Wednesday, March 26, 2008

ಬದುಕು ಸಾವುಗಳ ನಡುವೆ ಅಲ್ಪವಿರಾಮದಂತೆ

ಅವರ ಮನೆ ಶಿವಮೊಗ್ಗ ಹಾಗೂ ಸಾಗರ ನಡುವಿನ ಹೆದ್ದಾರಿಯಲ್ಲಿ ಸಿಗುವ ಆನಂದಪುರ ಎಂಬ ಊರಿನ ಬಳಿ. ಬಸ್ಸಿಳಿದು ಹತ್ತೆಂಟು ಕಿಲೋಮೀಟರು ಕ್ರಮಿಸಿದರೆ ನರಸೀಪುರ ಎಂಬ ಹಳ್ಳಿ. ಹಳ್ಳಿಯ ಒಂದು ಮೂಲೆಯಲ್ಲಿ ಅಡಕೆ ತೋಟ ನೋಡಿಕೊಂಡು ಎಲ್ಲ ಹವ್ಯಕರಂತೆ ತಣ್ಣಗಿರುವ ಭಟ್ಟರು ಗುರುವಾರ ಮತ್ತು ಭಾನುವಾರ ಸಿಕ್ಕಾಪಟ್ಟೆ ಬಿಜಿಯಾಗಿಬಿಡುತ್ತಾರೆ. ಅದು ಅವರು ನಾಟಿ ಔಷಧ ಕೊಡುವ ದಿನ.

ಆನಂದಪುರದಲ್ಲಿ ಬೆಳಗ್ಗೆ ಆರು ಗಂಟೆಗೆ ಬಸ್ಸಿನಿಂದ ಇಳಿದು ನೋಡಿದರೆ ನನ್ನ ನಿರೀಕ್ಷೆಯಂತೆ ಅದು ಕುಗ್ರಾಮ ಆಗಿರಲಿಲ್ಲ. ರಿಕ್ಷಾಗಳು ಭಟ್ಟರ ಮನೆಗೆ ಒಂದರ ಹಿಂದೊಂದು ಸಾಲುಗಟ್ಟಿ ಹೊರಟಿದ್ದವು. ಮಲೆನಾಡಿನ ಚಳಿ ಜರ್ಕಿನ್ ಹಾಕಿದ್ದರೂ ಗದಗುಟ್ಟಿಸುತ್ತಿತ್ತು. ಆಗಲೇ ತುಂಬಿದ್ದ ರಿಕ್ಷಾದಲ್ಲಿ ನಾನು ಏರಿದ ನಂತರವೂ ಆತ ಹತ್ತು ಜನರನ್ನು ತುಂಬಿಸಿದ.

ಅಲ್ಲಿ ನಾನು ತೆರಳಲು ಕಾರಣ ನನ್ನ ಅಮ್ಮನಿಗೆ ಅಡರಿಕೊಂಡ ಒಂದು ಕಾಯಿಲೆ. ಈ ಕಾಯಿಲೆಗೆ ಬೆಂಗಳೂರಿನ ಯಾವ ವೈದ್ಯರ ಬಳಿಯೂ ಯಾವ ಮದ್ದೂ ಇರಲಿಲ್ಲ ; ಬೆಂಗಳೂರು ಎಂದೇನು, ವಿಶ್ವದ ಯಾವ ಡಾಕ್ಟರನೂ ಇದಕ್ಕೆ ಏನೂ ಮಾಡುವಂತಿಲ್ಲ ಎಂದು ಗೊತ್ತಾಗಿತ್ತು ; ಆಗ ಅಕ್ಟೋಬರ್. ಅಮ್ಮ ಬೆಂಗಳೂರಿನ ನನ್ನ ಪುಟ್ಟ ನಾಯಿಗೂಡಿನಂಥ ಮನೆಯಲ್ಲಿ ಚಳಿ ತಾಳಲಾಗದೆ ತತ್ತರಿಸಿ ಮುದುಡಿ ಮಲಗಿರುತ್ತಿದ್ದಳು. ಪಕ್ಕದ ಮನೆಯವರು ಈ ವೈದ್ಯರ ಬಗ್ಗೆ ತಿಳಿಸಿದ್ದರು.

ರಿಕ್ಷಾ ವೈದ್ಯರ ಮನೆಯ ಎದುರು ಬಂದಾಗ ನಾನು ದಂಗಾಗಿ ಹೋದೆ. ಅದು ಸೋಗೆ ಮುಳಿ ಮಾಡಿನ ಮನೆಯೇನಲ್ಲ ; ಮಾಳಿಗೆಯಿದ್ದ ದೊಡ್ಡ ಆರ್‌ಸಿಸಿ ಮನೆ. ಔಷಗೆ ಬಂದ ಜನ ಮನೆಯ ಅಂಗಳದಲ್ಲಿ ಸಾಲುಗಟ್ಟಿ ನಿಂತಿದ್ದರು ; ಇನ್ನೂ ಜನ ಬರುತ್ತಲೇ ಇದ್ದರು. ನಾನು ಕ್ಯೂಗೆ ಸೇರಿಕೊಳ್ಳುವ ವೇಳೆಗೆ ಗಂಟೆ ಚುಮುಚುಮು ಆರೂವರೆ ; ಆಗಲೇ ಕನಿಷ್ಠ ನೂರು ಜನ ಅಲ್ಲಿದ್ದರು. ನನ್ನ ಹಿಂದೆ ಮತ್ತೆ ಅಷ್ಟೇ ಜನ ಇದ್ದರು. ‘ಇಂದು ಗುರುವಾರವಾದ್ದರಿಂದ ಜನ ಕಡಿಮೆ’ ಎಂದು ಪಕ್ಕದಲ್ಲಿದ್ದವನು ಹೇಳಿದ. ಹೆಚ್ಚಿನವರು ಬೆಳ್ಳಂಬೆಳಗ್ಗೆ ವಾಹನ ಮಾಡಿಕೊಂಡು ದೂರದೂರುಗಳಿಂದ ಬಂದಿದ್ದರು, ಹಲವರು ರಾತ್ರಿಯೇ ಬಂದು ಸೀಟ್ ರಿಸರ್ವ್ ಮಾಡಿದ್ದರು.

ಮನೆ ಪಕ್ಕದಲ್ಲಿದ್ದ ಕೊಟ್ಟಿಗೆಯಲ್ಲಿ ವೈದ್ಯರು ಒಬ್ಬೊಬ್ಬನನ್ನೇ ಮಾತನಾಡಿಸಿ ಮದ್ದು ಕೊಡುತ್ತಿದ್ದರು. ಅವರ ಅಕ್ಕಪಕ್ಕದಲ್ಲಿ ನಾಲ್ಕೈದು ಬಗೆ ಮರದ ಚಕ್ಕೆಗಳು, ಒಂದೆರಡು ಬಗೆಯ ಬೇರುಗಳು ; ಎಲ್ಲ ರೋಗಕ್ಕೂ ಅದೇ ಮದ್ದು. ಕಿಡ್ನಿ ಕಲ್ಲಿಗೂ ಅದೇ, ಗಂಟಲು ಕ್ಯಾನ್ಸರ್‌ಗೂ ಅದೇ, ಜಾಂಡೀಸ್‌ಗೂ ಅದೇ. ಸೇವಿಸುವ ಕ್ರಮ ಮಾತ್ರ ಬೇರೆ ಬೇರೆ. ಅವರ ಮುಂದೆ ನೂರಾರು ರೋಗಿಗಳ, ಅವರ ಸಂಬಂಕರ ಸಾಲು.

ಇದನ್ನೆಲ್ಲ ಲಂಬಿಸುವ ಅಗತ್ಯವಿಲ್ಲ ; ಪಾರಂಪರಿಕ ಹಾಗೂ ಪರ್‍ಯಾಯ ವೈದ್ಯ ಪದ್ಧತಿಗಳ ಬಗ್ಗೆ ನಮ್ಮ ಜನ ಇಟ್ಟಿರುವ ನಂಬಿಕೆಯನ್ನು ಇದು ಸೂಚಿಸುತ್ತಿರಬಹುದು ಅಥವಾ ಅಲೋಪತಿಯ ಮೇಲೆ ನಂಬಿಕೆ ಇಲ್ಲದಿರುವುದನ್ನೂ ಹೇಳುತ್ತಿರಬಹುದು. ಕಾಣಬಲ್ಲವನಿಗೆ, ಅಲ್ಲಿದ್ದ ಮುಖಗಳಲ್ಲಿ ಭರವಸೆ ಹಾಗೂ ಹತಾಶೆಗಳೆರಡೂ ಕಾಣಿಸುತ್ತಿದ್ದವು. ಅಲ್ಲಿ ಬಂದು ನಿಂತಿದ್ದವರಲ್ಲಿ ಹೆಚ್ಚುಕಡಿಮೆ ಎಲ್ಲವೂ ಡಾಕ್ಟರರು ಕೈಬಿಟ್ಟ ಕೇಸುಗಳೇ. ಇದುವರೆಗಿನ ಪ್ರಯತ್ನ ಫಲ ಕೊಡದಿದ್ದುದರಿಂದ ಹತಾಶೆ ; ಈ ವೈದ್ಯರು ಒಂದು ಪವಾಡ ನಡೆಸಬಹುದೆಂಬ ಭರವಸೆ.

ಆ ವೈದ್ಯರೇನೂ ಅವಧೂತನಂತೆ ಕಾಣಲಿಲ್ಲ. ಅವರು ಹಿಂದಿನ ದಿನವೇ ಕೆಲಸದವನ ಜತೆ ಗುಡ್ಡ ಗುಡ್ಡ ಅಲೆದು ಚಕ್ಕೆ ಆರಿಸಿ ತಂದಿಟ್ಟಿರುತ್ತಿದ್ದರು. ಒಂದು ಸಲ ನೋಡಿದಾಗ ಅವರು ಬೀಡಿ ಸೇದುತ್ತಾ ಮನೆಗೆಲಸದವರೊಡನೆ ಮಾತನಾಡುತ್ತಿದ್ದರು ; ಮತ್ತೊಂದು ಬಾರಿ ಸಾಲು ತಪ್ಪಿಸಿ ಬಂದವನೊಡನೆ ಜಗಳವಾಡಿದರು. ಒಂದು ಸಲ ಒಬ್ಬನಿಗೆ ಒಂದು ರೋಗಕ್ಕೆ ಮಾತ್ರವೇ ಮದ್ದು ಕೊಡುತ್ತಿದ್ದರು. ಕೊಡುವಷ್ಟು ಮಾತ್ರ ತೆಗೆದುಕೊಳ್ಳಬೇಕು, ಹೆಚ್ಚಿಗೆ ಕೇಳುವಂತಿಲ್ಲ. ಔಷಧಕ್ಕೆ ನಯಾ ಪೈಸೆ ತೆಗೆದುಕೊಳ್ಳುವುದಿಲ್ಲ ಅವರು. ವಶೀಲಿಯೂ ನಡೆಯುವುದಿಲ್ಲ.

ಅವರು ಔಷಧ ಕೊಡತೊಡಗುವುದು ಬೆಳಗ್ಗೆ ಏಳೂವರೆಗೆ. ನಾನು ಮೂರನೇ ಸಲ ಹೋಗಿದ್ದಾಗ ಭಟ್ಟರು ರೌದ್ರಾವತಾರ ತಾಳಿಬಿಟ್ಟಿದ್ದರು. ಅದಕ್ಕೆ ಕಾರಣ ಹಿಂದಿನ ರಾತ್ರಿ ವಾಹನಗಳಲ್ಲಿ ಬಂದು ಕ್ಯೂ ನಿಂತವರು ರಾತ್ರಿಯಿಡೀ ಕಚಕಚ ಮಾತನಾಡುತ್ತ, ಜಗಳವಾಡುತ್ತ, ಗಲಾಟೆ ಎಬ್ಬಿಸಿ ಭಟ್ಟರ ನಿದ್ದೆ ಕೆಡಿಸಿ ಬಿಟ್ಟಿದ್ದರು. "ನಿನ್ನೆ ಮದ್ದು ಹುಡುಕಿ ಸುಸ್ತಾಗಿ ಮಲಗಿದ್ದರೆ ನಿಮ್ಮ ಗಲಾಟೆ ಎಂತದು, ಇಂದು ಮದ್ದು ಕೊಡುವುದಿಲ್ಲ" ಎಂದು ಕಟುವಾಗಿಬಿಟ್ಟಿದ್ದರು. ದೂರದಿಂದ ಹೋದ ನಾವೆಲ್ಲ ಕಂಗಾಲಾಗಿದ್ದೆವು. ಬಳಿಕ ಸಮಾಧಾನ ಮಾಡಿಕೊಂಡು ಔಷಧ ಕೊಟ್ಟರು. ಅಂದು ಕ್ಯೂನ ಮೊದಲಲ್ಲಿದ್ದವರಿಗೆ ಮದ್ದು ಸಿಕ್ಕಿದ್ದು ಕೊನೆಗೆ.

ಪ್ರತಿಸಲ ನಾನು ಹೋದಾಗಲೂ ಹಲವಾರು ವಿಚಿತ್ರ ಕೇಸುಗಳು ಕಾಣುತ್ತಿದ್ದವು. ಇದ್ದಕ್ಕಿದ್ದಂತೆ ಸಾಲಿನಲ್ಲಿ ನಿಂತವಳೊಬ್ಬಳು ಧಡ್ಡನೆ ಬಿದ್ದುಬಿಡುತ್ತಿದ್ದಳು. ಕೆಲವರ ಮೈಮೇಲೆ ಏನೋ ಆವೇಶವಾಗುತ್ತಿತ್ತು. ಗುಲ್ಬರ್ಗ, ಕೇರಳದ ಕಲ್ಲಿಕೋಟೆ ಹೀಗೆ ದೂರದೂರದಿಂದ ಬಂದವರು ಕೂಡ ಕ್ಯೂನಲ್ಲಿ ನಿಂತಿರುತ್ತಿದ್ದರು. ಪುಟ್ಟ ಹುಡುಗಿಯೊಬ್ಬಳನ್ನು ಕಲ್ಲಿನ ಮೇಲೆ ಕೂರಿಸಿ ಆಕೆಯ ಅಪ್ಪ ಕ್ಯೂನಲ್ಲಿ ನಿಂತಿರುತ್ತಿದ್ದ. ಆಕೆಗೆ ರಕ್ತದ ಕ್ಯಾನ್ಸರ್. ಒಮ್ಮೆ ಕ್ಯೂನ ಮಧ್ಯದಲ್ಲಿದ್ದವನು ತನಗೆ ಎಚ್‌ಐವಿ ಇದೆ ಎಂದು ದೊಡ್ಡ ಗಂಟಲಿನಲ್ಲಿ ಸಾರುತ್ತಿದ್ದ. ವೈದ್ಯರಿಂದ ಚಕ್ಕೆ ಇಸಿದುಕೊಳ್ಳುವಾಗಲಂತೂ ಎಲ್ಲರ ಮುಖದಲ್ಲೂ ಒಂದು ಬೆಳ್ಳಿ ಬೆಳಕು ಕೋರೈಸಿದಂತಾಗುತ್ತಿತ್ತು. ಭಟ್ಟರು ದೊಡ್ಡ ದನಿಯಲ್ಲಿ ಮಾತನಾಡುತ್ತ ಚಕ್ಕೆ ಎಣಿಸಿ ಕೈಗಿಡುತ್ತಿದ್ದರು.

ಬದುಕು ಹಾಗೂ ಸಾವಿನ ನಡುವಿನ ಒಂದು ಅಲ್ಪವಿರಾಮದಂತಿದ್ದ ಈ ಮನೆ, ರೋಗಿಗಳ ಸುಖ ಹಾಗೂ ಸಂಕಟಗಳು ಜತೆಯಾಗುವ ಒಂದು ಸ್ಥಳವಾಗಿತ್ತು. "ನಮ್ಮ ತಂದೆಗೆ ಕ್ಯಾನ್ಸರ್. ಮನೆಗೆ ಕೊಂಡೋಗಿ ಅಂತ ಡಾಕ್ಟರ್ ಹೇಳಿದ್ದರು. ಇವರ ಮದ್ದಿನಲ್ಲಿ ಒಂದು ವರ್ಷದಿಂದ ಸುಖವಾಗಿದ್ದಾರೆ" ಎಂದು ಒಬ್ಬ ಹೇಳುತ್ತಾನೆ. ಪಕ್ಕದಲ್ಲಿ ನಿಂತ ಪೇಷೆಂಟ್‌ಗೆ ಅದು ಬರೀ ಮಾತಲ್ಲ, ಕಾರ್ಗತ್ತಲಲ್ಲಿ ಹೊಳೆಯುವ ಬೆಳ್ಳಿ ರೇಖೆ. ಹಾಗೇ, ಬರಿಯ ಬ್ಲಡ್‌ಪ್ರೆಶರ್ ಹೊಂದಿರುವಾತನಿಗೆ ಕ್ಯಾನ್ಸರ್ ರೋಗಿಯ ವೇದನೆಯ ಮುಂದೆ ತನ್ನದು ಏನೂ ಅಲ್ಲ ಎಂಬ ಅರಿವು. ಹಾಗೇ ಅದು ಎಲ್ಲರ ಒಡಲಲ್ಲೂ ಇದ್ದುಕೊಂಡು ಹೊಂಚು ಹಾಕುವ ಸಾವಿನ, ವೇದನೆಯ ಕಿಂಚಿತ್ ದರ್ಶನ.

ಇಂಥ ವೈದ್ಯರಲ್ಲಿಗೆ ತಿಂಗಳಿಗೊಂದು ಬಾರಿಯಂತೆ ಹೋಗುತ್ತಿದ್ದ ನಾನು ಇನ್ನು ಹೋಗುವ ಸಂಭವವಿಲ್ಲ. ಯಾಕೆಂದರೆ ಅಲ್ಲಿಂದ ತಂದ ಮದ್ದನ್ನು ಅಷ್ಟೊಂದು ಶ್ರದ್ಧೆಯಿಂದ ಸೇವಿಸಿದರೂ ನನ್ನ ಅಮ್ಮ ಮೊನ್ನೆ ಮೊನ್ನೆಯಷ್ಟೇ ತೀರಿಕೊಂಡಳು. ಅವಳಿಗೆ ಪಿತ್ಥಕೋಶದ ಕ್ಯಾನ್ಸರ್ ಆಗಿತ್ತು. ಅದು ಗೊತ್ತಾದ ಬಳಿಕ ಆಕೆ ನಮ್ಮ ಜತೆಗಿದ್ದದ್ದು ನಾಲ್ಕೇ ತಿಂಗಳು.

Saturday, March 22, 2008

ನಗರ ಸಾಗರದಲ್ಲಿ ಹಳ್ಳಿಯ ನಡುಗಡ್ಡೆ

(ಸುಧನ್ವನ ‘ಪೇಟೆಯ ಪಾಡ್ದನ’ಕ್ಕೆ ಒಂದು ಪ್ರತಿಕ್ರಿಯೆ)
ಪ್ರಿಯ ಸುಧನ್ವ,
ನಿನ್ನ ಪೇಟೆಯ ಪಾಡ್ದನವನ್ನು ಬಿಡದೆ ಓದುತ್ತಿದ್ದೇನೆ. ಇದುವರೆಗೆ ಬಂದಿರುವ ಕಮೆಂಟುಗಳಿಗಿಂತ ಕೊಂಚ ದೀರ್ಘವಾಗಿಯೇ ಪ್ರತಿಕ್ರಿಯಿಸುತ್ತಿದ್ದೇನೆ, ಅದು ನಿನ್ನ ಪ್ರಯತ್ನಕ್ಕೆ ಅಗತ್ಯವಾಗಿಯೂ ಇದೆ. ಇಲ್ಲಿ ನನ್ನ ಗಮನ ನಿನ್ನ ಪನ್ ಸಾಮರ್ಥ್ಯದ ಬಗೆಗಾಗಲೀ, ಪದ ಚಮತ್ಕಾರಗಳ ಬಗೆಗಾಗಲೀ ಅಲ್ಲ- ವಸ್ತು ಹಾಗೂ ಅದನ್ನು ನೀನು ನಿರ್ವಹಿಸುವ ಕ್ರಮದ ಬಗೆಗೆ.
ನಗರ ಪ್ರಜ್ಞೆಯ ಕವಿತೆಗಳು ಕನ್ನಡದಲ್ಲಿ ಇಲ್ಲ(ಕಾಯ್ಕಿಣಿ ಕತೆಗಳು ಹಾಗೂ ಇತ್ತೀಚಿನ ವಿ.ಎಂ.ಮಂಜುನಾಥ್ ಕವನಗಳು ಇದಕ್ಕೆ ಅಪವಾದ) ನಿಜ. ಈ ದೃಷ್ಟಿಯಿಂದ ನಿನ್ನ ಪದ್ಯಗಳು ಹೊಸಾ ಪ್ರಯತ್ನಗಳೇ ಸರಿ. ತುಸು ಗಂಭೀರವಾಗಿ ಪರಿಗಣಿಸಿದರೆ (ನೀನು ಮತ್ತು ಓದುಗರು) ಈ ಪದ್ಯಗಳು ಕನ್ನಡಕ್ಕೆ ಉತ್ತಮ ಕೊಡುಗೆಯಾಗಬಲ್ಲವು.
ನೀನು ಮೂಲತಃ ನಗರದವನಲ್ಲ ಎಂಬುದು ನಿನ್ನ ಪದ್ಯ ಓದುವಾಗಲೇ ಗೊತ್ತಾಗುತ್ತದೆ. ನಗರದ ಮೇಲಿನ ಪದ್ಯ ಬರೆಯಲು ನಗರದವನಾಗಿರಲೇ ಬೇಕಾಗಿಲ್ಲ ಎಂಬುದೂ ನಿಜ. ಅದೇ ಈ ಕವಿತೆಗಳ ಮುಖ್ಯ ಲಕ್ಷಣ ಕೂಡ. ಯಾಕೆಂದರೆ ನೀನು ನಗರದ ಮೇಲೆ ಕಟ್ಟುವ ಪ್ರತಿಯೊಂದು ಪದ್ಯದಲ್ಲೂ ನಿನ್ನ ಊರು, ಜನ ಬೆರೆತುಕೊಂಡು ಬರುತ್ತವೆ. ಪೇಟೆಯ ಲೈಟುಗಳ ಮಧ್ಯೆ ಹಳ್ಳಿಯ ಚಿಮಣಿ, ಇಲ್ಲಿನ ಝಗಮಗದ ನಡುವೆ ಅಲ್ಲಿನ ಕತ್ತಲು, ಇಲ್ಲಿನ ಯುವತಿಗೆ ಅಲ್ಲಿನ ಅಮ್ಮ, ನಗರದ ದೇವತೆಗಳಿಗೆ ಹಳ್ಳಿಯ ಹವಿಸ್ಸು ! ಅದು ನಿನ್ನ ಅರಿವಿಲ್ಲದೆಯೂ ಇರಬಹುದು. ಹೀಗಾಗಿ ನಿನ್ನ ಪದ್ಯಗಳು ಸಂಪೂರ್ಣ ನಗರ ಪದ್ಯಗಳೂ ಅಲ್ಲ. ಅವು ‘ಪೇಟೆ- ಹಳ್ಳಿ ಪದ್ಯಗಳು’ ಅಷ್ಟೆ. ಬಹುಶಃ ಹಳ್ಳಿಯಿಂದ ಬಂದು ಇಲ್ಲಿ ನೆಲೆಯೂರಿ ಬರೆಯುವ ಯಾರಿಗೂ ಸಂಪೂರ್ಣ ನಗರ ಪ್ರಜ್ಞೆಯೆಂಬುದು ಇಲ್ಲವೇ ಇಲ್ಲ. ಬಹುಶಃ ಅದು ನಮ್ಮ ಮುಂದಿನ ತಲೆಮಾರಿಗೆ ಮಾತ್ರ ಅದು ಲಭ್ಯ.
ಬೇಕಾಗಿಯೋ ಬೇಡವಾಗಿಯೋ ನಾವೆಲ್ಲರೂ ಶಹರದಲ್ಲಿ ಬದುಕುತ್ತಿದ್ದೇವೆ. (ಇದ್ದಕ್ಕಿದ್ದಂತೆ ಈ ಪದ ಯಾಕೆ ಬಂತು ? ಪೇಟೆ, ನಗರ ಅನ್ನುವುದಕ್ಕಿಂತ ಇದೇ ಯಾಕೋ ಚೆನ್ನಾಗಿದೆ ! ‘ಶಹರ’ ಅನ್ನುವಾಗ ಪಕ್ಕನೆ ‘ಕುಹರ’ ನೆನಪಾದದ್ದು ಆಕಸ್ಮಿಕ ಇರಲಾರದು. ಹಾಗೇ ‘ಶಹಾ’ ಕೂಡ ! ಇದ್ಯಾಕೋ ನಿನ್ನ ‘ಪನ್‌ಗಾಳಿ’ ನನಗೂ ಹೊಡೆದಂತಿದೆ !) ಇದು ನಮ್ಮ ಕಾಲದ ಯುವಜನರ ಹಣೆಬರಹ. ಹಾಗೇ ನಮ್ಮ ಅನೇಕ ಗೆಳೆಯರು, ದಾಯಾದಿಗಳು ಹಳ್ಳಿಗಳಲ್ಲಿದ್ದಾರೆ. ನಾವು ತೊರೆದು ಬಂದ ಹಳ್ಳಿಗೆ ನಾವು ಬಯಸಿದಾಗ ಮುಖಾಮುಖಿಯಾಗಬಲ್ಲೆವು. ಹಾಗೇ ನಮ್ಮ ಹಳ್ಳಿಯ ದಾಯಾದಿಗಳೂ ಶಹರಕ್ಕೆ ಬರಬಲ್ಲರು. ಆದರೆ ನಾವು ಹಳ್ಳಿಗೆ ಹೋಗುವುದು ಮತ್ತು ಅವರು ಪೇಟೆಗೆ ಬರುವುದು ಎರಡೂ ಒಂದೇ ಅಲ್ಲವಲ್ಲ. ಎರಡೂ ಅತ್ಯಂತ ಭಿನ್ನವಾದವು. ಇದನ್ನು ತೂಗಿ ನೋಡಬೇಕು ಅಂತ ನಿನಗೆ ಎಂದೂ ಅನಿಸಿಯೇ ಇಲ್ಲವೆ ?
ಕವಿತೆಯಲ್ಲಿ ಏನು ಇಲ್ಲವೋ ಅದನ್ನು ಎತ್ತಿಕೊಂಡು ಕಮೆಂಟು ಹೊಡೆಯುತ್ತಿದ್ದಾನೆ ಅಂತ ತಿಳಿಯಬೇಡ. ಈಗ ಕವಿತೆಯಲ್ಲಿ ಇರುವುದನ್ನೇ ಎತ್ತಿಕೊಳ್ಳುವಾ. ಈ ಹುಡುಗಿಯದು ಹೇಳಲೂ ಆಗದ ಅನುಭವಿಸಲೂ ಆಗದ ಪಾಡು. ಎಲ್ಲೆಂದರಲ್ಲಿ ಅಂಟುವ ಚೂಯಿಂಗ್ ಗಮ್ ನಗರದ ಉಸಿರುಗಟ್ಟಿಸುವ ಸ್ಥಿತಿ. ಇದು ಬಂದಿರುವ ರೀತಿ ಸೊಗಸಾಗಿದೆ. ಹಾಗೇ ಬಬಲ್ ಗಮ್ಮು ಮತ್ತು ಕಾಮಾಲೆ ಕಣ್ಣುಗಳು ಅವಳಿಗೆ ಅಂಟುವ ರೀತಿಯನ್ನು ರಿಲೇಟ್ ಮಾಡಿದ ಬಗೆಯೂ ಚೆನ್ನಾಗಿದೆ. (ಈ ‘ಚೆನ್ನಾಗಿದೆ’, ‘ಸೊಗಸಾಗಿದೆ’ ಎಂಬ ಪದಗಳನ್ನು ಕನಿಷ್ಠ ಹತ್ತು ವರ್ಷ ಬ್ಯಾನ್ ಮಾಡಬೇಕು ನೋಡು !) ಆದರೆ ಆಕೆಗೆ ಪೇಟೆ ಅನಿವಾರ್‍ಯವಾಗಿಯೂ ಇರುವುದರಿಂದ ಈ ಬಬಲ್ ಗಮ್ಮನ್ನೂ ಸುತ್ತ ಅಂಟಿಕೊಂಡಿರುವ ಕಣ್ಣುಗಳನ್ನೂ ಒಂದು ಬಗೆಯಲ್ಲಿ ಪ್ರತಿರೋಸುವ, ಒಂದು ಹದದಲ್ಲಿ ಎಂಜಾಯ್ ಮಾಡುವ ಹಾಗೂ ಈ ಎಲ್ಲವೂ ಉಂಟು ಮಾಡುವ ಒಂದು ಭಾವ ವರ್ತುಲದಿಂದ ಕೊಂಚವೇ ಹೊತ್ತಿನಲ್ಲಿ ಪಾರಾಗಿ ಮತ್ತೆ ದಿನಚರಿಗೆ ಮರಳಿ ಬಿಡುವ ವರ್ತನೆಯೂ ಇದೆಯಲ್ಲವೆ ? ಇದು ಹೀಗಿದ್ದಾಗ, ನೀನು ಬರೆದ ಅಮ್ಮನ ನೆನಪು, ಕಣ್ಣ ಕೊನೆ ಒರೆಸುವುದು ಇವೆಲ್ಲಾ ಒಂದು ಬಗೆಯ ಹುಸಿ ಅಂತ ನಿನಗೇ ಅನಿಸುವುದಿಲ್ಲವೆ ? ನನಗಂತೂ ಅನಿಸಿದೆಯಪ್ಪ.
ಈ ಪದ್ಯಗಳಲ್ಲಿ ಇನ್ನೂ ಒಂದು ಸಮಸ್ಯೆ ಇದೆ ಅಂತ ನನಗೆ ಅನಿಸುತ್ತದೆ. ಅದು ಪೇಟೆಯ ಮಧ್ಯಮ ವರ್ಗವೊಂದು ಈಗಾಗಲೇ ಸೃಷ್ಟಿಸಿ ಇಟ್ಟಿರುವ ಒಂದು ಸಿದ್ಧ ಮಾದರಿಯ, ಸಿದ್ಧ ಜಾಡಿಗೆ ಬೀಳುವ ಭಯ. ನಾವೆಲ್ಲರೂ ಈ ವರ್ಗದ ‘ಪ್ರಾಡಕ್ಟು’ಗಳೇ. ಈ ವರ್ಗ ಹಳ್ಳಿಯ ಸಂಬಂಧವನ್ನು ಸಂಪೂರ್ಣ ಕಳಚಿಕೊಂಡೂ ಇಲ್ಲ, ಹಾಗೆಯೇ ಅದನ್ನು ಸಂಪೂರ್ಣ ಸೃಜನಶೀಲವಾಗಿಯೂ ಇಟ್ಟಿಲ್ಲ. ಹಳ್ಳಿಯಲ್ಲಿರುವ ಅಮ್ಮನ ನೆನಪಾಗಿ ಹಳಹಳಿಸುವುದು, ಅಲ್ಲಿಯೇ ಇದ್ದು ಪ್ರಗತಿಪರ ಕೃಷಿಕನಾಗಬಹುದಿತ್ತು ಎಂದು ಹಂಬಲಿಸುವುದು, ಆದರೆ ಈಗ ಹಳ್ಳಿಯಲ್ಲಿರುವವರ ಪಾಡು ನೆನಪಾಗಿ ಭಯಪಟ್ಟು ಸುಮ್ಮನಾಗುವುದು, ಒಂದು ವಾರದ ರಜೆ ಸಿಕ್ಕಿದಾಗ ಹಳ್ಳಿಗೆ ಓಡುವುದು, ಅಲ್ಲಿರುವ ಅಣ್ಣನ ಅಥವಾ ತಮ್ಮನ ಸಂಸಾರದ ಜತೆ ಬೆರೆಯಲು ಯತ್ನಿಸುವುದು, ಎಷ್ಟು ಯತ್ನಿಸಿದರೂ ಅವರಿಗೂ ತಮಗೂ ಕಂದಕವೊಂದು ಏರ್ಪಟ್ಟಿದೆ ಎಂದು ಮರುಗುವುದು, ಪೇಟೆಯ ಸಹವಾಸ ರೇಜಿಗೆ ಹುಟ್ಟಿಸಿದಾಗ ಊರಿನಲ್ಲಿ ಎಷ್ಟು ಚೆಂದವಿತ್ತು ಎಂದುಕೊಳ್ಳುವುದು, ಹಳ್ಳಿಯ ರಾಜಕೀಯಗಳು ಗೊತ್ತಾದಾಗ ದಿಗಿಲಾಗಿ ನಮ್ಮ ಹಳ್ಳಿಯೂ ಹಾಳಾಯಿತೇ ಎಂದು ಹಲುಬುವುದು ಇತ್ಯಾದಿಗಳಲ್ಲಿ ಇದು ಜೀವಂತವಾಗಿದೆ. ಈ ವರ್ಗದ ಕವಿಗಳೂ ಕತೆಗಾರರೂ ಒಂದು ಹುಸಿ ಭಾವುಕತೆಯ ಪ್ರಪಂಚವನ್ನು ನಮ್ಮ ನಡುವೆ ಸೃಷ್ಟಿಸಿ ಅಲ್ಲಿ ಪೇಟೆಯ ಹಾಗೂ ಹಳ್ಳಿಯ ಅನೇಕ ಚಪ್ಪಟೆ ಕ್ಯಾರೆಕ್ಟರುಗಳನ್ನು ನಡೆದಾಡಲು, ವರ್ತಿಸಲು ಬಿಡುತ್ತಾರೆ. ಬಳಿಕ ತಾವು ತಮ್ಮ ಭಾವುಕತೆಗಾಗಿ ಸೃಷ್ಟಿಸಿದ ಕಲ್ಪನೆಗಳನ್ನೇ ನಿಜವೆಂದು ನಂಬಲೂ ತೊಡಗುತ್ತಾರೆ. ನಿನ್ನ ಪದ್ಯಗಳು ಇಂಥ ಜಾಡು ಹಿಡಿದರೆ ಮುಕ್ಕಾದವೆಂದೇ ತಿಳಿ.
ಇದನ್ನು ಹೇಳುತ್ತಿರುವಾಗಲೇ ನನಗೊಂದು ದ್ವಂದ್ವ ಕಾಣಿಸುತ್ತಿದೆ- ಹೀಗೆ ಹಳ್ಳಿಯ ಬಗ್ಗೆ ಭಾವುಕವಾಗಿರುವುದು ಮತ್ತು ಪೇಟೆಯ ಬಗ್ಗೆ ಕಟುವಾಗಿರುವುದು ನಮ್ಮ ತಲೆಮಾರಿನ ದೃಷ್ಟಿಯಿಂದ ಅಗತ್ಯ ಕೂಡ. ಆದ್ದರಿಂದಲೇ ನಾವು ಬರೆಯುವುದು ಕಾಲ ದೇಶಗಳ ದೃಷ್ಟಿಯಿಂದ ಸಮಂಜಸವಾಗಿದೆಯೇ ಅಥವಾ ರಾಜಕೀಯವಾಗಿ ಸರಿಯಾಗಿದೆಯೇ ಅಂತೆಲ್ಲ ನೋಡುವುದು ತಪ್ಪು ಅಂತ ಕೂಡ ಅನೇಕ ಸಲ ಅನಿಸುತ್ತದೆ. ಇದನ್ನೂ ತೊರೆದು, ಅದನ್ನೂ ಕೈಬಿಟ್ಟರೆ ಮೂರನೇ ದಾರಿಯೊಂದು ಇದೆಯೇ ಎಂಬುದು ನನಗಿರುವ ಸಂಶಯ.
ಆದರೆ ನಿನ್ನ ಯತ್ನವಂತೂ ಗಂಭೀರವಾದದ್ದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಬದುಕೊಂದನ್ನು ಎಮ್ಮೆ ಕರುವಿನಂತೆ ಹಾಗೇ ಬದುಕುವುದಕ್ಕಿಂತ ಇದನ್ನು ವಿಮರ್ಶಿಸುತ್ತಾ ಸಾಧ್ಯವಾದಷ್ಟು ಸೃಜನಶೀಲವಾಗಿರಲು ಯತ್ನಿಸುತ್ತಾ ಇರುವುದು ಮೇಲು. ಆ ಪ್ರಯತ್ನ ನಡೆದಿರುವುದರಿಂದಲೇ ಇದು ನಮಗೆಲ್ಲ ಪ್ರೀತಿಯ ಅಂಕಣವಾಗಿದೆ ಎಂಬುದನ್ನು ಇಲ್ಲಿ ನೆನೆಯುತ್ತೇನೆ.

Thursday, March 6, 2008

ನ್ಯಾಯ

"ಎಲ್ಲಿಗೆ ಓಡುತ್ತಿದ್ದೀ, ನಿಲ್ಲು. ಬುರ್ಖಾ ತೆಗೆ"
"ನನ್ನನ್ನೇನೂ ಮಾಡಬೇಡಿ, ಪ್ಲೀಸ್"
"ಇಲ್ಲ ಏನೂ ಮಾಡುವುದಿಲ್ಲ. ಆದರೆ ಕೊಂಚ ನ್ಯಾಯ ವಿಚಾರಣೆ ನಡೆಸಬೇಕಾಗಿದೆ"
"ಏನದು ?"
"ನಿನ್ನೆ ನಮ್ಮ ಬೀದಿಯಲ್ಲಿ ನಮ್ಮ ಧರ್ಮದವನೊಬ್ಬನ ಕೊಲೆಯಾಯಿತು. ಅದನ್ನು ಮಾಡಿದ್ದು ನಿನ್ನ ಧರ್ಮದವರು"
"ಕೊಲೆಗಾರರು ಯಾರೆಂದು ನನಗೆ ಗೊತ್ತಿಲ್ಲ. ಆ ಧರ್ಮದಲ್ಲಿ ಹುಟ್ಟಿದ್ದು ನನ್ನ ತಪ್ಪಲ್ಲ. ನಿಮ್ಮ ಧರ್ಮದಲ್ಲಿ ಹುಟ್ಟುವುದು ನನ್ನ ಕೈಯಲ್ಲಿ ಇರಲಿಲ್ಲ"
"ನಾವು ಪ್ರಶ್ನೆ ಕೇಳದಿದ್ದರೆ ನೀನು ಉತ್ತರಿಸುವುದು ಬೇಕಾಗಿಲ್ಲ. ನಿನಗೆಷ್ಟು ಮಕ್ಕಳು ?"
"ಐದು ಮಂದಿ"
"ಅವರು ಈ ಕೊಲೆ ಮಾಡಿರಬಹುದು !"
"ಅವರೆಲ್ಲ ಮುಗ್ದ ಹೆಣ್ಣುಮಕ್ಕಳು"
"ಅಂದರೆ ಅವರು ನಮ್ಮ ಧರ್ಮದವರ ತಲೆ ಕೆಡಿಸಿ ನೀತಿ ತಪ್ಪಿಸುತ್ತಿರಬಹುದು. ಇರಲಿ, ನಿನ್ನ ಹೆಣ್ಣುಮಕ್ಕಳು ಇರುವಲ್ಲಿಗೆ ನಮ್ಮನ್ನೀಗ ಕರೆದೊಯ್ದರೆ ನಿನಗೆ ಈ ವಿಚಾರಣೆಯಿಂದ ಮಾಫಿ"
"ಅವರೆಲ್ಲ ಹಲವಾರು ವರ್ಷಗಳ ಹಿಂದೆ ಮದುವೆಯಾಗಿ ಈ ಊರನ್ನೇ ತೊರೆದು ಹೋಗಿದ್ದಾರೆ"
"ಹಾಗಿದ್ದರೆ ನಿನ್ನ ವಿಚಾರಣೆ ಮುಂದುವರಿಯುತ್ತದೆ. ನಮ್ಮ ಧರ್ಮದ ಅನೇಕ ಮಂದಿಯನ್ನು ಈ ಹಿಂದೆ ಕೊಲ್ಲಲಾಗಿದೆ. ಅದನ್ನು ನಿನ್ನ ಗಂಡ ಅಥವಾ ತಂದೆ ಮಾಡಿರಬಹುದು"
"ಅವರಿಬ್ಬರೂ ಸತ್ತು ಹಲವು ವರ್ಷಗಳಾದವು"
"ಅಂದರೆ ದೇವರು ಅವರಿಗೆ ಆಗಲೇ ಶಿಕ್ಷೆ ಕರುಣಿಸಿದ್ದಾನೆ ಅನ್ನು. ನಮ್ಮ ಧರ್ಮದ ಅನೇಕ ಮಹಿಳೆಯರ ಮೇಲೆ ನಿಮ್ಮ ಧರ್ಮದವರು ಅತ್ಯಾಚಾರ ಮಾಡಿದ್ದಾರೆ. ಅವರ ಆತ್ಮಗಳು ನ್ಯಾಯಕ್ಕಾಗಿ ಪರಿತಪಿಸುತ್ತಿವೆ"
"ಸರಿ, ನೀವು ನನಗೆ ಶಿಕ್ಷೆ ನೀಡುವುದಂತೂ ಖಚಿತ. ಈ ಕೃತ್ಯಗಳು ಯಾವಾಗ ನಡೆದವೆಂದು ಹೇಳಿ"
"೫೦೦ ವರ್ಷಗಳ ಹಿಂದೆ !"

Wednesday, March 5, 2008

ಗುರುಪ್ರಸಾದ್ ಕಾಗಿನೆಲೆಗೊಂದು ಪತ್ರ

ಪ್ರಿಯ ಗುರುಪ್ರಸಾದ್,
ನಿಮ್ಮ ‘ಬಿಳಿಯ ಚಾದರ’ ಓದಿದೆ. ‘ಚೆನ್ನಾಗಿದೆ’ ಎಂಬ ಲೋಕಾಭಿರಾಮದ ಮಾತಿಗೆ ಹೊರತುಪಡಿಸಿ, ಮೊದಲನೇ ಓದಿಗೆ ದಕ್ಕಿದ ಕೆಲವು ಟಿಪ್ಪಣಿಗಳು ಇಲ್ಲಿ.

ಮೊದಲು ಇದು ಅಮೆರಿಕದಲ್ಲಿರುವ ಯುವ ಭಾರತೀಯರ ಬದುಕಿನ ಕಥನ ಅನಿಸಿತು. ಅದು ಅಷ್ಟೇ ಅಲ್ಲ, ಅದರಾಚೆಗೂ ಚಾಚಿದೆ ಅನಿಸಿದ್ದು ಡ್ರಗ್ ಲಾಬಿ, ಸಾಫ್ಟ್‌ವೇರ್ ವ್ಯವಸ್ಥೆಯ ಒಳಸುಳಿಗಳು ಅವರ ಬದುಕಿನೊಳಗೆ ಹೆಣೆದುಕೊಂಡು ಬಂದಾಗ. ಹಾಗೇ ಇದು ಬೇರು ಕಳೆದುಕೊಂಡವರ ಕಥನವೂ ಹೌದು. ಇವರಿಗೆ ಬೇರು ಮಾತ್ರವಲ್ಲ, ಭವಿಷ್ಯವೂ ಇಲ್ಲ ಅನಿಸುವುದು ರಶ್ಮಿಯ ಸಾವಿನೊಂದಿಗೆ. ಇದು ಶ್ರೀಧರ, ನಾಗೇಶರ ವಿಚಾರದಲ್ಲಿ ಕೂಡ ನಿಜ. ಎಲ್ಲ ಭಾರತೀಯರೂ ‘ಗೋಕುಲ ನಿರ್ಗಮನ’ ಮಾಡುತ್ತಿರುವುದು ಇಂಥ ಬದುಕಿಗಾಗಿ ಹಂಬಲಿಸಿಯೆ ?

ಮುಖ್ಯವಾಗಿ, ಇದು ನನಗೆ ಇಷ್ಟವಾಗಿರುವುದು ರಶ್ಮಿ ಎಂಬ ಪಾತ್ರದ ಮೂಲಕ. ಆಕೆ ಆಧುನಿಕ ಬದುಕಿನ ಶಕ್ತಿಶಾಲಿ ರೂಪಕ. ಆಕೆ ಇಲ್ಲಿರುವ ಎಲ್ಲರಿಗಿಂತ ಭಿನ್ನ. ಇದನ್ನು ಓದಿದಾಗ ನನಗೆ ಶಾಂತಿನಾಥರ ‘ಕ್ಷಿತಿಜ’ದ ಮಂದಾಕಿನಿ ನೆನಪಾದದ್ದರಲ್ಲಿ ಅಸಹಜತೆಯೇನಿಲ್ಲ. ಶ್ರೀಧರ, ನಾಗೇಶ ಮುಂತಾದವರು ತಮಗಿನ್ನೂ ಅಪರಿಚಿತವಾದ ಅಮೆರಿಕನ್ ಪ್ರಜ್ಞೆಯೆಡೆಗೆ ನಡೆಯಲು ಸಂಕೋಚದಿಂದ ಮೈ ಹಿಡಿ ಮಾಡಿಕೊಳ್ಳುತ್ತಿರುವಾಗ ಈಕೆ ದುರಂತದ ಅರಿವಿದ್ದೂ ಹಿಂಜರಿಯದೆ ನುಗ್ಗಿಬಿಡುತ್ತಾಳೆ.

ಇದು ಪ್ರಸ್ತುತದ ಒಂದು ಕಾಣ್ಕೆಯೂ ಹೌದು. ಏನಿದ್ದರೂ ಹೊಸ ಸಂಸ್ಕೃತಿಗಳು ನಮ್ಮನ್ನು ಗಾಢವಾಗಿ ಒಳಗೊಳ್ಳುವುದು ಅವು ನಮ್ಮ ಹೆಣ್ಣು ಮಕ್ಕಳನ್ನು ಆವರಿಸಿದಾಗಲೇ. ಆಗಲೇ ಎಲ್ಲವೂ ಬದಲಾಗುವುದು. ಇದು ಭಾರತೀಯ ಸ್ತ್ರೀ ಮಾಡಿಕೊಳ್ಳುತ್ತಿರುವ ಹೊಸ ಆಯ್ಕೆಗಳ ರೂಪಕದ ಹಾಗಿದೆ. ಕಾದಂಬರಿಯ ನಿಜವಾದ ಯಶಸ್ಸು ಇರುವುದು ರಶ್ಮಿಯ ಚಿತ್ರಣದಲ್ಲಿಯೇ. ರಶ್ಮಿಯ ಆಕಸ್ಮಿಕ ಅಂತ್ಯವೇ ಇಲ್ಲಿನ ದುರಂತದ ಸ್ವರೂಪದ ಅರಿವು ಮೂಡಿಸುವುದರಿಂದ, ಅಂತ್ಯ ಸಹಜವಾಗಿಲ್ಲ ಎಂಬ ಅನಂತಮೂರ್ತಿಯವರ ಟೀಕೆಯನ್ನು ನಾನು ಒಪ್ಪಲಾರೆ.

ಮತ್ತು ನಿಮ್ಮ ಕಾದಂಬರಿ ಎನ್ನಾರೈಗಳ ಬಗ್ಗೆ ಇದುವರೆಗೆ ಇರುವ ಸಂಕಥನಗಳನ್ನೇನೂ ಬದಲಾಯಿಸುವುದಿಲ್ಲ. ಅದೇ ಅನಾಥಪ್ರಜ್ಞೆ, ಅದೇ ಬೇರು ಕಳೆದುಕೊಂಡ ಜನ, ಮನುಷ್ಯನ ಬದುಕನ್ನು ಆತನಿಗರಿವಿಲ್ಲದೆ ನಿಯಂತ್ರಿಸುವ ಬೇರೆಬೇರೆ ಲಾಬಿಗಳು... ಇವನ್ನೆಲ್ಲ ಈ ಮೊದಲು ಎಲ್ಲಿಯೋ ಓದಿದಂತಿದೆ ಎಂಬಂತೆ. ಆದರೆ, ವಾಸ್ತವವೇ ಹಾಗಿದ್ದಾಗ ನೀವಾದರೂ ಬೇರೆಯ ಚಿತ್ರಣವನ್ನು ಎಲ್ಲಿಂದ ತರುವುದು ಅಲ್ಲವೆ ?

ಆಮೇಲೆ ನೀವು ಮಾಡಿರುವ ಇಂಗ್ಲಿಷ್ ಪದಗಳ ಕನ್ನಡೀಕರಣದ ಪ್ರಯತ್ನ ಅಂಥ ಮಹತ್ವದ್ದು ಅಂತ ನನಗೆ ಅನಿಸುವುದಿಲ್ಲ. ಉದಾ: ಲ್ಯಾಪ್‌ಟಾಪ್‌ಗೆ ‘ತೊಡೆಯ ಮೇಲಿಗ’ಎಂಬ ರೂಪ ಕಿರಿಕಿರಿಯನ್ನಷ್ಟೇ ಉಂಟುಮಾಡಬಲ್ಲುದು. ‘ಸ್ವಯಂವರ ಲೋಕ’ ನಾಟಕದಲ್ಲಿ ಕೆ.ವಿ.ಅಕ್ಷರ ಇದೇ ಲ್ಯಾಪ್‌ಟಾಪ್‌ಗೆ ‘ತೊಡೆಗಣಕ’ ಎಂಬ ರೂಪ ನೀಡಿದ್ದಾರೆ. ಯಾವುದು ಸಹ್ಯ ಅನಿಸುತ್ತದೆ ?
- ಪ್ರೀತಿಯಿಂದ
ಹರೀಶ್ ಕೇರ,