Tuesday, December 7, 2010

ಇಬ್ಬನಿ ತಬ್ಬಿದ ಇಳೆ



‘ಹೋಗಿ ಸಾರ್, ಈ ಸೀಸನ್ನಿನಲ್ಲಿ ಐನೂರ್ರೂಪಾಯಿಗಿಂತ ಕಡಿಮೆಗೆ ಇಷ್ಟೊಳ್ಳೆ ಜರ್ಕಿನ್ ಕೊಡೋಕಾಗಲ್ಲ...’ ಅಂತ ಕಡ್ಡಿ ಮುರಿದಂತೆ ಹೇಳುತ್ತಿದ್ದಾನೆ ಅಂಗಡಿಯವನು. ಮೆಜೆಸ್ಟಿಕ್‌ನ ಆಚೆಗಿರುವ ಅಂಗಡಿಗಳಾಗಲೇ ಬಾಗಿಲ ಶಟರ್ ಎಳೆಯುತ್ತಿವೆ. ಊರಿನಿಂದ ಮಿಗಿಸಿ ತಂದಿರುವ ಎರಡು ಸಾವಿರ ರೂಪಾಯಿಯಲ್ಲಿ ಐನೂರು ಜರ್ಕಿನ್‌ಗೇ ಸುರಿದರೆ ಮುಂದಿನ ಊಟಕ್ಕೇನು ಮಾಡುವುದು ಎಂಬ ಚಿಂತೆ ಆ ತರುಣನನ್ನು ಕೊರೆಯಹತ್ತಿದೆ. ಜಿಪ್ ಹರಿದ ಬ್ಯಾಗನ್ನು ಅವುಚಿಕೊಂಡು ಆತ ರಸ್ತೆಯ ಅಂಚಿನಲ್ಲಿ ಬಂದು ವಿಷಾದದಿಂದ ನೋಡುತ್ತ ನಿಂತಿದ್ದಾನೆ. ಕುಟುಕುಟು ಚಳಿಯ ಗಾಳಿಯೊಂದು ಆ ರಾತ್ರಿಯ ಮುನ್ನುಡಿಯಾಗಿ ಬಂದು ಆತನನ್ನು ನಿಷ್ಕರುಣೆಯಿಂದ ತಾಗಿದೆ.

‘ಈಗ ಒಂದ್ರೂಪಾಯಿ ಎರಡ್ರೂಪಾಯಿಗೆಲ್ಲ ಕಡ್ಲೆಕಾಯ್ ಕೊಡೋಕಾಗಲ್ಲ ರ್ರೀ... ಮೂರ್ರೂಪಾಯ್ ಮಿನಿಮಮ್...’ ಎಂದು ಒರಟಾಗಿ ನುಡಿದು ಮಾಸಿದ ಅಂಗಿಯ ಗಿರಾಕಿಯನ್ನು ಅಕ್ಕಪಕ್ಕದವರು ಲೇವಡಿಯಿಂದ ನೋಡುವಂತೆ ಮಾಡಿದ ಕಡ್ಲೇಕಾಯ್ ಮಾರುವವನು, ಉಬ್ಬಿದ ಹೊಟ್ಟೆಯ ಬೀಟ್ ಪೊಲೀಸ್ ಹತ್ತಿರಕ್ಕೆ ಬರುತ್ತಲೇ ಥಂಡಿ ಹತ್ತಿದ ಕುನ್ನಿಯಂತಾಗಿಬಿಟ್ಟಿದ್ದಾನೆ. ಆ ಪೊಲೀಸ್ ದೊಡ್ಡ ಪ್ಯಾಕೆಟ್ ತುಂಬಾ ಬಿಟ್ಟಿ ಕಡ್ಲೇಕಾಯ್ ಒಯ್ಯುತ್ತಿರುವಾಗ ಈತ ಮನಸ್ಸಿನಲ್ಲೇ ಶಾಪ ಹಾಕುತ್ತ ನಿರ್ವಿಣ್ಣನಾಗಿ ನೋಡುತ್ತಿದ್ದಾನೆ.

ಅವೆನ್ಯೂ ರೋಡಿನ ಇಕ್ಕಟ್ಟು ಕ್ರಾಸುಗಳಲ್ಲಿ, ಕಸದ ರಾಶಿಗೆ ಬೆಂಕಿ ಹಚ್ಚಿ ರಾತ್ರಿ ಪಾಳಿಯ ಪೊಲೀಸರು ಕೂತಿದ್ದಾರೆ. ಈಗಷ್ಟೆ ತಟ್ಟಾಡುತ್ತ ಹಾದು ಹೋದ ರಿಯಲ್ ಎಸ್ಟೇಟ್ ಏಜೆಂಟ್ ಕುಬೇರನ ಫಾರ್ಚುನರ್ ಕಾರನ್ನು ಡ್ರಂಕನ್ ಡ್ರೈವಿಂಗ್ ಕೇಸಿನಡಿ ಹಿಡಿದು ಹಾಕಬಹುದೋ ಬಾರದೋ ಎಂಬ ಅನುಮಾನ ಅವರಿಗಿನ್ನೂ ಶಮನವಾಗಿಲ್ಲ. ಎಂಜಿ ರೋಡಿನ ಪಕ್ಕದಲ್ಲಿ ಟೈಟ್ ಜೀನ್ಸ್ ಧರಿಸಿ ನಿಂತಿರುವ ಹುಡುಗಿಯ ಪಕ್ಕದಲ್ಲಿ ಬಂದ ಕಾರುಗಳೆಲ್ಲ ಯಾಕಿಷ್ಟು ಸ್ಲೋ ಆಗುತ್ತಿವೆ ! ಕಬ್ಬನ್ ಪಾರ್ಕಿನ ಮೂಲೆಯ ಪೊದೆಗಳು ಆಗಾಗ ಸುಮ್ಮನೆ ಅಲುಗಾಡುತ್ತವೆ !

ಇಲ್ಲಿ ಕೋಳಿಗಳು ಕೂಗುವುದಿಲ್ಲ. ಆದರೆ ಚಾಯ್ ಮಾರುವವರು ಆಗಲೇ ಲಾಂಗ್ ಟ್ರಿಪ್ ಬಸ್‌ಗಳಿಂದ ಇಳಿಯುತ್ತಿರುವವರ ಮುಂದೆ ಪ್ರತ್ಯಕ್ಷರಾಗಿ ‘ಬಿಸ್ಸಿಬಿಸಿ ಕಾಫಿ ಚಾಯ್...’ ಎಂದು ಕೂಗು ಹಾಕತೊಡಗಿದ್ದಾರೆ. ಬೆಳಗ್ಗೆ ಆರು ಗಂಟೆಗೆಲ್ಲ ಜೀವ ಪಡೆಯುತ್ತಿದ್ದ ಪೇಟೆಯ ಬೀದಿಗಳು, ಎಂಟಾದರೂ ಇನ್ನೂ ಯಾಕೋ ಮೌನದಲ್ಲಿ ಅದ್ದಿ ತೆಗೆದಂತಿವೆ. ಅಲ್ಲೊಂದು ಇಲ್ಲೊಂದು ಬೂಟುಗಾಲಿನ ಸಪ್ಪಳ. ಮೂಲೆಮನೆಯ ಮಹಾನುಭಾವ ವಾಕಿಂಗ್ ಶೂಗಳನ್ನು ಬಿಗಿದು ವರಾಂಡದ ಕುರ್ಚಿಯಲ್ಲಿ ರಗ್ಗು ಹೊದ್ದು ಕೂತವನು, ಹಾಗೇ ನಿದ್ದೆ ಹೋಗಿದ್ದಾನೆ. ತರಗೆಲೆಗಳನ್ನು ಪರಾಪರಾ ಗುಡಿಸುತ್ತಿರುವ ಪೌರ ಕಾರ್ಮಿಕ ಹೆಂಗಸು, ಈ ಚಳಿಯಲ್ಲಿ ಕೆಲಸಕ್ಕೆ ಹಚ್ಚಿದ ಯಾರಿಗೋ ಬಯ್ಯುತ್ತ ಗೊಣಗುಟ್ಟುತ್ತಿರುವುದು ಇಲ್ಲಿಗೇ ಕೇಳುತ್ತಿದೆ. ಮುಂಜಾನೆ ಯಾರೋ ಚಳಿ ಕಾಯಿಸಲು ಹಚ್ಚಿದ ಕಸದ ರಾಶಿಯ ಬೆಂಕಿಯ ಬೂದಿಗುಪ್ಪೆಗಳನ್ನು ನೋಡುತ್ತ ಕೆಎಸ್‌ನ ಕವನದ ಸಾಲುಗಳು ನೆನಪಾಗುತ್ತಿವೆ: ‘ಸಂಜೆಗೊಬ್ಬಳು ಮುದುಕಿ, ಕೊನೆಯ ಕೆಂಡವ ಕೆದಕಿ, ಎತ್ತಿ ಮುಡಿದಳು ತನ್ನ ಗಂಟು ಜಡೆಗೆ...’

*
ಮಲೆನಾಡಿನ ಚಳಿಯ ದಿನಗಳೇ ಬೇರೆ ರೀತಿ. ಅದೊಂದು ರೀತಿ ಮೌನದ ಸುದೀರ್ಘ ಮೆರವಣಿಗೆ. ಸಂಜೆ ಐದಾಗುವ ಮುನ್ನವೇ ಎಲ್ಲ ಜೀವಗಳೂ ಬೆಚ್ಚಗಿನ ಸೂರಿನ ಒಳಗೆ ಮುದುಡುತ್ತವೆ. ಉದ್ದನೆಯ ರಾತ್ರಿಗೆ, ಬೇಸಿಗೆಯಲ್ಲಿ ಮಾಡಿಟ್ಟ ಹಪ್ಪಳ ಸಂಡಿಗೆಗಳು ಸಾಥ್ ಕೊಡುತ್ತವೆ. ಹೊರಗೆ ಮಂಜು ಸುರಿಯುತ್ತಲೇ ಇರುತ್ತದೆ. ಮುಂಜಾನೆಯ ಕಿರಣಗಳನ್ನು ಮುದುಕ ಮುದುಕಿಯರು ಜೋರಾಗಿ ಕೆಮ್ಮುತ್ತ ಸ್ವಾಗತಿಸುತ್ತಾರೆ. ಸಂಜೆ ಮುಂಜಾನೆ ಆಟದ ಮೈದಾನಗಳು ಖಾಲಿ ಹೊಡೆಯುತ್ತವೆ. ಅಡಕೆಯ ಸೋಗೆಗಳಿಂದ ತಟಪಟನೆ ಬೀಳುತ್ತಿರುವ ಮುಂಜಾನೆಯ ಇಬ್ಬನಿಗಳು ಒದ್ದೆ ಮಾಡಿದ ನೆಲ ಒಣಗಬೇಕಾದರೆ ಮಧ್ಯಾಹ್ನ. ಈ ಹಗಲುಗಳು ಎಷ್ಟೊಂದು ಚಿಕ್ಕವೆಂದರೆ, ಒದ್ದೆ ನೆಲ ಒಣಗುವ ಮುನ್ನವೇ ಅದು ಮತ್ತೆ ತಂಪಾಗುವ ಸಂಜೆಯೂ ಆಗಮಿಸಿಬಿಡುತ್ತದೆ. ಹಾಲು ತುಂಬಿದ ಭತ್ತದ ತೆನೆಗಳು ನಿಧಾನವಾಗಿ ಜೇನು ಬಣ್ಣಕ್ಕೆ ತಿರುಗುತ್ತ, ಸಂಜೆಯ ಗಾಳಿಗೆ ಸುಯ್ಯನೆ ಶಬ್ದ ಮಾಡುತ್ತ ಸಮುದ್ರದ ಅಲೆಗಳಂತೆ ಹೊಯ್ದಾಡಿ, ಅದುವರೆಗೆ ಬೆವರು ಹರಿಸಿದ ರೈತನಿಗೆ ನಿಟ್ಟುಸಿರಿನ ಫೀಲಿಂಗ್ ನೀಡುತ್ತವೆ.

ಚಳಿಗಾಲದ ರಾತ್ರಿಗಳು ಎಷ್ಟೊಂದು ದೀರ್ಘವೆಂದು, ಹೊದೆಯಲು ರಗ್ಗಿಲ್ಲದ ಬಡವರಲ್ಲಿ ಕೇಳಬೇಕು. ಈ ರಾತ್ರಿಗಳು ಎಷ್ಟೊಂದು ಸುಖಕರವೆಂದು ನವದಂಪತಿಗಳನ್ನು ಕೇಳಬೇಕು. ಈ ರಾತ್ರಿಗಳು ಎಷ್ಟು ರಗಳೆಯದೆಂದು ರಾತ್ರಿ ಪಾಳಿಯವರಲ್ಲಿ ಕೇಳಬೇಕು. ಈ ರಾತ್ರಿಗಳು ಎಷ್ಟು ಯಾತನಾದಾಯಕವೆಂದು ಜೈಲುವಾಸಿಗಳಲ್ಲಿ ಕೇಳಬೇಕು. ಈ ರಾತ್ರಿಗಳು ಎಷ್ಟು ಶ್ರಮದಾಯಕವೆಂದು ಲಾಂಗ್‌ಜರ್ನಿ ಬಸ್ ಚಾಲಕರಲ್ಲಿ, ರಾತ್ರಿರಾಣಿಯರಲ್ಲಿ ಕೇಳಬೇಕು.

*
‘ಈ ಚಳಿಯ ಇರುಳು ಎಷ್ಟೊಂದು ದೀರ್ಘ
ಇದ ಕಳೆಯಲು ನಿನ್ನ ಅಪ್ಪುಗೆಯೊಂದೆ ಮಾರ್ಗ’
ಅಂತ ಹೇಳುತ್ತಾನೆ ಉರ್ದು ಕವಿಯೊಬ್ಬ. ಚಳಿ ಕಳೆಯಲು ಅವರವರಿಗೆ ಅವರವರದೇ ಮಾರ್ಗಗಳಿವೆಯೇನೋ ! ಬೇಸಿಗೆ ಬಿಸಿಲಿನಿಂದ ಪಾರಾಗಲು ಮದಿರೆ, ತಣ್ಣೆಳಲು, ಮಾನಿನಿಯ ನಳಿದೋಳ್ಗಳ ಉಪಾಯ ಹೇಳಿದ ಉಮರ್ ಖಯ್ಯಾಮ್, ಚಳಿ ದಾಟಲು ಯಾವ ಉಪಾಯವನ್ನೂ ಹೇಳಿದಂತಿಲ್ಲ. ತಣ್ಣೆಳಲು ಒಂದು ಬಿಟ್ಟರೆ, ಆತನೆಂದ ಉಳಿದ ಉಪಾಯಗಳು ಚಳಿಗೂ ಅನ್ವಯ ಆಗುತ್ತವೆ ಅಂದುಕೊಳ್ಳೋಣವೆ ! ಅಥವಾ ಸರ್ವಜ್ಞನ ಮಾತು: ‘ಬೆಚ್ಚನೆಯ ಮನೆ, ವೆಚ್ಚಕ್ಕೆ ಹೊನ್ನು, ಇಚ್ಛೆಯನರಿವ ಸತಿಯಿರಲು...’ ಇದು ಜೋಡಿ ಇದ್ದವರ ಮಾತಾಯಿತು. ಅವಿವಾಹಿತರು, ಸಂಗಾತಿ ಕಳೆದುಕೊಂಡವರು, ಒಂಟಿ ಜೀವಗಳು ಚಳಿಗಾಲ ಕಳೆಯಲು ಏನು ಮಾಡಬೇಕು ?

*
ನೀವು ಕೃಷಿ ಸಂಸ್ಕೃತಿಗೂ ಜೀವನಕ್ರಮಕ್ಕೂ ಸೇರಿದವರಾಗಿದ್ದರೆ, ನೀವು ನಿಮಗೇ ಸೇರಿದವರೆಂಬ ಸಂದೇಶವನ್ನು ಚಳಿಗಾಲ ಮುಟ್ಟಿಸುತ್ತದೆ. ಅದು ಬೇಸಿಗೆಯಂತೆ ಉರಿಯುವುದಿಲ್ಲ, ಬೆವರು ಹರಿಸಿ ಬಟ್ಟೆ ಕಿತ್ತೆಸೆದು, ಸಿಟ್ಟಿನಿಂದ ಅನ್ಯರ ಜತೆ ಕೂಗಾಡಿ ಗೋಳು ಹುಯ್ದುಕೊಳ್ಳುವಂತೆ ಮಾಡುವುದಿಲ್ಲ. ಮಳೆಗಾಲದಂತೆ ರಾಚಿ ರಾಡಿ ಎಬ್ಬಿಸುವುದಿಲ್ಲ. ಚಳಿಗಾಲದಲ್ಲಿ ನೀವು ಅಮ್ಮ ಹೊಲಿದು ಕೊಟ್ಟ ಕೌದಿ ಹೊದ್ದು ಒಲೆಯ ಮುಂದೆ ಕುಳಿತು ನಿಮ್ಮೊಳಗೇ ನಿಮ್ಮನ್ನು ನೋಡಿಕೊಳ್ಳಬಹುದು. ‘ಮರದ ಕೊಂಬೆಗಳು ಉದುರಿಸಿವೆ ಎಲೆಗಳ/ಸ್ವಾಗತಿಸಲು ಉಣ್ಣೆಯ ಸ್ವೆಟರ್‌ಗಳ...’ ಎಂಬಂತಹ ಕಾವ್ಯಾತ್ಮಕ ಸಾಲುಗಳನ್ನು ಸವಿಯಬಹುದು. ಲಾರಾ ಇಂಗೆಲ್ಸ್ ವೈಲ್ಡರ್‌ಳ ‘ಚಳಿಯ ಸುಳಿಯಲ್ಲಿ’, ಆಲನಹಳ್ಳಿಯವರ ‘ಭುಜಂಗಯ್ಯನ ದಶಾವತಾರ’ ಮುಂತಾದ ಕೃತಿಗಳನ್ನು ಓದಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಸರಿದುಹೋದ ಜೀವನದ ಘಟನೆಗಳನ್ನು ಮೆಲುಕು ಹಾಕಿ ಅಚ್ಚರಿಯನ್ನೋ ಖುಷಿಯನ್ನೋ ವಿಷಾದವನ್ನೋ ಪಡುತ್ತಿರಬಹುದು.

‘ಆನ್ ಅಫೇರ್ ಟು ರಿಮೆಂಬರ್’ ಚಲನಚಿತ್ರದಲ್ಲಿ ಒಂದು ಡಯಲಾಗ್ ಬರುತ್ತೆ: ‘ಬೆಚ್ಚಗಿನ ನೆನಪುಗಳು ಇಲ್ಲದವರಿಗೆ ಚಳಿಗಾಲ ಮತ್ತಷ್ಟು ಶೀತಲವಾಗಿರುತ್ತೆ...’ ಎಷ್ಟು ನಿಜ ಅಲ್ಲವೆ ?
*

Sunday, December 5, 2010

ತೊಟ್ಟಿಲಲ್ಲಿ ಪುಟ್ಟ ದೇವತೆ


ಮೊನ್ನೆ, ಡಿಸೆಂಬರ್ ೨ ಮುಂಜಾನೆ ನಮ್ಮ ಮನೆಗೊಂದು ಪುಟ್ಟ ಅತಿಥಿಯ ಆಗಮನವಾಯ್ತು. ಇದು ಆಕೆಯ ಚಿತ್ರ.