Tuesday, October 14, 2008

ಹೆಗ್ಗೋಡಿನ ಬೆಳಗಿನಲ್ಲೊಂದು ಸ್ವಗತ

ಆಹಾ ಇಂಥ ಇಬ್ಬನಿ ಸುರಿಯುತ್ತ ಮೈ ಮರೆಯುತ್ತ ಹೀಗೇ ಓಡಾಡುತ್ತ ಇರುವುದಾದರೆ ವರ್ಷದ ಮುನ್ನೂರ ಅರುವತ್ತ ಐದು ದಿನವೂ ಸಂಸ್ಕೃತಿ ಶಿಬಿರ ಇರಬಾರದೇ ಅಂದುಕೊಳ್ಳುತ್ತ ಇನ್ನೂ ಬಿಸಿಲು ಬಿದ್ದಿರದ ಇಬ್ಬನಿಯಲ್ಲಿ ನೆನೆದು ಒದ್ದೆಯಾಗಿದ್ದ ರಸ್ತೆಯ ಮೇಲೆ, ಸುತ್ತಮುತ್ತಲಿನ ಕಾಡಿನ ನಿಗೂಢದಿಂದ ನೂರಾರು ಹಕ್ಕಿಗಳು ಎಂಪಿತ್ರೀ ಹಚ್ಚಿ ತಮ್ಮ ಗಾಯನದಿಂದ ಒದ್ದೆಯಾಗಿಸಿದ್ದ ಮನಸ್ಸನ್ನು ಹೊತ್ತು ಹಾಗೇ ಓಡಾಡುತ್ತಿದ್ದೆ. ಹೆಗ್ಗೋಡು ಇನ್ನೂ ಬೆಳಗಿನ ಮಂಪರಿನ ಸುಖದಲ್ಲಿ ಮುದುಡಿತ್ತು.

“ಬೆಳಗ್ಗೆ ಬೇಗ ಎದ್ದು ಬಾ, ವಾಕಿಂಗ್ ಹೋಗುವ" ಎಂದಿದ್ದ ಗೆಳತಿ ತನ್ನ ಬೆಡ್‌ನಲ್ಲಿ ಹೊದಿಕೆಯನ್ನೂ ಕನಸುಗಳನ್ನೂ ಹೊದ್ದುಕೊಂಡು ಗಡದ್ದಾಗಿ ನಿದ್ದೆ ಹೋಗಿದ್ದಳು. ನಾನೊಬ್ಬನೇ ಆ ಬೆಳಗಿನ ಮೌನಕ್ಕೂ ಇಬ್ಬನಿ ತಬ್ಬಿದ ರೆಂಬೆಕೊಂಬೆಗಳಿಗೂ ಜೇಡರ ಬಲೆಗಳಿಗೂ ಹೊಸ ಹಾಡುಗಳನ್ನು ಹೊಟ್ಟೆಯೊಳಗೆ ಬಚ್ಚಿಟ್ಟುಕೊಂಡಿರುವ ಹಕ್ಕಿಗಳ ಗುಟ್ಟುಗಳಿಗೂ ಉತ್ತರಾಕಾರಿ ಅಂತ ಭಾವಿಸುತ್ತಾ ಕಾಲು ಹಾಕುತ್ತಿದ್ದಾಗ ನಿಧಾನವಾಗಿ ಒಬ್ಬೊಬ್ಬರೇ ಎದ್ದು ವಾಕಿಂಗ್‌ಗೆ ಬರತೊಡಗಿದ್ದರು.

ಅಷ್ಟರಲ್ಲಿ ಕಟ್ಟಡ ಸಾಲಿನ ಈಚೆ ತುದಿಯ ಕೊಠಡಿಯ ಬಾಗಿಲು ತೆಗೆದು ಇಬ್ಬರು ಹೆಣ್ಣುಮಕ್ಕಳು ವಾಕಿಂಗ್ ಹೊರಟದ್ದು ಕಾಣಿಸಿತು. ಹೂಹೂಗಳ ಚೂಡಿದಾರ ಹಾಕಿಕೊಂಡ ಎಸ್ತರ್ ಅನಂತಮೂರ್ತಿ ಊದಾ ಬಣ್ಣದ ದಪ್ಪದ ಶಾಲು ಹೊದ್ದುಕೊಂಡು ಅದನ್ನು ತಲೆಗೂ ಎಳೆದುಕೊಂಡು ಶಾಪಗ್ರಸ್ತ ದೇವತೆಯಂತೆ ರಸ್ತೆಯ ಒಂದು ಬದಿಯಲ್ಲಿ ಹಾಗೇ ಕಾಲು ಹಾಕತೊಡಗಿದ್ದರು. ಅವರ ಜತೆಗೆ ಅವರ ಮಗಳು, ವಿವೇಕ ಶಾನಭಾಗರ ಪತ್ನಿ, ಅವರ ಹೆಸರು ನನಗೆ ಗೊತ್ತಿಲ್ಲ- ಕೂಡ ಅಮ್ಮನ ಜತೆಗೆ ನಡೆಯತೊಡಗಿದ್ದರು. ಅವರನ್ನು ನೋಡುತ್ತ ನೋಡುತ್ತ ನಾನು ಹಾಗೇ, ಇವರಿಬ್ಬರೂ ನಿನ್ನೆ ಅನಂತಮೂರ್ತಿ ಮಾಡಿದ ಭಾಷಣವನ್ನು ಈಗ ನೆನೆಯುತ್ತಿರಬಹುದೆ, ಅಥವಾ ಅರ್ಥವಾಗದ, ಇಂಥ ಮುಂಜಾನೆಗಳಲ್ಲಿ ಮಾತ್ರ ಮನಸ್ಸನ್ನು ಕಾಡುವ ಮುಗ್ದ ಭಾವಗಳು ಅವರೊಳಗೆ ಆಡುತ್ತಿರಬಹುದೆ, ಇಂಥ ಪುಳಕಿತಗೊಳಿಸುವ ಮುಂಜಾವಿನಲ್ಲಿ ಅನಂತಮೂರ್ತಿ ಕೂಡ ಹಿಂದೊಮ್ಮೆ ತಮ್ಮ ಪತ್ನಿಯ ಜತೆಗೂ ಮಗಳ ಜತೆಗೂ ವಾಕಿಂಗ್ ಹೋಗಿರಬಹುದೆ, ಆಗಲೂ ಅವರು ಸಾಹಿತ್ಯದ ಬಗ್ಗೆ ಮಾತಾಡಿರಬಹುದೆ ಎಂದೆಲ್ಲಾ ಮಳ್ಳನಂತೆ ಯೋಚಿಸುತ್ತಿದ್ದೆ.

ಸಾಲದ್ದಕ್ಕೆ ಹಿಂದಿನ ಸಂಜೆ ಕೊನೆಯ ಗೋಷ್ಠಿಯಲ್ಲಿ ಅನಂತಮೂರ್ತಿ ಮಾತಾಡಿ ಮಾತಾಡಿ ಇನ್ನೂ ಮಾತಾಡುತ್ತಿದ್ದಾಗ ಅವರ ಮಗಳು “ಅಪ್ಪಾ ಮಾತಾಡಿದ್ದು ಸಾಕು, ಎಲ್ಲರಿಗೂ ತಿಂಡಿಗೆ ಹೊತ್ತಾಗುತ್ತಿದೆ" ಅಂತ ಚೀಟಿ ಕಳಿಸಿ, ಅದನ್ನು ಅನಂತಮೂರ್ತಿ ಜೋರಾಗಿ ಓದಿ ನಕ್ಕು, ಆ ನಗುವಿನಲ್ಲಿ ಜ್ಞಾನಪೀಠಿಯೊಬ್ಬರ ಸಂಸಾರದ ಸುಖ ಪರವಶ ಗಳಿಗೆಯೊಂದು ಹಾದು ಹೋದಂತೆ ಕಂಡುಬಂದದ್ದು ಇನ್ನೂ ನನ್ನ ತಲೆಯಲ್ಲಿ ಕುಳಿತಿತ್ತು.

ಅದರ ಹಿಂದಿನ ದಿನ ಒಂದು ಗೋಷ್ಠಿಯಲ್ಲಿ ಕತೆಗಾರ್ತಿ ವೈದೇಹಿ ಮಾತನಾಡಿದ್ದು ಕೇಳಿ ನನಗೆ ಕಣ್ಣೀರು ಬಂದುಬಿಟ್ಟಿತ್ತು. ಅವರು ಸಹಜವಾಗಿ ಯಾವ ಸೋಗುಗಳಿಲ್ಲದೆ ಅಟ್ಟುಂಬಳದಲ್ಲಿ ಕೂತ ಅಕ್ಕಳೊಬ್ಬಳು ತಮ್ಮ ಮುಂದೆ ಕುಳಿತ ತಮ್ಮಂದಿರು ತಂಗಿಯಂದಿರ ಮುಂದೆ ಹಜಾರದಲ್ಲಿ ಕುಳಿತ ಗಂಡಸರ ಕಿವಿಗೂ ಬೀಳುವ ಹಾಗೆ ಮನಸ್ಸು ತೆರೆದುಕೊಂಡಂತೆ ಮಾತನಾಡಿದ್ದರು. ‘ಕನ್ನಡ ಕಾವ್ಯದಲ್ಲಿ ಸ್ವಂತಿಕೆ’ ಎಂಬ ಆ ಗೋಷ್ಠಿಯಲ್ಲಿ ಮಾತನಾಡಲು ಇದ್ದದ್ದೇ ಇಬ್ಬರು. ಅವರಿಗಿಂತ ಮೊದಲು ಮಾತನಾಡಿದ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡುತ್ತ ಮಾತನಾಡುತ್ತ ವೈದೇಹಿಗೆ ಸಮಯವೇ ಉಳಿಯದಂತೆ ಮಾಡಿಬಿಟ್ಟಿದ್ದರು.

ಆ ಮೇಲೆ ಮಾತನಾಡಿದ ವೈದೇಹಿ, ನನಗೆ ಸಮಯವೇ ಇಲ್ಲ ಎಂದು ಪೇಚಾಡುತ್ತ, ಚಿಕ್ಕಂದಿನಲ್ಲಿ ತಮ್ಮಂಥ ಹುಡುಗಿಯರನ್ನು ಹೇಗೆ ಅಡುಗೆ ಮನೆಗೆ ಸೀಮಿತ ಮಾಡಲಾಗುತ್ತಿತ್ತು, ಅದರಿಂದ ತಾವು ಅಡುಗೆಗೆ ಮಾತ್ರ ಲಾಯಕ್ಕೇನೋ ಎಂಬ ಭಾವ ಗಟ್ಟಿಯಾಗುತ್ತಿದ್ದುದು, ತಮ್ಮ ತಾಯಿ ‘ತಲ್ಲಣಿಸದಿರು ಕಂಡ್ಯ...’ ಎಂಬ ದಾಸರ ಪದವನ್ನು ಪದೇ ಪದೇ ಹಾಡುತ್ತಿದ್ದುದು, ಕೆಲಸದ ನಡುವೆ ಹಾಡು ಹುಟ್ಟುತ್ತಿದ್ದುದು ಇತ್ಯಾದಿಗಳನ್ನು ನೆನೆದುಕೊಂಡರು. ಅದನ್ನೆಲ್ಲ ಹೇಳುತ್ತ ಅವರು ಭಾವುಕರಾದರೋ ಇಲ್ಲವೋ, ನನಗಂತೂ ಕಸಿವಿಸಿಯೇ ಆಗಿಬಿಟ್ಟಿತು. ಗೋಷ್ಠಿಯ ನಂತರ ಸಿಕ್ಕಿದ ಸಕಲೇಶಪುರದ ಉಮಾಪ್ರಸಾದ ರಕ್ಷಿದಿ, “ವೈದೇಹಿ ಮಾತನಾಡಲು ಹೊರಟರೆ ನಮಗೆ ಅರಿವೇ ಇಲ್ಲದ ಹಾಗೆ ಮನಸ್ಸಿನಲ್ಲಿ ಪಾಪಪ್ರಜ್ಞೆ ಮೂಡಿಬಿಡುತ್ತದೆ ಮಾರಾಯ" ಎಂದಿದ್ದರು.

ಹಾಗೇ ನಡೆಯುತ್ತಾ, ನಾನು ಆಗಾಗ ಗೆಳತಿಯ ಕೆನ್ನೆ ಚಿವುಟುವುದು ಇತ್ಯಾದಿ ಮಾಡುತ್ತೇನಲ್ಲ ಆಗ ಯಾಕೆ ನನಗೆ ಪಾಪಪ್ರಜ್ಞೆ ಕಾಡುವುದಿಲ್ಲ ಎಂದು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆ. ಈ ಬೆಳಗಿಗೂ ಪಾಪಪ್ರಜ್ಞೆಗೂ ಯಾವ ಸಂಬಂಧವೂ ಇರುವಂತೆ ಕಾಣಲಿಲ್ಲ.

ಈ ಬೆಳಗಿನ ಇಬ್ಬನಿಯ ವಾಕಿಂಗಿನ ಸುಖ, ಸಂಜೆ ಚುಮುಚುಮು ಚಳಿಯ ನಡುವೆ ಪುರಿ ತಿನ್ನುತ್ತ ನಾಟಕಗಳನ್ನು ನೋಡುವ ಸುಖ ನೀನಾಸಂನ ಇತರ ಗೋಷ್ಠಿಗಳಿಗೂ ಇರಬಾರದೇ ಎಂದು ಮನಸ್ಸು ಹಲುಬುತ್ತ ಹಂಬಲಿಸುತ್ತಿತ್ತು. ಆದರೆ ಅಲ್ಲಿದ್ದ ಯಾರಿಗೂ ನಮ್ಮಂಥ ಮುಗ್ದರ, ಮಳ್ಳರ ಮೇಲೆ ಕರುಣೆಯೇ ಇರುವಂತೆ ಕಾಣುತ್ತಿರಲಿಲ್ಲ. ಬೆಳಗು ಹತ್ತು ಗಂಟೆಯಾಗಿ ಶಿಬಿರದ ಕಾರ್‍ಯಕ್ರಮದಲ್ಲಿ ಹೋಗಿ ಕುಳಿತರೆ ಸಾಕು, ಒಬ್ಬನಲ್ಲಾ ಒಬ್ಬ ಚಿಂತಕ ಭಯಂಕರವಾದ ಭಾಷಣದಿಂದ ನಮ್ಮನ್ನೆಲ್ಲ ಚಚ್ಚುತ್ತಿದ್ದ. ಅದು ಯಾವ ಪರಿ ಆಲಿಕಲ್ಲಿನ ಮಳೆಯಂತೆ ನಮ್ಮ ಮೇಲೆ ಪ್ರಹರಿಸುತ್ತಿತ್ತೆಂದರೆ, ಅಲ್ಲಿ ಕೂರಲೂ ಆಗದೆ ನಿಲ್ಲಲೂ ಆಗದಂತೆ ಮಾಡಿಬಿಡುತ್ತಿತ್ತು.

ಈಗ ಇದನ್ನೆಲ್ಲ ನೆನೆಯುತ್ತ ಬೆಂಗಳೂರಿನ ಹವೆಯಲ್ಲಿ ಕುಳಿತಿದ್ದೇನೆ. ನೆನೆವುದೆನ್ನ ಮನಂ ಹೆಗ್ಗೋಡಿನ ಮುಂಜಾವವಂ.

8 comments:

ಆಲಾಪಿನಿ said...

ಹೌದು ಹರೀಶ್‌.... ವೈದೇಹಿಯವರ ಮಾತು, ಆ ಆಪ್ತಭಾವ, ಕವನ ಛೆ.... ನೆನಪಿಸಿಕೊಂಡರೆ ಮನಸ್ಸು ತುಂಬಿಬರ್‍ತಿದೆ. ಅಮ್ಮನ ನೆನಪಾದಂತೆ!

ಜಿ ಎನ್ ಮೋಹನ್ said...

ಆಪ್ತತೆ ಯಾಕೋ ಕೈಕಟ್ಟಿ ದೂರವೇ ನಿಂತಿತ್ತು ಅಂತ ಶ್ರೀದೇವಿ ಹೇಳಿದರಲ್ಲ ಅದು ನಿಜ ಅನ್ನಿಸುತ್ತೆ. ಅಲ್ಲ ಬೆಂಗಳೂರಿನ ನಾವೆಲ್ಲಾ ಹೆಗ್ಗೋಡಿನಲ್ಲಿ ಸಿಕ್ಕರೂ ನಾನು ನಾನೇನಾ? ಅವರು ನೀವೇನಾ ಅನ್ನೋ ಗೊಂದಲಕ್ಕೆ ಒಳಗಾಗಿ ದೂರವೇ ಇಳಿದಿದ್ದು ಯಾಕೆ ಅಂತ ಗೊತ್ತಾಗಲೇ ಇಲ್ಲ. ಎಲ್ಲ ಇದ್ದೂ ಏನೂ ಇಲ್ಲದಂತಾಗುವುದು ಎಂದರೆ ಇದೆ ಇರಬೇಕೇನೋ. ಎಲ್ಲರೂ ಇದ್ದರು ಆದರೆ ಏನೋ ಧಕ್ಕಲಿಲ್ಲ..
-ಜಿ ಎನ್ ಮೋಹನ್

Anonymous said...

ಯಾಕೋ, ಅಷ್ಟಷ್ಟುದ್ದ ಸಾಲಿನಲ್ಲಿ ಉಸಿರುಕಟ್ಟಿ ಹೋಗುವವನಂತೆ ಬರೆದಿದ್ದೀಯ? ಅದ್ಯಾಕೆ ಅಷ್ಟು ಗಡಿಬಿಡಿ? ಇನ್ನೂ ಸ್ಪಲ್ಪ ತಾಳ್ಮೆ ವಹಿಸಿದ್ರೆ ಎಷ್ಟೊಳ್ಳೆ ಬರವಣಿಗೆ ಆಗ್ತಿತ್ತು. ಬೇರೆಲ್ಲಾ ಕಡೆ ಅಷ್ಟು ಸೂಕ್ಷ್ಮವಾಗಿರುವ ನಿನಗೆ ನೀನಾಸಂ ಬಗ್ಗೆ ಬರೆಯುವಾಗ ಏಕೆ ಅಷ್ಟು ಅರ್ಜೆಂಟಾದದ್ದು?

ಮುಗುಳು

ಜಿ ಎನ್ ಮೋಹನ್ said...

yes! nanagoo mugulu avaru heliruvudu sari anistu. ee barahadalli neevilla- harish

ಹರೀಶ ಮಾಂಬಾಡಿ said...

ಈಗೀಗ ನೀನಾಸಂ ನಾಟಕಗಳೂ ನಮ್ಮೂರಲ್ಲಿ ಕಡಮೆಯಾಗುತ್ತಿವೆ..ಯಾಕೋ ನಮ್ಮ ನಡುವೆ ಕಂದರಗಳು ಜಾಸ್ತಿ ಆದಂತೆ ಗಲಭೆ, ಪ್ರಚೋದನಕಾರಿ ವಿಷಯಗಳೆ ಹೆಚ್ಹು ಮನೋರಂಜಕವಾಗುತ್ತಿವೆ.. ಇದೊಂದು ಕ್ರೂರ ವಾಸ್ತವ..

ಹಳ್ಳಿಕನ್ನಡ said...

ನೀವು, ಶ್ರೀದೇವಿ ಕಳಸದ ಮುಂತಾದವರು ವ್ಯಕ್ತಪಡಿಸಿರುವ ನಿರಾಸೆ ನೋಡಿದರೆ ನಾವೇ ಭಾಗ್ಯವಂತರು ಅನ್ಸುತ್ತೆ. ಏಳು ವರ್ಷಗಳ ಹಿಂದೆ ನಾನೂ 'ಸಂಸ್ಕೃತಿ ಶಿಬಿರ'ದಲ್ಲಿ ಪಾಲ್ಗೊಂಡಿದ್ದೆ. ಭಾಸ್ಕರ ಚಂದಾವರ್ಕರ್ ಅವರ ಸಂಗೀತದ ಕುರಿತ ಹಲವಾರು ಉಪನ್ಯಾಸಗಳು, ಕೀರ್ತಿನಾಥ ಕುರ್ತುಕೋಟಿ, ಸುಬ್ಬಣ್ಣ, ಅನಂತಮೂರ್ತಿ, ಕಂಬಾರ ಮುಂತಾದ ಘಟಾನು ಘಟಿಗಳನ್ನು ನೋಡುವ ಮತ್ತು ಅವರ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿತ್ತು. ಆ ವರ್ಷ ಬಿ.ವಿ. ಕಾರಂತರು ತೀರಿಕೊಂಡಿದ್ದರು. ಅವರ ನೆನಪಿನಲ್ಲಿ ಶಿಬಿರ ಅರ್ಥಪೂರ್ಣವಾಗಿತ್ತು. ನಡುವೆ ಕೆಲವು ಗೋಷ್ಠಿಗಳು ಬೋರ್ ಹೊಡೆಯುತ್ತಿದ್ದವು. ಯಾರಿಗೂ ಕೇರ್ ಮಾಡದೆ ನಾವು ಐದಾರು ಮಿತ್ರರೂ ಹೊರನಡೆದು ಕಾಡು ಸುತ್ತುತ್ತಿದ್ದೆವು. ಅದೊಂದು ಸುಂದರ ನೆನಪುಗಳು.
- ಮಂಜುನಾಥ ಸ್ವಾಮಿ

ರಾಧಾಕೃಷ್ಣ ಆನೆಗುಂಡಿ. said...

ಅವಕಾಶ ವಂಚಿತನಾದೆನಲ್ಲ...........

Anonymous said...

What is this Mohan? In one comment you like the writing of Mr. Kera. And as some one raised an objection, you support it too. Why can't you give your opinion straight?