ಇದು ಬಾಂಗ್ಲಾದ ಲೇಖಕಿ ತಸ್ಲಿಮಾ ನಸ್ರೀನ್ ಬರೆದ ಮತ್ತೊಂದು ಕವನ. ಈ ಕವನ ಬಾಂಗ್ಲಾದ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿತ್ತು. ಕವನದಲ್ಲಿ ಪ್ರವಾದಿ ಮುಹಮ್ಮದ್‌ರನ್ನು ಅವಹೇಳನ ಮಾಡಲಾಗಿದೆ ಎಂದು ಅವರ ದೂರು.
ಅದಕ್ಕಿಂತಲೂ ಈ ಕವನ ನನಗೆ ಆಪ್ತವಾಗಲು ಕಾರಣ- ನನ್ನ ಅಮ್ಮ. ಆಕೆ ಈಗಿಲ್ಲ.
ಅಮ್ಮ
-೧-
ಕೊನೆಗಾಲದಲ್ಲಿ ನನ್ನಮ್ಮನ ಕಂಗಳು ಮೊಟ್ಟೆಯ ಲೋಳೆಯಂತೆ ಹಳದಿಯಾಗಿದ್ದವು
ನೀರು ತುಂಬಿದ ಚೀಲದಂತೆ ಆಕೆಯ ಹೊಟ್ಟೆ ದಿನದಿಂದ ದಿನಕ್ಕೆ ಊದಿಕೊಂಡು
ಯಾವುದೇ ಕ್ಷಣದಲ್ಲಿ ಸಿಡಿಯುವಂತಾಗಿತ್ತು
ನಿಲ್ಲಲಾಗದೆ, ಕುಳಿತಿರಲೂ ಆಗದೆ, ಬೆರಳುಗಳ ಚಲಿಸಲಾಗದೆ
ಆಕೆ ಮಲಗಿದಲ್ಲಿಯೇ ಇರುತ್ತಿದ್ದಳು
ಕೊನೆಕೊನೆಗೆ ಆಕೆ ಅಮ್ಮನಂತೆಯೂ ಕಾಣುತ್ತಿರಲಿಲ್ಲ
ಪ್ರತಿ ಸಂಜೆ ಪ್ರತಿ ಹಗಲು ಬಂಧುಗಳು ಬರುತ್ತಿದ್ದರು
ಸಿದ್ಧವಾಗಿರಲು ಸೂಚಿಸುತ್ತ
ಪವಿತ್ರ ಶುಕ್ರವಾರ ಹತ್ತಿರದಲ್ಲಿದೆ, ನಿರಾಶಳಾಗದಂತೆ ಆಕೆಗೆ ಹೇಳುತ್ತ,
ಲಾ ಇಲಾಹ್ ಇಲ್ಲಲ್ಲಾಹ್- ಅಲ್ಲಾಹು ಒಬ್ಬನೇ ಅನ್ನುತ್ತ
ಪ್ರಶ್ನೆಗಳ ಕೇಳಲು ಇಬ್ಬರು ದೇವತೆಗಳು ಬರುವರು- ಮುಂಕಾರ್ ಮತ್ತು ನಕೀರ್
ಕೋಣೆ, ಜಗಲಿಗಳ ಪರಿಶುದ್ಧಗೊಳಿಸಲು ಹೇಳುವರು
ಕೊನೆಗೊಮ್ಮೆ ಮೃತ್ಯು ಬರುವಾಗ ಸುರ್ಮಾ ಹಾಗೂ ಅತ್ತರು ಕೈಯಲ್ಲಿರಬೇಕು ಅನ್ನುವರು
ಹಸಿದ ಕಾಯಿಲೆ ಈಗ ನರ್ತಿಸುತ್ತಿದೆ ಅಮ್ಮನ ದೇಹದ ಮೇಲೆ
ಆಕೆಯಲ್ಲಿ ಉಳಿದ ಕೊನೆಯ ಬಲವನ್ನೂ ಹೀರಿದೆ
ಅವಳ ಕಣ್ಣುಗಳು ಸಿಡಿದುಹೋಗುವಂತೆ ಉಬ್ಬಿವೆ
ನಾಲಿಗೆ ಒಣಗಿದೆ
ಎದೆಯಲ್ಲಿದ್ದ ಗಾಳಿಯನ್ನೂ ಕಸಿದಿದೆ
ಅವಳು ಉಸಿರಾಡಲು ಒದ್ದಾಡುತ್ತಿರುವಂತೆ
ಹಣೆ, ಹುಬ್ಬುಗಳು ವೇದನೆಯಿಂದ ಗಂಟಿಕ್ಕುತ್ತಿರುವಂತೆ
ಮನೆಯವರು ಒಂದಾಗಿ ನಿಂತು ಆಕೆಗಾಗಿ ಪ್ರಾರ್ಥಿಸಿದೆವು
ಆಕೆಯ ಶಾಂತಿಗಾಗಿ ಪ್ರವಾದಿಗೆ ಬೇಡಿದೆವು
ಆಕೆ ಜನ್ನತುಲ್ ಫಿರ್ದೌಸ್ ಸ್ವರ್ಗಕ್ಕೆ ಹೋಗುತ್ತಾಳೆಂಬುದರಲ್ಲಿ ನಮಗೆ ಅನುಮಾನವಿಲ್ಲ
ಒಂದು ರಮಣೀಯ ಸಂಜೆ ಸ್ವರ್ಗದ ಉದ್ಯಾನದಲ್ಲಿ
ಮುಹಮ್ಮದರ ಕೈಗೆ ಕೈ ಬೆಸೆದು ನಡೆದು
ಇಬ್ಬರೂ ಹಕ್ಕಿ ಮಾಂಸದ ಊಟ, ವೈನು ಸೇವಿಸಿ...
ತಾಯಿಯ ಜೀವಿತದ ಕನಸಾಗಿತ್ತು ಅದು
ಆದರೆ ಈಗ, ತಿರೆಯ ತೊರೆಯುವ ವೇಳೆ, ಅವಳು ಅಂಜಿದಳು ಎಂಬುದೇ ಅಚ್ಚರಿ
ಹೊರಗೆ ಕಾಲಿಡುವ ಬದಲು ಅವಳು ನನಗೆ ಬಿರಿಯಾನಿ ಮಾಡಿಕೊಡಲು
ಹಿಲ್ಸಾ ಮೀನನ್ನು ಕರಿದು ಕೊಡಲು
ಕೆಂಪು ಆಲೂಗಳಿಂದ ಸಾಗು ತಯಾರಿಸಲು
ತೋಟದ ದಕ್ಷಿಣ ಮೂಲೆಯ ಮರದಿಂದ ಎಳನೀರು ಕಿತ್ತುಕೊಡಲು
ಕೈ ಬೀಸಣಿಕೆಯಿಂದ ಗಾಳಿ ಹಾಕಲು
ಹಣೆಯ ಮೇಲೆ ಕುಣಿದಾಡುತ್ತಿದ್ದ ಕುರುಳನ್ನು ಅತ್ತ ಸರಿಸಲು
ನನ್ನ ಹಾಸಿಗೆಯ ಮೇಲೆ ಹೊಸ ಚಾದರ ಹೊದಿಸಲು
ಕಸೂತಿ ಎಳೆದ ಹೊಸ ಫ್ರಾಕು ಹೆಣೆಯಲು
ಬರಿಗಾಲಿನಲ್ಲಿ ಜಗಲಿಯ ಮೇಲೆ ನಡೆಯಲು
ಸಣ್ಣ ಪಪ್ಪಾಯಿ ಗಿಡಕ್ಕೊಂದು ಊರುಗೋಲಿಡಲು
ತೋಟದಲ್ಲಿ ಸಣ್ಣಗೆ ಹಾಡುತ್ತ ಕುಳಿತಿರಲು -
"ಇಂಥ ಸುಂದರ ಚಂದ್ರ ಹಿಂದೆಂದೂ ಬರಲಿಲ್ಲ,
ಇಷ್ಟು ಸೊಬಗಿನ ಇರುಳು ಹಿಂದೆಂದೂ ಇರಲಿಲ್ಲ..."
ನನ್ನಮ್ಮ ಬದುಕಲು ಎಷ್ಟೊಂದು ಹಾತೊರೆದಿದ್ದಳು.
-೨-
ನನಗೀಗ ಗೊತ್ತಿದೆ, ಪುನರ್ಜನ್ಮವಿಲ್ಲ
ಕೊನೆಯ ತೀರ್ಪಿನ ದಿನವೂ ಇಲ್ಲ
ಸ್ವರ್ಗ, ಹಕ್ಕಿ ಮಾಂಸದ ಊಟ, ವೈನು, ಗುಲಾಬಿ ಕನ್ಯೆಯರು
ಇವೆಲ್ಲ ಧರ್ಮಗುರುಗಳು ಹೆಣೆದ ಭ್ರಮೆಯ ಜಾಲ
ನನ್ನಮ್ಮ ಸ್ವರ್ಗಕ್ಕೆ ಹೋಗುವುದಿಲ್ಲ
ಯಾವ ಉದ್ಯಾನದಲ್ಲೂ ಯಾರ ಜತೆಗೂ ನಡೆಯುವುದಿಲ್ಲ
ಕೆಟ್ಟ ನರಿಗಳು ಅವಳ ಗೋರಿಯ ಹೊಕ್ಕು, ಮಾಂಸ ಮುಕ್ಕುವವು
ಅವಳ ಬಿಳಿ ಎಲುಬುಗಳು ಗಾಳಿಗೆ ಚದುರಿ ಹರಡುವವು
ಆದರೂ, ಸ್ವರ್ಗವೊಂದಿದೆಯೆಂದು ನಾನು ನಂಬುವೆ
ಏಳು ಆಕಾಶಗಳ ಮೇಲೆ ಒಂದು ಅತಿಭವ್ಯ ಸ್ವರ್ಗ
ಕಷ್ಟಕರ ಸೇತುವೆ ಪಲ್ಸಿರತ್ತನ್ನು ನಿರಾಯಾಸ ದಾಟಿ ನನ್ನಮ್ಮ ಅಲ್ಲಿಗೆ ತಲುಪಿರುವಳು
ಸುಂದರಾಂಗ ಪ್ರವಾದಿ ಮುಹಮ್ಮದ್ ಆಕೆಯ ಸ್ವಾಗತಿಸುವನು
ತನ್ನ ಪೊದೆಗೂದಲ ಎದೆಯ ಮೇಲೆ ಕರಗುವಂತೆ ಆಕೆಯ ತಬ್ಬುವನು
ಕಾರಂಜಿಯಲ್ಲಿ ಮೀಯಲು, ನರ್ತಿಸಲು, ಉಲ್ಲಾಸದಿಂದ ಜಿಗಿಯಬಯಸುವಳು
ಚಿನ್ನದ ತಪ್ಪಲೆಯಲ್ಲಿ ಹಕ್ಕಿ ಮಾಂಸ ತರಿಸಿ
ಎದೆ ಉಕ್ಕಿ ಬಿರಿಯುವಂತೆ ಸೇವಿಸುವಳು
ಆಕೆಯ ನೋಡಲು ಸ್ವತಃ ಅಲ್ಲಾಹು ಉದ್ಯಾನಕ್ಕೆ ಬರುವನು
ಅವಳ ತಲೆಗೆ ಕೆಂಪು ಹೂವು ಮುಡಿಸಿ ವ್ಯಾಮೋಹದಿಂದ ಚುಂಬಿಸುವನು
ಹಕ್ಕಿಗರಿಗಳ ಹಾಸಿಗೆಯ ಮೇಲೆ ಆಕೆ ಮೃದುವಾಗಿ ಪವಡಿಸುವಳು
ಏಳುನೂರು ಹುರ್ ಕನ್ನೆಯರು ಆಕೆಗೆ ಗಾಳಿ ತೀಡುವರು
ನವಯವ್ವನದ ಗೆಲ್ಬನ್ ದೇವತೆಗಳು ಬೆಳ್ಳಿ ತಟ್ಟೆಯಲ್ಲಿ ತಣ್ಣಗಿನ ನೀರು ಕೊಡುವರು
ಸಂತೋಷದ ಉಬ್ಬರದಲ್ಲಿ ಮೈ ಕುಲುಕುವಂತೆ ಆಕೆ ನಗುವಳು
ನೆಲದ ಮೇಲೆ ಕಳೆದ ಸಂಕಟದ ದಿನಗಳನು ಆಕೆ ಮರೆತೇ ಬಿಡುವಳು
ನಾನು ನಾಸ್ತಿಕಳು ನಿಜ
ಆದರೆ ಅಲ್ಲೆಲ್ಲೋ ಒಂದು ಸ್ವರ್ಗವಿದೆಯೆಂದು
ನಂಬುವುದು ಎಂಥ ಸುಖ.