Sunday, February 22, 2009
ನಾಲಗೆಯ ಮೇಲೆ ಕುರುಕ್ಷೇತ್ರ
ದಾಸರು ನಾಲಗೆ ತಪ್ಪಿ
ನಾಗರಿಕತೆ ಎಂದರೆ ಹಿಂಸೆಯ ಕತೆ
ಎಂದುಬಿಟ್ಟರು
ಆಮೇಲೆ ಚಡಪಡಿಸಿದರು
ತಮ್ಮ ಮಾತನ್ನು ಅಲ್ಲೇ ಬಿಡುವುದೋ
ವ್ಯಾಖ್ಯಾನಿಸುವುದೋ ಅರಿಯದ ಸಂದಿಗ್ದದಲ್ಲಿ
ಮುಂದೆ ಕುಳಿತ ಮಂದಿಯ ಮುಖ ನೋಡಿದರು
ಉದ್ದ ಅಡ್ಡ ನಾಮಗಳು ಮುದ್ರೆಗಳು
ಮುಗಿದ ಕೈಗಳು ಬೋಳಿಸಿದ ತಲೆಗಳು
ಬಿಟ್ಟ ಮೈ ಹೊದ್ದ ಶಲ್ಯ ಇಣುಕುವ ಜನಿವಾರ
ಬೊಜ್ಜು ಮೈ ಹುಳಿ ತೇಗು
ತರಹೇವಾರಿ ಶಿಖೆಗಳು
ಕಾಸಿನಗಲದ ಕುಂಕುಮ ತಲೆಗೆ ಸೆರಗು
ಮುತ್ತೈದೆಯರ ಸಕಲ ಭೂಷಿತಗಳು
ಮಾತುಗಳು ಗಂಟಲಲ್ಲೇ ಉಳಿದವು
ಕುರುಕ್ಷೇತ್ರದ ನೆತ್ತರ ನದಿ ಹಾಗೇ ಮುಂದುವರಿಯಿತು
ಬಾಯಿ ಬಿಡುವ ಭೂಮಿ ಎದೆ ಸೀಳಿದ ಗದೆ
ನೀರ ತಡಿಯಲ್ಲಿ ಅನಾಥ ಹೆಣ ಕತ್ತಲಲ್ಲಿ ಕುಣಿವ ಕತ್ತಿ
ಧರ್ಮದ ವಿಜಯಕ್ಕೆ ನಾರಿಯರ ಆರ್ತನಾದದ ಬೆಂಬಲ
ಭಗ್ನ ಬ್ರಹ್ಮಾಸ್ತ್ರಕ್ಕೆ ಅರ್ಧ ಭ್ರೂಣ
ಇತ್ತೀಚೆಗೆ ದಾಸರು
ವಿಪರೀತ ತಡವರಿಸುತ್ತಾರೆ
ಅನ್ನುತ್ತಾರೆ ಎಲ್ಲರೂ
Friday, February 13, 2009
ಸಂಪೂರ್ಣ ರಕ್ಷಣೆ
ಅಲ್ಲಿ ಹಿಂದೂಗಳಿದ್ದರು. ಮುಸ್ಲಿಮರು, ಕ್ರೈಸ್ತರು ಕೂಡ.
ಬಸ್ಸು ನಗರ ಬಿಡುತ್ತಿದ್ದಂತೆ ಅದನ್ನು ಗುಂಪೊಂದು ನಿಲ್ಲಿಸಿತು. ಕೆಂಪು ತಿಲಕ ಹಚ್ಚಿ ದೊಣ್ಣೆ ಹಿಡಿದ ಗುಂಪು ಒಳಗೆ ನುಗ್ಗಿತು.
ಕಾರಣ : ಹಿಂದೂ ಹುಡುಗಿಯರು ಮುಸ್ಲಿಮರ ಜತೆಗೆ ಪ್ರವಾಸ ಹೊರಟದ್ದು.
ದಾಳಿ ಮಾಡಿದವರು : ಯಥಾಪ್ರಕಾರ, ಸಂಸ್ಕೃತಿ ರಕ್ಷಕರು.
ಪರಿಣಾಮ : ಹುಡುಗ- ಹುಡುಗಿಯರ ಮೇಲೆ ಹಲ್ಲೆ. ಅವರು ಧರಿಸಿದ್ದ ಆಭರಣಗಳ ಲೂಟಿ.
ಗುಂಪಿನ ನಾಯಕನ ಕಣ್ಣು ಒಬ್ಬ ಮಹಿಳೆ ಧರಿಸಿದ್ದ ಆಭರಣದ ಮೇಲೆ ಬಿತ್ತು. ‘ಅದನ್ಯಾಕೆ ಬಿಟ್ಟಿದ್ದೀ, ಕಿತ್ತುಕೋ...’ ಕಾರ್‍ಯಕರ್ತನಿಗೆ ಆದೇಶಿಸಿದ.
"ಅಣ್ಣಾ, ಅದು ತಾಳಿ..."
"ಏನಾದರೇನು, ಚಿನ್ನ ತಾನೆ ? ಕಿತ್ತುಕೋ"
ತಾಳಿಯನ್ನು ಕಿತ್ತುಕೊಂಡು ಸಂಸ್ಕೃತಿ ರಕ್ಷಣೆಯನ್ನು ಸಂಪೂರ್ಣಗೊಳಿಸಲಾಯಿತು.
(೨೦೦೬ರಲ್ಲಿ ಮಂಗಳೂರಿನಲ್ಲಿ ನಡೆದ ನಿಜ ಘಟನೆ)
Friday, February 6, 2009
ಸಾಹಿತ್ಯ ಸಮ್ಮೇಳನ : ವರದಿಯಾಗದ ಸಂಗತಿಗಳು
ಬಿಸಿಲು, ಧೂಳು, ಸೆಕೆ ; ಊಟ ಸಿಗಲಿಲ್ಲ ಎಂಬ ಆರ್ತನಾದಕ್ಕೆ ಕರಗದ ದುರ್ಗದ ಕಲ್ಲುಗಳು ; ಮುಷ್ಕರಗಳು ; ಕಸಾಪ ಘಟಕಗಳ ನಡುವೆ ಭಿನ್ನಮತ ; ಆಯೋಜಕರ ಬೇಜವಾಬ್ದಾರಿ ; ಮೆರೆದ ಖಾದಿ, ಕಾವಿಗಳು...
ಇವೆಲ್ಲ ಎಲ್ಲ ಪತ್ರಿಕೆಗಳಲ್ಲಿ, ಚಾನೆಲ್‌ಗಳಲ್ಲಿ ಈಗಾಗಲೇ ವರದಿಯಾಗಿವೆ. ನಮ್ಮ ದೃಷ್ಟಿ ಏನಿದ್ದರೂ ವರದಿಯಾಗದ ಸಂಗತಿಗಳ ಕಡೆಗೆ.
***
ಸಮ್ಮೇಳನ ಉದ್ಘಾಟನೆಯ ಸಂದರ್ಭ. ಮಾನ್ಯ ಮುಖ್ಯಮಂತ್ರಿಗಳು ದೀಪ ಬೆಳಗಬೇಕು. ಆಚೆಗೂ ಈಚೆಗೂ ಎರಡು ಮೂರು ಮಾನ್ಯ ಶ್ರೀಶ್ರೀಶ್ರೀಗಳು, ಉಸ್ತುವಾರಿ ಸಚಿವರು, ಶಾಸಕರು, ಸ್ಥಳೀಯ ಪುಢಾರಿಗಳು, ಕಸಾಪ ಅಧ್ಯಕ್ಷರು... ಎಲ್ಲರೂ ಸೇರಿ ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಅವರನ್ನು ಹಿಂದಕ್ಕೆ ತಳ್ಳಿಬಿಟ್ಟರು. ಮುಖ್ಯಮಂತ್ರಿ ದೀಪ ಉರಿಸುತ್ತಿದ್ದಾರೆ, ಬಸವರಾಜು ಕಾಣಿಸುತ್ತಲೇ ಇಲ್ಲ.
ಕಡೆಗೆ ಯಾರೋ ಮಾಧ್ಯಮದವರು ಕೂಗಿದರು. "ಅಧ್ಯಕ್ಷರು, ಅಧ್ಯಕ್ಷರು..."
ಈಗ ವೇದಿಕೆಯ ಮೇಲಿದ್ದವರಿಗೆ ಜ್ಞಾನೋದಯ. ಹಿಂದೆಲ್ಲೋ ನೂಕಲ್ಪಟ್ಟಿದ್ದ ಬಸವರಾಜು ಅವರನ್ನು ಮತ್ತೆ ದೀಪದ ಹತ್ತಿರಕ್ಕೆ ದೂಡಲಾಯಿತು.
ಖಾದಿ ಮತ್ತು ಕಾವಿ. ಇದರ ನಡುವೆ ಕಡೆಗಣಿಸಲ್ಪಡುವ ಸಾಹಿತಿ. ಇದು ನಮ್ಮ ರಾಜ್ಯದ ಇಂದಿನ ಸ್ಥಿತಿಗೆ ರೂಪಕ ಅಂತ ನಿಮಗೆ ಅನಿಸುತ್ತಿಲ್ಲವೆ ?
***
ಮಾನ್ಯ ಉಸ್ತುವಾರಿ ಸಚಿವರು- ಕರುಣಾಕರ ರೆಡ್ಡಿಯವರು- ಉದ್ಘಾಟನೆ ಸಂದರ್ಭ ಭರ್ರನೆ ಹೆಲಿಕಾಪ್ಟರ್‌ನಲ್ಲಿ ಬಂದರು. ಅಂದ ಹಾಗೆ, ದುರ್ಗದಲ್ಲೇ ಇರುವ ಅವರ ಮನೆಗೂ ಸಮ್ಮೇಳನದ ಸ್ಥಳಕ್ಕೂ ಎರಡು ಮೈಲಿಗಿಂತ ಹೆಚ್ಚು ದೂರವಿಲ್ಲ. ಇಷ್ಟು ದೂರಕ್ಕೂ ಅವರು ಕಾರು ಬಳಸುವುದಿಲ್ಲ. ಎಲ್ಲಿಗೆ ಹೋಗುವುದಾದರೂ ಹೆಲಿಕಾಪ್ಟರ್. ಇದರಲ್ಲೇ ಮುಖ್ಯಮಂತ್ರಿ ಕೂಡ ಪ್ರಯಾಣಿಸಿದರು. ನೆರೆದ ಜನ ನಿಬ್ಬೆರಗಾಗಿ ನೋಡಿದರು. ಯಾರಪ್ಪನ ಮನೆ ದುಡ್ಡು !
***
ಬರೆಯುವುದಾದರೆ ಮಧ್ಯಮ ಪ್ರತಿನಿಗಳದೇ ಒಂದು ದೊಡ್ಡ ರಾಮಾಯಣ. ಸಮ್ಮೇಳನದ ಹಿಂದಿನ ದಿನ ಬೆಂಗಳೂರಿನಿಂದ ಬಂದ ರಿಪೋರ್ಟರ್‌ಗಳಿಗೆ ಹೊಟೆಲ್ ಕೊಠಡಿ ಬುಕ್ ಮಾಡಲಾಗಿತ್ತು. ರಾತ್ರಿಯಾಗಿತ್ತು. ಆಯೋಜಕರ ಮೇಲೆ ಕೂಗಾಡಿ ಕೆಲವು ವರದಿಗಾರರು ತೈಲಾಭ್ಯಂಗ ಮಾಡಿಸಿಕೊಂಡಿದ್ದರು. ಹೀಗೆ ಟೈಟಾಗಿ ತೂರಾಡುತ್ತಿದ್ದ ತಮಿಳು ಮೂಲದ ಟಿವಿಯೊಂದರ ವರದಿಗಾರ- ಹೆಸರು ಹನುಮಂತ ಎಂದಿಟ್ಟುಕೊಳ್ಳಿ- ಬೇರೊಂದು ಟಿವಿ ಚಾನೆಲ್ ವರದಿಗಾರ್ತಿಗೆ ಎಂದು ನಿಗದಿಪಡಿಸಲಾಗಿದ್ದ ಕೊಠಡಿಗೆ ನುಗ್ಗಿ ಬಟ್ಟೆ ಬಿಚ್ಚಿ ಬಿದ್ದುಕೊಂಡ.
ಕೊಂಚ ತಡವಾಗಿ ಆಗಮಿಸಿದ ವರದಿಗಾರ್ತಿ ಈತನ ಅವತಾರ ಕಂಡು ದಂಗಾದಳು. ಕೊಠಡಿ ಬಿಟ್ಟುಕೊಡುವಂತೆ ಎಷ್ಟು ಒತ್ತಾಯಿಸಿದರೂ ಈ ಆಸಾಮಿ ಕದಲಲು ಸಿದ್ಧನಿಲ್ಲ. ಕಡೆಗೂ ಆ ವರದಿಗಾರ್ತಿಗೆ ಆಯೋಜಕರು ಬೇರೆ ರೂಮಿನ ವ್ಯವಸ್ಥೆ ಮಾಡಬೇಕಾಯಿತು. ಇನ್ನು ಈತನ ಉಳಿದ ಮೂರು ದಿನಗಳ ಅವತಾರದ ಬಗ್ಗೆ ಬರೆಯಹೋದರೆ ಅದು ಮಹಾಭಾರತ !
***
ಹೆಚ್ಚಿನ ವರದಿಗಳು ಆಗಮಿಸಲಿವೆ !