ಅವರ ಮನೆ ಶಿವಮೊಗ್ಗ ಹಾಗೂ ಸಾಗರ ನಡುವಿನ ಹೆದ್ದಾರಿಯಲ್ಲಿ ಸಿಗುವ ಆನಂದಪುರ ಎಂಬ ಊರಿನ ಬಳಿ. ಬಸ್ಸಿಳಿದು ಹತ್ತೆಂಟು ಕಿಲೋಮೀಟರು ಕ್ರಮಿಸಿದರೆ ನರಸೀಪುರ ಎಂಬ ಹಳ್ಳಿ. ಹಳ್ಳಿಯ ಒಂದು ಮೂಲೆಯಲ್ಲಿ ಅಡಕೆ ತೋಟ ನೋಡಿಕೊಂಡು ಎಲ್ಲ ಹವ್ಯಕರಂತೆ ತಣ್ಣಗಿರುವ ಭಟ್ಟರು ಗುರುವಾರ ಮತ್ತು ಭಾನುವಾರ ಸಿಕ್ಕಾಪಟ್ಟೆ ಬಿಜಿಯಾಗಿಬಿಡುತ್ತಾರೆ. ಅದು ಅವರು ನಾಟಿ ಔಷಧ ಕೊಡುವ ದಿನ.
ಆನಂದಪುರದಲ್ಲಿ ಬೆಳಗ್ಗೆ ಆರು ಗಂಟೆಗೆ ಬಸ್ಸಿನಿಂದ ಇಳಿದು ನೋಡಿದರೆ ನನ್ನ ನಿರೀಕ್ಷೆಯಂತೆ ಅದು ಕುಗ್ರಾಮ ಆಗಿರಲಿಲ್ಲ. ರಿಕ್ಷಾಗಳು ಭಟ್ಟರ ಮನೆಗೆ ಒಂದರ ಹಿಂದೊಂದು ಸಾಲುಗಟ್ಟಿ ಹೊರಟಿದ್ದವು. ಮಲೆನಾಡಿನ ಚಳಿ ಜರ್ಕಿನ್ ಹಾಕಿದ್ದರೂ ಗದಗುಟ್ಟಿಸುತ್ತಿತ್ತು. ಆಗಲೇ ತುಂಬಿದ್ದ ರಿಕ್ಷಾದಲ್ಲಿ ನಾನು ಏರಿದ ನಂತರವೂ ಆತ ಹತ್ತು ಜನರನ್ನು ತುಂಬಿಸಿದ.
ಅಲ್ಲಿ ನಾನು ತೆರಳಲು ಕಾರಣ ನನ್ನ ಅಮ್ಮನಿಗೆ ಅಡರಿಕೊಂಡ ಒಂದು ಕಾಯಿಲೆ. ಈ ಕಾಯಿಲೆಗೆ ಬೆಂಗಳೂರಿನ ಯಾವ ವೈದ್ಯರ ಬಳಿಯೂ ಯಾವ ಮದ್ದೂ ಇರಲಿಲ್ಲ ; ಬೆಂಗಳೂರು ಎಂದೇನು, ವಿಶ್ವದ ಯಾವ ಡಾಕ್ಟರನೂ ಇದಕ್ಕೆ ಏನೂ ಮಾಡುವಂತಿಲ್ಲ ಎಂದು ಗೊತ್ತಾಗಿತ್ತು ; ಆಗ ಅಕ್ಟೋಬರ್. ಅಮ್ಮ ಬೆಂಗಳೂರಿನ ನನ್ನ ಪುಟ್ಟ ನಾಯಿಗೂಡಿನಂಥ ಮನೆಯಲ್ಲಿ ಚಳಿ ತಾಳಲಾಗದೆ ತತ್ತರಿಸಿ ಮುದುಡಿ ಮಲಗಿರುತ್ತಿದ್ದಳು. ಪಕ್ಕದ ಮನೆಯವರು ಈ ವೈದ್ಯರ ಬಗ್ಗೆ ತಿಳಿಸಿದ್ದರು.
ರಿಕ್ಷಾ ವೈದ್ಯರ ಮನೆಯ ಎದುರು ಬಂದಾಗ ನಾನು ದಂಗಾಗಿ ಹೋದೆ. ಅದು ಸೋಗೆ ಮುಳಿ ಮಾಡಿನ ಮನೆಯೇನಲ್ಲ ; ಮಾಳಿಗೆಯಿದ್ದ ದೊಡ್ಡ ಆರ್‌ಸಿಸಿ ಮನೆ. ಔಷಗೆ ಬಂದ ಜನ ಮನೆಯ ಅಂಗಳದಲ್ಲಿ ಸಾಲುಗಟ್ಟಿ ನಿಂತಿದ್ದರು ; ಇನ್ನೂ ಜನ ಬರುತ್ತಲೇ ಇದ್ದರು. ನಾನು ಕ್ಯೂಗೆ ಸೇರಿಕೊಳ್ಳುವ ವೇಳೆಗೆ ಗಂಟೆ ಚುಮುಚುಮು ಆರೂವರೆ ; ಆಗಲೇ ಕನಿಷ್ಠ ನೂರು ಜನ ಅಲ್ಲಿದ್ದರು. ನನ್ನ ಹಿಂದೆ ಮತ್ತೆ ಅಷ್ಟೇ ಜನ ಇದ್ದರು. ‘ಇಂದು ಗುರುವಾರವಾದ್ದರಿಂದ ಜನ ಕಡಿಮೆ’ ಎಂದು ಪಕ್ಕದಲ್ಲಿದ್ದವನು ಹೇಳಿದ. ಹೆಚ್ಚಿನವರು ಬೆಳ್ಳಂಬೆಳಗ್ಗೆ ವಾಹನ ಮಾಡಿಕೊಂಡು ದೂರದೂರುಗಳಿಂದ ಬಂದಿದ್ದರು, ಹಲವರು ರಾತ್ರಿಯೇ ಬಂದು ಸೀಟ್ ರಿಸರ್ವ್ ಮಾಡಿದ್ದರು.
ಮನೆ ಪಕ್ಕದಲ್ಲಿದ್ದ ಕೊಟ್ಟಿಗೆಯಲ್ಲಿ ವೈದ್ಯರು ಒಬ್ಬೊಬ್ಬನನ್ನೇ ಮಾತನಾಡಿಸಿ ಮದ್ದು ಕೊಡುತ್ತಿದ್ದರು. ಅವರ ಅಕ್ಕಪಕ್ಕದಲ್ಲಿ ನಾಲ್ಕೈದು ಬಗೆ ಮರದ ಚಕ್ಕೆಗಳು, ಒಂದೆರಡು ಬಗೆಯ ಬೇರುಗಳು ; ಎಲ್ಲ ರೋಗಕ್ಕೂ ಅದೇ ಮದ್ದು. ಕಿಡ್ನಿ ಕಲ್ಲಿಗೂ ಅದೇ, ಗಂಟಲು ಕ್ಯಾನ್ಸರ್‌ಗೂ ಅದೇ, ಜಾಂಡೀಸ್‌ಗೂ ಅದೇ. ಸೇವಿಸುವ ಕ್ರಮ ಮಾತ್ರ ಬೇರೆ ಬೇರೆ. ಅವರ ಮುಂದೆ ನೂರಾರು ರೋಗಿಗಳ, ಅವರ ಸಂಬಂಕರ ಸಾಲು.
ಇದನ್ನೆಲ್ಲ ಲಂಬಿಸುವ ಅಗತ್ಯವಿಲ್ಲ ; ಪಾರಂಪರಿಕ ಹಾಗೂ ಪರ್‍ಯಾಯ ವೈದ್ಯ ಪದ್ಧತಿಗಳ ಬಗ್ಗೆ ನಮ್ಮ ಜನ ಇಟ್ಟಿರುವ ನಂಬಿಕೆಯನ್ನು ಇದು ಸೂಚಿಸುತ್ತಿರಬಹುದು ಅಥವಾ ಅಲೋಪತಿಯ ಮೇಲೆ ನಂಬಿಕೆ ಇಲ್ಲದಿರುವುದನ್ನೂ ಹೇಳುತ್ತಿರಬಹುದು. ಕಾಣಬಲ್ಲವನಿಗೆ, ಅಲ್ಲಿದ್ದ ಮುಖಗಳಲ್ಲಿ ಭರವಸೆ ಹಾಗೂ ಹತಾಶೆಗಳೆರಡೂ ಕಾಣಿಸುತ್ತಿದ್ದವು. ಅಲ್ಲಿ ಬಂದು ನಿಂತಿದ್ದವರಲ್ಲಿ ಹೆಚ್ಚುಕಡಿಮೆ ಎಲ್ಲವೂ ಡಾಕ್ಟರರು ಕೈಬಿಟ್ಟ ಕೇಸುಗಳೇ. ಇದುವರೆಗಿನ ಪ್ರಯತ್ನ ಫಲ ಕೊಡದಿದ್ದುದರಿಂದ ಹತಾಶೆ ; ಈ ವೈದ್ಯರು ಒಂದು ಪವಾಡ ನಡೆಸಬಹುದೆಂಬ ಭರವಸೆ.
ಆ ವೈದ್ಯರೇನೂ ಅವಧೂತನಂತೆ ಕಾಣಲಿಲ್ಲ. ಅವರು ಹಿಂದಿನ ದಿನವೇ ಕೆಲಸದವನ ಜತೆ ಗುಡ್ಡ ಗುಡ್ಡ ಅಲೆದು ಚಕ್ಕೆ ಆರಿಸಿ ತಂದಿಟ್ಟಿರುತ್ತಿದ್ದರು. ಒಂದು ಸಲ ನೋಡಿದಾಗ ಅವರು ಬೀಡಿ ಸೇದುತ್ತಾ ಮನೆಗೆಲಸದವರೊಡನೆ ಮಾತನಾಡುತ್ತಿದ್ದರು ; ಮತ್ತೊಂದು ಬಾರಿ ಸಾಲು ತಪ್ಪಿಸಿ ಬಂದವನೊಡನೆ ಜಗಳವಾಡಿದರು. ಒಂದು ಸಲ ಒಬ್ಬನಿಗೆ ಒಂದು ರೋಗಕ್ಕೆ ಮಾತ್ರವೇ ಮದ್ದು ಕೊಡುತ್ತಿದ್ದರು. ಕೊಡುವಷ್ಟು ಮಾತ್ರ ತೆಗೆದುಕೊಳ್ಳಬೇಕು, ಹೆಚ್ಚಿಗೆ ಕೇಳುವಂತಿಲ್ಲ. ಔಷಧಕ್ಕೆ ನಯಾ ಪೈಸೆ ತೆಗೆದುಕೊಳ್ಳುವುದಿಲ್ಲ ಅವರು. ವಶೀಲಿಯೂ ನಡೆಯುವುದಿಲ್ಲ.
ಅವರು ಔಷಧ ಕೊಡತೊಡಗುವುದು ಬೆಳಗ್ಗೆ ಏಳೂವರೆಗೆ. ನಾನು ಮೂರನೇ ಸಲ ಹೋಗಿದ್ದಾಗ ಭಟ್ಟರು ರೌದ್ರಾವತಾರ ತಾಳಿಬಿಟ್ಟಿದ್ದರು. ಅದಕ್ಕೆ ಕಾರಣ ಹಿಂದಿನ ರಾತ್ರಿ ವಾಹನಗಳಲ್ಲಿ ಬಂದು ಕ್ಯೂ ನಿಂತವರು ರಾತ್ರಿಯಿಡೀ ಕಚಕಚ ಮಾತನಾಡುತ್ತ, ಜಗಳವಾಡುತ್ತ, ಗಲಾಟೆ ಎಬ್ಬಿಸಿ ಭಟ್ಟರ ನಿದ್ದೆ ಕೆಡಿಸಿ ಬಿಟ್ಟಿದ್ದರು. "ನಿನ್ನೆ ಮದ್ದು ಹುಡುಕಿ ಸುಸ್ತಾಗಿ ಮಲಗಿದ್ದರೆ ನಿಮ್ಮ ಗಲಾಟೆ ಎಂತದು, ಇಂದು ಮದ್ದು ಕೊಡುವುದಿಲ್ಲ" ಎಂದು ಕಟುವಾಗಿಬಿಟ್ಟಿದ್ದರು. ದೂರದಿಂದ ಹೋದ ನಾವೆಲ್ಲ ಕಂಗಾಲಾಗಿದ್ದೆವು. ಬಳಿಕ ಸಮಾಧಾನ ಮಾಡಿಕೊಂಡು ಔಷಧ ಕೊಟ್ಟರು. ಅಂದು ಕ್ಯೂನ ಮೊದಲಲ್ಲಿದ್ದವರಿಗೆ ಮದ್ದು ಸಿಕ್ಕಿದ್ದು ಕೊನೆಗೆ.
ಪ್ರತಿಸಲ ನಾನು ಹೋದಾಗಲೂ ಹಲವಾರು ವಿಚಿತ್ರ ಕೇಸುಗಳು ಕಾಣುತ್ತಿದ್ದವು. ಇದ್ದಕ್ಕಿದ್ದಂತೆ ಸಾಲಿನಲ್ಲಿ ನಿಂತವಳೊಬ್ಬಳು ಧಡ್ಡನೆ ಬಿದ್ದುಬಿಡುತ್ತಿದ್ದಳು. ಕೆಲವರ ಮೈಮೇಲೆ ಏನೋ ಆವೇಶವಾಗುತ್ತಿತ್ತು. ಗುಲ್ಬರ್ಗ, ಕೇರಳದ ಕಲ್ಲಿಕೋಟೆ ಹೀಗೆ ದೂರದೂರದಿಂದ ಬಂದವರು ಕೂಡ ಕ್ಯೂನಲ್ಲಿ ನಿಂತಿರುತ್ತಿದ್ದರು. ಪುಟ್ಟ ಹುಡುಗಿಯೊಬ್ಬಳನ್ನು ಕಲ್ಲಿನ ಮೇಲೆ ಕೂರಿಸಿ ಆಕೆಯ ಅಪ್ಪ ಕ್ಯೂನಲ್ಲಿ ನಿಂತಿರುತ್ತಿದ್ದ. ಆಕೆಗೆ ರಕ್ತದ ಕ್ಯಾನ್ಸರ್. ಒಮ್ಮೆ ಕ್ಯೂನ ಮಧ್ಯದಲ್ಲಿದ್ದವನು ತನಗೆ ಎಚ್‌ಐವಿ ಇದೆ ಎಂದು ದೊಡ್ಡ ಗಂಟಲಿನಲ್ಲಿ ಸಾರುತ್ತಿದ್ದ. ವೈದ್ಯರಿಂದ ಚಕ್ಕೆ ಇಸಿದುಕೊಳ್ಳುವಾಗಲಂತೂ ಎಲ್ಲರ ಮುಖದಲ್ಲೂ ಒಂದು ಬೆಳ್ಳಿ ಬೆಳಕು ಕೋರೈಸಿದಂತಾಗುತ್ತಿತ್ತು. ಭಟ್ಟರು ದೊಡ್ಡ ದನಿಯಲ್ಲಿ ಮಾತನಾಡುತ್ತ ಚಕ್ಕೆ ಎಣಿಸಿ ಕೈಗಿಡುತ್ತಿದ್ದರು.
ಬದುಕು ಹಾಗೂ ಸಾವಿನ ನಡುವಿನ ಒಂದು ಅಲ್ಪವಿರಾಮದಂತಿದ್ದ ಈ ಮನೆ, ರೋಗಿಗಳ ಸುಖ ಹಾಗೂ ಸಂಕಟಗಳು ಜತೆಯಾಗುವ ಒಂದು ಸ್ಥಳವಾಗಿತ್ತು. "ನಮ್ಮ ತಂದೆಗೆ ಕ್ಯಾನ್ಸರ್. ಮನೆಗೆ ಕೊಂಡೋಗಿ ಅಂತ ಡಾಕ್ಟರ್ ಹೇಳಿದ್ದರು. ಇವರ ಮದ್ದಿನಲ್ಲಿ ಒಂದು ವರ್ಷದಿಂದ ಸುಖವಾಗಿದ್ದಾರೆ" ಎಂದು ಒಬ್ಬ ಹೇಳುತ್ತಾನೆ. ಪಕ್ಕದಲ್ಲಿ ನಿಂತ ಪೇಷೆಂಟ್‌ಗೆ ಅದು ಬರೀ ಮಾತಲ್ಲ, ಕಾರ್ಗತ್ತಲಲ್ಲಿ ಹೊಳೆಯುವ ಬೆಳ್ಳಿ ರೇಖೆ. ಹಾಗೇ, ಬರಿಯ ಬ್ಲಡ್‌ಪ್ರೆಶರ್ ಹೊಂದಿರುವಾತನಿಗೆ ಕ್ಯಾನ್ಸರ್ ರೋಗಿಯ ವೇದನೆಯ ಮುಂದೆ ತನ್ನದು ಏನೂ ಅಲ್ಲ ಎಂಬ ಅರಿವು. ಹಾಗೇ ಅದು ಎಲ್ಲರ ಒಡಲಲ್ಲೂ ಇದ್ದುಕೊಂಡು ಹೊಂಚು ಹಾಕುವ ಸಾವಿನ, ವೇದನೆಯ ಕಿಂಚಿತ್ ದರ್ಶನ.
ಇಂಥ ವೈದ್ಯರಲ್ಲಿಗೆ ತಿಂಗಳಿಗೊಂದು ಬಾರಿಯಂತೆ ಹೋಗುತ್ತಿದ್ದ ನಾನು ಇನ್ನು ಹೋಗುವ ಸಂಭವವಿಲ್ಲ. ಯಾಕೆಂದರೆ ಅಲ್ಲಿಂದ ತಂದ ಮದ್ದನ್ನು ಅಷ್ಟೊಂದು ಶ್ರದ್ಧೆಯಿಂದ ಸೇವಿಸಿದರೂ ನನ್ನ ಅಮ್ಮ ಮೊನ್ನೆ ಮೊನ್ನೆಯಷ್ಟೇ ತೀರಿಕೊಂಡಳು. ಅವಳಿಗೆ ಪಿತ್ಥಕೋಶದ ಕ್ಯಾನ್ಸರ್ ಆಗಿತ್ತು. ಅದು ಗೊತ್ತಾದ ಬಳಿಕ ಆಕೆ ನಮ್ಮ ಜತೆಗಿದ್ದದ್ದು ನಾಲ್ಕೇ ತಿಂಗಳು.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
2 months ago
3 comments:
ಅನಾಯಾಸೇನ ಮರಣಮ್ ವಿನಾ ದೈನ್ಯೇನಜೀವನಂ
ದೇಹಿ ಮೇ ಕ್ರಿಪಯಾ ಶಂಭೋ ತ್ವಯಿ ಭಕ್ತಿಮಚಂಚಲಂ... :-(
ನಿನ್ನೆ ಮೊನ್ನೆಯಷ್ಟೇ ಹೀಗೇ ಒಬ್ಬ ಗೆಳೆಯನ ತಾಯಿಯನ್ನು ಆಪರೇಶನ್ ಥಿಯೇಟರ್ ಒಳಗೆ ಬಿಟ್ಟುಕೊಂಡು ನಾವಿಬ್ಬರೂ ಹೊರಗೆ ಕೂತು ನಮ್ಮ ದುಗುಡ, ಆತಂಕವನ್ನೆಲ್ಲ ಅಡಗಿಸುತ್ತ ಕಾಯುತ್ತ ಕುಳಿತಿದ್ದೆವು. ಮಾರ್ಚ್ ತಿಂಗಳು. ಎಕೌಂಟ್ಸ್‌ನಲ್ಲಿ ದುಡಿಯುತ್ತಿರುವವರಿಗೆ ವಿಚಿತ್ರ ಟೆನ್ಷ್‌ನ್‌ನ ತಿಂಗಳಿದು. ಆದರೂ ಅವನು ಕರೆದಾಗ ಹೋದೆ. ಯಾರು ಯಾರೋ ಬಂದು ಅದು ಇದು ಮಾತನಾಡಿಸಿ ತಲೆ ತಿನ್ನುತ್ತಿದ್ದರು. ಜಗತ್ತು ಹೊರಗೆ ಎಂದಿನಂತೆ ತನ್ನ ವಿಲಕ್ಷಣ ಗಡಿಬಿಡಿಯಿಂದ ಸಂಭ್ರಮಿಸುತ್ತಿತ್ತು. ಆದರೆ ಅಮ್ಮ ಮಾತ್ರ ಅಮ್ಮನೇ. ಅಂಥ ಅಮ್ಮ ಅಲ್ಲಿ ಒಳಗೆ ಮಲಗಿ ಕೊಯ್ಯಿಸಿಕೊಳ್ಳುವುದನ್ನು ಮಗನಾಗಿ ಹೊರಗೆ ಕೂತು ಸಹಿಸುವುದು ಸಂಕಟವೇ. ಆದರೆ ಈ ಸಂಕಟಗಳೆಲ್ಲ ಕ್ಷಣದ್ದಲ್ಲ. ನೆನಪಿನ ಕವಾಟಗಳಲ್ಲಿ ಶಾಶ್ವತವಾಗಿ ಸೇರಿಬಿಡುವಂಥದ್ದು. ಪುತ್ರ ಶೋಕದ ಬಗ್ಗೆ ಯಾರೋ ನಿರಂತರ ಎಂದಿದ್ದಾರೆ. ತಾಯಿಯನ್ನು ಕುರಿತ ಮಗನ ಶೋಕವೂ ಹಾಗೆಯೇ ಅಲ್ಲವೆ? ಹರೀಶ್, ನನಗೆ ನಿಮ್ಮ ಇಡೀ ಲೇಖನದಲ್ಲಿ, ಕ್ಯೂ ನಿಂತ ನಿಮ್ಮ ಚಿತ್ರದೊಂದಿಗೆ ಮನದಲ್ಲಿ ಮೂಡಿದ್ದು, ಇದೇ. ಕೊನೆಯ ಒಂದು ಸಾಲು...ಕೊನೆಯದು.
ಕಥೆ .... ಕಥೆಯೊಳಗಿನ ವ್ಯಥೆ....ಆ ನಗ್ನ ಸತ್ಯಗಳು ಮಾರ್ಮಿಕ. ಯಾವುದಾದರೂ ಆಗಬಹುದು... ಆಸ್ಪತ್ರೆಯ ಸಹವಾಸವೊಂದು ಬೇಡಪ್ಪಾ...ನಮ್ಮ ಶತ್ರುಗಳಿಗೂ.... ಆಸ್ಪತ್ರೆ ಸಹವಾಸ ಅನುಭವಿಸಿದವನಿಗಷ್ಟೇ ಗೊತ್ತು.
...................................
ಹರೀಶ್ ನಿಮ್ಮ ಬ್ಲಾಗ್ ದರ್ಶನ ಇವತ್ತಾಯಿತು. ಚೆನ್ನಾಗಿದೆ. ನನ್ನ ಬ್ಲಾಗುಗಳನ್ನು ಸಾಧ್ಯವಾದಾಗ ವೀಕ್ಷಿಸಿ.
www.saahityasanje.blogspot.com
www.vaarenota.blogspot.com
www.adhurcartoons.blogspot.com
www. idupreethi.blogspot.com.
ಆಗಾಗ ಭೇಟಿಯಾಗೋಣ...
ಹರೀಶ್ ಕೆ. ಆದೂರು.
Post a Comment