Friday, December 5, 2008

ಬೆಂಕಿಯಂಥ ನೆನಪು, ನೆನಪಿನ ಬೆಂಕಿ




ವಿಮರ್ಶೆಯ ಅಹಂಕಾರದಂತೆಯೇ ವಿಮರ್ಶೆಯ ಮೌನವೂ ಅಪಾಯಕಾರಿ. ಒಳ್ಳೆಯ ಕೃತಿಗಳಿಗೆ ಸಕಾಲದಲ್ಲಿ ಸೂಕ್ತ ವಿಮರ್ಶೆ, ಪ್ರಚಾರ ಸಿಗದೆ ಹೋದರೆ ಅವು ಪಡೆಯಬೇಕಾದ ಸ್ಥಾನಮಾನ ಪಡೆಯುವುದೇ ಇಲ್ಲ. ಕೆ.ಪಿ.ಸುರೇಶರ ‘ಬೆಂಕಿಯ ನೆನಪು’ ಇಂಥ ಒಂದು ಕೃತಿ. ಇದು ಪ್ರಕಟವಾಗಿ ಮೂರು ವರ್ಷಗಳಾಗಿವೆ.
ಇದೊಂದು ಅನುವಾದ. ಮೂಲಕೃತಿ ಲ್ಯಾಟಿನ್ ಅಮೆರಿಕಾದ ಉರುಗ್ವೇಯ ಎಡುವರ್ಡೊ ಗೆಲಿಯಾನೊ ಎಂಬವನದು. ಇಲ್ಲಿನ ಹೆಮಿಂಗ್ವೆ, ಮಾರ್ಕ್ವೆಜ್ ಮುಂತಾದ ಪ್ರಖರ ಪ್ರತಿಭೆಗಳ ಮುಂದೆ ಈತ ನಮಗೆ ಕಾಣುವುದೇ ಇಲ್ಲ. ಇದಕ್ಕೂ ‘ಸೆಲೆಕ್ಟಿವ್ ಕ್ರಿಟಿಸಿಸಂ’ ಒಂದು ಕಾರಣ ಇದ್ದೀತು.
ಈತ ಎಂಥ ಅದ್ಭುತ ಪ್ರತಿಭೆ ಎಂದರೆ, ಮೂರನೇ ಜಗತ್ತಿನ ಯಾವ ಲೇಖಕನೂ ಮಾಡದಿದ್ದ ಮಹಾನ್ ಕೆಲಸವೊಂದನ್ನು ಮಾಡಿದ ; ಅದೆಂದರೆ ತನ್ನ ಇಡೀ ಖಂಡದ ಚರಿತ್ರೆಯನ್ನು ಪುನಃ ರಚಿಸಿದ. ಇದು ಮಹಾಕಾವ್ಯಗಳನ್ನು ಬರೆಯುವುದಕ್ಕಿಂತಲೂ ಕಠಿಣವಾದ ಕೆಲಸ. ಯಾಕೆಂದರೆ ಕಾವ್ಯ ಬರೆಯುವುದಕ್ಕೆ ಮುಕ್ಕಾಲು ಪಾಲು ಕಲ್ಪನೆ ಸಾಕು ; ಚರಿತ್ರೆ ಬರೆಯುವುದಕ್ಕೆ ಅಥೆಂಟಿಸಿಟಿ ಬೇಕು.
ಇಷ್ಟರಿಂದ, ಗೆಲಿಯಾನೊ ಇತಿಹಾಸಕಾರನಷ್ಟೇ ಅಂತ ತೀರ್ಮಾನಿಸಿಬಿಟ್ಟೀರಿ ! ಇವನ ಕವಿ, ಕಥನಕಾರ, ಕಾದಂಬರಿಕಾರ, ಪ್ರಬಂಧಕಾರ ಕೂಡ. ಪುರಾಣ ಜಾನಪದಗಳಿಂದ ಕತೆಗಳನ್ನು ಹೆಕ್ಕಿ ತೆಗೆದು ಸುಸಂಬದ್ಧವಾಗಿ ಜೋಡಿಸುವ ಸಂಶೋಧನಕಾರ ಕೂಡ.
ಇವೆಲ್ಲವೂ ಸೇರಿ ಇವನ ‘ಮೆಮೊರೀಸ್ ಆಫ್ ಫೈರ್’ ಎಂಬ ಕೃತಿ ತ್ರಿವಳಿಯನ್ನು ರೂಪಿಸಿವೆ. ಇದರಲ್ಲಿ ಆತ ಲ್ಯಾಟಿನ್ ಅಮೆರಿಕದ ಪುರಾಣ, ಜಾನಪದ ಕತೆಗಳು ಹಾಗೂ ಇತಿಹಾಸ- ವರ್ತಮಾನದ ಘಟನೆ-ವಿವರಗಳನ್ನು ಕಾವ್ಯಾತ್ಮಕವಾಗಿ ದಾಖಲಿಸುತ್ತ ಹೋಗುತ್ತಾನೆ. ಆ ಮೂಲಕ, ಇಡೀ ಖಂಡದ ಪರ್‍ಯಾಯ ಚರಿತ್ರೆಯೊಂದನ್ನು ಕಟ್ಟುತ್ತಾನೆ.
ಮುಂದಿನ ಒಂದೆರಡು ಕಂತುಗಳಲ್ಲಿ ಈ ಕೃತಿಯ ಬಗ್ಗೆ ವಿಸ್ತೃತ ಅವಲೋಕನವನ್ನು ನೀಡುತ್ತೇನೆ. ಅದಕ್ಕೆ ಮುನ್ನ, ಕೃತಿಯ ಮೊದಲ ಭಾಗದಲ್ಲಿ ಬರುವ ಕೆಲವು ಜನಪದೀಯ ಕಥನಗಳ ತುಣುಕುಗಳನ್ನು ಹಾಗೇ ನಿಮ್ಮ ಮುಂದಿಡುತ್ತೇನೆ.
-೧-
ಪ್ರಣಯ
ಅಮೆಜಾನಿನ ಕಾಡಲ್ಲಿ ಮೊದಲ ಹೆಣ್ಣನ್ನು ಮೊದಲ ಗಂಡು ನೋಡಿದ. ಇಬ್ಬರೂ ಪರಸ್ಪರ ಕುತೂಹಲದಿಂದ ವೀಕ್ಷಿಸಿದರು. ತಮ್ಮ ಕಾಲುಗಳ ಮಧ್ಯೆ ಇರುವುದು ವಿಚಿತ್ರವಾಗಿ ಕಂಡಿತು.
"ನಿನ್ನದನ್ನು ಕತ್ತರಿಸಿ ತೆಗೆದದ್ದಾ ?" ಗಂಡು ಕೇಳಿದ.
"ಇಲ್ಲ ಮೊದಲಿಂದಲೂ ಹಾಗೇ..." ಹೆಣ್ಣು ಉತ್ತರಿಸಿದಳು. ಅವನು ಅವಳನ್ನು ಕೂಲಂಕುಷವಾಗಿ ಪರೀಕ್ಷಿಸಿ ತಲೆ ಕೆರೆದುಕೊಂಡ. ಅಲ್ಲೊಂದು ಬಿರಿದ ಗಾಯವಿತ್ತು.
"ಹೂ, ನೋಡು. ಬಿರಿಯೋ ಹಣ್ಣುಗಳನ್ನು ತಿಂದರೆ ಹೀಗಾಗುತ್ತೋ ಏನೋ. ಅಂಥ ಹಣ್ಣುಗಳನ್ನು ತಿನ್ನಬೇಡ. ಈಗ ನೀನು ವಿಶ್ರಾಂತಿ ತೆಗೆದುಕೋ. ಪಥ್ಯ ಮಾಡು. ನಾನು ಔಷ ನೀಡಿ ಗುಣಪಡಿಸ್ತೀನಿ" ಎಂದು ಸಮಾಧಾನಿಸಿದ. ಹೆಣ್ಣು ತಲೆಯಾಡಿಸಿ ಮಂಚದಲ್ಲಿ ಮಲಗಿದಳು. ಗಂಡು ತಾಳ್ಮೆಯಿಂದ, ಬೇರುನಾರು ಅರೆದು ಲೇಪ ಹಚ್ಚಿ ಕಷಾಯ ಕುಡಿಸಿ ಶುಶ್ರೂಷೆ ಮಾಡತೊಡಗಿದ.
ಎಷ್ಟು ದಿನ ಕಳೆದರೂ ಏನೂ ಫಲ ಕಾಣಲಿಲ್ಲ. ಅವಳಿಗೋ ಪಥ್ಯದಿಂದಾಗಿ ಹಣ್ಣು ಹಂಪಲು ನೆನಪಾಗಿ ಬಾಯಲ್ಲಿ ನೀರೂರುತ್ತಿತ್ತು. ಆದರೂ ಗಂಡಿನ ಶ್ರದ್ಧೆ ಕಂಡು ಸುಮ್ಮನಿದ್ದಳು.
ಒಂದು ದಿನ ಆತ ಏದುಸಿರು ಬಿಡುತ್ತಾ ತೊರೆದಾಟಿ ಓಡೋಡಿ ಬಂದು, ‘ನಂಗೊತ್ತಾಯ್ತು, ಗುಣಪಡ್ಸೋದು ಹೇಗೆ ಅಂತ ನಂಗೊತ್ತಾಯ್ತು’ ಎಂದು ಉದ್ವೇಗದಲ್ಲಿ ಕಿರುಚಿದ. ಆಗಷ್ಟೇ ಗಂಡುಕೋತಿ ಹೆಣ್ಣುಕೋತಿಯನ್ನು ಗುಣಪಡಿಸುತ್ತಿರುವುದನ್ನು ಆತ ನೋಡಿದ್ದ.
"ಹೇಗೆ ಗೊತ್ತಾ... ಹೀಗೆ" ಎಂದು ಆತ ಹೆಣ್ಣಿನ ಬಳಿ ಸಾರಿದ. ದೀರ್ಘ ಅಪ್ಪುಗೆ ಕೊನೆಗೊಂಡಾಗ ಗಾಳಿ ತುಂಬಾ ಹೂಗಂಧ. ದೇಹಗಳೆರಡೂ ಹೊಸ ಹೊಳಪಲ್ಲಿ ಥಳಥಳಿಸುತ್ತಿತ್ತು. ಎಲ್ಲ ಅಷ್ಟು ಸುಂದರ. ಸೂರ್‍ಯ ದೇವಾದೇವತೆಗಳಿಗೆಲ್ಲಾ ಇದನ್ನು ಕಂಡು ಸತ್ತೇ ಹೋಗುವಷ್ಟು ಮುಜುಗರವಾಗಿತ್ತು.

9 comments:

ಆಲಾಪಿನಿ said...

ಇಂಟ್ರೆಸ್ಟಿಂಗ್ ಹರೀಶ್. ನನಗೂ ಈ ಬುಕ್ ಬೇಕಿತ್ತು. ಸಿಗತ್ತಾ?

Anonymous said...

ಅಹಹಹಾ, ಚೆನ್ನಾಗಿದೆ ಬರಹ, ನೀವು ಮಾತಾಡೋದಕ್ಕಿಂತಲೂ ಮೌನವಾಗಿ ಕೂತು ಬರೆಯೋದೇ ಓದಕ್ಕೆ ಚೆಂದ. ಜಾಸ್ತಿ ಗ್ಯಾಪ್‌ ಕೊಡದೇ ಹೀಗೇ ಬರೆಯುತ್ತಿರಿ.
ಪ್ರೀತಿಯಿಂದ
ಅಶ್ವಿನಿ!!

Anonymous said...

ಶ್ರೀದೇವಿ,
ಅಭಿನವ ಪ್ರಕಾಶನ’ ಪ್ರಕಟಿಸಿದೆ. ಅಂಕಿತದಲ್ಲಿ ಸಿಗಬಹುದು. ಸಕತ್ತಾಗಿದೆ. ತುಂಬ ಇಷ್ಟಪಡ್ತೀರಿ.
ಅಶ್ವಿನಿ,
ಇದು ಕಾಂಪ್ಲಿಮೆಂಟಲ್ಲ, ಕಂಪ್ಲೇಂಟು !
- ಹರೀಶ್ ಕೇರ

ದಿನೇಶ್ ಕುಮಾರ್ ಎಸ್.ಸಿ. said...

ಹರೀಶ್,
ಚೆನ್ನಾಗಿ ಬರೆದಿದ್ದೀರಿ. ನೀವು ಹೇಳಿದ ಹಾಗೆ ಈ ಕೃತಿಯ ಕುರಿತು ಸಾಕಷ್ಟು ಚರ್ಚೆ ಆಗಬೇಕಿತ್ತು.
ನಾನು ನನ್ನ ಬಳಿ ಇರುವ ಈ ಕೃತಿಯನ್ನು ಕನಿಷ್ಟ ಹತ್ತು ಮಂದಿಗೆ ಕೊಟ್ಟು ಓದಿಸಿದ್ದೇನೆ.

Anonymous said...

ಕಳ್ಳನ ಮನಸ್ಸು ಹುಳ್ಳಹುಳ್ಳಗಂತೆ. ನಾನಂತೂ ಒಳ್ಳೆ ಮನಸ್ಸಿಂದ ಕಮೆಂಟ್‌ ಮಾಡಿದ್ದು. ನೀವು ಹಾಗೆ ತಿಳ್ಕೊಂಡ್ರೆ ನಾನೇನು ಮಾಡ್ಲಿ? ಎನಿವೇ ಅದು ಹೇಗೆ ನಿಮ್ಗೆ ಕಂಪ್ಲೇಂಟ್‌ ಥರಾ ಅನಿಸ್ತು?

ಸಂದೀಪ್ ಕಾಮತ್ said...

ನೀವು ಮಾತಾಡೋದಕ್ಕಿಂತಲೂ ಮೌನವಾಗಿ ಕೂತು "ಬರೆಯೋದೇ ಓದಕ್ಕೆ ಚೆಂದ"

Not agreed:(

ಮೇ ಫ್ಲವರ್ ನಲ್ಲಿ ಹರೀಶ್ ಮಾತಾಡೋದು ನೋಡಿದ್ದೀನಿ(oops ಕೇಳಿದ್ದೀನಿ!).ಸಿಂಪ್ಲಿ ಸುಪರ್ಬ್!

Pailoor said...

ಹ ಹಾ .... ಈ ವಿಷಯ ಗೊತ್ತೇ ಇರ್ಲಿಲ್ಲ ...... ಅದ್ಬುತ ವಿಮರ್ಶೆ ......

ಹರೀಶ್ ಕೇರ said...

Dinesh & Pramod,
Thank u very much !
- Harish Kera

Anonymous said...

kadina mauna.., benkiya cheethkarakkintha ghora !antha maunadalli ee nenapu 'ummalisiddu' namma saubhagya. -dinesh kukkujadka