೭೮ನೇ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬೀಳುತ್ತಿದೆ. ಇದನ್ನು ನಡೆಸಲು ಕೋಟ್ಯಂತರ ರೂಪಾಯಿ ಅನುದಾನ ನೀಡಲಾಗಿದೆ. ಹೀಗಾಗಿ, ನಾನು ಕಂದಾಯ ಕಟ್ಟಿರುವ ಕಾಸು ಕೂಡ ಈ ಸಮ್ಮೇಳನಕ್ಕೆ ವೆಚ್ಚವಾಗಿರಬಹುದಾದ್ದರಿಂದ, ಈ ಸಮ್ಮೇಳನದ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಲು, ಕೆಲ ತಕರಾರುಗಳನ್ನು ಎತ್ತಲು, ಒಬ್ಬ ಕನ್ನಡ ಪ್ರೇಮಿಗೆ, ಕನ್ನಡ ಪ್ರಜೆಗೆ ಅಧಿಕಾರವಿದೆ ಎಂಬ ನಂಬಿಕೆ ನನ್ನದು.
ನೆರೆ ನುಂಗಿದ ಉತ್ತರ ಕರ್ನಾಟಕದ ಬಡಜನತೆಗೆ ಸೂರು ನಿರ್ಮಿಸಿಕೊಡುವ ಸರಕಾರದ ಭರವಸೆ ಇನ್ನೂ ಈಡೇರದೆ ಇರುವಾಗ, ಅದೇ ಪ್ರದೇಶದಲ್ಲೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕನ್ನಡಕ್ಕೊಂದು ಸಮ್ಮೇಳನ ಮಾಡಿದ್ದು ಸಮಂಜಸವೆ ಎಂಬ ಪ್ರಶ್ನೆ ಹಳೇ ಕಮ್ಯುನಿಸ್ಟನೊಬ್ಬನ ಪೇಲವ ವರಸೆಯಂತೆ ಕಾಣಿಸಬಹುದು. ಆದರೆ ಇಂಥ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿ ಕಿರಿಕಿರಿ ಹುಟ್ಟಿಸದೆ ಇದ್ದರೆ ಇಲ್ಲಿ ಯಾವ ಶಾಸಕಾಂಗ, ಕಾರ್‍ಯಾಂಗ, ಹಾಗೂ ಜನರ ಮನಸ್ಸಿನ ಅಂಗಾಂಗವೂ ಚಲಿಸುವುದಿಲ್ಲ. ಇಂಥ ಪ್ರಶ್ನೆಗಳನ್ನು ಸಾಹಿತ್ಯ ಕೇಳಬೇಕು; ಇಲ್ಲದಿದ್ದರೆ ಅದರ ಮೌನ ಪ್ರಶ್ನಾರ್ಹ.
ಸಾಹಿತ್ಯ ಪ್ರಭುತ್ವವನ್ನು ಪ್ರಶ್ನಿಸಬೇಕು; ಆದರೆ ನಮ್ಮ ಇಂದಿನ ಸಾಹಿತ್ಯ ಪ್ರಭುತ್ವದ ಜತೆಗೆ ‘ಕಾಂಪ್ರಮೈಸಿಂಗ್ ಪೊಸಿಷನ್’ನಲ್ಲಿ ಇರುವಂತಿದೆ. ಕನ್ನಡ ಶಾಲೆಗಳನ್ನು ಸರಕಾರ ಸಾಯಿಸುತ್ತಿದೆ. ಅದೇ ಸರಕಾರ ಕನ್ನಡದ ಹೆಸರಿನ ಅದ್ಧೂರಿ ಸಮ್ಮೇಳನವನ್ನು ಉದ್ಘಾಟಿಸಲು, ಸಮಾರೋಪಿಸಲು ಬಾಜಾಬಜಂತ್ರಿಯೊಂದಿಗೆ ಆಗಮಿಸುತ್ತದೆ. ಇಂಗ್ಲಿಷನ್ನು ಹೊತ್ತು ಮೆರೆಸುತ್ತ ಕನ್ನಡದ ಚಟ್ಟಕ್ಕೆ ಹೆಗಲು ಕೊಡುತ್ತಿರುವ ನಗರವಾಸಿ ಮಧ್ಯಮವರ್ಗ, ತನ್ನ ಎಂದಿನ ಜಡತೆಯೊಂದಿಗೆ ಆಕಳಿಸುತ್ತ ಬಂದು ಸಮ್ಮೇಳನದ ಹಾಸ್ಯಗೋಷ್ಠಿಗಳಿಗೆ ತುಂಬಿ ತುಳುಕಿ ಉರುಳಾಡಿ ನಕ್ಕು ವಾಪಸು ಹೋಗುತ್ತದೆ. ಸೆಮಿನಾರ್ ಜೀವಿಗಳಿಗೆ ಈ ಸಮ್ಮೇಳನದ ವಿಚಾರಗೋಷ್ಠಿಗಳು ಅನ್ನ, ಆಹಾರ, ತೆವಲು; ಇಂಗ್ಲಿಷ್ ಜನಪ್ರಿಯ ಕಾದಂಬರಿಗಳ ಬೆನ್ನು ಬಿದ್ದ ನವಮಧ್ಯಮ ವರ್ಗದವರಿಗೆ ಇವು ತಲೆಯ ಮೇಲೆ ಹಾರುವ ಗಾಳಿ; ಕನ್ನಡದ ಕಾಳಜಿ ಅಂದರೆ ಅಪಾನವಾಯು; ಇವರ ಪಾಲಿಗೆ ಘನವಾದ ಪುಸ್ತಕಗಳೆಂದರೆ ವ್ಯಕ್ತಿತ್ವ ವಿಕಸನ, ಕದ್ದ ಸರಕುಗಳು. ನಮ್ಮ ಸಮ್ಮೇಳನದ ಬಗ್ಗೆ ಸಿನಿಕತನವಿಲ್ಲದೆ ಯೋಚಿಸುವುದೇ ನಮಗೆ ಅಸಾಧ್ಯವಾಗುತ್ತಿದೆಯೆ ?
ಕಳೆದ ವರ್ಷದ ಸಾಹಿತ್ಯ ಸಮ್ಮೇಳನದಲ್ಲೊಂದು ಗೋಷ್ಠಿ: ‘ಕನ್ನಡ ಅಂದು-ಇಂದು-ಮುಂದು’ ‘ವರ್ತಮಾನದ ಸವಾಲುಗಳು’... ಈ ವರ್ಷದಲ್ಲೂ ಅದೇ ಗೋಷ್ಠಿ. ಮುಖಗಳಷ್ಟೇ ಬದಲಾಗಿವೆ. ಕಳೆದ ಬಾರಿ ಕಂಡ ಮುಖಗಳೇ ಕೆಲವು ಇರುವಂತಿದೆ. ಅರೆ, ಏನಾಶ್ಚರ್‍ಯ, ಮಾತುಗಳೂ ಅವವೇ ಹೊಮ್ಮತ್ತಿದೆಯಲ್ಲ ! ನಾವು ಭಿನ್ನವಾಗಿ ಯೋಚಿಸುವುದನ್ನೇ ಮರೆತಿದ್ದೇವೆಯೆ ? ನಮ್ಮ ಯೋಚನೆ ಇನ್ನೊಬ್ಬರ ಯಥಾಪ್ರತಿ ಆಗುತ್ತಿದೆಯೆ ? ಕನ್ನಡಕ್ಕೆ ಸವಾಲುಗಳು ಮುಗಿಯುವುದೇ ಇಲ್ಲವೆ ! ಅಥವಾ ಈ ಭಾಷಣಗಳೇ ಕನ್ನಡದ ದೊಡ್ಡ ಸವಾಲುಗಳೋ ?
ಕನ್ನಡಿಗರನ್ನು ಭಾವನಾತ್ಮಕ ಮಟ್ಟದಲ್ಲಿ ಒಂದುಗೂಡಿಸುವ ಸಂಸ್ಥೆಗಳ ಕೊರತೆ ಇದೆ ಕನ್ನಡದಲ್ಲಿ. ಈ ಕೊರತೆಯನ್ನು ಕಸಾಪ ನೀಗಬಹುದಿತ್ತು. ಸಮ್ಮೇಳನವನ್ನು ಹೀಗೆ ಕನ್ನಡಿಗರನ್ನು ಒಂದುಗೂಡಿಸುವ ಸಮ್ಮಿಲನವಾಗಿ ರೂಪಿಸಬಹುದಿತ್ತು. ಆದರೆ ಸಮ್ಮೇಳನ ಬಂದಿತೆಂದರೆ ಸಾಕು, ಎಲ್ಲ ಕಡೆಗಳಿಂದ ಹಕ್ಕೊತ್ತಾಯ ಶುರುವಾಗುತ್ತದೆ- ‘ನಮಗೆ ಅನ್ಯಾಯವಾಗಿದೆ. ಪ್ರಾತಿನಿಧ್ಯ ಬೇಕು’. ಕಸಾಪ ಪ್ರಜಾಸತ್ತಾತ್ಮಕ ಸಂಸ್ಥೆಯಾದುದರಿಂದ ಈ ಕೂಗು ಸಹಜ ಎನ್ನೋಣ. ಆದರೆ ಇಂಥ ಬಿರುಕು ಮೂಡದಂತೆ ನೋಡಿಕೊಳ್ಳುವುದು ಸಾಧ್ಯವಿಲ್ಲವೆ ?
ಇನ್ನು ಒಳಗೊಳ್ಳುವಿಕೆಯ ವಿಷಯ. ಕನ್ನಡವೆಂದರೆ ಕುಣಿದಾಡುವ ಎದೆಯ ಯುವಜನ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಅವರ್‍ಯಾರೂ ಯಾಕೆ ಸಮ್ಮೇಳನದಲ್ಲಿ ಕಾಣಿಸುತ್ತಿಲ್ಲ ? ಒಂದು ವೇಳೆ ಬಂದರೂ, ಪುಸ್ತಕ ಪ್ರದರ್ಶನಕ್ಕಷ್ಟೇ ಭೇಟಿ ನೀಡಿ ಭೈರಪ್ಪನವರ ಪುಸ್ತಕಗಳನ್ನಷ್ಟೇ ಕೊಂಡು ಯಾಕೆ ವಾಪಸ್ಸಾಗುತ್ತಾರೆ ? ಸಮ್ಮೇಳನಾಧ್ಯಕ್ಷರ ಬರಹಗಳನ್ನು ಯಾಕೆ ಹೆಚ್ಚಿನ ಹೊಸ ತಲೆಮಾರಿನವರು ಓದಿರುವುದಿಲ್ಲ ? ಹೊಸ ತಲೆಮಾರಿನ ಕವಿ-ಸಾಹಿತಿಗಳು, ಪ್ರಗತಿಪರ ಬರಹಗಾರರು ಹಾಗೂ ಐಟಿ ಬಿಟಿ ಜಮಾನದ ಓದುಗರ ನಡುವೆ ಭರಿಸಲಾಗದ ಕಂದಕವೊಂದು ಮೂಡಿರುವಂತೆ ಕಾಣುತ್ತಿದೆಯಲ್ಲ. ಇದನ್ನು ಸರಿಪಡಿಸುವ ಬಗೆಯೆಂತು ? ಇವರಿಗೆ ಸಂಬಂಧಿಸಿದ ಜ್ವಲಂತ ವಿಷಯವೊಂದನ್ನು ಸಮ್ಮೇಳನದ ಮುನ್ನೆಲೆಯಲ್ಲಿಟ್ಟರೆ ಭವಿಷ್ಯದ ಕನ್ನಡಪ್ರೇಮಿಗಳನ್ನು ಕಾಪಾಡಿಕೊಳ್ಳಬಹುದು ಎಂಬ ಸಾಮಾನ್ಯ ಜ್ಞಾನ ಯಾರಿಗೂ ಹೊಳೆದೇ ಇಲ್ಲವೆ ?
ಬಿರುಕುಗಳು ಎಲ್ಲ ಕಡೆಯಲ್ಲಿವೆ: ಬಲಪಂಥೀಯ ಲೇಖಕರು- ಎಡಪಂಥೀಯ ಲೇಖಕರು; ಜನಪ್ರಿಯ ಬರಹಗಾರರು- ಗಂಭೀರ ಸಾಹಿತಿಗಳು; ಕವಿಗಳು- ವಿಮರ್ಶಕರು; ಪ್ರಶಸ್ತಿ ಸಿಕ್ಕವರು- ಸಿಗದವರು; ಹಳ್ಳಿಗಾಡಿನ ಸಾಹಿತಿಗಳು- ನಗರವಾಸಿ ಲೇಖಕರು; ಮೈಸೂರು ಕನ್ನಡಿಗರು- ಹೈದರಾಬಾದ್ ಕನ್ನಡಿಗರು; ಮೇಸ್ಟ್ರುಗಳು- ಇಂಜಿನಿಯರ್‌ಗಳು; ದಲಿತರು- ಬ್ರಾಹ್ಮಣರು... ಬಿರುಕುಗಳನ್ನು ಬೆಸೆಯುವ ಕೆಲಸವನ್ನು ಸಾಹಿತ್ಯ ಮಾಡಬೇಕೆನ್ನುತ್ತಾರೆ. ಆದರೆ ನಮ್ಮ ಬಿರುಕುಗಳನ್ನು ಸಾಹಿತ್ಯ ಹೆಚ್ಚಿಸುತ್ತಿರುವ ವ್ಯಂಗ್ಯವನ್ನು ನಾವು ಗಮನಿಸುತ್ತಿದ್ದೇವೆಯೆ ? ಸಮ್ಮೇಳನ ಇದಕ್ಕೇನಾದರೂ ಮದ್ದರೆಯಿತೆ ?
ಸಾಹಿತ್ಯ ಜನಜೀವನದ ಪ್ರತಿಬಿಂಬ- ಗತಿಬಿಂಬ ಎನ್ನುತ್ತಾರೆ. ಆದರೆ ಇದು ಸುಳ್ಳೆನ್ನುವ ವಿಲಕ್ಷಣ ಮಟ್ಟಕ್ಕೆ ಇಂಗ್ಲಿಷ್ ಸಾಹಿತ್ಯ ಹೋಗಿದೆ. ಅಲ್ಲೇನಿದ್ದರೂ ಮಾರುಕಟ್ಟೆ ಕನ್ನಡಿಗಳೇ ಪ್ರಧಾನ. ಕನ್ನಡ ಇನ್ನೂ ಹಾಗಾಗಿಲ್ಲ ಎಂದು ಸಂತೋಷಿಸುವಂತಿಲ್ಲ. ಬೆಂಗಳೂರಿಗೆ ಬಂದುದು ಬೆಳವಲಕ್ಕೆ ಬಾರದೆ ಇರುತ್ತದೆಯೆ ? ಆದರೆ ಬೆಳವಲದಲ್ಲಿ ನಡೆಯುತ್ತಿರುವುದು ಬೆಂಗಳೂರಿಗೆ ತಲುಪುತ್ತಲೇ ಇಲ್ಲ. ಕರಾವಳಿಯ ನಾಗಾರ್ಜುನದ ಹೆಡೆಯಡಿ ನಲುಗಿದವರು, ಗದಗದ ಪೋಸ್ಕೊದಡಿ ನಲುಗಿದವರು, ಕೈಗಾದ ಹೋಮಧೂಮದಲ್ಲಿ ಲೀನವಾದವರು, ಗುಲ್ಬರ್ಗದ ಬೆಂಕಿಯಲ್ಲಿ ಬೆಂದವರು, ಬಳ್ಳಾರಿಯ ಕೆಂಪುಧೂಳಿಯಲ್ಲಿ ಮಿಂದವರು... ಸಮ್ಮೇಳನದ ವೇದಿಕೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲವಲ್ಲ ? ಸಾಹಿತ್ಯ ಸಮ್ಮೇಳನವೆಂಬುದು ಎಂದು ಕನ್ನಡ ಬದುಕಿನ ಸಮ್ಮೇಳನವಾಗುವುದು ? ಕನ್ನಡ ಸಂಸ್ಕೃತಿಯ ಸಮ್ಮೇಳನವಾಗವುದೆಂದು ?
ಪ್ರಶ್ನೆಗಳು, ಬರೀ ಪ್ರಶ್ನೆಗಳು.
No comments:
Post a Comment