Saturday, August 30, 2008

ಚಂದ್ರನಿಗೊಂದು ರೂಪಕ


ಹುಣ್ಣಿಮೆಯ ಚಂದ್ರನಿಗೊಂದು

ರೂಪಕ ಕೊಡುವುದಾದರೆ


ಮಜ್ಜಿಗೆಯಲ್ಲಿ ತೇಲುವ ಬೆಣ್ಣೆ

ಚಪ್ಪರಿಸಿದ ನಿಂಬೆ ಪೆಪ್ಪರಮಿಂಟು

ಕಪ್ಪು ಕೊಳದ ರಾಜಹಂಸ

ನೀಲಿ ಚಪ್ಪರದ ತೂಗುದೀಪ

ಇತ್ಯಾದಿ


ಅದೆಲ್ಲ ಹಳತಾಯಿತಲ್ಲವಾ

ಒಂದಿಷ್ಟು ಹೊಸತು ಪ್ರಯತ್ನಿಸುವಾ


ಬೀಸಿದ ಕಲ್ಲು ಅಪ್ಪಳಿಸಿ ಚೂರಾದ ಬೀದಿ ದೀಪದ ತುಣುಕು

ಮಲಗಿದವರನ್ನು ಎಬ್ಬಿಸಿ ಥಳಿಸುವಾಗ ಹೆಪ್ಪುಗಟ್ಟಿದ ಕೊನೆಯ ಕೇಕೆ

ಅವಳ ಹಣೆಯಿಂದ ಇವರು ಗೀಚಿ ಅಳಿಸಿದ ಬಿಂದಿ

ಅವರು ಬಾಕು ಬೀಸಿದಾಗ ಬುರುಖಾದಿಂದ ಆಚೆ ಸರಿದ ಇವಳ ಮುಖ

ಕಪ್ಪು ಟಾರು ರೋಡಿನಲ್ಲಿ ಅಂಗೈಯಗಲದ ರಕ್ತದ ಕಲೆ


ರೂಪಕಗಳಿಗೆ ಸಾವಿಲ್ಲ

Friday, August 22, 2008

ಪತ್ರಗಳಲ್ಲಿ ಕಂಡ ಚೆಕಾವ್


ಆಂಟನ್ ಪಾವ್ಲೊವಿಚ್ ಚೆಕಾವ್(೧೮೬೦-೧೯೦೪) ರಷ್ಯಾದ ಬಹುದೊಡ್ಡ ಕತೆಗಾರ. ತನಗಿಂತ ಕಿರಿಯರಿಗೆ, ಓರಗೆಯ ಬರಹಗಾರರಿಗೆ ಆತ ಬರೆಯುತ್ತಿದ್ದ ಪತ್ರಗಳಲ್ಲಿ ಕತೆ ಕಟ್ಟುವ ಕಲೆಯ ಬಗ್ಗೆ ಆಗಾಗ ವಿವರಿಸಿದ್ದನ್ನು ಕಾಣುತ್ತೇವೆ. ಮ್ಯಾಕ್ಸಿಂ ಗಾರ್ಕಿಯಂಥ ಕಾದಂಬರಿಕಾರನಿಗೆ ಈತ ಮಾರ್ಗದರ್ಶನ ನೀಡಿದ್ದ ಎಂಬುದಿಲ್ಲಿ ಉಲ್ಲೇಖಾರ್ಹ.

ಅಂಥ ಕೆಲವು ಬರಹಗಳು ಇಲ್ಲಿವೆ. ಇಂದಿಗೆ ಇವು ತುಂಬ ಸರಳವಾದ, ನಾವು ಈಗಾಗಲೇ ತಿಳಿದುಕೊಂಡಿರುವ ಸೂತ್ರಗಳಂತೆ ಕಾಣಬಹುದು. ಆದರೆ ಚೆಕಾವ್ ಇವುಗಳನ್ನು ೧೮೮೦ರಷ್ಟು ಹಿಂದೆಯೇ ಹೇಳಿದ್ದ ಎಂಬುದನ್ನಿಲ್ಲಿ ನೆನೆಯಬೇಕು.

ವಿವರಗಳು

ಕತೆಯ ಮೊದಲ ಭಾಗದಲ್ಲಿ ಗೋಡೆಯ ಮೇಲೆ ಒಂದು ಗನ್ ಕಾಣಿಸಿಕೊಂಡರೆ, ಕತೆಯ ಕೊನೆಗೆ ಅದು ಗುಂಡು ಉಗುಳಬೇಕು.

ನನಗೆ ಅನ್ನಿಸುವಂತೆ, ಪ್ರಕೃತಿಯ ವರ್ಣನೆಗಳು ಆದಷ್ಟೂ ಚಿಕ್ಕದಾಗಿ, ಸಂದರ್ಭಕ್ಕೆ ಒದಗುವಂತೆ ಬರಬೇಕು. “ಅಸ್ತಮಿಸುತ್ತಿರುವ ಸೂರ್‍ಯ, ಕಪ್ಪಿಡುತ್ತಿರುವ ಸಮುದ್ರದ ಅಲೆಗಳ ನಡುವೆ ಮುಳುಗುತ್ತಿದ್ದ , ಹೊಂಬಣ್ಣದ ಕಿರಣಗಳು ಚೆಲ್ಲಾಡಿದ್ದವು" ಮುಂತಾದ ತೀರಾ ಸಾಮಾನ್ಯ, ಬಳಸಿ ಸವಕಲಾದ ವರ್ಣನೆಗಳನ್ನು ತಪ್ಪಿಸಿ. ನಿಸರ್ಗದ ಬಣ್ಣನೆಯ ಹೊತ್ತಿನಲ್ಲೂ ತುಂಬಾ ಸೂಕ್ಷ್ಮ ವಿವರಗಳನ್ನು ಬಳಸಬಹುದು. ಅದು ಹೇಗಿರಬೇಕೆಂದರೆ, ಓದಿ ಬದಿಗಿಟ್ಟು ಕಣ್ಮುಚ್ಚಿ ಕಲ್ಪಿಸಿಕೊಂಡರೆ ಅದು ಒಟ್ಟು ಸಂದರ್ಭ ನೆನಪಾಗಬಲ್ಲಂತಿರಬೇಕು. ಉದಾಹರಣೆಗೆ, ಬೆಳದಿಂಗಳ ರಾತ್ರಿಯ ಕಲ್ಪನೆಯನ್ನು ಈ ಬಗೆಯ ವಿವರಗಳಿಂದ ಕಟ್ಟಿಕೊಡಬಹುದು- ‘ನೀರಿನ ಮೇಲೆ ತೇಲುತ್ತಿದ್ದ ಬಾಟಲಿಯ ಚೂರು ನಕ್ಷತ್ರದಂತೆ ಮಿನುಗಿತು, ದೂರದಲ್ಲಿ ತೋಳದ ಕಪ್ಪು ನೆರಳು ಚೆಂಡಿನಂತೆ ಉರುಳಿಹೋಯ್ತು...’ ಇತ್ಯಾದಿ. ಮನಶ್ಶಾಸ್ತ್ರದ ದೃಷ್ಟಿಯಿಂದಲೂ ವಿವರಗಳು ಬೇಕು. ದೇವರು ನಿಮ್ಮನ್ನು ಕ್ಲೀಷೆಗಳಿಂದ ಕಾಪಾಡಲಿ !

ಕತೆಯ ಪಾತ್ರಗಳ ಮಾನಸಿಕ, ಆಧ್ಯಾತ್ಮಿಕ ವಿವರಗಳನ್ನೇನೂ ನೀವು ನೀಡಬೇಕಾಗಿಲ್ಲ. ಅದು ಅವರ ವರ್ತನೆಗಳಿಂದಲೇ ಹೊರ ಹೊಮ್ಮುವಂತಿರಬೇಕು. ಒಮ್ಮೆಗೇ ಹಲವಾರು ಪಾತ್ರಗಳನ್ನು ತರುವುದೂ ಬೇಡ. ಎಲ್ಲ ಗುರುತ್ವಬಲವೂ ಈ ಎರಡರ ನಡುವೆಯೇ ಇರುತ್ತದೆ- ಅವನು ಮತ್ತು ಅವಳು.

- ೧೮೮೬ ಮೇ ೧೦ರಂದು ಬರೆದ ಒಂದು ಪತ್ರ


ಕಲೆಗಾರನ ಕೆಲಸ

ಕಲೆಗಾರನೊಬ್ಬ ತನ್ನ ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಕಟೆಯಬೇಕು ಎಂಬ ನಿನ್ನ ವಾದವನ್ನು ನಾನು ಒಪ್ಪುತ್ತೇನೆ. ಆದರೆ, ‘ಸಮಸ್ಯೆಯ ಪರಿಹಾರ’ ಮತ್ತು ‘ಸಮಸ್ಯೆಯ ಸಮರ್ಪಕವಾದ ಮಂಡನೆ’- ಈ ಎರಡು ವಿಚಾರಗಳಲ್ಲಿ ನಿನಗೆ ಗೊಂದಲವಿದೆ. ಕಲೆಗಾರನಿಗೆ ಎರಡನೆಯದಷ್ಟೇ ಬೇಕಾಗಿರುವುದು.

- ಅಲೆಕ್ಸಿ ಸುವೊರಿನ್‌ಗೆ ಬರೆದ ಪತ್ರ, ೧೮೮೮ ಅಕ್ಟೋಬರ್ ೨೭


ಸಿದ್ಧಾಂತ

ನನ್ನ ಕತೆಯ ಸಾಲುಗಳ ಮಧ್ಯೆ ಸಿದ್ಧಾಂತವೊಂದನ್ನು ಹುಡುಕಲು ಯತ್ನಿಸುವವರನ್ನು ಕಂಡರೆ ನನಗೆ ಭಯ. ಇಂಥವರು ನಾನು ಉದಾರವಾದಿಯೋ, ಸಂಪ್ರದಾಯವಾದಿಯೋ ಎಂಬುದನ್ನು ಕಂಡುಹಿಡಿಯಲು ಯತ್ನಿಸುತ್ತಾರೆ. ನಾನು ಉದಾರವಾದಿಯೂ ಅಲ್ಲ, ಸಂಪ್ರದಾಯವಾದಿಯೂ ಅಲ್ಲ. ಸಂತನೂ ಅಲ್ಲ, ವಿಶಿಷ್ಟತಾವಾದಿಯೂ ಅಲ್ಲ. ನಾನು ಮುಕ್ತ ಕಲಾಕಾರನಲ್ಲದೆ ಬೇರೇನೂ ಆಗಲು ಬಯಸುವುದಿಲ್ಲ. ಆದರೆ ಅಂಥ ಶಕ್ತಿ ದೇವರು ನನಗೆ ನೀಡಿಲ್ಲ ಎಂಬುದು ವಿಷಾದಕರ.

- ಅಲೆಕ್ಸಿ ಲೆಷೆಯೇವ್‌ಗೆ ಬರೆದ ಪತ್ರ, ೧೮೮೮ ಅಕ್ಟೋಬರ್ ೪


ನ್ಯಾಯಾಶನಲ್ಲ, ಸಾಕ್ಷಿ

ನನ್ನ ಕೆಲವು ಕತೆಗಳಲ್ಲಿ ನಾನು ಏನು ಹೇಳಲು ಉದ್ದೇಶಿಸಿದ್ದೆ ಎಂದು ಕೇಳುವವರಿದ್ದಾರೆ. ಇಂಥ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ಬರೆಯುವುದು ನನ್ನ ಕಾಳಜಿ, ಬೋಸುವುದಲ್ಲ. ನಾನು ಯಾವುದರ ಬಗ್ಗೆ ಬರೆಯಬೇಕೆಂದು ಹೇಳಿ, ಬರೆಯುತ್ತೇನೆ. ಮೇಜಿನ ಮೇಲಿರುವ ಈ ಬಾಟಲಿಯ ಬಗ್ಗೆ ಬರೆಯಲು ಹೇಳಿ, ‘ಬಾಟಲಿ’ ಎಂಬ ಹೆಸರಿನ ಕತೆ ಬರೆದು ಕೈಗಿಟ್ಟುಬಿಡುತ್ತೇನೆ. ಪ್ರಾಮಾಣಿಕ ಅನುಭವ ವಿವರಗಳಿಂದ ಕೂಡಿದ ಪ್ರತಿಮೆಗಳು ಚಿಂತನೆಯನ್ನು ಸೃಜಿಸಬಲ್ಲವು, ಆದರೆ ಚಿಂತನೆಯು ಪ್ರತಿಮೆಯನ್ನಲ್ಲ. ದೇವರು, ಆಸ್ತಿಕತೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವುದು ಬರಹಗಾರನ ಕೆಲಸವಲ್ಲ. ಯಾರು ಯಾವಾಗ ಎಂಥ ಸಂದರ್ಭದಲ್ಲಿ ದೇವರ ಬಗೆಗೆ ಅಥವಾ ಆಸ್ತಿಕತೆಯ ಬಗೆಗೆ ಹೇಗೆ ಚಿಂತಿಸಿದರು, ಹೇಗೆ ನಡೆದುಕೊಂಡರು ಎಂಬುದನ್ನು ಹೇಳುವುದಷ್ಟೇ ನಮ್ಮ ಕೆಲಸ. ತನ್ನ ಪಾತ್ರಗಳ ನ್ಯಾಯಾಶನಾಗುವುದಲ್ಲ, ಪಕ್ಷಪಾತರಹಿತನಾದ ಸಾಕ್ಷಿಯಾಗುವುದು.

- ಅಲೆಕ್ಸಿ ಸುವೊರಿನ್‌ಗೆ ಬರೆದ ಪತ್ರ, ೧೮೮೮ ಮೇ ೩೦


ತಣ್ಣಗೆ ಹೇಳಿ

ದುಃಖಿಗಳು ಮತ್ತು ನಿರ್ಭಾಗ್ಯವಂತರ ಬಗ್ಗೆ ನೀವು ಬರೆಯುತ್ತಿದ್ದೀರಿ, ಓದುಗನಲ್ಲಿ ಅವರ ಬಗ್ಗೆ ಸಹಾನುಭೂತಿ ಉಕ್ಕಬೇಕಾಗಿದೆ ಎಂದಿಟ್ಟುಕೊಳ್ಳಿ. ಕತೆಯನ್ನು ತಣ್ಣಗೆ ಹೇಳಲು ಯತ್ನಿಸಿ. ಇನ್ನೊಬ್ಬರ ದುಃಖಕ್ಕೆ ಅದು ಹಿನ್ನೆಲೆಯಾಗಿ ಅದರಿಂದಲೇ ಪಾತ್ರದ ದುಃಖವು ಎದ್ದು ಕಾಣಿಸುತ್ತದೆ. ಅಂದರೆ ನಿಮ್ಮ ಪಾತ್ರದ ಬಿಕ್ಕಳಿಕೆಗೆ ನೀವು ನಿಟ್ಟುಸಿರು ಬಿಡಬಹುದಷ್ಟೇ. ಹೆಚ್ಚು ತಣ್ಣಗಿರಿ, ವಿವರಗಳಿಗೆ ನಿಷ್ಠರಾಗಿದ್ದಷ್ಟೂ ನೀವು ಹೆಚ್ಚು ಪರಿಣಾಮ ಬೀರಬಲ್ಲಿರಿ.

- ಲಿಡಿಯಾ ಅವಿಲೊವಾಗೆ ಬರೆದ ಪತ್ರ, ೧೮೯೨ ಏಪ್ರಿಲ್ ೨೯


ವಿಶೇಷಣವೇಕೆ ?

ಇದೊಂದು ಉಪದೇಶ: ನೀನು ಬರೆದದ್ದರ ಪ್ರೂಫ್ ನೋಡುವಾಗ ಅದರಲ್ಲಿರುವ ಗುಣವಾಚಕಗಳು ಹಾಗೂ ಕ್ರಿಯಾವಿಶೇಷಣಗಳನ್ನು ಎಷ್ಟು ಸಾಧ್ಯವೋ ಅಷ್ಟು ಕಿತ್ತುಹಾಕು. ಇವು ಎಂಥ ಅಡ್ಡಿಗಳೆಂದರೆ, ಇದರಿಂದ ಓದುಗ ಬರಹವನ್ನು ಬದಿಗಿಟ್ಟು ಎದ್ದು ಹೋಗುತ್ತಾನೆ.

“ಅವನು ಹುಲ್ಲಿನ ಮೇಲೆ ಕುಳಿತಿದ್ದ" ಎಂದು ನಾನು ಬರೆದರೆ ಅದು ಸ್ಪಷ್ಟವಾಗಿ ಅರ್ಥವಾಗುತ್ತದೆ ಮತ್ತು ಓದುಗನ ಲಕ್ಷ್ಯವನ್ನು ಕತ್ತರಿಸುವುದಿಲ್ಲ. “ಪಾದಚಾರಿಗಳು ಈಗಾಗಲೇ ಬೇಕಾದಷ್ಟು ಓಡಾಡಿ ತುಳಿದುಹಾಕಿದ್ದ ಹಸಿರು ಹುಲ್ಲಿನ ಮೇಲೆ ಎತ್ತರದ, ಸಪೂರ ಎದೆಯ, ಕೆಂಪು ಗಡ್ಡದ ಆ ಮನುಷ್ಯ ಆತಂಕದಿಂದ ಸುತ್ತಮುತ್ತಲನ್ನು ಗಮನಿಸುತ್ತ ಮೌನವಾಗಿ ಕುಳಿತಿದ್ದ"- ಹೀಗೆ ಬರೆದರೆ ಓದುವುದೂ, ಮೆದುಳನ್ನು ಒಂದೆಡೆ ಹಿಡಿದಿಡುವುದೂ ಕಷ್ಟಸಾಧ್ಯ. ಪ್ರಜ್ಞೆ ಇಷ್ಟೊಂದು ವಿವರವನ್ನು ಒಮ್ಮೆಲೇ ಖಂಡಿತ ಹಿಡಿದಿಡಲಾರದು.

ಮನುಷ್ಯನನ್ನು ತಕ್ಷಣವೇ ಆಕರ್ಷಿಸುವಂತೆ ಮಾಡುವುದೇ ಕಲೆ. ನೀನು ಸಹಜವಾಗಿಯೇ ಬರಹಗಾರ, ನಿನ್ನ ಆತ್ಮವೇ ಮೃದುವಾದುದು. ನಿಂದನೆ, ಕೂಗಾಟ, ಲೇವಡಿ, ಆಕ್ರೋಶ ನಿನ್ನ ಪ್ರತಿಭೆಗೆ ತಕ್ಕುದಲ್ಲ. ಆದ್ದರಿಂದ, ನಿನ್ನ ‘ಲೈಫ್’ ಕೃತಿಯ ಬರವಣಿಗೆಯಲ್ಲಿ ಅಲ್ಲಲ್ಲಿ ಕಾಣಿಸುವ ‘ಸೂಳೆಮಕ್ಕಳು’, ‘ಪಶುಗಳು’ ಮುಂತಾದ ವಿಶೇಷಣಗಳನ್ನೆಲ್ಲ ಇನ್ನೊಮ್ಮೆ ಪ್ರೂಫ್ ನೋಡುವಾಗ ತೆಗೆದುಹಾಕು.

- ಮ್ಯಾಕ್ಸಿಂ ಗಾರ್ಕಿಗೆ ಬರೆದ ಪತ್ರ, ೧೮೯೯ ಸೆಪ್ಟೆಂಬರ್ ೩


ವಿಮರ್ಶಕರು

ವಿಮರ್ಶಕರು ಎತ್ತುಗಳ ಮೈಮೇಲೆ ಹಾರಾಡುವ ಚಿಕ್ಕಾಡುಗಳಿದ್ದಂತೆ. ಎತ್ತು ತನ್ನ ಪಾಡಿಗೆ ತಾನಿದ್ದರೂ ಈ ನೊಣ ಅದರ ಮೇಲೆ ಹಾರಾಡುತ್ತ, ಗುಂಜಾರವ ಮಾಡುತ್ತ ಬೆನ್ನಿನ ಮೇಲೆ ಕುಳಿತು ಕುಟುಕುತ್ತದೆ. ಎತ್ತಿನ ಚರ್ಮ ಕಂಪಿಸುತ್ತದೆ, ಬಾಲ ಬೀಸುತ್ತದೆ. ನೊಣದ ಗೊಣಗಾಟ ಏನಿರಬಹುದು ? ಅಸ್ಥಿರವಾಗಿರುವುದು ಅದರ ಸ್ವಭಾವ. “ನೋಡು, ನಾನು ಜೀವಂತ ಇದ್ದೇನೆ. ನೋಡು, ನನಗೆ ನಿಂದಿಸುವುದು ಗೊತ್ತು, ನಾನು ಯಾರನ್ನು ಬೇಕಾದರೂ ಬಯ್ಯಬಲ್ಲೆ" ಎನ್ನುತ್ತದೆ.

ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಕತೆಗಳ ಬಗ್ಗೆ ಬರುತ್ತಿರುವ ವಿಮರ್ಶೆಗಳನ್ನು ಓದುತ್ತಲೇ ಇದ್ದೇನೆ. ಯಾವುದರಲ್ಲೂ ನೆನಪಿಡಬಹುದಾದ ಒಂದೇ ಒಂದು ಸಾಲು, ಒಳ್ಳೆಯ ಒಂದು ಸಲಹೆ ನನಗೆ ಸಿಕ್ಕಿಲ್ಲ. ಹ್ಹಾ, ನನ್ನ ಮೇಲೆ ಪ್ರಭಾವ ಬೀರಿದ ಒಂದು ಸಾಲು ನೆನಪಿದೆ, ಕಾಬಿಕೆವ್‌ಸ್ಕಿ ಬರೆದದ್ದು- “ಈ ಮನುಷ್ಯ ಕುಡಿದು ಗಟಾರದಲ್ಲಿ ಬಿದ್ದು ಸಾಯಲಿದ್ದಾನೆ" ಎಂದಾತ ಸರಿಯಾಗಿಯೇ ಭವಿಷ್ಯ ನುಡಿದಿದ್ದ !

- ಮ್ಯಾಕ್ಸಿಂ ಗಾರ್ಕಿಯ ‘ಆನ್ ಲಿಟರೇಚರ್’ ಕೃತಿಯಲ್ಲಿ ಉಲ್ಲೇಖ

Tuesday, August 12, 2008

ಸಿದ್ದೇಶ್ವರನೂ, ದರ್ಗಾ ದೇವರೂ
ಶ್ರೀರಾಮನು ಕೃತಯುಗದಲ್ಲಿ ಶರಯಂ ದಾಟುವುದಕ್ಕೆ ಬಳಸಿದಂಥ ಪರಮಾಯಿಷಿ ಬಂಡೆಗಳಿಂದ ಕೂಡಿದುದೂ, ಭೂಮಿಯಿಂದ ಮುಗಿಲಿನೆತ್ತರಕ್ಕೆ ತನ್ನ ಶಿಖರವಂ ಚಾಚಿ ಹೆದರಿಸುತ್ತಿರುವುದೂ, ರುದ್ರಭಯಾನಕವೂ ಬೀಭತ್ಸವೂ ಆದ ಬೆಟ್ಟದ ಬುಡದಲ್ಲಿ ನಾವು ನಿಂತು ಅದನ್ನು ಹೀಗೆ ಅವಲೋಕಿಸುತ್ತಿರಲಾಗಿ... ಸಂಡೇ ಮಾರ್ನಿಂಗ್ ಹತ್ತು ಗಂಟೆಯಾಗಿತ್ತು. ಹೊಗೆ ಧೂಳು ಜನರಿಂದ ತುಂಬಿ ಗಿಜಿಗುಟ್ಟುವ ಬೆಂಗಳೂರಿನಿಂದ ಹೇಗಾದರೂ ಪಾರಾಗಬೇಕೆಂದು ನಾವೊಂದು ಹತ್ತಾರು ಹುಡುಗರು ಬೈಕುಗಳನ್ನೇರಿ ಸಿಟಿಯಿಂದ ಐವತ್ತು ಕಿ.ಮೀ. ದೂರದಲ್ಲಿರುವ ಬೆಟ್ಟದ ಬುಡ ತಲುಪಿದ್ದೆವು.


ಬೆಟ್ಟದ ಒಂದು ಬದಿಯಿಂದ ಪಾವಟಿಗೆ ಏರಿ ಜನ ಹೋಗುತ್ತಿದ್ದರು. ಎಲ್ಲರೂ ಹೋದ ದಾರಿಯಲ್ಲಿ ನಾವೂ ಹೋದರೆ ಅದು ಚಾರಣ ಹೇಗಾಗುತ್ತದೆ ? ಬೆಟ್ಟದ ಇನ್ನೊಂದು ಬದಿಯಲ್ಲಿ ತುದಿಯವರೆಗೂ ಮುಳ್ಳುಕಂಟಿ, ಕುರುಚಲು, ಬಂಡೆಗಳೇ ತುಂಬಿ ಕಾಲಿಡಲು ತೆರಪಿರಲಿಲ್ಲ. ನಮಗಂತೂ ಅದೇ ಬೇಕಿತ್ತು. ಎಂಟು ಹುಡುಗರು, ಮೂವರು ಹುಡುಗಿಯರ ಜೈತ್ರಯಾತ್ರೆ ಮುಳ್ಳುಗಿಡಗಳಿಗೆ ಬಯ್ಯುತ್ತ ಆರಂಭವಾಯಿತು.


ತುಸು ಎತ್ತರಕ್ಕೆ ಏರುವಷ್ಟರಲ್ಲೇ ನಮ್ಮ ಗುಂಪಿನ ಹುಡುಗಿಯರ ಪಾದಾರವಿಂದಗಳು ಮುಳ್ಳು ತರಚಿ ರಕ್ತರಂಜಿತವಾಗಿ ಕಂಗೊಳಿಸಿದವು. ಅವರ ಸುಕೋಮಲವಾದ ಮುಖದ ಮೇಲೆಲ್ಲ ಮುಳ್ಳುಗಳು ಹರಿದಾಡಿ ಮುತ್ತಿಕ್ಕಿ ನಮ್ಮಲ್ಲಿ ಈರ್ಷ್ಯೆ ಹುಟ್ಟಿಸದೆ ಇರಲಿಲ್ಲ. ಈ ಹುಡುಗಿಯರನ್ನು ಬಂಡೆ ಹತ್ತಿಸುವ ನೆವದಲ್ಲಿ ಅವರ ಮೃದುಮಧುರ ಕುಸುಮಸಮವಾದ ಕರಕಮಲಗಳ ಹಾಗೂ ಪಾದಕಮಲಗಳ ಸ್ಪರ್ಶದ ಭಾಗ್ಯವು ನಮ್ಮದಾಯಿತು. ಬೆವರಿದುದರಿಂದ ತನುಗಂಧವೂ ತಂಗಾಳಿಯೂ ತೀಡಿತು.


‘ಬೆಂಗಳೂರ್ ಮಿರರ್’ನ ಶ್ರೀಧರ್ ವಿಡಿಯೋ ಕೆಮರಾ ಹಿಡಿದು, ‘ಹೀಗೆ ಬನ್ನಿ, ಹಾಗೆ ಬನ್ನಿ’ ಎಂದು ನಿರ್ದೇಶಿಸುತ್ತಾನಾವೆಲ್ಲಾ ಸಾಧ್ಯವಾದಷ್ಟೂ ಬಂಡೆಯ ಎಡೆಯಲ್ಲೂ ಕೊರಕಲಿನಲ್ಲೂ ಮುಳ್ಳುಗಿಡಗಳ ಮೇಲಿನಿಂದಲೂ ಮೈಕೈ ತರಚಿಸಿಕೊಂಡು ಪರಚಿಸಿಕೊಂಡೇ ಬರುವಂತೆ ನಿಗಾ ವಹಿಸಿದರು. ಇಷ್ಟೆಲ್ಲಾ ಮಾಡಿ, ಗುಡ್ಡದ ತುದಿ ಎಂದು ಭಾವಿಸಿದಲ್ಲಿ ಮೇಲೆ ಬಂದು ನೋಡಿದರೆ, ಬೆಟ್ಟ ಇನ್ನೂ ಅರ್ಧಾಂಶವೂ ಮುಗಿದಿರಲಿಲ್ಲ. ಅಲ್ಲಿಂದ ಬಳಿಕ ಬಂಡೆಗಳು ೯೦ ಡಿಗ್ರಿ ಕೋನದಲ್ಲಿ ನಿಂತಿದ್ದರಿಂದ ಅವುಗಳ ಮೇಲೆ ಏರುವಂತೆಯೂ ಇರಲಿಲ್ಲ. ಅನಿವಾರ್‍ಯವಾಗಿ ಪಕ್ಕಕ್ಕೆ ಬಂದು ಮಾಮೂಲಿ ಯಾತ್ರಿಕರು ನಡೆಯುವ ಮೆಟ್ಟಿಲುಗಳ ದಾರಿಯನ್ನೇ ಹಿಡಿದೆವು.


ಇದು ಬೆಂಗಳೂರು- ತುಮಕೂರು ರಸ್ತೆಯ ಪಕ್ಕದಲ್ಲಿರುವ ಸಿದ್ದರಬೆಟ್ಟ. ಗುಡ್ಡದ ತುದಿಯಲ್ಲಿ ಸಿದ್ದೇಶ್ವರ ಸ್ವಾಮಿಯ ಗುಡಿಯಿದೆ. ಗುಡಿಯೆಂದರೆ ಗುಡಿಯಲ್ಲ- ಚಪ್ಪರದಂತೆ ಹಾಸಿದ ಬಂಡೆಗಳ ನಡುವೆ ಪೂಜಿಸಲ್ಪಡುವ ಒಂದು ಕಲ್ಲು. ನಾವು ಹೋದ ದಿನ ಭಕ್ತರು ಬೆಟ್ಟ ಏರಿ ಬಂದು ದೇವರ ಮುಂದೆ ಕೋಳಿ, ಕುರಿ ಬಲಿ ಕೊಟ್ಟು ಬೆಟ್ಟದ ಕೆಳಗೆ ಕೊಂಡೊಯ್ದು ಅಡುಗೆ ಮಾಡಿ ಉಣ್ಣುತ್ತಿದ್ದರು. ದೇವರ ಮುಂದಿನ ನೆಲದ ಮಣ್ಣು ರಕ್ತದಿಂದ ತೊಯ್ದು ಕೆಸರಾಗಿತ್ತು. ಒಂದಿಬ್ಬರು ಕುಂತುಕೊಂಡು ನಿರಂತರವಾಗಿ ತಮಟೆ ಬಾರಿಸುತ್ತಿದ್ದರು. ಅಲ್ಲಿ ಪೂಜಾರಿಯಾಗಲೀ ಪೂಜೆಯಾಗಲೀ ಕಾಣಿಸಲಿಲ್ಲ. "ಬ್ರಾಂಬ್ರೂ ಲಿಂಗಾಯಿತ್ರೂ ಬಂದ್ರೆ ತರಕಾರಿ ಅಡುಗೆ ಮಾಡ್ಕೊಂಡೋಯ್ತಾರೆ. ಶೂದ್ರರು ಮರಿ, ಕೋಳಿ ಕೂದು ಉಣ್ತಾರೆ. ಗುರುವಾರ ಶನಿವಾರ ಜನ ಬರೋದು ಹೆಚ್ಚು" ಎಂಬ ವಿವರವೂ ಇಲ್ಲೇ ಸಿಕ್ಕಿತು.


ಸಿದ್ದೇಶ್ವರ ಸ್ವಾಮಿಯ ಆಚೆ ಪಕ್ಕದಲ್ಲೇ ‘ದರ್ಗಾ ದೇವರು’ ಇದ್ದರು. ಇದೂ ಕೂಡ ಮಸೀದಿಯಲ್ಲ. ಬಂಡೆಗಳ ಕೆಳಗೆ ಒಂದು ಗೋರಿಯಂಥ ರಚನೆ, ಹಸಿರು ಹೊದಿಕೆ, ಕಾಣಿಕೆ ಡಬ್ಬಿ- ಇಷ್ಟೆ. ಜನಪದೀಯ ಸಿದ್ದ ದೇವರೂ ಸಾಬರ ದೇವರೂ ಇಲ್ಲಿ ಏಟೋ ವರ್ಷಗಳಿಂದ ಅಕ್ಕಪಕ್ಕದಲ್ಲೇ ಕುಂತು ಮಾತಾಡಿಕೋತ ನಕ್ಕು ಮಲಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಇಲ್ಲಿ ಬಂದ ಹಿಂದೂಗಳೂ ಮುಸಲರೂ ತಾವು ಯಾವ ಜಾತಿಮತವೆಂಬುದನ್ನೂ ಮರೆತು ಇಲ್ಲಿರುವ ಎರಡೂ ದೇವರಿಗೆ ಕಾಯಿಕರ್ಪೂರ ಸಲ್ಲಿಸುತ್ತಾರೆ. ದರ್ಗಾದೇವರಿಗೆ ಕುಂಕುಮ ಹಚ್ಚಬೇಡಿರೆಂದೂ ಸಿದ್ದೇಶ್ವರನಿಗೆ ನಮಾಜು ಮಾಡಬೇಡಿರೆಂದೂ ಇನ್ನೂ ಯಾವ ತಲೆಮಾಸಿದ ಸಂಘಟನೆಯೂ ಇಲ್ಲಿ ಕ್ಯಾತೆ ತೆಗೆದಂತಿಲ್ಲ.


ಇಲ್ಲಿ ನಮಗೆ ಕಿರಣ ಎಂಬ ಅಲ್ಲಿನ ಪುಟ್ಟ ಹುಡುಗನೊಬ್ಬ ಗಂಟುಬಿದ್ದ. "ಇಲ್ಲೇ ಬೆಟ್ಟದ ಮ್ಯಾಲೆ ಕಲ್ಡಿಗಳದಾವೆ. ಗುಹೆ ತೋರುಸ್ತೀನಿ ಬನ್ನಿ" ಎಂದ. ಕುತೂಹಲದಿಂದ ಅವನನ್ನು ಹಿಂಬಾಲಿಸಿದ್ದಾಯಿತು. ಅಲ್ಲಿರುವ ಕಲ್ಲುಕಲ್ಲಿಗೂ ಏನೋ ಕತೆ ಕಟ್ಟಿ ನಮ್ಮನ್ನು ಯಾಮಾರಿಸಲು ನೋಡುತ್ತಿದ್ದ. ಒಂದು ಕಡೆ ಪಾಳು ಮಂಟಪವೊಂದರ ಮೇಲೆ ಬಿಳಲುಗಳನ್ನು ಬಿಟ್ಟುಕೊಂಡು ಕುಳಿತಿದ್ದ ಆಲದ ಮರವನ್ನು ತೋರಿಸಿ, "ಇದರೆಡೇಲಿ ನಾಣ್ಯ ಸಿಕ್ಕಿಸಿಬಿಟ್ಟು ಹೋದ್ರೆ ನಿಮ್ಮ ಆಶೆ ಇದ್ದಂಗೇ ಆಗ್ತದೆ" ಅಂದ. ಅಲ್ಲಿ ನಾಣ್ಯ ಸಿಕ್ಕಿಸಿದ ಗುರುತುಗಳಿದ್ದವು. ನಾವ್ಯಾರೂ ರೂಪಾಯಿ ಕಳೆದುಕೊಳ್ಳಲು ತಯಾರಿರಲಿಲ್ಲವಾದ್ದರಿಂದ ಅವನಿಗೆ ನಿರಾಶೆಯಾಯಿತು.


ಆಮೇಲೆ ಕಲ್ಡಿ ವಾಸಿಸುವ ಗುಹೆ ಅಂತ ಒಂದಷ್ಟು ಬಂಡೆಗಳ ಸಮೂಹ ತೋರಿಸಿದ. ಅಲ್ಲಿ ಕಲ್ಡಿಯೇನು, ಇಲಿ ಕೂಡ ಇರುವಂತೆ ಕಾಣಲಿಲ್ಲ. ಆದರೆ ಬಂಡೆಗೊಂದು ಕತೆ ಕಟ್ಟಿ ರಂಜಿಸುತ್ತಿದ್ದ ಈ ಹುಡುಗ ಮುಂದೆ ಒಬ್ಬ ಪ್ರತಿಭಾವಂತ ಕತೆಗಾರನಾಗುವ ಎಲ್ಲ ಸಾಧ್ಯತೆಯೂ ಕಂಡವು. ಆತನ ಚುರುಕುತನದಿಂದ ಖುಷಿಯಾಗಿ ನಾವು ದುಡ್ಡು ನೀಡದೆ ಇರಲಿಲ್ಲ.


ಬೆಟ್ಟದ ತುತ್ತ ತುದಿಯಲ್ಲಿ ಒಂದೆರಡು ಪಾಳು ಗುಡಿಗಳು, ಮಂಟಪಗಳೂ ಇದ್ದವು. ಇದೆಲ್ಲ ಒಂದು ಕಾಲದಲ್ಲಿ ತುಂಬ ಜನ ಓಡಿಯಾಡಿದ, ನೆಲೆನಿಂತ, ಪೂಜೆ ಸಲ್ಲಿಸಿಕೊಂಡ, ಕೀರ್ತಿ ಗಳಿಸಿಕೊಂಡ ಕಟ್ಟೋಣಗಳಾಗಿದ್ದಿರಬಹುದು. ಈಗ ಮಾತ್ರ ಅವುಗಳ ನಡುವಿನಿಂದ ಸೀಳಿಕೊಂಡು ಬರುವ ಗಾಳಿ ಪಾಳು ವಾಸನೆಯನ್ನೂ ಸ್ಮಶಾನದಿಂದ ಹೊರಬೀಳುವ ಸಿಳ್ಳಿನ ಶಬ್ದವನ್ನೂ ನೆನಪಿಸಿ ನಡುಗಿಸುತ್ತದೆ.


ಬೆಟ್ಟ ಇಳಿದು ಬರುವಾಗ ಪುಟ್ಟ ಪುಟ್ಟ ಮಕ್ಕಳೂ, ಮುಪ್ಪಾನು ಮುದುಕಿಯರೂ ಬೆಟ್ಟ ಹತ್ತಿ ಹೋಗುವುದು ಕಂಡಿತು. ಮುಖದ ಮೇಲೆ ನೂರಾರು ಸುಕ್ಕುಗಳನ್ನು ಧರಿಸಿ ಹಲವಾರು ಶತಮಾನಗಳಷ್ಟು ಹಳೆಯದಾಗಿರಬಹುದಾಗಿದ್ದ ಅಜ್ಜಿಯೊಬ್ಬಳು ತನ್ನನ್ನು ನಡೆಸುತ್ತಿದ್ದ ಮಗನಿಗೆ, "ನೀನು ಸಣ್ಣೋನಿದ್ದಾಗ..." ಅಂತ ಹಳೆಯ ಭೇಟಿಯ ಕತೆಯನ್ನು ನಮಲುತ್ತಿದ್ದಳು. ಅವನು ಕೋಳಿಯನ್ನು ತೂಗಾಡಿಸುತ್ತಾ "ಸಾಕು ನಡಿಯಬೇ" ಎನ್ನುತ್ತಿದ್ದ.
*

Sunday, August 3, 2008

ನನ್ನ ಭವಿಷ್ಯ ನಾನೇ ಬರೆಯುತ್ತೇನಾ ?


ಡಾ.ಆಮಿರ್ ಆಲಿ, ವಿದೇಶದಲ್ಲಿ ವೈದ್ಯಕೀಯ ಅಧ್ಯಯನ ಮುಗಿಸಿ ತಾಯ್ನಾಡಿಗೆ ಹಿಂತಿರುಗುತ್ತಿದ್ದಾನೆ. ಮುಂಬಯಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಕಾರಿಗಳಿಗೆ ಯಾಕೋ ಈತನನ್ನು ತಪಾಸಣೆ ಮಾಡಿದಷ್ಟೂ ಮುಗಿಯದು. "ಡಾಕ್ಟರ್, ಇಂಜಿನಿಯರ್‌ಗಳೇ ನಮ್ಮ ದೇಶದ ಮರ್‍ಯಾದೆ ಹೆಚ್ಚಿಸಿರೋದು" ಎಂಬುದು ಆತನ ವ್ಯಂಗ್ಯ. "ನನ್ನ ಹೆಸರು ಅಮರ್ ಎಂದಿದ್ದರೆ ನೀವು ಹೀಗೆಲ್ಲ ಮಾಡುತ್ತಿದ್ದಿರಾ" ಎಂಬುದು ರೋಸಿದ ಆಮಿರ್ ಆಲಿಯ ಪ್ರಶ್ನೆ.

ಏರ್‌ಪೋರ್ಟ್‌ನಿಂದ ಹೊರಗೆ ಬಂದರೆ ಆತನನ್ನು ರಿಸೀವ್ ಮಾಡಬೇಕಾದ ಮನೆಯವರಿಲ್ಲ. ಫೋನ್ ಮಾಡಿದರೆ ಮನೆಯಲ್ಲೂ ಯಾರೂ ಇಲ್ಲ. ಅಪರಿಚಿತನೊಬ್ಬ ಆತನೆಡೆಗೊಂದು ಮೊಬೈಲ್ ಎಸೆಯುತ್ತಾನೆ. ಅದಕ್ಕೆ ಬಂದ ಕರೆ, ತಾನು ಹೇಳಿದ್ದನ್ನು ಮಾಡುವಂತೆ ಆಮಿರ್‌ಗೆ ಆದೇಶಿಸುತ್ತದೆ. ಆಮಿರ್‌ನ ಎಲ್ಲ ವಿವರಗಳೂ ಆ ದನಿಗೆ ಗೊತ್ತು. ಆಮಿರ್ ಮನೆಯವರು ಆ ಧ್ವನಿಯ ಒಡೆಯನ ಹಿಡಿತದಲ್ಲಿದ್ದಾರೆ.

ಅಲ್ಲಿಂದ ಬಳಿಕ ಫೋನ್ ಕರೆಯ ನಿರ್ದೇಶನದಂತೆ ಆಮಿರ್ ನಡೆಯಬೇಕಾಗುತ್ತದೆ. ಆತನನ್ನು ಮುಂಬಯಿಯ ಬಡ ಮುಸ್ಲಿಂ ಜನತೆ ವಾಸಿಸುವ ಪ್ರದೇಶಗಳಲ್ಲಿ ಸುತ್ತಾಡಿಸುತ್ತದೆ ಆ ದನಿ. "ನೋಡಿದೆಯಾ ನಿನ್ನ ಸಮುದಾಯದವರು ಎಂಥ ಹೀನ ಬಾಳು ಬದುಕುತ್ತಿದ್ದಾರೆ ಎಂಬುದನ್ನು ?" ಎಂದು ಆ ಧ್ವನಿ ಇರಿಯುತ್ತದೆ. "ನಾನೂ ಬಡ ಕುಟುಂಬದವನೇ. ಆದರೆ ಸಾಧನೆಯ ಮೂಲಕ ಮೇಲೆ ಬಂದೆ. ಇವರೆಲ್ಲ ಹೀಗೇ ಉಳಿಯಬೇಕೆಂದು ಯಾರು ನಿರ್ಬಂಸಿದ್ದರು ?" ಎಂದು ಆಮಿರ್ ಮರು ಪ್ರಶ್ನಿಸುತ್ತಾನಾದರೂ ಅವನಿಗೆ ಉತ್ತರ ದೊರೆಯುವುದಿಲ್ಲ.

ಕೊನೆಗೆ ಆತನಿಗೊಂದು ಸೂಟ್‌ಕೇಸ್ ನೀಡಿ ಬಸ್‌ನಲ್ಲಿ ಅದನ್ನು ಕೊಂಡೊಯ್ಯುವಂತೆ ಹೇಳಲಾಗುತ್ತದೆ. ಅದರಲ್ಲಿ ಬಾಂಬ್ ಇದೆ. ಅದನ್ನು ಜನ ತುಂಬಿದ ಬಸ್‌ನಲ್ಲಿ ಇಟ್ಟು ಆತ ಇಳಿಯಬೇಕು. ಅದು ಸೋಟಿಸಲು ಎರಡೇ ನಿಮಿಷಗಳಿವೆ. ಈ ಕೆಲಸ ಮಾಡದಿದ್ದರೆ ಆಮಿರ್‌ನ ಮನೆಯವರು ಉಳಿಯುವುದು ಅನುಮಾನ.

*
ನಿಮಗೀಗಾಗಲೇ ಗೊತ್ತಾಗಿರಬಹುದು. ಇದು ಹಿಂದಿಯ ‘ಆಮಿರ್’ ಚಲನಚಿತ್ರದ ಕತೆ. ಕತೆಯ ಅಂತಸ್ಸತ್ವ ಇರುವುದೇ ಕೊನೆಯ ಎರಡು ನಿಮಿಷಗಳಲ್ಲಿ. ಅಲ್ಲಿಯವರೆಗೂ ಈ ಚಿತ್ರ ನಿಮ್ಮನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ಆಮಿರ್ ಹಾಗೂ ಭೂಗತ ನಾಯಕ ಎರಡೇ ಇದರ ಪ್ರಮುಖ ಪಾತ್ರಗಳು. ಉಳಿದವೆಲ್ಲಾ ಕ್ಷಣಮಾತ್ರದಲ್ಲಿ ಹಾದು ಹೋಗುವ ಪಾತ್ರಗಳಾದುದರಿಂದ ಚಿತ್ರಕ್ಕೊಂದು ಶೀಘ್ರಗತಿ ಸಿಕ್ಕಿದೆ. ಸೂಕ್ಷ್ಮ ಸಂವೇದಿ ಕತೆ, ಬಿಗಿಯಾದ ನಿರೂಪಣೆ, ಅಭಿನಯ- ಇವೆಲ್ಲವುಗಳ ಬಗ್ಗೆ ಹೇಳಬೇಕಾಗಿಯೇ ಇಲ್ಲ.

ನಾನು ಈ ಫಿಲಂ ನೋಡಿದ್ದು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸೋಟ ನಡೆದ ಆಸುಪಾಸಿನಲ್ಲಿ. ಆಮೇಲೆ ಅಹಮದಾಬಾದ್‌ನಲ್ಲಿ ಸೋಟ, ಸಾವುನೋವು, ಸೂರತ್‌ನಲ್ಲಿ ಆತಂಕದ ಗುಮ್ಮ. ಇವೆಲ್ಲ ‘ಕೆಂಪಾಗಿ’ರುವಾಗಲೇ ನಾನು ಇದನ್ನು ನೋಡಿದ್ದು. ಈ ಫಿಲಂ ಹಾಗೂ ಅದರ ಸಂದರ್ಭಗಳು ಒಂದು ವಿಲಕ್ಷಣವಾದ ತಲ್ಲಣ ಉಂಟುಮಾಡಿದವು. ಚಿತ್ರದ ಶೀರ್ಷಿಕೆಯಡಿ ಇರುವ "ಮನುಷ್ಯ ತನ್ನ ಭವಿಷ್ಯ ತಾನೇ ಬರೆದುಕೊಳ್ಳುತ್ತಾನೆ ಎಂದು ಹೇಳಿದವರ್‍ಯಾರು ?" ಎಂಬ ಉಪಶೀರ್ಷಿಕೆಯ ಅನೇಕ ಅರ್ಥಗಳು ಹೊಳೆಯತೊಡಗಿದವು.

ಈ ಚಲನಚಿತ್ರದ ಆಮಿರ್‌ನಂತೆ ನಾವೂ ಅಸಂಗತ ಪರಿಸ್ಥಿತಿಯಲ್ಲಿ ಇದ್ದೇವೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಾಂಬುಗಳು ಬಂದು ನಮ್ಮ ನಿಮ್ಮ ಮನೆಯ ಪಕ್ಕದಲ್ಲೇ ಸೋಟಿಸುತ್ತವೆ. ಅದರಲ್ಲಿ ಸಾಯುವ ಅಥವಾ ಗಾಯಗೊಳ್ಳುವವರ ಪಟ್ಟಿಯಲ್ಲಿ ನಾನೂ ನೀವೂ ಸೇರಿಸಿದಂತೆ ಯಾರೂ ಇರಬಹುದು. ಕೊಲ್ಲವವರಿಗೆ ತಾವು ಯಾರನ್ನು ಯಾಕೆ ಕೊಲ್ಲುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಸಾಯುವವರಿಗೂ ತಾವು ಯಾರಿಂದ ಯಾಕೆ ಸಾಯಿಸಲ್ಪಡುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಇದಕ್ಕಿಂತ ಅಸಂಗತ ವಿವರ ಇನ್ನೊಂದಿರಲು ಸಾಧ್ಯವೆ ?

ಇಂಥ ಅಸಂಗತ ಪರಿಸ್ಥಿಯ ಬಗ್ಗೆ ಕನ್ನಡದಲ್ಲಿ ಸೊಗಸಾಗಿ ಬರೆದವರು ಪೂರ್ಣಚಂದ್ರ ತೇಜಸ್ವಿ. ಅವರ ‘ಜುಗಾರಿ ಕ್ರಾಸ್’ ನೋಡಿ. ಒಂದಕ್ಕೊಂದು ಸಂಬಂಧವಿಲ್ಲದ ಘಟನಾವಳಿಗಳು ಹಾಗೂ ಪಾತ್ರಗಳು ಕಾದಂಬರಿಯ ಹಂದರವನ್ನು ಕಟ್ಟುತ್ತವೆ. ‘ಚಿದಂಬರ ರಹಸ್ಯ’ದಲ್ಲೂ ಇದೇ ಆಗುವುದು. ಕಾದಂಬರಿಯ ಕೊನೆಗೆ ಬೆಟ್ಟ ಹತ್ತಿ ಪಾರಾಗಿ ಏದುಸಿರು ಬಿಡುವ ರಫೀಕ್ ಮತ್ತು ಜಯಂತಿಯರಿಗೆ ತಮ್ಮ ಪ್ರೇಮಕ್ಕೂ ತಮ್ಮೂರಿನ ಬೆಂಕಿಗೂ ಹಿಂದೆ ಘಟನಾ ಪರಂಪರೆಯೊಂದು ಇದೆ ಎಂಬುದು ಗೊತ್ತೇ ಇಲ್ಲ. ‘ನಿಗೂಢ ಮನುಷ್ಯರು’ ಕತೆಯ ಜಗನ್ನಾಥ, ರಂಗಣ್ಣ, ಗೋಪಾಲಯ್ಯ ಎಲ್ಲರೂ ಇಂಥ ನಿಗೂಢ ಅಸಂಗತ ಪ್ರವಾಹವೊಂದರ ಸುಳಿಯಲ್ಲಿ ಸಿಲುಕಿದವರೇ.

ಇದನ್ನು ‘ಅಸಂಗತ’ ಎನ್ನುವುದಕ್ಕಿಂತ ಬೇರೊಂದು ಬಗೆಯಲ್ಲೂ ವ್ಯಾಖ್ಯಾನಿಸಬಹುದು. ಯಾವುದೋ ರೀತಿಯಲ್ಲಿ ಒಂದಕ್ಕೊಂದು ಹೆಣೆದುಕೊಂಡ, ಆದರೆ ಅರ್ಥೈಸಲು ಜಟಿಲವಾದ ಘಟನಾವಿನ್ಯಾಸದಲ್ಲಿ ಆಧುನಿಕ ಮನುಷ್ಯನ ಬದುಕು ಹೆಣೆದುಕೊಂಡಿದೆ. ಇದನ್ನು ಕನ್ನಡದಲ್ಲಿ ಎಲ್ಲರಿಗಿಂತ ಮೊದಲು ಗುರುತಿಸಿ, ಬರೆದವರು ತೇಜಸ್ವಿ.

ವಾಸ್ತವ ಬದುಕಿನ ಭಯಾನಕತೆಯನ್ನು ಸ್ಪಷ್ಟಪಡಿಸಿಕೊಳ್ಳಲು ನಾವು ಸಿನೆಮಾ, ಸಾಹಿತ್ಯದ ಮೊರೆ ಹೋಗಲೇಬೇಕು !