್ತು. ಅವರು ಇದರಿಂದ ಎಂದೂ ಮೇಲೆ ಬರಲೇ ಇಲ್ಲ. ಚೇತನಾ ಇದನ್ನು ಮೀರಬಲ್ಲರೋ ಎಂಬುದು ಇನ್ನೂ ಸ್ಪಷ್ಟವಿಲ್ಲ ; ಮೀರಬೇಕೇ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ.
ಎರಡು : ಪುರಾಣದ ಪಾತ್ರಗಳ ಭಂಜನೆ. ಇದರಿಂದ ಹೊಸ ಅರಿವು ಉಕ್ಕುವಂತಿದ್ದರೆ, ಹೊಸ ಗ್ರಹಿಕೆಯನ್ನು ನನಗೆ ಅದು ನೀಡುತ್ತದಾದರೆ ನಾನು ಸ್ವಾಗತಿಸಬಲ್ಲೆ. ಇಲ್ಲವಾದರೆ ಇದರಿಂದ ಪ್ರಯೋಜನವೇನು ? ಯಶೋಧರೆ, ದ್ರೌಪದಿ, ಅಹಲ್ಯೆ ಎಲ್ಲರ ಬಗ್ಗೆಯೂ ಚೇತನಾಗಿಂತ ಒಂದು ತಲೆಮಾರು ಹಿಂದಿನ ಲೇಖಕಿಯರು ಇನ್ನಷ್ಟು ಪ್ರಖರವಾಗಿ ಬರೆದಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು. ಉದಾಹರಣೆಗೆ- ಇರಾವತಿ ಕರ್ವೆ, ಪ್ರತಿಭಾ ನಂದಕುಮಾರ್.
ಮೂರು : ಗಂಡು ಶೋಷಕ, ಹೆಣ್ಣು ಶೋಷಿತೆ ಎಂಬ ಸ್ಥಾಪಿತ ಮಾದರಿಗೆ ಬೀಳುವ ಭಯ. ಇದು ಜನಪ್ರಿಯವಾದುದೂ ಆಗಿದೆ ; ಪೊಲಿಟಿಕಲಿ ಕರೆಕ್ಟ್ ಆಗಿಯೂ ಇದೆ. ಆದರೆ ಇದೇ ಗ್ರಹಿಕೆಯೊಂದಿಗೆ ನಾವು ಇನ್ನಷ್ಟು ಮುಂದೆ ಹೋಗಲು ಸಾಧ್ಯವಿಲ್ಲ. ದಾಂಪತ್ಯದ ನರಕ ಎಲ್ಲರಿಗೂ ಒಂದೇ ; ಆಧುನಿಕ ಸಂದರ್ಭದಲ್ಲಿ ಹೆಚ್ಚಿನ ಸಲ ಗಂಡಿನೊಂದಿಗೆ ಹೆಣ್ಣೂ ಈ ನರಕಕ್ಕೆ ಪಾಲುದಾರಳು. ಗಂಡಿನ ಸೋಲು, ನೋವು, ಯಾತನೆಗಳನ್ನು ಕಾಣುವ ಕಣ್ಣು ಬರಹಗಾರರಿಗೆ ಮಂದವಾಗಕೂಡದು.
ನಾಲ್ಕು : ಅಷ್ಟೊಂದು ಬರಹಗಳನ್ನು ಓದಿದ ಮೇಲೆ, ಇಲ್ಲಿನ ಯಾವ ಪಾತ್ರವೂ ನನ್ನ ಚಿತ್ತ ಭಿತ್ತಿಯ ಮೇಲೆ ಅಚ್ಚೊತ್ತಿ ನಿಲ್ಲಲಿಲ್ಲವಲ್ಲಾ ಎಂದನಿಸಿದ್ದು ನಿಜ. ಅದಕ್ಕೆ ಕಾರಣವೇನು ಎಂಬ ಬಗ್ಗೆ ಆಲೋಚಿಸಿದೆ ; ನನಗೆ ತಿಳಿದಂತೆ ಬಹುತೇಕ ಬರಹಗಳ ಬೋನ್ಸಾಯ್ ಆಕೃತಿ ಇದಕ್ಕೆ ಕಾರಣ. ವೇದವ್ಯಾಸರು ಮೂವತ್ತು ಸಾವಿರ ಶ್ಲೋಕಗಳಲ್ಲಿ ಚಿತ್ರಿಸಿದ ದ್ರೌಪದಿಯನ್ನು ಐದು ಪ್ಯಾರಾಗಳಲ್ಲಿ ಬೇರೆ ರೀತಿ ಕೆತ್ತಿ ನಿಲ್ಲಿಸಬಹುದೆ ? ಹನಿಗವಿತೆಗಳು ನಕ್ಕು ಸುಮ್ಮನಾಗುವುದಕ್ಕಷ್ಟೇ ಯಾಕೆ ಸೀಮಿತವಾಗಿವೆ ? ಈ ಮುಂತಾದ ಪ್ರಶ್ನೆಗಳೂ ಇದರ ಜತೆಗೇ ಹುಟ್ಟುತ್ತವೆ. ಸವುಡು ಸಿಕ್ಕಿದರೆ, ಇದರ ಬಗ್ಗೆ ವಿಸ್ತಾರವಾಗಿ ಇನ್ನೊಮ್ಮೆ ಬರೆದೇನು.

12 comments:

ಪಲ್ಲವಿ ಎಸ್‌. said...

ನಿಜ ಹರೀಶ್‌, ಬರವಣಿಗೆಗಿಂತ ಕೃತಿಗೆ ಹಾಗೂ ಕರ್ತೃವಿಗೆ ಹೆಚ್ಚಿನ ಆದ್ಯತೆ ಅಥವಾ ಹೊಗಳಿಕೆ ಸಿಕ್ಕರೆ ಕೃತಿಯ ಲೋಪದೋಷ ಅಥವಾ ಉತ್ತಮಾಂಶಗಳು ಹೊರಬರುವುದೇ ಇಲ್ಲ. ಆದ್ದರಿಂದ ನಿಮ್ಮ ವಿಮರ್ಶೆ ವಾಸ್ತವ.

ಆದರೆ, ಲೇಖಕ/ಕಿಯನ್ನು ಅನಗತ್ಯವಾಗಿ ಮೆರೆಸುವ ವ್ಯವಸ್ಥೆ ಮೊದಲಿನಿಂದಲೂ ಅಬಾಧಿತವಾಗಿ ಮುಂದುವರೆದುಕೊಂಡು ಬಂದಿದೆ. ಎಷ್ಟೋ ಲೇಖಕ/ಕಿಯರ ಹೆಸರುಗಳನ್ನು ಕೇಳಿರುತ್ತೇವೆ. ಆದರೆ, ಓದಿರುವುದಿಲ್ಲ. ಇದಕ್ಕೆ ಕಾರಣ ಈ ಅನಗತ್ಯ ಮೆರೆಸುವಿಕೆಯೇ ಕಾರಣ.

ಲೇಖಕ/ಕಿ ಯಾರೇ ಇರಲಿ, ಅವರ ಕೃತಿಗಳನ್ನು ಸ್ಪಷ್ಟವಾಗಿ ವಿಮರ್ಶಿಸುವುದು ನಮಗೆ ರೂಢಿಯಾಗಬೇಕಿದೆ. ಬ್ರಾಂಡ್‌ ಮಾಡುವುದು, ಗುಂಪು ರಚಿಸುವುದು ಸಾಹಿತ್ಯಕ್ಕಷ್ಟೇ ಅಲ್ಲ, ಎಲ್ಲ ಕ್ರಿಯಾತ್ಮಕ ಅಭಿವ್ಯಕ್ತಿಗೂ ಅಪಾಯಕಾರಿ. ಬ್ಲಾಗ್ ಯುಗದಲ್ಲೂ ಅದು ಹಾಗೇ ಇರುವುದು ವಿಷಾದನೀಯ.

ಚೇತನಾ ಕವನಗಳನ್ನು ನಾನೂ ಓದಿದ್ದೇನೆ. ನಿಮ್ಮ ಅಭಿಪ್ರಾಯವೇ ನನ್ನದೂ. ಆದರೆ, ಅದನ್ನು ಬರೆದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುತ್ತಾರೆ ಎಂದು ಅಳುಕಿ ಸುಮ್ಮನಾಗಿದ್ದೆ. ನೀವು ಅದನ್ನು ಮುಕ್ತವಾಗಿ ಹೇಳಿಕೊಂಡಿದ್ದೀರಿ.

ಥ್ಯಾಂಕ್ಸ್‌.

- ಪಲ್ಲವಿ ಎಸ್‌.

ಹಳ್ಳಿಕನ್ನಡ said...

100% right.

ಹರೀಶ್ ಕೇರ said...

ಪಲ್ಲವಿ,
ನೀವು ಹೇಳುತ್ತಿರುವುದು ಯಾವುದರ ಬಗ್ಗೆ ಎಂಬುದು ನನಗೆ ತಿಳಿಯದು. ವಿಮರ್ಶೆಯ ಸಂದರ್ಭದಲ್ಲಿ ನನಗೆ ಕಾಣುವುದು ಕೃತಿ ಮಾತ್ರ. ಕೃತಿಕಾರನ/ಳಲ್ಲ. ಇದು ವಿಮರ್ಶೆಯ ಪ್ರಾಥಮಿಕ ಪಾಠ.
- ಹರೀಶ್ ಕೇರ

ಸುಧನ್ವಾ ದೇರಾಜೆ. said...

hadavaagide.

Anonymous said...

Vasthunishta vimarshe.
-
Niranjan S.S.
Bengaluru

Anonymous said...
This comment has been removed by a blog administrator.
Anonymous said...

ಮಾನ್ಯರೇ,
ಈ ಬರಹ ಅನೇಕ ಪೂರ್ವಾಗ್ರಹಗಳಿಂದ ಕೂಡಿದೆ. ಚೇತನಾ ತೀರ್ಥಹಳ್ಳಿ ಲೇಖನದ ಶೈಲಿ ಸರಳ, ಸುಂದರವಾಗಿದ್ದು, ಮನಸ್ಸಿನಲ್ಲಿ ನಿಲ್ಲುತ್ತದೆ. ಅವರ ಬರಹಗಳ ಬಗ್ಗೆ ಉತ್ತಮ ಕತೆಗಾರರಾದ ಜೋಗಿ ಹಾಗೂ ನಟರಾಜ್ ಹುಳಿಯಾರ್ ಶ್ಲಾಘಿಸಿ ಬರೆದಿದ್ದಾರೆ. ಒಳ್ಳೆಯ ಬರಹಗಳಲ್ಲೂ ಛಿದ್ರ ಹುಡುಕುವುದು ವಿಮರ್ಶಕರೆಂದು ಕರೆಸಿಕೊಳ್ಳುವವರ ಚಾಳಿಯೇ ಇರಬೇಕು. ಈಗಿನ ಲೇಖಕರು ಅಭಿವ್ಯಕ್ತಿಗೆ ಪುರಾಣದ ಪಾತ್ರಗಳನ್ನು ಎತ್ತಿಕೊಳ್ಳಬಾರದು ಎಂದು ಯಾಕೆ ಬಯಸುತ್ತೀರಿ ? ಹಿಂಸೆಯ ಬಗ್ಗೆ ಬರೆಯಬಾರದು ಎಂದರೇನು ? ಎಲ್ಲರೂ ಸುಖವಾಗಿರುವುದರ ಬಗ್ಗೆಯೇ ಬರೆಯಬೇಕೇ ?
- ಎಸ್. ಚಕ್ರವರ್ತಿ

chetana said...

ನಮಸ್ತೇ ಹರೀಶ್
ಮೊನ್ನೆಯೇ ಕಮೆಂಟ್ ಮಾಡಬೇಕನಿಸಿತ್ತು. ಆದರೆ, ನಿಮ್ಮ ಹದವಾದ ವಿಮರ್ಶೆಯ ಹಾದಿಯನ್ನ್ನು ಪಲ್ಲವಿ ತಪ್ಪಿಸುತ್ತಿದ್ದಾರೆ ಅನಿಸಿ, ತತ್ ಕ್ಷಣದ ಪ್ರತಿಕ್ರಿಯೆಯನ್ನು ತಡೆಹಿಡಿದೆ. ನಿಮ್ಮ ಬರಹ ಓದಿದ ಕೂಡಲೆ ಗೆಳತಿ ಟೀನಾಗೆ ಕಾಲ್ ಮಾಡಿ ನನಗಾದ ಸಮಾಧಾನವನ್ನು ಹೇಳಿಕೊಂಡೆ. ಏಕೆಂದರೆ ನೀವು ಯಾವ ಪೂರ್ವಾಗ್ರಹವೂ ಇಲ್ಲದೆ, ವಸ್ತು ನಿಷ್ಠವಾಗಿ ಬರೆದಿರುವಿರಿ. ನಾನು ಕೂಡ ಯಾವುದೆಲ್ಲವನ್ನು ನ್ಯೂನ್ಯತೆ ಅಂದುಕೊಂಡಿದ್ದೆನೋ ಅವನ್ನು ನೀವು ಗುರುತಿಸಿದ್ದೀರಿ. ನರೇಂದ್ರ ಪೈ ಅವರು ಕೂಡ ಇಂತಹದೊಂದು ಪಟ್ಟಿಯನ್ನು ನೀಡಿದ್ದಾರೆ. ಇದರಿಂದ ನನಗೆ ನನ್ನ ಮುಂದಿನ ಬರವಣಿಗೆಗೆ ಅನುಕೂಲವೇ ಆಗುವುದು. ಏನು ಬರೆದರೆ ಚೆನ್ನ ಅನ್ನುವುದರ ಜೊತೆಗೇ ಅದು ಎಷ್ಟಕ್ಕೆ ಸೀಮಿತವದರೆ ಚೆನ್ನ ಎನ್ನುವುದು ನಿಮ್ಮ , ಪೈ ಅವರ ವಿಮರ್ಶೆಯಿಂದ ನನಗೆ ಸ್ಪಾಷ್ಟವಾಗಿದೆ. ಅದಕ್ಕಾಗಿ ಧನ್ಯವಾದ.

ವಂದೇ,
ಚೇತನಾ ತೀರ್ಥಹಳ್ಳಿ

(ಒಂದು ಮನವಿ: ದಯವಿಟ್ಟು ಅನಾನಿಮಸ್ ಆಯ್ಕೆಯನ್ನು ತೆಗೆದು ಹಾಕುವ ಬಗ್ಗೆ ಯೋಚಿಸಿ. ಇದರಿಂದ ತಮ್ಮದಲ್ಲದ ಹೆಸರಲ್ಲಿ ಮತ್ತೊಬ್ಬರು ಪ್ರತಿಕ್ರಿಯೆ ಬರೆಯುವುದು avoid ಆಗುತ್ತದೆ.)

sunaath said...

ಹರೀಶ,
ಎಷ್ಟು analytical ಹಾಗು thoughtful ವಿಮರ್ಶೆ ಬರೆದಿದ್ದೀರಿ. ನನಗೆ ತುಂಬಾ ಹಿಡಿಸಿತು.
ನೀವು ಓದಿದ ಪುಸ್ತಕಗಳ ಬಗೆಗೆ ಇದೇ ರೀತಿಯಾಗಿ ಬರೆಯುತ್ತ ಹೋಗಬೇಕು.

Anonymous said...

ಕೇರ,
ನೀವು ಬರೆದದ್ದು ಹದವಾಗಿದೆ. ಕೆಲ ಮಾಧ್ಯಮಗಳು ಭಾಮಿನಿಗೆ ಪ್ರಚಾರಕೊಟ್ಟಿದ್ದನ್ನು ನೋಡಿದರೆ ಭಾಮಿನಿ ಇನ್ನೊಂದು ಆವರಣವೇನೋ ಅನ್ನಿಸಬೇಕು?! ಮೇ ಪ್ಲವರ್ ಈ ಕೃತಿ ಹೊರತರದೇ ಬೇರೆ ಯಾರಾದರೂ ಹೊರ ತಂದಿದ್ದರೆ ಈ ತರಹ ಪ್ರಚಾರ ಸಿಗುತ್ತಿತ್ತಾ? ಇಲ್ಲಿ ಚೇತನಾ ಸಾಮರ್ಥ್ಯಕ್ಕಿಂತ ಮೇ ಪ್ಲವರ್ ಕೈವಾಡವೇ ಹೆಚ್ಚು ಅನ್ನಿಸತ್ತೆ. ಯಾವ ಪಾತ್ರವೂ ನೆನಪಿನಲ್ಲಿ ಉಳಿಯದ ಭಾಮಿನಿಗಿಂತ ಎಷ್ಟೋ ಅದ್ಬುತ ಕೃತಿಗಳು ನಮ್ಮಲ್ಲಿ ಎನೇನೂ ಪ್ರಚಾರ ಸಿಗದೆ ಮೂಲೆ ಗುಂಪಾಗಿವೆ. ಈ ನಿಟ್ಟಿನಲ್ಲಿ ನೋಡುದಾಗ ಪಲ್ಲವಿ ಮಾತಿನಲ್ಲೂ ಅರ್ಥವಿದೆ.
ರವೀಶ್

ಪಲ್ಲವಿ ಎಸ್‌. said...

ಹರೀಶ್‌,

ನಾನು ವಿಮರ್ಶಕಳಲ್ಲ. ಹೀಗಾಗಿ, ಯಾರ ಬರಹಗಳನ್ನೂ ವಿಮರ್ಶೆಯ ದೃಷ್ಟಿ ಇಟ್ಟುಕೊಂಡು ಓದುವುದಿಲ್ಲ. ನಾನೊಬ್ಬಳು ಸಾಮಾನ್ಯ ಓದುಗಳು. ಒಂದು ಬರಹವನ್ನು ಅಥವಾ ಕೃತಿಯನ್ನು ಓದಿದಾಗ, ನನಗೆ ಏನನ್ನಿಸುತ್ತದೋ ಅದನ್ನು ಮಾತ್ರ ಹೇಳುತ್ತೇನೆ. ನಾನು ಯಾವುದೇ ಸಮೂಹವನ್ನಾಗಲಿ, ಗುಂಪನ್ನಾಗಲಿ, ಅಭಿರುಚಿಯ ತಂಡವನ್ನಾಗಲಿ ಪ್ರತಿನಿಧಿಸುತ್ತಿಲ್ಲ.

ಹೀಗಾಗಿ ವಿಮರ್ಶೆಯ ಪಾಠದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಾಗುವುದೂ ಬೇಡ. ನಾನು ಗಮನಿಸುತ್ತ ಬಂದಂತೆ, ಅಕ್ಷರ ಗುಂಪುಗಾರಿಕೆ ಎಂದಿಗಿಂತ ಹೆಚ್ಚು ಎದ್ದು ಕಾಣುತ್ತದೆ. ಯಾವುದೇ ಲೇಖಕ-ಲೇಖಕಿ ಇರಲಿ, ಅವರ ಬರವಣಿಗೆ ನಮ್ಮ ಕಣ್ಮುಂದಿದ್ದರೆ ಸಾಕು. ಒಂದು ವೇಳೆ ಈ ಗುಣವನ್ನು ಅಳವಡಿಸಿಕೊಂಡಿದ್ದೇ ಆದರೆ, ಬ್ಲಾಗ್‌ನಲ್ಲಿ, ಸಮೂಹತಾಣಗಳಲ್ಲಿ ಕಂಡು ಬರುವ ಅದೆಷ್ಟೋ ಉತ್ತಮ ಬರಹಗಳು ಕನಿಷ್ಠ ಪ್ರತಿಕ್ರಿಯೆಗಳಿಲ್ಲದೇ ಏಕೆ ಮೂಲೆಗುಂಪಾಗುತ್ತಿದ್ದವು. ಉತ್ತಮವಾದದ್ದನ್ನು ಗುರುತಿಸಿ ಆದರಿಸುವ ಸಹೃದಯತೆ ಏಕೆ ಕಂಡು ಬರುತ್ತಿಲ್ಲ?

ನನ್ನ ಪ್ರಕಾರ, ವಸ್ತುನಿಷ್ಠ ವಿಮರ್ಶೆ ಎಂದರೆ ಇದು.

- ಪಲ್ಲವಿ ಎಸ್‌.

ಹರೀಶ್ ಕೇರ said...

ಚೇತನಾ,
ವಿಮರ್ಶೆಯನ್ನು ನೀವು ಸ್ವೀಕರಿಸಿದ ರೀತಿ ನನಗೆ ತುಂಬಾ ಹಿಡಿಸಿತು. ಕೃತಿಯೊಂದಕ್ಕೆ ಸಹೃದಯ ನೆಲೆಯಲ್ಲಿ ಮಿಡಿಯುತ್ತಲೇ, ಅದರ ನ್ಯೂನತೆಗಳನ್ನು ಗ್ರಹಿಸುವುದು ನಮ್ಮ ಓದಿನ ರೀತಿಯಲ್ಲಿರಬೇಕು ಎಂಬುದನ್ನು ನೀವು ತಿಳಿದಿದ್ದೀರಿ.
ಚಕ್ರವರ್ತಿ,
ನಿಮ್ಮ ಪ್ರಶ್ನೆಗಳು ನನ್ನ ಉತ್ತರಗಳಿಂದ ಹುಟ್ಟಿಕೊಂಡಂತಿವೆ ! ಆದ್ದರಿಂದ ಇವುಗಳಿಗೆ ಬಹುಶಃ ಪ್ರತಿಕ್ರಿಯಿಸಬೇಕಾಗಿಲ್ಲ.
ರವೀಶ್,
‘ಭಾಮಿನಿ ಷಟ್ಪದಿ’ ವಿಮರ್ಶೆಗೆ ಅರ್ಹವೇ ಅಲ್ಲವೇ ಎಂಬುದು ಇಲ್ಲಿ ಚರ್ಚೆಗೆ ವಸ್ತುವಲ್ಲ. ಈ ವಿಚಾರವನ್ನು ಇಲ್ಲಿಗೇ ಕೈಬಿಡುವುದು ಒಳ್ಳೆಯದು.
ಪಲ್ಲವಿ,
‘ವಿಮರ್ಶೆಯ ಪ್ರಾಥಮಿಕ ಪಾಠ’ ಎಂಬುದನ್ನು ನಾನು ನೋಯಿಸಲು ಬರೆದದ್ದಲ್ಲ. ಇನ್ನು ಗುಂಪುಗಾರಿಕೆ- ಅಂತಸ್ಸತ್ವ ಇಲ್ಲದಿದ್ದರೆ ಯಾವ ಗುಂಪುಗಾರಿಕೆಯಿಂದಲೂ ಏನೂ ಆಗಲಾರದು.
ಇತರ ಬ್ಲಾಗುಗಳಲ್ಲಿ ಇರುವ ಉತ್ತಮ ಬರಹಗಳನ್ನು ಓದುಗರು ಗಮನಿಸದೆ ಇರುವುದಕ್ಕೆ ಕಾರಣ ಅವುಗಳ ಸಂಖ್ಯಾ ಬಾಹುಳ್ಯವೇ ಇದ್ದೀತು.
- ಹರೀಶ್ ಕೇರ