ಪ್ರಿಯ ಗುರುಪ್ರಸಾದ್,
ನಿಮ್ಮ ‘ಬಿಳಿಯ ಚಾದರ’ ಓದಿದೆ. ‘ಚೆನ್ನಾಗಿದೆ’ ಎಂಬ ಲೋಕಾಭಿರಾಮದ ಮಾತಿಗೆ ಹೊರತುಪಡಿಸಿ, ಮೊದಲನೇ ಓದಿಗೆ ದಕ್ಕಿದ ಕೆಲವು ಟಿಪ್ಪಣಿಗಳು ಇಲ್ಲಿ.
ಮೊದಲು ಇದು ಅಮೆರಿಕದಲ್ಲಿರುವ ಯುವ ಭಾರತೀಯರ ಬದುಕಿನ ಕಥನ ಅನಿಸಿತು. ಅದು ಅಷ್ಟೇ ಅಲ್ಲ, ಅದರಾಚೆಗೂ ಚಾಚಿದೆ ಅನಿಸಿದ್ದು ಡ್ರಗ್ ಲಾಬಿ, ಸಾಫ್ಟ್‌ವೇರ್ ವ್ಯವಸ್ಥೆಯ ಒಳಸುಳಿಗಳು ಅವರ ಬದುಕಿನೊಳಗೆ ಹೆಣೆದುಕೊಂಡು ಬಂದಾಗ. ಹಾಗೇ ಇದು ಬೇರು ಕಳೆದುಕೊಂಡವರ ಕಥನವೂ ಹೌದು. ಇವರಿಗೆ ಬೇರು ಮಾತ್ರವಲ್ಲ, ಭವಿಷ್ಯವೂ ಇಲ್ಲ ಅನಿಸುವುದು ರಶ್ಮಿಯ ಸಾವಿನೊಂದಿಗೆ. ಇದು ಶ್ರೀಧರ, ನಾಗೇಶರ ವಿಚಾರದಲ್ಲಿ ಕೂಡ ನಿಜ. ಎಲ್ಲ ಭಾರತೀಯರೂ ‘ಗೋಕುಲ ನಿರ್ಗಮನ’ ಮಾಡುತ್ತಿರುವುದು ಇಂಥ ಬದುಕಿಗಾಗಿ ಹಂಬಲಿಸಿಯೆ ?
ಮುಖ್ಯವಾಗಿ, ಇದು ನನಗೆ ಇಷ್ಟವಾಗಿರುವುದು ರಶ್ಮಿ ಎಂಬ ಪಾತ್ರದ ಮೂಲಕ. ಆಕೆ ಆಧುನಿಕ ಬದುಕಿನ ಶಕ್ತಿಶಾಲಿ ರೂಪಕ. ಆಕೆ ಇಲ್ಲಿರುವ ಎಲ್ಲರಿಗಿಂತ ಭಿನ್ನ. ಇದನ್ನು ಓದಿದಾಗ ನನಗೆ ಶಾಂತಿನಾಥರ ‘ಕ್ಷಿತಿಜ’ದ ಮಂದಾಕಿನಿ ನೆನಪಾದದ್ದರಲ್ಲಿ ಅಸಹಜತೆಯೇನಿಲ್ಲ. ಶ್ರೀಧರ, ನಾಗೇಶ ಮುಂತಾದವರು ತಮಗಿನ್ನೂ ಅಪರಿಚಿತವಾದ ಅಮೆರಿಕನ್ ಪ್ರಜ್ಞೆಯೆಡೆಗೆ ನಡೆಯಲು ಸಂಕೋಚದಿಂದ ಮೈ ಹಿಡಿ ಮಾಡಿಕೊಳ್ಳುತ್ತಿರುವಾಗ ಈಕೆ ದುರಂತದ ಅರಿವಿದ್ದೂ ಹಿಂಜರಿಯದೆ ನುಗ್ಗಿಬಿಡುತ್ತಾಳೆ.
ಇದು ಪ್ರಸ್ತುತದ ಒಂದು ಕಾಣ್ಕೆಯೂ ಹೌದು. ಏನಿದ್ದರೂ ಹೊಸ ಸಂಸ್ಕೃತಿಗಳು ನಮ್ಮನ್ನು ಗಾಢವಾಗಿ ಒಳಗೊಳ್ಳುವುದು ಅವು ನಮ್ಮ ಹೆಣ್ಣು ಮಕ್ಕಳನ್ನು ಆವರಿಸಿದಾಗಲೇ. ಆಗಲೇ ಎಲ್ಲವೂ ಬದಲಾಗುವುದು. ಇದು ಭಾರತೀಯ ಸ್ತ್ರೀ ಮಾಡಿಕೊಳ್ಳುತ್ತಿರುವ ಹೊಸ ಆಯ್ಕೆಗಳ ರೂಪಕದ ಹಾಗಿದೆ. ಕಾದಂಬರಿಯ ನಿಜವಾದ ಯಶಸ್ಸು ಇರುವುದು ರಶ್ಮಿಯ ಚಿತ್ರಣದಲ್ಲಿಯೇ. ರಶ್ಮಿಯ ಆಕಸ್ಮಿಕ ಅಂತ್ಯವೇ ಇಲ್ಲಿನ ದುರಂತದ ಸ್ವರೂಪದ ಅರಿವು ಮೂಡಿಸುವುದರಿಂದ, ಅಂತ್ಯ ಸಹಜವಾಗಿಲ್ಲ ಎಂಬ ಅನಂತಮೂರ್ತಿಯವರ ಟೀಕೆಯನ್ನು ನಾನು ಒಪ್ಪಲಾರೆ.
ಮತ್ತು ನಿಮ್ಮ ಕಾದಂಬರಿ ಎನ್ನಾರೈಗಳ ಬಗ್ಗೆ ಇದುವರೆಗೆ ಇರುವ ಸಂಕಥನಗಳನ್ನೇನೂ ಬದಲಾಯಿಸುವುದಿಲ್ಲ. ಅದೇ ಅನಾಥಪ್ರಜ್ಞೆ, ಅದೇ ಬೇರು ಕಳೆದುಕೊಂಡ ಜನ, ಮನುಷ್ಯನ ಬದುಕನ್ನು ಆತನಿಗರಿವಿಲ್ಲದೆ ನಿಯಂತ್ರಿಸುವ ಬೇರೆಬೇರೆ ಲಾಬಿಗಳು... ಇವನ್ನೆಲ್ಲ ಈ ಮೊದಲು ಎಲ್ಲಿಯೋ ಓದಿದಂತಿದೆ ಎಂಬಂತೆ. ಆದರೆ, ವಾಸ್ತವವೇ ಹಾಗಿದ್ದಾಗ ನೀವಾದರೂ ಬೇರೆಯ ಚಿತ್ರಣವನ್ನು ಎಲ್ಲಿಂದ ತರುವುದು ಅಲ್ಲವೆ ?
ಆಮೇಲೆ ನೀವು ಮಾಡಿರುವ ಇಂಗ್ಲಿಷ್ ಪದಗಳ ಕನ್ನಡೀಕರಣದ ಪ್ರಯತ್ನ ಅಂಥ ಮಹತ್ವದ್ದು ಅಂತ ನನಗೆ ಅನಿಸುವುದಿಲ್ಲ. ಉದಾ: ಲ್ಯಾಪ್‌ಟಾಪ್‌ಗೆ ‘ತೊಡೆಯ ಮೇಲಿಗ’ಎಂಬ ರೂಪ ಕಿರಿಕಿರಿಯನ್ನಷ್ಟೇ ಉಂಟುಮಾಡಬಲ್ಲುದು. ‘ಸ್ವಯಂವರ ಲೋಕ’ ನಾಟಕದಲ್ಲಿ ಕೆ.ವಿ.ಅಕ್ಷರ ಇದೇ ಲ್ಯಾಪ್‌ಟಾಪ್‌ಗೆ ‘ತೊಡೆಗಣಕ’ ಎಂಬ ರೂಪ ನೀಡಿದ್ದಾರೆ. ಯಾವುದು ಸಹ್ಯ ಅನಿಸುತ್ತದೆ ?
- ಪ್ರೀತಿಯಿಂದ
ಹರೀಶ್ ಕೇರ,
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
5 months ago
No comments:
Post a Comment