ರಂಗದ ಮೇಲೆ ಸಣ್ಣದಾಗಿ ನೀರು ತೊಟ್ಟಿಕ್ಕುವ ಒಂದು ನಲ್ಲಿ. ಇನ್ನೊಂದು ಬದಿಯಲ್ಲಿ ಕಸದ ರಾಶಿ. ಯಾರು ಯಾರೋ ಬರುತ್ತಾರೆ, ಹೋಗುತ್ತಾರೆ. ಮನುಷ್ಯ ದಣಿವು ತೀರಿಸಿಕೊಳ್ಳುವ ಕ್ರಿಯೆ ನಾಟಕದಾದ್ಯಂತ ನಡೆದೇ ಇದೆ. ಮಧ್ಯೆ ಮಧ್ಯೆ ಜೀವನ ನಾಟಕದ ಹಲವಾರು ದೃಶ್ಯಗಳೂ ಅನಾವರಣಗೊಳ್ಳುತ್ತವೆ- ಪ್ರೇಮ, ಸ್ನೇಹ, ಕಚ್ಚಾಟ, ದರ್ಪ, ಸಾವು, ಬಾಲ್ಯ...
ನೀನಾಸಂ ಮರುತಿರುಗಾಟ- ೨೦೧೧ ಪ್ರದರ್ಶಿಸುತ್ತಿರುವ ‘ನೀರಿನ ನಿಲುತಾಣ’ ನಾಟಕದ ಬಗ್ಗೆ ಇಷ್ಟು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಅದೊಂದು ನಾಟಕ ಎಂದರೆ ಅರ್ಧ ಸತ್ಯ; ಏಕೆಂದರೆ ಅಲ್ಲಿ ನಾಟಕೀಯ ಘಟನೆಗಳಾಗಲೀ, ಶೀಘ್ರಗತಿಯಾಗಲೀ ಇಲ್ಲ. ಅದೊಂದು ಕಾವ್ಯದಂತಿದೆ ಎಂದರೆ ಕ್ಲೀಷೆ. ಇಲ್ಲಿ ಮಾತೇ ಇಲ್ಲ.
ನಾಟಕ ಎಷ್ಟು ನಿಧಾನ ಗತಿಯಲ್ಲಿದೆ ಎಂದರೆ, ರಂಗ ಪ್ರವೇಶಿಸುವ ಒಂದು ಪಾತ್ರ ರಂಗದ ಮಧ್ಯಕ್ಕೆ ಬರಲು ಹತ್ತು ನಿಮಿಷ ತೆಗೆದುಕೊಳ್ಳುತ್ತದೆ. ಇದನ್ನು ‘ಅತಿ ವಿಲಂಬಿತ ಲಯ’ ಎಂದು ನಿರ್ದೇಶಕರು ಕರೆದಿದ್ದಾರೆ. ಎಲ್ಲೋ ಒಂದೆರಡು ಕಡೆ ಬಿಟ್ಟರೆ, ನಿಜ ಜೀವನಕ್ಕೆ ಸಹಜವಾದ ಗತಿಯ ಚಲನೆಗಳು ಈ ನಾಟಕದಲ್ಲಿ ಇಲ್ಲ. ನಾಟಕದಲ್ಲೆಲ್ಲೂ ಮಾತುಗಳೂ ಇಲ್ಲ. ಆರಂಭದ ಅರ್ಧ ಗಂಟೆಯಲ್ಲೇ ಪ್ರೇಕ್ಷಕ ತಾಳ್ಮೆ ಕಳೆದುಕೊಂಡಿರುತ್ತಾನೆ; ನಾಟಕದ ಒಳಗೆ ರಭಸಗತಿಯಿಂದ ನುಗ್ಗಿಬಿಡೋಣವೆಂದೂ ಆತನಿಗೆ ಅನ್ನಿಸಿದರೆ ಆಶ್ಚರ್‍ಯವಿಲ್ಲ. ಈ ನಾಟಕ ಅಷ್ಟರ ಮಟ್ಟಿಗೆ ಬೇರೆ ರೀತಿಯ ಮನೋ ತಯಾರಿಯನ್ನು ನೋಡುಗನಿಂದ ಅಪೇಕ್ಷಿಸುತ್ತದೆ.
ನಾಟಕದಲ್ಲಿ ದಟ್ಟವಾಗಿ ಹಬ್ಬಿರುವುದು ಪ್ರಯಾಣದ ಪ್ರತಿಮೆ; ಎಲ್ಲರೂ ಎಲ್ಲಿಗೋ ಹೋಗುತ್ತಿದ್ದಾರೆ, ಎಲ್ಲಿಗೆ ಎಂಬುದು ಸ್ಪಷ್ಟವಿಲ್ಲ. ಬಳಲಿರುವ ಅವರ ಮುಖಗಳು ಹಾಗೂ ಎಲ್ಲವನ್ನೂ ಅವರು ಗಂಟು ಕಟ್ಟಿಕೊಂಡು ಹೋಗುತ್ತಿರುವುದು ನೋಡಿದರೆ ಇರುವ ಸ್ಥಿತಿಯಿಂದ ತಪ್ಪಿಸಿಕೊಂಡು ಹೋಗುವುದೇ ಅವರ ಪರಮ ಉದ್ದೇಶವಾಗಿರುವಂತಿದೆ; ಅದು ಈ ಜಗತ್ತಿನ ದಾರುಣ ವಾಸ್ತವದಿಂದ ಇರಬಹುದು. ಈ ನಾಟಕ ಮೂಲ ಜಪಾನಿನ ಓಟೋ ಶೋಗೋ ಅವರದು. ಜಪಾನಿನ ಇತಿಹಾಸ ಅರಿತವರಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ; ಮಹಾಯುದ್ಧಗಳ ಭೀಕರ ಅನುಭವಗಳು ಅವರನ್ನು ಸದಾ ದುರಂತದ ಬಗ್ಗೆ ಚಿಂತಿಸುತ್ತಿರುವಂತೆ ರೂಪಿಸಿದೆ. ಅಲ್ಲಿನ ಪ್ರಜ್ಞಾವಂತ ಮನಸ್ಸುಗಳು ಯಾವತ್ತೂ ಮನುಷ್ಯ ಚೇತನದ ಅವನತಿ, ಮನುಷ್ಯಕುಲದ ದುರಂತಗಳ ಬಗ್ಗೆ ನುಡಿಯುತ್ತಲೇ ಇರುತ್ತವೆ. ಈ ನಾಟಕ ಕೂಡ ಅದನ್ನೇ ಹೇಳುವಂತಿದೆ.
ಇಂಥ ವಸ್ತುವಿಗೆ ಕೃತಿಕಾರರು ಈ ಮಂದಗತಿಯನ್ನು ಆರಿಸಿಕೊಳ್ಳಲು ಏನು ಕಾರಣ ? ಅದಕ್ಕೆ ನನಗನ್ನಿಸುವಂತೆ ಕಾರಣಗಳು ಎರಡು. ಒಂದು- ಮನುಷ್ಯನ ತೀವ್ರಗತಿಯ ಬದುಕಿನ ಅಂಚಿನಲ್ಲಿ ನಿಂತು, ಅದಕ್ಕೆ ಅಣಕವಾಗಿ ಈ ನಿಧಾನಗತಿಯನ್ನು ತರಲಾಗಿದೆ. ಎರಡು- ನಾಟಕವನ್ನು ನೋಡುತ್ತ ನೋಡುತ್ತ ನಾವು ನಮ್ಮ ಒಳಗೂ ನೋಡಿಕೊಳ್ಳಲು ಕೃತಿಕಾರ ಪ್ರೇರೇಪಿಸುತ್ತಿದ್ದಾನೆ. ನಾಟಕದ ವಿಲಂಬಿತ ಲಯಕ್ಕೆ ಒಗ್ಗಿಕೊಳ್ಳಲಾಗದೆ ಹೊರಬಿದ್ದರೆ ಅದು ನೋಡುಗನ ಸೋಲು, ನಾಟಕದ್ದಲ್ಲ.
ಹಾಗೆಂದು ಇದರಲ್ಲಿ ಕೆಲ ದಂಗುಬಡಿಸುವ ಚಲನೆಗಳೂ ಇವೆ. ಕುಳಿತಲ್ಲೇ ಸತ್ತುಹೋಗುವ ಮುದುಕಿ, ಆಕೆಯನ್ನು ಕಸದ ರಾಶಿಗೆಸೆಯುವ ಕ್ರಿಯೆ ಇಂಥ ಚಲನೆಗಳಲ್ಲೊಂದು. ಚೈತನ್ಯ ಇಲ್ಲದೆ ಹೋದರೆ ಮನುಷ್ಯ ಕೂಡ ಒಂದು ಕಸ ಅಷ್ಟೇ; ಆತ ಸೃಷ್ಟಿಸಿದ ಕಸದ ರಾಶಿಗೆ ಕೊನೆಗೆ ಆತನೂ ಸೇರುತ್ತಾನೆ ಎಂಬುದು ಹಲವಾರು ಅರ್ಥ ಪರಂಪರೆಯನ್ನೇ ನಮ್ಮ ಮನದಲ್ಲಿ ನಿಲ್ಲಿಸುವ ಒಂದು ಕ್ರಿಯೆ.
ಸದಾ ಸುರಿಯುತ್ತಲೇ ಇರುವ ನೀರು, ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಾದ ಪ್ರಾಕೃತಿಕ ಚೈತನ್ಯದ ಪ್ರತೀಕವೋ ? ಆ ಕಸದ ರಾಶಿ, ನಮ್ಮಿಂದ ಹಿಂದೆ ಸರಿದ ಜೀವನದ ತುಣುಕುಗಳೋ ? ಕಸದ ರಾಶಿಯ ಮೇಲೆ ಉಲ್ಟಾ ಬಿದ್ದಿರುವ ಹಾಳು ಸೈಕಲ್ಲು, ನಮ್ಮ ವೇಗದ ಗತಿಗೆ ವ್ಯಂಗ್ಯವೋ ? ಇಷ್ಟೆಲ್ಲ ಪ್ರಯಾಣಗಳು ಈ ನಾಟಕದಲ್ಲಿ ಇದ್ದರೂ, ಯಾರೂ ಯಾಕೆ ಪರಸ್ಪರ ಸಂಸುವುದೇ ಇಲ್ಲ ? ಹೀಗೆ ಹಲವಾರು ಪ್ರಶ್ನೆಗಳನ್ನು ನಾಟಕ ಮನದಲ್ಲಿ ಬಿತ್ತುತ್ತದೆ.
ಇಂಥ ಅಪರೂಪದ ಪ್ರಾಯೋಗಿಕ ನಾಟಕವನ್ನು ಅಷ್ಟೇ ಸಮರ್ಥವಾಗಿ ಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ್ದಾರೆ. ನೀನಾಸಂನ ನಟರು ಅದಕ್ಕೆ ಜೀವ ತುಂಬಿದ್ದಾರೆ. ರಂಗದ ಮೇಲೆ ಅವರ ಚಲನೆಗಳ ಸಂಯಮವನ್ನು ನೋಡಿದರೆ, ನಾಟಕ ಮುಗಿದ ನಂತರ ಅವರು ಕಿರುಚಿ ಕುಣಿದಾಡಿ ತಮ್ಮ ಬಿಗಿಹಿಡಿದ ನರಗಳನ್ನು ಸಡಿಲ ಮಾಡಿಕೊಂಡಿರಬಹುದು ಎಂಬುದು ನನ್ನ ಊಹೆ !