ಮೂಡುಬಿದಿರೆಯಲ್ಲಿ ಪ್ರತಿವರ್ಷ ನಡೆಯುವ "ನುಡಿಸಿರಿ’ ಸಾಹಿತ್ಯ- ಸಂಸ್ಕೃತಿ ಸಮ್ಮೇಳನದಲ್ಲಿ "ಕವಿಸಮಯ’ ಎಂಬ ವಿಶಿಷ್ಟ ಕಾರ್‍ಯಕ್ರಮ ನಡೆಯುತ್ತದೆ. ಇಪ್ಪತ್ತು ನಿಮಿಷದ ಈ ಕಾರ್‍ಯಕ್ರಮವನ್ನು ಒಬ್ಬನೇ ಕವಿಯ ಮೇಲೆ ಫೋಕಸ್ ಮಾಡಲಾಗಿರುತ್ತದೆ. ಆತ ತನ್ನ ಕವಿತೆ- ಪ್ರೇರಣೆಗಳ ಬಗ್ಗೆ ಮಾತನಾಡುತ್ತಾನೆ, ಕವಿತೆ ಓದುತ್ತಾನೆ, ಅದನ್ನು ಗಾಯಕರು ಹಾಡುತ್ತಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ನುಡಿಸಿರಿಯ ಕವಿಸಮಯದಲ್ಲಿ ನಾನು ಕವಿತೆ ಓದಿದ್ದೆ. ಆಗ ನಾನು ನನ್ನ ಕವಿತೆಗಳ ಬಗ್ಗೆ ಮಾತನಾಡಿದ್ದು ಇಲ್ಲಿದೆ...
ನಿಜ ದುಃಖ ನುಡಿದಾಗ
ಮಾತು ಮುಗಿದ ಬಳಿಕ ಉಳಿಯುವುದು ಕವಿತೆ ಎಂಬ ನಂಬಿಕೆ ನನ್ನದು. ಕವಿತೆಯೆಂಬ ಅಸ್ಪಷ್ಟ ಹಾಗೂ ಮೈತಡವಿ ಸಂತೈಸುವ ತಹತಹದ ಕಾಡಿನಲ್ಲಿ ನನಗಿಂತ ಮೊದಲು ನಡೆದು ಹಾದಿ ಹಾಕಿಕೊಟ್ಟ ಅನೇಕರಿಗೆ ನಾನು ಋಣಿ. ಅವರೆಲ್ಲ ಎಂಥ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಅಂತ ಗೊತ್ತಾಗುವುದಕ್ಕೂ ಮುನ್ನವೇ ನಾನು ಕವಿತೆಯೆಂದು ತಿಳಿದುಕೊಂಡ ಸಾಲುಗಳನ್ನು ಬರೆದೆ.
ಅವು ನಾನು ಹುಟ್ಟಿ ಬೆಳೆದ ಸುಳ್ಯ ಸುಬ್ರಹ್ಮಣ್ಯ ಪರಿಸರದ ದಟ್ಟ ಹಸಿರು ಕಾಡಿನಿಂದ, ಅಲ್ಲಿನ ಶಾಂತಿ ಹಾಗೂ ಅಶಾಂತ ನಿಗೂಢತೆಯಿಂದ ಉದ್ಭವವಾಗಿದ್ದವು. ಸಂಜೆ ಮುಂಜಾನೆಗಳಲ್ಲಿ ಅಲ್ಲಿನ ಕಾಡುಗಳ ಎಲೆಗಳ ನಡುವೆ ನೆಲಮುಟ್ಟಲು ಕಷ್ಟಪಡುತ್ತಿದ್ದ ಸೂರ್‍ಯಕಿರಣಗಳು, ಗಾಳಿ ಬೀಸಿದಾಗ ಸದ್ದು ಮಾಡುತ್ತಾ ಬೀಳುತ್ತಿದ್ದ ಒಣಗಿದ ಎಲೆಗಳು, ಕಣ್ಣಿಗೆ ಕಾಣಿಸದಂತೆ ಕೂತುಕೊಂಡು ಕೂಗುತ್ತಿದ್ದ ನಾನಾ ಹಕ್ಕಿಗಳು, ರಾತ್ರಿಯ ನೀರವದಲ್ಲಿ ಚಿತ್ರವಿಚಿತ್ರ ಸದ್ದುಗಳನ್ನು ಹೊರಡಿಸುತ್ತಿದ್ದ ಸಾವಿರಾರು ಮೃಗ ಪಕ್ಷಿ ಕೀಟ ಜಾತಿ, ಇವೆಲ್ಲದರ ನಡುವೆ ಬದುಕಿಗಾಗಿ ಬವಣೆಪಡುತ್ತಿದ್ದ ಜನಗಳು... ಇವೆಲ್ಲ ಹೇಗೆ ಇವೆ ಮತ್ತು ಯಾಕೆ ಹಾಗಿವೆ ಅಂತ ಯೋಚಿಸುತ್ತ ಯೋಚಿಸುತ್ತ ಬಹುಶಃ ನನ್ನ ಕಾವ್ಯದ ಮೊದಲ ಸಾಲುಗಳು ಹುಟ್ಟಿಕೊಂಡವು ಅಂತ ಕಾಣುತ್ತದೆ.
ಇದೆಲ್ಲ ಬಾಲ್ಯದಲ್ಲಿ. ಆಮೇಲೆ ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಪಟ್ಟಣಕ್ಕೆ ಬಂದು ಕಾಲೇಜಿಗೆ ಸೇರಿಕೊಂಡು ಇಂಗ್ಲಿಷ್ ಮಾಧ್ಯಮವನ್ನು ಎದುರಿಸಬೇಕಾದಾಗ ನನ್ನಂಥ ಹಳ್ಳಿ ಗಮಾರನಲ್ಲಿ ಎಂಥ ಕೀಳರಿಮೆ ಹುಟ್ಟಿರಬಹುದು ಯೋಚಿಸಿ. ಈ ಕೀಳರಿಮೆ ದಾಟಲು ನಾನು ಕಂಡುಕೊಂಡ ಒಂದು ಉಪಾಯ ಬರವಣಿಗೆ. ಆಮೇಲೆ ನಿಮಗೆ ಗೊತ್ತಿರುತ್ತದೆ- ಹುಡುಗರು ಹುಡುಗಿಯರನ್ನು ಇಂಪ್ರೆಸ್ ಮಾಡುವುದಕ್ಕೆ ಬರೆಯುವುದು ಇತ್ಯಾದಿ...
ಆದರೆ ಒಂದಾಯ್ತು- ಮಾಯಾಕಿನ್ನರಿ ಪದ್ಯದಲ್ಲಿ ಬೇಂದ್ರೆ ಹೇಳುವಂತೆ - "ಮರುಳು ಮಾಡಾಕ ಹೋಗಿ ಮರುಳ ಸಿದ್ಧನ ನಾರಿ ಮರುಳಾದಳೋ ಜಂಗಮಯ್ಯಗ...’ ಜಂಗಮಯ್ಯನನ್ನು ಮರುಳು ಮಾಡಲು ಹೋಗಿ ಆತನ ಮೋಡಿಗೆ ತಾನೇ ಒಳಗಾದ ನಾರಿಯ ಹಾಗೆ, ವಿನೋದಕ್ಕೆ ನಾನು ಕೈಹಿಡಿದ ಕವಿತೆ ನನ್ನ ಮೇಲೆ ತುಂಬ ಗಾಢವಾದ ಮಾಯಾಜಾಲವೊಂದನ್ನು ಬೀಸಿ ಅದರ ನಿಗೂಢವಾದ ಕಣಿವೆಯ ಒಳಗೆ ಅಂಡಲೆಯುವಂತೆ ಮಾಡಿತು.
ನಾವು ಹೇಳಬೇಕು ಅಂದುಕೊಂಡದ್ದನ್ನು ಪೂರ್ತಿಯಾಗಿ ಕವಿತೆಯಲ್ಲಿ ಹೇಳಲಿಕ್ಕಾಗುತ್ತದೆಯೇ ಅನ್ನುವುದು ಒಂದು ಸಮಸ್ಯೆ. ಅಲ್ಲಮ ಹೇಳುವಂತೆ - "ಘನವ ಮನ ಕಂಡು ಅದನೊಂದು ಮಾತಿಂಗೆ ತಂದು ನುಡಿದು ನೋಡಿದಡೆ ಅದಕ್ಕದೆ ಕಿರಿದು ನೋಡಾ !’
ಕವಿತೆ ಅನ್ನುವುದು "ತಾಯ ಸೆರಗಿನ ನೂಲು ಮಗುವಿನ ಕೈಯಲ್ಲಿ ಉಳಿದಂತೆ’ ಅಂತ ಬೇಂದ್ರೆ ಕೂಡ ಹೇಳುತ್ತಾರೆ. ಅನುಭವ ಅನ್ನುವ ತಾಯಿ ಮಕ್ಕಳಾದ ನಮ್ಮನ್ನ್ನು ಮಲಗಿಸಿ ಅತ್ತ ಹೋಗುವಾಗ ನಮಗೆ ವರ್ಣಿಸಲು ಸಿಕ್ಕುವ ನಾಲ್ಕು ಸಾಲುಗಳು. ಸಮುದ್ರದ ಬಳಿಗೆ ಹೋದವನು ಬಯಸಿದರೂ ಸಮುದ್ರವನ್ನೇ ಮನೆಗೆ ತಂದಾನೆ ? ಒಂದು ಹಿಡಿ ಕಪ್ಪೆಚಿಪ್ಪು ತಂದಾನು ಅಷ್ಟೆ.
ಮಾತಿನಲ್ಲಿ ಹೇಳಲಿಕ್ಕಾಗದಿದ್ದುದನ್ನು ಕವಿತೆ ಅರ್ಥ ಮಾಡಿಸುತ್ತದೆ ಅಂತ ಅಲ್ಲ. ಅರ್ಥ ಮಾಡಿಸುವುದು ಬೇರೆ, ಅನುಭವ ಮಾಡಿಸುವುದೇ ಬೇರೆ. ಎಲ್ಲರ ಒಳಗಿರುವ ಅಂತಃಕರಣ ಲೋಕದ ಸುಖಸಂಕಟಗಳಿಗೆ ಮಿಡಿಯುತ್ತದಲ್ಲ - ಅದನ್ನು ಬೇಂದ್ರೆ "ನಿಜ ದುಃಖ’ ಅನ್ನುತ್ತಾರೆ. ಅಂದರೆ ದುಃಖಕ್ಕೂ ಮೀರಿದ್ದು- ಹೇಳಲಿಕ್ಕಾಗದ್ದು ಹಾಗೆಯೇ ಹೇಳದೆ ಇರಲಿಕ್ಕೂ ಆಗದ್ದು- "ಮಮತಾಜಳನು ಹುಗಿದು ತಾಜಮಹಲನು ಕಟ್ಟಿ ನಿಜ ದುಃಖ ಮರೆಸಬಹುದೆ ?’
ಹೀಗೆ ಕವಿತೆಯ ದಾರಿಯಲ್ಲಿ ನನಗೆ ಒಂದು ಸಮಸ್ಯೆ ಇದೆ. ಅದೇನೆಂದರೆ ನಾನು ನನಗೆ ಕಂಡದ್ದನ್ನು, ನಾನು ಉಂಡದ್ದನ್ನು ಹಾಗೇ ಹೇಳಬಲ್ಲೆನೇ ಅನ್ನುವುದು. ಮತ್ತೆ ಬೇಂದ್ರೆಯ ಉದಾಹರಣೆ ಕೊಡುವುದಾದರೆ- "ತೊಗಲ ನಾಲಗೆ ನಿಜವ ನುಡಿಯಲೆಳಸಿದರೆ ತಾನಂಗೈಲಿ ಪ್ರಾಣಗಳ ಹಿಡಿಯಬೇಕು, ಇಲ್ಲದಿದ್ದರೆ ನೀರಿನೊಲು ತಣ್ಣಗಿದ್ದವನದನು ಉರಿಯ ನಾಲಗೆಯಿಂದ ನುಡಿಯಬೇಕು.’ ನಮ್ಮ ಬದುಕಿನ ಸುತ್ತಮುತ್ತ, ನಮ್ಮೊಳಗೇ ಕಾಣುತ್ತಿರುವ ಕ್ರೌರ್‍ಯ, ಅಮಾನವೀಯತೆ, ಹಿಂಸೆ ಇವುಗಳನ್ನೆಲ್ಲ ಹಾಗೆಹಾಗೇ ಹಸಿಹಸಿಯಾಗಿ ನುಡಿಯುವುದು ಸಾಧ್ಯವಿದೆಯೆ ? ಲಂಕೇಶ್, ಅಡಿಗ, ಕಾಫ್ಕಾ, ಮಂಟೋರ ಹಾಗೆ ಕಟುವಾಗಿ, ತೀಕ್ಷ್ಣವಾಗಿ, ಕಾವ್ಯಾತ್ಮಕವಾಗಿ ಮತ್ತು ಸೊಗಸಾಗಿ ಬರೆಯಬಲ್ಲೆನೇ ಅನ್ನುವುದು ನಾನು ಮುಂದೆ ಯಾವ ಬಗೆಯ ಅನುಭವಗಳಿಗೆ ಹಾಗೂ ಅಕ್ಷರಗಳಿಗೆ ಒಡ್ಡಿಕೊಳ್ಳುತ್ತೇನೆ ಅನ್ನುವುದರ ಮೇಲೆ ನಿಂತಿದೆ.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
2 months ago