Sunday, December 11, 2011
ಕನ್ನಡ ಸಾಹಿತ್ಯ ಸಮ್ಮೇಳನ: ಪಾಮರನ ಪ್ರಶ್ನೆಗಳು ಮತ್ತು ತಕರಾರುಗಳು
Monday, December 5, 2011
ತಾರಾಲೋಕದಿಂದ ‘ದೇವ್’ಲೋಕದತ್ತ
‘ಗಾತಾ ರಹೇ ಮೇರಾ ದಿಲ್’ ಎಂಬ ಅವರ ಕೂಗಿಗೆ ಕಾಡು ಕಣಿವೆಗಳು ಸ್ಪಂದಿಸಿವೆ. ‘ದಿನ್ ಢಲ್ ಜಾಯೆ ಹಾಯೇ ರಾತ್ ನ ಜಾಯೆ...’ ಎಂದು ವಿಸ್ಕಿ ಸುರಿದುಕೊಳ್ಳುತ್ತ ಆರ್ತನಾಗಿ ಹಾಡುತ್ತಿದ್ದಾನೆ ಹೀರೋ. ಮುಹಮ್ಮದ್ ರಫಿಯ ಹಾಡಿನ ಮಧುರ ಕಂಪನದೊಂದಿಗೆ ತಟ್ಟುತ್ತಿರುವ ‘ಗೈಡ್’ನ ದುರಂತಕ್ಕೆ ಅಲ್ಲೆಲ್ಲೋ ದೂರದಲ್ಲಿ ನಲುಗಿದ್ದಾಳೆ ವಹೀದಾ ರೆಹಮಾನ್. ‘ವಹಾಂ ಕೌನ್ ತೇರಾ ಮುಸಾಫಿರ್’ ಎಂದು ತಾನರಿಯದ ಗಮ್ಯದೆಡೆಗೆ ಸಾಗುತ್ತಿದ್ದಾನೆ ನಾಯಕ. ‘ಮಾನಾ ಜನಾಬ್ ನೆ ಪುಕಾರಾ ನಹೀಂ’ ಎಂದು ಸೈಕಲ್ ಮೇಲೆ ನಾಯಕಿಯ ಬೆನ್ನು ಹತ್ತುತ್ತಿದ್ದಾನೆ ‘ಪೇಯಿಂಗ್ ಗೆಸ್ಟ್’. ‘ಫೂಲೋಂ ಕೆ ರಂಗ್ ಸೆ ದಿಲ್ ಕಿ ಕಲಂ ಸೆ’ ಎಂದು ಹಾಡಿ ಕುಣಿಯುವ ‘ಪ್ರೇಮ ಪೂಜಾರಿಯ’ ಉಲ್ಲಾಸಕ್ಕೆ ಮಕ್ಕಳೂ ಸ್ಪಂದಿಸುತ್ತಿವೆ.
ದೇವಾನಂದ್ ಎಂದ ಕೂಡಲೆ ಹೀಗೆ ಸಾಲು ಸಾಲು ನೆನಪುಗಳು.
ನಮ್ಮ ಪ್ರೇಕ್ಷಕನಿಗೆ ರಾಜ್‌ಕಪೂರ್‌ನ ಅಲೆಮಾರಿತನ ಇಷ್ಟ. ಶಮ್ಮಿ ಕಪೂರ್‌ನ ಧಾಳಾಧೂಳಿ ಇಷ್ಟ. ಶಶಿಕಪೂರ್‌ನ ಕಿಲಾಡಿತನ, ಅಮಿತಾಭ್ ಬಚ್ಚನ್‌ನ ನವಯುವಕನ ಸಿಟ್ಟು, ಧರ್ಮೇಂದ್ರನ ಅಬ್ಬರ... ಎಲ್ಲವೂ ಇಷ್ಟ. ಆದರೆ ದೇವಾನಂದ್‌ನ ಪ್ರಣಯ ಇದೆಯಲ್ಲ, ಅದು ಇದೆಲ್ಲಕ್ಕಿಂತ ಒಂದು ತೂಕ ಹೆಚ್ಚು.
೬೦ರ ದಶಕದ ಯುವಕರನ್ನು ಕೇಳಿ ನೋಡಿ, ಅವರೆಲ್ಲ ತಮ್ಮ ಪ್ರೇಮ ಪ್ರಕರಣಗಳಿಗೆ ‘ತೇರೆ ಮೇರೆ ಸಪ್ನೆ ಅಬ್ ಏಕ್ ರಂಗ್ ಹೈ’ ಎಂಬ ಗೈಡ್‌ನ ಹಾಡನ್ನು ಬಳಸಿಕೊಂಡಿರದೆ ಇರಲಿಕ್ಕಿಲ್ಲ. ಇಂಗ್ಲಿಷ್‌ನ ಗ್ರೆಗರಿ ಪೆಕ್ ಥರವೇ ವಿಶಾಲ ಭುಜ, ಉದ್ದನ್ನ ಮೂಗು, ಹಿಂದಕ್ಕೆ ಬಾಚಿದ ತಲೆಗೂದಲು, ತುಂಟಾಟ ಸೂಸುವ ಕಣ್ಣುಗಳ ಈ ಹೀರೋ ಒಂದು ಬಾರಿ ನಮ್ಮ ಕನಸಿನಲ್ಲಿ ಬರಬಾರದೆ ಎಂದು ಆ ಕಾಲದ ಹುಡುಗಿಯರು ಕನಸದೆ ಇದ್ದಿರಲಿಕ್ಕಿಲ್ಲ.
ಕಳೆದ ವರ್ಷವಷ್ಟೇ ಒಂದು ಕಾರ್‍ಯಕ್ರಮದಲ್ಲಿ ದೇವಾನಂದ್‌ನನ್ನು ತಮ್ಮ ಫಿಲಂನ ಡೈಲಾಗ್ ಹೇಳುವಂತೆ ಯಾರೋ ಕೇಳಿದ್ದರು. ಅದಕ್ಕಾತ ಹೀಗೆ ಉತ್ತರಿಸಿದ್ದ : ‘ಅದ್ಯಾವುದೂ ನನಗೆ ನೆನಪಿದ್ದಂತಿಲ್ಲ. ನಾನೇನು ಹೇಳಿದ್ದೇನೋ ಅದೆಲ್ಲ ಜಗತ್ತಿಗೆ ಸಂದಿದೆ. ಅದನ್ನು ಲೋಕ ನೆನಪಿಟ್ಟುಕೊಂಡಿದೆ, ನಾನು ಅದನ್ನಲ್ಲೇ ಬಿಟ್ಟು ಮುನ್ನಡೆದಿದ್ದೇನೆ...’
ಹೌದು, ದೇವ್‌ಜೀ... ನೀವು ಮುಂದೆ ನಡೆದು ಬಿಟ್ಟಿರಿ. ನಾವು ನಿಮ್ಮ ಡೈಲಾಗುಗಳನ್ನೂ ಹಾಡನ್ನೂ ಗುನುಗುತ್ತ ಇಲ್ಲೇ ಇದ್ದೇವೆ ಇನ್ನೂ !
ಈ ವರ್ಷ ಸೆಪ್ಟೆಂಬರ್‌ನಲ್ಲಿ ದೇವಾನಂದ್‌ಗೆ ೮೮ ವರ್ಷ ತುಂಬಿತ್ತು. ಅದಕ್ಕೊಂದು ಸಮಾರಂಭವನ್ನೂ ಮಾಡಲಾಗಿತ್ತು. ಬದುಕಿನ ಸಂಧ್ಯೆಯಲ್ಲಿದ್ದರೂ ಆತನ ಯೋಜನೆಗಳು ಹಲವಾರಿದ್ದವು. ತನ್ನ ಯಶಸ್ವಿ ಚಿತ್ರ ‘ಹರೇ ರಾಮ ಹರೇ ಕೃಷ್ಣ’ದ ಎರಡನೇ ಭಾಗ ತರುವ ಕನಸಿತ್ತು ಆತನಿಗೆ. ಕೊನೆಯ ಚಿತ್ರ ‘ಚಾರ್ಜ್‌ಶೀಟ್’ ತಯಾರಾಗಿ ಡಬ್ಬಾದಲ್ಲಿ ಕುಳಿತಿತ್ತು. ೨೦೦೫ರಲ್ಲಿ ‘ಮಿ.ಪ್ರೈಮ್ ಮಿನಿಸ್ಟರ್’ ಎಂಬ ಚಿತ್ರ ಬಂದಿತ್ತು. ತೊಡೆ ನಡುಗುತ್ತಿದ್ದರೂ ಅದರಲ್ಲಿ ಆತ ಪ್ರಧಾನಿ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ. ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ವಿಫಲವಾಗಿತ್ತು. ಆತನ ಇತ್ತೀಚಿನ ಚಿತ್ರಗಳು ಯವ್ವನದ ದಿನಗಳ ಪ್ರಣಯಚೇಷ್ಟೆಗಳನ್ನು ದಾಟಿ, ರಾಜಕೀಯ ಚಿಂತನೆಯ ಕಡೆಗೆ ತುಡಿದಿದ್ದವು. ಅದು ಆತನ ರೆಗ್ಯುಲರ್ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ.
ಯಾಕೆಂದರೆ ದೇವಾನಂದ್ ಅಂದರೆ ನಮ್ಮ ಮನದಲ್ಲಿ ಮೂಡುವ ಚಿತ್ರವೇ ಬೇರೆ. ಆತ ಎಂದೆಂದೂ ಚಿರಯವ್ವನಿಗ. ಆತನ ಓರಗೆಯ ನಾಯಕರಿಗೆ ವಯಸ್ಸಾಗಿರಬಹುದು. ನಾಯಕಿಯರ ಗಲ್ಲಗಳಲ್ಲಿ ಸುಕ್ಕುಗಳು ಮೂಡಿರಬಹುದು. ದೇವಾನಂದ್‌ನ ಯವ್ವನದ ಹದ ಆರುವುದೇ ಇಲ್ಲ. ಆತನ ಸಭ್ಯತೆಯ ಕೂದಲು ಕೂಡ ಕೊಂಕುವುದಿಲ್ಲ. ಒಂದಾದರೂ ಚಿತ್ರದಲ್ಲಿ ಆತನ ಬರಿ ಮೈ ನೋಡಿದ್ದೀರಾ ನೀವು ? ಆತ ಶರ್ಟ್ ಕಾಲರ್ ಕೆಳಗೆ ಸರಿಸಿದ್ದರೆ, ಮೇಲಿನ ಒಂದು ಬಟನ್ ಬಿಚ್ಚಿದ್ದರೆ ನಿಮ್ಮಾಣೆ. ಆತ ಸಿಕ್ಸ್ ಪ್ಯಾಕ್ ಅಲ್ಲ, ಅಂಗಸಾಧನೆ ಮಾಡಿರಲಿಕ್ಕಿಲ್ಲ, ಶತ್ರುಗಳನ್ನು ಹೊಡೆದುರುಳಿಸಿರಲಿಕ್ಕಿಲ್ಲ. ಆದರೆ ಆದರೆ ಆತನ ಅಭಿಮಾನಿಗಳು ಎಂದೂ ಆತನನ್ನು ತೊರೆದು ಹೋಗಲೇ ಇಲ್ಲ.
ದೇವ್ ದಾದಾನ ಪ್ರಣಯ ಜೀವನ ಮೂರ್ನಾಲ್ಕು ಚೆಲುವೆಯರೊಂದಿಗೆ ತಳುಕು ಹಾಕಿಕೊಂಡಿದೆ. ಅದರಲ್ಲಿ ಸುರೈಯಾ, ಜೀನತ್ ಅಮಾನ್ ಮುಂತಾದವರೆಲ್ಲ ಬಂದುಹೋಗುತ್ತಾರೆ. ಸುರೈಯಾದಂತೂ ಮನ ಕದಡುವ ಕತೆ. ದೇವಾನಂದ್ ಫೀಲ್ಡ್‌ಗೆ ಬರುವಾಗಲಾಗಲೇ ಆಕೆ ಹೆಸರು ಮಾಡಿದ್ದಳು. ಇಬ್ಬರೂ ಆರು ಚಲನಚಿತ್ರಗಳಲ್ಲಿ ಒಟ್ಟಿಗೇ ನಟಿಸಿದರು. ಒಂದು ಹಾಡಿನ ಸನ್ನಿವೇಶದ ಚಿತ್ರೀಕರಣದ ಸಂದರ್ಭದಲ್ಲಿ ದೋಣಿಯೊಂದು ತಲೆಕೆಳಗಾದಾಗ, ಮುಳುಗುತ್ತಿದ್ದ ಸುರೈಯಾಳನ್ನು ದೇವಾನಂದ್ ರಕ್ಷಿಸಿದ್ದ. ಈ ಘಟನೆ ಅವರ ಪ್ರೇಮದ ರೂಪಕ ಎಂಬಂತಿತ್ತು. ಆದರೆ ಸುರೈಯಾ ಮುಸ್ಲಿಮಳಾಗಿದ್ದರಿಂದ ಅವಳ ಅಜ್ಜಿ ಈ ಸಂಬಂಧಕ್ಕೆ ತನ್ನ ವಿರೋಧ ವ್ಯಕ್ತಪಡಿಸಿದಳು. ದೇವ್ ಮೇಲೆ ಕಂಪ್ಲೇಂಟ್ ಕೂಡ ನೀಡಿದಳು. ಇಬ್ಬರೂ ಜತೆಗೆ ನಟಿಸುವುದೇ ಅಸಾಧ್ಯವಾಯಿತು. ಮುಂದೆ ಸುರೈಯಾ ಚಿತ್ರರಂಗದಿಂದಲೇ ಹಿಂತೆಗೆದಳು. ಜೀವನವಿಡೀ ಅವಿವಾಹಿತೆಯಾಗಿಯೇ ಉಳಿದಳು.
‘ಹರೇ ರಾಮ...’ ಚಿತ್ರದ ಯಶಸ್ಸಿನ ಬಳಿಕ ಜೀನತ್- ದೇವ್ ನಡುವೆ ಪ್ರಣಯ ಇದೆ ಎಂದು ಮಾಧ್ಯಮಗಳು ಬರೆಯತೊಡಗಿದವು. ಅದು ನಿಜ ಕೂಡ ಆಗಿತ್ತು. ಇಬ್ಬರೂ ನಿಕಟವಾಗುತ್ತಿದ್ದರು. ಒಂದು ದಿನ ತನ್ನ ಪ್ರೀತಿಯನ್ನು ಜೀನತ್‌ಗೆ ಹೇಳಲು ದೇವಾನಂದ್ ನಿರ್ಧರಿಸಿದ. ಅದಕ್ಕೆ ಮುಂಬಯಿಯ ತಾಜ್ ಹೋಟೆಲನ್ನು ಆಯ್ಕೆ ಮಾಡಿಕೊಂಡು ಜೀನತ್‌ಳನ್ನು ಅಲ್ಲಿಗೆ ಬರಹೇಳಿದ. ಆ ಸಂಜೆ ಆತ ಅಲ್ಲಿಗೆ ಹೋದಾಗ, ಆತನ ಪ್ರತಿಸ್ಪರ್ಧಿ ನಟನಾಗಿದ್ದ ರಾಜ್‌ಕಪೂರ್ ಜತೆ ಜೀನತ್ ನಿಕಟವಾಗಿರುವುದನ್ನು ಕಂಡ. ‘ನನ್ನ ಹೃದಯ ಒಡೆದು ಚೂರಾಯಿತು. ಏನೂ ಹೇಳದೆ ಅಲ್ಲಿಂದ ಬಂದುಬಿಟ್ಟೆ’ ಎಂದು ತನ್ನ ಆತ್ಮಚರಿತ್ರೆ ‘ರೊಮಾನ್ಸಿಂಗ್ ವಿತ್ ಲೈಫ್’ನಲ್ಲಿ ದೇವ್ ಬರೆದುಕೊಳ್ಳುತ್ತಾನೆ.
ದೇವಾನಂದ್ ‘ರೊಮ್ಯಾಂಟಿಕ್ ಹೀರೋ’ ಆಗಿದ್ದದ್ದು ಯಾಕೆಂದು ಈಗ ಅರ್ಥವಾಯಿತೆ ?
Thursday, October 27, 2011
ತೋಮಾಸ್ ಕವಿತೆಗಳು
ನೊಬೆಲ್ ಪ್ರಶಸ್ತಿ ಪುರಸ್ಕೃತ ಸ್ವೀಡಿಷ್ ಕವಿ ತೋಮಾಸ್ ಟ್ರಾನ್ಸ್‌ಟ್ರಾಮರ್‌ನ ಒಂದಿಷ್ಟು ಕವಿತೆಗಳ ಅನುವಾದ ಇಲ್ಲಿದೆ.
ಜೋಡಿ
ಅವರು ದೀಪವ ಆರಿಸಿದರು.
ಬಿಳಿ ಲೈಟ್‌ಶೇಡ್ ಆರುವ ಮುನ್ನ ಒಂದು ಕ್ಷಣ ಮಸುಕಾಗಿ ಹೊಳೆಯಿತು.
ಕತ್ತಲಿನ ಗಾಜಿನೊಳಗೆ ಶಾಸನದಂತೆ. ಮತ್ತೆ ಮೇಲೆದ್ದಿತು.
ಹೋಟೆಲ್‌ನ ಗೋಡೆಗಳು ನೀಲಾಕಾಶಕ್ಕೆ ತೆರೆದುಕೊಂಡವು.
ಪ್ರೇಮದ ಚಲನೆಗಳು ತಣ್ಣಗಾದವು, ಅವರು ನಿದ್ರಿಸಿದರು.
ಆದರೆ ಅವರ ರಹಸ್ಯ ಯೋಚನೆಗಳು
ಬಾಲಕನ ಪೇಂಟಿಂಗ್‌ನ ಒದ್ದೆಕಾಗದದ ಮೇಲಿನ ಬಣ್ಣಗಳಂತೆ
ಮೆಲ್ಲನೆ ಸರಿದು ಮುಟ್ಟಿ ಬೆರೆಯತೊಡಗಿದವು. ಕತ್ತಲೆ ಹಾಗೂ ಮೌನ.
ಈ ರಾತ್ರಿ ನಗರ ಹತ್ತಿರ ಬರುತ್ತಿದೆ, ಬಿಗಿದುಕೊಂಡ ಕಿಟಕಿಗಳೊಂದಿಗೆ.
ಭವನಗಳು ನಿಕಟವಾಗುತಿವೆ. ನಿರ್ಭಾವ ಮುಖಗಳ ಗುಂಪು,
ಕಾಯುತ್ತಿರುವ ಜಂಗುಳಿಯ ನಡುವೆ ಅವರಿದ್ದಾರೆ.
ರಾಷ್ಟ್ರೀಯ ಅಭದ್ರತೆ
ಸಹ ಕಾರ್‍ಯದರ್ಶಿ ಮುಂದೆ ಬಾಗಿ ಎಕ್ಸ್ ಗುರುತು ಎಳೆಯುತ್ತಾಳೆ
ಅವಳ ಕಿವಿ ರಿಂಗುಗಳು ಡೆಮೊಕ್ಲಿಸನ ಖಡ್ಗಗಳಂತೆ ತೂಗಾಡುತ್ತವೆ
ಚುಕ್ಕಿ ಪಾತರಗಿತ್ತಿ ನೆಲದ ಬಣ್ಣಗಳಲ್ಲಿ ಮಾಯವಾಗುವ ಹಾಗೆ
ತೆರೆದ ಪತ್ರಿಕೆಯ ಪುಟಗಳಲ್ಲಿ ದೈತ್ಯ ಅಡಗುವ ಹಾಗೆ
ಯಾರೂ ಧರಿಸಿರದ ಮಕುಟ ಅಧಿಕಾರವ ಹಿಡಿದಿದೆ
ನೀರಿನಡಿಯಲ್ಲಿ ತಾಯಿ ಆಮೆ ಮೆಲ್ಲನೆ ಚಲಿಸಿದೆ.
ಒಂದು ಸಾವಿನ ಬಳಿಕ
ಒಮ್ಮೆ ಅಲ್ಲೊಂದು ಆಘಾತ
ಉಳಿಸಿಹೋದ ಸುದೀರ್ಘ ಉಲ್ಕೆಯ ಬಾಲ.
ಅದು ನಮ್ಮನೊಳಗೇ ಇಟ್ಟಿತು. ಟಿವಿ ಬಿಂಬಗಳ ಮಂಜಾಗಿಸಿತು.
ಟೆಲಿಫೋನ್ ತಂತಿಗಳಲ್ಲಿ ತಣ್ಣನೆಯ ಹನಿಗಳ ಕೂರಿಸಿತು.
ಚಳಿಗಾಲದ ಬಿಸಿಲ ನಡುವೆ ಮೆಲ್ಲನೆ ಮಂಜಿನಲ್ಲಿ ಜಾರುವುದು
ಕೆಲವೇ ಎಲೆಗಳು ನೇತಾಡುತ್ತಿರುವಲ್ಲಿ ನಡೆಯುವುದು
ಹಳೆಯ ಡೈರೆಕ್ಟರಿಯ ಹರಿದ ಪುಟಗಳ ಹೋಲುವುದು.
ಚಳಿ ನುಂಗಿದೆ ಹೆಸರುಗಳ.
ಎದೆಬಡಿತ ಆಲಿಸುವುದು ಈಗಲೂ ಎಂಥ ಚಂದ
ಆದರೀಗ ನೆರಳೇ ಶರೀರಕಿಂತ ನಿಜವೆನಿಸುತಿದೆ.
ಕಪ್ಪು ಡ್ರಾಗನ್ ಚಿಹ್ನೆಯ ಕವಚದ ಪಕ್ಕದಲ್ಲಿ
ಸಮರಯೋಧ ನಿಸ್ತೇಜನಾಗಿ ಕಾಣಿಸುತಿರುವ.
ದಾರಿ
ಮುಂಜಾನೆ ಎರಡು ಗಂಟೆ. ತಿಂಗಳ ಬೆಳಕು.
ಹೊಲಗಳ ಪಕ್ಕದಲ್ಲಿ ರೈಲು ನಿಂತಿದೆ.
ದೂರದ ದಿಗಂತದಲ್ಲಿ ನಗರವೊಂದರ ದೀಪಗಳು ತಣ್ಣಗೆ ಹೊಳೆಯುತಿವೆ.
ಮನುಷ್ಯ ಮುಳುಗಿಹೋದ ಗಾಢ ಕನಸಿನಿಂದ
ಎದ್ದಾಗ ತಾನಿದ್ದ ನೆಲೆಯ ಗುರುತಿಸಲರಿಯದಂತೆ.
ಅಥವಾ ಭಾರಿ ಕಾಯಿಲೆಯಿಂದ ಮಲಗಿದವನ
ದಿನಗಳ ಬರಿಯ ನಸುಮಿನುಗು, ಅಂಡಲೆತ, ನಿತ್ರಾಣ, ಶೀತಲ ದಿಗಂತದಂತೆ.
ರೈಲು ಸಂಪೂರ್ಣ ನಿಶ್ಚಲ.
ಗಂಟೆ ಎರಡು, ಗಾಢ ಬೆಳದಿಂಗಳು, ಕೆಲವೇ ತಾರೆಗಳು.
ಸೂರ್ಯರೊಂದಿಗೆ ಲ್ಯಾಂಡ್‌ಸ್ಕೇಪ್
ಮನೆಯ ಹಿಂಬದಿಯಿಂದ ಸೂರ್ಯ ಏಳುತ್ತಾನೆ
ಬೀದಿಯ ನಡುವಿನಲ್ಲಿ ನಿಲ್ಲುತ್ತಾನೆ
ನಮ್ಮ ಮೇಲೇ ಉಸಿರು ಚೆಲ್ಲುತ್ತಾನೆ
ತನ್ನ ಕೆಂಪು ಗಾಳಿಯೊಂದಿಗೆ.
ರಾಜಧಾನಿಯೇ ನಿನ್ನನ್ನೀಗ ನಾನು ಬಿಡಬೇಕು.
ಆದರೆ ನಾಳೆ ಇಲ್ಲೊಬ್ಬ ಉರಿಯುವ ಸೂರ್ಯನಿರಲಿದ್ದಾನೆ
ಎಲ್ಲಿ ನಾವು ದುಡಿಯಬೇಕು, ಬದುಕಬೇಕೋ
ಆ ಬೂದುಬಣ್ಣದ, ಅರ್ಧ ಸತ್ತ ಅರಣ್ಯದಲ್ಲಿ.
Monday, October 10, 2011
ಕಳಚಿಬಿದ್ದ ಸೇಬಿಗೊಂದು ಚರಮವಾಕ್ಯ
ನೀನೊಬ್ಬನಿದ್ದಿ ಎಂದು ಜಗತ್ತಿಗೆ ಗೊತ್ತಾಗುವುದಕ್ಕೆ ಸಾಯಬೇಕಿರಲಿಲ್ಲ. ಇಲ್ಲಿ ಪ್ರತಿಯೊಬ್ಬನ ಕೈಯಲ್ಲೂ ಮೆರೆಯುವ ಐಫೋನ್, ಐಪಾಡ್, ಐಪ್ಯಾಡ್‌ಗಳೇ ನಿನ್ನಂಥ ಪ್ರತಿಭಾವಂತನ ಇರುವಿಕೆಯನ್ನು ಸಾರಿ ಸಾರಿ ಹೇಳುತ್ತಿದ್ದವು. ಸರಿಯಾಗಿ ಆರು ವರ್ಷ ಹಿಂದೆ ಸ್ಟಾನ್‌ಫರ್ಡ್ ಯೂನಿವರ್ಸಿಟಿಯ ಹಾಲ್‌ನಲ್ಲಿ ನಿಂತು ನೀನು ಹೀಗೆ ಘೋಷಿಸಿದ್ದೆ: ‘ಸಾವೆಂಬುದು ಬಹುಶಃ ಈ ಜೀವನ ಕಂಡುಕೊಂಡ ಶ್ರೇಷ್ಠ ಸಂಶೋಧನೆ. ಅದು ಬದುಕಿನ ಬದಲಾವಣೆಯ ಚೋದಕ’. ಆಮೇಲೆ ಹೀಗೂ ಹೇಳಿದ್ದೆ: ‘ನಿಮ್ಮಲ್ಲಿ ಹಸಿವಿರಲಿ, ಮೂರ್ಖತನವಿರಲಿ’. ಸಾವು ಹಸಿದಿತ್ತು. ಮರೆಯಲ್ಲಿ ಕಾದು ನಿಂತಿತ್ತು. ನೀನು ಅದರ ಜತೆ ಹೊರಡಲು ರೆಡಿಯಾಗಿದ್ದೆ. ಒಂದು ಅಪೂರ್ವ ರಾಗವನ್ನು ತಟ್ಟನೆ ನಿಲ್ಲಿಸಿ ಗಾಯಕ ಎದ್ದು ಹೋದಂತೆ, ಇನ್ನೇನು ಜೀವ ಬರಲಿರುವ ವರ್ಣಚಿತ್ರದತ್ತ ಕಲಾವಿದ ಕೈಕೊಡವಿ ನಡೆದಂತೆ ನೀನು ಸತ್ತು ಹೋಗಿಬಿಟ್ಟೆ.
ನೀನು ತೀರಿಕೊಂಡಂದಿನಿಂದ ಜಗತ್ತಿನಾದ್ಯಂತ ನಿನ್ನ ಗುಣಗಾನಗಳೇ ಕೇಳಿ ಬರುತ್ತಿವೆ. ಬಿಲ್ ಗೇಟ್ಸ್ ಬಿಟ್ಟರೆ ನಮ್ಮ ಮಾಧ್ಯಮಗಳ ಇಷ್ಟೊಂದು ಸ್ಪೇಸ್ ಪಡೆದುಕೊಂಡ ತಂತ್ರಜ್ಞಾನ ಕ್ಷೇತ್ರದ ಇನ್ನೊಬ್ಬನಿರಲಿಕ್ಕಿಲ್ಲ. ನೀನು ರಾಜಕಾರಣಕ್ಕೆ ಕಾಲಿಡಲಿಲ್ಲ, ಸಂಗೀತ ನುಡಿಸಲಿಲ್ಲ, ಸಾಹಿತ್ಯ ಬರೆಯಲಿಲ್ಲ. ಆದರೂ ನಮ್ಮ ಯುವಜನರಿಗೆ ಏಕ್‌ದಂ ಇಷ್ಟವಾಗಿಹೋದೆ. ರೀಡ್ ಕಾಲೇಜಿನಿಂದ ನೀನು ಡ್ರಾಪೌಟ್ ಎಂಬುದು ನಮ್ಮ ಕಾಲೇಜ್ ಸ್ಟೂಡೆಂಟ್ಸ್‌ಗೆ ಇಷ್ಟವಾಯ್ತು. ಬಡತನದ ಬಾಲ್ಯ ಹಾಗೂ ಹರೆಯ ಅನುಭವಿಸಿ ಈ ಮಟ್ಟಕ್ಕೆ ಬೆಳೆದವ ಎಂಬುದು ನಮ್ಮಲ್ಲಿ ಉದ್ಯೋಗ ಹುಡುಕುತ್ತ ಗಲ್ಲಿ ಅಲೆವ ಬಡ ಯುವಕರ ಕನಸುಕಂಗಳಲ್ಲಿ ಆಸೆ ಚಿಗುರಿಸಿತು. ಕ್ಯಾನ್ಸರ್ ರೋಗ ಖಚಿತವಾದ ಮೇಲೂ ಹೊಸ ಹೊಸ ಚಿಂತನೆ, ಅನ್ವೇಷಣೆ ಬಿಟ್ಟುಕೊಡಲಿಲ್ಲ ಎಂಬುದು ಜೀವನಪ್ರೀತಿ ಇರುವವರೆಲ್ಲರಿಗೂ ಮೆಚ್ಚುಗೆಯಾಯ್ತು. ಏನಯ್ಯಾ ನಿನ್ನ ಜಾದು ?
ಕಂಪ್ಯೂಟರೊಂದಕ್ಕೆ ‘ಆಪಲ್’ ಎಂಬ ಹೆಸರಿಡಬಹುದು ಎಂದು ಯೋಚಿಸಿದಾಗಲೇ ನೀನು ಬಹುತೇಕ ಗೆದ್ದುಬಿಟ್ಟಿದ್ದೆ. ಅದರಲ್ಲೊಂದು ಅಪೂರ್ವ ಸೌಂದರ್‍ಯಪ್ರಜ್ಞೆ, ಕಲೆಗಾರಿಕೆಯಿತ್ತು. ನೀನು ಸತ್ತಾಗ ನಿನ್ನ ಗೆಳೆಯನೊಬ್ಬ ಹೇಳಿದ್ದಿಷ್ಟು- ‘ಆತ ಮೊಜಾರ್ಟ್, ಪಿಕಾಸೊಗಳ ಸಾಲಿಗೆ ಸೇರುವ ಕಲೆಗಾರ’. ನಿನ್ನ ಕಂಪನಿಯ ಉತ್ಪನ್ನಗಳನ್ನು ಬಳಸುವ ಯಾರಿಗೇ ಆದರೂ ಈ ಹೇಳಿಕೆಯ ಧ್ವನಿ ತಟ್ಟನೆ ಹೊಳೆಯುತ್ತದೆ. ಹತ್ತು ವರ್ಷಗಳ ಈಚಿನ ತಲೆಮಾರು, ಆಪಲ್ ಎಂದ ಕೂಡಲೇ ಐಪಾಡು ಐಫೋನ್‌ಗಳ ಕಡೆ ನೋಡುತ್ತದೆ. ಅದೊಂದು ಹಣ್ಣು ಎಂಬ ಅರ್ಥವನ್ನೇ ಎರಡನೇ ಸ್ಥಾನಕ್ಕೆ ಸರಿಸಿದೆಯಲ್ಲ, ಗ್ರೇಟ್ ಕಣಯ್ಯಾ ನಿನ್ನ ಜಾಬ್.
ಆದರೂ, ನಿನ್ನ ಕೆಲಸ ಮುಗಿಸಿ ನೀನು ಹೋದ ಬಳಿಕ, ನಿನ್ನ ಕೊಡುಗೆ ಏನು ಎಂದು ಚಿಂತಿಸುತ್ತಾ ಕೂತಿರುವಾಗ, ಒಂದಷ್ಟು ಮೆಚ್ಚುಗೆಯೂ ಇನ್ನಿಷ್ಟು ತಕರಾರೂ ಒಟ್ಟಿಗೆ ಮೂಡುತ್ತಿವೆ. ಮೆಚ್ಚುಗೆ ಯಾಕೆಂದರೆ, ವಯರ್‌ಗಳಿಂದ ಗೋಜಲಾದ, ಒರಟು ಸಿಲಿಕಾನ್ ಪ್ಲೇಟುಗಳ ತಂತ್ರಜ್ಞಾನದ ಕ್ಷೇತ್ರವನ್ನು ಆಪಲ್ ಹಣ್ಣಿನಷ್ಟೇ ನಯವಾಗಿ, ತಾಜಾ ಆಗಿ ಕಾಣುವಂತೆ ರೂಪಿಸಿದೆಯಲ್ಲ, ಅದಕ್ಕೆ. ನಿನ್ನ ಒಂದೊಂದು ಉತ್ಪನ್ನವೂ ಒಂದೊಂದು ಕಾವ್ಯದಂತೆ ಇದ್ದವಲ್ಲ, ಅದಕ್ಕೆ. ಉದಾಹರಣೆಗೆ ನಿನ್ನ ಐಫೋನ್. ಇದರಲ್ಲಿ ಎಷ್ಟೊಂದು ಅಪ್ಲಿಕೇಶನ್‌ಗಳಿವೆ ಎಂದು ಲೆಕ್ಕ ಹಾಕುತ್ತ ಕೂರುವವನಿಗೆ ಜೀವನ ಬೇಕಾದೀತು. ಆದರೆ ಅದೆಲ್ಲವನ್ನೂ ಸರಳವಾದ ಒಂದೆರಡು ಸ್ಪರ್ಶಗಳಿಂದಲೇ ಜೀವಂತವಾಗುವಂತೆ ಮಾಡಿದೆಯಲ್ಲ. ನೆನೆದಾಗ ಥಟ್ಟನೆ ಬಂದು ಸ್ವರಮೇಳ ಶುರುಮಾಡುವ ಅಪ್ಸರೆಯರಂತೆ ನಿನ್ನ ಐಪ್ಯಾಡುಗಳು ಹಾಡು ಗುನುಗುತ್ತಿದ್ದವಲ್ಲ. ಇದೆಲ್ಲ ನಿನ್ನ ಕನಸಲ್ಲಿ ಹೊಳೆದವೋ ಯಾ ಎಚ್ಚರದಲ್ಲೋ ?
ಸೊನ್ನೆಯಿಂದ ಆರಂಭಿಸಿ ಸಾಮ್ರಾಜ್ಯ ಕಟ್ಟಬಹುದು ಎಂಬುದು ಎಲ್ಲೋ ಕೆಲವರಿಗಷ್ಟೇ ಹೊಳೆಯುವ ಸಾಧ್ಯತೆ. ನೀನು ಹಾಗೆ, ಅಪ್ಪನ ಗ್ಯಾರೇಜಿನಿಂದ ಆರಂಭಿಸಿದವನು ಟ್ರೇಡ್ ಸೆಂಟರ್‌ನ ತುತ್ತ ತುದಿ ಮುಟ್ಟಿದೆಯಲ್ಲ. ಹಾಗೆ ಮತ್ತೆ ಮತ್ತೆ ಸೊನ್ನೆಗೆ ಹಿಂದಿರುಗಿ ಅಲ್ಲಿಂದ ಆರಂಭಿಸಿ ಮತ್ತೊಂದು ಸಾಮ್ರಾಜ್ಯ ಕಟ್ಟುವುದು ಯಾರಿಗೂ ಸಲೀಸಲ್ಲ. ಒಂದು ದಿನ ನೀನೇ ಕಟ್ಟಿದ ಆಪಲ್ ಸಂಸ್ಥೆಯಿಂದ ಪದಚ್ಯುತನಾಗಿ ಹೊರಬಿದ್ದೆ. ಮರಳಿ ಮತ್ತೆ ಗ್ಯಾರೇಜಿನಿಂದಲೇ ಆರಂಭಿಸಿ ಇನ್ನೊಂದು ಕಂಪನಿ ಸೃಷ್ಟಿಸಿ, ಅದರ ಮುಂದೆ ಆಪಲ್ ಡೊಗ್ಗಾಲೂರುವಂತೆ ಮಾಡಿದೆಯಲ್ಲ. ಆನಿಮೇಶನ್ ಫಿಲಂ ಕ್ಷೇತ್ರದಲ್ಲಿ ಕೂಡ ಪಿಕ್ಸರ್, ಟಾಯ್ ಸ್ಟೋರಿಗಳೊಂದಿಗೆ ಇತಿಹಾಸ ಸೃಷ್ಟಿಸಿ ಧೂಳಿನಿಂದ ಎದ್ದು ಬಂದೆಯಲ್ಲ.
ಅದಿರಲಿ, ನೀನು ಸಾವಿನ ಕಣ್ಣಲ್ಲಿ ಕಣ್ಣಿಟ್ಟು, ‘ಏ ಇರು, ಕೆಲಸವಿದೆ...’ ಅಂತ ಅದನ್ನು ಕಾಯಿಸಿದ್ದು ಮಾತ್ರ ಧೀರೋದಾತ್ತವೇ. ಅಂತಕನ ದೂತರು ಮರೆಯಲ್ಲಿ ನಿಂತಿದ್ದಾರೆ ಎಂದು ಗೊತ್ತಾದ ಮೇಲೂ ಮೊದಲಿನ ಹುರುಪಿನೊಂದಿಗೆ ಕೆಲಸ ಮಾಡುವುದು ಸಾಮಾನ್ಯರಿಂದ ಆಗುವಂಥದ್ದಲ್ಲ. ಆಮೇಲೆ ನೀನು ತಂದ ಐಫೋನ್ ಹಾಗೂ ಐಪ್ಯಾಡ್‌ಗಳು ಆ ಸಾವಿನ ಕ್ರೂರ ಮುಖದೆದುರು ನೀನು ಹಿಡಿದ ಜಾಜ್ವಲ್ಯಮಾನ ಸೊಗಸಿನ ಜೀವನೋಲ್ಲಾಸದ ತುಣುಕುಗಳಂತಿದ್ದವು. ಅದು ನೀನು ಮೃತ್ಯುವಿಗೆ ಕೊಟ್ಟ ಉತ್ತರದಂತಿತ್ತು.
ನಮ್ಮ ದೇಶಕ್ಕೂ ನಿನಗೂ ತುಸು ಕಹಿ-ಸಿಹಿ ಸಂಬಂಧವಿದೆ. ನಿನಗೆ ೧೮ ವರ್ಷವಿದ್ದಾಗ, ೧೯೭೪ರಲ್ಲಿ, ನೀನು ಅಧ್ಯಾತ್ಮದ ಹುಡುಕಾಟದಲ್ಲಿ ಭಾರತಕ್ಕೆ ಬಂದೆಯಂತೆ. ಒಬ್ಬ ಬಾಬಾ ನಿನಗೆ ಜ್ಞಾನೋದಯ ಮಾಡಿಸುತ್ತೇನೆಂದು ಹೇಳಿ, ನಿನ್ನ ತಲೆ ಬೋಳಿಸಿ, ಸರಿಯಾಗಿಯೇ ಕೈಕೊಟ್ಟನಂತೆ. ಈ ಮಾತಿನ ಅಧ್ಯಾತ್ಮಗಳೆಲ್ಲ ಬೊಗಳೆ ಎಂಬುದು ನಮಗೆ ಅರ್ಥವಾಗುವ ಮೊದಲೇ ನಿನಗೆ ಅರ್ಥವಾಯಿತಲ್ಲ ! ನಂತರ ಬೌದ್ಧ ತತ್ವಗಳಿಗೆ ಮಾರುಹೋಗಿ ನೀನು ಬೌದ್ಧ ಧರ್ಮ ಅಂಗೀಕರಿಸಿದ್ದು, ಕಾಯಕದಲ್ಲೇ ಅಧ್ಯಾತ್ಮವನ್ನು ಕಂಡದ್ದು ಎಲ್ಲ ೨೧ನೇ ಶತಮಾನದ ಟೆಕ್ ಐಕಾನ್ ಸಂತನೊಬ್ಬನಿಗೆ ಹೇಳಿ ಮಾಡಿಸಿದಂತೆಯೇ ಇದೆ. ನಿನ್ನ ಕಾಯಕಕ್ಕೆ ನಮ್ಮ ಕೈಲಾಸವೂ ತುಸು ಕೊಡುಗೆ ನೀಡಿದೆ ಎಂದು ನಾವು ಸುಳ್ಳೇ ಹೆಮ್ಮೆಪಟ್ಟುಕೊಳ್ಳಬಹುದೇನೊ.
ಇರಲಿ ಮಾರಾಯ, ನೀನು ದೊಡ್ಡವನು. ನಿನ್ನ ಕನಸುಗಳು, ನಿನ್ನ ಸಾಧನೆ ಎಲ್ಲವೂ ದೊಡ್ಡದೇ. ಆದರೆ ನಿನ್ನ ಬಗ್ಗೆ ನಮಗೆ ತುಸು ತಕರಾರುಗಳೂ ಇವೆ, ಕೇಳಿಸಿಕೊ. ನಾವು ಭಾರತೀಯರಿದ್ದೇವಲ್ಲ, ಗಾಂಧಿಯನ್ನೂ ಟೀಕಿಸದೆ ಬಿಟ್ಟವರಲ್ಲ. ಇನ್ನು ನಿನ್ನನ್ನು ಬಿಡುತ್ತೇವ ?
ಇತ್ತೀಚೆಗೆ ಫೋರ್ಬ್ಸ್ ಲೆಕ್ಕ ಹಾಕಿದಂತೆ ನಿನ್ನ ಒಟ್ಟಾರೆ ಆಸ್ತಿಯ ಮೌಲ್ಯ ೭ ಶತಕೋಟಿ ಡಾಲರ್. ಅಂದರೆ ಏಳರ ಮುಂದೆ ಎಷ್ಟು ಸೊನ್ನೆ ಹಾಕಬೇಕೊ, ನಮಗೆ ಗೊತ್ತಿಲ್ಲ. ಅಷ್ಟಿದ್ದವನು, ಮಾರಾಯ, ಒಂದು ಡಾಲರ್ ಆದರೂ ಕೈ ಎತ್ತಿ ಬಡ ರಾಷ್ಟ್ರಗಳ ಹಸಿದವರಿಗೆ ಹಂಚಬಹುದಿತ್ತಲ್ಲ ? ಹೆಮ್ಮೆಯ ಧ್ವಜವನ್ನು ಎತ್ತೆತ್ತೆಲ್ಲ ಹರಡಿಬಿಡುವ ನಿನ್ನ ಅಮೆರಿಕಾ ರಾಷ್ಟ್ರದ ಸಂಪತ್ತೆಲ್ಲ ಅನ್ಯ ವಸಾಹತು ದೇಶಗಳನ್ನು ಉಪಭೋಗ ಸಾಮಗ್ರಿಗಳ ಮೂಲಕ ಕೊಳ್ಳೆ ಹೊಡೆದು ತಂದದ್ದು- ಅದರಲ್ಲಿ ನಿನ್ನದೂ ಪಾಲಿದೆ ಎಂಬುದು ನಿನಗೆ ಗೊತ್ತಿಲ್ಲದ್ದಾಗಿತ್ತೆ ? ಹಾಗೆ ಲೂಟಿಯಿಂದ ಪಡೆದ ಸಂಪತ್ತಿನಲ್ಲಿ ಒಂದು ಪೈಸೆಯನ್ನೂ ಅಲ್ಲಿಗಾಗಲೀ ನಿನ್ನದೇ ದೇಶದ ನಿರುದ್ಯೋಗಿಗಳಿಗಾಗಲೀ ವಿನಿಯೋಗಿಸಬೇಕು ಎಂಬ ಮಾನವೀಯ ಅಂತಃಕರಣ ನಿನ್ನಲ್ಲಿಲ್ಲದೆ ಹೋಯ್ತೆ ? ಆ ವಿಷಯದಲ್ಲಿ ನಿನ್ನ ನಿಡುಗಾಲದ ಪ್ರತಿಸ್ಪರ್ಧಿ, ಗೆಳೆಯ ಬಿಲ್ ಗೇಟ್ಸ್‌ನೇ ಎಷ್ಟೋ ವಾಸಿ ಮಾರಾಯ.
ಇನ್ನು ನಿನ್ನ ಪ್ರಾಡಕ್ಟ್‌ಗಳನ್ನೇ ನೋಡು. ಶ್ರೇಷ್ಠತೆ, ಕುಸುರಿಗಾರಿಕೆಯ ಮೂಲಕ ನೀನು ಅತ್ಯಂತ ಗುಣಮಟ್ಟದವುಗಳನ್ನೇ ತಯಾರಿಸಿದೆ ನಿಜ, ಆದರೆ ನಮ್ಮಂತ ಬಡ, ಮಧ್ಯಮ ವರ್ಗದವರ್‍ಯಾರೂ ಮುಟ್ಟಲಾಗದ ಬೆಲೆಗಳನ್ನೇ ಇಟ್ಟೆ. ಇಂದು ಆಪಲ್ ಶ್ರೇಷ್ಠತೆಗೆ ಹೆಸರಾಗಿರಬಹುದು. ಆದರೆ ನಮ್ಮಂಥ ಅಭಿವೃದ್ಧಿಶೀಲ ರಾಷ್ಟ್ರಗಳ ಮಧ್ಯಮ ವರ್ಗದವರಿಗೆ ಗಗನಕುಸುಮ. ಇರಲಿ, ನಾವು ಗಾಂಧಿಯ ಸರಳತೆ ಹಾಗೂ ಮಾನವೀಯ ಮಾರ್ವಾಡಿತನಗಳಿಗೆ ಮನಸೋತವರು. ಆಧುನಿಕ ಜಗತ್ತಿನ ಕತ್ತು ಕುಯ್ಯುವ ವ್ಯಾಪಾರಿ ಪೈಪೋಟಿಯಲ್ಲಿ ನೀನು ಪಳಗಿದವನು. ಡಾಲರ್ ಹೊರತು ಬೇರೇನೂ ಚಿಂತಿಸದವನು. ನಮಗಿದು ಆಗಿಬರುವುದಿಲ್ಲ.
ಅದಿರಲಿ, ನೀನೇಕೆ ಅಷ್ಟೊಂದು ಸ್ವಾರ್ಥಿ, ಸ್ವಕೇಂದ್ರಿತ, ಮುಂಗೋಪಿ ಮತ್ತು ಒರಟನಾಗಿದ್ದೆ ? ನಿನ್ನ ಆತ್ಮೀಯ ಗೆಳೆಯರಿಗೂ ನಿನ್ನನ್ನು ಸಹಿಸಿಕೊಳ್ಳುವುದು ಕಷ್ಟವಿತ್ತಂತೆ ಹೌದೆ ? ನಿನ್ನ ಯೋಚನೆಗಳನ್ನು ಯಾರಿಗೂ ಬಿಟ್ಟುಕೊಡದೆ ಕೊನೆಯವರೆಗೂ ನಿಗೂಢವಾಗಿ ಇಟ್ಟುಕೊಳ್ಳುತ್ತಿದ್ದೆ. ಹೀಗಾಗಿ ಕಂಪನಿಯಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕೊನೆಕೊನೆಯ ದಿನಗಳಲ್ಲಿ ಕಾರ್‍ಯಭಾರದ ಒತ್ತಡ ತಡೆಯಲಾಗದೆ ಸಿಕ್ಕಸಿಕ್ಕವರ ಮೇಲೆಲ್ಲ ನಿಷ್ಕಾರಣ ರೇಗುತ್ತಿದ್ದೆಯಂತೆ. ಸಾವಿನ ಸಮೀಪದಲ್ಲಿ ನಿಂತು ನೀನು ತತ್ವಜ್ಞಾನಿಯಂತೆ ಮಾತಾಡಿದೆ ನಿಜ, ಆದರೆ ಒಳಗೊಳಗೇ ನೀನು ಕುಸಿಯುತ್ತಿದ್ದುದು ಗೊತ್ತಾಗುತ್ತಿತ್ತು.
ಹೋಗಲಿ ಬಿಡು, ಇವೆಲ್ಲ ಇಲ್ಲದೆ ಹೋಗಿದ್ದರೆ, ನೀನು ನಡೆದಾಡುವ ದೇವತೆಯೇ ಆಗಿಬಿಡುತ್ತಿದ್ದೆಯಲ್ಲ ! ಆ ಅಪಾಯದಿಂದ ಪಾರಾದೆ.ಎಲ್ಲ ತಕರಾರುಗಳೊಂದಿಗೆ, ಪ್ರೀತಿಪೂರ್ವಕ ವಿದಾಯ. ಹೋಗಿಬಾ.
ಹಸಿವಿರಲಿ, ಮೂರ್ಖತನವಿರಲಿ
ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ಟೀವ್ ಮಾಡಿದ ಐತಿಹಾಸಿಕ ಭಾಷಣ
ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯದಲ್ಲಿ ಮಾತಾಡಲು ಸಿಕ್ಕಿದ ಗೌರವಕ್ಕಾಗಿ ಸಂತೋಷವಾಗಿದೆ. ನಿಜವೆಂದರೆ, ಪದವಿಗೆ ನಾನು ಹತ್ತಿರ ಬಂದದ್ದು ಎಂದರೆ ಇಂದೇ. ನಾನು ಯಾವ ಕಾಲೇಜಿನಿಂದಲೂ ಪದವಿ ಪಡೆದವನಲ್ಲ. ನಿಮಗೆ ನನ್ನ ಜೀವನದ ಮೂರು ಕತೆಗಳನ್ನು ಹೇಳುತ್ತೇನೆ, ಅಷ್ಟೇ.
ಮೊದಲ ಕತೆ- ಬಿಂದುಗಳನ್ನು ಸೇರಿಸುವ ರೀತಿಯ ಬಗ್ಗೆ.
ರೀಡ್ ಕಾಲೇಜಿಗೆ ನಾನು ಆರು ತಿಂಗಳು ಹೋದ ಬಳಿಕ ಅಲ್ಲಿಂದ ಹೊರಬಿದ್ದೆ. ಯಾಕೆ ? ಅದು ನನ್ನ ಹುಟ್ಟಿನಿಂದಲೇ ಬಂದುದು. ನನ್ನ ಹೆತ್ತ ತಾಯಿ, ಪದವಿ ವಿದ್ಯಾರ್ಥಿನಿಯಾಗಿದ್ದಳು. ಪದವೀಧರ ದಂಪತಿಗೇ ನನ್ನನ್ನು ದತ್ತು ಕೊಡಬೇಕೆಂಬುದು ಆಕೆಯ ಅಭಿಲಾಷೆಯಾಗಿತ್ತು. ಮೊದಲು ಒಪ್ಪಿಕೊಂಡ ದಂಪತಿಗಳು ಹೆಣ್ಣು ಮಗು ಬೇಕೆಂದಿದ್ದರು. ಗಂಡು ಹುಟ್ಟಿದ ಕೂಡಕಲೇ ವೇಟಿಂಗ್ ಲಿಸ್ಟ್‌ನಲ್ಲಿದ್ದ ದಂಪತಿಗೆ ಫೋನ್ ಮಾಡಿ ‘ಮಗು ಬೇಕಾ ?’ ಎಂದು ಕೇಳಲಾಯಿತು. ಅವರು ಪದವಿ ಪಡೆದವರಲ್ಲ ಎಂಬುದು ದತ್ತು ಕೊಟ್ಟ ಮೇಲಷ್ಟೇ ತಾಯಿಗೆ ಗೊತ್ತಾಯಿತು. ಮಗುವನ್ನು ಕಾಲೇಜಿಗೆ ಖಂಡಿತ ಕಳಿಸಬೇಕೆಂದು ಆಕೆ ಅವರಲ್ಲಿ ಭಾಷೆ ಪಡೆದಳು !
೧೭ ವರ್ಷ ನಂತರ ನಾನು ಕಾಲೇಜಿಗೆ ಹೋದೆ. ಆದರೆ ನನ್ನ ತಂದೆ- ತಾಯಿ ಗಳಿಸಿದ್ದೆಲ್ಲಾ ನನ್ನ ನಟ್ಯೂಷನ್‌ಗೇ ಖರ್ಚಾಗುತ್ತಿತ್ತು. ಮೇಲಾಗಿ, ನನ್ನ ಜೀವನದಲ್ಲಿ ನಾನೇನು ಮಾಡಬೇಕಾಗಿದೆ ಮತ್ತು ಅದಕ್ಕೆ ಈ ಶಿಕ್ಷಣದಿಂದ ಪ್ರಯೋಜನವಾದರೂ ಏನಿದೆ ಎಂದು ಕೇಳಿಕೊಂಡೆ. ಬಗೆಹರಿಯಲಿಲ್ಲ. ಕಾಲೇಜು ಬಿಟ್ಟೆ. ಆಗ ಭಯವಾಗಿತ್ತು. ಈಗ ನೋಡಿದರೆ ಅದು ಸರಿಯಾದ ನಿರ್ಧಾರವಾಗಿತ್ತು ಎನಿಸುತ್ತದೆ.
ಅದು ಅಷ್ಟೇನೂ ರೊಮ್ಯಾಮಟಿಕ್ ಆಗಿರಲಿಲ್ಲ. ನನಗೆ ಕೋಣೆಯಿಲಿಲ್ಲ, ಗೆಳೆಯರ ಮನೆಯಲ್ಲಿ ಮಲಗುತ್ತಿದ್ದೆ. ಕೋಕ್‌ನ ಖಾಲಿ ಬಾಟಲು ಮರಳಿಸಿ ಕಾಸು ಹುಟ್ಟಿಸಿಕೊಂಡು ಆಹಾರ ಪಡೆಯುತ್ತಿದ್ದೆ. ಭಾನುವಾರ ರಾತ್ರಿ ೭ ಮೈಲು ನಡೆದು ಹರೇ ಕೃಷ್ಣ ದೇವಸ್ಥಾನದಲ್ಲಿ ಊಟ ಮಾಡುತ್ತಿದ್ದೆ. ಆದರೆ ಅದನ್ನೆಲ್ಲ ನಾನು ಪ್ರೀತಿಸಿದೆ. ಅಂದು ಕಲಿತ ಪಾಠಗಳೆಲ್ಲ ಮುಂದೆ ಪ್ರಯೋಜನಕ್ಕೆ ಬಂದವು.
ಒಂದು ಉದಾಹರಣೆ- ಕಾಲೇಜಿನಿಂದ ಹೊರಬಿದ್ದ ನಾನು ಅಲ್ಲೇ ನಡೆಯುತ್ತಿದ್ದ ಕ್ಯಾಲಿಗ್ರಫಿ ಕ್ಲಾಸಿಗೆ ಹೋಗುತ್ತಿದ್ದೆ. ಅಲ್ಲಿ ಕಲಿತ ಅಕ್ಷರಗಳ ಅಂದಚಂದ, ಮುಂದೆ ಹತ್ತು ವರ್ಷ ಬಳಿಕ ಮ್ಯಾಕಿಂಟಾಷ್ ಕಂಪ್ಯೂಟರ್ ತಯಾರಿಸುವಾಗ ಉಪಯೋಗಕ್ಕೆ ಬಂದವು. ಅದು ಜಗತ್ತಿನಲ್ಲೇ ಅತ್ಯಂತ ಸುಂದರವಾಗಿ ಟೈಪೋಗ್ರಫಿ ಮಾಡಲಾಗಿದ್ದ ಕಂಪ್ಯೂಟರಾಗಿತ್ತು. ಮುಂದೆ ವಿಂಡೋಸ್ ಅದನ್ನು ಕಾಪಿ ಮಾಡಿತು. ಹೀಗೆ ಕಾಲೇಜಿನಿಂದ ಡ್ರಾಪೌಟ್ ಆಗಿದ್ದರೂ ಕ್ಯಾಲಿಗ್ರಫಿ ಕ್ಲಾಸನ್ನು ಬಿಡದೆ ಇದ್ದದ್ದು ಎಷ್ಟು ಉಪಯೋಗವಾಯಿತೆಂದು ಈಗ ಅರಿವಾಗುತ್ತಿದೆ.
ನೀವು ಮುಂದೆ ನೋಡುತ್ತ ಬಿಂದುಗಳನ್ನು ಸೇರಿಸಲಾರಿರಿ; ಅದಕ್ಕೆ ನಿಮ್ಮ ಹಿಂದೆ ನೋಡಬೇಕು. ಆದರೆ ಅದು ಭವಿಷ್ಯವನ್ನು ರೂಪಿಸುವುದೆಂಬ ನಂಬಿಕೆಯಿರಬೇಕು. ನಿಮಗೊಂದು ನಂಬಿಕೆ ಇರಬೇಕು- ನಿಮ್ಮ ಧೈರ್‍ಯ, ವಿಧಿ, ಜೀವನ, ಕರ್ಮ, ಅದ್ಯಾವುದೇ ಇರಲಿ. ಇದು ನನ್ನ ಜೀವನದಲ್ಲಿ ಬದಲಾವಣೆ ತಂದ ತತ್ವ.
ನನ್ನ ಎರಡನೇ ಕತೆ ನನ್ನ ಪ್ರೇಮ ಹಾಗೂ ನಷ್ಟಕ್ಕೆ ಸಂಬಂಧಿಸಿದ್ದು.ನಾನು ಅದೃಷ್ಟವಂತ- ಹರೆಯದಲ್ಲೇ ಏನು ಮಾಡಬೇಕೆಂದುಕೊಂಡಿದ್ದೆನೋ ಅದನ್ನೇ ಮಾಡಿದೆ. ವೋಜ್ನಿಕ್ ಹಾಗೂ ನಾನು ನನ್ನ ಹೆತ್ತವರ ಗ್ಯಾರೇಜಿನಲ್ಲಿ ನಾನು ೨೦ ವರ್ಷದವನಿದ್ದಾಗ ಆಪಲ್ ಆರಂಭಿಸಿದೆವು. ೧೦ ವರ್ಷಗಳಲ್ಲಿ ಅದು ೨ ಶತಕೋಟಿ ಡಾಲರ್ ಮೌಲ್ಯ ಹಾಗೂ ೪೦೦೦ ಉದ್ಯೋಗಿಗಳಷ್ಟು ಬೆಳೆಯಿತು. ನನಗೆ ೩೦ ವರ್ಷವಾದಾಗ, ನಮ್ಮ ಉತ್ಕೃಷ್ಟ ಉತ್ಪನ್ನ- ಮ್ಯಾಕಿಂಟಾಷ್ ಕಂಪ್ಯೂಟರನ್ನು ಬಿಡುಗಡೆಗೊಳಿಸಿದೆವು. ಆಮೇಲೆ ನನ್ನನ್ನು ಸಂಸ್ಥೆಯಿಂದ ಕಿತ್ತೊಗೆಯಲಾಯಿತು. ನಾನೇ ಸ್ಥಾಪಿಸಿದ ಸಂಸ್ಥೆ ನನ್ನನ್ನು ತೆಗೆಯಲು ಹೇಗೆ ಸಾಧ್ಯ ? ತುಂಬ ಪ್ರತಿಭಾವಂತರೆಂದು ನಾನು ಭಾವಿಸಿದ್ದವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದೆ. ಮೊದಲ ವರ್ಷ ಸರಿಯಾಗಿಯೇ ಇತ್ತು. ಬಳಿಕ ಆಡಳಿತ ಮಂಡಳಿ ಸದಸ್ಯರು ಅವರ ಪರ ನಿಂತರು. ಹೀಗಾಗಿ ನಾನು ಹೊರಬಿದ್ದೆ.
ಅದು ಸರ್ವನಾಶದ ಹಂತ. ಏನು ಮಾಡಬೇಕಲೆಂದು ತೋಚಲಿಲ್ಲ. ಸಿಲಿಕಾನ್ ವ್ಯಾಲಿಯಿಂದ ಓಡಿಬಿಡುವ ವರೆಗೂ ಯೋಚಿಸಿದೆ. ಆದರೆ, ನಾನೇನು ಮಾಡುತ್ತಿದ್ದೆನೋ ಅದನ್ನು ಪ್ರೀತಿಸಿದ್ದೆ. ಆಪಲ್ ಬದಲಾಗಿರಲಿಲ್ಲ. ನಾನು ತಿರಸ್ಕಾರಕ್ಕೊಳಗಾಗಿದ್ದೆ, ಆದರೆ ನನ್ನಲ್ಲಿನ್ನೂ ಆ ಬಗ್ಗೆ ಪ್ರೀತಿಯಿತ್ತು. ಪುನಃ ಆರಂಭಿಸುವ ಬಗ್ಗೆ ಯೋಚಿಸಿದೆ. ಆಗ ಅದು ನನಗೆ ಗೊತ್ತಾಗಲಿಲ್ಲ, ಆಪಲ್‌ನಿಂದ ಹೊರಹಾಕಿದ್ದು ನನ್ನ ಜೀವನದ ಅತ್ಯುತ್ತಮ ಘಟನೆ. ಯಶಸ್ವಿತನದ ಭಾರವನ್ನು ಖಾಲಿ ಕೈಯ ಆರಂಭಿಕನ ಲಘುತ್ವವು ಸ್ಥಳಾಂತರಿಸಿತ್ತು. ಬದುಕಿನ ಅತ್ಯಂತ ಸೃಜನಶೀಲ ಕ್ಷಣಗಳು ಅವಾಗಿದ್ದವು. ನೆಕ್ಟ್ಸ್ ಕಂಪನಿ ಆರಂಭಿಸಿದೆ. ನಂತರ ಪಿಕ್ಸರ್ ಆರಂಬಿಸಿದೆ. ಮುಂದೆ ನನ್ನ ಹೆಂಡತಿಯಾದ ಹುಡುಗಿಯ ಜತೆ ಪ್ರೀತಿಗೆ ಬಿದ್ದೆ. ಪಿಕ್ಸರ್ ಜಗತ್ತಿನ ಮೊದಲ ಸೂಪರ್‌ಹಿಟ್ ಅನಿಮೇಶನ್ ಚಿತ್ರ ‘ಟಾಯ್ ಸ್ಟೋರಿ’ಯನ್ನು ತಯಾರಿಸಿತು. ಬಳಿಕ ಆಪಲ್, ನೆಕ್ಸ್ಟ್‌ನ್ನು ಕೊಂಡಿತು. ಆಪಲ್‌ಗೆ ಮರಳಿದೆ. ನೆಕ್ಸ್ಟ್‌ನಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಇಂದು ಆಪಲ್‌ನ ಹೃದಯದಲ್ಲಿದೆ. ಲೌರೀನ್ ಮತ್ತು ನಾನು ಒಳ್ಳೆಯ ದಾಂಪತ್ಯ ನಡೆಸಿದವು.
ಆಪಲ್‌ನಿಂದ ಹೊರಬೀಳದಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ. ಅದೊಂದು ಕಹಿಗುಳಿಗೆ. ಆದರೆ ರೋಗಿಗೆ ಅಗತ್ಯವಾಗಿತ್ತು. ನಾನೇನನ್ನು ಪ್ರೀತಿಸಿದ್ದೆನೋ ಅದು ನನ್ನನ್ನು ಮುಂದುವರಿಯುವಂತೆ ಪ್ರೇರೇಪಿಸಿತು. ನೀವು ಪ್ರೀತಿಸುವುದನ್ನೇ ಮಾಡಿ. ನಿಮ್ಮ ಸಂಬಂಧಗಳಿಂದ, ಕೆಲಸದ ವರೆಗೂ ಅದು ನಿಜ. ನೀವು ಪ್ರೀತಿಸಬಹುದಾದುದನ್ನು ಕಂಡುಹಿಡಿಯುವವರೆಗೆ ವಿರಮಿಸಬೇಡಿ.
ನನ್ನ ಮೂರನೇ ಕತೆ ಸಾವಿಗೆ ಸಂಬಂಧಿಸಿದ್ದು. ಪ್ರತಿದಿನ ಬೆಳಗ್ಗೆ ನಾನು ಕನ್ನಡಿಯ ಮುಂದೆ ನಿಂತಾಗಲೂ ಕೇಳಿಕೊಳ್ಳುತ್ತೇನೆ: ‘ಇಂದು ನನ್ನ ಜೀವನದ ಕೊನೆಯ ದಿನವಾದರೆ, ನಾನೇನು ಮಾಡಬೇಕೆಂದಿದ್ದೆನೋ ಅದನ್ನು ಮುಗಿಸಬಲ್ಲೆನೆ ?’ ನಾನು ಸಾಯಲಿದ್ದೇನೆ ಎಂದು ನೆನಪಿಸಿಕೊಳ್ಳುವುದೇ, ನಾವು ಕಳೆದುಕೊಂಡಿರುವುದರ ಮೇಲಿನ ಚಿಂತೆಯನ್ನು ಬಿಡುವ ಅತ್ಯುತ್ತಮ ಉಪಾಯ. ಒಂದು ವರ್ಷ ಹಿಂದೆ ಡಯಾಗ್ನೋಸಿಸ್ ನಡೆಸಿದಾಗ ನನಗೆ ಮೆದೋಜೀರಕ ಗ್ರಂಥಿಯ ಕ್ಯಾನ್ಸರ್ ಆಗಿರುವುದು ಗೊತ್ತಾಯಿತು. ನನಗೆ ಮೆದೋಜೀರಕ ಅಂದರೆ ಏನೆಂಬುದೂ ಗೊತ್ತಿರಲಿಲ್ಲ. ಇದು ಚಿಕಿತ್ಸೆಯಿಲ್ಲದ ರೋಗ, ಮೂರರಿಂದ ಆರು ತಿಂಗಳು ಮಾತ್ರ ಬದುಕಬಲ್ಲೆ ಎಂದು ವೈದ್ಯರು ಹೇಳಿದರು. ಇನ್ನು ಗುಡ್‌ಬೈ ಹೇಳಲು ಸಿದ್ಧತೆ ನಡೆಸಬಹುದು ಎಂಬರ್ಥದಲ್ಲಿ ಮಾತನಾಡಿದರು.
ಆ ದಿನವಿಡೀ ರೋಗಶೋಧ ನಡೆಯಿತು. ಸಂಜೆ ಹೊತ್ತಿಗೆ ವೈದ್ಯರು ಅಳತೊಡಗಿದರು. ಇದೊಂದು ಅತ್ಯಪರೂಪದ ಕ್ಯಾನ್ಸರ್, ತೀವ್ರ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು ಎಂಬುದು ಅವರಿಗೆ ಗೊತ್ತಾಗಿತ್ತು. ಸರ್ಜರಿಯಾಯಿತು, ನಾನೀಗ ಗುಣಮುಖಿ.
ಇದು ನಾನು ಮೃತ್ಯುವಿನ ಅತ್ಯಂತ ಸಮೀಪ ಹೋಗಿಬಂದ ಸನ್ನಿವೇಶ. ಸಾಯಲು ಯಾರೂ ಬಯಸುವುದಿಲ್ಲ. ಆದರೆ ಅದು ಎಲ್ಲರೂ ಹಂಚಿಕೊಳ್ಳುವ, ಯಾರೂ ತಪ್ಪಿಸಿಕೊಳ್ಳಲಾಗದ ಗುರಿ. ಸಾವೆಂಬುದು ಈ ಜೀವನದ ಬಹುದೊಡ್ಡ ಅನ್ವೇಷಣೆ. ಅದು ಬದುಕಿನ ಬದಲಾವಣೆಯ ಚೋದಕ. ಅದು ಹಳತನ್ನ ಸರಿಸಿ ಹೊಸತಿಗೆ ಜಾಗ ಮಾಡಿಕೊಡುತ್ತದೆ. ನಿಮ್ಮ ಸಮಯ ಸೀಮಿತ. ಹೀಗಾಗಿ ಇನ್ನೊಬ್ಬರ ಬದುಕನ್ನು ನೀವು ಜೀವಿಸಬೇಡಿ. ಇನ್ನೊಬ್ಬರ ಧ್ವನಿ ನಿಮ್ಮ ಒಳಧ್ವನಿಯನ್ನು ಆವರಿಸದಿರಲಿ. ತುಂಬಾ ಮುಖ್ಯವಾದ್ದೆಂದರೆ, ನಿಮ್ಮ ಹೃದಯ ಹಾಗೂ ಒಳನೋಟವನ್ನು ಹಿಂಬಾಲಿಸುವ ಧೈರ್‍ಯ.
ನಾನು ಸಣ್ಣವನಿದ್ದಾಗ ‘ಹೋಲ್ ಅರ್ತ್ ಕೆಟಲಾಗ್’ ಎಂದೊಂದಿತ್ತು. ಅದು ಈಗಿನ ಗೂಗಲ್‌ನ ಪುಸ್ತಕ ರೂಪದಂತಿತ್ತು. ಅದರ ಕೊನೆಯ ಸಂಚಿಕೆಯ ಹಿಂಬದಿಯಲ್ಲಿ ಸಾಹಸಯಾತ್ರೆಯ ಹಾದಿಯ ಚಿತ್ರ. ಅದರ ಕೆಳಗೆ ಹೀಗೆ ಬರೆದಿತ್ತು: ‘ನಿಮ್ಮಲ್ಲಿ ಹಸಿವಿರಲಿ, ಮೂರ್ಖತನವಿರಲಿ’. ನಾನು ಅದಾಗಬೇಕೆಂದು ಬಯಸಿದ್ದೆ. ನೀವೂ ಹಾಗಾಬೇಕೆಂದು ನನ್ನ ಬಯಕೆ.
Sunday, October 9, 2011
ಗುಲಾಬಿ ಹುಡುಗಿ
೧೯೯೭ರಲ್ಲಿ ಜೇಮ್ಸ್ ಕ್ಯಾಮರೂನ್‌ನ ‘ಟೈಟಾನಿಕ್’ ಸಿನಿಮಾ ಬಂತು; ಇಡೀ ಜಗತ್ತಿನ ಪ್ರೇಕ್ಷಕರೆಲ್ಲ ನೀರಿನಲ್ಲಿ ಮುಳುಗಿಹೋಗುವ ವೈಭವದ ಟೈಟಾನಿಕ್ ಹಡಗನ್ನು ನೋಡಿ ಒಂದೆಡೆ ಕಣ್ಣೀರು ಮಿಡಿದರು; ಅದೇ ಹೊತ್ತಿಗೆ, ಮುಳುಗದೆ ಉಳಿದು ಹಲಗೆಯ ಮೇಲೆ ತೇಲಿ ಬದುಕುವ ‘ರೋಸ್ ಡೆವಿಟ್ ಬುಕಾಟರ್’ ಎಂಬ ತುಂಬಿದೆದೆಗಳ, ಉಬ್ಬಿದ ಕಪೋಲದ, ಗುಂಗುರುಕೂದಲಿನ, ಯವ್ವನ ಉಕ್ಕಿ ಚೆಲ್ಲುವರಿಯುವ ತರುಣಿಯನ್ನು ಕಣ್ತುಂಬಿಕೊಂಡರು. ರೋಸ್ ಮತ್ತು ಲಿಯೊನಾರ್ಡೊ ಡಿಕ್ಯಾಪ್ರಿಯೊನ ಪ್ರೇಮಪ್ರಸಂಗದ ಬಿಸಿಬಿಸಿ ದೃಶ್ಯಗಳನ್ನು ಎದೆಗಿಳಿಸಿಕೊಂಡು ಬೆಚ್ಚಗಾದರು. ಟೈಟಾನಿಕ್ ಮುಳುಗಿತು; ಆದರೆ ಈ ನಟಿಯ ಬದುಕು ಊಹೆಗೂ ನಿಲುಕದ ಎತ್ತರದಲ್ಲಿ ತೇಲಿತು. ಈಕೆ ಕೇಟ್ ವಿನ್ಸ್‌ಲೆಟ್.
ಈಕೆ ಹುಟ್ಟಿದೂರು ಇಂಗ್ಲೆಂಡಿನಲ್ಲಿ ಈಗಲೂ ಆಕೆಯನ್ನು ಕರೆಯೋದು ‘ರೋಸ್’ ಅಂತಲೇ. ಜನಿಸಿದ್ದು ಅಕ್ಟೋಬರ್ ೨೫ರಂದು; ಭೂಮಿ ಮೇಲೆ ಅವತರಿಸಿ ೩೬ ವರ್ಷಗಳಾದವು; ತವರು ಇಂಗ್ಲೆಂಡಿನ ಬರ್ಕ್‌ಶೈರ್; ಎತ್ತರ ಐದಡಿ ಆರೂವರೆ ಇಂಚು... ಎಂಬುದೆಲ್ಲ ಈಕೆಯ ಬಗ್ಗೆ ತುಸು ಆಸಕ್ತಿ ಹುಟ್ಟಿಸಬಹುದಾದ ವಿವರಗಳು. ಅವೆಲ್ಲ ಇರಲಿ; ಈಕೆಯ ಬಯಾಗ್ರಫಿಯ ಇತರೆ ಸಂಗತಿಗಳೂ ಶ್ಯಾನೆ ಕುತೂಹಲಕರವಾಗಿವೆ.
ಈಕೆ ಹುಟ್ಟಿದ್ದು ರಂಗಭೂಮಿ ಹಿನ್ನೆಲೆಯಿದ್ದ ಫ್ಯಾಮಿಲಿಯಲ್ಲಿ. ಎಲ್ಲ ಹುಡುಗಿಯರಂತೆ ಹರೆಯಕ್ಕೆ ಬಂದ ಈಕೆಯಲ್ಲಿ ಆಸೆ ಹಾಗೂ ಕನಸುಗಳು ಮೊಳೆಯತೊಡಗಿದ್ದವು. ೧೧ರ ಹರೆಯದಲ್ಲೇ ಜಾಹಿರಾತಿಗೆ ನಟಿಸಿದ ಈಕೆ ಅಲ್ಲಿಂದಾಚೆ ವೇದಿಕೆ ಮೇಲೆ ನಾಟಕವಾಡತೊಡಗಿದಳು. ೧೭ರ ಹೊತ್ತಿಗೆ ಈಕೆಯ ದೇಹ ಪುಷ್ಟವಾಗಿ ಚಿಮ್ಮತೊಡಗಿತ್ತು; ಯವ್ವನ ದೇಹದಿಂದ ಆಚೆ ಪುಟಿಯುತ್ತಿತ್ತು. ಕೆಲವು ‘ಎ’ ಸರ್ಟಿಫಿಕೇಟ್ ಫಿಲಂಗಳು ಈಕೆಯನ್ನು ಕರೆದವು. ಈಕೆಯೂ ಹೆಚ್ಚಿಗೇನು ಯೋಚಿಸದೆ ತನ್ನ ಮೈತೆರೆದು ಚಿತ್ರರಂಗದಲ್ಲಿ ಒಂದಾದಳು. ಹುಡುಗರು ನೋಡಿ ಒದ್ದಾಡುವಂತೆ ಈಕೆಯನ್ನು ನಿರ್ದೇಶಕರು ತೋರಿಸಿದರು. ‘ಎ’ ಮೂವಿಗಳಿಂದ ಶೇಕ್ಸ್‌ಪಿಯರ್ ಟ್ರಾಜಿಡಿಗಳವರೆಗೆ ಎಲ್ಲ ವಿಧದ ಫಿಲಂಗಳಲ್ಲಿ ಅಭಿನಯಿಸಿದಳು.
ಆದರೆ ಈಕೆಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟದ್ದು ಮಾತ್ರ ಟೈಟಾನಿಕ್. ದಿನ ಬೆಳಗಾಗುವುದರೊಳಗೆ ಈಕೆ ಸಿನೆರಸಿಕರ ಮನೆಮಾತಾಗಿ ಹೋದಳು. ಲೋಕಾದ್ಯಂತ ಪಡ್ಡೆ ಹುಡುಗಿಯರು ತಾವೂ ರೋಸ್‌ಳಂತಿರಬೇಕೆಂದು, ಸಾವಿನಂಚಿನಲ್ಲೂ ತಮ್ಮ ಬೆರಳಿಗೆ ಬೆರಳು ಬೆಸೆದು ಕೂರಬಹುದಾದ ಹುಡುಗನಿಗಾಗಿ ಹುಡುಕತೊಡಗಿದರು. ಈಕೆ ಮಾತ್ರ ಎರಡೆರಡು ಆಸ್ಕರ್ ಪ್ರಶಸ್ತಿ ಮಡಿಲಿಗೆ ಹಾಕಿಕೊಂಡು ಹಾಲಿವುಡ್ ಟಾಪ್ ನಟಿಯರ ಸಾಲಿಗೆ ಚಿಮ್ಮಿಬಿಟ್ಟಳು.
ಸಕ್ಸಸ್‌ಫುಲ್ ನಟನಟಿಯರ ವೈವಾಹಿಕ ಜೀವನ ಮಾತ್ರ ಅದ್ಯಾಕೆ ಹಾಗಿರುತ್ತದೆಯೋ. ಫ್ಲರ್ಟಿಂಗ್, ಪ್ರೇಮ, ದಾಂಪತ್ಯ, ಡೈವೋರ್ಸ್... ಇವರ ಬದುಕಿನ ನಿತ್ಯಚಕ್ರ. ಈಕೆಯೂ ಮೂರು ಮೂರು ಗಂಡಂದಿರನ್ನು ಕಂಡವಳೇ. ೧೯೯೮ರಲ್ಲಿ ಜಿಮ್ ತ್ರೀಪಲ್‌ಟನ್ ಎಂಬ ನಿರ್ದೇಶಕನನ್ನು ಮದುವೆಯಾದಳು. ಒಬ್ಬಳು ಮಗಳು ಹುಟ್ಟಿದಳು. ಮೂರು ವರ್ಷದಲ್ಲಿ ಆತನಿಂದ ವಿಚ್ಛೇದನ ಪಡೆದಳು. ಅದಾಗಿ ಎರಡು ವರ್ಷದಲ್ಲಿ ಮತ್ತೊಬ್ಬ ನಿರ್ದೇಶಕ ಸ್ಯಾಮ್ ಮೆಂಡೆಸ್‌ನನ್ನು ಮದುವೆಯಾದಳು. ಒಬ್ಬ ಮಗ ಹುಟ್ಟಿದ. ಇಬ್ಬರೂ ಏಳು ವರ್ಷ ಜತೆಗಿದ್ದರು. ಕಳೆದ ವರ್ಷ ಬೇರೆಯಾದರು.
ರೋಸ್ ಬದುಕು ಈಗ ಮತ್ತೊಮ್ಮೆ ಪಥ ಬದಲಿಸಿದೆ. ಅವಳೀಗ ಇನ್ನೊಂದು ಪ್ರೇಮದ ಅನ್ವೇಷಣೆಯಲ್ಲಿದ್ದಾಳೆ. ಮೊನ್ನೆ ಈಕೆ ಕೆರಿಬಿಯನ್ ದ್ವೀಪಕ್ಕೆ ವಿಹಾರಾರ್ಥ ಹೋದಾಗ ಈಕೆಯ ಜತೆಗೆ ಲೂಯಿಸ್ ಡೌಲರ್ ಎಂಬ ಮಾಡೆಲ್ ಪ್ರಿಯತಮನಿದ್ದ. ಅಲ್ಲೇನಾಯಿತೋ ಗೊತ್ತಾಗಲಿಲ್ಲ. ವಾಪಸ್ ಪ್ಲೇನ್ ಹತ್ತಿದಾಗ ಆಕೆಯ ಜತೆಗಿದ್ದವನು ನೆಡ್ ರಾಕ್‌ನ್ರಾಲ್. ಈತ ವರ್ಜಿನ್ ಸಂಸ್ಥೆಯ ರಿಚರ್ಡ್ ಬ್ರಾಸ್ನನ್ ಇದ್ದಾನಲ್ಲ, ಆತನ ಸಹೋದರನ ಮಗ.
ವಯಸ್ಸು ಮೂವತ್ತಾರು ಎಂದರೆ ಸೆಟಲ್ ಆಗಬೇಕಾದ ಪ್ರಾಯವೇ. ಆಗಲಿ ಬಿಡಿ. ಟೈಟಾನಿಕ್ ಆದಂತೆ ಆಕೆಯ ಬದುಕು ಆಗದಿರಲಿ.
Friday, June 24, 2011
ಪುಸ್ತಕ ಬಂದಿದೆ...
‘ಮೇಧಾ ಪಾಟ್ಕರ್’ ನನ್ನ ಎರಡನೇ ಪುಸ್ತಕ. ಎಸ್.ದಿವಾಕರ್ ಮುಖ್ಯ ಸಂಪಾದಕರಾಗಿರುವ ‘ವಿಖ್ಯಾತರ ವ್ಯಕ್ತಿಚಿತ್ರ ಮಾಲಿಕೆ’ಯಲ್ಲಿ ವಸಂತ ಪ್ರಕಾಶನ ಹೊರ ತಂದಿರುವ ೨೭ ಹೊತ್ತಿಗೆಗಳಲ್ಲಿ ಇದೂ ಒಂದು.
ನನ್ನ ನಂಬಿಕೆ ಹೇಳಬೇಕೆಂದರೆ, ಮೇಧಾ ಪಾಟ್ಕರ್ ಬಗ್ಗೆ ಕನ್ನಡದಲ್ಲಿ ಬಂದಿರುವ ಪ್ರಪ್ರಥಮ ಪುಸ್ತಕ ಇದು. ಈ ಪುಸ್ತಕ ಬರೆಯಲು ಮಾಹಿತಿಗಾಗಿ ಮೇಧಾ ಪಾಟ್ಕರ್ ಬಗ್ಗೆ ಯಾವುದಾದರೂ ಇಂಗ್ಲಿಷ್ ಪುಸ್ತಕ ಬಂದಿದೆಯಾ ಅಂತ ಹುಡುಕಿಕೊಂಡು ಬೆಂಗಳೂರಿನ ಎಲ್ಲ ದೊಡ್ಡ ದೊಡ್ಡ ಇಂಗ್ಲಿಷ್ ಪುಸ್ತಕ ಮಳಿಗೆಗಳಿಗೆ ಎಡತಾಕಿದೆ. ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳಲ್ಲಿ ಬೆವರು ಸುರಿಸಿದೆ. ಮಿತ್ರರಿಗೆಲ್ಲ ಕೇಳಿದೆ.
ಎಲ್ಲೂ ಏನೂ ಸಿಗಲಿಲ್ಲ. ಮೇಧಾ ಅವರ ಸಹ ಚಳವಳಿಕಾರ ಟಿ.ಆರ್.ಭಟ್ ಅವರನ್ನು ಸಂಪರ್ಕಿಸಿದೆ. ಅವರಿಂದ ಮೇಧಾ ಅವರ ಆಪ್ತ ಸಹಾಯಕ ಮಧುರೇಶ್ ಅವರ ದೂರವಾಣಿ ಸಂಖ್ಯೆ ಸಿಕ್ಕಿತು. ಅವರನ್ನೇ ಮಾತಾಡಿಸಿದೆ. ಮೇಧಾ ಬಗ್ಗೆ ಯಾವ ಇಂಗ್ಲಿಷ್ ಪುಸ್ತಕವೂ ಬಂದಿಲ್ಲವೆಂದೂ, ಅರುಣ್‌ಕುಮಾರ್ ತ್ರಿಪಾಠಿ ಎಂಬವರು ಬರೆದ ಹಿಂದಿ ಪುಸ್ತಕವೊಂದಿದೆಯೆಂದೂ, ಅದರ ಕಾಪಿಗಳು ಮುಗಿದಿದ್ದು, ತಮ್ಮ ಬಳಿಯೂ ಇಲ್ಲವೆಂದೂ ಅವರು ಹೇಳಿದರು.
ಹೀಗಾಗಿ, ಮೇಧಾ ಬಗ್ಗೆ ಮೊದಲಿಗೆ ಕನ್ನಡದಲ್ಲಿ ಬರೆದ ಹೆಗ್ಗಳಿಕೆ ನನ್ನದು. ಇಂಗ್ಲಿಷ್‌ನ ಯಾವ ದೊಡ್ಡ ಪ್ರಕಾಶನವೂ ಮಾಡದ ಒಳ್ಳೆಯ ಕೆಲಸವನ್ನು- ಇಂಥ ಮಹನೀಯರ ಬಗ್ಗೆ ಬರೆಸುವ ಮೂಲಕ- ವಸಂತ ಪ್ರಕಾಶನ ಮಾಡಿದೆ. ಈ ಮಾಲಿಕೆಯಲ್ಲಿ ವಂದನಾ ಶಿವ, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್ ಮುಂತಾದ ಮಹನೀಯರ ಬಗ್ಗೆ ಕೃತಿಗಳಿವೆ. ಹೆಚ್ಚಿನ ಕೃತಿಗಳನ್ನು ನನ್ನ ಪತ್ರಕರ್ತ ಮಿತ್ರರೇ ಬರೆದಿದ್ದಾರೆ.
ಪುಸ್ತಕಕ್ಕೆ ಮಾಹಿತಿ ಮೂಲ :- ಮೇಧಾ ಒಡನಾಡಿಗಳು, ಇಂಟರ್‌ನೆಟ್.
ಪುಟಗಳು ೭೦, ಬೆಲೆ ೩೦ ರೂ.
ಪ್ರತಿಗಳಿಗಾಗಿ- ವಸಂತ ಪ್ರಕಾಶನ, ಜಯನಗರ, ಬೆಂಗಳೂರು (ಮುರಳಿ ಶ್ರೀನಿವಾಸನ್- ೯೮೮೬೩೯೯೧೨೫)
ನನ್ನನ್ನೂ ಸಂಪರ್ಕಿಸಬಹುದು- ೯೯೮೦೧೮೯೮೪೯.
Saturday, June 11, 2011
ಏನೂ ಮಿಸ್ಟೇಕ್ ಆಗ್ಲಿಲ್ಲ
ಸಣ್ಣ ಕತೆಗಳನ್ನು ಜೋಡಿಸಿ ನಾಟಕ ರೂಪದಲ್ಲಿ ರಂಗದ ಮೇಲೆ ತರುವುದು ಹೊಸತೇನಲ್ಲ. ಹೀಗೆ ಕತೆಗಳನ್ನು ಜೋಡಿಸಿ ರಂಗರೂಪ ಸಿದ್ಧಪಡಿಸುವಾಗ, ಬಿಡಿ ಕತೆಗಳನ್ನು ಒಂದಾಗಿ ಬೆಸೆಯುವ ಎಳೆಯೊಂದು ಅವುಗಳಲ್ಲಿ ಇರಬೇಕಾದ್ದು ಅವಶ್ಯ. ದೇವನೂರು ಮಹಾದೇವರ ಕತೆಗಳನ್ನು ಜೋಡಿಸಿ ಮಾಡಿದ, ದಲಿತ ಜೀವನದ ಮುಖ್ಯಧಾರೆ ಹೊಂದಿದ್ದ ‘ದ್ಯಾವನೂರು’ ನಾಟಕ ಇಂಥದು. ಸಾದತ್ ಹಸನ್ ಮಾಂಟೋ ಅವರ ಕತೆಗಳ ರಂಗರೂಪ ‘ಮಿಸ್ಟೇಕ್’ ಕೂಡ ಇಂಥದೇ. ದೇಶ ವಿಭಜನೆಯ ದಿನಗಳ ಕರಾಳ ಹಿಂಸೆಯ, ಮನುಷ್ಯನ ಅಂತರಂಗದ ಅವನತಿಯ ಕಥನವಿದು. ಇತ್ತೀಚೆಗೆ ಉಡುಪಿಯ ‘ರಥಬೀದಿ ಗೆಳೆಯರು’ ತಂಡ ಈ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿತು.
ಮಾಂಟೋ ಕತೆಗಳಿಗೆ ಬೆಚ್ಚಿ ಬೀಳಿಸುವ ಗುಣವಿದೆ. ಆದರೆ ಬೆಚ್ಚಿಸುವುದೇ ಆತನ ಉದ್ದೇಶವಲ್ಲ. ಇದೇನು ಹೀಗಾಯಿತಲ್ಲ, ಮನುಷ್ಯ ಮನುಷ್ಯರನ್ನು ಒಂದಾಗಿಸಬೇಕಾದ ಧರ್ಮ, ಪ್ರಾದೇಶಿಕ ಭಿನ್ನತೆಗಳು ಮನುಷ್ಯರನ್ನು ಒಡೆದು ಜೀವನವನ್ನೇ ಛಿದ್ರಗೊಳಿಸಿವೆಯಲ್ಲ ಎಂಬ ವಿಷಾದವೇ ಆತನ ಕತೆಗಳಲ್ಲಿ ಸ್ಥಾಯಿಯಾಗಿ ಕಾಣುವಂಥದು. ಬೆಚ್ಚಿಸುವ ತಾತ್ಕಾಲಿಕ ಗುಣ ಹಾಗೂ ಅಂತರಂಗವನ್ನು ತೀವ್ರವಾಗಿ ಮಿಡಿಯುವ ಈ ವಿಷಾದ- ಎರಡೂ ಸೇರಿ ಮಾಂಟೋ ಕತೆಗಳಿಗೊಂದು ಅಪೂರ್ವವಾದ ನಾಟಕೀಯತೆ ಪ್ರಾಪ್ತವಾಗಿದೆ. ಹೀಗಾಗಿ ಈತನ ಕತೆಗಳ ರಂಗರೂಪಕ್ಕೆ ನಾಟಕೀಯತೆಯನ್ನು ಹೊರಗಿನಿಂದ ತರಬೇಕಾಗಿಲ್ಲ. ಇದು ನಿರ್ದೇಶಕರಿಗಿರುವ ಸೌಲಭ್ಯ.
ಆದರೆ ಸವಾಲು ಕೂಡ ಇದೇ ಆಗಿದೆ. ಮಾಂಟೋನ ಕೆಲ ಪುಟ್ಟ ಕತೆಗಳಲ್ಲಿರುವ ದಾರುಣ ವಾಸ್ತವ, ರಂಗದ ಮೇಲೆ ತೋರಿಸುವುದಕ್ಕೆ ಕೂಡ ಅಂಜಿಕೆಯಾಗುವಂಥದು. ಆದರೆ ಇದರ ಪರಿಣಾಮವನ್ನು ಮಸುಕುಗೊಳಿಸಿ ತೋರುವುದು ಕೂಡ ಮಾಂಟೋನ ದರ್ಶನಕ್ಕೆ ಅಪಚಾರ ಬಗೆದಂತೆ. ಹೀಗಾಗಿ ಇಲ್ಲಿ ನಿರ್ದೇಶಕರಿಗೆ ಕತ್ತಿಯ ಮೇಲಿನ ನಡಿಗೆ. ನಿರ್ದೇಶಕ ಡಾ.ಶ್ರೀಪಾದ ಭಟ್ ಶಿರಸಿ ಇದನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ರಥಬೀದಿ ಗೆಳೆಯರು ಕೂಡ ಸಹಜವಾಗಿ ಅಭಿನಯಿಸಿದ್ದಾರೆ.
ಮಿಸ್ಟೇಕ್ ನಾಟಕ ನಾಲ್ಕು ಕತೆಗಳನ್ನು ಜೋಡಿಸಿ ರೂಪಿಸಿದ್ದು. ನಾಟಕಕ್ಕೆ ಹೆಸರು ನೀಡಿದ ಕತೆ ತುಂಬಾ ಪುಟ್ಟದು. ನಾಲ್ಕೈದು ನಿಮಿಷದಲ್ಲಿ ಮುಗಿಯುವಂಥದು. ಕತೆಯನ್ನು ಓದಿಕೊಂಡಿರದೆ ಇದ್ದವರಿಗೆ ಈ ‘ಮಿಸ್ಟೇಕ್’ ಏನೆಂದು ಅರ್ಥವಾಗದು. ಮಿಸ್ಟೇಕ್ ಏನೆಂಬುದನ್ನು ಕತೆಗಾರ ಕೂಡ ವಾಚ್ಯಗೊಳಿಸುವುದಿಲ್ಲ. ಆದರೆ ಕತೆಯ ಪಠ್ಯಕ್ಕೆ ಸಂಪೂರ್ಣ ನಿಷ್ಠವಾಗಿರುವ ಶಿಸ್ತನ್ನು ಇಲ್ಲಿ ತುಸು ಸಡಿಲಿಸಬಹುದಿತ್ತೇನೊ.
‘ಓಪನ್ ಮಾಡು’, ‘ಶರೀಫನ್’ ಹಾಗೂ ‘ಪುರುಷಾರ್ಥ’ ಕತೆಗಳನ್ನಂತೂ ಸುಂದರವಾಗಿ ನಿರೂಪಿಸಲಾಗಿದೆ. ‘ಪುರುಷಾರ್ಥ’ದ ಮುಮ್ತಾಜ್‌ನ ಪಾತ್ರವಂತೂ ಇಡೀ ನಾಟಕಕ್ಕೆ ಜೀವ ತುಂಬುತ್ತದೆ. ಉಳಿದವರೂ ಅದಕ್ಕೆ ಪೋಷಕ ರೀತಿಯಲ್ಲಿ ದುಡಿದಿದ್ದಾರೆ. ಕಬೀರ, ದಾಸರ ಪದಗಳನ್ನು ಹಿತಮಿತವಾಗಿ ಹಿನ್ನೆಲೆಯಲ್ಲಿ ಅಳವಡಿಸಿಕೊಂಡದ್ದು ನಾಟಕಕ್ಕೆ ಇನ್ನಷ್ಟು ಶ್ರವ್ಯಸುಖ ಕೊಟ್ಟಿದೆ.
ಇಷ್ಟು ಹೇಳಿದರೆ ನಾಟಕದ ಪರಾಮರ್ಶೆಯೇನೋ ಮುಗಿಯುತ್ತದೆ. ಆದರೆ ಇದನ್ನು ನಾವು ನೋಡುತ್ತಿರುವ ಸಂದರ್ಭದ ಬಗ್ಗೆ ಒಂದು ಅಬ್ಸರ್ವೇಶನ್ ಹೇಳದೆ ಹೋದರೆ ತಪ್ಪಾಗುತ್ತದೆ. ಇತ್ತೀಚೆಗಂತೂ ಕರ್ನಾಟಕ, ಪ್ರಧಾನವಾಗಿ ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳು ಮತೀಯ ಮೂಲಭೂತವಾದ ಹಾಗೂ ಹಿಂಸೆಯ ಆಡುಂಬೊಲಗಳಾಗಿ ಹತಾಶೆಯ ಅಂಚಿಗೆ ತಲುಪಿರುವುದನ್ನು ನಾವು ಗಮನಿಸಿದ್ದೇವಷ್ಟೆ. ಇದನ್ನು ವಿರೋಸುವ ದನಿಗಳೂ ಅಲ್ಲಿಂದಲೇ ಹುಟ್ಟಿಕೊಂಡಿವೆ. ಈ ನಿಟ್ಟಿನಲ್ಲಿ ನೋಡಿದರೆ, ಮಿಸ್ಟೇಕ್ ನಾಟಕವನ್ನು ಉಡುಪಿಯ ತಂಡದವರೇ ಆಯ್ದುಕೊಂಡು ಅಭಿನಯಿಸಿರುವುದು ತುಂಬಾ ಅರ್ಥಪೂರ್ಣ. ಇದು ಈ ನಾಟಕ ಪ್ರದರ್ಶನಕ್ಕೆ ನೀಡಬಹುದಾದ ಭರತವಾಕ್ಯ.
Friday, May 6, 2011
ನೀರಿನ ನಿಲುತಾಣ
ರಂಗದ ಮೇಲೆ ಸಣ್ಣದಾಗಿ ನೀರು ತೊಟ್ಟಿಕ್ಕುವ ಒಂದು ನಲ್ಲಿ. ಇನ್ನೊಂದು ಬದಿಯಲ್ಲಿ ಕಸದ ರಾಶಿ. ಯಾರು ಯಾರೋ ಬರುತ್ತಾರೆ, ಹೋಗುತ್ತಾರೆ. ಮನುಷ್ಯ ದಣಿವು ತೀರಿಸಿಕೊಳ್ಳುವ ಕ್ರಿಯೆ ನಾಟಕದಾದ್ಯಂತ ನಡೆದೇ ಇದೆ. ಮಧ್ಯೆ ಮಧ್ಯೆ ಜೀವನ ನಾಟಕದ ಹಲವಾರು ದೃಶ್ಯಗಳೂ ಅನಾವರಣಗೊಳ್ಳುತ್ತವೆ- ಪ್ರೇಮ, ಸ್ನೇಹ, ಕಚ್ಚಾಟ, ದರ್ಪ, ಸಾವು, ಬಾಲ್ಯ...
ನೀನಾಸಂ ಮರುತಿರುಗಾಟ- ೨೦೧೧ ಪ್ರದರ್ಶಿಸುತ್ತಿರುವ ‘ನೀರಿನ ನಿಲುತಾಣ’ ನಾಟಕದ ಬಗ್ಗೆ ಇಷ್ಟು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಅದೊಂದು ನಾಟಕ ಎಂದರೆ ಅರ್ಧ ಸತ್ಯ; ಏಕೆಂದರೆ ಅಲ್ಲಿ ನಾಟಕೀಯ ಘಟನೆಗಳಾಗಲೀ, ಶೀಘ್ರಗತಿಯಾಗಲೀ ಇಲ್ಲ. ಅದೊಂದು ಕಾವ್ಯದಂತಿದೆ ಎಂದರೆ ಕ್ಲೀಷೆ. ಇಲ್ಲಿ ಮಾತೇ ಇಲ್ಲ.
ನಾಟಕ ಎಷ್ಟು ನಿಧಾನ ಗತಿಯಲ್ಲಿದೆ ಎಂದರೆ, ರಂಗ ಪ್ರವೇಶಿಸುವ ಒಂದು ಪಾತ್ರ ರಂಗದ ಮಧ್ಯಕ್ಕೆ ಬರಲು ಹತ್ತು ನಿಮಿಷ ತೆಗೆದುಕೊಳ್ಳುತ್ತದೆ. ಇದನ್ನು ‘ಅತಿ ವಿಲಂಬಿತ ಲಯ’ ಎಂದು ನಿರ್ದೇಶಕರು ಕರೆದಿದ್ದಾರೆ. ಎಲ್ಲೋ ಒಂದೆರಡು ಕಡೆ ಬಿಟ್ಟರೆ, ನಿಜ ಜೀವನಕ್ಕೆ ಸಹಜವಾದ ಗತಿಯ ಚಲನೆಗಳು ಈ ನಾಟಕದಲ್ಲಿ ಇಲ್ಲ. ನಾಟಕದಲ್ಲೆಲ್ಲೂ ಮಾತುಗಳೂ ಇಲ್ಲ. ಆರಂಭದ ಅರ್ಧ ಗಂಟೆಯಲ್ಲೇ ಪ್ರೇಕ್ಷಕ ತಾಳ್ಮೆ ಕಳೆದುಕೊಂಡಿರುತ್ತಾನೆ; ನಾಟಕದ ಒಳಗೆ ರಭಸಗತಿಯಿಂದ ನುಗ್ಗಿಬಿಡೋಣವೆಂದೂ ಆತನಿಗೆ ಅನ್ನಿಸಿದರೆ ಆಶ್ಚರ್‍ಯವಿಲ್ಲ. ಈ ನಾಟಕ ಅಷ್ಟರ ಮಟ್ಟಿಗೆ ಬೇರೆ ರೀತಿಯ ಮನೋ ತಯಾರಿಯನ್ನು ನೋಡುಗನಿಂದ ಅಪೇಕ್ಷಿಸುತ್ತದೆ.
ನಾಟಕದಲ್ಲಿ ದಟ್ಟವಾಗಿ ಹಬ್ಬಿರುವುದು ಪ್ರಯಾಣದ ಪ್ರತಿಮೆ; ಎಲ್ಲರೂ ಎಲ್ಲಿಗೋ ಹೋಗುತ್ತಿದ್ದಾರೆ, ಎಲ್ಲಿಗೆ ಎಂಬುದು ಸ್ಪಷ್ಟವಿಲ್ಲ. ಬಳಲಿರುವ ಅವರ ಮುಖಗಳು ಹಾಗೂ ಎಲ್ಲವನ್ನೂ ಅವರು ಗಂಟು ಕಟ್ಟಿಕೊಂಡು ಹೋಗುತ್ತಿರುವುದು ನೋಡಿದರೆ ಇರುವ ಸ್ಥಿತಿಯಿಂದ ತಪ್ಪಿಸಿಕೊಂಡು ಹೋಗುವುದೇ ಅವರ ಪರಮ ಉದ್ದೇಶವಾಗಿರುವಂತಿದೆ; ಅದು ಈ ಜಗತ್ತಿನ ದಾರುಣ ವಾಸ್ತವದಿಂದ ಇರಬಹುದು. ಈ ನಾಟಕ ಮೂಲ ಜಪಾನಿನ ಓಟೋ ಶೋಗೋ ಅವರದು. ಜಪಾನಿನ ಇತಿಹಾಸ ಅರಿತವರಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ; ಮಹಾಯುದ್ಧಗಳ ಭೀಕರ ಅನುಭವಗಳು ಅವರನ್ನು ಸದಾ ದುರಂತದ ಬಗ್ಗೆ ಚಿಂತಿಸುತ್ತಿರುವಂತೆ ರೂಪಿಸಿದೆ. ಅಲ್ಲಿನ ಪ್ರಜ್ಞಾವಂತ ಮನಸ್ಸುಗಳು ಯಾವತ್ತೂ ಮನುಷ್ಯ ಚೇತನದ ಅವನತಿ, ಮನುಷ್ಯಕುಲದ ದುರಂತಗಳ ಬಗ್ಗೆ ನುಡಿಯುತ್ತಲೇ ಇರುತ್ತವೆ. ಈ ನಾಟಕ ಕೂಡ ಅದನ್ನೇ ಹೇಳುವಂತಿದೆ.
ಇಂಥ ವಸ್ತುವಿಗೆ ಕೃತಿಕಾರರು ಈ ಮಂದಗತಿಯನ್ನು ಆರಿಸಿಕೊಳ್ಳಲು ಏನು ಕಾರಣ ? ಅದಕ್ಕೆ ನನಗನ್ನಿಸುವಂತೆ ಕಾರಣಗಳು ಎರಡು. ಒಂದು- ಮನುಷ್ಯನ ತೀವ್ರಗತಿಯ ಬದುಕಿನ ಅಂಚಿನಲ್ಲಿ ನಿಂತು, ಅದಕ್ಕೆ ಅಣಕವಾಗಿ ಈ ನಿಧಾನಗತಿಯನ್ನು ತರಲಾಗಿದೆ. ಎರಡು- ನಾಟಕವನ್ನು ನೋಡುತ್ತ ನೋಡುತ್ತ ನಾವು ನಮ್ಮ ಒಳಗೂ ನೋಡಿಕೊಳ್ಳಲು ಕೃತಿಕಾರ ಪ್ರೇರೇಪಿಸುತ್ತಿದ್ದಾನೆ. ನಾಟಕದ ವಿಲಂಬಿತ ಲಯಕ್ಕೆ ಒಗ್ಗಿಕೊಳ್ಳಲಾಗದೆ ಹೊರಬಿದ್ದರೆ ಅದು ನೋಡುಗನ ಸೋಲು, ನಾಟಕದ್ದಲ್ಲ.
ಹಾಗೆಂದು ಇದರಲ್ಲಿ ಕೆಲ ದಂಗುಬಡಿಸುವ ಚಲನೆಗಳೂ ಇವೆ. ಕುಳಿತಲ್ಲೇ ಸತ್ತುಹೋಗುವ ಮುದುಕಿ, ಆಕೆಯನ್ನು ಕಸದ ರಾಶಿಗೆಸೆಯುವ ಕ್ರಿಯೆ ಇಂಥ ಚಲನೆಗಳಲ್ಲೊಂದು. ಚೈತನ್ಯ ಇಲ್ಲದೆ ಹೋದರೆ ಮನುಷ್ಯ ಕೂಡ ಒಂದು ಕಸ ಅಷ್ಟೇ; ಆತ ಸೃಷ್ಟಿಸಿದ ಕಸದ ರಾಶಿಗೆ ಕೊನೆಗೆ ಆತನೂ ಸೇರುತ್ತಾನೆ ಎಂಬುದು ಹಲವಾರು ಅರ್ಥ ಪರಂಪರೆಯನ್ನೇ ನಮ್ಮ ಮನದಲ್ಲಿ ನಿಲ್ಲಿಸುವ ಒಂದು ಕ್ರಿಯೆ.
ಸದಾ ಸುರಿಯುತ್ತಲೇ ಇರುವ ನೀರು, ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಾದ ಪ್ರಾಕೃತಿಕ ಚೈತನ್ಯದ ಪ್ರತೀಕವೋ ? ಆ ಕಸದ ರಾಶಿ, ನಮ್ಮಿಂದ ಹಿಂದೆ ಸರಿದ ಜೀವನದ ತುಣುಕುಗಳೋ ? ಕಸದ ರಾಶಿಯ ಮೇಲೆ ಉಲ್ಟಾ ಬಿದ್ದಿರುವ ಹಾಳು ಸೈಕಲ್ಲು, ನಮ್ಮ ವೇಗದ ಗತಿಗೆ ವ್ಯಂಗ್ಯವೋ ? ಇಷ್ಟೆಲ್ಲ ಪ್ರಯಾಣಗಳು ಈ ನಾಟಕದಲ್ಲಿ ಇದ್ದರೂ, ಯಾರೂ ಯಾಕೆ ಪರಸ್ಪರ ಸಂಸುವುದೇ ಇಲ್ಲ ? ಹೀಗೆ ಹಲವಾರು ಪ್ರಶ್ನೆಗಳನ್ನು ನಾಟಕ ಮನದಲ್ಲಿ ಬಿತ್ತುತ್ತದೆ.
ಇಂಥ ಅಪರೂಪದ ಪ್ರಾಯೋಗಿಕ ನಾಟಕವನ್ನು ಅಷ್ಟೇ ಸಮರ್ಥವಾಗಿ ಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ್ದಾರೆ. ನೀನಾಸಂನ ನಟರು ಅದಕ್ಕೆ ಜೀವ ತುಂಬಿದ್ದಾರೆ. ರಂಗದ ಮೇಲೆ ಅವರ ಚಲನೆಗಳ ಸಂಯಮವನ್ನು ನೋಡಿದರೆ, ನಾಟಕ ಮುಗಿದ ನಂತರ ಅವರು ಕಿರುಚಿ ಕುಣಿದಾಡಿ ತಮ್ಮ ಬಿಗಿಹಿಡಿದ ನರಗಳನ್ನು ಸಡಿಲ ಮಾಡಿಕೊಂಡಿರಬಹುದು ಎಂಬುದು ನನ್ನ ಊಹೆ !