Friday, October 31, 2008

ಇಳೆಯ ಮೌನ, ಚಳಿಯ ಧ್ಯಾನ


ಬದುಕು ನಡೆಯುವುದು ವೇಗದಿಂದಲ್ಲ , ಸಾವಧಾನದಿಂದ ಎಂಬುದು ಲೋಕಕ್ಕೇ ಗೊತ್ತಾಗುವುದು ವರ್ಷದ ಈ ಕೊನೆಯ ಭಾಗದಲ್ಲಿ. ಇಬ್ಬನಿಗೀಗ ಮುಂಜಾನೆ ಸಂಜೆ ರಾತ್ರಿ ಸುರಿವ ಬಿಡುವಿಲ್ಲದ ಪಾಳಿ. ಮರಗಳು ಮೌನ, ನೆಲ ಮೌನ, ಹನಿ ಮೌನ, ಸೂರ್‍ಯ ಮೌನ, ಮುಗಿಲು ಮೌನ.

ಹಕ್ಕಿ ಗೂಡಿನೊಳಗೂ ಮುಂಜಾನೆಯ ಕಟಕಟ. ನಿತ್ಯ ಬೆಳ್ಳಿ ಮೂಡಿ ಕೊಂಚವೇ ಹೊತ್ತಿಗೆಲ್ಲ ಕವಕವ ಆರಂಭಿಸುತ್ತಿದ್ದ ಕಾಗೆಗಳು ಇನ್ನೂ ಯಾಕೆ ಎದ್ದಿಲ್ಲ ? ಅಂಗಳದಲ್ಲಿ ಹರಡಿದ ಅಡಕೆಯ ಮಧ್ಯೆ ಸುಳಿವ ಹುಳಗಳಿಗಾಗಿ ಹೊಂಚುವ ಕುಪ್ಪುಳು ಹಕ್ಕಿಗೆ ಇನ್ನೂ ಪೊದೆಯೊಳಗಿಂದ ಹೊರಡುವ ಮನಸ್ಸಿಲ್ಲ. ಸೂರಿನಡಿಯ ಗುಬ್ಬಚ್ಚಿ ಗೂಡಿನಲ್ಲಿ ಚಿಂವುಚಿಂವು ದನಿಗೆ ನಿದ್ದೆ ತಿಳಿದೇ ಇಲ್ಲ.

ಚಳಿಗಾಲ. ಜಗತ್ತು ಮೌನವಾಗಿ ಮಲಗಿ ನಿದ್ರಿಸುವ ಕಾಲ. ಕೊರಿಯಾದ ಚಿತ್ರಕಾರನೊಬ್ಬನ ಚಿತ್ರ ಹೀಗಿದೆ : ಒಂದು ಚುಮುಚುಮು ಮುಂಜಾನೆ ಪುಟ್ಟ ಹುಡುಗಿಯೊಬ್ಬಳು ಹರಕು ಕಂಬಳಿ ಹೊದ್ದು ಮುದುಡಿ ಮುದ್ದೆಯಾಗಿ ನಿರ್ಜನ ರಸ್ತೆಯಲ್ಲಿ ಏನನ್ನೋ ಹುಡುಕುತ್ತ ನಡೆಯುತ್ತಿರುವಳು. ಸುತ್ತ ಕವಿದ ಮಂಜು. ದೂರದಲ್ಲಿ ಮಿನುಮಿನುಗು ನಕ್ಷತ್ರಗಳಂತೆ ಪಟ್ಟಣದ ಬೀದಿ ದೀಪಗಳು. ಚುಕ್ಕಿಗಳು, ಕತ್ತಲು, ಮಂಜು. ಚಿತ್ರ ನೋಡುವವರನ್ನೂ ನಖಶಿಖಾಂತ ನಡುಗಿಸುವ ಚಳಿ.

ಚೀನಾದಲ್ಲಿ, ಜಪಾನಿನಲ್ಲಿ, ಇಂಗ್ಲೆಂಡಿನಲ್ಲಿ- ಚಳಿ ಹೇಗಿರುತ್ತದೆ ? ನಮ್ಮೂರಿನ ಚಳಿಯ ಹಾಗೇ ಇರುತ್ತದೆಯೆ ? ಚೀನಾದ ಚೆರ್ರಿ ಗಿಡಗಳ ಅಡಿಯಲ್ಲಿ ಉದುರಿದ ಎಲೆಗಳು, ಲಂಡನ್ನಿನ ಥೇಮ್ಸ್ ನದಿಯ ದಡದಲ್ಲಿ ಇಳಿಜಾರು ಚಾವಣಿಯ ಮೇಲಿನ ಹಿಮರಾಶಿ, ಜಪಾನಿನ ಸಮುರಾಯ್‌ನ ಉಸಿರಿನೊಂದಿಗೆ ಬೆರೆತು ಬರುವ ಮಂಜುಗಾಳಿ... ಅವರ ಬದುಕಿನೊಂದಿಗೆ ತಳುಕು ಹಾಕಿಕೊಂಡಂತೆ ನಮ್ಮ ಬದುಕು, ಜಾನಪದ, ಸಾಹಿತ್ಯ, ಪ್ರೀತಿ ಪ್ರಣಯಗಳಲ್ಲೂ ಚಳಿ ಹಾಸು ಹೊಕ್ಕಾಗಿದೆಯೆ ? ಚಳಿಯನ್ನು ನೆನೆಯುತ್ತ ಇದೆಲ್ಲ ಧ್ಯಾನದೊಳಕ್ಕೆ ಬರುವ ಬಗೆ ಹೇಗೆ !

ಲಾರಾ ಇಂಗೆಲ್ಸ್ ವೈಲ್ಡರ್ ಜೀವನ ಕತೆ ಓದಿದವರಿಗೆ ಗೊತ್ತು. ಚಳಿಯ ಸುಳಿಯಲ್ಲಿ, ಪ್ಲಮ್ ನದಿಯ ತೀರದಲ್ಲಿ, ಪ್ರಯರಿ ಹುಲ್ಲುಗಾವಲಿನಲ್ಲಿ, ಪಾಪಾ, ಮಮ್ಮಿ ಮತ್ತು ಲಾರಾ, ಮತ್ತು ಅಕ್ಕ ಮೇರಿ. ಬೀಸುವ ಹಿಮಗಾಳಿ. ಮುಸುಕುವ ಮಂಜಿನಿಂದ, ಯಮಚಳಿಯಿಂದ ತಪ್ಪಿಸಿಕೊಳ್ಳಲು ನೂರೆಂಟು ಹೊಂಚು ಹಾಕುವ ಜೀವಗಳು. ಬೆಚ್ಚಗಿಡುವ ಬೆಂಕಿಯ ಗೂಡಿಗೂ ಥಂಡಿ. ಹೊರಬಂದರೆ ಹಿಸುಕಿ ಸಾಯಿಸಲು ಕಾದಿರುವ ಚಳಿಗಾಳಿ. ಒಳಗೆ ಬದುಕಿನ ಹೋರಾಟ, ಹಾಡು, ಕತೆ.

ಈ ಹೋರಾಟ ಈಗಲೂ ನಿಜವಲ್ಲವೆ. ಇಂಥ ಚಳಿಯಲ್ಲಿ ಬೆಚ್ಚಗಿರುವ ಭಾಗ್ಯ ಎಷ್ಟು ಮಂದಿಗೆ ? ನಡುಕದಿಂದಲೇ ಸಾಯುವ ಮಂದಿ ಅದೆಷ್ಟಿಲ್ಲ. ಚಳಿ ಬದುಕಿಗೆ ಸವಾಲು ಹಾಕುತ್ತದೆ. ಬದುಕು, ಉಳಿಯುವ ಛಲದಿಂದ ಚಳಿಯನ್ನು ಎದುರಿಸುತ್ತದೆ.

ಮಲೆನಾಡಿನ ಚಳಿಗೆ ಅದರದೇ ಸೌಂದರ್‍ಯ. ಚಳಿ ಲೆಕ್ಕ ಹಾಕುವ ಕ್ರಮವೇ ಸೊಗಸು : ಒಂದು ಕಂಬಳಿ ಚಳಿ, ಎರಡು ಕಂಬಳಿ ಚಳಿ, ಮೂರು ಕಂಬಳಿ ಚಳಿ. ಇಷ್ಟು ಹೊತ್ತಿಗೆ ರಾಜಸ್ಥಾನದಿಂದ ಕಂಬಳಿ ಮಾರುತ್ತ ಬರುವ ಭಯ್ಯಾಗಳೂ ಪ್ರತ್ಯಕ್ಷ. ಅಡಕೆ ಸಿಪ್ಪೆ, ತೆಂಗಿನ ಸಿಪ್ಪೆ ಹಾಕಿ ಹೊಗೆಯೆಬ್ಬಿಸಿ, ನುಸಿ ಓಡಿಸಿ ಮನೆತುಂಬಾ ತುಂಬಿಕೊಳ್ಳುವ ಬೆಚ್ಚಗಿನ ಘಾಟು ಅಗ್ಗಿಷ್ಟಿಕೆಯೊಂದೇ ಈಗ ಪರಿಹಾರ. ಒಯ್ಯಪ್ರೆಯ ಈಜಿಚೇರಿನಲ್ಲಿ ಕೂತು ತೂಕಡಿಸುವ ಅಜ್ಜಯ್ಯನನ್ನೂ ಅದು ಬೆಚ್ಚಗಿಟ್ಟಿದೆ. ಬೆಳಕಿಗೆ ಪುಳಕಗೊಂಡು ಬಳಿಗೆ ಬಂದ ಹಾತೆಗಳು ಬೆಂಕಿಯಲ್ಲಿ ಕರಕಲಾಗುತ್ತಿವೆ.

ಸುತ್ತ ಕುಳಿತವರ ಕಣ್ಣಿನಲ್ಲಿ ಅದೆಷ್ಟು ಅಗ್ಗಿಷ್ಟಿಕೆಗಳು ಕುಣಿಯುತ್ತಿವೆ. ಒಂದೊಂದೇ ಕತೆಗಳು ಚಳಿ ಕಾಯಿಸುತ್ತಿರುವ ಒಕ್ಕಲಿನ ಕೆಲಸದವರ ಬಾಯಿಯಿಂದ ಹೊರಹೊಮ್ಮುತ್ತಿವೆ- ಚಳಿಗಾಲದ, ಮಳೆಗಾಲದ, ಥಂಡಿಯ, ಕಾಡಿನ ಕತೆಗಳು. ಮಲೆನಾಡಿನ ನಿಗೂಢ ಮಲೆಕಾನನಗಳಲ್ಲಿ ಅಲೆದು ಬಂದ ರರು ಅವರು. ಇಂಥ ಅದೆಷ್ಟು ‘ಐತ’ರು ಅದೆಷ್ಟು ‘ಪೀಂಚಲು’ಗಳನ್ನು ಮಲೆಗಳಲ್ಲಿ ನಡೆಸಿ ತಮ್ಮ ಬಿಡಾರಕ್ಕೊಯ್ದಿಲ್ಲ ! ಹುಲಿಗೂ ಹೆದರದ ‘ಹುಲಿಯ’ ಹೆಸರಿನ ನಾಯಿಗಳದೆಷ್ಟು ! ಆ ಕತೆಗಳನ್ನು ಬೆಂಕಿಯ ಬೆಳಕಿನಲ್ಲಿ ಕುಳಿತು ಐತ ಹೇಳಬೇಕು, ಕೇಳಿಸಿಕೊಳ್ಳುತ್ತ ಸೆರಗಿನ ಮರೆಯಲ್ಲಿ ಪೀಂಚಲು ನಗಬೇಕು. ಮಕ್ಕಳು ಕೇಳಬೇಕು.

ಕತೆಗಳನ್ನು ಹೇಳುವುದಕ್ಕೂ ಕೇಳುವುದಕ್ಕೂ ಇದು ಸಕಾಲ. ಪುಟ್ಟ ಮಕ್ಕಳನ್ನು ಮಡಿಲಲ್ಲಿ ಮಲಗಿಸಿಕೊಂಡಿರುವ ಕೃಶ ಶರೀರದ ಅಜ್ಜಿಯ ಒಡಲಿನಲ್ಲಿ ಅಷ್ಟೊಂದು ಕತೆಗಳೆಲ್ಲಿದ್ದವೊ ! ಕತೆ ಕೇಳುತ್ತ ಕೇಳುತ್ತ ಮಕ್ಕಳು ನಿದ್ದೆಯ ಮಡಿಲು ಸೇರುವಾಗ ಅಜ್ಜಿ ತುಟಿಗೆ ಬಂದ ಇನ್ನೊಂದಷ್ಟು ಕತೆಗಳನ್ನು ನಾಳೆಗೆ ಎತ್ತಿಟ್ಟುಕೊಳ್ಳುತ್ತಾಳೆ.

ಇಂಥ ನಾಳೆಗಳು ಬರುತ್ತಲೇ ಇರುತ್ತವೆ. ಕತೆಗಳು ಮಾಯಾಮೋಹಕ ಜಗತ್ತೊಂದನ್ನು ನಿರ್ಮಿಸುತ್ತಲೇ ಇರುತ್ತವೆ. ಮಕ್ಕಳ ಅಂತರಂಗದ ನೆರಳಿನಲ್ಲಿ ಬೆಳಕಿನ ಛಾಯಾಜಗತ್ತೊಂದು ತನ್ನನ್ನು ಕಟ್ಟಿಕೊಳ್ಳುತ್ತ ಬೆಳೆಯುತ್ತಿರುತ್ತದೆ.

ಮಾಂತ್ರಿಕ ವಾಸ್ತವವಾದದ ಹರಿಕಾರ ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ ಹೇಳುತ್ತಾನೆ : ಈ ಕತೆಗಳನ್ನು ಹೆಣೆಯಲು ನಾನು ಅಷ್ಟೇನೂ ಕಷ್ಟಪಟ್ಟಿಲ್ಲ. ನನ್ನಜ್ಜಿಗೆ ಇದು ಸಹಜವಾಗಿತ್ತು. ಆಕೆ ಇಂಥ ಕತೆಗಳ ಸಾಗರವೇ ಆಗಿದ್ದಳು. ಹಬ್ಬಿದ ಕರ್ರಗಿನ ಕತ್ತಲು ಮತ್ತು ದೆವ್ವದಂಥ ಚಳಿಯ ಮಧ್ಯೆ ಆಕೆ ಕತೆಗಳ ಲೋಕ ಕಟ್ಟುತ್ತ ಅದರೊಳಕ್ಕೆ ನಮ್ಮನ್ನು ಒಯ್ಯುತ್ತ ಸಮ್ಮೋಹನಗೊಳಿಸುತ್ತಿದ್ದಳು.

ಕತೆಯೊಂದು ಅಂತರಂಗದಲ್ಲಿರುತ್ತದೆ. ನಡುಗಿಸುತ್ತದೆ. ನಡುಗುವ ಚಳಿಗೆ ಗರ್ಭದಲ್ಲೇ ನಡುಗುತ್ತ ಮಿಡುಕುತ್ತ ಬೆಳೆಯುತ್ತದೆ. ಬೆಳಕು ಸಿಕ್ಕಿದೆಡೆ ಬಾಗಿ ಹೊರಚಾಚುತ್ತದೆ. ಚಳಿಗಾಲದ ಬೆಳಕೂ ಚಳಿಯ ಹಿಡಿತದಲ್ಲಿರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹುಟ್ಟುವ ಕತೆ ಮಧುರವಾಗಿರುತ್ತದೆ. ಚಳಿಯಲ್ಲಿ ಹುಟ್ಟುವುದು ಸೃಷ್ಟಿಯ ಕತೆ, ಬೆಳವಣಿಗೆಯ ಕತೆ.

ಬೇಸಿಗೆಯಲ್ಲಿ, ಉರಿವ ಸೆಖೆಯಲ್ಲಿ ಎಂಥ ಕತೆ ಹುಟ್ಟುತ್ತದೆ ಗೊತ್ತೆ ? ಆಲ್ಬರ್ಟ್ ಕಾಮೂನ ‘ಔಟ್‌ಸೈಡರ್’ನ ಕಥಾನಾಯಕ (ಅಥವಾ ದುರಂತನಾಯಕ?) ಉರಿವ ಬೇಸಗೆಯಲ್ಲಿ ಬೆವರುತ್ತ, ಸೆಕೆಗೆ ಬೆಂಕಿಯಾಗಿ, ಒಬ್ಬ ವ್ಯಕ್ತಿಯ ಕೊಲೆ ಮಾಡುತ್ತಾನೆ- ಉದ್ದಿಶ್ಯವಿಲ್ಲದೆ.

ಆದರೆ ಚಳಿಯಲ್ಲಿ ಚಿಗುರುವುದು ಸೃಷ್ಟಿಯ ಕಥಾನಕ. ಹೌದೋ ಅಲ್ಲವೋ ನವದಂಪತಿಗಳನ್ನು ಕೇಳಿ !

ಚಳಿ ಪ್ರೀತಿಯನ್ನು ಕಲಿಸುವ ರೀತಿ ನೋಡಿ. ಪುಟ್ಟ ಕಂದಮ್ಮಗಳನ್ನು ಅಮ್ಮ ಅಪ್ಪಿಕೊಂಡು ಬೆಚ್ಚಗಿಡುವುದು, ಮೊಮ್ಮಕ್ಕಳನ್ನು ಅಜ್ಜಿ ಅವಚಿಕೊಂಡು ರಕ್ಷಿಸುವುದು, ಗೂಡಿನ ಪೊಟರೆಗೆ ಪುಕ್ಕ ಅಡ್ಡವಿಟ್ಟು ತಾಯಿ ಹಕ್ಕಿ ಮರಿಗಳನ್ನು ಒತ್ತಿಕೂತು ಬೆಚ್ಚಗೆ ಕಾಪಾಡುವುದು, ಒಪ್ಪಿಕೊಂಡ ಪ್ರೇಮಿಗಳು ಹಗಲೂರಾತ್ರಿ ಅಪ್ಪಿಕೊಂಡು ಚಳಿಯನ್ನು ಸೆಲೆಬ್ರೇಟ್ ಮಾಡುವುದು....

ಪ್ರೀತಿಯನ್ನು ಬೆಚ್ಚಗೆ ಉಳಿಸುವ ಈ ಚಳಿಗೆ ಶರಣು.

(೨೦೦೫ ಡಿಸೆಂಬರ್ ೧೮ರ ವಿಜಯಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ)

Tuesday, October 21, 2008

ಕೆಲವು ‘ನೀಲು’ಗಳು

ಈ ಕೆಳಗಿನ ಪದ್ಯಗಳನ್ನು ಬರೆದ ನಂತರ ಅನ್ನಿಸಿದ್ದು : ಇವುಗಳನ್ನು ಬರೆಯದೇ ಇದ್ದರೂ ನಡೆಯುತ್ತಿತ್ತು. ಯಾಕೆಂದರೆ ಈ ಪದ್ಯಗಳ ಅಕ್ಷರಕ್ಷರದಲ್ಲೂ ನೀಲು ಕಾಣಿಸುತ್ತಾಳೆ. ಲಂಕೇಶ್ ಕಾಣಿಸುತ್ತಾರೆ. ಡಿಲೀಟ್ ಮಾಡಲೇ ಅಂತ ಯೋಚಿಸಿದೆ. ಆಮೇಲೆ, ನನ್ನ ತಲೆಮಾರಿನ ಯಾವ ಲೇಖಕನೂ ಲಂಕೇಶರ ಪ್ರಭಾವ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವುದು ಹೊಳೆಯಿತು. ಹಾಗೆಂದೇ ಇವಕ್ಕೆ ‘ನೀಲುಗಳು’ ಅಂತ ಕರೆದಿದ್ದೇನೆ.

-೧-
ಹೂಗಳ ಮುಗ್ಧ ಚೆಲುವು
ಮತ್ತು ಎರಗಿ, ಹೀರಿ, ಸುಖಿಸುವ
ಚಿಟ್ಟೆಯ ವ್ಯಭಿಚಾರಗಳೇ
ಕಾಯಿ, ಹಣ್ಣು, ಬೀಜಗಳ ಹುಟ್ಟಿಗೆ ಕಾರಣ

-೨-
ವಿಲಾಸಿ ತರುಣಿ ಕಾಲೂರಿ
ಪಾಪ ನಿವೇದನೆ ಮಾಡಿಕೊಳ್ಳುತ್ತಿರಲು
ಮುದಿ ಸನ್ಯಾಸಿಯ
ಕಾಮವೂ ಕೆರಳುವುದು

-೩-
ಏನನ್ನೂ ಕೆರಳಿಸದ
ನಿಚ್ಚಳ ಬೆಳಕಿನ
ಜಡ ರೂಪಕ್ಕಿಂತ
ಕತ್ತಲ ಕೋಣೆಯ
ಸ್ಪರ್ಶ, ಗಂಧಗಳೇ ಜೀವಂತ

-೪-
ರಾಜ್ಯಗಳನ್ನು ಗೆಲ್ಲಲಾಗದ
ಚಕ್ರವರ್ತಿಯ ಅವಮಾನ
ಸಂಗಾತಿಯ ಹೃದಯ ಗೆಲ್ಲಲಾಗದ
ತರುಣನ ಪರಿತಾಪಕ್ಕಿಂತ
ದೊಡ್ಡದೇನಲ್ಲ

Tuesday, October 14, 2008

ಹೆಗ್ಗೋಡಿನ ಬೆಳಗಿನಲ್ಲೊಂದು ಸ್ವಗತ

ಆಹಾ ಇಂಥ ಇಬ್ಬನಿ ಸುರಿಯುತ್ತ ಮೈ ಮರೆಯುತ್ತ ಹೀಗೇ ಓಡಾಡುತ್ತ ಇರುವುದಾದರೆ ವರ್ಷದ ಮುನ್ನೂರ ಅರುವತ್ತ ಐದು ದಿನವೂ ಸಂಸ್ಕೃತಿ ಶಿಬಿರ ಇರಬಾರದೇ ಅಂದುಕೊಳ್ಳುತ್ತ ಇನ್ನೂ ಬಿಸಿಲು ಬಿದ್ದಿರದ ಇಬ್ಬನಿಯಲ್ಲಿ ನೆನೆದು ಒದ್ದೆಯಾಗಿದ್ದ ರಸ್ತೆಯ ಮೇಲೆ, ಸುತ್ತಮುತ್ತಲಿನ ಕಾಡಿನ ನಿಗೂಢದಿಂದ ನೂರಾರು ಹಕ್ಕಿಗಳು ಎಂಪಿತ್ರೀ ಹಚ್ಚಿ ತಮ್ಮ ಗಾಯನದಿಂದ ಒದ್ದೆಯಾಗಿಸಿದ್ದ ಮನಸ್ಸನ್ನು ಹೊತ್ತು ಹಾಗೇ ಓಡಾಡುತ್ತಿದ್ದೆ. ಹೆಗ್ಗೋಡು ಇನ್ನೂ ಬೆಳಗಿನ ಮಂಪರಿನ ಸುಖದಲ್ಲಿ ಮುದುಡಿತ್ತು.

“ಬೆಳಗ್ಗೆ ಬೇಗ ಎದ್ದು ಬಾ, ವಾಕಿಂಗ್ ಹೋಗುವ" ಎಂದಿದ್ದ ಗೆಳತಿ ತನ್ನ ಬೆಡ್‌ನಲ್ಲಿ ಹೊದಿಕೆಯನ್ನೂ ಕನಸುಗಳನ್ನೂ ಹೊದ್ದುಕೊಂಡು ಗಡದ್ದಾಗಿ ನಿದ್ದೆ ಹೋಗಿದ್ದಳು. ನಾನೊಬ್ಬನೇ ಆ ಬೆಳಗಿನ ಮೌನಕ್ಕೂ ಇಬ್ಬನಿ ತಬ್ಬಿದ ರೆಂಬೆಕೊಂಬೆಗಳಿಗೂ ಜೇಡರ ಬಲೆಗಳಿಗೂ ಹೊಸ ಹಾಡುಗಳನ್ನು ಹೊಟ್ಟೆಯೊಳಗೆ ಬಚ್ಚಿಟ್ಟುಕೊಂಡಿರುವ ಹಕ್ಕಿಗಳ ಗುಟ್ಟುಗಳಿಗೂ ಉತ್ತರಾಕಾರಿ ಅಂತ ಭಾವಿಸುತ್ತಾ ಕಾಲು ಹಾಕುತ್ತಿದ್ದಾಗ ನಿಧಾನವಾಗಿ ಒಬ್ಬೊಬ್ಬರೇ ಎದ್ದು ವಾಕಿಂಗ್‌ಗೆ ಬರತೊಡಗಿದ್ದರು.

ಅಷ್ಟರಲ್ಲಿ ಕಟ್ಟಡ ಸಾಲಿನ ಈಚೆ ತುದಿಯ ಕೊಠಡಿಯ ಬಾಗಿಲು ತೆಗೆದು ಇಬ್ಬರು ಹೆಣ್ಣುಮಕ್ಕಳು ವಾಕಿಂಗ್ ಹೊರಟದ್ದು ಕಾಣಿಸಿತು. ಹೂಹೂಗಳ ಚೂಡಿದಾರ ಹಾಕಿಕೊಂಡ ಎಸ್ತರ್ ಅನಂತಮೂರ್ತಿ ಊದಾ ಬಣ್ಣದ ದಪ್ಪದ ಶಾಲು ಹೊದ್ದುಕೊಂಡು ಅದನ್ನು ತಲೆಗೂ ಎಳೆದುಕೊಂಡು ಶಾಪಗ್ರಸ್ತ ದೇವತೆಯಂತೆ ರಸ್ತೆಯ ಒಂದು ಬದಿಯಲ್ಲಿ ಹಾಗೇ ಕಾಲು ಹಾಕತೊಡಗಿದ್ದರು. ಅವರ ಜತೆಗೆ ಅವರ ಮಗಳು, ವಿವೇಕ ಶಾನಭಾಗರ ಪತ್ನಿ, ಅವರ ಹೆಸರು ನನಗೆ ಗೊತ್ತಿಲ್ಲ- ಕೂಡ ಅಮ್ಮನ ಜತೆಗೆ ನಡೆಯತೊಡಗಿದ್ದರು. ಅವರನ್ನು ನೋಡುತ್ತ ನೋಡುತ್ತ ನಾನು ಹಾಗೇ, ಇವರಿಬ್ಬರೂ ನಿನ್ನೆ ಅನಂತಮೂರ್ತಿ ಮಾಡಿದ ಭಾಷಣವನ್ನು ಈಗ ನೆನೆಯುತ್ತಿರಬಹುದೆ, ಅಥವಾ ಅರ್ಥವಾಗದ, ಇಂಥ ಮುಂಜಾನೆಗಳಲ್ಲಿ ಮಾತ್ರ ಮನಸ್ಸನ್ನು ಕಾಡುವ ಮುಗ್ದ ಭಾವಗಳು ಅವರೊಳಗೆ ಆಡುತ್ತಿರಬಹುದೆ, ಇಂಥ ಪುಳಕಿತಗೊಳಿಸುವ ಮುಂಜಾವಿನಲ್ಲಿ ಅನಂತಮೂರ್ತಿ ಕೂಡ ಹಿಂದೊಮ್ಮೆ ತಮ್ಮ ಪತ್ನಿಯ ಜತೆಗೂ ಮಗಳ ಜತೆಗೂ ವಾಕಿಂಗ್ ಹೋಗಿರಬಹುದೆ, ಆಗಲೂ ಅವರು ಸಾಹಿತ್ಯದ ಬಗ್ಗೆ ಮಾತಾಡಿರಬಹುದೆ ಎಂದೆಲ್ಲಾ ಮಳ್ಳನಂತೆ ಯೋಚಿಸುತ್ತಿದ್ದೆ.

ಸಾಲದ್ದಕ್ಕೆ ಹಿಂದಿನ ಸಂಜೆ ಕೊನೆಯ ಗೋಷ್ಠಿಯಲ್ಲಿ ಅನಂತಮೂರ್ತಿ ಮಾತಾಡಿ ಮಾತಾಡಿ ಇನ್ನೂ ಮಾತಾಡುತ್ತಿದ್ದಾಗ ಅವರ ಮಗಳು “ಅಪ್ಪಾ ಮಾತಾಡಿದ್ದು ಸಾಕು, ಎಲ್ಲರಿಗೂ ತಿಂಡಿಗೆ ಹೊತ್ತಾಗುತ್ತಿದೆ" ಅಂತ ಚೀಟಿ ಕಳಿಸಿ, ಅದನ್ನು ಅನಂತಮೂರ್ತಿ ಜೋರಾಗಿ ಓದಿ ನಕ್ಕು, ಆ ನಗುವಿನಲ್ಲಿ ಜ್ಞಾನಪೀಠಿಯೊಬ್ಬರ ಸಂಸಾರದ ಸುಖ ಪರವಶ ಗಳಿಗೆಯೊಂದು ಹಾದು ಹೋದಂತೆ ಕಂಡುಬಂದದ್ದು ಇನ್ನೂ ನನ್ನ ತಲೆಯಲ್ಲಿ ಕುಳಿತಿತ್ತು.

ಅದರ ಹಿಂದಿನ ದಿನ ಒಂದು ಗೋಷ್ಠಿಯಲ್ಲಿ ಕತೆಗಾರ್ತಿ ವೈದೇಹಿ ಮಾತನಾಡಿದ್ದು ಕೇಳಿ ನನಗೆ ಕಣ್ಣೀರು ಬಂದುಬಿಟ್ಟಿತ್ತು. ಅವರು ಸಹಜವಾಗಿ ಯಾವ ಸೋಗುಗಳಿಲ್ಲದೆ ಅಟ್ಟುಂಬಳದಲ್ಲಿ ಕೂತ ಅಕ್ಕಳೊಬ್ಬಳು ತಮ್ಮ ಮುಂದೆ ಕುಳಿತ ತಮ್ಮಂದಿರು ತಂಗಿಯಂದಿರ ಮುಂದೆ ಹಜಾರದಲ್ಲಿ ಕುಳಿತ ಗಂಡಸರ ಕಿವಿಗೂ ಬೀಳುವ ಹಾಗೆ ಮನಸ್ಸು ತೆರೆದುಕೊಂಡಂತೆ ಮಾತನಾಡಿದ್ದರು. ‘ಕನ್ನಡ ಕಾವ್ಯದಲ್ಲಿ ಸ್ವಂತಿಕೆ’ ಎಂಬ ಆ ಗೋಷ್ಠಿಯಲ್ಲಿ ಮಾತನಾಡಲು ಇದ್ದದ್ದೇ ಇಬ್ಬರು. ಅವರಿಗಿಂತ ಮೊದಲು ಮಾತನಾಡಿದ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡುತ್ತ ಮಾತನಾಡುತ್ತ ವೈದೇಹಿಗೆ ಸಮಯವೇ ಉಳಿಯದಂತೆ ಮಾಡಿಬಿಟ್ಟಿದ್ದರು.

ಆ ಮೇಲೆ ಮಾತನಾಡಿದ ವೈದೇಹಿ, ನನಗೆ ಸಮಯವೇ ಇಲ್ಲ ಎಂದು ಪೇಚಾಡುತ್ತ, ಚಿಕ್ಕಂದಿನಲ್ಲಿ ತಮ್ಮಂಥ ಹುಡುಗಿಯರನ್ನು ಹೇಗೆ ಅಡುಗೆ ಮನೆಗೆ ಸೀಮಿತ ಮಾಡಲಾಗುತ್ತಿತ್ತು, ಅದರಿಂದ ತಾವು ಅಡುಗೆಗೆ ಮಾತ್ರ ಲಾಯಕ್ಕೇನೋ ಎಂಬ ಭಾವ ಗಟ್ಟಿಯಾಗುತ್ತಿದ್ದುದು, ತಮ್ಮ ತಾಯಿ ‘ತಲ್ಲಣಿಸದಿರು ಕಂಡ್ಯ...’ ಎಂಬ ದಾಸರ ಪದವನ್ನು ಪದೇ ಪದೇ ಹಾಡುತ್ತಿದ್ದುದು, ಕೆಲಸದ ನಡುವೆ ಹಾಡು ಹುಟ್ಟುತ್ತಿದ್ದುದು ಇತ್ಯಾದಿಗಳನ್ನು ನೆನೆದುಕೊಂಡರು. ಅದನ್ನೆಲ್ಲ ಹೇಳುತ್ತ ಅವರು ಭಾವುಕರಾದರೋ ಇಲ್ಲವೋ, ನನಗಂತೂ ಕಸಿವಿಸಿಯೇ ಆಗಿಬಿಟ್ಟಿತು. ಗೋಷ್ಠಿಯ ನಂತರ ಸಿಕ್ಕಿದ ಸಕಲೇಶಪುರದ ಉಮಾಪ್ರಸಾದ ರಕ್ಷಿದಿ, “ವೈದೇಹಿ ಮಾತನಾಡಲು ಹೊರಟರೆ ನಮಗೆ ಅರಿವೇ ಇಲ್ಲದ ಹಾಗೆ ಮನಸ್ಸಿನಲ್ಲಿ ಪಾಪಪ್ರಜ್ಞೆ ಮೂಡಿಬಿಡುತ್ತದೆ ಮಾರಾಯ" ಎಂದಿದ್ದರು.

ಹಾಗೇ ನಡೆಯುತ್ತಾ, ನಾನು ಆಗಾಗ ಗೆಳತಿಯ ಕೆನ್ನೆ ಚಿವುಟುವುದು ಇತ್ಯಾದಿ ಮಾಡುತ್ತೇನಲ್ಲ ಆಗ ಯಾಕೆ ನನಗೆ ಪಾಪಪ್ರಜ್ಞೆ ಕಾಡುವುದಿಲ್ಲ ಎಂದು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆ. ಈ ಬೆಳಗಿಗೂ ಪಾಪಪ್ರಜ್ಞೆಗೂ ಯಾವ ಸಂಬಂಧವೂ ಇರುವಂತೆ ಕಾಣಲಿಲ್ಲ.

ಈ ಬೆಳಗಿನ ಇಬ್ಬನಿಯ ವಾಕಿಂಗಿನ ಸುಖ, ಸಂಜೆ ಚುಮುಚುಮು ಚಳಿಯ ನಡುವೆ ಪುರಿ ತಿನ್ನುತ್ತ ನಾಟಕಗಳನ್ನು ನೋಡುವ ಸುಖ ನೀನಾಸಂನ ಇತರ ಗೋಷ್ಠಿಗಳಿಗೂ ಇರಬಾರದೇ ಎಂದು ಮನಸ್ಸು ಹಲುಬುತ್ತ ಹಂಬಲಿಸುತ್ತಿತ್ತು. ಆದರೆ ಅಲ್ಲಿದ್ದ ಯಾರಿಗೂ ನಮ್ಮಂಥ ಮುಗ್ದರ, ಮಳ್ಳರ ಮೇಲೆ ಕರುಣೆಯೇ ಇರುವಂತೆ ಕಾಣುತ್ತಿರಲಿಲ್ಲ. ಬೆಳಗು ಹತ್ತು ಗಂಟೆಯಾಗಿ ಶಿಬಿರದ ಕಾರ್‍ಯಕ್ರಮದಲ್ಲಿ ಹೋಗಿ ಕುಳಿತರೆ ಸಾಕು, ಒಬ್ಬನಲ್ಲಾ ಒಬ್ಬ ಚಿಂತಕ ಭಯಂಕರವಾದ ಭಾಷಣದಿಂದ ನಮ್ಮನ್ನೆಲ್ಲ ಚಚ್ಚುತ್ತಿದ್ದ. ಅದು ಯಾವ ಪರಿ ಆಲಿಕಲ್ಲಿನ ಮಳೆಯಂತೆ ನಮ್ಮ ಮೇಲೆ ಪ್ರಹರಿಸುತ್ತಿತ್ತೆಂದರೆ, ಅಲ್ಲಿ ಕೂರಲೂ ಆಗದೆ ನಿಲ್ಲಲೂ ಆಗದಂತೆ ಮಾಡಿಬಿಡುತ್ತಿತ್ತು.

ಈಗ ಇದನ್ನೆಲ್ಲ ನೆನೆಯುತ್ತ ಬೆಂಗಳೂರಿನ ಹವೆಯಲ್ಲಿ ಕುಳಿತಿದ್ದೇನೆ. ನೆನೆವುದೆನ್ನ ಮನಂ ಹೆಗ್ಗೋಡಿನ ಮುಂಜಾವವಂ.

Wednesday, October 1, 2008

ಅಂತಿಮ ಸತ್ಯ


ಅವರು ಆ ಪುಟ್ಟ ಬಾಲಕನ ಮುಖ ನೋಡಿದರು


ಯಾವ ಚಿಹ್ನೆಗಳೂ ಬರೆದಿರಲಿಲ್ಲಕೈ ತೋಳುಗಳ ನೋಡಿದರು


ಯಾವ ಹಚ್ಚೆಯೂ ಹಾಕಿರಲಿಲ್ಲಮಾತನಾಡಿಸಿದರು, ಅವನ ಭಾಷೆ ತಿಳಿಯಲು


ಅವನು ಮೂಕನಾಗಿದ್ದ


ಅವನ ನಾಲಗೆಯಲ್ಲಿ ಕಬಕಬಕಬ ಎಂಬುದಲ್ಲದೆ


ಬೇರೆ ಪದವಿರಲಿಲ್ಲಕೊನೆಗೆ ಉಳಿದದ್ದು ಒಂದೇ ಉಪಾಯ


ಅವನ ಚಡ್ಡಿ ಬಿಚ್ಚಿಸಿ ನೋಡಿದರು


ಅಲ್ಲಿ ಕಂಡದ್ದು ಅಂತಿಮವೆಂಬ ಭರವಸೆ ಅವರಿಗಿರಲಿಲ್ಲಚಾಕು ಚೂರಿ ಬಡಿಗೆಗಳ ಝಳಪಿಸುತ್ತ


ಅವರು ಮುಂದುವರಿದರು


ಗೊಂದಲ ಮುಗಿದಿರಲಿಲ್ಲ