Sunday, December 11, 2011

ಕನ್ನಡ ಸಾಹಿತ್ಯ ಸಮ್ಮೇಳನ: ಪಾಮರನ ಪ್ರಶ್ನೆಗಳು ಮತ್ತು ತಕರಾರುಗಳು



೭೮ನೇ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬೀಳುತ್ತಿದೆ. ಇದನ್ನು ನಡೆಸಲು ಕೋಟ್ಯಂತರ ರೂಪಾಯಿ ಅನುದಾನ ನೀಡಲಾಗಿದೆ. ಹೀಗಾಗಿ, ನಾನು ಕಂದಾಯ ಕಟ್ಟಿರುವ ಕಾಸು ಕೂಡ ಈ ಸಮ್ಮೇಳನಕ್ಕೆ ವೆಚ್ಚವಾಗಿರಬಹುದಾದ್ದರಿಂದ, ಈ ಸಮ್ಮೇಳನದ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಲು, ಕೆಲ ತಕರಾರುಗಳನ್ನು ಎತ್ತಲು, ಒಬ್ಬ ಕನ್ನಡ ಪ್ರೇಮಿಗೆ, ಕನ್ನಡ ಪ್ರಜೆಗೆ ಅಧಿಕಾರವಿದೆ ಎಂಬ ನಂಬಿಕೆ ನನ್ನದು.


ನೆರೆ ನುಂಗಿದ ಉತ್ತರ ಕರ್ನಾಟಕದ ಬಡಜನತೆಗೆ ಸೂರು ನಿರ್ಮಿಸಿಕೊಡುವ ಸರಕಾರದ ಭರವಸೆ ಇನ್ನೂ ಈಡೇರದೆ ಇರುವಾಗ, ಅದೇ ಪ್ರದೇಶದಲ್ಲೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕನ್ನಡಕ್ಕೊಂದು ಸಮ್ಮೇಳನ ಮಾಡಿದ್ದು ಸಮಂಜಸವೆ ಎಂಬ ಪ್ರಶ್ನೆ ಹಳೇ ಕಮ್ಯುನಿಸ್ಟನೊಬ್ಬನ ಪೇಲವ ವರಸೆಯಂತೆ ಕಾಣಿಸಬಹುದು. ಆದರೆ ಇಂಥ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿ ಕಿರಿಕಿರಿ ಹುಟ್ಟಿಸದೆ ಇದ್ದರೆ ಇಲ್ಲಿ ಯಾವ ಶಾಸಕಾಂಗ, ಕಾರ್‍ಯಾಂಗ, ಹಾಗೂ ಜನರ ಮನಸ್ಸಿನ ಅಂಗಾಂಗವೂ ಚಲಿಸುವುದಿಲ್ಲ. ಇಂಥ ಪ್ರಶ್ನೆಗಳನ್ನು ಸಾಹಿತ್ಯ ಕೇಳಬೇಕು; ಇಲ್ಲದಿದ್ದರೆ ಅದರ ಮೌನ ಪ್ರಶ್ನಾರ್ಹ.


ಸಾಹಿತ್ಯ ಪ್ರಭುತ್ವವನ್ನು ಪ್ರಶ್ನಿಸಬೇಕು; ಆದರೆ ನಮ್ಮ ಇಂದಿನ ಸಾಹಿತ್ಯ ಪ್ರಭುತ್ವದ ಜತೆಗೆ ‘ಕಾಂಪ್ರಮೈಸಿಂಗ್ ಪೊಸಿಷನ್’ನಲ್ಲಿ ಇರುವಂತಿದೆ. ಕನ್ನಡ ಶಾಲೆಗಳನ್ನು ಸರಕಾರ ಸಾಯಿಸುತ್ತಿದೆ. ಅದೇ ಸರಕಾರ ಕನ್ನಡದ ಹೆಸರಿನ ಅದ್ಧೂರಿ ಸಮ್ಮೇಳನವನ್ನು ಉದ್ಘಾಟಿಸಲು, ಸಮಾರೋಪಿಸಲು ಬಾಜಾಬಜಂತ್ರಿಯೊಂದಿಗೆ ಆಗಮಿಸುತ್ತದೆ. ಇಂಗ್ಲಿಷನ್ನು ಹೊತ್ತು ಮೆರೆಸುತ್ತ ಕನ್ನಡದ ಚಟ್ಟಕ್ಕೆ ಹೆಗಲು ಕೊಡುತ್ತಿರುವ ನಗರವಾಸಿ ಮಧ್ಯಮವರ್ಗ, ತನ್ನ ಎಂದಿನ ಜಡತೆಯೊಂದಿಗೆ ಆಕಳಿಸುತ್ತ ಬಂದು ಸಮ್ಮೇಳನದ ಹಾಸ್ಯಗೋಷ್ಠಿಗಳಿಗೆ ತುಂಬಿ ತುಳುಕಿ ಉರುಳಾಡಿ ನಕ್ಕು ವಾಪಸು ಹೋಗುತ್ತದೆ. ಸೆಮಿನಾರ್ ಜೀವಿಗಳಿಗೆ ಈ ಸಮ್ಮೇಳನದ ವಿಚಾರಗೋಷ್ಠಿಗಳು ಅನ್ನ, ಆಹಾರ, ತೆವಲು; ಇಂಗ್ಲಿಷ್ ಜನಪ್ರಿಯ ಕಾದಂಬರಿಗಳ ಬೆನ್ನು ಬಿದ್ದ ನವಮಧ್ಯಮ ವರ್ಗದವರಿಗೆ ಇವು ತಲೆಯ ಮೇಲೆ ಹಾರುವ ಗಾಳಿ; ಕನ್ನಡದ ಕಾಳಜಿ ಅಂದರೆ ಅಪಾನವಾಯು; ಇವರ ಪಾಲಿಗೆ ಘನವಾದ ಪುಸ್ತಕಗಳೆಂದರೆ ವ್ಯಕ್ತಿತ್ವ ವಿಕಸನ, ಕದ್ದ ಸರಕುಗಳು. ನಮ್ಮ ಸಮ್ಮೇಳನದ ಬಗ್ಗೆ ಸಿನಿಕತನವಿಲ್ಲದೆ ಯೋಚಿಸುವುದೇ ನಮಗೆ ಅಸಾಧ್ಯವಾಗುತ್ತಿದೆಯೆ ?


ಕಳೆದ ವರ್ಷದ ಸಾಹಿತ್ಯ ಸಮ್ಮೇಳನದಲ್ಲೊಂದು ಗೋಷ್ಠಿ: ‘ಕನ್ನಡ ಅಂದು-ಇಂದು-ಮುಂದು’ ‘ವರ್ತಮಾನದ ಸವಾಲುಗಳು’... ಈ ವರ್ಷದಲ್ಲೂ ಅದೇ ಗೋಷ್ಠಿ. ಮುಖಗಳಷ್ಟೇ ಬದಲಾಗಿವೆ. ಕಳೆದ ಬಾರಿ ಕಂಡ ಮುಖಗಳೇ ಕೆಲವು ಇರುವಂತಿದೆ. ಅರೆ, ಏನಾಶ್ಚರ್‍ಯ, ಮಾತುಗಳೂ ಅವವೇ ಹೊಮ್ಮತ್ತಿದೆಯಲ್ಲ ! ನಾವು ಭಿನ್ನವಾಗಿ ಯೋಚಿಸುವುದನ್ನೇ ಮರೆತಿದ್ದೇವೆಯೆ ? ನಮ್ಮ ಯೋಚನೆ ಇನ್ನೊಬ್ಬರ ಯಥಾಪ್ರತಿ ಆಗುತ್ತಿದೆಯೆ ? ಕನ್ನಡಕ್ಕೆ ಸವಾಲುಗಳು ಮುಗಿಯುವುದೇ ಇಲ್ಲವೆ ! ಅಥವಾ ಈ ಭಾಷಣಗಳೇ ಕನ್ನಡದ ದೊಡ್ಡ ಸವಾಲುಗಳೋ ?


ಕನ್ನಡಿಗರನ್ನು ಭಾವನಾತ್ಮಕ ಮಟ್ಟದಲ್ಲಿ ಒಂದುಗೂಡಿಸುವ ಸಂಸ್ಥೆಗಳ ಕೊರತೆ ಇದೆ ಕನ್ನಡದಲ್ಲಿ. ಈ ಕೊರತೆಯನ್ನು ಕಸಾಪ ನೀಗಬಹುದಿತ್ತು. ಸಮ್ಮೇಳನವನ್ನು ಹೀಗೆ ಕನ್ನಡಿಗರನ್ನು ಒಂದುಗೂಡಿಸುವ ಸಮ್ಮಿಲನವಾಗಿ ರೂಪಿಸಬಹುದಿತ್ತು. ಆದರೆ ಸಮ್ಮೇಳನ ಬಂದಿತೆಂದರೆ ಸಾಕು, ಎಲ್ಲ ಕಡೆಗಳಿಂದ ಹಕ್ಕೊತ್ತಾಯ ಶುರುವಾಗುತ್ತದೆ- ‘ನಮಗೆ ಅನ್ಯಾಯವಾಗಿದೆ. ಪ್ರಾತಿನಿಧ್ಯ ಬೇಕು’. ಕಸಾಪ ಪ್ರಜಾಸತ್ತಾತ್ಮಕ ಸಂಸ್ಥೆಯಾದುದರಿಂದ ಈ ಕೂಗು ಸಹಜ ಎನ್ನೋಣ. ಆದರೆ ಇಂಥ ಬಿರುಕು ಮೂಡದಂತೆ ನೋಡಿಕೊಳ್ಳುವುದು ಸಾಧ್ಯವಿಲ್ಲವೆ ?


ಇನ್ನು ಒಳಗೊಳ್ಳುವಿಕೆಯ ವಿಷಯ. ಕನ್ನಡವೆಂದರೆ ಕುಣಿದಾಡುವ ಎದೆಯ ಯುವಜನ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಅವರ್‍ಯಾರೂ ಯಾಕೆ ಸಮ್ಮೇಳನದಲ್ಲಿ ಕಾಣಿಸುತ್ತಿಲ್ಲ ? ಒಂದು ವೇಳೆ ಬಂದರೂ, ಪುಸ್ತಕ ಪ್ರದರ್ಶನಕ್ಕಷ್ಟೇ ಭೇಟಿ ನೀಡಿ ಭೈರಪ್ಪನವರ ಪುಸ್ತಕಗಳನ್ನಷ್ಟೇ ಕೊಂಡು ಯಾಕೆ ವಾಪಸ್ಸಾಗುತ್ತಾರೆ ? ಸಮ್ಮೇಳನಾಧ್ಯಕ್ಷರ ಬರಹಗಳನ್ನು ಯಾಕೆ ಹೆಚ್ಚಿನ ಹೊಸ ತಲೆಮಾರಿನವರು ಓದಿರುವುದಿಲ್ಲ ? ಹೊಸ ತಲೆಮಾರಿನ ಕವಿ-ಸಾಹಿತಿಗಳು, ಪ್ರಗತಿಪರ ಬರಹಗಾರರು ಹಾಗೂ ಐಟಿ ಬಿಟಿ ಜಮಾನದ ಓದುಗರ ನಡುವೆ ಭರಿಸಲಾಗದ ಕಂದಕವೊಂದು ಮೂಡಿರುವಂತೆ ಕಾಣುತ್ತಿದೆಯಲ್ಲ. ಇದನ್ನು ಸರಿಪಡಿಸುವ ಬಗೆಯೆಂತು ? ಇವರಿಗೆ ಸಂಬಂಧಿಸಿದ ಜ್ವಲಂತ ವಿಷಯವೊಂದನ್ನು ಸಮ್ಮೇಳನದ ಮುನ್ನೆಲೆಯಲ್ಲಿಟ್ಟರೆ ಭವಿಷ್ಯದ ಕನ್ನಡಪ್ರೇಮಿಗಳನ್ನು ಕಾಪಾಡಿಕೊಳ್ಳಬಹುದು ಎಂಬ ಸಾಮಾನ್ಯ ಜ್ಞಾನ ಯಾರಿಗೂ ಹೊಳೆದೇ ಇಲ್ಲವೆ ?


ಬಿರುಕುಗಳು ಎಲ್ಲ ಕಡೆಯಲ್ಲಿವೆ: ಬಲಪಂಥೀಯ ಲೇಖಕರು- ಎಡಪಂಥೀಯ ಲೇಖಕರು; ಜನಪ್ರಿಯ ಬರಹಗಾರರು- ಗಂಭೀರ ಸಾಹಿತಿಗಳು; ಕವಿಗಳು- ವಿಮರ್ಶಕರು; ಪ್ರಶಸ್ತಿ ಸಿಕ್ಕವರು- ಸಿಗದವರು; ಹಳ್ಳಿಗಾಡಿನ ಸಾಹಿತಿಗಳು- ನಗರವಾಸಿ ಲೇಖಕರು; ಮೈಸೂರು ಕನ್ನಡಿಗರು- ಹೈದರಾಬಾದ್ ಕನ್ನಡಿಗರು; ಮೇಸ್ಟ್ರುಗಳು- ಇಂಜಿನಿಯರ್‌ಗಳು; ದಲಿತರು- ಬ್ರಾಹ್ಮಣರು... ಬಿರುಕುಗಳನ್ನು ಬೆಸೆಯುವ ಕೆಲಸವನ್ನು ಸಾಹಿತ್ಯ ಮಾಡಬೇಕೆನ್ನುತ್ತಾರೆ. ಆದರೆ ನಮ್ಮ ಬಿರುಕುಗಳನ್ನು ಸಾಹಿತ್ಯ ಹೆಚ್ಚಿಸುತ್ತಿರುವ ವ್ಯಂಗ್ಯವನ್ನು ನಾವು ಗಮನಿಸುತ್ತಿದ್ದೇವೆಯೆ ? ಸಮ್ಮೇಳನ ಇದಕ್ಕೇನಾದರೂ ಮದ್ದರೆಯಿತೆ ?


ಸಾಹಿತ್ಯ ಜನಜೀವನದ ಪ್ರತಿಬಿಂಬ- ಗತಿಬಿಂಬ ಎನ್ನುತ್ತಾರೆ. ಆದರೆ ಇದು ಸುಳ್ಳೆನ್ನುವ ವಿಲಕ್ಷಣ ಮಟ್ಟಕ್ಕೆ ಇಂಗ್ಲಿಷ್ ಸಾಹಿತ್ಯ ಹೋಗಿದೆ. ಅಲ್ಲೇನಿದ್ದರೂ ಮಾರುಕಟ್ಟೆ ಕನ್ನಡಿಗಳೇ ಪ್ರಧಾನ. ಕನ್ನಡ ಇನ್ನೂ ಹಾಗಾಗಿಲ್ಲ ಎಂದು ಸಂತೋಷಿಸುವಂತಿಲ್ಲ. ಬೆಂಗಳೂರಿಗೆ ಬಂದುದು ಬೆಳವಲಕ್ಕೆ ಬಾರದೆ ಇರುತ್ತದೆಯೆ ? ಆದರೆ ಬೆಳವಲದಲ್ಲಿ ನಡೆಯುತ್ತಿರುವುದು ಬೆಂಗಳೂರಿಗೆ ತಲುಪುತ್ತಲೇ ಇಲ್ಲ. ಕರಾವಳಿಯ ನಾಗಾರ್ಜುನದ ಹೆಡೆಯಡಿ ನಲುಗಿದವರು, ಗದಗದ ಪೋಸ್ಕೊದಡಿ ನಲುಗಿದವರು, ಕೈಗಾದ ಹೋಮಧೂಮದಲ್ಲಿ ಲೀನವಾದವರು, ಗುಲ್ಬರ್ಗದ ಬೆಂಕಿಯಲ್ಲಿ ಬೆಂದವರು, ಬಳ್ಳಾರಿಯ ಕೆಂಪುಧೂಳಿಯಲ್ಲಿ ಮಿಂದವರು... ಸಮ್ಮೇಳನದ ವೇದಿಕೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲವಲ್ಲ ? ಸಾಹಿತ್ಯ ಸಮ್ಮೇಳನವೆಂಬುದು ಎಂದು ಕನ್ನಡ ಬದುಕಿನ ಸಮ್ಮೇಳನವಾಗುವುದು ? ಕನ್ನಡ ಸಂಸ್ಕೃತಿಯ ಸಮ್ಮೇಳನವಾಗವುದೆಂದು ?


ಪ್ರಶ್ನೆಗಳು, ಬರೀ ಪ್ರಶ್ನೆಗಳು.

Monday, December 5, 2011

ತಾರಾಲೋಕದಿಂದ ‘ದೇವ್’ಲೋಕದತ್ತ




‘ಗಾತಾ ರಹೇ ಮೇರಾ ದಿಲ್’ ಎಂಬ ಅವರ ಕೂಗಿಗೆ ಕಾಡು ಕಣಿವೆಗಳು ಸ್ಪಂದಿಸಿವೆ. ‘ದಿನ್ ಢಲ್ ಜಾಯೆ ಹಾಯೇ ರಾತ್ ನ ಜಾಯೆ...’ ಎಂದು ವಿಸ್ಕಿ ಸುರಿದುಕೊಳ್ಳುತ್ತ ಆರ್ತನಾಗಿ ಹಾಡುತ್ತಿದ್ದಾನೆ ಹೀರೋ. ಮುಹಮ್ಮದ್ ರಫಿಯ ಹಾಡಿನ ಮಧುರ ಕಂಪನದೊಂದಿಗೆ ತಟ್ಟುತ್ತಿರುವ ‘ಗೈಡ್’ನ ದುರಂತಕ್ಕೆ ಅಲ್ಲೆಲ್ಲೋ ದೂರದಲ್ಲಿ ನಲುಗಿದ್ದಾಳೆ ವಹೀದಾ ರೆಹಮಾನ್. ‘ವಹಾಂ ಕೌನ್ ತೇರಾ ಮುಸಾಫಿರ್’ ಎಂದು ತಾನರಿಯದ ಗಮ್ಯದೆಡೆಗೆ ಸಾಗುತ್ತಿದ್ದಾನೆ ನಾಯಕ. ‘ಮಾನಾ ಜನಾಬ್ ನೆ ಪುಕಾರಾ ನಹೀಂ’ ಎಂದು ಸೈಕಲ್ ಮೇಲೆ ನಾಯಕಿಯ ಬೆನ್ನು ಹತ್ತುತ್ತಿದ್ದಾನೆ ‘ಪೇಯಿಂಗ್ ಗೆಸ್ಟ್’. ‘ಫೂಲೋಂ ಕೆ ರಂಗ್ ಸೆ ದಿಲ್ ಕಿ ಕಲಂ ಸೆ’ ಎಂದು ಹಾಡಿ ಕುಣಿಯುವ ‘ಪ್ರೇಮ ಪೂಜಾರಿಯ’ ಉಲ್ಲಾಸಕ್ಕೆ ಮಕ್ಕಳೂ ಸ್ಪಂದಿಸುತ್ತಿವೆ.


ದೇವಾನಂದ್ ಎಂದ ಕೂಡಲೆ ಹೀಗೆ ಸಾಲು ಸಾಲು ನೆನಪುಗಳು.


ನಮ್ಮ ಪ್ರೇಕ್ಷಕನಿಗೆ ರಾಜ್‌ಕಪೂರ್‌ನ ಅಲೆಮಾರಿತನ ಇಷ್ಟ. ಶಮ್ಮಿ ಕಪೂರ್‌ನ ಧಾಳಾಧೂಳಿ ಇಷ್ಟ. ಶಶಿಕಪೂರ್‌ನ ಕಿಲಾಡಿತನ, ಅಮಿತಾಭ್ ಬಚ್ಚನ್‌ನ ನವಯುವಕನ ಸಿಟ್ಟು, ಧರ್ಮೇಂದ್ರನ ಅಬ್ಬರ... ಎಲ್ಲವೂ ಇಷ್ಟ. ಆದರೆ ದೇವಾನಂದ್‌ನ ಪ್ರಣಯ ಇದೆಯಲ್ಲ, ಅದು ಇದೆಲ್ಲಕ್ಕಿಂತ ಒಂದು ತೂಕ ಹೆಚ್ಚು.


೬೦ರ ದಶಕದ ಯುವಕರನ್ನು ಕೇಳಿ ನೋಡಿ, ಅವರೆಲ್ಲ ತಮ್ಮ ಪ್ರೇಮ ಪ್ರಕರಣಗಳಿಗೆ ‘ತೇರೆ ಮೇರೆ ಸಪ್ನೆ ಅಬ್ ಏಕ್ ರಂಗ್ ಹೈ’ ಎಂಬ ಗೈಡ್‌ನ ಹಾಡನ್ನು ಬಳಸಿಕೊಂಡಿರದೆ ಇರಲಿಕ್ಕಿಲ್ಲ. ಇಂಗ್ಲಿಷ್‌ನ ಗ್ರೆಗರಿ ಪೆಕ್ ಥರವೇ ವಿಶಾಲ ಭುಜ, ಉದ್ದನ್ನ ಮೂಗು, ಹಿಂದಕ್ಕೆ ಬಾಚಿದ ತಲೆಗೂದಲು, ತುಂಟಾಟ ಸೂಸುವ ಕಣ್ಣುಗಳ ಈ ಹೀರೋ ಒಂದು ಬಾರಿ ನಮ್ಮ ಕನಸಿನಲ್ಲಿ ಬರಬಾರದೆ ಎಂದು ಆ ಕಾಲದ ಹುಡುಗಿಯರು ಕನಸದೆ ಇದ್ದಿರಲಿಕ್ಕಿಲ್ಲ.


ಕಳೆದ ವರ್ಷವಷ್ಟೇ ಒಂದು ಕಾರ್‍ಯಕ್ರಮದಲ್ಲಿ ದೇವಾನಂದ್‌ನನ್ನು ತಮ್ಮ ಫಿಲಂನ ಡೈಲಾಗ್ ಹೇಳುವಂತೆ ಯಾರೋ ಕೇಳಿದ್ದರು. ಅದಕ್ಕಾತ ಹೀಗೆ ಉತ್ತರಿಸಿದ್ದ : ‘ಅದ್ಯಾವುದೂ ನನಗೆ ನೆನಪಿದ್ದಂತಿಲ್ಲ. ನಾನೇನು ಹೇಳಿದ್ದೇನೋ ಅದೆಲ್ಲ ಜಗತ್ತಿಗೆ ಸಂದಿದೆ. ಅದನ್ನು ಲೋಕ ನೆನಪಿಟ್ಟುಕೊಂಡಿದೆ, ನಾನು ಅದನ್ನಲ್ಲೇ ಬಿಟ್ಟು ಮುನ್ನಡೆದಿದ್ದೇನೆ...’


ಹೌದು, ದೇವ್‌ಜೀ... ನೀವು ಮುಂದೆ ನಡೆದು ಬಿಟ್ಟಿರಿ. ನಾವು ನಿಮ್ಮ ಡೈಲಾಗುಗಳನ್ನೂ ಹಾಡನ್ನೂ ಗುನುಗುತ್ತ ಇಲ್ಲೇ ಇದ್ದೇವೆ ಇನ್ನೂ !


ಈ ವರ್ಷ ಸೆಪ್ಟೆಂಬರ್‌ನಲ್ಲಿ ದೇವಾನಂದ್‌ಗೆ ೮೮ ವರ್ಷ ತುಂಬಿತ್ತು. ಅದಕ್ಕೊಂದು ಸಮಾರಂಭವನ್ನೂ ಮಾಡಲಾಗಿತ್ತು. ಬದುಕಿನ ಸಂಧ್ಯೆಯಲ್ಲಿದ್ದರೂ ಆತನ ಯೋಜನೆಗಳು ಹಲವಾರಿದ್ದವು. ತನ್ನ ಯಶಸ್ವಿ ಚಿತ್ರ ‘ಹರೇ ರಾಮ ಹರೇ ಕೃಷ್ಣ’ದ ಎರಡನೇ ಭಾಗ ತರುವ ಕನಸಿತ್ತು ಆತನಿಗೆ. ಕೊನೆಯ ಚಿತ್ರ ‘ಚಾರ್ಜ್‌ಶೀಟ್’ ತಯಾರಾಗಿ ಡಬ್ಬಾದಲ್ಲಿ ಕುಳಿತಿತ್ತು. ೨೦೦೫ರಲ್ಲಿ ‘ಮಿ.ಪ್ರೈಮ್ ಮಿನಿಸ್ಟರ್’ ಎಂಬ ಚಿತ್ರ ಬಂದಿತ್ತು. ತೊಡೆ ನಡುಗುತ್ತಿದ್ದರೂ ಅದರಲ್ಲಿ ಆತ ಪ್ರಧಾನಿ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ. ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ವಿಫಲವಾಗಿತ್ತು. ಆತನ ಇತ್ತೀಚಿನ ಚಿತ್ರಗಳು ಯವ್ವನದ ದಿನಗಳ ಪ್ರಣಯಚೇಷ್ಟೆಗಳನ್ನು ದಾಟಿ, ರಾಜಕೀಯ ಚಿಂತನೆಯ ಕಡೆಗೆ ತುಡಿದಿದ್ದವು. ಅದು ಆತನ ರೆಗ್ಯುಲರ್ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ.


ಯಾಕೆಂದರೆ ದೇವಾನಂದ್ ಅಂದರೆ ನಮ್ಮ ಮನದಲ್ಲಿ ಮೂಡುವ ಚಿತ್ರವೇ ಬೇರೆ. ಆತ ಎಂದೆಂದೂ ಚಿರಯವ್ವನಿಗ. ಆತನ ಓರಗೆಯ ನಾಯಕರಿಗೆ ವಯಸ್ಸಾಗಿರಬಹುದು. ನಾಯಕಿಯರ ಗಲ್ಲಗಳಲ್ಲಿ ಸುಕ್ಕುಗಳು ಮೂಡಿರಬಹುದು. ದೇವಾನಂದ್‌ನ ಯವ್ವನದ ಹದ ಆರುವುದೇ ಇಲ್ಲ. ಆತನ ಸಭ್ಯತೆಯ ಕೂದಲು ಕೂಡ ಕೊಂಕುವುದಿಲ್ಲ. ಒಂದಾದರೂ ಚಿತ್ರದಲ್ಲಿ ಆತನ ಬರಿ ಮೈ ನೋಡಿದ್ದೀರಾ ನೀವು ? ಆತ ಶರ್ಟ್ ಕಾಲರ್ ಕೆಳಗೆ ಸರಿಸಿದ್ದರೆ, ಮೇಲಿನ ಒಂದು ಬಟನ್ ಬಿಚ್ಚಿದ್ದರೆ ನಿಮ್ಮಾಣೆ. ಆತ ಸಿಕ್ಸ್ ಪ್ಯಾಕ್ ಅಲ್ಲ, ಅಂಗಸಾಧನೆ ಮಾಡಿರಲಿಕ್ಕಿಲ್ಲ, ಶತ್ರುಗಳನ್ನು ಹೊಡೆದುರುಳಿಸಿರಲಿಕ್ಕಿಲ್ಲ. ಆದರೆ ಆದರೆ ಆತನ ಅಭಿಮಾನಿಗಳು ಎಂದೂ ಆತನನ್ನು ತೊರೆದು ಹೋಗಲೇ ಇಲ್ಲ.


ದೇವ್ ದಾದಾನ ಪ್ರಣಯ ಜೀವನ ಮೂರ್ನಾಲ್ಕು ಚೆಲುವೆಯರೊಂದಿಗೆ ತಳುಕು ಹಾಕಿಕೊಂಡಿದೆ. ಅದರಲ್ಲಿ ಸುರೈಯಾ, ಜೀನತ್ ಅಮಾನ್ ಮುಂತಾದವರೆಲ್ಲ ಬಂದುಹೋಗುತ್ತಾರೆ. ಸುರೈಯಾದಂತೂ ಮನ ಕದಡುವ ಕತೆ. ದೇವಾನಂದ್ ಫೀಲ್ಡ್‌ಗೆ ಬರುವಾಗಲಾಗಲೇ ಆಕೆ ಹೆಸರು ಮಾಡಿದ್ದಳು. ಇಬ್ಬರೂ ಆರು ಚಲನಚಿತ್ರಗಳಲ್ಲಿ ಒಟ್ಟಿಗೇ ನಟಿಸಿದರು. ಒಂದು ಹಾಡಿನ ಸನ್ನಿವೇಶದ ಚಿತ್ರೀಕರಣದ ಸಂದರ್ಭದಲ್ಲಿ ದೋಣಿಯೊಂದು ತಲೆಕೆಳಗಾದಾಗ, ಮುಳುಗುತ್ತಿದ್ದ ಸುರೈಯಾಳನ್ನು ದೇವಾನಂದ್ ರಕ್ಷಿಸಿದ್ದ. ಈ ಘಟನೆ ಅವರ ಪ್ರೇಮದ ರೂಪಕ ಎಂಬಂತಿತ್ತು. ಆದರೆ ಸುರೈಯಾ ಮುಸ್ಲಿಮಳಾಗಿದ್ದರಿಂದ ಅವಳ ಅಜ್ಜಿ ಈ ಸಂಬಂಧಕ್ಕೆ ತನ್ನ ವಿರೋಧ ವ್ಯಕ್ತಪಡಿಸಿದಳು. ದೇವ್ ಮೇಲೆ ಕಂಪ್ಲೇಂಟ್ ಕೂಡ ನೀಡಿದಳು. ಇಬ್ಬರೂ ಜತೆಗೆ ನಟಿಸುವುದೇ ಅಸಾಧ್ಯವಾಯಿತು. ಮುಂದೆ ಸುರೈಯಾ ಚಿತ್ರರಂಗದಿಂದಲೇ ಹಿಂತೆಗೆದಳು. ಜೀವನವಿಡೀ ಅವಿವಾಹಿತೆಯಾಗಿಯೇ ಉಳಿದಳು.


‘ಹರೇ ರಾಮ...’ ಚಿತ್ರದ ಯಶಸ್ಸಿನ ಬಳಿಕ ಜೀನತ್- ದೇವ್ ನಡುವೆ ಪ್ರಣಯ ಇದೆ ಎಂದು ಮಾಧ್ಯಮಗಳು ಬರೆಯತೊಡಗಿದವು. ಅದು ನಿಜ ಕೂಡ ಆಗಿತ್ತು. ಇಬ್ಬರೂ ನಿಕಟವಾಗುತ್ತಿದ್ದರು. ಒಂದು ದಿನ ತನ್ನ ಪ್ರೀತಿಯನ್ನು ಜೀನತ್‌ಗೆ ಹೇಳಲು ದೇವಾನಂದ್ ನಿರ್ಧರಿಸಿದ. ಅದಕ್ಕೆ ಮುಂಬಯಿಯ ತಾಜ್ ಹೋಟೆಲನ್ನು ಆಯ್ಕೆ ಮಾಡಿಕೊಂಡು ಜೀನತ್‌ಳನ್ನು ಅಲ್ಲಿಗೆ ಬರಹೇಳಿದ. ಆ ಸಂಜೆ ಆತ ಅಲ್ಲಿಗೆ ಹೋದಾಗ, ಆತನ ಪ್ರತಿಸ್ಪರ್ಧಿ ನಟನಾಗಿದ್ದ ರಾಜ್‌ಕಪೂರ್ ಜತೆ ಜೀನತ್ ನಿಕಟವಾಗಿರುವುದನ್ನು ಕಂಡ. ‘ನನ್ನ ಹೃದಯ ಒಡೆದು ಚೂರಾಯಿತು. ಏನೂ ಹೇಳದೆ ಅಲ್ಲಿಂದ ಬಂದುಬಿಟ್ಟೆ’ ಎಂದು ತನ್ನ ಆತ್ಮಚರಿತ್ರೆ ‘ರೊಮಾನ್ಸಿಂಗ್ ವಿತ್ ಲೈಫ್’ನಲ್ಲಿ ದೇವ್ ಬರೆದುಕೊಳ್ಳುತ್ತಾನೆ.


ದೇವಾನಂದ್ ‘ರೊಮ್ಯಾಂಟಿಕ್ ಹೀರೋ’ ಆಗಿದ್ದದ್ದು ಯಾಕೆಂದು ಈಗ ಅರ್ಥವಾಯಿತೆ ?