Saturday, December 20, 2008

ಬಂತೋ ಬಂತು ಕಾಲದ ನಾವೆ


ಅಪಾರ ಕಾಲದ ಕಡಲನ್ನು ದಾಟಿ ಬಂದ ಪುಟ್ಟ ನಾವೆಯೊಂದು ಇದೀಗ ನಮ್ಮ ನಿಮ್ಮ ಬದುಕಿನ ಬಂದರಿನಲ್ಲಿ ಲಂಗರು ಹಾಕಿದೆ. ನಾವೆಗೆ ಹನ್ನೆರಡು ಹಾಯಿಗಳು, ಇಪ್ಪತ್ನಾಲ್ಕು ಹಗ್ಗಗಳು, ಒಂದೇ ಒಂದು ಮೀಟುಗೋಲು. ಪಟಪಟಿಸುವುದು ಹಾಯಿ, ಕರೆಯುವುದು ದೂರ ತೀರಕ್ಕೆ.


ಅಂಗೈಯೊಳಗೆ ಕನಸುಗಳ ಬೆಚ್ಚನೆ ಬಚ್ಚಿಟ್ಟುಕೊಂಡ ಎಲ್ಲರ ಬದುಕಿಗೂ ಇಂಥ ಒಂದು ಪುಟ್ಟ ನಾವೆ ಬರಲಿ.
ನಿದ್ದೆಯಲ್ಲೇ ಅಕಾರಣ ನಗುವ ಸಣ್ಣ ಕಂದನ ತೊಟ್ಟಿಲಿಗೆ, ಬೆವರಿನಲ್ಲಿ ಮಿಂದ ಕೈಗಳು ಚಾಚಿದ ಅನ್ನದ ಬಟ್ಟಲಿಗೆ, ಒಳಮನೆಯ ಹಳೆ ಮಂದಿ ಕೆಮ್ಮುತ್ತ ತಡವುತ್ತ ಬಂದು ಕುಂತ ಮನೆಯ ಮೆಟ್ಟಿಲಿಗೆ ತೇಲುತ್ತ ಈ ನಾವೆ ಸಮೀಪಿಸಲಿ.


ಈಗಷ್ಟೆ ಮದುವೆಯಾಗಿ ಬಂದ ಹೊಸ ಸೊಸೆ ದೇವರೊಳಕೋಣೆಯಲ್ಲಿ ಹಚ್ಚಿಟ್ಟ ನಂದಾದೀಪಕ್ಕೆ, ತಂಟೆಕೋರ ಮಕ್ಕಳ ಮೇಲೆ ಸುಳ್ಳುಸುಳ್ಳೇ ಮುನಿಸಿಕೊಳ್ಳುವ ಹಿರಿಯರ ಕೋಪಕ್ಕೆ, ಐಸ್‌ಕ್ಯಾಂಡಿ ಮಾರಾಟವಾಗದೆ ಬಿಸಿಲಿನಲ್ಲಿ ಕರಗುತ್ತ ತಲೆ ಮೇಲೆ ಕೈಹೊತ್ತ ಶ್ರಮಜೀವಿಯ ತಾಪಕ್ಕೆ ಈ ಪುಟ್ಟ ನಾವೆ ಒದಗಿ ಬರಲಿ.


ಮಾಗಿ ಚಳಿಗೆ ಎಲೆ ಉದುರಿಸಿಕೊಂಡು ಬೋಳುಬೋಳಾಗಿ ನಿಂತ ಹಳೆಯ ಮರಗಳಿಗೆ, ದಶಂಬರದ ಫಲಗಾಳಿಗೆ ಮೆಲ್ಲನೆ ಕಂಪಿಸುತ್ತ ಹೂಗಳ ಹೊತ್ತು ಲಜ್ಜೆಯಿಂದ ನಿಂತ ಮಾಮರಗಳಿಗೆ, ಚಿಗುರಿನ ಚೊಗರಿಗೆ ಕಾತರಿಸಿ ಎಲ್ಲಿಂದಲೋ ಬರುವ ಹಕ್ಕಿಗಳಿಗೆ, ಹುಲ್ಲುಗರಿಕೆಯ ಮೇಲೆ ಮೆಲ್ಲನೆ ಇಳಿದ ಎಳಬೆಳಗಿನ ಮಿದುವಾದ ಇಬ್ಬನಿಗೆ, ಅಂಗಳದಲ್ಲಿ ರೈತನ ಉಸಿರಿನಂತೆ ಹರಡಿರುವ ಕೊಯಿಲಿಗೆ ಈ ನಾವೆಯ ಹಾಯಿ ಬೀಸಿದ ತಂಗಾಳಿ ತಾಕಲಿ.


ತಮ್ಮ ಕನಸುಗಳಲ್ಲಿ ಬಂದ ಚೆಲುವೆಯರ ಬೆನ್ನು ಬಿದ್ದು ಅರಸುತ್ತಿರುವ ಹುಡುಗರ ಬಿರುಸಾದ ಶ್ವಾಸಗಳಿಗೆ, ಕನ್ನಯ್ಯನಿಂದ ಮೊದಲ ಪ್ರೇಮಪತ್ರ ಬರೆಸಿಕೊಂಡು ಕುಪ್ಪಸದೊಳಗೆ ಬಚ್ಚಿಟ್ಟುಕೊಂಡ ರಾಧೆಯ ಝಲ್ಲೆನುವ ಎದೆಗೆ, ಗ್ರೀಟಿಂಗ್ಸ್ ಹಂಚುತ್ತ ಸುಸ್ತಾಗಿರುವ ಗಂಜಿ ಇಸ್ತ್ರಿಯ ಅಂಚೆಯಣ್ಣನ ಸಮವಸ್ತ್ರದೊಳಕ್ಕೆ, ದೇಹವಿಲ್ಲದೆ ಅತ್ತಿಂದಿತ್ತ ಹಾರಾಡುತ್ತ ಎಳೆನಗುವನ್ನು ಎಲ್ಲೆಡೆ ಹರಡಿಬಿಡುವ ಎಸ್ಸೆಮ್ಮೆಸ್‌ಗಳಿಗೆ ಈ ನಾವೆ ಬಂದುಬಿಡಲಿ.


ಆಸ್ಪತ್ರೆಯಲ್ಲಿರುವ ಪುಟ್ಟ ಕಂದನಿಗೆ ಹಾಲು ತರಲು ಓಡುತ್ತಿರುವ ಎಳೆ ತಾಯಿಯ ಫ್ಲಾಸ್ಕಿಗೆ, ಕಚೇರಿಯಿಂದ ಹಿಂದಿರುಗುವಾಗ ಮಕ್ಕಳಿಗೆ ಸಿಹಿ ತರಲು ಮರೆಯಿತೆಂದು ಚಡಪಡಿಸುವ ಗುಮಾಸ್ತೆಯ ಚೀಲದೊಳಕ್ಕೆ, ಇರುಳು ನಿದ್ರೆ ತೊರೆದು ಮನೆಯನ್ನೂ ಮರೆತು ಅಕ್ಷರಗಳು ಕತೆಯಾಗುವ ನಡುವೆ ಕಳೆದುಹೋದ ಪತ್ರಕರ್ತನ ಪೆನ್ನಿಗೆ, ತಾಯಿ ಕಣ್ಣು ತೆರೆದು ಮಿಸುಕಾಡುವುದನ್ನೇ ಕಾಯುತ್ತ ಐಸಿಯು ಹೊರಗೆ ನಿಂತಿರುವ ಮಕ್ಕಳ ಕಂಗಳೊಳಕ್ಕೆ, ಲಾರಿಯಿಂದ ಗುದ್ದಿಸಿಕೊಂಡು ಮಲಗಿರುವ ಗಂಡನಿಗೆ ರಕ್ತ ನೀಡುತ್ತಿರುವ ಬಾಡಿದ ಮುಖದ ಮಹಿಳೆಯ ತೋಳುಗಳಿಗೆ- ಈ ನಾವೆ ತೇಲಿ ಬಂದು ಅಪಾರ ಬಲ ತುಂಬಲಿ.


ಮತ್ತು... ಮತ್ತು... ಎಲ್ಲಕ್ಕಿಂತ ಮುಖ್ಯವಾಗಿ, ಯಾರದೋ ಕೋಪ ತಾಪ ದ್ವೇಷಗಳಿಗೆ ಸಂಬಂದವೇ ಇಲ್ಲದಂತೆ ಬಲಿಯಾದ ಅಮಾಯಕರ ಗೋರಿಗಳಿಗೆ, ಅವರ ಬೂದಿ ಮಣ್ಣು ಮಾಡಿದ ನಡುಗುವ ಕೈಗಳಿಗೆ, ಭಯ ಆತಂಕ ದುಃಖ ಗದ್ಗದಗಳನ್ನು ಬೈತಿಟ್ಟುಕೊಂಡು ಮರುಗುತ್ತಿರುವ ದೀಪಗಳಿಲ್ಲದ ಪಡಸಾಲೆಗಳಿಗೆ ಈ ಪುಟ್ಟ ನಾವೆ ಹಾಯಿಗಳ ಬೀಸುತ್ತ ಝಗಮಗಿಸುತ್ತ ಬರಲಿ.


ಅನ್ಯಜೀವಗಳ ವಿನಾಕಾರಣ ಪ್ರೀತಿಸುವ ಎಲ್ಲರೂ ತಮ್ಮ ಕನಸುಗಳಲ್ಲಿ ಈ ಬೆರಗಿನ ನಾವೆಯನ್ನೇರಿ ವಿಸ್ಮಿತರಾಗಲಿ.

ಮುಗಿಯದ ಇತಿಹಾಸದ ಆರಂಭ

ಬೆಂಕಿಯ ನೆನಪು- ಅಂತಿಮ ಕಂತು
-೧-
ಇಸವಿ ೧೪೯೨- ಗುವಾನ್ಹನಿ
ತಿಂಗಳಿಂದಲೂ ಸರಿಯಾಗಿ ನಿದ್ದೆಯಿಲ್ಲದೆ ಬೇಗುದಿಯಲ್ಲಿದ್ದ ಕೊಲಂಬಸ್ ಮೊಣಕಾಲೂರಿ, ಗಳಗಳ ಅಳುತ್ತ ನೆಲವನ್ನು ಚುಂಬಿಸಿದ್ದಾನೆ. ಮತ್ತೆ ತಡವರಿಸುತ್ತ ಎದ್ದು ಹೆಜ್ಜೆ ಮುಂದಿಟ್ಟು ಎದುರಿಗಿರುವ ಗಿಡಗಳ ರುಂಡ ಹಾರಿಸಿದ್ದಾನೆ, ತನ್ನ ಖಡ್ಗದಿಂದ. ಮತ್ತೆ ಧ್ವಜ ಹಾರಿಸಿ, ಮೊಣಕಾಲೂರಿ ಬಾನಿಗೆ ಕಣ್ಣೊಡ್ಡಿ, ತನ್ನ ರಾಜ ಫರ್ಡಿನಾಂಡ್, ರಾಣಿ ಇಸಬೆಲ್ಲಾಳ ಹೆಸರು ಘೋಷಿಸಿದ್ದಾನೆ. ಅವನ ಪಕ್ಕ ಭಾಷಾಂತರಕಾರ, ದಸ್ತಾವೇಜು ಬರಹಗಾರ ರೊಡ್ರಿಗೋ ಡಿ ಎಸ್ಕೋಬೇಡೋ ನಿಂತಿದ್ದಾನೆ.

ಈಗ ರೊಡ್ರಿಗೋ ದಾಖಲೆ ಬರೆಯುತ್ತಾನೆ. ಇಂದಿನಿಂದ ಇವೆಲ್ಲಾ ಖಂಡಾಂತರದಾಚೆ ದೂರದ ರಾಜನಿಗೆ ಸೇರಿದ್ದು, ಹವಳದ ಸಮುದ್ರ, ಹೊಳೆವ ದಂಡೆ, ಹಸುರು ಶಿಲೆಗಳು, ಕಾಡುಗಳು, ಹಕ್ಕಿಗಳು, ಬಟ್ಟೆ... ಪಾಪ. ಹಣ ಎಂದರೆ ಏನೆಂದು ಅರಿಯದೇ ಇವರನ್ನೇ ಅರೆಬೆತ್ತಲೆ ಅಚ್ಚರಿಯ ಕಣ್ಣುಗಳಿಂದ ದಿಟ್ಟಿಸುತ್ತಿರುವ ಈ ಮನುಷ್ಯರು...

ಅರೆಬೆತ್ತಲೆ ಮನುಷ್ಯರು ಬೆಪ್ಪು ಕೌತುಕತೆಯಲ್ಲಿ ನೋಡುತ್ತಿದ್ದಂತೆ ರೊಡ್ರಿಗೋ ಹೀಬ್ರೂ ಭಾಷೆಯಲ್ಲಿ ಕೇಳುತ್ತಾನೆ. ‘ಸಾಮ್ರಾಟ್ ಖಾನ್‌ನ ಸಾಮ್ರಾಜ್ಯ ಎಲ್ಲಿದೆ ? ನಿಮ್ಮ ಕಿವಿ ಮೂಗುಗಳ ಚಿನ್ನವೆಲ್ಲಿಂದ ಬಂತು ?’ ಮತ್ತೆ ಅದೇ ಬೆಪ್ಪು ಬೆರಗಿನ ಕಣ್ಣುಗಳು.

ರೊಡ್ರಿಗೋ ತನಗೆ ಗೊತ್ತಿರುವ ಅಷ್ಟಿಷ್ಟು ಚಾಲ್ಡಿಯನ್ ಭಾಷೆಯಲ್ಲಿ ಕೇಳುತ್ತಾನೆ. ‘ಚಿನ್ನ ? ದೇಗುಲ ? ಅರಮನೆಗಳು, ಸಾಮ್ರಾಟ ?’ ಮತ್ತೆ ಅರೇಬಿಕ್‌ನಲ್ಲಿ ಕೇಳುತ್ತಾನೆ. ‘ಜಪಾನ್, ಚೈನಾ, ಚಿನ್ನ ?’

ಬಳಿಕ ಕೊಲಂಬಸ್‌ನ ಕ್ಷಮೆ ಯಾಚಿಸುತ್ತಾನೆ. ಕೊಲಂಬಸ್ ಹತಾಶೆಯಲ್ಲಿ ಶಪಿಸುತ್ತಾ, ಸಾಮ್ರಾಟ್ ಖಾನ್‌ಗೆಂದೇ ಲ್ಯಾಟಿನ್‌ನಲ್ಲಿ ಬರೆದು ತಂದಿದ್ದ ತನ್ನ ಪರಿಚಯ ಪತ್ರವನ್ನು ನೆಲಕ್ಕೊಗೆಯುತ್ತಾನೆ.

ಅರೆಬೆತ್ತಲೆ ಮನುಷ್ಯರು ತಮ್ಮ ದಡದಲ್ಲಿ ಪ್ರತ್ಯಕ್ಷವಾದ ಅಪರಿಚಿತ ಮನುಷ್ಯನ ಕ್ರೋಧವನ್ನು ಗಮನಿಸಿದ್ದಾರೆ. ಅಲೆಅಲೆಯಾಗಿ ಸಂದೇಶ ಹರಡುತ್ತದೆ.

‘ಬಾನಿಂದಿಳಿದ ಮನುಷ್ಯರನ್ನು ನೋಡಬನ್ನಿ. ಕುಡಿಯಲು ಪಾನೀಯ, ತಿನ್ನಲು ಆಹಾರ ತನ್ನಿ.’
-೨-
ನೆರುಡಾನ ಮನೆ
ಇಸವಿ ೧೯೭೩
ಈ ವಿನಾಶದ ಮಧ್ಯೆ, ಛಿದ್ರಗೊಂಡ ಮನೆಯಲ್ಲಿ ಕವಿ ನೆರುಡಾ ಅಸು ನೀಗಿದ್ದಾನೆ. ಕ್ಯಾನ್ಸರಿನಿಂದ, ದುಃಖದಿಂದ. ಅವನು ಸತ್ತರೆ ಸಾಲದು, ಅವನ ವಸ್ತುಗಳು ನಾಶವಾಗಬೇಕು ಎಂದು ಮಿಲಿಟರಿ ಆಡಳಿತ ನಿರ್ಧರಿಸಿದೆ.

ಅದಕ್ಕೇ ಪುಂಡ ಸೈನಿಕರು ಅವನ ಟೇಬಲ್ಲು, ಮಂಚವನ್ನು ಒಡೆದು ಹಾಕಿದ್ದಾರೆ. ನೆಲಹಾಸನ್ನು ಚಿಂದಿ ಮಾಡಿದ್ದಾರೆ. ಪುಸ್ತಕಗಳ ಸಂಗ್ರಹವನ್ನು ಸುಟ್ಟು ಹಾಕಿದ್ದಾರೆ. ಅವನ ಅಮೂಲ್ಯ ದೀಪಗಳು, ಬಣ್ಣದ ವೈವಿಧ್ಯಮಯ ವಿನ್ಯಾಸದ ಬಾಟಲುಗಳನ್ನು, ಕಂಭಗಳನ್ನು, ಪೇಂಟಿಂಗ್‌ಗಳನ್ನು, ಚಿಪ್ಪಿನ ಸಂಗ್ರಹವನ್ನು ವ್ಯವಸ್ಥಿತವಾಗಿ ಪುಡಿಮಾಡಿ ನಾಶ ಮಾಡಿದ್ದಾರೆ. ಗೋಡೆ ಗಡಿಯಾರದ ಪೆಂಡ್ಯುಲಮ್ಮನ್ನು ಕಿತ್ತು ಹಾಕಿದ್ದಾರೆ. ಗೋಡೆಯಲ್ಲಿದ್ದ ಅವನ ಪತ್ನಿಯ ತೈಲಚಿತ್ರದ ಹೊಳೆವ ಕಣ್ಣುಗಳನ್ನು ಬಯೊನೆಟ್ಟಿನಿಂದ ಚುಚ್ಚಿ ಕಿತ್ತಿದ್ದಾರೆ.

ನೀರು ಕೆಸರು ತುಂಬಿದ ಭಗ್ನ ಮನೆಯಿಂದ ಕವಿ ಸ್ಮಶಾನಕ್ಕೆ ಯಾತ್ರೆ ಹೊರಟಿದ್ದಾನೆ. ಕವಿಯ ಆಪ್ತಮಿತ್ರರು ಶವಪೆಟ್ಟಿಗೆ ಹೊತ್ತಿದ್ದಾರೆ. ಮಾಟೆಲ್ಡಾ ಉರುಶಿಯಾ ಯಾತ್ರೆಯನ್ನು ಮುನ್ನಡೆಸಿದ್ದಾಳೆ.

‘ನೀನಿರುವಾಗ ಬದುಕೋದು ಎಷ್ಟು ಸುಂದರ’ ಎಂದು ನೆರುಡಾ ಆಕೆಯ ಬಗ್ಗೆ ಬರೆದಿದ್ದ.

ಒಂದೊಂದೇ ಬೀದಿ ದಾಟುತ್ತಿದ್ದಂತೆ ಶವಯಾತ್ರೆಯ ಹಿಂಬಾಲಕರ ಸಂಖ್ಯೆ ಹೆಚ್ಚಿದೆ.ಮಿಲಿಟರಿ ಟ್ರಕ್‌ಗಳು, ಮೆಶಿನ್‌ಗನ್ ಹಿಡಿದ ಸೈನಿಕರು, ಬೈಕ್‌ನಲ್ಲಿರುವ ಪಹರೆ ಪೊಲೀಸರು, ಭಯ ದಮನದ ಬೀಜ ಬಿತ್ತುತ್ತಿದ್ದರೂ ಜನತೆ ಸ್ಪಂದಿಸಿದೆ. ಮನೆಗಳ ಬಾಲ್ಕನಿಯಿಂದ ಕರವಸ್ತ್ರಗಳು ಧ್ವಜದಂತೆ ಹಾರಾಡಿವೆ. ಕಿಟಕಿಯ ಹಿಂದೆ ಕೈಗಳು ವಂದಿಸಿ ವಿದಾಯ ಹೇಳಿವೆ.ಹನ್ನೆರಡು ದಿನಗಳ ಕ್ರೌರ್‍ಯ ಆಘಾತಗಳ ಬಳಿಕ ಈಗ ಹೋರಾಟದ ಹಾಡೊಂದು ಪಿಸುಗುಟ್ಟಿದೆ.ತಪ್ತ ದುಃಖದಲ್ಲಿ ಗುನುಗಿದೆ. ನೋಡನೋಡುತ್ತಿದ್ದಂತೆ ಜನರ ಸಾಲು ಮೆರವಣಿಗೆಯಾಗಿದೆ. ಮೆರವಣಿಗೆ ಜನಸಾಗರವಾಗಿದೆ. ಭಯದ ವಿರುದ್ಧ ಜನತೆ ಸಾಂಟಿಯಾಗೋದ ಬೀದಿಗಳಲ್ಲಿ ಎದೆ ಸೆಟೆಸಿ ನಡೆದಿದ್ದಾರೆ, ದನಿ ಎತ್ತಿ ಹಾಡಿದ್ದಾರೆ.

ನೆರುಡಾನಿಗೆ, ಕವಿ ನೆರುಡಾನಿಗೆ, ತಮ್ಮ ಕವಿ ನೆರುಡಾನಿಗೆ, ತಮ್ಮ ಮಣ್ಣಿನ ಕವಿ ನೆರುಡಾನಿಗೆ, ಅವನು ಹೆಮ್ಮೆ ಪಡಬಹುದಾದ ರೀತಿಯಲ್ಲಿ, ಅವನ ಅಂತಿಮ ಯಾತ್ರೆಯಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

Sunday, December 14, 2008

ಬೇಕು ಬೆಂಕಿಯ ಸಂಗ

‘ಬೆಂಕಿಯ ನೆನಪು - ಭಾಗ ಎರಡು -

‘ಬೆಂಕಿಯ ನೆನಪು’ ಕೃತಿಯ ಬಗ್ಗೆ ಏನು ಬರೆಯಹೊರಟರೂ ನನ್ನ ಕೈ ತಡೆಯುತ್ತದೆ ; ಅದಕ್ಕೆ ಕಾರಣ ಅದು ಉಕ್ಕಿಸುವ ಆಕ್ರಮಣ, ದೌರ್ಜನ್ಯ, ಅಮಾನವೀಯತೆ, ಹೋರಾಟ, ಚಳವಳಿ, ಕ್ರಾಂತಿಗಳ ಉರಿಯುವ ನೆನಪು. ನಮ್ಮ ನಾಡಿನಲ್ಲೂ ನಡೆದ ಅನೇಕ ಚಳವಳಿಗಳ ಅವಸಾನ ; ಮೂಲಭೂತವಾದ ಹಾಗೂ ಸರ್ವಾಕಾರಗಳ ಉತ್ಥಾನವನ್ನು ನೋಡಿ, ಓದಿ ಅರಿತವರಿಗೆ ಇದು ಅರ್ಥವಾಗಬಹುದು. ಪ್ರಭುತ್ವ ಎಲ್ಲವನ್ನೂ ಹೊಸಕಿ ಹಾಕಿಬಿಡುತ್ತದೆ ; ಎಲ್ಲವನ್ನೂ.


ಹಾಗೆಂದೇ ಇದರ ಬಗ್ಗೆ ಪ್ರತ್ಯೇಕವಾಗಿ ಏನನ್ನೂ ಬರೆಯದೆ, ಮುನ್ನುಡಿಯಿಂದ ಆಯ್ದ ಎರಡು ಭಾಗವನ್ನು ನಿಮಗೆ ಕೊಡುತ್ತೇನೆ. ಇದನ್ನು ಬರೆದವರು ರೊವಿನಾ ಹಿಲ್ ಎಂಬ ವೆನಿಜುವೆಲಾದ ಕವಯಿತ್ರಿ.
**
ಲ್ಯಾಟಿನ್ ಅಮೆರಿಕಾದ ಬಗ್ಗೆ ಆಸಕ್ತಿ ಇರುವವರು ಯಾವ ಸಂಘರ್ಷಗಳು ಅದನ್ನು ರೂಪಿಸಿದವು, ಅದರ ಕಾಣ್ಕೆ, ಮೌಲ್ಯಗಳೇನು ಎಂಬುದನ್ನೆಲ್ಲಾ ಅಕಾಡೆಮಿಕ್ಕಾದ ರಾಜಕೀಯ, ಚಾರಿತ್ರಿಕ ವಿಶ್ಲೇಷಣೆಗಳ ಉದ್ಗ್ರಂಥಗಳ ಉಸಾಬರಿಗೆ ಹೋಗದೆ ಅರಿಯಬೇಕೆಂದಿರುವವರು ಎಡುವರ್ಡೊ ಗೆಲಿಯಾನೊನ ‘ಬೆಂಕಿಯ ನೆನಪು’ ಓದಬೇಕು.


ಆದರೆ ಓದುಗನಿಗೊಂದು ಮುನ್ನೆಚ್ಚರಿಕೆ. ಚರಿತ್ರಕಾರನ ಶಿಸ್ತಿನ ಜವಾಬ್ದಾರಿಯಿಂದ ನುಣುಚಿಕೊಂಡು ಮೇಲ್ಪದರ ಕೆರೆವ ವಿವರ ಇದಲ್ಲ. ಇದು ಪುನರ್ ಸೃಷ್ಟಿಸುವ ಬೆಂಕಿ ಸುಟ್ಟೀತು. ಇಲ್ಲಿನ ಪ್ರತಿಮೆ ಮತ್ತು ಪದಗಳಿಗೆ ನೀವು ಸಂವೇದನಾಶೀಲರಾಗಿದ್ದರೆ, ಇಲ್ಲಿನ ಉರಿವ ಜ್ಞಾನದುಂಡೆ ಕೆಂಡಗಳು ನಿಮ್ಮಲ್ಲಿ ಅಳಿಸಲಾರದ ಗುರುತು ಮೂಡಿಸಿಯಾವು. ಕಣ್ಣೀರು, ನಗು, ಸುಸ್ತು, ಜಿಗುಪ್ಸೆ, ಮೆಚ್ಚುಗೆ, ದಿಗ್ಭ್ರಾಂತಿ- ಹೀಗೆ ಭಾವವಲಯಗಳು ಒಂದಾದ ಮೇಲೊಂದರಂತೆ ನಿಮ್ಮನ್ನು ಆವರಿಸುತ್ತಾ ಹೋಗುತ್ತವೆ, ಈ ತುಣುಕುಗಳ ಧಾರಾವಾಹಿ ಬಿಚ್ಚಿದಂತೆಲ್ಲಾ.


ಈ ಗ್ರಂಥ ಮೂರು ಸಂಪುಟಗಳನ್ನೊಳಗೊಂಡಿದೆ. ಪ್ರತಿ ಸಂಪುಟವೂ ಚಿಕ್ಕಪುಟ್ಟ ಘಟನೆಗಳ ವಿವರ, ವಿವರಣೆ, ವ್ಯಾಖ್ಯಾನಗಳನ್ನೊಳಗೊಂಡಿದೆ. ಕೆಲವು ಕೆಲವೇ ಸಾಲು. ದೀರ್ಘವೆಂಬುದು ಎರಡು ಪುಟ ಮೀರುವುದಿಲ್ಲ.
**
ಈ ತ್ರಿವಳಿ ಸಂಪುಟಗಳ ಹಿನ್ನೆಲೆಯಲ್ಲಿ ಲ್ಯಾಟಿನ್ ಅಮೆರಿಕ ಮತ್ತು ಭಾರತ ಭೂಖಂಡಗಳೆರಡರಲ್ಲೂ ಘಟಿಸಿದ ವಸಾಹತುಶಾಹಿ ಪ್ರಕ್ರಿಯೆ ಮತ್ತು ತದನಂತರ ನಮಗೆ ಅಂಟಿಕೊಂಡ ‘ತೃತೀಯ ವಿಶ್ವ’ ಸ್ಥಾನಮಾನದ ಇತಿಹಾಸವನ್ನು ಯಾರಾದರೂ ತೌಲನಿಕವಾಗಿ ಅಧ್ಯಯನ ಮಾಡಬೇಕು.


ಭಾರತವನ್ನು ಜಯಿಸಿದ ಬ್ರಿಟಿಷರು ಭಾರತೀಯರೊಂದಿಗೆ ಹೆಚ್ಚೇನೂ ಬೆರೆಯಲಿಲ್ಲ. ಇಲ್ಲಿ ಚದುರಿದಂತಿರುವ ಆಂಗ್ಲೋ ಇಂಡಿಯನ್ನರ ಸಂಖ್ಯೆಯೂ ನಗಣ್ಯ. ಆದರೆ ಲ್ಯಾಟಿನ್ ಅಮೆರಿಕದ ಮೇಲಿನ ಆಕ್ರಮಣ ಅಕ್ಷರಶಃ ಅಲ್ಲಿನ ಮಹಿಳೆಯರ ಮೇಲೆ ನಡೆದ ಆಕ್ರಮಣ. ಇಂಡಿಯನ್ ಗಂಡಸರ ಸಮೂಹ ಹತ್ಯೆಯಾದ ಬೆನ್ನಿಗೇ ಈ ದೈಹಿಕ ಅತ್ಯಾಚಾರವೂ ನಡೆಯುತ್ತಾ ಬಂದಿತ್ತು. ಉದಾಹರಣೆಗೆ ಇಂದಿನ ವೆನಿಜುವೆಲಾದ ಬಹುಪಾಲು ಜನಸಂಖ್ಯೆಯ ಪೂರ್ವಿಕರು ಕೇವಲ ಮೂವತ್ತು ಮಂದಿ ಸ್ಪಾನಿಶ್ ದಾಳಿಕೋರರು !


ಹೊಸ ವ್ಯಕ್ತಿತ್ವಕ್ಕಾಗಿನ ಪ್ರಯತ್ನ, ಪ್ರಭಾವ, ಒತ್ತಡಗಳನ್ನು ಅರಗಿಸಿಕೊಳ್ಳುವ ಪ್ರಕ್ರಿಯೆ ನಮ್ಮಲ್ಲಿ ಅಕ್ಷರಶಃ ಭೌತಿಕ. ಇಂದು ಈ ಸಂಕರ ಜನಾಂಗದ ಸಂಖ್ಯೆ ಮೂಲನಿವಾಸಿಗಳಿಗಿಂತಲೂ ಹೆಚ್ಚು ಎಂಬುದೇ ಈ ದುರಂತಕ್ಕೆ ಸಾಕ್ಷಿ.


ಆದರೆ ಭಾರತದಲ್ಲಿ ವಸಾಹತುಶಾಹಿ ಅನುಭವ ಮತ್ತು ಅರಗಿಸಿಕೊಳ್ಳುವಿಕೆ ಮೂಲತಃ ಸಾಂಸ್ಕೃತಿಕ ಸ್ವರೂಪದ್ದು.
ವಸಾಹತುಶಾಹಿ ಪ್ರಕ್ರಿಯೆ ವಿಭಿನ್ನ ಚರಿತ್ರೆಗಳನ್ನು ಸೃಷ್ಟಿಸಿದೆ. ಆದರೆ ಗಾರ್ಸಿಯಾ ಮಾರ್ಕ್ವೆಜ್ ಹೇಳಿದಂತೆ, ಜಾಗತೀಕರಣ ಯುಗದಲ್ಲಿ ನಮ್ಮ ಸಂಸ್ಕೃತಿ, ಜೀವನ ವಿಧಾನಗಳನ್ನು ಸಂರಕ್ಷಿಸಿಕೊಳ್ಳುವ ಹೋರಾಟದ ನೆಲೆ ಭಾರತಕ್ಕೂ ಲ್ಯಾಟಿನ್ ಅಮೆರಿಕಕ್ಕೂ ಒಂದೇ.


ಆದ್ದರಿಂದಲೇ ಈ ಹೋರಾಟದಲ್ಲಿ ನಾವು ಪರಸ್ಪರರನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸುತ್ತಾ, ಅರ್ಥೈಸಿಕೊಳ್ಳುತ್ತಾ, ಬೆಂಬಲಿಸುತ್ತಾಕ್ರಿಯಾಶೀಲರಾಗಬೇಕೇ ಹೊರತು ಮುಂದುವರಿದ ದೇಶಗಳನ್ನು ನಮ್ಮ ಲಕ್ಷ್ಯವಾಗಿಟ್ಟುಕೊಂಡಿರಬಾರದು.
**


ಮುಂದಿನ ಕಂತಿನಲ್ಲಿ ಕೃತಿಯ ಹೃದಯಂಗಮವಾದ ಎರಡು ತುಣುಕುಗಳೊಂದಿಗೆ ಇದನ್ನು ಮುಗಿಸುತ್ತೇನೆ.

Friday, December 5, 2008

ಬೆಂಕಿಯಂಥ ನೆನಪು, ನೆನಪಿನ ಬೆಂಕಿ




ವಿಮರ್ಶೆಯ ಅಹಂಕಾರದಂತೆಯೇ ವಿಮರ್ಶೆಯ ಮೌನವೂ ಅಪಾಯಕಾರಿ. ಒಳ್ಳೆಯ ಕೃತಿಗಳಿಗೆ ಸಕಾಲದಲ್ಲಿ ಸೂಕ್ತ ವಿಮರ್ಶೆ, ಪ್ರಚಾರ ಸಿಗದೆ ಹೋದರೆ ಅವು ಪಡೆಯಬೇಕಾದ ಸ್ಥಾನಮಾನ ಪಡೆಯುವುದೇ ಇಲ್ಲ. ಕೆ.ಪಿ.ಸುರೇಶರ ‘ಬೆಂಕಿಯ ನೆನಪು’ ಇಂಥ ಒಂದು ಕೃತಿ. ಇದು ಪ್ರಕಟವಾಗಿ ಮೂರು ವರ್ಷಗಳಾಗಿವೆ.
ಇದೊಂದು ಅನುವಾದ. ಮೂಲಕೃತಿ ಲ್ಯಾಟಿನ್ ಅಮೆರಿಕಾದ ಉರುಗ್ವೇಯ ಎಡುವರ್ಡೊ ಗೆಲಿಯಾನೊ ಎಂಬವನದು. ಇಲ್ಲಿನ ಹೆಮಿಂಗ್ವೆ, ಮಾರ್ಕ್ವೆಜ್ ಮುಂತಾದ ಪ್ರಖರ ಪ್ರತಿಭೆಗಳ ಮುಂದೆ ಈತ ನಮಗೆ ಕಾಣುವುದೇ ಇಲ್ಲ. ಇದಕ್ಕೂ ‘ಸೆಲೆಕ್ಟಿವ್ ಕ್ರಿಟಿಸಿಸಂ’ ಒಂದು ಕಾರಣ ಇದ್ದೀತು.
ಈತ ಎಂಥ ಅದ್ಭುತ ಪ್ರತಿಭೆ ಎಂದರೆ, ಮೂರನೇ ಜಗತ್ತಿನ ಯಾವ ಲೇಖಕನೂ ಮಾಡದಿದ್ದ ಮಹಾನ್ ಕೆಲಸವೊಂದನ್ನು ಮಾಡಿದ ; ಅದೆಂದರೆ ತನ್ನ ಇಡೀ ಖಂಡದ ಚರಿತ್ರೆಯನ್ನು ಪುನಃ ರಚಿಸಿದ. ಇದು ಮಹಾಕಾವ್ಯಗಳನ್ನು ಬರೆಯುವುದಕ್ಕಿಂತಲೂ ಕಠಿಣವಾದ ಕೆಲಸ. ಯಾಕೆಂದರೆ ಕಾವ್ಯ ಬರೆಯುವುದಕ್ಕೆ ಮುಕ್ಕಾಲು ಪಾಲು ಕಲ್ಪನೆ ಸಾಕು ; ಚರಿತ್ರೆ ಬರೆಯುವುದಕ್ಕೆ ಅಥೆಂಟಿಸಿಟಿ ಬೇಕು.
ಇಷ್ಟರಿಂದ, ಗೆಲಿಯಾನೊ ಇತಿಹಾಸಕಾರನಷ್ಟೇ ಅಂತ ತೀರ್ಮಾನಿಸಿಬಿಟ್ಟೀರಿ ! ಇವನ ಕವಿ, ಕಥನಕಾರ, ಕಾದಂಬರಿಕಾರ, ಪ್ರಬಂಧಕಾರ ಕೂಡ. ಪುರಾಣ ಜಾನಪದಗಳಿಂದ ಕತೆಗಳನ್ನು ಹೆಕ್ಕಿ ತೆಗೆದು ಸುಸಂಬದ್ಧವಾಗಿ ಜೋಡಿಸುವ ಸಂಶೋಧನಕಾರ ಕೂಡ.
ಇವೆಲ್ಲವೂ ಸೇರಿ ಇವನ ‘ಮೆಮೊರೀಸ್ ಆಫ್ ಫೈರ್’ ಎಂಬ ಕೃತಿ ತ್ರಿವಳಿಯನ್ನು ರೂಪಿಸಿವೆ. ಇದರಲ್ಲಿ ಆತ ಲ್ಯಾಟಿನ್ ಅಮೆರಿಕದ ಪುರಾಣ, ಜಾನಪದ ಕತೆಗಳು ಹಾಗೂ ಇತಿಹಾಸ- ವರ್ತಮಾನದ ಘಟನೆ-ವಿವರಗಳನ್ನು ಕಾವ್ಯಾತ್ಮಕವಾಗಿ ದಾಖಲಿಸುತ್ತ ಹೋಗುತ್ತಾನೆ. ಆ ಮೂಲಕ, ಇಡೀ ಖಂಡದ ಪರ್‍ಯಾಯ ಚರಿತ್ರೆಯೊಂದನ್ನು ಕಟ್ಟುತ್ತಾನೆ.
ಮುಂದಿನ ಒಂದೆರಡು ಕಂತುಗಳಲ್ಲಿ ಈ ಕೃತಿಯ ಬಗ್ಗೆ ವಿಸ್ತೃತ ಅವಲೋಕನವನ್ನು ನೀಡುತ್ತೇನೆ. ಅದಕ್ಕೆ ಮುನ್ನ, ಕೃತಿಯ ಮೊದಲ ಭಾಗದಲ್ಲಿ ಬರುವ ಕೆಲವು ಜನಪದೀಯ ಕಥನಗಳ ತುಣುಕುಗಳನ್ನು ಹಾಗೇ ನಿಮ್ಮ ಮುಂದಿಡುತ್ತೇನೆ.
-೧-
ಪ್ರಣಯ
ಅಮೆಜಾನಿನ ಕಾಡಲ್ಲಿ ಮೊದಲ ಹೆಣ್ಣನ್ನು ಮೊದಲ ಗಂಡು ನೋಡಿದ. ಇಬ್ಬರೂ ಪರಸ್ಪರ ಕುತೂಹಲದಿಂದ ವೀಕ್ಷಿಸಿದರು. ತಮ್ಮ ಕಾಲುಗಳ ಮಧ್ಯೆ ಇರುವುದು ವಿಚಿತ್ರವಾಗಿ ಕಂಡಿತು.
"ನಿನ್ನದನ್ನು ಕತ್ತರಿಸಿ ತೆಗೆದದ್ದಾ ?" ಗಂಡು ಕೇಳಿದ.
"ಇಲ್ಲ ಮೊದಲಿಂದಲೂ ಹಾಗೇ..." ಹೆಣ್ಣು ಉತ್ತರಿಸಿದಳು. ಅವನು ಅವಳನ್ನು ಕೂಲಂಕುಷವಾಗಿ ಪರೀಕ್ಷಿಸಿ ತಲೆ ಕೆರೆದುಕೊಂಡ. ಅಲ್ಲೊಂದು ಬಿರಿದ ಗಾಯವಿತ್ತು.
"ಹೂ, ನೋಡು. ಬಿರಿಯೋ ಹಣ್ಣುಗಳನ್ನು ತಿಂದರೆ ಹೀಗಾಗುತ್ತೋ ಏನೋ. ಅಂಥ ಹಣ್ಣುಗಳನ್ನು ತಿನ್ನಬೇಡ. ಈಗ ನೀನು ವಿಶ್ರಾಂತಿ ತೆಗೆದುಕೋ. ಪಥ್ಯ ಮಾಡು. ನಾನು ಔಷ ನೀಡಿ ಗುಣಪಡಿಸ್ತೀನಿ" ಎಂದು ಸಮಾಧಾನಿಸಿದ. ಹೆಣ್ಣು ತಲೆಯಾಡಿಸಿ ಮಂಚದಲ್ಲಿ ಮಲಗಿದಳು. ಗಂಡು ತಾಳ್ಮೆಯಿಂದ, ಬೇರುನಾರು ಅರೆದು ಲೇಪ ಹಚ್ಚಿ ಕಷಾಯ ಕುಡಿಸಿ ಶುಶ್ರೂಷೆ ಮಾಡತೊಡಗಿದ.
ಎಷ್ಟು ದಿನ ಕಳೆದರೂ ಏನೂ ಫಲ ಕಾಣಲಿಲ್ಲ. ಅವಳಿಗೋ ಪಥ್ಯದಿಂದಾಗಿ ಹಣ್ಣು ಹಂಪಲು ನೆನಪಾಗಿ ಬಾಯಲ್ಲಿ ನೀರೂರುತ್ತಿತ್ತು. ಆದರೂ ಗಂಡಿನ ಶ್ರದ್ಧೆ ಕಂಡು ಸುಮ್ಮನಿದ್ದಳು.
ಒಂದು ದಿನ ಆತ ಏದುಸಿರು ಬಿಡುತ್ತಾ ತೊರೆದಾಟಿ ಓಡೋಡಿ ಬಂದು, ‘ನಂಗೊತ್ತಾಯ್ತು, ಗುಣಪಡ್ಸೋದು ಹೇಗೆ ಅಂತ ನಂಗೊತ್ತಾಯ್ತು’ ಎಂದು ಉದ್ವೇಗದಲ್ಲಿ ಕಿರುಚಿದ. ಆಗಷ್ಟೇ ಗಂಡುಕೋತಿ ಹೆಣ್ಣುಕೋತಿಯನ್ನು ಗುಣಪಡಿಸುತ್ತಿರುವುದನ್ನು ಆತ ನೋಡಿದ್ದ.
"ಹೇಗೆ ಗೊತ್ತಾ... ಹೀಗೆ" ಎಂದು ಆತ ಹೆಣ್ಣಿನ ಬಳಿ ಸಾರಿದ. ದೀರ್ಘ ಅಪ್ಪುಗೆ ಕೊನೆಗೊಂಡಾಗ ಗಾಳಿ ತುಂಬಾ ಹೂಗಂಧ. ದೇಹಗಳೆರಡೂ ಹೊಸ ಹೊಳಪಲ್ಲಿ ಥಳಥಳಿಸುತ್ತಿತ್ತು. ಎಲ್ಲ ಅಷ್ಟು ಸುಂದರ. ಸೂರ್‍ಯ ದೇವಾದೇವತೆಗಳಿಗೆಲ್ಲಾ ಇದನ್ನು ಕಂಡು ಸತ್ತೇ ಹೋಗುವಷ್ಟು ಮುಜುಗರವಾಗಿತ್ತು.

Monday, December 1, 2008

ನಾಟಕ, ಶಬ್ದ, ಗುಣ ಇತ್ಯಾದಿ...



ಆಟಿಕೆ ಕೇಳಿದ ಮಗುವಿಗೆ ಆಟಿಕೆ ಅಂಗಡಿಯನ್ನೇ ಕೊಡಿಸಿದಂತೆ, ‘ಶಬ್ದಗುಣ’ದ ಎರಡು ಮತ್ತು ಮೂರನೇ ಸಂಚಿಕೆಗಳನ್ನು ಒಟ್ಟಿಗೇ ತಂದಿದ್ದಾರೆ ವಸಂತ ಬನ್ನಾಡಿ. ಈ ಅರೆವಾರ್ಷಿಕ ಪತ್ರಿಕೆಯ ಮೊದಲ ಸಂಚಿಕೆ ವರ್ಷಗಳ ಹಿಂದೇ ಬಂದಿತ್ತು. ಸಾಹಿತ್ಯ ಪತ್ರಿಕೆಗಳಿಗೆ ಇಂಥ ಬಾಲಗ್ರಹ ಸಹಜ ತಾನೆ.

ಮುಖ್ಯ ವ್ಯತ್ಯಾಸ: ಉಳಿದ ಪತ್ರಿಕೆಗಳು ಸಾಹಿತ್ಯವನ್ನು ಕೇಂದ್ರದಲ್ಲಿಟ್ಟುಕೊಂಡು ಬದುಕಿನ ಬಗ್ಗೆ ಚರ್ಚಿಸುತ್ತವೆ. ಶಬ್ದಗುಣ ರಂಗಭೂಮಿಯನ್ನು ಪ್ರಧಾನವಾಗಿಟ್ಟುಕೊಂಡು ಸಾಹಿತ್ಯ, ಬದುಕಿನ ಸುತ್ತ ಸುತ್ತುತ್ತದೆ. ಸಂಚಿಕೆಗಳು ರಂಗಭೂಮಿ ವಿಚಾರಗಳಿಂದ ತುಂಬಿ ಹೋಗಿವೆ. ಬನ್ನಾಡಿ ನಿರ್ದೇಶಕ ಕೂಡ. ಹಾಗಾಗಿ ಪತ್ರಿಕೆಯನ್ನು ‘ನಾಟಕೀಯವಾಗಿ’ ತಂದಿದ್ದಾರೆ ಎನ್ನಲಡ್ಡಿಯಿಲ್ಲ.

ಎರಡನೇ ಸಂಚಿಕೆಯಲ್ಲಿ ಕೆ.ವಿ.ತಿರುಮಲೇಶರ ಸಂದರ್ಶನ ಎರಡನೇ ಭಾಗವಿದೆ. ಸಾಮಾನ್ಯವಾಗಿ ಸಂದರ್ಶಿತ ವ್ಯಕ್ತಿಗಳು ಓದುಗನಿಂದ ಅಂತರ ಕಾಪಾಡಿಕೊಂಡು ಪ್ರವಾದಿಯ ಸ್ಥಾನದಲ್ಲಿ ನಿಲ್ಲುವುದು ವಾಡಿಕೆ. ಆದರೆ ತಮ್ಮ ಪದಮೋಹ, ಕಾಫ್ಕಾ ಜಗತ್ತು, ಅಲೆಮಾರಿತನ ಇತ್ಯಾದಿ ‘ಕಾಷ್ಠವ್ಯಸನ’ಗಳ ಬಗ್ಗೆ ಮಾತನಾಡಿರುವ ತಿರುಮಲೇಶ್ ಆ ಕಾರಣಕ್ಕೇ ಇಷ್ಟವಾಗುತ್ತಾರೆ.
ವೇದಿಕೆಯ ಮೇಲೆ ಪಾತ್ರಗಳನ್ನು ಕಳುಹಿಸಿ ರಂಗದ ಹಿಂದೆ ಉಳಿಯುವ ನಿರ್ದೇಶಕರ ದರ್ಶನ ನಮಗೆ ದೊರೆಯುವುದು ಕಡಿಮೆ. ಹೀಗಾಗಿ ಇವರು ಯಾವತ್ತೂ ನಮಗೆ ನಿಗೂಢ. ಈ ಸಂಚಿಕೆಗಳಲ್ಲಿ ಇಂಥ ಮೂವರು ನಿರ್ದೇಶಕ ಜೀವಿಗಳ ನಿಗೂಢದ ತೆರೆ ಸರಿದಿದೆ. ಪ್ರಸನ್ನ, ಸುರೇಶ ಆನಗಳ್ಳಿ, ಗೋಪಾಲಕೃಷ್ಣ ನಾಯಿರಿ ಅವರ ವಿಸ್ತೃತ ಸಂದರ್ಶನಗಳು, ವಿವರಗಳ ಮೂಲಕ ಅವರ ಕಾಣ್ಕೆಗಳು ನಮಗೂ ದಕ್ಕುತ್ತವೆ.
ಪ್ರಸನ್ನ ಜತೆಗೆ ರಾಜಶೇಖರ ನಡೆಸಿದ ಸಂವಾದ ರಂಗಭೂಮಿಯನ್ನು ನೆಪವಾಗಿಟ್ಟುಕೊಂಡು ಸಮಕಾಲೀನ ಬದುಕಿನ ಮೇಲೆ ಹಾಯಿಸಿದ ಫ್ಲಾಶ್‌ಲೈಟ್. ರಂಗ ಚಳುವಳಿಗಳು, ಸಮುದಾಯದ ಆಶಯ, ನಿರಾಶೆ, ಗೆಲಿಲಿಯೋ, ಸಾಮಾಜಿಕ ಕಾಳಜಿ, ಹೆಗ್ಗೋಡು, ಚರಕ, ದೇಸೀ ಜೀವನ- ಎಲ್ಲವೂ ಮಾತಿನಲ್ಲಿ ಹೊಳಪು ಪಡೆಯುವ ಬಗೆ ವಿಶಿಷ್ಟ.
‘ತೇಜಸ್ವಿಯವರ ಕಾವ್ಯ ಮೀಮಾಂಸೆ’ಯ ಬಗ್ಗೆ ಡಿ.ಎಸ್.ನಾಗಭೂಷಣರ ತಲಸ್ಪರ್ಶಿ ಲೇಖನ ಸಂಚಿಕೆ ಮೂರರಲ್ಲಿದೆ. ತೇಜಸ್ವಿ ಕಥನಗಾರಿಕೆಯೇ ಅವರ ಕಾವ್ಯ ಮೀಮಾಂಸೆಯೂ ಆಗಿತ್ತು ಎಂದು ಪ್ರತಿಪಾದಿಸುತ್ತ, ಜನಪರ ಚಳುವಳಿಗಳ ಉತ್ಥಾನ- ಅವಸಾನಗಳನ್ನು ತೇಜಸ್ವಿ ಕಥನಕ್ಕೆ ಲಿಂಕ್ ಮಾಡಿ ಒರೆಗೆ ಹಚ್ಚಿರುವುದು ಕುತೂಹಲ ಮೂಡಿಸುತ್ತದೆ.
ಉಳಿದಂತೆ ದಂಡಿಯಾಗಿ ಹೊಸ ಕವಿತೆಗಳು, ಸಂಚಿಕೆಗೊಂದು ಕತೆ, ನಾಟಕ. ನಿಮಗಿಷ್ಟವಾದೀತು.

Friday, October 31, 2008

ಇಳೆಯ ಮೌನ, ಚಳಿಯ ಧ್ಯಾನ


ಬದುಕು ನಡೆಯುವುದು ವೇಗದಿಂದಲ್ಲ , ಸಾವಧಾನದಿಂದ ಎಂಬುದು ಲೋಕಕ್ಕೇ ಗೊತ್ತಾಗುವುದು ವರ್ಷದ ಈ ಕೊನೆಯ ಭಾಗದಲ್ಲಿ. ಇಬ್ಬನಿಗೀಗ ಮುಂಜಾನೆ ಸಂಜೆ ರಾತ್ರಿ ಸುರಿವ ಬಿಡುವಿಲ್ಲದ ಪಾಳಿ. ಮರಗಳು ಮೌನ, ನೆಲ ಮೌನ, ಹನಿ ಮೌನ, ಸೂರ್‍ಯ ಮೌನ, ಮುಗಿಲು ಮೌನ.

ಹಕ್ಕಿ ಗೂಡಿನೊಳಗೂ ಮುಂಜಾನೆಯ ಕಟಕಟ. ನಿತ್ಯ ಬೆಳ್ಳಿ ಮೂಡಿ ಕೊಂಚವೇ ಹೊತ್ತಿಗೆಲ್ಲ ಕವಕವ ಆರಂಭಿಸುತ್ತಿದ್ದ ಕಾಗೆಗಳು ಇನ್ನೂ ಯಾಕೆ ಎದ್ದಿಲ್ಲ ? ಅಂಗಳದಲ್ಲಿ ಹರಡಿದ ಅಡಕೆಯ ಮಧ್ಯೆ ಸುಳಿವ ಹುಳಗಳಿಗಾಗಿ ಹೊಂಚುವ ಕುಪ್ಪುಳು ಹಕ್ಕಿಗೆ ಇನ್ನೂ ಪೊದೆಯೊಳಗಿಂದ ಹೊರಡುವ ಮನಸ್ಸಿಲ್ಲ. ಸೂರಿನಡಿಯ ಗುಬ್ಬಚ್ಚಿ ಗೂಡಿನಲ್ಲಿ ಚಿಂವುಚಿಂವು ದನಿಗೆ ನಿದ್ದೆ ತಿಳಿದೇ ಇಲ್ಲ.

ಚಳಿಗಾಲ. ಜಗತ್ತು ಮೌನವಾಗಿ ಮಲಗಿ ನಿದ್ರಿಸುವ ಕಾಲ. ಕೊರಿಯಾದ ಚಿತ್ರಕಾರನೊಬ್ಬನ ಚಿತ್ರ ಹೀಗಿದೆ : ಒಂದು ಚುಮುಚುಮು ಮುಂಜಾನೆ ಪುಟ್ಟ ಹುಡುಗಿಯೊಬ್ಬಳು ಹರಕು ಕಂಬಳಿ ಹೊದ್ದು ಮುದುಡಿ ಮುದ್ದೆಯಾಗಿ ನಿರ್ಜನ ರಸ್ತೆಯಲ್ಲಿ ಏನನ್ನೋ ಹುಡುಕುತ್ತ ನಡೆಯುತ್ತಿರುವಳು. ಸುತ್ತ ಕವಿದ ಮಂಜು. ದೂರದಲ್ಲಿ ಮಿನುಮಿನುಗು ನಕ್ಷತ್ರಗಳಂತೆ ಪಟ್ಟಣದ ಬೀದಿ ದೀಪಗಳು. ಚುಕ್ಕಿಗಳು, ಕತ್ತಲು, ಮಂಜು. ಚಿತ್ರ ನೋಡುವವರನ್ನೂ ನಖಶಿಖಾಂತ ನಡುಗಿಸುವ ಚಳಿ.

ಚೀನಾದಲ್ಲಿ, ಜಪಾನಿನಲ್ಲಿ, ಇಂಗ್ಲೆಂಡಿನಲ್ಲಿ- ಚಳಿ ಹೇಗಿರುತ್ತದೆ ? ನಮ್ಮೂರಿನ ಚಳಿಯ ಹಾಗೇ ಇರುತ್ತದೆಯೆ ? ಚೀನಾದ ಚೆರ್ರಿ ಗಿಡಗಳ ಅಡಿಯಲ್ಲಿ ಉದುರಿದ ಎಲೆಗಳು, ಲಂಡನ್ನಿನ ಥೇಮ್ಸ್ ನದಿಯ ದಡದಲ್ಲಿ ಇಳಿಜಾರು ಚಾವಣಿಯ ಮೇಲಿನ ಹಿಮರಾಶಿ, ಜಪಾನಿನ ಸಮುರಾಯ್‌ನ ಉಸಿರಿನೊಂದಿಗೆ ಬೆರೆತು ಬರುವ ಮಂಜುಗಾಳಿ... ಅವರ ಬದುಕಿನೊಂದಿಗೆ ತಳುಕು ಹಾಕಿಕೊಂಡಂತೆ ನಮ್ಮ ಬದುಕು, ಜಾನಪದ, ಸಾಹಿತ್ಯ, ಪ್ರೀತಿ ಪ್ರಣಯಗಳಲ್ಲೂ ಚಳಿ ಹಾಸು ಹೊಕ್ಕಾಗಿದೆಯೆ ? ಚಳಿಯನ್ನು ನೆನೆಯುತ್ತ ಇದೆಲ್ಲ ಧ್ಯಾನದೊಳಕ್ಕೆ ಬರುವ ಬಗೆ ಹೇಗೆ !

ಲಾರಾ ಇಂಗೆಲ್ಸ್ ವೈಲ್ಡರ್ ಜೀವನ ಕತೆ ಓದಿದವರಿಗೆ ಗೊತ್ತು. ಚಳಿಯ ಸುಳಿಯಲ್ಲಿ, ಪ್ಲಮ್ ನದಿಯ ತೀರದಲ್ಲಿ, ಪ್ರಯರಿ ಹುಲ್ಲುಗಾವಲಿನಲ್ಲಿ, ಪಾಪಾ, ಮಮ್ಮಿ ಮತ್ತು ಲಾರಾ, ಮತ್ತು ಅಕ್ಕ ಮೇರಿ. ಬೀಸುವ ಹಿಮಗಾಳಿ. ಮುಸುಕುವ ಮಂಜಿನಿಂದ, ಯಮಚಳಿಯಿಂದ ತಪ್ಪಿಸಿಕೊಳ್ಳಲು ನೂರೆಂಟು ಹೊಂಚು ಹಾಕುವ ಜೀವಗಳು. ಬೆಚ್ಚಗಿಡುವ ಬೆಂಕಿಯ ಗೂಡಿಗೂ ಥಂಡಿ. ಹೊರಬಂದರೆ ಹಿಸುಕಿ ಸಾಯಿಸಲು ಕಾದಿರುವ ಚಳಿಗಾಳಿ. ಒಳಗೆ ಬದುಕಿನ ಹೋರಾಟ, ಹಾಡು, ಕತೆ.

ಈ ಹೋರಾಟ ಈಗಲೂ ನಿಜವಲ್ಲವೆ. ಇಂಥ ಚಳಿಯಲ್ಲಿ ಬೆಚ್ಚಗಿರುವ ಭಾಗ್ಯ ಎಷ್ಟು ಮಂದಿಗೆ ? ನಡುಕದಿಂದಲೇ ಸಾಯುವ ಮಂದಿ ಅದೆಷ್ಟಿಲ್ಲ. ಚಳಿ ಬದುಕಿಗೆ ಸವಾಲು ಹಾಕುತ್ತದೆ. ಬದುಕು, ಉಳಿಯುವ ಛಲದಿಂದ ಚಳಿಯನ್ನು ಎದುರಿಸುತ್ತದೆ.

ಮಲೆನಾಡಿನ ಚಳಿಗೆ ಅದರದೇ ಸೌಂದರ್‍ಯ. ಚಳಿ ಲೆಕ್ಕ ಹಾಕುವ ಕ್ರಮವೇ ಸೊಗಸು : ಒಂದು ಕಂಬಳಿ ಚಳಿ, ಎರಡು ಕಂಬಳಿ ಚಳಿ, ಮೂರು ಕಂಬಳಿ ಚಳಿ. ಇಷ್ಟು ಹೊತ್ತಿಗೆ ರಾಜಸ್ಥಾನದಿಂದ ಕಂಬಳಿ ಮಾರುತ್ತ ಬರುವ ಭಯ್ಯಾಗಳೂ ಪ್ರತ್ಯಕ್ಷ. ಅಡಕೆ ಸಿಪ್ಪೆ, ತೆಂಗಿನ ಸಿಪ್ಪೆ ಹಾಕಿ ಹೊಗೆಯೆಬ್ಬಿಸಿ, ನುಸಿ ಓಡಿಸಿ ಮನೆತುಂಬಾ ತುಂಬಿಕೊಳ್ಳುವ ಬೆಚ್ಚಗಿನ ಘಾಟು ಅಗ್ಗಿಷ್ಟಿಕೆಯೊಂದೇ ಈಗ ಪರಿಹಾರ. ಒಯ್ಯಪ್ರೆಯ ಈಜಿಚೇರಿನಲ್ಲಿ ಕೂತು ತೂಕಡಿಸುವ ಅಜ್ಜಯ್ಯನನ್ನೂ ಅದು ಬೆಚ್ಚಗಿಟ್ಟಿದೆ. ಬೆಳಕಿಗೆ ಪುಳಕಗೊಂಡು ಬಳಿಗೆ ಬಂದ ಹಾತೆಗಳು ಬೆಂಕಿಯಲ್ಲಿ ಕರಕಲಾಗುತ್ತಿವೆ.

ಸುತ್ತ ಕುಳಿತವರ ಕಣ್ಣಿನಲ್ಲಿ ಅದೆಷ್ಟು ಅಗ್ಗಿಷ್ಟಿಕೆಗಳು ಕುಣಿಯುತ್ತಿವೆ. ಒಂದೊಂದೇ ಕತೆಗಳು ಚಳಿ ಕಾಯಿಸುತ್ತಿರುವ ಒಕ್ಕಲಿನ ಕೆಲಸದವರ ಬಾಯಿಯಿಂದ ಹೊರಹೊಮ್ಮುತ್ತಿವೆ- ಚಳಿಗಾಲದ, ಮಳೆಗಾಲದ, ಥಂಡಿಯ, ಕಾಡಿನ ಕತೆಗಳು. ಮಲೆನಾಡಿನ ನಿಗೂಢ ಮಲೆಕಾನನಗಳಲ್ಲಿ ಅಲೆದು ಬಂದ ರರು ಅವರು. ಇಂಥ ಅದೆಷ್ಟು ‘ಐತ’ರು ಅದೆಷ್ಟು ‘ಪೀಂಚಲು’ಗಳನ್ನು ಮಲೆಗಳಲ್ಲಿ ನಡೆಸಿ ತಮ್ಮ ಬಿಡಾರಕ್ಕೊಯ್ದಿಲ್ಲ ! ಹುಲಿಗೂ ಹೆದರದ ‘ಹುಲಿಯ’ ಹೆಸರಿನ ನಾಯಿಗಳದೆಷ್ಟು ! ಆ ಕತೆಗಳನ್ನು ಬೆಂಕಿಯ ಬೆಳಕಿನಲ್ಲಿ ಕುಳಿತು ಐತ ಹೇಳಬೇಕು, ಕೇಳಿಸಿಕೊಳ್ಳುತ್ತ ಸೆರಗಿನ ಮರೆಯಲ್ಲಿ ಪೀಂಚಲು ನಗಬೇಕು. ಮಕ್ಕಳು ಕೇಳಬೇಕು.

ಕತೆಗಳನ್ನು ಹೇಳುವುದಕ್ಕೂ ಕೇಳುವುದಕ್ಕೂ ಇದು ಸಕಾಲ. ಪುಟ್ಟ ಮಕ್ಕಳನ್ನು ಮಡಿಲಲ್ಲಿ ಮಲಗಿಸಿಕೊಂಡಿರುವ ಕೃಶ ಶರೀರದ ಅಜ್ಜಿಯ ಒಡಲಿನಲ್ಲಿ ಅಷ್ಟೊಂದು ಕತೆಗಳೆಲ್ಲಿದ್ದವೊ ! ಕತೆ ಕೇಳುತ್ತ ಕೇಳುತ್ತ ಮಕ್ಕಳು ನಿದ್ದೆಯ ಮಡಿಲು ಸೇರುವಾಗ ಅಜ್ಜಿ ತುಟಿಗೆ ಬಂದ ಇನ್ನೊಂದಷ್ಟು ಕತೆಗಳನ್ನು ನಾಳೆಗೆ ಎತ್ತಿಟ್ಟುಕೊಳ್ಳುತ್ತಾಳೆ.

ಇಂಥ ನಾಳೆಗಳು ಬರುತ್ತಲೇ ಇರುತ್ತವೆ. ಕತೆಗಳು ಮಾಯಾಮೋಹಕ ಜಗತ್ತೊಂದನ್ನು ನಿರ್ಮಿಸುತ್ತಲೇ ಇರುತ್ತವೆ. ಮಕ್ಕಳ ಅಂತರಂಗದ ನೆರಳಿನಲ್ಲಿ ಬೆಳಕಿನ ಛಾಯಾಜಗತ್ತೊಂದು ತನ್ನನ್ನು ಕಟ್ಟಿಕೊಳ್ಳುತ್ತ ಬೆಳೆಯುತ್ತಿರುತ್ತದೆ.

ಮಾಂತ್ರಿಕ ವಾಸ್ತವವಾದದ ಹರಿಕಾರ ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ ಹೇಳುತ್ತಾನೆ : ಈ ಕತೆಗಳನ್ನು ಹೆಣೆಯಲು ನಾನು ಅಷ್ಟೇನೂ ಕಷ್ಟಪಟ್ಟಿಲ್ಲ. ನನ್ನಜ್ಜಿಗೆ ಇದು ಸಹಜವಾಗಿತ್ತು. ಆಕೆ ಇಂಥ ಕತೆಗಳ ಸಾಗರವೇ ಆಗಿದ್ದಳು. ಹಬ್ಬಿದ ಕರ್ರಗಿನ ಕತ್ತಲು ಮತ್ತು ದೆವ್ವದಂಥ ಚಳಿಯ ಮಧ್ಯೆ ಆಕೆ ಕತೆಗಳ ಲೋಕ ಕಟ್ಟುತ್ತ ಅದರೊಳಕ್ಕೆ ನಮ್ಮನ್ನು ಒಯ್ಯುತ್ತ ಸಮ್ಮೋಹನಗೊಳಿಸುತ್ತಿದ್ದಳು.

ಕತೆಯೊಂದು ಅಂತರಂಗದಲ್ಲಿರುತ್ತದೆ. ನಡುಗಿಸುತ್ತದೆ. ನಡುಗುವ ಚಳಿಗೆ ಗರ್ಭದಲ್ಲೇ ನಡುಗುತ್ತ ಮಿಡುಕುತ್ತ ಬೆಳೆಯುತ್ತದೆ. ಬೆಳಕು ಸಿಕ್ಕಿದೆಡೆ ಬಾಗಿ ಹೊರಚಾಚುತ್ತದೆ. ಚಳಿಗಾಲದ ಬೆಳಕೂ ಚಳಿಯ ಹಿಡಿತದಲ್ಲಿರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹುಟ್ಟುವ ಕತೆ ಮಧುರವಾಗಿರುತ್ತದೆ. ಚಳಿಯಲ್ಲಿ ಹುಟ್ಟುವುದು ಸೃಷ್ಟಿಯ ಕತೆ, ಬೆಳವಣಿಗೆಯ ಕತೆ.

ಬೇಸಿಗೆಯಲ್ಲಿ, ಉರಿವ ಸೆಖೆಯಲ್ಲಿ ಎಂಥ ಕತೆ ಹುಟ್ಟುತ್ತದೆ ಗೊತ್ತೆ ? ಆಲ್ಬರ್ಟ್ ಕಾಮೂನ ‘ಔಟ್‌ಸೈಡರ್’ನ ಕಥಾನಾಯಕ (ಅಥವಾ ದುರಂತನಾಯಕ?) ಉರಿವ ಬೇಸಗೆಯಲ್ಲಿ ಬೆವರುತ್ತ, ಸೆಕೆಗೆ ಬೆಂಕಿಯಾಗಿ, ಒಬ್ಬ ವ್ಯಕ್ತಿಯ ಕೊಲೆ ಮಾಡುತ್ತಾನೆ- ಉದ್ದಿಶ್ಯವಿಲ್ಲದೆ.

ಆದರೆ ಚಳಿಯಲ್ಲಿ ಚಿಗುರುವುದು ಸೃಷ್ಟಿಯ ಕಥಾನಕ. ಹೌದೋ ಅಲ್ಲವೋ ನವದಂಪತಿಗಳನ್ನು ಕೇಳಿ !

ಚಳಿ ಪ್ರೀತಿಯನ್ನು ಕಲಿಸುವ ರೀತಿ ನೋಡಿ. ಪುಟ್ಟ ಕಂದಮ್ಮಗಳನ್ನು ಅಮ್ಮ ಅಪ್ಪಿಕೊಂಡು ಬೆಚ್ಚಗಿಡುವುದು, ಮೊಮ್ಮಕ್ಕಳನ್ನು ಅಜ್ಜಿ ಅವಚಿಕೊಂಡು ರಕ್ಷಿಸುವುದು, ಗೂಡಿನ ಪೊಟರೆಗೆ ಪುಕ್ಕ ಅಡ್ಡವಿಟ್ಟು ತಾಯಿ ಹಕ್ಕಿ ಮರಿಗಳನ್ನು ಒತ್ತಿಕೂತು ಬೆಚ್ಚಗೆ ಕಾಪಾಡುವುದು, ಒಪ್ಪಿಕೊಂಡ ಪ್ರೇಮಿಗಳು ಹಗಲೂರಾತ್ರಿ ಅಪ್ಪಿಕೊಂಡು ಚಳಿಯನ್ನು ಸೆಲೆಬ್ರೇಟ್ ಮಾಡುವುದು....

ಪ್ರೀತಿಯನ್ನು ಬೆಚ್ಚಗೆ ಉಳಿಸುವ ಈ ಚಳಿಗೆ ಶರಣು.

(೨೦೦೫ ಡಿಸೆಂಬರ್ ೧೮ರ ವಿಜಯಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ)

Tuesday, October 21, 2008

ಕೆಲವು ‘ನೀಲು’ಗಳು

ಈ ಕೆಳಗಿನ ಪದ್ಯಗಳನ್ನು ಬರೆದ ನಂತರ ಅನ್ನಿಸಿದ್ದು : ಇವುಗಳನ್ನು ಬರೆಯದೇ ಇದ್ದರೂ ನಡೆಯುತ್ತಿತ್ತು. ಯಾಕೆಂದರೆ ಈ ಪದ್ಯಗಳ ಅಕ್ಷರಕ್ಷರದಲ್ಲೂ ನೀಲು ಕಾಣಿಸುತ್ತಾಳೆ. ಲಂಕೇಶ್ ಕಾಣಿಸುತ್ತಾರೆ. ಡಿಲೀಟ್ ಮಾಡಲೇ ಅಂತ ಯೋಚಿಸಿದೆ. ಆಮೇಲೆ, ನನ್ನ ತಲೆಮಾರಿನ ಯಾವ ಲೇಖಕನೂ ಲಂಕೇಶರ ಪ್ರಭಾವ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವುದು ಹೊಳೆಯಿತು. ಹಾಗೆಂದೇ ಇವಕ್ಕೆ ‘ನೀಲುಗಳು’ ಅಂತ ಕರೆದಿದ್ದೇನೆ.

-೧-
ಹೂಗಳ ಮುಗ್ಧ ಚೆಲುವು
ಮತ್ತು ಎರಗಿ, ಹೀರಿ, ಸುಖಿಸುವ
ಚಿಟ್ಟೆಯ ವ್ಯಭಿಚಾರಗಳೇ
ಕಾಯಿ, ಹಣ್ಣು, ಬೀಜಗಳ ಹುಟ್ಟಿಗೆ ಕಾರಣ

-೨-
ವಿಲಾಸಿ ತರುಣಿ ಕಾಲೂರಿ
ಪಾಪ ನಿವೇದನೆ ಮಾಡಿಕೊಳ್ಳುತ್ತಿರಲು
ಮುದಿ ಸನ್ಯಾಸಿಯ
ಕಾಮವೂ ಕೆರಳುವುದು

-೩-
ಏನನ್ನೂ ಕೆರಳಿಸದ
ನಿಚ್ಚಳ ಬೆಳಕಿನ
ಜಡ ರೂಪಕ್ಕಿಂತ
ಕತ್ತಲ ಕೋಣೆಯ
ಸ್ಪರ್ಶ, ಗಂಧಗಳೇ ಜೀವಂತ

-೪-
ರಾಜ್ಯಗಳನ್ನು ಗೆಲ್ಲಲಾಗದ
ಚಕ್ರವರ್ತಿಯ ಅವಮಾನ
ಸಂಗಾತಿಯ ಹೃದಯ ಗೆಲ್ಲಲಾಗದ
ತರುಣನ ಪರಿತಾಪಕ್ಕಿಂತ
ದೊಡ್ಡದೇನಲ್ಲ

Tuesday, October 14, 2008

ಹೆಗ್ಗೋಡಿನ ಬೆಳಗಿನಲ್ಲೊಂದು ಸ್ವಗತ

ಆಹಾ ಇಂಥ ಇಬ್ಬನಿ ಸುರಿಯುತ್ತ ಮೈ ಮರೆಯುತ್ತ ಹೀಗೇ ಓಡಾಡುತ್ತ ಇರುವುದಾದರೆ ವರ್ಷದ ಮುನ್ನೂರ ಅರುವತ್ತ ಐದು ದಿನವೂ ಸಂಸ್ಕೃತಿ ಶಿಬಿರ ಇರಬಾರದೇ ಅಂದುಕೊಳ್ಳುತ್ತ ಇನ್ನೂ ಬಿಸಿಲು ಬಿದ್ದಿರದ ಇಬ್ಬನಿಯಲ್ಲಿ ನೆನೆದು ಒದ್ದೆಯಾಗಿದ್ದ ರಸ್ತೆಯ ಮೇಲೆ, ಸುತ್ತಮುತ್ತಲಿನ ಕಾಡಿನ ನಿಗೂಢದಿಂದ ನೂರಾರು ಹಕ್ಕಿಗಳು ಎಂಪಿತ್ರೀ ಹಚ್ಚಿ ತಮ್ಮ ಗಾಯನದಿಂದ ಒದ್ದೆಯಾಗಿಸಿದ್ದ ಮನಸ್ಸನ್ನು ಹೊತ್ತು ಹಾಗೇ ಓಡಾಡುತ್ತಿದ್ದೆ. ಹೆಗ್ಗೋಡು ಇನ್ನೂ ಬೆಳಗಿನ ಮಂಪರಿನ ಸುಖದಲ್ಲಿ ಮುದುಡಿತ್ತು.

“ಬೆಳಗ್ಗೆ ಬೇಗ ಎದ್ದು ಬಾ, ವಾಕಿಂಗ್ ಹೋಗುವ" ಎಂದಿದ್ದ ಗೆಳತಿ ತನ್ನ ಬೆಡ್‌ನಲ್ಲಿ ಹೊದಿಕೆಯನ್ನೂ ಕನಸುಗಳನ್ನೂ ಹೊದ್ದುಕೊಂಡು ಗಡದ್ದಾಗಿ ನಿದ್ದೆ ಹೋಗಿದ್ದಳು. ನಾನೊಬ್ಬನೇ ಆ ಬೆಳಗಿನ ಮೌನಕ್ಕೂ ಇಬ್ಬನಿ ತಬ್ಬಿದ ರೆಂಬೆಕೊಂಬೆಗಳಿಗೂ ಜೇಡರ ಬಲೆಗಳಿಗೂ ಹೊಸ ಹಾಡುಗಳನ್ನು ಹೊಟ್ಟೆಯೊಳಗೆ ಬಚ್ಚಿಟ್ಟುಕೊಂಡಿರುವ ಹಕ್ಕಿಗಳ ಗುಟ್ಟುಗಳಿಗೂ ಉತ್ತರಾಕಾರಿ ಅಂತ ಭಾವಿಸುತ್ತಾ ಕಾಲು ಹಾಕುತ್ತಿದ್ದಾಗ ನಿಧಾನವಾಗಿ ಒಬ್ಬೊಬ್ಬರೇ ಎದ್ದು ವಾಕಿಂಗ್‌ಗೆ ಬರತೊಡಗಿದ್ದರು.

ಅಷ್ಟರಲ್ಲಿ ಕಟ್ಟಡ ಸಾಲಿನ ಈಚೆ ತುದಿಯ ಕೊಠಡಿಯ ಬಾಗಿಲು ತೆಗೆದು ಇಬ್ಬರು ಹೆಣ್ಣುಮಕ್ಕಳು ವಾಕಿಂಗ್ ಹೊರಟದ್ದು ಕಾಣಿಸಿತು. ಹೂಹೂಗಳ ಚೂಡಿದಾರ ಹಾಕಿಕೊಂಡ ಎಸ್ತರ್ ಅನಂತಮೂರ್ತಿ ಊದಾ ಬಣ್ಣದ ದಪ್ಪದ ಶಾಲು ಹೊದ್ದುಕೊಂಡು ಅದನ್ನು ತಲೆಗೂ ಎಳೆದುಕೊಂಡು ಶಾಪಗ್ರಸ್ತ ದೇವತೆಯಂತೆ ರಸ್ತೆಯ ಒಂದು ಬದಿಯಲ್ಲಿ ಹಾಗೇ ಕಾಲು ಹಾಕತೊಡಗಿದ್ದರು. ಅವರ ಜತೆಗೆ ಅವರ ಮಗಳು, ವಿವೇಕ ಶಾನಭಾಗರ ಪತ್ನಿ, ಅವರ ಹೆಸರು ನನಗೆ ಗೊತ್ತಿಲ್ಲ- ಕೂಡ ಅಮ್ಮನ ಜತೆಗೆ ನಡೆಯತೊಡಗಿದ್ದರು. ಅವರನ್ನು ನೋಡುತ್ತ ನೋಡುತ್ತ ನಾನು ಹಾಗೇ, ಇವರಿಬ್ಬರೂ ನಿನ್ನೆ ಅನಂತಮೂರ್ತಿ ಮಾಡಿದ ಭಾಷಣವನ್ನು ಈಗ ನೆನೆಯುತ್ತಿರಬಹುದೆ, ಅಥವಾ ಅರ್ಥವಾಗದ, ಇಂಥ ಮುಂಜಾನೆಗಳಲ್ಲಿ ಮಾತ್ರ ಮನಸ್ಸನ್ನು ಕಾಡುವ ಮುಗ್ದ ಭಾವಗಳು ಅವರೊಳಗೆ ಆಡುತ್ತಿರಬಹುದೆ, ಇಂಥ ಪುಳಕಿತಗೊಳಿಸುವ ಮುಂಜಾವಿನಲ್ಲಿ ಅನಂತಮೂರ್ತಿ ಕೂಡ ಹಿಂದೊಮ್ಮೆ ತಮ್ಮ ಪತ್ನಿಯ ಜತೆಗೂ ಮಗಳ ಜತೆಗೂ ವಾಕಿಂಗ್ ಹೋಗಿರಬಹುದೆ, ಆಗಲೂ ಅವರು ಸಾಹಿತ್ಯದ ಬಗ್ಗೆ ಮಾತಾಡಿರಬಹುದೆ ಎಂದೆಲ್ಲಾ ಮಳ್ಳನಂತೆ ಯೋಚಿಸುತ್ತಿದ್ದೆ.

ಸಾಲದ್ದಕ್ಕೆ ಹಿಂದಿನ ಸಂಜೆ ಕೊನೆಯ ಗೋಷ್ಠಿಯಲ್ಲಿ ಅನಂತಮೂರ್ತಿ ಮಾತಾಡಿ ಮಾತಾಡಿ ಇನ್ನೂ ಮಾತಾಡುತ್ತಿದ್ದಾಗ ಅವರ ಮಗಳು “ಅಪ್ಪಾ ಮಾತಾಡಿದ್ದು ಸಾಕು, ಎಲ್ಲರಿಗೂ ತಿಂಡಿಗೆ ಹೊತ್ತಾಗುತ್ತಿದೆ" ಅಂತ ಚೀಟಿ ಕಳಿಸಿ, ಅದನ್ನು ಅನಂತಮೂರ್ತಿ ಜೋರಾಗಿ ಓದಿ ನಕ್ಕು, ಆ ನಗುವಿನಲ್ಲಿ ಜ್ಞಾನಪೀಠಿಯೊಬ್ಬರ ಸಂಸಾರದ ಸುಖ ಪರವಶ ಗಳಿಗೆಯೊಂದು ಹಾದು ಹೋದಂತೆ ಕಂಡುಬಂದದ್ದು ಇನ್ನೂ ನನ್ನ ತಲೆಯಲ್ಲಿ ಕುಳಿತಿತ್ತು.

ಅದರ ಹಿಂದಿನ ದಿನ ಒಂದು ಗೋಷ್ಠಿಯಲ್ಲಿ ಕತೆಗಾರ್ತಿ ವೈದೇಹಿ ಮಾತನಾಡಿದ್ದು ಕೇಳಿ ನನಗೆ ಕಣ್ಣೀರು ಬಂದುಬಿಟ್ಟಿತ್ತು. ಅವರು ಸಹಜವಾಗಿ ಯಾವ ಸೋಗುಗಳಿಲ್ಲದೆ ಅಟ್ಟುಂಬಳದಲ್ಲಿ ಕೂತ ಅಕ್ಕಳೊಬ್ಬಳು ತಮ್ಮ ಮುಂದೆ ಕುಳಿತ ತಮ್ಮಂದಿರು ತಂಗಿಯಂದಿರ ಮುಂದೆ ಹಜಾರದಲ್ಲಿ ಕುಳಿತ ಗಂಡಸರ ಕಿವಿಗೂ ಬೀಳುವ ಹಾಗೆ ಮನಸ್ಸು ತೆರೆದುಕೊಂಡಂತೆ ಮಾತನಾಡಿದ್ದರು. ‘ಕನ್ನಡ ಕಾವ್ಯದಲ್ಲಿ ಸ್ವಂತಿಕೆ’ ಎಂಬ ಆ ಗೋಷ್ಠಿಯಲ್ಲಿ ಮಾತನಾಡಲು ಇದ್ದದ್ದೇ ಇಬ್ಬರು. ಅವರಿಗಿಂತ ಮೊದಲು ಮಾತನಾಡಿದ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡುತ್ತ ಮಾತನಾಡುತ್ತ ವೈದೇಹಿಗೆ ಸಮಯವೇ ಉಳಿಯದಂತೆ ಮಾಡಿಬಿಟ್ಟಿದ್ದರು.

ಆ ಮೇಲೆ ಮಾತನಾಡಿದ ವೈದೇಹಿ, ನನಗೆ ಸಮಯವೇ ಇಲ್ಲ ಎಂದು ಪೇಚಾಡುತ್ತ, ಚಿಕ್ಕಂದಿನಲ್ಲಿ ತಮ್ಮಂಥ ಹುಡುಗಿಯರನ್ನು ಹೇಗೆ ಅಡುಗೆ ಮನೆಗೆ ಸೀಮಿತ ಮಾಡಲಾಗುತ್ತಿತ್ತು, ಅದರಿಂದ ತಾವು ಅಡುಗೆಗೆ ಮಾತ್ರ ಲಾಯಕ್ಕೇನೋ ಎಂಬ ಭಾವ ಗಟ್ಟಿಯಾಗುತ್ತಿದ್ದುದು, ತಮ್ಮ ತಾಯಿ ‘ತಲ್ಲಣಿಸದಿರು ಕಂಡ್ಯ...’ ಎಂಬ ದಾಸರ ಪದವನ್ನು ಪದೇ ಪದೇ ಹಾಡುತ್ತಿದ್ದುದು, ಕೆಲಸದ ನಡುವೆ ಹಾಡು ಹುಟ್ಟುತ್ತಿದ್ದುದು ಇತ್ಯಾದಿಗಳನ್ನು ನೆನೆದುಕೊಂಡರು. ಅದನ್ನೆಲ್ಲ ಹೇಳುತ್ತ ಅವರು ಭಾವುಕರಾದರೋ ಇಲ್ಲವೋ, ನನಗಂತೂ ಕಸಿವಿಸಿಯೇ ಆಗಿಬಿಟ್ಟಿತು. ಗೋಷ್ಠಿಯ ನಂತರ ಸಿಕ್ಕಿದ ಸಕಲೇಶಪುರದ ಉಮಾಪ್ರಸಾದ ರಕ್ಷಿದಿ, “ವೈದೇಹಿ ಮಾತನಾಡಲು ಹೊರಟರೆ ನಮಗೆ ಅರಿವೇ ಇಲ್ಲದ ಹಾಗೆ ಮನಸ್ಸಿನಲ್ಲಿ ಪಾಪಪ್ರಜ್ಞೆ ಮೂಡಿಬಿಡುತ್ತದೆ ಮಾರಾಯ" ಎಂದಿದ್ದರು.

ಹಾಗೇ ನಡೆಯುತ್ತಾ, ನಾನು ಆಗಾಗ ಗೆಳತಿಯ ಕೆನ್ನೆ ಚಿವುಟುವುದು ಇತ್ಯಾದಿ ಮಾಡುತ್ತೇನಲ್ಲ ಆಗ ಯಾಕೆ ನನಗೆ ಪಾಪಪ್ರಜ್ಞೆ ಕಾಡುವುದಿಲ್ಲ ಎಂದು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆ. ಈ ಬೆಳಗಿಗೂ ಪಾಪಪ್ರಜ್ಞೆಗೂ ಯಾವ ಸಂಬಂಧವೂ ಇರುವಂತೆ ಕಾಣಲಿಲ್ಲ.

ಈ ಬೆಳಗಿನ ಇಬ್ಬನಿಯ ವಾಕಿಂಗಿನ ಸುಖ, ಸಂಜೆ ಚುಮುಚುಮು ಚಳಿಯ ನಡುವೆ ಪುರಿ ತಿನ್ನುತ್ತ ನಾಟಕಗಳನ್ನು ನೋಡುವ ಸುಖ ನೀನಾಸಂನ ಇತರ ಗೋಷ್ಠಿಗಳಿಗೂ ಇರಬಾರದೇ ಎಂದು ಮನಸ್ಸು ಹಲುಬುತ್ತ ಹಂಬಲಿಸುತ್ತಿತ್ತು. ಆದರೆ ಅಲ್ಲಿದ್ದ ಯಾರಿಗೂ ನಮ್ಮಂಥ ಮುಗ್ದರ, ಮಳ್ಳರ ಮೇಲೆ ಕರುಣೆಯೇ ಇರುವಂತೆ ಕಾಣುತ್ತಿರಲಿಲ್ಲ. ಬೆಳಗು ಹತ್ತು ಗಂಟೆಯಾಗಿ ಶಿಬಿರದ ಕಾರ್‍ಯಕ್ರಮದಲ್ಲಿ ಹೋಗಿ ಕುಳಿತರೆ ಸಾಕು, ಒಬ್ಬನಲ್ಲಾ ಒಬ್ಬ ಚಿಂತಕ ಭಯಂಕರವಾದ ಭಾಷಣದಿಂದ ನಮ್ಮನ್ನೆಲ್ಲ ಚಚ್ಚುತ್ತಿದ್ದ. ಅದು ಯಾವ ಪರಿ ಆಲಿಕಲ್ಲಿನ ಮಳೆಯಂತೆ ನಮ್ಮ ಮೇಲೆ ಪ್ರಹರಿಸುತ್ತಿತ್ತೆಂದರೆ, ಅಲ್ಲಿ ಕೂರಲೂ ಆಗದೆ ನಿಲ್ಲಲೂ ಆಗದಂತೆ ಮಾಡಿಬಿಡುತ್ತಿತ್ತು.

ಈಗ ಇದನ್ನೆಲ್ಲ ನೆನೆಯುತ್ತ ಬೆಂಗಳೂರಿನ ಹವೆಯಲ್ಲಿ ಕುಳಿತಿದ್ದೇನೆ. ನೆನೆವುದೆನ್ನ ಮನಂ ಹೆಗ್ಗೋಡಿನ ಮುಂಜಾವವಂ.

Wednesday, October 1, 2008

ಅಂತಿಮ ಸತ್ಯ


ಅವರು ಆ ಪುಟ್ಟ ಬಾಲಕನ ಮುಖ ನೋಡಿದರು


ಯಾವ ಚಿಹ್ನೆಗಳೂ ಬರೆದಿರಲಿಲ್ಲ



ಕೈ ತೋಳುಗಳ ನೋಡಿದರು


ಯಾವ ಹಚ್ಚೆಯೂ ಹಾಕಿರಲಿಲ್ಲ



ಮಾತನಾಡಿಸಿದರು, ಅವನ ಭಾಷೆ ತಿಳಿಯಲು


ಅವನು ಮೂಕನಾಗಿದ್ದ


ಅವನ ನಾಲಗೆಯಲ್ಲಿ ಕಬಕಬಕಬ ಎಂಬುದಲ್ಲದೆ


ಬೇರೆ ಪದವಿರಲಿಲ್ಲ



ಕೊನೆಗೆ ಉಳಿದದ್ದು ಒಂದೇ ಉಪಾಯ


ಅವನ ಚಡ್ಡಿ ಬಿಚ್ಚಿಸಿ ನೋಡಿದರು


ಅಲ್ಲಿ ಕಂಡದ್ದು ಅಂತಿಮವೆಂಬ ಭರವಸೆ ಅವರಿಗಿರಲಿಲ್ಲ



ಚಾಕು ಚೂರಿ ಬಡಿಗೆಗಳ ಝಳಪಿಸುತ್ತ


ಅವರು ಮುಂದುವರಿದರು


ಗೊಂದಲ ಮುಗಿದಿರಲಿಲ್ಲ

Friday, September 19, 2008

ಒಲಿಂಪಿಕ್‌ನಲ್ಲಿ ಕಾಣದ ಭಾಮಿನಿಯರು





ಹಿಂಸೆ ದುರ್ಬಲರ ಅಸ್ತ್ರ ಅಂತ ಮಹಾತ್ಮರು ತುಂಬ ಹಿಂದೆಯೇ ಹೇಳಿದ್ದರು ; ಆದರೆ ಹಿಂಸೆ ಯಾವಾಗಲೂ ದುರ್ಬಲರ ಅಸ್ತ್ರವೇನಲ್ಲ. ಅದು ಅಕಾರದಲ್ಲಿರುವವರು ತಮ್ಮಿಂದ ಕೆಳಗಿರುವವರ ಮೇಲೆ ಅಪತ್ಯ ಸ್ಥಾಪಿಸಲು ; ಸಾಮಾಜಿಕವಾಗಿ ಸ್ಥಾಪಿತ ಸ್ಥಾನದಲ್ಲಿರುವವರು ಇತರರ ಮೇಲೆ ಹಿಡಿತ ಸಾಸಲು ಬಳಕೆಯಾಗುವುದೂ ಹೌದು. ಇದಕ್ಕೆ ಅತಿ ಸುಲಭವಾಗಿ ದೊರೆಯುವ ಉದಾಹರಣೆ ಗಂಡು ಹೆಣ್ಣಿನ ಮೇಲೆ ಸಾಸುವ ಆಡಳಿತ ಮತ್ತು ಅದನ್ನು ಹೊಂದಲು ಪ್ರಯೋಗಿಸುವ ನಾನಾ ಬಗೆಯ ಹಿಂಸೆಗಳು.
ಈ ಹಿಂಸೆಯ ಅನೇಕ ಮುಖಪರದೆಗಳನ್ನು ಸರಿಸುವ ಎರಡು ಪುಸ್ತಕಗಳನ್ನು ಮೇಫ್ಲವರ್ ಮೀಡಿಯಾ ಹೌಸ್‌ನ ಪ್ಯಾಪಿರಸ್ ಪ್ರಕಾಶನ ಪ್ರಕಟಿಸಿದೆ. ಒಂದು- ಲೀಲಾ ಸಂಪಿಗೆಯ ‘ಒಲಿಂಪಿಕ್ಸ್ ಎಂಬ ಕೆಂಪು ದೀಪ’, ಇನ್ನೊಂದು ಚೇತನಾ ತೀರ್ಥಹಳ್ಳಿಯ ‘ಭಾಮಿನಿ ಷಟ್ಪದಿ’.
ಆಧುನಿಕ ಸ್ತ್ರೀ ಉದ್ಯೋಗ ಹಾಗೂ ಮನೆ ಎರಡರಲ್ಲೂ ತನ್ನ ಅಸ್ತಿತ್ವ ಸಾಸಲು ಗಂಡಸಿಗಿಂತ ಹಲವು ಪಟ್ಟು ಹೆಣಗಬೇಕಾಗಿ ಬಂದಿರುವುದು ; ಉಪಭೋಗವಾದದ ವಿಜೃಂಭಣೆಯ ಹಿನ್ನೆಲೆಯಲ್ಲಿ ಆಕೆ ಒಂದು ಸರಕಾಗಿ ಮಾರ್ಪಟ್ಟಿರುವುದು ; ಹೆಸರಿಗೆ ಎಲ್ಲ ಬಗೆಯ ರಕ್ಷಣೆಗಳಿದ್ದರೂ ನಿಜಕ್ಕೂ ಆಕೆಗೆ ಯಾವ ರಕ್ಷಣೆಗಳೂ ಇಲ್ಲದಿರುವುದು ; ‘ಮಾತೆಯರು’ ಎಂದು ಬಾಯ್ತುಂಬ ಕರೆಯುವ, ಆದರೆ ಅವಕಾಶ ಸಿಕ್ಕಿದಲ್ಲೆಲ್ಲ ಪದ್ಮಪ್ರಿಯರನ್ನೂ ಜಯಲಕ್ಷ್ಮಿಯರನ್ನೂ ಸೃಷ್ಟಿಸುವ ಆತುರ ಹೊಂದಿರುವ ಮಂದಿ ರಾಜ್ಯದಲ್ಲಿ ಅಕಾರಕ್ಕೆ ಬಂದಿರುವುದು- ಇಂಥ ಸನ್ನಿವೇಶದಲ್ಲಿ ಕನ್ನಡದ ಸಂದರ್ಭದಲ್ಲಿ ಈ ಎರಡು ಪುಸ್ತಕಗಳು ಹೊರಬಂದಿರುವುದು ಕಾಕತಾಳೀಯವಷ್ಟೇ ಅಂತ ನಾನು ತಿಳಿಯಲಾರೆ.
ಈ ಎರಡೂ ಕೃತಿಗಳು ಗಂಡು ಹೆಣ್ಣಿನ ಮೇಲೆ ಪ್ರಯೋಗಿಸುವ ಹಿಂಸೆಯ ಎರಡು ಮುಖಗಳನ್ನು ಪ್ರಕಟಿಸುತ್ತವೆ ; ಅದರಲ್ಲಿ ಒಂದು, ಗಂಡು ಒಂದು ಸಮುದಾಯವಾಗಿ ತನ್ನ ದೈಹಿಕ ಸುಖಕ್ಕಾಗಿ ಹೆಣ್ಣು ಸಮುದಾಯವನ್ನು ತನಗೆ ಬೇಕಾದಂತೆ ಮಾರ್ಪಡಿಸಿರುವುದು, ಅಂದರೆ ವೇಶ್ಯಾ ಸಮುದಾಯವಾಗಿ ಅಭಿವೃದ್ಧಿಪಡಿಸಿರುವುದು. ಇನ್ನೊಂದು, ಹೀಗೆ ನೇರ ಮಾರ್ಪಡಿಸುವಿಕೆಯ ಅವಕಾಶವಿಲ್ಲದಲ್ಲಿ, ಮೇಲ್ನೋಟಕ್ಕೆ ತೀರ ಸಭ್ಯವೂ ಸಾಮಾಜಿಕವಾಗಿ ಒಪ್ಪಿತವೂ ಎನಿಸುವ ಸಾಂಸಾರಿಕ- ಗೃಹ ಹಿಂಸೆಯ ಮಾರ್ಗವನ್ನು ಹಿಡಿದಿರುವುದು. ಇದರಲ್ಲಿ ‘ಒಲಿಂಪಿಕ್ಸ್’ ಮೊದಲನೆಯದು- ಸಾಮಾಜಿಕ ಹಿಂಸೆಯ ಅನಾವರಣ ; ‘ಭಾಮಿನಿ’ ಎರಡನೆಯದು- ಗೃಹ ಹಿಂಸೆಯ ತೋರುಗನ್ನಡಿ.
*
ಸಾವಿರಾರು ಕ್ರೀಡಾಪಟುಗಳು, ಲಕ್ಷಾಂತರ ಕ್ರೀಡಾಪ್ರೇಮಿಗಳು ಸಂಗಮಿಸುವ ಒಲಿಂಪಿಕ್ಸ್‌ನಲ್ಲಿ ಕ್ರೀಡೆಯ ಜತೆಗೆ ಕಾಮಕ್ರೀಡೆ ಕೂಡ ತನ್ನ ಆಟವನ್ನು ಎಂಥ ಬೃಹತ್ ಅನಿಸುವ ರೀತಿಯಲ್ಲಿ ಆಡುತ್ತದೆ ಎಂಬ ವಿವರವಾದ ಚಿತ್ರಣ ಲೀಲಾ ಸಂಪಿಗೆಯ ಪುಸ್ತಕದಲ್ಲಿದೆ ; ಕನ್ನಡದಲ್ಲಿ ಕುಸುಮಾ ಶ್ಯಾನುಭಾಗ್ ಅವರಂಥ ಒಂದಿಬ್ಬರನ್ನು ಬಿಟ್ಟರೆ ಬೇರ್‍ಯಾರೂ ಕಾಲಿಡದ ಕ್ಷೇತ್ರದಲ್ಲಿ ಓಡಾಡಿ ಬೀದಿ ಹೆಣ್ಣು ಮಕ್ಕಳ ನೋವುಗಳನ್ನು ಕಂಡವರು ಅವರು ; ಆದ್ದರಿಂದ ಈ ವಿಷಯದ ಬಗ್ಗೆ ಅಕಾರಯುತವಾಗಿ ಬರೆಯಬಲ್ಲರು.
ಪುಸ್ತಕ ಪುಟ್ಟದಾಗಿದೆ ; ಆದರೆ ಒಲಿಂಪಿಕ್ಸ್‌ನ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ವೇಶ್ಯಾವಿಲಾಸದ ವಿರಾಟ್ ದರ್ಶನವನ್ನೇ ಮಾಡಿಸುತ್ತದೆ. ಇಂಥ ವಿಚಾರದಲ್ಲಿ ಬರೆಯುವವರು ಓದುಗರ ಒಲುಮೆಗಾಗಿ ರೋಚಕ ಶೈಲಿ ಹಾಗೂ ವಿವರಗಳಿಗೆ ಮೊರೆ ಹೋಗುವುದು ಸಾಮಾನ್ಯ ; ಆದರೆ ಈ ಕ್ಷೇತ್ರದಲ್ಲಿ ಅಂತಃಕರಣವುಳ್ಳವರಿಗೆ ಅದು ಸಹ್ಯವೆನಿಸಲಾರದು, ಲೀಲಾ ಅವರಿಗೆ ಅನಿಸಿಲ್ಲ.
ಅದಕ್ಕಿಂತ ಮುಖ್ಯವಾಗಿ, ‘ಲೈಂಗಿಕತೆಯ ರಾಜಕೀಯ’ ಅಂತೇನು ಹೇಳುತ್ತೇವಲ್ಲ, ಅದರ ಅರ್ಥ, ಸ್ವರೂಪ ಈ ಕೃತಿಯಿಂದ ಗೊತ್ತಾಗುತ್ತದೆ. ಈ ದಂಧೆಯ ಭಯಾನಕ, ವಿಸ್ತೃತ ರಾಜಕೀಯ ಮುಖ ಈ ಕೆಳಗಿನ ಕೆಲವು ವಿವರಗಳಿಂದಲೇ ಗೊತ್ತಾಗಬಹುದು :
“ಜಗತ್ತಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಮತ್ತು ಇಂಟರ್‌ನೆಟ್ ಜಾಲದಲ್ಲಿ ವೈವಿಧ್ಯಮಯ, ದೃಢಕಾಯದ, ಹದಿಹರೆಯದ, ಸುಂದರ ಹೆಣ್ಣುಗಳ ಲಭ್ಯತೆಯ ಬಗ್ಗೆ ಜಾಹಿರಾತು ಪ್ರಕಟವಾದವು. ಸೆಕ್ಸ್ ಉದ್ಯಮ ಕೋಟ್ಯಂತರ ರೂ. ವಹಿವಾಟು ನಡೆಸಿತು. ಇದರಿಂದ ಆಸ್ಟ್ರೇಲಿಯದ ಬೊಕ್ಕಸವೂ ತುಂಬಿತು !"
“ವೇಶ್ಯಾವಾಟಿಕೆ ಈಗ ಜಾಗತಿಕ ಉದ್ಯಮ. ಅಪಾರ ಪ್ರಮಾಣದ ಹಣ ಹೂಡಿಕೆ, ಲಾಭಕೋರತನ ಇಲ್ಲಿ ಸಾಗಿದೆ. ಹಲವು ರಾಷ್ಟ್ರಗಳಲ್ಲಿ ವೇಶ್ಯಾವಾಟಿಕೆ ಕಾನೂನುಬಾಹಿರವಾಗಿದ್ದರೆ, ಹಲವೆಡೆ ಲೈಂಗಿಕ ವೃತ್ತಿ ಹೆಸರಿನಲ್ಲಿ ಕಾನೂನು ಮಾನ್ಯತೆ ಪಡೆದಿದೆ. ಈ ಸೆಕ್ಸ್‌ಟ್ರೇಡ್ ಎನ್ನುವುದೇ ದೊಡ್ಡ ಭೂಗತ ಜಗತ್ತು."
“ಇಂಡೋನೇಷ್ಯಾದ ೧.೫ ಶೇಕಡ ಮಹಿಳೆಯರು ವೇಶ್ಯಾವೃತ್ತಿಯಲ್ಲಿದ್ದಾರೆ. ಮಲೇಷಿಯಾ, ಫಿಲಿಪ್ಪೈನ್ಸ್, ಥೈಲ್ಯಾಂಡಿನಲ್ಲೂ ಇಷ್ಟೇ ಪ್ರಮಾಣದ ಮಹಿಳೆಯರು ಈ ವೃತ್ತಿಯಲ್ಲಿದ್ದು ರಾಷ್ಟ್ರೀಯ ಆದಾಯದ ಶೇ. ೧೪ ಭಾಗವನ್ನು ಪೂರೈಸುತ್ತಾರೆ. ಥೈಲ್ಯಾಂಡಿನಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಶಸ್ತ್ರ ಕಳ್ಳಸಾಗಣೆಯ ಬಳಿಕ ಅತ್ಯಂತ ಲಾಭದ ದಂಧೆ ಎಂದರೆ ವೇಶ್ಯಾವಾಟಿಕೆ. ರಾಷ್ಟ್ರೀಯ ಮಹಿಳಾ ಆಯೋಗದ ವರದಿ ಪ್ರಕಾರ ಭಾರತದಲ್ಲೂ ವಾರ್ಷಿಕ ೨೦೦ರಿಂದ ೫೦೦ ಕೋಟಿ ಆದಾಯ ಇದರಿಂದ ಸಲ್ಲುತ್ತದೆ."
“ಮಾವೋ ಕಾಲದ ಸಾಂಸ್ಕೃತಿಕ ಕ್ರಾಂತಿ ಚೀನಾದಲ್ಲಿ ನೈತಿಕ ಪ್ರಶ್ನೆಯನ್ನು ಮುಖ್ಯವಾಗಿರಿಸಿಕೊಂಡಿತ್ತು. ಲೈಂಗಿಕತೆ ಬಗ್ಗೆ ಬಹಿರಂಗ ಚರ್ಚೆ ಸಾಧ್ಯವೇ ಇರಲಿಲ್ಲ. ಆದರೆ ಇದೀಗ ಜಾಗತೀಕರಣಕ್ಕೆ ತೆರೆದುಕೊಂಡಿರುವ ಚೀನಾದ ನಗರ ಪ್ರದೇಶದ ಚಿತ್ರಣ ಬದಲಾಗಿದೆ. ಲೈಂಗಿಕ ಉದ್ಯಮ ಅಲ್ಲಿನ ಆರ್ಥಿಕತೆಗೆ ಶೇ. ೬ ವರಮಾನ ತಂದುಕೊಡುತ್ತಿದೆ."
ವಿವರಗಳನ್ನು ನೀಡುವ ಜತೆಗೆ ಲೀಲಾ, ಮಾನವ ಸಾಗಾಟ ಮುಂತಾದವುಗಳ ಬಗ್ಗೆ ಚರ್ಚಿಸುತ್ತಾರೆ ; ಇವೆಲ್ಲವುಗಳನ್ನು ತಡೆಯಲು ಅಗತ್ಯವಾದ ಕ್ರಮಗಳ ಬಗ್ಗೆ ಕೂಡ ಚರ್ಚಿಸುತ್ತಾರೆ. ಕನ್ನಡದಲ್ಲಿ ಮುಂದೆ ಲೈಂಗಿಕ ವೃತ್ತಿಯ ಬಗೆಗೆ ಮಾತನಾಡುವವರು, ಬರೆಯುವವರು ಅವಶ್ಯವಾಗಿ ಗಮನಿಸಬೇಕಾದ ಕೃತಿ ಇದು.
*
ಟಾಲ್‌ಸ್ಟಾಯ್‌ನ ಒಂದು ಜನಪ್ರಿಯ ಸೂಕ್ತಿಯನ್ನು ಇಲ್ಲಿ ನೆನೆಯಬಹುದಾದರೆ, ಅದು ಹೀಗಿದೆ- ‘ಎಲ್ಲ ಸುಖೀ ಕುಟುಂಬಗಳೂ ಒಂದೇ ಥರ ; ಆದರೆ ಪ್ರತಿಯೊಂದು ಕುಟುಂಬವೂ ಅದರದೇ ಆದ ರೀತಿಯಲ್ಲಿ ದುಃಖಿ.’ ಭಾರತೀಯ ಸಂದರ್ಭದಲ್ಲಿ ಈ ದುಃಖದ ದೇಖರೇಖಿ ಯಾವಾಗಲೂ ಹೆಣ್ಣಿಗೆ. ಪ್ರೇಮವನ್ನು ಪದೇ ಪದೇ ಸಾಬೀತು ಪಡಿಸಬೇಕಾದ ಗಂಡು ; ಎಂದೂ ಎಲ್ಲೂ ಇಲ್ಲದ ಆದರ್ಶ ಪ್ರೇಮಕ್ಕಾಗಿ ನೋಯುವ ಹೆಣ್ಣು ಜತೆಯಾಗಿಬಿಟ್ಟರಂತೂ ಆ ದಾಂಪತ್ಯ ನರಕ. ಈ ನರಕದ ಮಗ್ಗುಲುಗಳಿಂದ ಎತ್ತಿಕೊಂಡ ಹೂಗಳೇ ಈ ಭಾಮಿನಿ ಷಟ್ಪದಿ.
ಚೇತನಾರ ಬರಹಗಾರಿಕೆಯ ಬಗ್ಗೆ ಎರಡು ಮಾತಿಲ್ಲ ; ಅವಶ್ಯವಿಲ್ಲದಿದ್ದಲ್ಲಿ ಅವರು ಉದ್ದ ವಾಕ್ಯಗಳನ್ನು ಹಾಕಲು ಹೋಗುವುದಿಲ್ಲ. ಕೆಲವು ವಾಕ್ಯಗಳು ಎರಡೇ ಪದಗಳಿಗೆ ಮುಗಿಯುತ್ತವೆ. ಹೆಣ್ಣಿನ ಮನೋಧರ್ಮಕ್ಕೆ ಸಾಮಾನ್ಯವಾಗಿ ವಿರುದ್ಧವಾದ ಗುಣ ಇದು ; ಆದರೆ ಈ ಬಗೆಯ ಶೈಲಿ ಮತ್ತು ಕಾವ್ಯಾತ್ಮಕತೆ ವೈದೇಹಿ ಅವರಲ್ಲಿ ಕೂಡ ಕಾಣುತ್ತದಾದ್ದರಿಂದ ತೀರ ಅಪರೂಪ ಅಂದುಕೊಳ್ಳಬೇಕಿಲ್ಲ.
ನರೇಂದ್ರ ಪೈ ಗುರುತಿಸಿದಂತೆ, ಗಂಡಿನಂತೆ ಹೆಣ್ಣು ಅನುಭವ ಲೋಕವೊಂದನ್ನು ಹುಡುಕಿಕೊಂಡು ಹೋಗದಿರಲು ಆಕೆಯ ಭೌತಿಕ ಸ್ಥಿತಿ ಮತ್ತು ಸಾಮಾಜಿಕ ಪರಿಸ್ಥಿತಿಗಳು ಕೂಡ ಕಾರಣ. ಆದರೆ ಆಕೆ ಅನುಭವದ ಒಳಲೋಕವೊಂದನ್ನು ತನಗೆ ತಾನೆ ಸೃಷ್ಟಿಸಿಕೊಳ್ಳುವುದರಿಂದ, ಗಂಡಿನ ಜತೆ ಅದನ್ನು ಸಮೀಕರಿಸಬೇಕಿಲ್ಲ. ಹೀಗೆ ಪ್ರತ್ಯೇಕಿಸುವುದು ಕೂಡ ಲೇಖಕಿಯರಿಗೆ ಅನ್ಯಾಯ ಮಾಡಲು ಹಿರಿಯ ವಿಮರ್ಶಕರು ಕಂಡುಕೊಂಡಿದ್ದ ಒಂದು ದಾರಿ.
ಚೇತನಾ ಅವರ ಪುಸ್ತಕದ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆಯಲು ನನಗೆ ಇಷ್ಟ. ಆದರೆ ಜೋಗಿ, ಹುಳಿಯಾರ್, ನರೇಂದ್ರ ಪೈ ಸೇರಿದಂತೆ ಎಲ್ಲರೂ ಈಗಾಗಲೇ ಅದನ್ನು ಸಾಕಷ್ಟು ಹೊಗಳಿದ್ದಾಗಿದೆ. ಚೇತನಾ ಕನ್ನಡದ ಒಳ್ಳೆಯ ಲೇಖಕಿಯರಲ್ಲಿ ಒಬ್ಬರು ಎಂಬುದನ್ನು ಒಪ್ಪಿಕೊಳ್ಳುತ್ತಲೇ, ಅವರ ಬರಹದ ಬಗೆಗೆ ನನಗಿರುವ ಕೆಲವು ತಕರಾರುಗಳನ್ನು ಇಲ್ಲಿ ದಾಖಲಿಸಲು ಬಯಸುತ್ತೇನೆ.
ಒಂದು : ಹಿಂಸೆಯಲ್ಲಿ ರಮಿಸುವ, ಹಿಂಸೆಯಲ್ಲೇ ವಿರಮಿಸುವ ಗುಣ. ಇದು ಎಂ.ವ್ಯಾಸರಲ್ಲಿ ತುಂಬಾ ಇತ್ತು. ಅವರು ಇದರಿಂದ ಎಂದೂ ಮೇಲೆ ಬರಲೇ ಇಲ್ಲ. ಚೇತನಾ ಇದನ್ನು ಮೀರಬಲ್ಲರೋ ಎಂಬುದು ಇನ್ನೂ ಸ್ಪಷ್ಟವಿಲ್ಲ ; ಮೀರಬೇಕೇ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ.
ಎರಡು : ಪುರಾಣದ ಪಾತ್ರಗಳ ಭಂಜನೆ. ಇದರಿಂದ ಹೊಸ ಅರಿವು ಉಕ್ಕುವಂತಿದ್ದರೆ, ಹೊಸ ಗ್ರಹಿಕೆಯನ್ನು ನನಗೆ ಅದು ನೀಡುತ್ತದಾದರೆ ನಾನು ಸ್ವಾಗತಿಸಬಲ್ಲೆ. ಇಲ್ಲವಾದರೆ ಇದರಿಂದ ಪ್ರಯೋಜನವೇನು ? ಯಶೋಧರೆ, ದ್ರೌಪದಿ, ಅಹಲ್ಯೆ ಎಲ್ಲರ ಬಗ್ಗೆಯೂ ಚೇತನಾಗಿಂತ ಒಂದು ತಲೆಮಾರು ಹಿಂದಿನ ಲೇಖಕಿಯರು ಇನ್ನಷ್ಟು ಪ್ರಖರವಾಗಿ ಬರೆದಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು. ಉದಾಹರಣೆಗೆ- ಇರಾವತಿ ಕರ್ವೆ, ಪ್ರತಿಭಾ ನಂದಕುಮಾರ್.
ಮೂರು : ಗಂಡು ಶೋಷಕ, ಹೆಣ್ಣು ಶೋಷಿತೆ ಎಂಬ ಸ್ಥಾಪಿತ ಮಾದರಿಗೆ ಬೀಳುವ ಭಯ. ಇದು ಜನಪ್ರಿಯವಾದುದೂ ಆಗಿದೆ ; ಪೊಲಿಟಿಕಲಿ ಕರೆಕ್ಟ್ ಆಗಿಯೂ ಇದೆ. ಆದರೆ ಇದೇ ಗ್ರಹಿಕೆಯೊಂದಿಗೆ ನಾವು ಇನ್ನಷ್ಟು ಮುಂದೆ ಹೋಗಲು ಸಾಧ್ಯವಿಲ್ಲ. ದಾಂಪತ್ಯದ ನರಕ ಎಲ್ಲರಿಗೂ ಒಂದೇ ; ಆಧುನಿಕ ಸಂದರ್ಭದಲ್ಲಿ ಹೆಚ್ಚಿನ ಸಲ ಗಂಡಿನೊಂದಿಗೆ ಹೆಣ್ಣೂ ಈ ನರಕಕ್ಕೆ ಪಾಲುದಾರಳು. ಗಂಡಿನ ಸೋಲು, ನೋವು, ಯಾತನೆಗಳನ್ನು ಕಾಣುವ ಕಣ್ಣು ಬರಹಗಾರರಿಗೆ ಮಂದವಾಗಕೂಡದು.
ನಾಲ್ಕು : ಅಷ್ಟೊಂದು ಬರಹಗಳನ್ನು ಓದಿದ ಮೇಲೆ, ಇಲ್ಲಿನ ಯಾವ ಪಾತ್ರವೂ ನನ್ನ ಚಿತ್ತ ಭಿತ್ತಿಯ ಮೇಲೆ ಅಚ್ಚೊತ್ತಿ ನಿಲ್ಲಲಿಲ್ಲವಲ್ಲಾ ಎಂದನಿಸಿದ್ದು ನಿಜ. ಅದಕ್ಕೆ ಕಾರಣವೇನು ಎಂಬ ಬಗ್ಗೆ ಆಲೋಚಿಸಿದೆ ; ನನಗೆ ತಿಳಿದಂತೆ ಬಹುತೇಕ ಬರಹಗಳ ಬೋನ್ಸಾಯ್ ಆಕೃತಿ ಇದಕ್ಕೆ ಕಾರಣ. ವೇದವ್ಯಾಸರು ಮೂವತ್ತು ಸಾವಿರ ಶ್ಲೋಕಗಳಲ್ಲಿ ಚಿತ್ರಿಸಿದ ದ್ರೌಪದಿಯನ್ನು ಐದು ಪ್ಯಾರಾಗಳಲ್ಲಿ ಬೇರೆ ರೀತಿ ಕೆತ್ತಿ ನಿಲ್ಲಿಸಬಹುದೆ ? ಹನಿಗವಿತೆಗಳು ನಕ್ಕು ಸುಮ್ಮನಾಗುವುದಕ್ಕಷ್ಟೇ ಯಾಕೆ ಸೀಮಿತವಾಗಿವೆ ? ಈ ಮುಂತಾದ ಪ್ರಶ್ನೆಗಳೂ ಇದರ ಜತೆಗೇ ಹುಟ್ಟುತ್ತವೆ. ಸವುಡು ಸಿಕ್ಕಿದರೆ, ಇದರ ಬಗ್ಗೆ ವಿಸ್ತಾರವಾಗಿ ಇನ್ನೊಮ್ಮೆ ಬರೆದೇನು.

Saturday, September 6, 2008

ವ್ಯಾಸಂಗ !


ಕತೆಗಾರ ವ್ಯಾಸರು ತಮ್ಮ ಕೂದಲನ್ನು ಹಿಂದಕ್ಕೆ ಕೆದರಿ ಬಿಟ್ಟುಕೊಂಡು ಒಂದು ಕೋನದಿಂದ ನೋಡಿದಾಗ ಬೆಂದ್ರೆಯವರಂತೆ ಕಾಣಿಸುತ್ತಾ, ಪದೇ ಪದೇ ನನ್ನ ಕನಸಿನಲ್ಲಿ ಇಣುಕುತ್ತಿದ್ದರು. ನಾನು ಅಳುಕುತ್ತಾ “ವ್ಯಾಸರೇ ಇನ್ನೊಂದು ಕತೆ ಹೇಳಿ" ಎಂದು ವ್ಯಾಕುಲನಾಗಿ ಅವರ ಹಿಂದೆ ಅಲೆಯುತ್ತಿದ್ದೆ. ಅವರು ನನ್ನ ಕೈಯಿಂದ ತಪ್ಪಿಸಿಕೊಂಡು ದುರ್ಗಾಪುರದ ಸಂದುಗೊಂದುಗಳಲ್ಲಿ ಮಾಯವಾಗುತ್ತಿದ್ದರು.

ಇನ್ನೊಂದು ಕನಸಿನಲ್ಲಿ ಅವರು ಶಂಕರೀನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ವಿಘ್ನನಿವಾರಕ ಗಣಪತಿ ಬಂದು “ವ್ಯಾಸರೇ ನೀವು ಮಹಾಭಾರತ ಹೇಳುತ್ತೇನೆಂದು ಹೇಳಿ ಎಲ್ಲಿ ಮಾಯವಾದಿರಿ. ನಾನು ಅದನ್ನು ಬರೆಯಲು ಕಾದು ಕುಳಿತಿದ್ದೇ ಬಂತು. ಈಗ ಸಿಕ್ಕಿದಿರಲ್ಲಾ ಕತೆ ಹೇಳಿ" ಎಂದು ಬೆನ್ನು ಹತ್ತಿದ. ವ್ಯಾಸರು ಗಾಬರಿಯಾಗಿ, “ಮಾರಾಯ ನಾನು ಮಹಾಭಾರತದ ವ್ಯಾಸನಲ್ಲ. ನನ್ನ ಭಾರತವೇ ಬೇರೆ, ನನ್ನ ಭಾರಗಳೇ ಬೇರೆ, ನನ್ನ ಕತೆಗಳೇ ಬೇರೆ. ನನ್ನ ದುಸ್ವಪ್ನಗಳನ್ನು ನೀನು ಬರೆಯಲಾರೆ" ಎಂದು ಗಣೇಶನಿಂದ ಪಾರಾಗಲು ದಾರಿ ಹುಡುಕುತ್ತಾ ಇದ್ದರು.

ಐದಾರು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನನ್ನ ಕವನ ಸಂಕಲನ ಅವರ ಕೈಗೆ ಸಿಕ್ಕಿ, ‘ಕೇರನ ಕವನಗಳು ಚೆನ್ನಾಗಿವೆಯಲ್ಲಾ’ ಎಂದು ಅವರಿವರ ಬಳಿ ಹೇಳಿ, ಪತ್ರ ಬರೆದಿದ್ದರು. ಆಮೇಲೆ ಹೇಗೋ ನನ್ನ ಪೋನ್ ನಂಬರ್ ಸಂಪಾದಿಸಿಕೊಂಡು ಒಂದು ಮಧ್ಯಾಹ್ನ ರಿಂಗ್ ಮಾಡಿದ್ದರು. ನಾನು ವ್ಯಾಸರ ಫೋನೆಂದರಿಯದೆ ರಿಸೀವ್ ಮಾಡಿ, ಅವರು ಪರಿಚಯ ಮಾಡಿಕೊಂಡು ಮಾತಾಡಿದಾಗ ದಂಗಾಗಿ ಹೋಗಿದ್ದೆ. “ಚೆನ್ನಾಗಿ ಬರೆದಿದ್ದಿ ಮಾರಾಯ ಇನ್ನೂ ಬರಿ. ನಿನ್ನ ‘ಪಾಪ’ ಕವನ ತುಂಬಾ ಇಷ್ಟವಾಯಿತು" ಅಂತೆಲ್ಲಾ ಹೇಳಿ, ಪದ್ಯದ ಸಾಲು ಸಾಲುಗಳನ್ನೂ ಕೋಟ್ ಮಾಡಿ ನಾನೇ ಪಾಪಿ ಅನ್ನಿಸುವಂತೆ ಮಾಡಿದ್ದರು. ಅಂಥವರ ಜತೆ ನಾನೇನು ಮಾತಾಡಲಿ ಎಂದು ತೊದಲಿ ಫೋನ್ ಇಟ್ಟ ಬಳಿಕ ನಿಜಕ್ಕೂ ನಾನು ಪಾಪಿ ಅನ್ನಿಸಲು ಶುರುವಾಗಿತ್ತು.

ಆಮೇಲೆ ಅವರ ಸ್ವಗತದಂಥ ಧ್ವನಿಯ ಮಂದ್ರಸ್ಥಾಯಿಗೂ ಅವರ ಕತೆಗಳಿಗೂ ಏನೋ ಸಂಬಂಧವಿದೆ ಅನ್ನಿಸಲು ತೊಡಗಿತ್ತು. ಅಷ್ಟು ಹೊತ್ತು ನನ್ನ ಜತೆ ಅವರು ಮಾತಾಡಿದ್ದರೂ ಅದು ತಮಗೆ ತಾವೇ ಮಾತಾಡಿಕೊಂಡಂತೆ ಇತ್ತಲ್ಲವೆ ಅನ್ನಿಸಿ ಕುತೂಹಲವಾಗಿ, ಅವರ ಕತೆಗಳ ದಾರುಣ ಅನುಭವಗಳೂ ದುಸ್ವಪ್ನದಂಥ ಬದುಕುಗಳೂ ಚಿಂತಾಮಗ್ನ ಪಾತ್ರಗಳೂ ಸದಾ ಉರಿಯುವ ಭಾವಗಳೂ ನೆನಪಿಗೆ ಬಂದಿದ್ದವು.

ಆಮೇಲೆ ಅವರು ಆಗಾಗ ಫೋನ್ ಮಾಡುತ್ತಿದ್ದರು ; ನಾನೂ ಮಾಡುತ್ತಿದ್ದೆ. ಒಮ್ಮೊಮ್ಮೆ ತಿಂಗಳುಗಟ್ಟಲೆ ನಾನು ಫೋನ್ ಮಾಡಲು ಮರೆತಾಗ ಅವರೇ ಲೈನ್ ಹಚ್ಚುತ್ತ ನನ್ನಲ್ಲಿ ಪಾಪಪ್ರಜ್ಞೆ ಮೂಡಿಸುತ್ತಿದ್ದರು. ಮನೆಗೆ ಯಾವಾಗ ಬರುತ್ತೀರಿ ಎಂದು ದುಂಬಾಲು ಬೀಳುತ್ತಿದ್ದರು. ನಾನು ಅವರಿಂದ ಪಾರಾಗುವ ದಾರಿ ಹುಡುಕುತ್ತಿದ್ದೆ. ಅವರು ತಮ್ಮ ‘ಸ್ನಾನ’ ಕತೆ ಓದಿ ಆತ್ಮಹತ್ಯೆ ಮಾಡಿಕೊಂಡ ವಿರಾಗಿಯ ಬಗೆಗೂ, ತಾವಾಗಿ ತಮ್ಮ ಬಳಿ ಬಂದು ಕತೆ ಬರೆಸಿಕೊಂಡ ವಿಕ್ಷಿಪ್ತ ಪಾತ್ರಗಳ ಬಗೆಗೂ ಹೇಳಿ ಭಯವನ್ನೂ ಕುತೂಹಲವನ್ನೂ ಏಕಕಾಲದಲ್ಲಿ ಹುಟ್ಟಿಸುತ್ತಿದ್ದರು.

ಕಾಸರಗೋಡಿನಲ್ಲಿ ಮಿತ್ರ ಗೋಪಾಲಕೃಷ್ಣನ ಮದುವೆಗೆ ಹೋದಾಗ ನಿಜಕ್ಕೂ ಅವರು ಎದುರು ಬಂದೇ ಬಿಟ್ಟರು. ಮನೆಗೆ ಯಾಕೆ ಬರಲಿಲ್ಲ ಅಂತ ಬೆಂಡ್ ತೆಗೆಯುತ್ತಾರೆ ಅಂತ ಭಯವಾಗಿ ದೇವಸ್ಥಾನದ ಸುತ್ತ ಸುತ್ತಿ ಪರಾರಿಯಾಗುವ ಹುನ್ನಾರ ಮಾಡಿದರೆ ಅದನ್ನೆಲ್ಲ ವಿಫಲಗೊಳಿಸಿ ನಗುತ್ತಾ ಎದುರಿಗೆ ಬಂದು ಹಿಡಿದುಕೊಂಡೇ ಬಿಟ್ಟರು. ನೂರಾರು ವರ್ಷಗಳ ಆತ್ಮೀಯತೆ ಹೊಂದಿರುವವರ ಥರ ಗಂಟೆಗಟ್ಟಲೆ ಮಾತಾಡಿದರು.

ಒಂದು ಪತ್ರದಲ್ಲಿ ಅವರು ಹೀಗೆ ಬರೆದಿದ್ದರು : “...ಇತ್ತೀಚೆಗಿನ ಕವಿಗಳು ಎಂದರೆ ನನಗೆ ತುಂಬಾ ಇಷ್ಟ. ಸಂಧ್ಯಾದೇವಿಯವರ ‘ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ’ಓದಿದೆ. ಹಾಡಲಾಗದ ಗಜಲ್‌ಗಳಂತೆ, ಹತಾಶೆಯೇ ತೃಪ್ತಿ ಎಂಬಂತೆ, ಕವಿತೆಗಳನ್ನು ಬರೆದಿದ್ದಾರೆ. ಕೆಲವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಸಿಕ್ಕಿದ್ದರು. ‘ನಿಮ್ಮ ಕೃತಿ ಓದಿದೆ. ರಾತ್ರಿಯಿಡೀ ಅಳುತ್ತಿದ್ದೆ’ ಎಂದರು. ಆಮೇಲೆ ಅನೇಕ ಪತ್ರಗಳನ್ನು ಬರೆದರು. ಮೀರಾ ಭಜನೆಗಳಂತಿರುವ ಈ ಕವಿತೆಗಳನ್ನು ಓದಿದರೆ ಮನಸ್ಸು ಅರಳುತ್ತಿರುತ್ತದೆ. ಬಾಡದ ಹೂವಿನಂತೆ. ನಿಮ್ಮ ಸಂಕಲನದಲ್ಲಿ ಜಯಂತ ಕಾಯ್ಕಿಣಿ ಮುನ್ನುಡಿ ನಿಮ್ಮನ್ನು ಸರಿಯಾಗಿ ಪರಿಚಯಿಸುತ್ತದೆ. ಜಯಂತ ನನ್ನ ಇನ್ನೊಂದು ಜೀವದ ಹಾಗೆ. ಅವರ ಒತ್ತಾಯದಿಂದ ನಾನು ಮತ್ತೆ ಬರೆಯಲಾರಂಭಿಸಿದೆ..."

ಹೀಗೆ ಕತೆಗಳು, ಪತ್ರಗಳು, ಮಾತುಗಳ ಮೂಲಕ ನನ್ನೊಳಗೆ ಬೆಳೆಯುತ್ತ ಹೋದ ವ್ಯಾಸರು ಆವತ್ತೊಮ್ಮೆ ಫೋನ್ ಮಾಡಿ “ನನ್ನ ಗೆಳೆಯರು, ನನಗಿಂತಲೂ ಸಣ್ಣವರೆಲ್ಲ ಒಬ್ಬೊಬ್ಬರೇ ಹೋಗುತ್ತಾ ಇದ್ದಾರೆ. ನಮ್ಮದೆಲ್ಲ ಆಗ್ತಾ ಬಂತು" ಎಂದಿದ್ದರು. “ಹಾಗೆಲ್ಲ ಹೇಳ್ಬೇಡಿ. ನಿಮಗಿಂತ ಮೊದಲೇ ನಾವು ಹೋದರೂ ಹೋಗ್ಬಹುದು" ಎಂದು ಚೇಷ್ಟೆ ಮಾಡಿ ಫೋನಿಟ್ಟಿದ್ದೆ. ನೀಗಿಕೊಳ್ಳುವುದಕ್ಕೆ ಎರಡು ದಿನ ಮುನ್ನ ಫೋನ್ ಮಾಡಿದ್ದರು. “ಚಿಕುನ್ ಗುನ್ಯಾ ಆಗಿದೆ ಮಾರಾಯ್ರೆ. ಗಂಟು ಗಂಟು ಬೇನೆ. ಎದ್ದು ನಡಿಲಿಕ್ಕೆ ಕೂಡುದಿಲ್ಲ" ಎಂದಿದ್ದರು. ಅದಾಗಿ ಎರಡು ದಿನಗಳಲ್ಲಿ ಸುದ್ದಿ ಬಂತು.

“ಮುನ್ನೂರಕ್ಕೂ ಹೆಚ್ಚು ಕತೆ ಬರೆದ ನಿಮಗೆ ವಿಮರ್ಶೆಯೂ ಸಿಗಲಿಲ್ಲವಲ್ಲಾ ಮಾರಾಯರೇ" ಎಂದು ಯಾರಾದರೂ ಹೇಳಿದರೆ ಒಂದು ಪೇಲವ ನಗೆ ಬಿಟ್ಟು ಬೇರೆ ಉತ್ತರ ಕೊಡದ ವ್ಯಾಸ ; ಯಾವ ಸಾಹಿತ್ಯ ಸಮ್ಮೇಳನದಲ್ಲೂ ಸಂವಾದಗಳಲ್ಲೂ ಭಾಗವಹಿಸದ ವ್ಯಾಸ ; ಸನ್ಮಾನ ಮಾಡುತ್ತೇನೆಂದು ಕರೆದರೆ ಬಾಂಬ್ ಕಂಡವರಂತೆ ಭಯಪಟ್ಟು ನಾಪತ್ತೆಯಾಗುವ ವ್ಯಾಸ ; ಚಿಕ್ಕಂದಿನಲ್ಲೇ ತಂದೆಯ ಕಗ್ಗೊಲೆಯಾದುದನ್ನು ಕಣ್ಣಾರೆ ಕಂಡು ಆ ನೆತ್ತರ ಕಲೆಗಳನ್ನು ಜೀವಮಾನದುದ್ದಕ್ಕೂ ಹೊತ್ತು ತಿರುಗಿದ ವ್ಯಾಸ ; ನನ್ನಂಥ ಚಿಕ್ಕವರನ್ನು ತಲೆ ಮೇಲೆ ಹೊತ್ತು ಮೆರೆಸಿದ ವ್ಯಾಸ ; ದುರ್ಗಾಪುರದಲ್ಲೂ ಶಂಕರೀನದಿಯಲ್ಲೂ ಇಡೀ ಜಗತ್ತಿನ ಮನುಷ್ಯರ ಆಳದಾಳದ ಹೊಯ್ಲುಗಳನ್ನು ಕಂಡ ವ್ಯಾಸ.

ನಾನು ಹೀಗೆಲ್ಲ ಬರೆದಿದ್ದೇನೆಂದು ಗೊತ್ತಾದರೆ ಅವರು ಖಂಡಿತ ನನ್ನ ಕನಸಿನಲ್ಲಿ ಬಂದು “ಇದೆಲ್ಲ ಎಂತದಕ್ಕೆ ಮಾರಾಯರೇ. ನೆಟ್ಟಗೆ ಒಂದು ಕತೆ ಬರಿಯಿರಿ ನೋಡುವ" ಎಂದು ತಾಕೀತು ಮಾಡಿ ಸುಮ್ಮನೆ ನಗುತ್ತಾ ಕೂರಲಿಕ್ಕುಂಟು.

Saturday, August 30, 2008

ಚಂದ್ರನಿಗೊಂದು ರೂಪಕ


ಹುಣ್ಣಿಮೆಯ ಚಂದ್ರನಿಗೊಂದು

ರೂಪಕ ಕೊಡುವುದಾದರೆ


ಮಜ್ಜಿಗೆಯಲ್ಲಿ ತೇಲುವ ಬೆಣ್ಣೆ

ಚಪ್ಪರಿಸಿದ ನಿಂಬೆ ಪೆಪ್ಪರಮಿಂಟು

ಕಪ್ಪು ಕೊಳದ ರಾಜಹಂಸ

ನೀಲಿ ಚಪ್ಪರದ ತೂಗುದೀಪ

ಇತ್ಯಾದಿ


ಅದೆಲ್ಲ ಹಳತಾಯಿತಲ್ಲವಾ

ಒಂದಿಷ್ಟು ಹೊಸತು ಪ್ರಯತ್ನಿಸುವಾ


ಬೀಸಿದ ಕಲ್ಲು ಅಪ್ಪಳಿಸಿ ಚೂರಾದ ಬೀದಿ ದೀಪದ ತುಣುಕು

ಮಲಗಿದವರನ್ನು ಎಬ್ಬಿಸಿ ಥಳಿಸುವಾಗ ಹೆಪ್ಪುಗಟ್ಟಿದ ಕೊನೆಯ ಕೇಕೆ

ಅವಳ ಹಣೆಯಿಂದ ಇವರು ಗೀಚಿ ಅಳಿಸಿದ ಬಿಂದಿ

ಅವರು ಬಾಕು ಬೀಸಿದಾಗ ಬುರುಖಾದಿಂದ ಆಚೆ ಸರಿದ ಇವಳ ಮುಖ

ಕಪ್ಪು ಟಾರು ರೋಡಿನಲ್ಲಿ ಅಂಗೈಯಗಲದ ರಕ್ತದ ಕಲೆ


ರೂಪಕಗಳಿಗೆ ಸಾವಿಲ್ಲ

Friday, August 22, 2008

ಪತ್ರಗಳಲ್ಲಿ ಕಂಡ ಚೆಕಾವ್


ಆಂಟನ್ ಪಾವ್ಲೊವಿಚ್ ಚೆಕಾವ್(೧೮೬೦-೧೯೦೪) ರಷ್ಯಾದ ಬಹುದೊಡ್ಡ ಕತೆಗಾರ. ತನಗಿಂತ ಕಿರಿಯರಿಗೆ, ಓರಗೆಯ ಬರಹಗಾರರಿಗೆ ಆತ ಬರೆಯುತ್ತಿದ್ದ ಪತ್ರಗಳಲ್ಲಿ ಕತೆ ಕಟ್ಟುವ ಕಲೆಯ ಬಗ್ಗೆ ಆಗಾಗ ವಿವರಿಸಿದ್ದನ್ನು ಕಾಣುತ್ತೇವೆ. ಮ್ಯಾಕ್ಸಿಂ ಗಾರ್ಕಿಯಂಥ ಕಾದಂಬರಿಕಾರನಿಗೆ ಈತ ಮಾರ್ಗದರ್ಶನ ನೀಡಿದ್ದ ಎಂಬುದಿಲ್ಲಿ ಉಲ್ಲೇಖಾರ್ಹ.

ಅಂಥ ಕೆಲವು ಬರಹಗಳು ಇಲ್ಲಿವೆ. ಇಂದಿಗೆ ಇವು ತುಂಬ ಸರಳವಾದ, ನಾವು ಈಗಾಗಲೇ ತಿಳಿದುಕೊಂಡಿರುವ ಸೂತ್ರಗಳಂತೆ ಕಾಣಬಹುದು. ಆದರೆ ಚೆಕಾವ್ ಇವುಗಳನ್ನು ೧೮೮೦ರಷ್ಟು ಹಿಂದೆಯೇ ಹೇಳಿದ್ದ ಎಂಬುದನ್ನಿಲ್ಲಿ ನೆನೆಯಬೇಕು.

ವಿವರಗಳು

ಕತೆಯ ಮೊದಲ ಭಾಗದಲ್ಲಿ ಗೋಡೆಯ ಮೇಲೆ ಒಂದು ಗನ್ ಕಾಣಿಸಿಕೊಂಡರೆ, ಕತೆಯ ಕೊನೆಗೆ ಅದು ಗುಂಡು ಉಗುಳಬೇಕು.

ನನಗೆ ಅನ್ನಿಸುವಂತೆ, ಪ್ರಕೃತಿಯ ವರ್ಣನೆಗಳು ಆದಷ್ಟೂ ಚಿಕ್ಕದಾಗಿ, ಸಂದರ್ಭಕ್ಕೆ ಒದಗುವಂತೆ ಬರಬೇಕು. “ಅಸ್ತಮಿಸುತ್ತಿರುವ ಸೂರ್‍ಯ, ಕಪ್ಪಿಡುತ್ತಿರುವ ಸಮುದ್ರದ ಅಲೆಗಳ ನಡುವೆ ಮುಳುಗುತ್ತಿದ್ದ , ಹೊಂಬಣ್ಣದ ಕಿರಣಗಳು ಚೆಲ್ಲಾಡಿದ್ದವು" ಮುಂತಾದ ತೀರಾ ಸಾಮಾನ್ಯ, ಬಳಸಿ ಸವಕಲಾದ ವರ್ಣನೆಗಳನ್ನು ತಪ್ಪಿಸಿ. ನಿಸರ್ಗದ ಬಣ್ಣನೆಯ ಹೊತ್ತಿನಲ್ಲೂ ತುಂಬಾ ಸೂಕ್ಷ್ಮ ವಿವರಗಳನ್ನು ಬಳಸಬಹುದು. ಅದು ಹೇಗಿರಬೇಕೆಂದರೆ, ಓದಿ ಬದಿಗಿಟ್ಟು ಕಣ್ಮುಚ್ಚಿ ಕಲ್ಪಿಸಿಕೊಂಡರೆ ಅದು ಒಟ್ಟು ಸಂದರ್ಭ ನೆನಪಾಗಬಲ್ಲಂತಿರಬೇಕು. ಉದಾಹರಣೆಗೆ, ಬೆಳದಿಂಗಳ ರಾತ್ರಿಯ ಕಲ್ಪನೆಯನ್ನು ಈ ಬಗೆಯ ವಿವರಗಳಿಂದ ಕಟ್ಟಿಕೊಡಬಹುದು- ‘ನೀರಿನ ಮೇಲೆ ತೇಲುತ್ತಿದ್ದ ಬಾಟಲಿಯ ಚೂರು ನಕ್ಷತ್ರದಂತೆ ಮಿನುಗಿತು, ದೂರದಲ್ಲಿ ತೋಳದ ಕಪ್ಪು ನೆರಳು ಚೆಂಡಿನಂತೆ ಉರುಳಿಹೋಯ್ತು...’ ಇತ್ಯಾದಿ. ಮನಶ್ಶಾಸ್ತ್ರದ ದೃಷ್ಟಿಯಿಂದಲೂ ವಿವರಗಳು ಬೇಕು. ದೇವರು ನಿಮ್ಮನ್ನು ಕ್ಲೀಷೆಗಳಿಂದ ಕಾಪಾಡಲಿ !

ಕತೆಯ ಪಾತ್ರಗಳ ಮಾನಸಿಕ, ಆಧ್ಯಾತ್ಮಿಕ ವಿವರಗಳನ್ನೇನೂ ನೀವು ನೀಡಬೇಕಾಗಿಲ್ಲ. ಅದು ಅವರ ವರ್ತನೆಗಳಿಂದಲೇ ಹೊರ ಹೊಮ್ಮುವಂತಿರಬೇಕು. ಒಮ್ಮೆಗೇ ಹಲವಾರು ಪಾತ್ರಗಳನ್ನು ತರುವುದೂ ಬೇಡ. ಎಲ್ಲ ಗುರುತ್ವಬಲವೂ ಈ ಎರಡರ ನಡುವೆಯೇ ಇರುತ್ತದೆ- ಅವನು ಮತ್ತು ಅವಳು.

- ೧೮೮೬ ಮೇ ೧೦ರಂದು ಬರೆದ ಒಂದು ಪತ್ರ


ಕಲೆಗಾರನ ಕೆಲಸ

ಕಲೆಗಾರನೊಬ್ಬ ತನ್ನ ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಕಟೆಯಬೇಕು ಎಂಬ ನಿನ್ನ ವಾದವನ್ನು ನಾನು ಒಪ್ಪುತ್ತೇನೆ. ಆದರೆ, ‘ಸಮಸ್ಯೆಯ ಪರಿಹಾರ’ ಮತ್ತು ‘ಸಮಸ್ಯೆಯ ಸಮರ್ಪಕವಾದ ಮಂಡನೆ’- ಈ ಎರಡು ವಿಚಾರಗಳಲ್ಲಿ ನಿನಗೆ ಗೊಂದಲವಿದೆ. ಕಲೆಗಾರನಿಗೆ ಎರಡನೆಯದಷ್ಟೇ ಬೇಕಾಗಿರುವುದು.

- ಅಲೆಕ್ಸಿ ಸುವೊರಿನ್‌ಗೆ ಬರೆದ ಪತ್ರ, ೧೮೮೮ ಅಕ್ಟೋಬರ್ ೨೭


ಸಿದ್ಧಾಂತ

ನನ್ನ ಕತೆಯ ಸಾಲುಗಳ ಮಧ್ಯೆ ಸಿದ್ಧಾಂತವೊಂದನ್ನು ಹುಡುಕಲು ಯತ್ನಿಸುವವರನ್ನು ಕಂಡರೆ ನನಗೆ ಭಯ. ಇಂಥವರು ನಾನು ಉದಾರವಾದಿಯೋ, ಸಂಪ್ರದಾಯವಾದಿಯೋ ಎಂಬುದನ್ನು ಕಂಡುಹಿಡಿಯಲು ಯತ್ನಿಸುತ್ತಾರೆ. ನಾನು ಉದಾರವಾದಿಯೂ ಅಲ್ಲ, ಸಂಪ್ರದಾಯವಾದಿಯೂ ಅಲ್ಲ. ಸಂತನೂ ಅಲ್ಲ, ವಿಶಿಷ್ಟತಾವಾದಿಯೂ ಅಲ್ಲ. ನಾನು ಮುಕ್ತ ಕಲಾಕಾರನಲ್ಲದೆ ಬೇರೇನೂ ಆಗಲು ಬಯಸುವುದಿಲ್ಲ. ಆದರೆ ಅಂಥ ಶಕ್ತಿ ದೇವರು ನನಗೆ ನೀಡಿಲ್ಲ ಎಂಬುದು ವಿಷಾದಕರ.

- ಅಲೆಕ್ಸಿ ಲೆಷೆಯೇವ್‌ಗೆ ಬರೆದ ಪತ್ರ, ೧೮೮೮ ಅಕ್ಟೋಬರ್ ೪


ನ್ಯಾಯಾಶನಲ್ಲ, ಸಾಕ್ಷಿ

ನನ್ನ ಕೆಲವು ಕತೆಗಳಲ್ಲಿ ನಾನು ಏನು ಹೇಳಲು ಉದ್ದೇಶಿಸಿದ್ದೆ ಎಂದು ಕೇಳುವವರಿದ್ದಾರೆ. ಇಂಥ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ಬರೆಯುವುದು ನನ್ನ ಕಾಳಜಿ, ಬೋಸುವುದಲ್ಲ. ನಾನು ಯಾವುದರ ಬಗ್ಗೆ ಬರೆಯಬೇಕೆಂದು ಹೇಳಿ, ಬರೆಯುತ್ತೇನೆ. ಮೇಜಿನ ಮೇಲಿರುವ ಈ ಬಾಟಲಿಯ ಬಗ್ಗೆ ಬರೆಯಲು ಹೇಳಿ, ‘ಬಾಟಲಿ’ ಎಂಬ ಹೆಸರಿನ ಕತೆ ಬರೆದು ಕೈಗಿಟ್ಟುಬಿಡುತ್ತೇನೆ. ಪ್ರಾಮಾಣಿಕ ಅನುಭವ ವಿವರಗಳಿಂದ ಕೂಡಿದ ಪ್ರತಿಮೆಗಳು ಚಿಂತನೆಯನ್ನು ಸೃಜಿಸಬಲ್ಲವು, ಆದರೆ ಚಿಂತನೆಯು ಪ್ರತಿಮೆಯನ್ನಲ್ಲ. ದೇವರು, ಆಸ್ತಿಕತೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವುದು ಬರಹಗಾರನ ಕೆಲಸವಲ್ಲ. ಯಾರು ಯಾವಾಗ ಎಂಥ ಸಂದರ್ಭದಲ್ಲಿ ದೇವರ ಬಗೆಗೆ ಅಥವಾ ಆಸ್ತಿಕತೆಯ ಬಗೆಗೆ ಹೇಗೆ ಚಿಂತಿಸಿದರು, ಹೇಗೆ ನಡೆದುಕೊಂಡರು ಎಂಬುದನ್ನು ಹೇಳುವುದಷ್ಟೇ ನಮ್ಮ ಕೆಲಸ. ತನ್ನ ಪಾತ್ರಗಳ ನ್ಯಾಯಾಶನಾಗುವುದಲ್ಲ, ಪಕ್ಷಪಾತರಹಿತನಾದ ಸಾಕ್ಷಿಯಾಗುವುದು.

- ಅಲೆಕ್ಸಿ ಸುವೊರಿನ್‌ಗೆ ಬರೆದ ಪತ್ರ, ೧೮೮೮ ಮೇ ೩೦


ತಣ್ಣಗೆ ಹೇಳಿ

ದುಃಖಿಗಳು ಮತ್ತು ನಿರ್ಭಾಗ್ಯವಂತರ ಬಗ್ಗೆ ನೀವು ಬರೆಯುತ್ತಿದ್ದೀರಿ, ಓದುಗನಲ್ಲಿ ಅವರ ಬಗ್ಗೆ ಸಹಾನುಭೂತಿ ಉಕ್ಕಬೇಕಾಗಿದೆ ಎಂದಿಟ್ಟುಕೊಳ್ಳಿ. ಕತೆಯನ್ನು ತಣ್ಣಗೆ ಹೇಳಲು ಯತ್ನಿಸಿ. ಇನ್ನೊಬ್ಬರ ದುಃಖಕ್ಕೆ ಅದು ಹಿನ್ನೆಲೆಯಾಗಿ ಅದರಿಂದಲೇ ಪಾತ್ರದ ದುಃಖವು ಎದ್ದು ಕಾಣಿಸುತ್ತದೆ. ಅಂದರೆ ನಿಮ್ಮ ಪಾತ್ರದ ಬಿಕ್ಕಳಿಕೆಗೆ ನೀವು ನಿಟ್ಟುಸಿರು ಬಿಡಬಹುದಷ್ಟೇ. ಹೆಚ್ಚು ತಣ್ಣಗಿರಿ, ವಿವರಗಳಿಗೆ ನಿಷ್ಠರಾಗಿದ್ದಷ್ಟೂ ನೀವು ಹೆಚ್ಚು ಪರಿಣಾಮ ಬೀರಬಲ್ಲಿರಿ.

- ಲಿಡಿಯಾ ಅವಿಲೊವಾಗೆ ಬರೆದ ಪತ್ರ, ೧೮೯೨ ಏಪ್ರಿಲ್ ೨೯


ವಿಶೇಷಣವೇಕೆ ?

ಇದೊಂದು ಉಪದೇಶ: ನೀನು ಬರೆದದ್ದರ ಪ್ರೂಫ್ ನೋಡುವಾಗ ಅದರಲ್ಲಿರುವ ಗುಣವಾಚಕಗಳು ಹಾಗೂ ಕ್ರಿಯಾವಿಶೇಷಣಗಳನ್ನು ಎಷ್ಟು ಸಾಧ್ಯವೋ ಅಷ್ಟು ಕಿತ್ತುಹಾಕು. ಇವು ಎಂಥ ಅಡ್ಡಿಗಳೆಂದರೆ, ಇದರಿಂದ ಓದುಗ ಬರಹವನ್ನು ಬದಿಗಿಟ್ಟು ಎದ್ದು ಹೋಗುತ್ತಾನೆ.

“ಅವನು ಹುಲ್ಲಿನ ಮೇಲೆ ಕುಳಿತಿದ್ದ" ಎಂದು ನಾನು ಬರೆದರೆ ಅದು ಸ್ಪಷ್ಟವಾಗಿ ಅರ್ಥವಾಗುತ್ತದೆ ಮತ್ತು ಓದುಗನ ಲಕ್ಷ್ಯವನ್ನು ಕತ್ತರಿಸುವುದಿಲ್ಲ. “ಪಾದಚಾರಿಗಳು ಈಗಾಗಲೇ ಬೇಕಾದಷ್ಟು ಓಡಾಡಿ ತುಳಿದುಹಾಕಿದ್ದ ಹಸಿರು ಹುಲ್ಲಿನ ಮೇಲೆ ಎತ್ತರದ, ಸಪೂರ ಎದೆಯ, ಕೆಂಪು ಗಡ್ಡದ ಆ ಮನುಷ್ಯ ಆತಂಕದಿಂದ ಸುತ್ತಮುತ್ತಲನ್ನು ಗಮನಿಸುತ್ತ ಮೌನವಾಗಿ ಕುಳಿತಿದ್ದ"- ಹೀಗೆ ಬರೆದರೆ ಓದುವುದೂ, ಮೆದುಳನ್ನು ಒಂದೆಡೆ ಹಿಡಿದಿಡುವುದೂ ಕಷ್ಟಸಾಧ್ಯ. ಪ್ರಜ್ಞೆ ಇಷ್ಟೊಂದು ವಿವರವನ್ನು ಒಮ್ಮೆಲೇ ಖಂಡಿತ ಹಿಡಿದಿಡಲಾರದು.

ಮನುಷ್ಯನನ್ನು ತಕ್ಷಣವೇ ಆಕರ್ಷಿಸುವಂತೆ ಮಾಡುವುದೇ ಕಲೆ. ನೀನು ಸಹಜವಾಗಿಯೇ ಬರಹಗಾರ, ನಿನ್ನ ಆತ್ಮವೇ ಮೃದುವಾದುದು. ನಿಂದನೆ, ಕೂಗಾಟ, ಲೇವಡಿ, ಆಕ್ರೋಶ ನಿನ್ನ ಪ್ರತಿಭೆಗೆ ತಕ್ಕುದಲ್ಲ. ಆದ್ದರಿಂದ, ನಿನ್ನ ‘ಲೈಫ್’ ಕೃತಿಯ ಬರವಣಿಗೆಯಲ್ಲಿ ಅಲ್ಲಲ್ಲಿ ಕಾಣಿಸುವ ‘ಸೂಳೆಮಕ್ಕಳು’, ‘ಪಶುಗಳು’ ಮುಂತಾದ ವಿಶೇಷಣಗಳನ್ನೆಲ್ಲ ಇನ್ನೊಮ್ಮೆ ಪ್ರೂಫ್ ನೋಡುವಾಗ ತೆಗೆದುಹಾಕು.

- ಮ್ಯಾಕ್ಸಿಂ ಗಾರ್ಕಿಗೆ ಬರೆದ ಪತ್ರ, ೧೮೯೯ ಸೆಪ್ಟೆಂಬರ್ ೩


ವಿಮರ್ಶಕರು

ವಿಮರ್ಶಕರು ಎತ್ತುಗಳ ಮೈಮೇಲೆ ಹಾರಾಡುವ ಚಿಕ್ಕಾಡುಗಳಿದ್ದಂತೆ. ಎತ್ತು ತನ್ನ ಪಾಡಿಗೆ ತಾನಿದ್ದರೂ ಈ ನೊಣ ಅದರ ಮೇಲೆ ಹಾರಾಡುತ್ತ, ಗುಂಜಾರವ ಮಾಡುತ್ತ ಬೆನ್ನಿನ ಮೇಲೆ ಕುಳಿತು ಕುಟುಕುತ್ತದೆ. ಎತ್ತಿನ ಚರ್ಮ ಕಂಪಿಸುತ್ತದೆ, ಬಾಲ ಬೀಸುತ್ತದೆ. ನೊಣದ ಗೊಣಗಾಟ ಏನಿರಬಹುದು ? ಅಸ್ಥಿರವಾಗಿರುವುದು ಅದರ ಸ್ವಭಾವ. “ನೋಡು, ನಾನು ಜೀವಂತ ಇದ್ದೇನೆ. ನೋಡು, ನನಗೆ ನಿಂದಿಸುವುದು ಗೊತ್ತು, ನಾನು ಯಾರನ್ನು ಬೇಕಾದರೂ ಬಯ್ಯಬಲ್ಲೆ" ಎನ್ನುತ್ತದೆ.

ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಕತೆಗಳ ಬಗ್ಗೆ ಬರುತ್ತಿರುವ ವಿಮರ್ಶೆಗಳನ್ನು ಓದುತ್ತಲೇ ಇದ್ದೇನೆ. ಯಾವುದರಲ್ಲೂ ನೆನಪಿಡಬಹುದಾದ ಒಂದೇ ಒಂದು ಸಾಲು, ಒಳ್ಳೆಯ ಒಂದು ಸಲಹೆ ನನಗೆ ಸಿಕ್ಕಿಲ್ಲ. ಹ್ಹಾ, ನನ್ನ ಮೇಲೆ ಪ್ರಭಾವ ಬೀರಿದ ಒಂದು ಸಾಲು ನೆನಪಿದೆ, ಕಾಬಿಕೆವ್‌ಸ್ಕಿ ಬರೆದದ್ದು- “ಈ ಮನುಷ್ಯ ಕುಡಿದು ಗಟಾರದಲ್ಲಿ ಬಿದ್ದು ಸಾಯಲಿದ್ದಾನೆ" ಎಂದಾತ ಸರಿಯಾಗಿಯೇ ಭವಿಷ್ಯ ನುಡಿದಿದ್ದ !

- ಮ್ಯಾಕ್ಸಿಂ ಗಾರ್ಕಿಯ ‘ಆನ್ ಲಿಟರೇಚರ್’ ಕೃತಿಯಲ್ಲಿ ಉಲ್ಲೇಖ

Tuesday, August 12, 2008

ಸಿದ್ದೇಶ್ವರನೂ, ದರ್ಗಾ ದೇವರೂ




ಶ್ರೀರಾಮನು ಕೃತಯುಗದಲ್ಲಿ ಶರಯಂ ದಾಟುವುದಕ್ಕೆ ಬಳಸಿದಂಥ ಪರಮಾಯಿಷಿ ಬಂಡೆಗಳಿಂದ ಕೂಡಿದುದೂ, ಭೂಮಿಯಿಂದ ಮುಗಿಲಿನೆತ್ತರಕ್ಕೆ ತನ್ನ ಶಿಖರವಂ ಚಾಚಿ ಹೆದರಿಸುತ್ತಿರುವುದೂ, ರುದ್ರಭಯಾನಕವೂ ಬೀಭತ್ಸವೂ ಆದ ಬೆಟ್ಟದ ಬುಡದಲ್ಲಿ ನಾವು ನಿಂತು ಅದನ್ನು ಹೀಗೆ ಅವಲೋಕಿಸುತ್ತಿರಲಾಗಿ... ಸಂಡೇ ಮಾರ್ನಿಂಗ್ ಹತ್ತು ಗಂಟೆಯಾಗಿತ್ತು. ಹೊಗೆ ಧೂಳು ಜನರಿಂದ ತುಂಬಿ ಗಿಜಿಗುಟ್ಟುವ ಬೆಂಗಳೂರಿನಿಂದ ಹೇಗಾದರೂ ಪಾರಾಗಬೇಕೆಂದು ನಾವೊಂದು ಹತ್ತಾರು ಹುಡುಗರು ಬೈಕುಗಳನ್ನೇರಿ ಸಿಟಿಯಿಂದ ಐವತ್ತು ಕಿ.ಮೀ. ದೂರದಲ್ಲಿರುವ ಬೆಟ್ಟದ ಬುಡ ತಲುಪಿದ್ದೆವು.


ಬೆಟ್ಟದ ಒಂದು ಬದಿಯಿಂದ ಪಾವಟಿಗೆ ಏರಿ ಜನ ಹೋಗುತ್ತಿದ್ದರು. ಎಲ್ಲರೂ ಹೋದ ದಾರಿಯಲ್ಲಿ ನಾವೂ ಹೋದರೆ ಅದು ಚಾರಣ ಹೇಗಾಗುತ್ತದೆ ? ಬೆಟ್ಟದ ಇನ್ನೊಂದು ಬದಿಯಲ್ಲಿ ತುದಿಯವರೆಗೂ ಮುಳ್ಳುಕಂಟಿ, ಕುರುಚಲು, ಬಂಡೆಗಳೇ ತುಂಬಿ ಕಾಲಿಡಲು ತೆರಪಿರಲಿಲ್ಲ. ನಮಗಂತೂ ಅದೇ ಬೇಕಿತ್ತು. ಎಂಟು ಹುಡುಗರು, ಮೂವರು ಹುಡುಗಿಯರ ಜೈತ್ರಯಾತ್ರೆ ಮುಳ್ಳುಗಿಡಗಳಿಗೆ ಬಯ್ಯುತ್ತ ಆರಂಭವಾಯಿತು.


ತುಸು ಎತ್ತರಕ್ಕೆ ಏರುವಷ್ಟರಲ್ಲೇ ನಮ್ಮ ಗುಂಪಿನ ಹುಡುಗಿಯರ ಪಾದಾರವಿಂದಗಳು ಮುಳ್ಳು ತರಚಿ ರಕ್ತರಂಜಿತವಾಗಿ ಕಂಗೊಳಿಸಿದವು. ಅವರ ಸುಕೋಮಲವಾದ ಮುಖದ ಮೇಲೆಲ್ಲ ಮುಳ್ಳುಗಳು ಹರಿದಾಡಿ ಮುತ್ತಿಕ್ಕಿ ನಮ್ಮಲ್ಲಿ ಈರ್ಷ್ಯೆ ಹುಟ್ಟಿಸದೆ ಇರಲಿಲ್ಲ. ಈ ಹುಡುಗಿಯರನ್ನು ಬಂಡೆ ಹತ್ತಿಸುವ ನೆವದಲ್ಲಿ ಅವರ ಮೃದುಮಧುರ ಕುಸುಮಸಮವಾದ ಕರಕಮಲಗಳ ಹಾಗೂ ಪಾದಕಮಲಗಳ ಸ್ಪರ್ಶದ ಭಾಗ್ಯವು ನಮ್ಮದಾಯಿತು. ಬೆವರಿದುದರಿಂದ ತನುಗಂಧವೂ ತಂಗಾಳಿಯೂ ತೀಡಿತು.


‘ಬೆಂಗಳೂರ್ ಮಿರರ್’ನ ಶ್ರೀಧರ್ ವಿಡಿಯೋ ಕೆಮರಾ ಹಿಡಿದು, ‘ಹೀಗೆ ಬನ್ನಿ, ಹಾಗೆ ಬನ್ನಿ’ ಎಂದು ನಿರ್ದೇಶಿಸುತ್ತಾನಾವೆಲ್ಲಾ ಸಾಧ್ಯವಾದಷ್ಟೂ ಬಂಡೆಯ ಎಡೆಯಲ್ಲೂ ಕೊರಕಲಿನಲ್ಲೂ ಮುಳ್ಳುಗಿಡಗಳ ಮೇಲಿನಿಂದಲೂ ಮೈಕೈ ತರಚಿಸಿಕೊಂಡು ಪರಚಿಸಿಕೊಂಡೇ ಬರುವಂತೆ ನಿಗಾ ವಹಿಸಿದರು. ಇಷ್ಟೆಲ್ಲಾ ಮಾಡಿ, ಗುಡ್ಡದ ತುದಿ ಎಂದು ಭಾವಿಸಿದಲ್ಲಿ ಮೇಲೆ ಬಂದು ನೋಡಿದರೆ, ಬೆಟ್ಟ ಇನ್ನೂ ಅರ್ಧಾಂಶವೂ ಮುಗಿದಿರಲಿಲ್ಲ. ಅಲ್ಲಿಂದ ಬಳಿಕ ಬಂಡೆಗಳು ೯೦ ಡಿಗ್ರಿ ಕೋನದಲ್ಲಿ ನಿಂತಿದ್ದರಿಂದ ಅವುಗಳ ಮೇಲೆ ಏರುವಂತೆಯೂ ಇರಲಿಲ್ಲ. ಅನಿವಾರ್‍ಯವಾಗಿ ಪಕ್ಕಕ್ಕೆ ಬಂದು ಮಾಮೂಲಿ ಯಾತ್ರಿಕರು ನಡೆಯುವ ಮೆಟ್ಟಿಲುಗಳ ದಾರಿಯನ್ನೇ ಹಿಡಿದೆವು.


ಇದು ಬೆಂಗಳೂರು- ತುಮಕೂರು ರಸ್ತೆಯ ಪಕ್ಕದಲ್ಲಿರುವ ಸಿದ್ದರಬೆಟ್ಟ. ಗುಡ್ಡದ ತುದಿಯಲ್ಲಿ ಸಿದ್ದೇಶ್ವರ ಸ್ವಾಮಿಯ ಗುಡಿಯಿದೆ. ಗುಡಿಯೆಂದರೆ ಗುಡಿಯಲ್ಲ- ಚಪ್ಪರದಂತೆ ಹಾಸಿದ ಬಂಡೆಗಳ ನಡುವೆ ಪೂಜಿಸಲ್ಪಡುವ ಒಂದು ಕಲ್ಲು. ನಾವು ಹೋದ ದಿನ ಭಕ್ತರು ಬೆಟ್ಟ ಏರಿ ಬಂದು ದೇವರ ಮುಂದೆ ಕೋಳಿ, ಕುರಿ ಬಲಿ ಕೊಟ್ಟು ಬೆಟ್ಟದ ಕೆಳಗೆ ಕೊಂಡೊಯ್ದು ಅಡುಗೆ ಮಾಡಿ ಉಣ್ಣುತ್ತಿದ್ದರು. ದೇವರ ಮುಂದಿನ ನೆಲದ ಮಣ್ಣು ರಕ್ತದಿಂದ ತೊಯ್ದು ಕೆಸರಾಗಿತ್ತು. ಒಂದಿಬ್ಬರು ಕುಂತುಕೊಂಡು ನಿರಂತರವಾಗಿ ತಮಟೆ ಬಾರಿಸುತ್ತಿದ್ದರು. ಅಲ್ಲಿ ಪೂಜಾರಿಯಾಗಲೀ ಪೂಜೆಯಾಗಲೀ ಕಾಣಿಸಲಿಲ್ಲ. "ಬ್ರಾಂಬ್ರೂ ಲಿಂಗಾಯಿತ್ರೂ ಬಂದ್ರೆ ತರಕಾರಿ ಅಡುಗೆ ಮಾಡ್ಕೊಂಡೋಯ್ತಾರೆ. ಶೂದ್ರರು ಮರಿ, ಕೋಳಿ ಕೂದು ಉಣ್ತಾರೆ. ಗುರುವಾರ ಶನಿವಾರ ಜನ ಬರೋದು ಹೆಚ್ಚು" ಎಂಬ ವಿವರವೂ ಇಲ್ಲೇ ಸಿಕ್ಕಿತು.


ಸಿದ್ದೇಶ್ವರ ಸ್ವಾಮಿಯ ಆಚೆ ಪಕ್ಕದಲ್ಲೇ ‘ದರ್ಗಾ ದೇವರು’ ಇದ್ದರು. ಇದೂ ಕೂಡ ಮಸೀದಿಯಲ್ಲ. ಬಂಡೆಗಳ ಕೆಳಗೆ ಒಂದು ಗೋರಿಯಂಥ ರಚನೆ, ಹಸಿರು ಹೊದಿಕೆ, ಕಾಣಿಕೆ ಡಬ್ಬಿ- ಇಷ್ಟೆ. ಜನಪದೀಯ ಸಿದ್ದ ದೇವರೂ ಸಾಬರ ದೇವರೂ ಇಲ್ಲಿ ಏಟೋ ವರ್ಷಗಳಿಂದ ಅಕ್ಕಪಕ್ಕದಲ್ಲೇ ಕುಂತು ಮಾತಾಡಿಕೋತ ನಕ್ಕು ಮಲಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಇಲ್ಲಿ ಬಂದ ಹಿಂದೂಗಳೂ ಮುಸಲರೂ ತಾವು ಯಾವ ಜಾತಿಮತವೆಂಬುದನ್ನೂ ಮರೆತು ಇಲ್ಲಿರುವ ಎರಡೂ ದೇವರಿಗೆ ಕಾಯಿಕರ್ಪೂರ ಸಲ್ಲಿಸುತ್ತಾರೆ. ದರ್ಗಾದೇವರಿಗೆ ಕುಂಕುಮ ಹಚ್ಚಬೇಡಿರೆಂದೂ ಸಿದ್ದೇಶ್ವರನಿಗೆ ನಮಾಜು ಮಾಡಬೇಡಿರೆಂದೂ ಇನ್ನೂ ಯಾವ ತಲೆಮಾಸಿದ ಸಂಘಟನೆಯೂ ಇಲ್ಲಿ ಕ್ಯಾತೆ ತೆಗೆದಂತಿಲ್ಲ.


ಇಲ್ಲಿ ನಮಗೆ ಕಿರಣ ಎಂಬ ಅಲ್ಲಿನ ಪುಟ್ಟ ಹುಡುಗನೊಬ್ಬ ಗಂಟುಬಿದ್ದ. "ಇಲ್ಲೇ ಬೆಟ್ಟದ ಮ್ಯಾಲೆ ಕಲ್ಡಿಗಳದಾವೆ. ಗುಹೆ ತೋರುಸ್ತೀನಿ ಬನ್ನಿ" ಎಂದ. ಕುತೂಹಲದಿಂದ ಅವನನ್ನು ಹಿಂಬಾಲಿಸಿದ್ದಾಯಿತು. ಅಲ್ಲಿರುವ ಕಲ್ಲುಕಲ್ಲಿಗೂ ಏನೋ ಕತೆ ಕಟ್ಟಿ ನಮ್ಮನ್ನು ಯಾಮಾರಿಸಲು ನೋಡುತ್ತಿದ್ದ. ಒಂದು ಕಡೆ ಪಾಳು ಮಂಟಪವೊಂದರ ಮೇಲೆ ಬಿಳಲುಗಳನ್ನು ಬಿಟ್ಟುಕೊಂಡು ಕುಳಿತಿದ್ದ ಆಲದ ಮರವನ್ನು ತೋರಿಸಿ, "ಇದರೆಡೇಲಿ ನಾಣ್ಯ ಸಿಕ್ಕಿಸಿಬಿಟ್ಟು ಹೋದ್ರೆ ನಿಮ್ಮ ಆಶೆ ಇದ್ದಂಗೇ ಆಗ್ತದೆ" ಅಂದ. ಅಲ್ಲಿ ನಾಣ್ಯ ಸಿಕ್ಕಿಸಿದ ಗುರುತುಗಳಿದ್ದವು. ನಾವ್ಯಾರೂ ರೂಪಾಯಿ ಕಳೆದುಕೊಳ್ಳಲು ತಯಾರಿರಲಿಲ್ಲವಾದ್ದರಿಂದ ಅವನಿಗೆ ನಿರಾಶೆಯಾಯಿತು.


ಆಮೇಲೆ ಕಲ್ಡಿ ವಾಸಿಸುವ ಗುಹೆ ಅಂತ ಒಂದಷ್ಟು ಬಂಡೆಗಳ ಸಮೂಹ ತೋರಿಸಿದ. ಅಲ್ಲಿ ಕಲ್ಡಿಯೇನು, ಇಲಿ ಕೂಡ ಇರುವಂತೆ ಕಾಣಲಿಲ್ಲ. ಆದರೆ ಬಂಡೆಗೊಂದು ಕತೆ ಕಟ್ಟಿ ರಂಜಿಸುತ್ತಿದ್ದ ಈ ಹುಡುಗ ಮುಂದೆ ಒಬ್ಬ ಪ್ರತಿಭಾವಂತ ಕತೆಗಾರನಾಗುವ ಎಲ್ಲ ಸಾಧ್ಯತೆಯೂ ಕಂಡವು. ಆತನ ಚುರುಕುತನದಿಂದ ಖುಷಿಯಾಗಿ ನಾವು ದುಡ್ಡು ನೀಡದೆ ಇರಲಿಲ್ಲ.


ಬೆಟ್ಟದ ತುತ್ತ ತುದಿಯಲ್ಲಿ ಒಂದೆರಡು ಪಾಳು ಗುಡಿಗಳು, ಮಂಟಪಗಳೂ ಇದ್ದವು. ಇದೆಲ್ಲ ಒಂದು ಕಾಲದಲ್ಲಿ ತುಂಬ ಜನ ಓಡಿಯಾಡಿದ, ನೆಲೆನಿಂತ, ಪೂಜೆ ಸಲ್ಲಿಸಿಕೊಂಡ, ಕೀರ್ತಿ ಗಳಿಸಿಕೊಂಡ ಕಟ್ಟೋಣಗಳಾಗಿದ್ದಿರಬಹುದು. ಈಗ ಮಾತ್ರ ಅವುಗಳ ನಡುವಿನಿಂದ ಸೀಳಿಕೊಂಡು ಬರುವ ಗಾಳಿ ಪಾಳು ವಾಸನೆಯನ್ನೂ ಸ್ಮಶಾನದಿಂದ ಹೊರಬೀಳುವ ಸಿಳ್ಳಿನ ಶಬ್ದವನ್ನೂ ನೆನಪಿಸಿ ನಡುಗಿಸುತ್ತದೆ.


ಬೆಟ್ಟ ಇಳಿದು ಬರುವಾಗ ಪುಟ್ಟ ಪುಟ್ಟ ಮಕ್ಕಳೂ, ಮುಪ್ಪಾನು ಮುದುಕಿಯರೂ ಬೆಟ್ಟ ಹತ್ತಿ ಹೋಗುವುದು ಕಂಡಿತು. ಮುಖದ ಮೇಲೆ ನೂರಾರು ಸುಕ್ಕುಗಳನ್ನು ಧರಿಸಿ ಹಲವಾರು ಶತಮಾನಗಳಷ್ಟು ಹಳೆಯದಾಗಿರಬಹುದಾಗಿದ್ದ ಅಜ್ಜಿಯೊಬ್ಬಳು ತನ್ನನ್ನು ನಡೆಸುತ್ತಿದ್ದ ಮಗನಿಗೆ, "ನೀನು ಸಣ್ಣೋನಿದ್ದಾಗ..." ಅಂತ ಹಳೆಯ ಭೇಟಿಯ ಕತೆಯನ್ನು ನಮಲುತ್ತಿದ್ದಳು. ಅವನು ಕೋಳಿಯನ್ನು ತೂಗಾಡಿಸುತ್ತಾ "ಸಾಕು ನಡಿಯಬೇ" ಎನ್ನುತ್ತಿದ್ದ.
*

Sunday, August 3, 2008

ನನ್ನ ಭವಿಷ್ಯ ನಾನೇ ಬರೆಯುತ್ತೇನಾ ?


ಡಾ.ಆಮಿರ್ ಆಲಿ, ವಿದೇಶದಲ್ಲಿ ವೈದ್ಯಕೀಯ ಅಧ್ಯಯನ ಮುಗಿಸಿ ತಾಯ್ನಾಡಿಗೆ ಹಿಂತಿರುಗುತ್ತಿದ್ದಾನೆ. ಮುಂಬಯಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಕಾರಿಗಳಿಗೆ ಯಾಕೋ ಈತನನ್ನು ತಪಾಸಣೆ ಮಾಡಿದಷ್ಟೂ ಮುಗಿಯದು. "ಡಾಕ್ಟರ್, ಇಂಜಿನಿಯರ್‌ಗಳೇ ನಮ್ಮ ದೇಶದ ಮರ್‍ಯಾದೆ ಹೆಚ್ಚಿಸಿರೋದು" ಎಂಬುದು ಆತನ ವ್ಯಂಗ್ಯ. "ನನ್ನ ಹೆಸರು ಅಮರ್ ಎಂದಿದ್ದರೆ ನೀವು ಹೀಗೆಲ್ಲ ಮಾಡುತ್ತಿದ್ದಿರಾ" ಎಂಬುದು ರೋಸಿದ ಆಮಿರ್ ಆಲಿಯ ಪ್ರಶ್ನೆ.

ಏರ್‌ಪೋರ್ಟ್‌ನಿಂದ ಹೊರಗೆ ಬಂದರೆ ಆತನನ್ನು ರಿಸೀವ್ ಮಾಡಬೇಕಾದ ಮನೆಯವರಿಲ್ಲ. ಫೋನ್ ಮಾಡಿದರೆ ಮನೆಯಲ್ಲೂ ಯಾರೂ ಇಲ್ಲ. ಅಪರಿಚಿತನೊಬ್ಬ ಆತನೆಡೆಗೊಂದು ಮೊಬೈಲ್ ಎಸೆಯುತ್ತಾನೆ. ಅದಕ್ಕೆ ಬಂದ ಕರೆ, ತಾನು ಹೇಳಿದ್ದನ್ನು ಮಾಡುವಂತೆ ಆಮಿರ್‌ಗೆ ಆದೇಶಿಸುತ್ತದೆ. ಆಮಿರ್‌ನ ಎಲ್ಲ ವಿವರಗಳೂ ಆ ದನಿಗೆ ಗೊತ್ತು. ಆಮಿರ್ ಮನೆಯವರು ಆ ಧ್ವನಿಯ ಒಡೆಯನ ಹಿಡಿತದಲ್ಲಿದ್ದಾರೆ.

ಅಲ್ಲಿಂದ ಬಳಿಕ ಫೋನ್ ಕರೆಯ ನಿರ್ದೇಶನದಂತೆ ಆಮಿರ್ ನಡೆಯಬೇಕಾಗುತ್ತದೆ. ಆತನನ್ನು ಮುಂಬಯಿಯ ಬಡ ಮುಸ್ಲಿಂ ಜನತೆ ವಾಸಿಸುವ ಪ್ರದೇಶಗಳಲ್ಲಿ ಸುತ್ತಾಡಿಸುತ್ತದೆ ಆ ದನಿ. "ನೋಡಿದೆಯಾ ನಿನ್ನ ಸಮುದಾಯದವರು ಎಂಥ ಹೀನ ಬಾಳು ಬದುಕುತ್ತಿದ್ದಾರೆ ಎಂಬುದನ್ನು ?" ಎಂದು ಆ ಧ್ವನಿ ಇರಿಯುತ್ತದೆ. "ನಾನೂ ಬಡ ಕುಟುಂಬದವನೇ. ಆದರೆ ಸಾಧನೆಯ ಮೂಲಕ ಮೇಲೆ ಬಂದೆ. ಇವರೆಲ್ಲ ಹೀಗೇ ಉಳಿಯಬೇಕೆಂದು ಯಾರು ನಿರ್ಬಂಸಿದ್ದರು ?" ಎಂದು ಆಮಿರ್ ಮರು ಪ್ರಶ್ನಿಸುತ್ತಾನಾದರೂ ಅವನಿಗೆ ಉತ್ತರ ದೊರೆಯುವುದಿಲ್ಲ.

ಕೊನೆಗೆ ಆತನಿಗೊಂದು ಸೂಟ್‌ಕೇಸ್ ನೀಡಿ ಬಸ್‌ನಲ್ಲಿ ಅದನ್ನು ಕೊಂಡೊಯ್ಯುವಂತೆ ಹೇಳಲಾಗುತ್ತದೆ. ಅದರಲ್ಲಿ ಬಾಂಬ್ ಇದೆ. ಅದನ್ನು ಜನ ತುಂಬಿದ ಬಸ್‌ನಲ್ಲಿ ಇಟ್ಟು ಆತ ಇಳಿಯಬೇಕು. ಅದು ಸೋಟಿಸಲು ಎರಡೇ ನಿಮಿಷಗಳಿವೆ. ಈ ಕೆಲಸ ಮಾಡದಿದ್ದರೆ ಆಮಿರ್‌ನ ಮನೆಯವರು ಉಳಿಯುವುದು ಅನುಮಾನ.

*
ನಿಮಗೀಗಾಗಲೇ ಗೊತ್ತಾಗಿರಬಹುದು. ಇದು ಹಿಂದಿಯ ‘ಆಮಿರ್’ ಚಲನಚಿತ್ರದ ಕತೆ. ಕತೆಯ ಅಂತಸ್ಸತ್ವ ಇರುವುದೇ ಕೊನೆಯ ಎರಡು ನಿಮಿಷಗಳಲ್ಲಿ. ಅಲ್ಲಿಯವರೆಗೂ ಈ ಚಿತ್ರ ನಿಮ್ಮನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ಆಮಿರ್ ಹಾಗೂ ಭೂಗತ ನಾಯಕ ಎರಡೇ ಇದರ ಪ್ರಮುಖ ಪಾತ್ರಗಳು. ಉಳಿದವೆಲ್ಲಾ ಕ್ಷಣಮಾತ್ರದಲ್ಲಿ ಹಾದು ಹೋಗುವ ಪಾತ್ರಗಳಾದುದರಿಂದ ಚಿತ್ರಕ್ಕೊಂದು ಶೀಘ್ರಗತಿ ಸಿಕ್ಕಿದೆ. ಸೂಕ್ಷ್ಮ ಸಂವೇದಿ ಕತೆ, ಬಿಗಿಯಾದ ನಿರೂಪಣೆ, ಅಭಿನಯ- ಇವೆಲ್ಲವುಗಳ ಬಗ್ಗೆ ಹೇಳಬೇಕಾಗಿಯೇ ಇಲ್ಲ.

ನಾನು ಈ ಫಿಲಂ ನೋಡಿದ್ದು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸೋಟ ನಡೆದ ಆಸುಪಾಸಿನಲ್ಲಿ. ಆಮೇಲೆ ಅಹಮದಾಬಾದ್‌ನಲ್ಲಿ ಸೋಟ, ಸಾವುನೋವು, ಸೂರತ್‌ನಲ್ಲಿ ಆತಂಕದ ಗುಮ್ಮ. ಇವೆಲ್ಲ ‘ಕೆಂಪಾಗಿ’ರುವಾಗಲೇ ನಾನು ಇದನ್ನು ನೋಡಿದ್ದು. ಈ ಫಿಲಂ ಹಾಗೂ ಅದರ ಸಂದರ್ಭಗಳು ಒಂದು ವಿಲಕ್ಷಣವಾದ ತಲ್ಲಣ ಉಂಟುಮಾಡಿದವು. ಚಿತ್ರದ ಶೀರ್ಷಿಕೆಯಡಿ ಇರುವ "ಮನುಷ್ಯ ತನ್ನ ಭವಿಷ್ಯ ತಾನೇ ಬರೆದುಕೊಳ್ಳುತ್ತಾನೆ ಎಂದು ಹೇಳಿದವರ್‍ಯಾರು ?" ಎಂಬ ಉಪಶೀರ್ಷಿಕೆಯ ಅನೇಕ ಅರ್ಥಗಳು ಹೊಳೆಯತೊಡಗಿದವು.

ಈ ಚಲನಚಿತ್ರದ ಆಮಿರ್‌ನಂತೆ ನಾವೂ ಅಸಂಗತ ಪರಿಸ್ಥಿತಿಯಲ್ಲಿ ಇದ್ದೇವೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಾಂಬುಗಳು ಬಂದು ನಮ್ಮ ನಿಮ್ಮ ಮನೆಯ ಪಕ್ಕದಲ್ಲೇ ಸೋಟಿಸುತ್ತವೆ. ಅದರಲ್ಲಿ ಸಾಯುವ ಅಥವಾ ಗಾಯಗೊಳ್ಳುವವರ ಪಟ್ಟಿಯಲ್ಲಿ ನಾನೂ ನೀವೂ ಸೇರಿಸಿದಂತೆ ಯಾರೂ ಇರಬಹುದು. ಕೊಲ್ಲವವರಿಗೆ ತಾವು ಯಾರನ್ನು ಯಾಕೆ ಕೊಲ್ಲುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಸಾಯುವವರಿಗೂ ತಾವು ಯಾರಿಂದ ಯಾಕೆ ಸಾಯಿಸಲ್ಪಡುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಇದಕ್ಕಿಂತ ಅಸಂಗತ ವಿವರ ಇನ್ನೊಂದಿರಲು ಸಾಧ್ಯವೆ ?

ಇಂಥ ಅಸಂಗತ ಪರಿಸ್ಥಿಯ ಬಗ್ಗೆ ಕನ್ನಡದಲ್ಲಿ ಸೊಗಸಾಗಿ ಬರೆದವರು ಪೂರ್ಣಚಂದ್ರ ತೇಜಸ್ವಿ. ಅವರ ‘ಜುಗಾರಿ ಕ್ರಾಸ್’ ನೋಡಿ. ಒಂದಕ್ಕೊಂದು ಸಂಬಂಧವಿಲ್ಲದ ಘಟನಾವಳಿಗಳು ಹಾಗೂ ಪಾತ್ರಗಳು ಕಾದಂಬರಿಯ ಹಂದರವನ್ನು ಕಟ್ಟುತ್ತವೆ. ‘ಚಿದಂಬರ ರಹಸ್ಯ’ದಲ್ಲೂ ಇದೇ ಆಗುವುದು. ಕಾದಂಬರಿಯ ಕೊನೆಗೆ ಬೆಟ್ಟ ಹತ್ತಿ ಪಾರಾಗಿ ಏದುಸಿರು ಬಿಡುವ ರಫೀಕ್ ಮತ್ತು ಜಯಂತಿಯರಿಗೆ ತಮ್ಮ ಪ್ರೇಮಕ್ಕೂ ತಮ್ಮೂರಿನ ಬೆಂಕಿಗೂ ಹಿಂದೆ ಘಟನಾ ಪರಂಪರೆಯೊಂದು ಇದೆ ಎಂಬುದು ಗೊತ್ತೇ ಇಲ್ಲ. ‘ನಿಗೂಢ ಮನುಷ್ಯರು’ ಕತೆಯ ಜಗನ್ನಾಥ, ರಂಗಣ್ಣ, ಗೋಪಾಲಯ್ಯ ಎಲ್ಲರೂ ಇಂಥ ನಿಗೂಢ ಅಸಂಗತ ಪ್ರವಾಹವೊಂದರ ಸುಳಿಯಲ್ಲಿ ಸಿಲುಕಿದವರೇ.

ಇದನ್ನು ‘ಅಸಂಗತ’ ಎನ್ನುವುದಕ್ಕಿಂತ ಬೇರೊಂದು ಬಗೆಯಲ್ಲೂ ವ್ಯಾಖ್ಯಾನಿಸಬಹುದು. ಯಾವುದೋ ರೀತಿಯಲ್ಲಿ ಒಂದಕ್ಕೊಂದು ಹೆಣೆದುಕೊಂಡ, ಆದರೆ ಅರ್ಥೈಸಲು ಜಟಿಲವಾದ ಘಟನಾವಿನ್ಯಾಸದಲ್ಲಿ ಆಧುನಿಕ ಮನುಷ್ಯನ ಬದುಕು ಹೆಣೆದುಕೊಂಡಿದೆ. ಇದನ್ನು ಕನ್ನಡದಲ್ಲಿ ಎಲ್ಲರಿಗಿಂತ ಮೊದಲು ಗುರುತಿಸಿ, ಬರೆದವರು ತೇಜಸ್ವಿ.

ವಾಸ್ತವ ಬದುಕಿನ ಭಯಾನಕತೆಯನ್ನು ಸ್ಪಷ್ಟಪಡಿಸಿಕೊಳ್ಳಲು ನಾವು ಸಿನೆಮಾ, ಸಾಹಿತ್ಯದ ಮೊರೆ ಹೋಗಲೇಬೇಕು !

Saturday, July 26, 2008

ತಸ್ಲಿಮಾಳ ಇನ್ನೊಂದು ಕವನ

ಇದು ಬಾಂಗ್ಲಾದ ಲೇಖಕಿ ತಸ್ಲಿಮಾ ನಸ್ರೀನ್ ಬರೆದ ಮತ್ತೊಂದು ಕವನ. ಈ ಕವನ ಬಾಂಗ್ಲಾದ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿತ್ತು. ಕವನದಲ್ಲಿ ಪ್ರವಾದಿ ಮುಹಮ್ಮದ್‌ರನ್ನು ಅವಹೇಳನ ಮಾಡಲಾಗಿದೆ ಎಂದು ಅವರ ದೂರು.
ಅದಕ್ಕಿಂತಲೂ ಈ ಕವನ ನನಗೆ ಆಪ್ತವಾಗಲು ಕಾರಣ- ನನ್ನ ಅಮ್ಮ. ಆಕೆ ಈಗಿಲ್ಲ.

ಅಮ್ಮ
-೧-
ಕೊನೆಗಾಲದಲ್ಲಿ ನನ್ನಮ್ಮನ ಕಂಗಳು ಮೊಟ್ಟೆಯ ಲೋಳೆಯಂತೆ ಹಳದಿಯಾಗಿದ್ದವು
ನೀರು ತುಂಬಿದ ಚೀಲದಂತೆ ಆಕೆಯ ಹೊಟ್ಟೆ ದಿನದಿಂದ ದಿನಕ್ಕೆ ಊದಿಕೊಂಡು
ಯಾವುದೇ ಕ್ಷಣದಲ್ಲಿ ಸಿಡಿಯುವಂತಾಗಿತ್ತು
ನಿಲ್ಲಲಾಗದೆ, ಕುಳಿತಿರಲೂ ಆಗದೆ, ಬೆರಳುಗಳ ಚಲಿಸಲಾಗದೆ
ಆಕೆ ಮಲಗಿದಲ್ಲಿಯೇ ಇರುತ್ತಿದ್ದಳು
ಕೊನೆಕೊನೆಗೆ ಆಕೆ ಅಮ್ಮನಂತೆಯೂ ಕಾಣುತ್ತಿರಲಿಲ್ಲ

ಪ್ರತಿ ಸಂಜೆ ಪ್ರತಿ ಹಗಲು ಬಂಧುಗಳು ಬರುತ್ತಿದ್ದರು
ಸಿದ್ಧವಾಗಿರಲು ಸೂಚಿಸುತ್ತ
ಪವಿತ್ರ ಶುಕ್ರವಾರ ಹತ್ತಿರದಲ್ಲಿದೆ, ನಿರಾಶಳಾಗದಂತೆ ಆಕೆಗೆ ಹೇಳುತ್ತ,
ಲಾ ಇಲಾಹ್ ಇಲ್ಲಲ್ಲಾಹ್- ಅಲ್ಲಾಹು ಒಬ್ಬನೇ ಅನ್ನುತ್ತ
ಪ್ರಶ್ನೆಗಳ ಕೇಳಲು ಇಬ್ಬರು ದೇವತೆಗಳು ಬರುವರು- ಮುಂಕಾರ್ ಮತ್ತು ನಕೀರ್
ಕೋಣೆ, ಜಗಲಿಗಳ ಪರಿಶುದ್ಧಗೊಳಿಸಲು ಹೇಳುವರು
ಕೊನೆಗೊಮ್ಮೆ ಮೃತ್ಯು ಬರುವಾಗ ಸುರ್ಮಾ ಹಾಗೂ ಅತ್ತರು ಕೈಯಲ್ಲಿರಬೇಕು ಅನ್ನುವರು

ಹಸಿದ ಕಾಯಿಲೆ ಈಗ ನರ್ತಿಸುತ್ತಿದೆ ಅಮ್ಮನ ದೇಹದ ಮೇಲೆ
ಆಕೆಯಲ್ಲಿ ಉಳಿದ ಕೊನೆಯ ಬಲವನ್ನೂ ಹೀರಿದೆ
ಅವಳ ಕಣ್ಣುಗಳು ಸಿಡಿದುಹೋಗುವಂತೆ ಉಬ್ಬಿವೆ
ನಾಲಿಗೆ ಒಣಗಿದೆ
ಎದೆಯಲ್ಲಿದ್ದ ಗಾಳಿಯನ್ನೂ ಕಸಿದಿದೆ
ಅವಳು ಉಸಿರಾಡಲು ಒದ್ದಾಡುತ್ತಿರುವಂತೆ
ಹಣೆ, ಹುಬ್ಬುಗಳು ವೇದನೆಯಿಂದ ಗಂಟಿಕ್ಕುತ್ತಿರುವಂತೆ
ಮನೆಯವರು ಒಂದಾಗಿ ನಿಂತು ಆಕೆಗಾಗಿ ಪ್ರಾರ್ಥಿಸಿದೆವು
ಆಕೆಯ ಶಾಂತಿಗಾಗಿ ಪ್ರವಾದಿಗೆ ಬೇಡಿದೆವು
ಆಕೆ ಜನ್ನತುಲ್ ಫಿರ್ದೌಸ್ ಸ್ವರ್ಗಕ್ಕೆ ಹೋಗುತ್ತಾಳೆಂಬುದರಲ್ಲಿ ನಮಗೆ ಅನುಮಾನವಿಲ್ಲ

ಒಂದು ರಮಣೀಯ ಸಂಜೆ ಸ್ವರ್ಗದ ಉದ್ಯಾನದಲ್ಲಿ
ಮುಹಮ್ಮದರ ಕೈಗೆ ಕೈ ಬೆಸೆದು ನಡೆದು
ಇಬ್ಬರೂ ಹಕ್ಕಿ ಮಾಂಸದ ಊಟ, ವೈನು ಸೇವಿಸಿ...
ತಾಯಿಯ ಜೀವಿತದ ಕನಸಾಗಿತ್ತು ಅದು

ಆದರೆ ಈಗ, ತಿರೆಯ ತೊರೆಯುವ ವೇಳೆ, ಅವಳು ಅಂಜಿದಳು ಎಂಬುದೇ ಅಚ್ಚರಿ
ಹೊರಗೆ ಕಾಲಿಡುವ ಬದಲು ಅವಳು ನನಗೆ ಬಿರಿಯಾನಿ ಮಾಡಿಕೊಡಲು
ಹಿಲ್ಸಾ ಮೀನನ್ನು ಕರಿದು ಕೊಡಲು
ಕೆಂಪು ಆಲೂಗಳಿಂದ ಸಾಗು ತಯಾರಿಸಲು
ತೋಟದ ದಕ್ಷಿಣ ಮೂಲೆಯ ಮರದಿಂದ ಎಳನೀರು ಕಿತ್ತುಕೊಡಲು
ಕೈ ಬೀಸಣಿಕೆಯಿಂದ ಗಾಳಿ ಹಾಕಲು
ಹಣೆಯ ಮೇಲೆ ಕುಣಿದಾಡುತ್ತಿದ್ದ ಕುರುಳನ್ನು ಅತ್ತ ಸರಿಸಲು
ನನ್ನ ಹಾಸಿಗೆಯ ಮೇಲೆ ಹೊಸ ಚಾದರ ಹೊದಿಸಲು
ಕಸೂತಿ ಎಳೆದ ಹೊಸ ಫ್ರಾಕು ಹೆಣೆಯಲು
ಬರಿಗಾಲಿನಲ್ಲಿ ಜಗಲಿಯ ಮೇಲೆ ನಡೆಯಲು
ಸಣ್ಣ ಪಪ್ಪಾಯಿ ಗಿಡಕ್ಕೊಂದು ಊರುಗೋಲಿಡಲು
ತೋಟದಲ್ಲಿ ಸಣ್ಣಗೆ ಹಾಡುತ್ತ ಕುಳಿತಿರಲು -
"ಇಂಥ ಸುಂದರ ಚಂದ್ರ ಹಿಂದೆಂದೂ ಬರಲಿಲ್ಲ,
ಇಷ್ಟು ಸೊಬಗಿನ ಇರುಳು ಹಿಂದೆಂದೂ ಇರಲಿಲ್ಲ..."

ನನ್ನಮ್ಮ ಬದುಕಲು ಎಷ್ಟೊಂದು ಹಾತೊರೆದಿದ್ದಳು.

-೨-
ನನಗೀಗ ಗೊತ್ತಿದೆ, ಪುನರ್ಜನ್ಮವಿಲ್ಲ
ಕೊನೆಯ ತೀರ್ಪಿನ ದಿನವೂ ಇಲ್ಲ
ಸ್ವರ್ಗ, ಹಕ್ಕಿ ಮಾಂಸದ ಊಟ, ವೈನು, ಗುಲಾಬಿ ಕನ್ಯೆಯರು
ಇವೆಲ್ಲ ಧರ್ಮಗುರುಗಳು ಹೆಣೆದ ಭ್ರಮೆಯ ಜಾಲ
ನನ್ನಮ್ಮ ಸ್ವರ್ಗಕ್ಕೆ ಹೋಗುವುದಿಲ್ಲ
ಯಾವ ಉದ್ಯಾನದಲ್ಲೂ ಯಾರ ಜತೆಗೂ ನಡೆಯುವುದಿಲ್ಲ
ಕೆಟ್ಟ ನರಿಗಳು ಅವಳ ಗೋರಿಯ ಹೊಕ್ಕು, ಮಾಂಸ ಮುಕ್ಕುವವು
ಅವಳ ಬಿಳಿ ಎಲುಬುಗಳು ಗಾಳಿಗೆ ಚದುರಿ ಹರಡುವವು

ಆದರೂ, ಸ್ವರ್ಗವೊಂದಿದೆಯೆಂದು ನಾನು ನಂಬುವೆ
ಏಳು ಆಕಾಶಗಳ ಮೇಲೆ ಒಂದು ಅತಿಭವ್ಯ ಸ್ವರ್ಗ
ಕಷ್ಟಕರ ಸೇತುವೆ ಪಲ್ಸಿರತ್ತನ್ನು ನಿರಾಯಾಸ ದಾಟಿ ನನ್ನಮ್ಮ ಅಲ್ಲಿಗೆ ತಲುಪಿರುವಳು
ಸುಂದರಾಂಗ ಪ್ರವಾದಿ ಮುಹಮ್ಮದ್ ಆಕೆಯ ಸ್ವಾಗತಿಸುವನು
ತನ್ನ ಪೊದೆಗೂದಲ ಎದೆಯ ಮೇಲೆ ಕರಗುವಂತೆ ಆಕೆಯ ತಬ್ಬುವನು
ಕಾರಂಜಿಯಲ್ಲಿ ಮೀಯಲು, ನರ್ತಿಸಲು, ಉಲ್ಲಾಸದಿಂದ ಜಿಗಿಯಬಯಸುವಳು
ಚಿನ್ನದ ತಪ್ಪಲೆಯಲ್ಲಿ ಹಕ್ಕಿ ಮಾಂಸ ತರಿಸಿ
ಎದೆ ಉಕ್ಕಿ ಬಿರಿಯುವಂತೆ ಸೇವಿಸುವಳು
ಆಕೆಯ ನೋಡಲು ಸ್ವತಃ ಅಲ್ಲಾಹು ಉದ್ಯಾನಕ್ಕೆ ಬರುವನು
ಅವಳ ತಲೆಗೆ ಕೆಂಪು ಹೂವು ಮುಡಿಸಿ ವ್ಯಾಮೋಹದಿಂದ ಚುಂಬಿಸುವನು
ಹಕ್ಕಿಗರಿಗಳ ಹಾಸಿಗೆಯ ಮೇಲೆ ಆಕೆ ಮೃದುವಾಗಿ ಪವಡಿಸುವಳು
ಏಳುನೂರು ಹುರ್ ಕನ್ನೆಯರು ಆಕೆಗೆ ಗಾಳಿ ತೀಡುವರು
ನವಯವ್ವನದ ಗೆಲ್ಬನ್ ದೇವತೆಗಳು ಬೆಳ್ಳಿ ತಟ್ಟೆಯಲ್ಲಿ ತಣ್ಣಗಿನ ನೀರು ಕೊಡುವರು
ಸಂತೋಷದ ಉಬ್ಬರದಲ್ಲಿ ಮೈ ಕುಲುಕುವಂತೆ ಆಕೆ ನಗುವಳು
ನೆಲದ ಮೇಲೆ ಕಳೆದ ಸಂಕಟದ ದಿನಗಳನು ಆಕೆ ಮರೆತೇ ಬಿಡುವಳು

ನಾನು ನಾಸ್ತಿಕಳು ನಿಜ
ಆದರೆ ಅಲ್ಲೆಲ್ಲೋ ಒಂದು ಸ್ವರ್ಗವಿದೆಯೆಂದು
ನಂಬುವುದು ಎಂಥ ಸುಖ.

Friday, July 11, 2008

ದಿನೇಶ ಕಂಡ ಹಣದುಬ್ಬರ


ನಾವೆಲ್ಲಾ ಊರು ಬಿಟ್ಟೆವು. ತುತ್ತು ಕೂಳಿಗಾಗಿ, ಹಣಕ್ಕಾಗಿ, ಸೂರಿಗಾಗಿ. ನನ್ನ ಗೆಳೆಯ ದಿನೇಶ್ ಕುಕ್ಕುಜಡ್ಕ ಮಾತ್ರ ಬಿಡಲಿಲ್ಲ.
ನಾನು ಬಿಟ್ಟುಬಂದ ಬಂಟಮಲೆಯ ತಪ್ಪಲಿನ ಕುಕ್ಕುಜಡ್ಕ ಎಂಬ ಪುಟ್ಟ ಊರಿನಲ್ಲೇ ಉಳಿದು, ಜಗತ್ತಿನ ಅತ್ಯುತ್ತಮ ಸಾಹಿತಿಗಳನ್ನೂ ಅತಿಶ್ರೇಷ್ಠ ಚಿತ್ರಕಾರರನ್ನೂ ಅದು ಹೇಗೋ ಮುಖಾಮುಖಿಯಾಗುತ್ತ, ಸಮಕಾಲೀನ ವಿದ್ಯಮಾನಗಳಿಗೆ ತೀಕ್ಷ್ಣ ಪ್ರತಿಕ್ರಿಯೆಗಳನ್ನು ತನ್ನ ವ್ಯಂಗ್ಯಚಿತ್ರಗಳ ಮೂಲಕ ನೀಡುತ್ತ ಬರುತ್ತಿದ್ದಾನೆ. ಆತ ಈಗ ಕೊಡಗಿನ ‘ಶಕ್ತಿ’ ಪತ್ರಿಕೆಯ ವ್ಯಂಗ್ಯಚಿತ್ರ ಕಲಾವಿದ.
ನನ್ನ ಭವಿಷ್ಯ ನನ್ನ ಗೆರೆಗಳಲ್ಲಿಯೇ ಇದೆ ಎಂದು ನಂಬಿರುವ ದಿನೇಶ, ಊರಿನ ಭ್ರಷ್ಟರನ್ನು ಎದುರು ಹಾಕಿಕೊಳ್ಳಲೂ ಅಂಜಿದವನಲ್ಲ. ಆತ ಮೊನ್ನೆ ಮೊನ್ನೆ ಬರೆದ ಈ ಕಾರ್ಟೂನನ್ನು ನೋಡಿದಾಗ ಅದರ ಹಿಂದಿನ ಕರಾಳ ವ್ಯಂಗ್ಯ ಕಂಡು ಮೈ ಜುಮ್ಮೆಂದಿತು.
ನೀವೂ ನೋಡಿದರೆ ಚೆನ್ನಾಗಿರ್‍ತುತದೆಂದು ಬ್ಲಾಗಿಸಿದ್ದೇನೆ.

Friday, July 4, 2008

ತಸ್ಲಿಮಾಳ ಒಂದು ಕೆಂಡದಂಥ ಕವಿತೆ

ಮೂಲಭೂತವಾದಿಗಳ ಪ್ರತಿರೋಧವನ್ನೂ, ಗಂಡಸರ ಅಸಹನೆಯನ್ನೂ ಬೆನ್ನಿಗಿಟ್ಟುಕೊಂಡು ತಸ್ಲಿಮಾ ನಸ್ರೀನ್ ಎಂಬ ಹುಡುಗಿ ದೇಶದಿಂದ ದೇಶಕ್ಕೆ ಅಲೆಯುತ್ತಲೇ ಇದ್ದಾಳೆ. ಬೆನ್ನಟ್ಟುತ್ತಿರುವ ಬೇಟೆ ನಾಯಿಗಳ ಕಾರಣ ಆಕೆಯ ಧೈರ್‍ಯವೂ ಕೊಂಚ ಉಡುಗಿದಂತಿದೆ. ಆದರೆ ಅಷ್ಟು ಸುಲಭಕ್ಕೆಲ್ಲಾ ತನ್ನೊಳಗಿನ ಬೆಂಕಿಯನ್ನು ಆರಲು ಬಿಡದ ತಸ್ಲಿಮಾ ಆತ್ಮಚರಿತ್ರೆ ಬರೆದು ಬಾಂಗ್ಲಾದ ಮುಸ್ಲಿಮರನ್ನು ಇನ್ನಷ್ಟು ಚಚ್ಚಲು ಹವಣಿಸುತ್ತಿದ್ದಾಳೆ. ಈಕೆಯ ಧೈರ್‍ಯಕ್ಕೆ ಒಂದು ನಮಸ್ಕಾರ ಸಲ್ಲಿಸುತ್ತ, ಈಕೆ ಬರೆದ ಒಂದು ಪುಟ್ಟ ಪದ್ಯವನ್ನು ಅನುವಾದಿಸಿ ಕೊಟ್ಟಿದ್ದೇನೆ. ಇದು ಆಕೆಯ ಒಳ್ಳೆಯ ಪದ್ಯವಲ್ಲ, ಪ್ರಾತಿನಿಕವೂ ಅಲ್ಲ. ಆದರೆ, ಆಕೆ ಗಂಡಸರಿಂದ ಪದೇ ಪದೇ ಏಟು ತಿನ್ನಲು ಏನು ಕಾರಣ ಎಂಬುದು ಈ ಪದ್ಯದಿಂದ ಸ್ವಲ್ಪ ಮಟ್ಟಿಗೆ ಗೊತ್ತಾಗುವಂತಿದೆ !

ಹಸ್ತಮೈಥುನ
(ಗಂಡಿಲ್ಲದ ಹೆಣ್ಣು ಸೈಕಲಿಲ್ಲದ ಮೀನು !)

ಗಂಡಿಲ್ಲದೆ ಹೆಣ್ಣು ಉಳಿಯಲಾರಳೆ ?
ಹ್ಹ , ಎಂಥ ತರ್ಕ, ಭೂತದ ಮಾತು !
ಎಸೆದುಬಿಡು ಚೆಂಡು
ಆರ್ಕಿಡ್‌ಗಳು ನಿನ್ನ ತಬ್ಬಲು ಎಂದಿಗೂ ಬಿಡದಿರು
ವಿಷ ತುಂಬಿದ ಇರುವೆಗಳೆಡೆ ಹೋಗದಿರು
ಮೈಮನದಲ್ಲಿ ಉದ್ರೇಕ ತುಂಬಿಕೋ
ನಿನ್ನಲ್ಲಿ ಬಿಲ್ಲಿದೆ, ಬಾಣವೂ ಇದೆ
ಬಾ ಹುಡುಗಿ, ಹಸ್ತಮೈಥುನ ಮಾಡಿಕೊ !

Monday, June 30, 2008

ಬಾಸ್

ತಲವಾರು, ಲಾಠಿಗಳ ಮೇಲಿದ್ದ ರಕ್ತದ ಕಲೆಗಳನ್ನು ತೊಳೆದುಕೊಳ್ಳುತ್ತ ಅವರು ಮಾತಾಡುತ್ತಿದ್ದರು :
"ನಮ್ಮ ಕೆಲಸ ಸುಲಭವಾದದ್ದು ಟೆಲಿಕಾಂ ಅಕಾರಿಯಿಂದಾಗಿ. ಅವರು ಆ ಕೇರಿಯ ಅಷ್ಟೂ ಫೋನ್ ಸಂಪರ್ಕಗಳಿಗೆ ಕನೆಕ್ಷನ್ ತಪ್ಪಿಸಿದ್ದರು"
"ಆದರೆ ವಿದ್ಯುತ್ ಇಲಾಖೆಯ ಸಚಿವರು ನೆರವಾಗದಿದ್ದರೆ ಇದೆಲ್ಲಾ ನಡೆಯುತ್ತಿರಲಿಲ್ಲ. ಅವರು ನೋಡಿ, ನಮ್ಮ ಕೆಲಸ ಮುಗಿಯುವವರೆಗೂ ಇಡೀ ಗಲ್ಲಿಗೆ ಕರೆಂಟ್ ಬಾರದಂತೆ ನೋಡಿಕೊಂಡರು"
"ಊಹೂಂ, ಇದೆಲ್ಲಾ ಗೃಹ ಸಚಿವರ ಕೃಪೆ. ನಾವು ಎಲ್ಲಾ ಮುಗಿಸಿ ಬಂದರೂ ಇನ್ನೂ ಅಲ್ಲಿಗೆ ಪೊಲೀಸರು ಕಾಲಿಟ್ಟಿಲ್ಲ ನೋಡಿ"
"ಮೂರ್ಖರೇ" ತಂಡದ ಮುಖಂಡ ಗದರಿಸಿದ ; "ನಿಮಗೆಲ್ಲ ಇನ್ನೂ ಅರ್ಥವಾಗಿಲ್ಲ. ಅವರೆಲ್ಲಾ ನಮ್ಮ ಬಾಸ್‌ನ ಮಾತನ್ನು ಪಾಲಿಸಿದರು ಅಷ್ಟೇ !"
"ಯಾರವರು ?"
"ನಮ್ಮ ಮುಖ್ಯಮಂತ್ರಿಗಳು"

Saturday, June 7, 2008

ಪಾಪ

... ಆಮೇಲೆ
ನಾನು ಅವಳನ್ನು ಬಿಗಿಹಿಡಿದು ಕೂಡಿದೆ
ಅವಳು ಅತ್ತರೂ ಬಿಡದೆ.

ಉರಿವ ನನ್ನ ಪಾಪದ ನಿರಂತರ ಸುಪರ್ದಿಗೆ
ನನ್ನ ಬಿಟ್ಟು ಅವಳು ತೆರಳಿದಾಗ
ನಾನು ಅನಾಥನಂತೆ ನಿಂತು ನೋಡಿದೆ

ಅವಳ ಬಿಕ್ಕುವಿಕೆಗೆ ಕೊನೆ ಎಲ್ಲೋ ಇದ್ದಿರಬಹುದು
ನನ್ನೊಳಗಿನ ದಹನಕ್ಕೆ ಅಂತ್ಯವೇ ಇರಲಿಲ್ಲ

ಆ ಘಳಿಗೆಯ ಅವಳ ಉರಿವ ದೃಷ್ಟಿಗಳಿಂದ
ಕೆದರಿದ ಕೂದಲ ಜ್ವಾಲೆಗಳಿಂದ
ಮುಕ್ತನಾಗುವ ತಡಕಾಟದಲ್ಲಿ
ನಾಶವಾದವು ನನ್ನ ನಾಳೆಗಳು

ಇದೀಗ ನನ್ನ ಮೇಲೆ ನಡೆದಿರುವ
ಅಂಥ ನಿನ್ನೆಗಳ ಕರಾಳ ಕೈಗಳ
ಅಮಾನುಷ ಹಲ್ಲೆಯ ಹೇಗೆ ವಿವರಿಸಲಿ ?

Sunday, May 11, 2008

ಮತದಾನ ಪ್ರಸಂಗ

ಅರ್ಜಿಯಲ್ಲಿ ನನ್ನ ಹೆಸರನ್ನು ಸರಿಯಾಗಿಯೇ ಬರೆದು ಕೊಟ್ಟಿದ್ದೆ ; ಇತರ ವಿವರಗಳನ್ನೂ ಸ್ಪಷ್ಟವಾಗಿ ಕಾಣುವಂತೆ ನಮೂದಿಸಿದ್ದೆ. ಆದರೆ ಮತದಾರರ ಪಟ್ಟಿ ತಯಾರಿಸುವ ಅಕಾರಿಗಳು ನನ್ನ ಹೆಸರನ್ನು ‘ಹರೀಶ್ ಕೀರೆ’ ಅಂತ ಬರೆದು ಅಧ್ವಾನ ಮಾಡಿಬಿಟ್ಟಿದ್ದರು. ಪಕ್ಷವೊಂದರ ಕಾರ್‍ಯಕರ್ತರು ಮನೆಗೆ ಬಂದು ಹೆಸರಿದ್ದ ಚೀಟಿ ಕೊಟ್ಟಾಗಲೇ ನನಗೆ ಮೈ ಉರಿದು ಹೋಗಿತ್ತು. ತಿದ್ದುಪಡಿಗೆ ನೀಡಲು ಸಮಯವಿರಲಿಲ್ಲ ; ಅದನ್ನೇ ಹಿಡಿದುಕೊಂಡು ಮತಗಟ್ಟೆಗೆ ಹೋದೆ.

ಜನರೇ ಇರಲಿಲ್ಲ. ಒಂದು ಕ್ಷಣ ಇಲ್ಲಿ ಮತದಾನ ನಡೆಯುತ್ತಿದೆಯೇ ಇಲ್ಲವೇ ಅಂತ ಅನುಮಾನ ಬಂತು. ಶಾಲೆಯ ಹೊರಗಿದ್ದ ಪೊಲೀಸರನ್ನೂ ಒಳಗೆ ನಾನಾ ಚಟುವಟಿಕೆಗಳನ್ನೂ ಕಂಡು ಅನುಮಾನ ಪರಿಹಾರವಾಯಿತು. ಒಳಗೆ ನುಗ್ಗಿ ಅಕಾರಿಗೆ ಚೀಟಿ ತೋರಿಸಿದೆ. ಆತ ನನ್ನ ಮುಖ ಕೂಡ ನೋಡದೆ, ಮತದಾರರ ಪಟ್ಟಿ ನೋಡುತ್ತ ಏನನ್ನೋ ಗಾಢವಾಗಿ ಹುಡುಕಿದ. ಬಳಿಕ ‘ಹರೀಶ್ ಕೀರೆ’ ಅಂತ ಘೋಷಿಸಿ, ಈತ ಯಾರೋ ದಕ್ಷಿಣ ಆಫ್ರಿಕಾದ ಪ್ರಜೆಯೇ ಇರಬೇಕು ಎಂಬ ಗುಮಾನಿಯಿಂದ ತಲೆ ಎತ್ತಿ ನೋಡಿದ.

ನಾನು ಪೆಚ್ಚು ನಗು ನಕ್ಕು ‘ಹರೀಶ್ ಕೇರ’ ಅಂದೆ.

‘ಹರೀಶ್ ಕೀರೆ’ ಅಂತ ಒತ್ತಿ ಹೇಳುತ್ತ ಆತ ಅನುಮಾನದಿಂದ ನನ್ನನ್ನೇ ನೋಡಿದ.

‘ಕೀರೆ ಅಲ್ಲ ಕೇರ’

‘ಮತ್ತೆ ಇಲ್ಲಿ ಕೀರೆ ಅಂತಿದೆ’

‘ಇರುತ್ತೆ, ಕನ್ನಡ ಸರಿಯಾಗಿ ಗೊತ್ತಿಲ್ಲದೋರು ಲಿಸ್ಟ್ ಮಾಡಿದರೆ ಹಾಗೇ ಇರುತ್ತೆ’ ಇಷ್ಟು ಹೊತ್ತಿಗೆ ನನ್ನ ಸಹನೆ ಮುಗಿದಿತ್ತು.

‘ನಿಮ್ಮ ಐಡಿ ಕಾರ್ಡ್ ತೋರಿಸಿ’ ಆತ ಕೇಳುವ ಮೊದಲೇ ಡ್ರೈವಿಂಗ್ ಲೈಸೆನ್ಸ್ ತೆಗೆದು ಕೊಟ್ಟೆ . ಆತ ಫೋಟೋ ತಾಳೆ ಹಾಕಿ ಓಕೆ ಅಂದ. ಅವನ ಪಕ್ಕ ಕೂತಿದ್ದ ಹೆಂಗಸು ನನ್ನ ಎಡ ತೋರು ಬೆರಳಿಗೆ ನಾಮ ಹಾಕಿದಳು. ಅದು ಚುನಾವಣಾ ಆಯುಕ್ತ ಗೋಪಾಲಸ್ವಾಮಿ ನಾಮದಂತೆಯೇ ಉದ್ದಕ್ಕಿತ್ತು.

ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನ ಮುಂದೆ ನಿಂತೆ. ಹೆಸರುಗಳು ಒಂದೊಂದಾಗಿ ಕಂಡವು- ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಚ್.ಎಂ.ರೇವಣ್ಣ, ಲೋಕೇಶ್ ಗೌಡ, ಮಲ್ಲಿಕಾರ್ಜುನ ಬೊಮ್ಮಾಯಿ...

ಒಬ್ಬ ಭೂಗಳ್ಳ. ಬೆಂಗಳೂರು ಸುತ್ತಮುತ್ತಲಿನ ಭೂಮಿಯನ್ನು ಹರಿದು ಹಂಚಿ ಸ್ವಲಾಭಕ್ಕೂ ಜಾತಿವಸ್ತರಿಗೂ ಪಕ್ಷದವರಿಗೂ ನೀಡಿ ಕೋಟಿಗಟ್ಟಲೆ ಕೊಳ್ಳೆಹೊಡೆದವನು. ಇನ್ನೊಬ್ಬ ಅವನಿಗಿಂತ ಕಡಿಮೆಯಿಲ್ಲದ ಅತ್ಯಾಚಾರಿ. ಮತ್ತೊಬ್ಬ ಪುಡಿ ರೌಡಿಗಳನ್ನು ಇಟ್ಟುಕೊಂಡು ಪ್ರದೇಶದಲ್ಲಿ ದಾಂಧಲೆ ಎಬ್ಬಿಸುವವನು. ಮಗದೊಬ್ಬ ನರಸತ್ತವನು...

ಮಹಾ ಭ್ರಷ್ಟರು, ನೀಚರು, ದಗಲ್ಬಾಜಿಗಳು ತುಂಬಿಹೋಗಿರುವ ಆ ಪಟ್ಟಿಯಿಂದ ಒಂದೇ ಒಂದು ಸಭ್ಯ, ದೂರದರ್ಶಿತ್ವ ಉಳ್ಳ ನಾಯಕನನ್ನು ಹೆಕ್ಕಿ ತೆಗೆಯುವುದು ನನಗೆ ಅಸಾಧ್ಯವೆನ್ನಿಸತೊಡಗಿತು. ದಗಾಕೋರರಿಂದ ತುಂಬಿಹೋಗಿರುವ ಈ ದೇಶಕ್ಕೆ ಭವಿಷ್ಯವೇ ಇಲ್ಲ ಅಂತ ತೀವ್ರವಾಗಿ ಅನ್ನಿಸಿತು. ಹಿಂದೆ ಬೋ ಮರದ ಕೆಳಗೆ ನಿಂತ ಸಿದ್ಧಾರ್ಥನಿಗೆ ಆಗಿತ್ತಲ್ಲ ; ಅಂಥದೇ ಒಂದು ಮಹತ್ ದರ್ಶನ ಈ ಯಃಕಶ್ಚಿತ್ ಯಂತ್ರದ ಮುಂದೆ ನಿಂತುಕೊಂಡು ನನಗೆ ಆಗತೊಡಗಿತ್ತು. ಈ ನಾಲಾಯಕ್ ಮಂದಿಯಲ್ಲಿ ಯಾರಿಗೆ ಮತ ಹಾಕಲಿ ? ನಾನು ಮತ ಹಾಕಿದ ವ್ಯಕ್ತಿ ಒಂದೇ ಒಂದು ಮತದ ಅಂತರದಿಂದ ಆರಿಸಿ ಬಂದರೂ ನನ್ನನ್ನು ಜೀವನಪರ್‍ಯಂತ ಪಾಪಪ್ರಜ್ಞೆ ಕಾಡಬಹುದು ಅನ್ನಿಸಿ ಕಣ್ಣು ಸುತ್ತಿ ಬಂತು.

ನಾನು ಯಂತ್ರದ ಮುಂದೆ ನಿಂತು ಧ್ಯಾನಮಗ್ನನಾದುದನ್ನು ಕಂಡು ಅಲ್ಲಿ ಕುಳಿತಿದ್ದ ಅಕಾರಿ ಎದ್ದು ‘ಎನಿ ಪ್ರಾಬ್ಲಮ್ ?’ ಎನ್ನುತ್ತ ನನ್ನ ಕಡೆಗೆ ಬರತೊಡಗಿದ. ನಾನು ಎಚ್ಚೆತ್ತುಕೊಂಡು, ‘ಏನೂ ಪ್ರಾಬ್ಲಮ್ ಇಲ್ಲ ಕಣ್ರೀ, ಈ ಕಳ್ಳ ನನ್ ಮಕ್ಕಳಲ್ಲಿ ಯಾರಿಗೆ ಹಾಕೋದು ಗೊತ್ತಾಗ್ತಾಯಿಲ್ಲ’ ಅಂದೆ.

ನನ್ನ ಪ್ರಶ್ನೆಗೆ ಆತ ಕಕ್ಕಾಬಿಕ್ಕಿಯಾದ. ರೂಮಿನೊಳಗೆ ಸಣ್ಣ ನಗೆಯ ಅಲೆಗಳು ಎದ್ದವು. ಕಣ್ಣು ಮುಚ್ಚಿ ಒಂದು ನೀಲಿ ಬಟನ್ ಒತ್ತಿ ಈಚೆ ಬಂದೆ.

ಹೊರಗೆ ‘ನನ್ನ ಹೆಸರು ಪಟ್ಟಿಯಿಂದ ಕಿತ್ತು ಹಾಕಿದ್ದಾರೆ’ ಎಂದು ಒಬ್ಬ ಗಲಾಟೆ ಮಾಡತೊಡಗಿದ್ದ. ಈಗ ತಾನೇ ವ್ಯಾನಿನಿಂದ ಇಳಿದ ಚಾನೆಲ್ ಒಂದರ ಹುಡುಗಿ ಮೈಕ್ ಹಿಡಿದುಕೊಂಡು ಅವನ ಕಡೆ ಧಾವಿಸುತ್ತಿದ್ದಳು.

ಚುನಾವಣೆ ರಾಜಕೀಯದ ಬಗ್ಗೆ ಆಳವಾಗಿ ಚಿಂತಿಸುವ ಪ್ರಗತಿಪರರ ಕಳವಳಗಳು, ರಜೆ ಇದ್ದರೂ ಮತ ಹಾಕಲು ಹೋಗದ ವಿದ್ಯಾವಂತರ ಸಂಕಟಗಳು ಕೊಂಚ ಕೊಂಚವಾಗಿ ಅರ್ಥವಾಗತೊಡಗಿದ್ದವು.

Thursday, May 8, 2008

ಮೌಲ್ಯ

"ಸಾರ್, ನನಗೆ ರಕ್ಷಣೆ ನೀಡಿ"
"ಏನಾಯಿತು, ಯಾರು ನೀನು ?"
"ನಾನು ಬೀದಿಯಲ್ಲಿ ಬರುತ್ತಿದ್ದಾಗ ಹಲವಾರು ಮಂದಿ ತಲವಾರು ಝಳಪಿಸುತ್ತ ನನ್ನ ಬೆನ್ನು ಹತ್ತ್ತಿದರು. ಅವರಿಂದ ಪಾರಾಗಲು ಗಲ್ಲಿ ಬಿದ್ದು ಇಲ್ಲಿಗೆ ಬಂದೆ"
"ನಿನ್ನ ಹೆಸರೇನು ?"
"......"
"ಹೆದರಬೇಡ. ಶರಣಾಗತರಿಗೆ ರಕ್ಷಣೆ ನೀಡಬೇಕೆಂದು ನಮ್ಮ ಧರ್ಮದಲ್ಲಿದೆ. ಬಾ ಇಲ್ಲಿ ಅವಿತುಕೋ"
ಸ್ವಲ್ಪವೇ ಹೊತ್ತಿನಲ್ಲಿ ಕ್ರೋಧದಿಂದ ಉನ್ಮತ್ತವಾಗಿದ್ದ ಒಂದು ಗುಂಪು ಅಲ್ಲಿಗೆ ಬಂತು.
"ಇತ್ತ ಕಡೆ ಓಡಿ ಬಂದ ಆ ನೀಚ ಎಲ್ಲಿ ಹೋದ ?"
"ಸುಳ್ಳು ಹೇಳಬಾರದೆಂದು ನಮ್ಮ ಧರ್ಮದಲ್ಲಿ ಹೇಳಿದೆ. ಇದೋ ಇಲ್ಲಿ ಅವಿತಿದ್ದಾನೆ ನೋಡಿರಿ"

Sunday, April 13, 2008

ಕವಿತೆಯೆಂಬ ನುಡಿಸಿರಿ

ಮೂಡುಬಿದಿರೆಯಲ್ಲಿ ಪ್ರತಿವರ್ಷ ನಡೆಯುವ "ನುಡಿಸಿರಿ’ ಸಾಹಿತ್ಯ- ಸಂಸ್ಕೃತಿ ಸಮ್ಮೇಳನದಲ್ಲಿ "ಕವಿಸಮಯ’ ಎಂಬ ವಿಶಿಷ್ಟ ಕಾರ್‍ಯಕ್ರಮ ನಡೆಯುತ್ತದೆ. ಇಪ್ಪತ್ತು ನಿಮಿಷದ ಈ ಕಾರ್‍ಯಕ್ರಮವನ್ನು ಒಬ್ಬನೇ ಕವಿಯ ಮೇಲೆ ಫೋಕಸ್ ಮಾಡಲಾಗಿರುತ್ತದೆ. ಆತ ತನ್ನ ಕವಿತೆ- ಪ್ರೇರಣೆಗಳ ಬಗ್ಗೆ ಮಾತನಾಡುತ್ತಾನೆ, ಕವಿತೆ ಓದುತ್ತಾನೆ, ಅದನ್ನು ಗಾಯಕರು ಹಾಡುತ್ತಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ನುಡಿಸಿರಿಯ ಕವಿಸಮಯದಲ್ಲಿ ನಾನು ಕವಿತೆ ಓದಿದ್ದೆ. ಆಗ ನಾನು ನನ್ನ ಕವಿತೆಗಳ ಬಗ್ಗೆ ಮಾತನಾಡಿದ್ದು ಇಲ್ಲಿದೆ...

ನಿಜ ದುಃಖ ನುಡಿದಾಗ

ಮಾತು ಮುಗಿದ ಬಳಿಕ ಉಳಿಯುವುದು ಕವಿತೆ ಎಂಬ ನಂಬಿಕೆ ನನ್ನದು. ಕವಿತೆಯೆಂಬ ಅಸ್ಪಷ್ಟ ಹಾಗೂ ಮೈತಡವಿ ಸಂತೈಸುವ ತಹತಹದ ಕಾಡಿನಲ್ಲಿ ನನಗಿಂತ ಮೊದಲು ನಡೆದು ಹಾದಿ ಹಾಕಿಕೊಟ್ಟ ಅನೇಕರಿಗೆ ನಾನು ಋಣಿ. ಅವರೆಲ್ಲ ಎಂಥ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಅಂತ ಗೊತ್ತಾಗುವುದಕ್ಕೂ ಮುನ್ನವೇ ನಾನು ಕವಿತೆಯೆಂದು ತಿಳಿದುಕೊಂಡ ಸಾಲುಗಳನ್ನು ಬರೆದೆ.

ಅವು ನಾನು ಹುಟ್ಟಿ ಬೆಳೆದ ಸುಳ್ಯ ಸುಬ್ರಹ್ಮಣ್ಯ ಪರಿಸರದ ದಟ್ಟ ಹಸಿರು ಕಾಡಿನಿಂದ, ಅಲ್ಲಿನ ಶಾಂತಿ ಹಾಗೂ ಅಶಾಂತ ನಿಗೂಢತೆಯಿಂದ ಉದ್ಭವವಾಗಿದ್ದವು. ಸಂಜೆ ಮುಂಜಾನೆಗಳಲ್ಲಿ ಅಲ್ಲಿನ ಕಾಡುಗಳ ಎಲೆಗಳ ನಡುವೆ ನೆಲಮುಟ್ಟಲು ಕಷ್ಟಪಡುತ್ತಿದ್ದ ಸೂರ್‍ಯಕಿರಣಗಳು, ಗಾಳಿ ಬೀಸಿದಾಗ ಸದ್ದು ಮಾಡುತ್ತಾ ಬೀಳುತ್ತಿದ್ದ ಒಣಗಿದ ಎಲೆಗಳು, ಕಣ್ಣಿಗೆ ಕಾಣಿಸದಂತೆ ಕೂತುಕೊಂಡು ಕೂಗುತ್ತಿದ್ದ ನಾನಾ ಹಕ್ಕಿಗಳು, ರಾತ್ರಿಯ ನೀರವದಲ್ಲಿ ಚಿತ್ರವಿಚಿತ್ರ ಸದ್ದುಗಳನ್ನು ಹೊರಡಿಸುತ್ತಿದ್ದ ಸಾವಿರಾರು ಮೃಗ ಪಕ್ಷಿ ಕೀಟ ಜಾತಿ, ಇವೆಲ್ಲದರ ನಡುವೆ ಬದುಕಿಗಾಗಿ ಬವಣೆಪಡುತ್ತಿದ್ದ ಜನಗಳು... ಇವೆಲ್ಲ ಹೇಗೆ ಇವೆ ಮತ್ತು ಯಾಕೆ ಹಾಗಿವೆ ಅಂತ ಯೋಚಿಸುತ್ತ ಯೋಚಿಸುತ್ತ ಬಹುಶಃ ನನ್ನ ಕಾವ್ಯದ ಮೊದಲ ಸಾಲುಗಳು ಹುಟ್ಟಿಕೊಂಡವು ಅಂತ ಕಾಣುತ್ತದೆ.

ಇದೆಲ್ಲ ಬಾಲ್ಯದಲ್ಲಿ. ಆಮೇಲೆ ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಪಟ್ಟಣಕ್ಕೆ ಬಂದು ಕಾಲೇಜಿಗೆ ಸೇರಿಕೊಂಡು ಇಂಗ್ಲಿಷ್ ಮಾಧ್ಯಮವನ್ನು ಎದುರಿಸಬೇಕಾದಾಗ ನನ್ನಂಥ ಹಳ್ಳಿ ಗಮಾರನಲ್ಲಿ ಎಂಥ ಕೀಳರಿಮೆ ಹುಟ್ಟಿರಬಹುದು ಯೋಚಿಸಿ. ಈ ಕೀಳರಿಮೆ ದಾಟಲು ನಾನು ಕಂಡುಕೊಂಡ ಒಂದು ಉಪಾಯ ಬರವಣಿಗೆ. ಆಮೇಲೆ ನಿಮಗೆ ಗೊತ್ತಿರುತ್ತದೆ- ಹುಡುಗರು ಹುಡುಗಿಯರನ್ನು ಇಂಪ್ರೆಸ್ ಮಾಡುವುದಕ್ಕೆ ಬರೆಯುವುದು ಇತ್ಯಾದಿ...

ಆದರೆ ಒಂದಾಯ್ತು- ಮಾಯಾಕಿನ್ನರಿ ಪದ್ಯದಲ್ಲಿ ಬೇಂದ್ರೆ ಹೇಳುವಂತೆ - "ಮರುಳು ಮಾಡಾಕ ಹೋಗಿ ಮರುಳ ಸಿದ್ಧನ ನಾರಿ ಮರುಳಾದಳೋ ಜಂಗಮಯ್ಯಗ...’ ಜಂಗಮಯ್ಯನನ್ನು ಮರುಳು ಮಾಡಲು ಹೋಗಿ ಆತನ ಮೋಡಿಗೆ ತಾನೇ ಒಳಗಾದ ನಾರಿಯ ಹಾಗೆ, ವಿನೋದಕ್ಕೆ ನಾನು ಕೈಹಿಡಿದ ಕವಿತೆ ನನ್ನ ಮೇಲೆ ತುಂಬ ಗಾಢವಾದ ಮಾಯಾಜಾಲವೊಂದನ್ನು ಬೀಸಿ ಅದರ ನಿಗೂಢವಾದ ಕಣಿವೆಯ ಒಳಗೆ ಅಂಡಲೆಯುವಂತೆ ಮಾಡಿತು.

ನಾವು ಹೇಳಬೇಕು ಅಂದುಕೊಂಡದ್ದನ್ನು ಪೂರ್ತಿಯಾಗಿ ಕವಿತೆಯಲ್ಲಿ ಹೇಳಲಿಕ್ಕಾಗುತ್ತದೆಯೇ ಅನ್ನುವುದು ಒಂದು ಸಮಸ್ಯೆ. ಅಲ್ಲಮ ಹೇಳುವಂತೆ - "ಘನವ ಮನ ಕಂಡು ಅದನೊಂದು ಮಾತಿಂಗೆ ತಂದು ನುಡಿದು ನೋಡಿದಡೆ ಅದಕ್ಕದೆ ಕಿರಿದು ನೋಡಾ !’

ಕವಿತೆ ಅನ್ನುವುದು "ತಾಯ ಸೆರಗಿನ ನೂಲು ಮಗುವಿನ ಕೈಯಲ್ಲಿ ಉಳಿದಂತೆ’ ಅಂತ ಬೇಂದ್ರೆ ಕೂಡ ಹೇಳುತ್ತಾರೆ. ಅನುಭವ ಅನ್ನುವ ತಾಯಿ ಮಕ್ಕಳಾದ ನಮ್ಮನ್ನ್ನು ಮಲಗಿಸಿ ಅತ್ತ ಹೋಗುವಾಗ ನಮಗೆ ವರ್ಣಿಸಲು ಸಿಕ್ಕುವ ನಾಲ್ಕು ಸಾಲುಗಳು. ಸಮುದ್ರದ ಬಳಿಗೆ ಹೋದವನು ಬಯಸಿದರೂ ಸಮುದ್ರವನ್ನೇ ಮನೆಗೆ ತಂದಾನೆ ? ಒಂದು ಹಿಡಿ ಕಪ್ಪೆಚಿಪ್ಪು ತಂದಾನು ಅಷ್ಟೆ.

ಮಾತಿನಲ್ಲಿ ಹೇಳಲಿಕ್ಕಾಗದಿದ್ದುದನ್ನು ಕವಿತೆ ಅರ್ಥ ಮಾಡಿಸುತ್ತದೆ ಅಂತ ಅಲ್ಲ. ಅರ್ಥ ಮಾಡಿಸುವುದು ಬೇರೆ, ಅನುಭವ ಮಾಡಿಸುವುದೇ ಬೇರೆ. ಎಲ್ಲರ ಒಳಗಿರುವ ಅಂತಃಕರಣ ಲೋಕದ ಸುಖಸಂಕಟಗಳಿಗೆ ಮಿಡಿಯುತ್ತದಲ್ಲ - ಅದನ್ನು ಬೇಂದ್ರೆ "ನಿಜ ದುಃಖ’ ಅನ್ನುತ್ತಾರೆ. ಅಂದರೆ ದುಃಖಕ್ಕೂ ಮೀರಿದ್ದು- ಹೇಳಲಿಕ್ಕಾಗದ್ದು ಹಾಗೆಯೇ ಹೇಳದೆ ಇರಲಿಕ್ಕೂ ಆಗದ್ದು- "ಮಮತಾಜಳನು ಹುಗಿದು ತಾಜಮಹಲನು ಕಟ್ಟಿ ನಿಜ ದುಃಖ ಮರೆಸಬಹುದೆ ?’

ಹೀಗೆ ಕವಿತೆಯ ದಾರಿಯಲ್ಲಿ ನನಗೆ ಒಂದು ಸಮಸ್ಯೆ ಇದೆ. ಅದೇನೆಂದರೆ ನಾನು ನನಗೆ ಕಂಡದ್ದನ್ನು, ನಾನು ಉಂಡದ್ದನ್ನು ಹಾಗೇ ಹೇಳಬಲ್ಲೆನೇ ಅನ್ನುವುದು. ಮತ್ತೆ ಬೇಂದ್ರೆಯ ಉದಾಹರಣೆ ಕೊಡುವುದಾದರೆ- "ತೊಗಲ ನಾಲಗೆ ನಿಜವ ನುಡಿಯಲೆಳಸಿದರೆ ತಾನಂಗೈಲಿ ಪ್ರಾಣಗಳ ಹಿಡಿಯಬೇಕು, ಇಲ್ಲದಿದ್ದರೆ ನೀರಿನೊಲು ತಣ್ಣಗಿದ್ದವನದನು ಉರಿಯ ನಾಲಗೆಯಿಂದ ನುಡಿಯಬೇಕು.’ ನಮ್ಮ ಬದುಕಿನ ಸುತ್ತಮುತ್ತ, ನಮ್ಮೊಳಗೇ ಕಾಣುತ್ತಿರುವ ಕ್ರೌರ್‍ಯ, ಅಮಾನವೀಯತೆ, ಹಿಂಸೆ ಇವುಗಳನ್ನೆಲ್ಲ ಹಾಗೆಹಾಗೇ ಹಸಿಹಸಿಯಾಗಿ ನುಡಿಯುವುದು ಸಾಧ್ಯವಿದೆಯೆ ? ಲಂಕೇಶ್, ಅಡಿಗ, ಕಾಫ್ಕಾ, ಮಂಟೋರ ಹಾಗೆ ಕಟುವಾಗಿ, ತೀಕ್ಷ್ಣವಾಗಿ, ಕಾವ್ಯಾತ್ಮಕವಾಗಿ ಮತ್ತು ಸೊಗಸಾಗಿ ಬರೆಯಬಲ್ಲೆನೇ ಅನ್ನುವುದು ನಾನು ಮುಂದೆ ಯಾವ ಬಗೆಯ ಅನುಭವಗಳಿಗೆ ಹಾಗೂ ಅಕ್ಷರಗಳಿಗೆ ಒಡ್ಡಿಕೊಳ್ಳುತ್ತೇನೆ ಅನ್ನುವುದರ ಮೇಲೆ ನಿಂತಿದೆ.

Saturday, April 5, 2008

ಮಸನುಬು ಫುಕುವೋಕನ ಒಂದು ಹಾಡು

‘ಒಂದು ಹುಲ್ಲಿನ ಕ್ರಾಂತಿ’ ಬರೆದ ಜಪಾನಿನ ಕೃಷಿ ಋಷಿ ಮಸನುಬು ಫುಕುವೋಕಾ, ಒಂದು ಕವಿತೆಯನ್ನೂ ಬರೆದಿದ್ದಾರೆ. ಇದು ಅವರ ‘ದಿ ರೋಡ್ ಟು ನೇಚರ್’ ಕೃತಿಯಲ್ಲಿದೆ. ಫುಕುವೋಕಾ ಅಂಥ ಒಳ್ಳೆಯ ಕವಿಯೇನಲ್ಲ ಅಂತ ಆ ಪದ್ಯ ಓದಿ ಅನಿಸಿತಾದರೂ, ಅದರ ಸರಳತೆ, ಪ್ರಾಮಾಣಿಕತೆಗಳಿಂದಾಗಿ ತುಂಬಾ ಇಷ್ಟವಾಯಿತು. ನಿಮಗೂ ಓದಿಸೋಣ ಅಂತ ಅನುವಾದಿಸಿದೆ.

ನನ್ನ ಹಾಡು

ಎಷ್ಟು ವರ್ಷಗಳ ಕಾಲ ನಾನು ಅಲೆದೆ ಇಲ್ಲಿ
ಎಲ್ಲಿ ಏನೂ ಇರದೋ ಅಲ್ಲಿ
ಹುಡುಕುತ್ತ ಅದೇನನೋ.

ಗಾಢ ಸೈಪ್ರಸ್ ಮರಗಳ ಅರಣ್ಯದಲ್ಲಿ ತಿರುಗಾಡಿದೆ
ಆ ದೀರ್ಘ ಕಪ್ಪು ದಾರಿ ಶಿಖರಕ್ಕೆ ತೆರೆದಿದೆ
ಅಗಲ ನಗೆ ಬೀರಿ ಬಳೀ ಕರೆದಳಾ ದೀಪಧಾರಿಣಿ, ಯೋಗಿನಿ
ತಿಳಿದೆ, ನನ್ನ ಹೃದಯದಲೆದಾಟಕ್ಕಿಲ್ಲಿ ನಿಲುದಾಣ
ಇದೇ ಇಲ್ಲಿಯೇ ನನ್ನ ತಾಯ್ನೆಲ,
ನನ್ನ ಆತ್ಮ.

ಏಳುತ್ತ ಸೈಪ್ರಸ್ ಮರಗಳೆಡೆಯಿಂದ ಬೆಳಗಿನ ಸೂರ್‍ಯ
ಕರಗುತ್ತ ಇಬ್ಬನಿ, ಹರಡುತ್ತ ನನ್ನೆದುರು ವಿಶಾಲ
ಫಲವತ್ತು ಕ್ಯುಫು ನೆಲ, ಹರಿಯುತ್ತ ಪಶ್ಚಿಮ ಶರಯತ್ತ
ತಡೆಯಿಲ್ಲದೆ ಇಮಾರೀ ನದಿ ಕಾಲದ ಮೌನಯಾನದ ಹಾಗೆ.
ಶುಭ್ರ ನಿರಭ್ರ ಆಕಾಶ ತೂರುತ್ತದೆ ಅನಂತ ಕ್ಷಣಗಳ ನನ್ನೆಡೆಗೆ
ತಿಳಿದೆ- ದೇವ ಹೃದಯವದೆಷ್ಟು ವಿಶಾಲ !
ಪ್ರೀತಿ ಹಂಚುವ ಸೃಷ್ಟಿಶೀಲ ಕೈಗಳು !

ದೇವ ಹರಸಿದ ಸ್ವರ್ಗ ಇದೇ- ಈ ಕೆಳಗಿನವರುಳುವ
ಫಲವತ್ತು ನೆಲ. (ಬನ್ನಿ ಆನಂದದಿಂದ ಆತನ ನೆನೆವ)
ದೇವರ ಸ್ತುತಿಸುತ್ತಿವೆ ಆ ಹಕ್ಕಿಗಳು ಹಾಡುತ್ತಿರುವ ಹಾಡುಗಳು
ಮಾತನಾಡುತ್ತಿವೆ ಅವನ ಕರುಣೆಯ ಅರಳುತ್ತಿರುವ ಹೂಗಳು
ನೆಲದಿಂದ ಚಿಗುರುತ್ತಿರುವ ವಸಂತ ಅನಂತ ಸತ್ಯಗಳ ಗುನುಗುತ್ತಿದೆ
ಮುಳುಗುತ್ತಿರುವ ಸೂರ್‍ಯನ ಕೊನೆಯ ಕೆಂಗಿರಣ ಚಾಪೆಲ್ ಮುಟ್ಟಿ
ಸಂಜೆಯ ಗಂಟೆ ಹೊಡೆದು ಕೂಲಿಗಳು ಮನೆಗೆ ಮರಳುವ ಹೊತ್ತು
ದೇವರ ಕೃಪೆಗಾಗಿ ನಾನು ಆತನ ನೆನೆಯುವೆ.
(ಇನ್ನೀಗ ನಾನು ವಿರಮಿಸಬಹುದು).

- ಮೂಲ: ಮಸನುಬು ಫುಕುವೋಕಾ
ಅನುವಾದ: ಹರೀಶ್ ಕೇರ

Tuesday, April 1, 2008

ಬುದ್ಧ ಎಂದರೇನು ?

ಇದೊಂದು ಝೆನ್ ಕಥೆ. ಎಲ್ಲೋ ಓದಿಕೊಂಡಿದ್ದೆ. ತಮಾಷೆಯಾಗಿಯೂ, ಮಿಂಚು ಹೊಳೆದಂತೆಯೂ ಇದೆ.
ಝೆನ್ ಶಾಲೆಯಲ್ಲಿರುವ ಶಿಷ್ಯನೊಬ್ಬ ಅಲ್ಲಿರುವವರನ್ನು "ಬುದ್ಧ ಎಂದರೇನು ?" ಎಂದು ಪ್ರಶ್ನಿಸುತ್ತ ಹೋದಾಗ ಈ ಉತ್ತರಗಳು ಸಿಕ್ಕಿದವಂತೆ.
ಬುದ್ಧ ಎಂದರೆ, ಬಂಗಾರದ ಎಲೆ ಕೊನರಿಕೊಂಡಿರುವ ಮಣ್ಣಿನ ಚೂರು.
ಬುದ್ಧ ಎಂದರೆ, ವಿಹಾರ ಶಾಲೆಯಲ್ಲಿರುವ ವಸ್ತು ವಿಶೇಷ.
ಬುದ್ಧ ಎಂದರೆ, ಸಮುದ್ರದ ಮೇಲೆ ಅಲೆಗಳು ಯಾತ್ರೆ ಹೊರಟಿವೆ.
ಬುದ್ಧ ಎಂದರೆ, ಹೊರಗೆ ಹಿತ್ತಲಲ್ಲಿರುವ ಬಿದಿರು ಮೆಳೆ.
ಬುದ್ಧ ಎಂದರೆ, ಅದಲ್ಲ.
ಹಾಗಾದರೆ ಬುದ್ಧ ಎಂದರೆ ಯಾರು ?
ಬುದ್ಧ ಯಾರು ಎಂದರೆ,ಮೂರು ಕಾಲಿನ ಕತ್ತೆಯನ್ನು ನೋಡಿ.
ಬುದ್ಧ ಯಾರೆಂದರೆ, ಮಾತು ಯಾತನೆಯ ದಿಡ್ಡಿ ಬಾಗಿಲು...
ಇನ್ನೊಬ್ಬ ಸೆಣಬು ಅಳೆಯುತ್ತಾ ಕುಳಿತವನನ್ನು ಈ ಪ್ರಶ್ನೆ ಕೇಳಲಾಯಿತು.
"ಬುದ್ಧ ಎಂದರೆ, ಹತ್ತು ಸೇರು ಸೆಣಬು" ಎಂದ.

Wednesday, March 26, 2008

ಬದುಕು ಸಾವುಗಳ ನಡುವೆ ಅಲ್ಪವಿರಾಮದಂತೆ

ಅವರ ಮನೆ ಶಿವಮೊಗ್ಗ ಹಾಗೂ ಸಾಗರ ನಡುವಿನ ಹೆದ್ದಾರಿಯಲ್ಲಿ ಸಿಗುವ ಆನಂದಪುರ ಎಂಬ ಊರಿನ ಬಳಿ. ಬಸ್ಸಿಳಿದು ಹತ್ತೆಂಟು ಕಿಲೋಮೀಟರು ಕ್ರಮಿಸಿದರೆ ನರಸೀಪುರ ಎಂಬ ಹಳ್ಳಿ. ಹಳ್ಳಿಯ ಒಂದು ಮೂಲೆಯಲ್ಲಿ ಅಡಕೆ ತೋಟ ನೋಡಿಕೊಂಡು ಎಲ್ಲ ಹವ್ಯಕರಂತೆ ತಣ್ಣಗಿರುವ ಭಟ್ಟರು ಗುರುವಾರ ಮತ್ತು ಭಾನುವಾರ ಸಿಕ್ಕಾಪಟ್ಟೆ ಬಿಜಿಯಾಗಿಬಿಡುತ್ತಾರೆ. ಅದು ಅವರು ನಾಟಿ ಔಷಧ ಕೊಡುವ ದಿನ.

ಆನಂದಪುರದಲ್ಲಿ ಬೆಳಗ್ಗೆ ಆರು ಗಂಟೆಗೆ ಬಸ್ಸಿನಿಂದ ಇಳಿದು ನೋಡಿದರೆ ನನ್ನ ನಿರೀಕ್ಷೆಯಂತೆ ಅದು ಕುಗ್ರಾಮ ಆಗಿರಲಿಲ್ಲ. ರಿಕ್ಷಾಗಳು ಭಟ್ಟರ ಮನೆಗೆ ಒಂದರ ಹಿಂದೊಂದು ಸಾಲುಗಟ್ಟಿ ಹೊರಟಿದ್ದವು. ಮಲೆನಾಡಿನ ಚಳಿ ಜರ್ಕಿನ್ ಹಾಕಿದ್ದರೂ ಗದಗುಟ್ಟಿಸುತ್ತಿತ್ತು. ಆಗಲೇ ತುಂಬಿದ್ದ ರಿಕ್ಷಾದಲ್ಲಿ ನಾನು ಏರಿದ ನಂತರವೂ ಆತ ಹತ್ತು ಜನರನ್ನು ತುಂಬಿಸಿದ.

ಅಲ್ಲಿ ನಾನು ತೆರಳಲು ಕಾರಣ ನನ್ನ ಅಮ್ಮನಿಗೆ ಅಡರಿಕೊಂಡ ಒಂದು ಕಾಯಿಲೆ. ಈ ಕಾಯಿಲೆಗೆ ಬೆಂಗಳೂರಿನ ಯಾವ ವೈದ್ಯರ ಬಳಿಯೂ ಯಾವ ಮದ್ದೂ ಇರಲಿಲ್ಲ ; ಬೆಂಗಳೂರು ಎಂದೇನು, ವಿಶ್ವದ ಯಾವ ಡಾಕ್ಟರನೂ ಇದಕ್ಕೆ ಏನೂ ಮಾಡುವಂತಿಲ್ಲ ಎಂದು ಗೊತ್ತಾಗಿತ್ತು ; ಆಗ ಅಕ್ಟೋಬರ್. ಅಮ್ಮ ಬೆಂಗಳೂರಿನ ನನ್ನ ಪುಟ್ಟ ನಾಯಿಗೂಡಿನಂಥ ಮನೆಯಲ್ಲಿ ಚಳಿ ತಾಳಲಾಗದೆ ತತ್ತರಿಸಿ ಮುದುಡಿ ಮಲಗಿರುತ್ತಿದ್ದಳು. ಪಕ್ಕದ ಮನೆಯವರು ಈ ವೈದ್ಯರ ಬಗ್ಗೆ ತಿಳಿಸಿದ್ದರು.

ರಿಕ್ಷಾ ವೈದ್ಯರ ಮನೆಯ ಎದುರು ಬಂದಾಗ ನಾನು ದಂಗಾಗಿ ಹೋದೆ. ಅದು ಸೋಗೆ ಮುಳಿ ಮಾಡಿನ ಮನೆಯೇನಲ್ಲ ; ಮಾಳಿಗೆಯಿದ್ದ ದೊಡ್ಡ ಆರ್‌ಸಿಸಿ ಮನೆ. ಔಷಗೆ ಬಂದ ಜನ ಮನೆಯ ಅಂಗಳದಲ್ಲಿ ಸಾಲುಗಟ್ಟಿ ನಿಂತಿದ್ದರು ; ಇನ್ನೂ ಜನ ಬರುತ್ತಲೇ ಇದ್ದರು. ನಾನು ಕ್ಯೂಗೆ ಸೇರಿಕೊಳ್ಳುವ ವೇಳೆಗೆ ಗಂಟೆ ಚುಮುಚುಮು ಆರೂವರೆ ; ಆಗಲೇ ಕನಿಷ್ಠ ನೂರು ಜನ ಅಲ್ಲಿದ್ದರು. ನನ್ನ ಹಿಂದೆ ಮತ್ತೆ ಅಷ್ಟೇ ಜನ ಇದ್ದರು. ‘ಇಂದು ಗುರುವಾರವಾದ್ದರಿಂದ ಜನ ಕಡಿಮೆ’ ಎಂದು ಪಕ್ಕದಲ್ಲಿದ್ದವನು ಹೇಳಿದ. ಹೆಚ್ಚಿನವರು ಬೆಳ್ಳಂಬೆಳಗ್ಗೆ ವಾಹನ ಮಾಡಿಕೊಂಡು ದೂರದೂರುಗಳಿಂದ ಬಂದಿದ್ದರು, ಹಲವರು ರಾತ್ರಿಯೇ ಬಂದು ಸೀಟ್ ರಿಸರ್ವ್ ಮಾಡಿದ್ದರು.

ಮನೆ ಪಕ್ಕದಲ್ಲಿದ್ದ ಕೊಟ್ಟಿಗೆಯಲ್ಲಿ ವೈದ್ಯರು ಒಬ್ಬೊಬ್ಬನನ್ನೇ ಮಾತನಾಡಿಸಿ ಮದ್ದು ಕೊಡುತ್ತಿದ್ದರು. ಅವರ ಅಕ್ಕಪಕ್ಕದಲ್ಲಿ ನಾಲ್ಕೈದು ಬಗೆ ಮರದ ಚಕ್ಕೆಗಳು, ಒಂದೆರಡು ಬಗೆಯ ಬೇರುಗಳು ; ಎಲ್ಲ ರೋಗಕ್ಕೂ ಅದೇ ಮದ್ದು. ಕಿಡ್ನಿ ಕಲ್ಲಿಗೂ ಅದೇ, ಗಂಟಲು ಕ್ಯಾನ್ಸರ್‌ಗೂ ಅದೇ, ಜಾಂಡೀಸ್‌ಗೂ ಅದೇ. ಸೇವಿಸುವ ಕ್ರಮ ಮಾತ್ರ ಬೇರೆ ಬೇರೆ. ಅವರ ಮುಂದೆ ನೂರಾರು ರೋಗಿಗಳ, ಅವರ ಸಂಬಂಕರ ಸಾಲು.

ಇದನ್ನೆಲ್ಲ ಲಂಬಿಸುವ ಅಗತ್ಯವಿಲ್ಲ ; ಪಾರಂಪರಿಕ ಹಾಗೂ ಪರ್‍ಯಾಯ ವೈದ್ಯ ಪದ್ಧತಿಗಳ ಬಗ್ಗೆ ನಮ್ಮ ಜನ ಇಟ್ಟಿರುವ ನಂಬಿಕೆಯನ್ನು ಇದು ಸೂಚಿಸುತ್ತಿರಬಹುದು ಅಥವಾ ಅಲೋಪತಿಯ ಮೇಲೆ ನಂಬಿಕೆ ಇಲ್ಲದಿರುವುದನ್ನೂ ಹೇಳುತ್ತಿರಬಹುದು. ಕಾಣಬಲ್ಲವನಿಗೆ, ಅಲ್ಲಿದ್ದ ಮುಖಗಳಲ್ಲಿ ಭರವಸೆ ಹಾಗೂ ಹತಾಶೆಗಳೆರಡೂ ಕಾಣಿಸುತ್ತಿದ್ದವು. ಅಲ್ಲಿ ಬಂದು ನಿಂತಿದ್ದವರಲ್ಲಿ ಹೆಚ್ಚುಕಡಿಮೆ ಎಲ್ಲವೂ ಡಾಕ್ಟರರು ಕೈಬಿಟ್ಟ ಕೇಸುಗಳೇ. ಇದುವರೆಗಿನ ಪ್ರಯತ್ನ ಫಲ ಕೊಡದಿದ್ದುದರಿಂದ ಹತಾಶೆ ; ಈ ವೈದ್ಯರು ಒಂದು ಪವಾಡ ನಡೆಸಬಹುದೆಂಬ ಭರವಸೆ.

ಆ ವೈದ್ಯರೇನೂ ಅವಧೂತನಂತೆ ಕಾಣಲಿಲ್ಲ. ಅವರು ಹಿಂದಿನ ದಿನವೇ ಕೆಲಸದವನ ಜತೆ ಗುಡ್ಡ ಗುಡ್ಡ ಅಲೆದು ಚಕ್ಕೆ ಆರಿಸಿ ತಂದಿಟ್ಟಿರುತ್ತಿದ್ದರು. ಒಂದು ಸಲ ನೋಡಿದಾಗ ಅವರು ಬೀಡಿ ಸೇದುತ್ತಾ ಮನೆಗೆಲಸದವರೊಡನೆ ಮಾತನಾಡುತ್ತಿದ್ದರು ; ಮತ್ತೊಂದು ಬಾರಿ ಸಾಲು ತಪ್ಪಿಸಿ ಬಂದವನೊಡನೆ ಜಗಳವಾಡಿದರು. ಒಂದು ಸಲ ಒಬ್ಬನಿಗೆ ಒಂದು ರೋಗಕ್ಕೆ ಮಾತ್ರವೇ ಮದ್ದು ಕೊಡುತ್ತಿದ್ದರು. ಕೊಡುವಷ್ಟು ಮಾತ್ರ ತೆಗೆದುಕೊಳ್ಳಬೇಕು, ಹೆಚ್ಚಿಗೆ ಕೇಳುವಂತಿಲ್ಲ. ಔಷಧಕ್ಕೆ ನಯಾ ಪೈಸೆ ತೆಗೆದುಕೊಳ್ಳುವುದಿಲ್ಲ ಅವರು. ವಶೀಲಿಯೂ ನಡೆಯುವುದಿಲ್ಲ.

ಅವರು ಔಷಧ ಕೊಡತೊಡಗುವುದು ಬೆಳಗ್ಗೆ ಏಳೂವರೆಗೆ. ನಾನು ಮೂರನೇ ಸಲ ಹೋಗಿದ್ದಾಗ ಭಟ್ಟರು ರೌದ್ರಾವತಾರ ತಾಳಿಬಿಟ್ಟಿದ್ದರು. ಅದಕ್ಕೆ ಕಾರಣ ಹಿಂದಿನ ರಾತ್ರಿ ವಾಹನಗಳಲ್ಲಿ ಬಂದು ಕ್ಯೂ ನಿಂತವರು ರಾತ್ರಿಯಿಡೀ ಕಚಕಚ ಮಾತನಾಡುತ್ತ, ಜಗಳವಾಡುತ್ತ, ಗಲಾಟೆ ಎಬ್ಬಿಸಿ ಭಟ್ಟರ ನಿದ್ದೆ ಕೆಡಿಸಿ ಬಿಟ್ಟಿದ್ದರು. "ನಿನ್ನೆ ಮದ್ದು ಹುಡುಕಿ ಸುಸ್ತಾಗಿ ಮಲಗಿದ್ದರೆ ನಿಮ್ಮ ಗಲಾಟೆ ಎಂತದು, ಇಂದು ಮದ್ದು ಕೊಡುವುದಿಲ್ಲ" ಎಂದು ಕಟುವಾಗಿಬಿಟ್ಟಿದ್ದರು. ದೂರದಿಂದ ಹೋದ ನಾವೆಲ್ಲ ಕಂಗಾಲಾಗಿದ್ದೆವು. ಬಳಿಕ ಸಮಾಧಾನ ಮಾಡಿಕೊಂಡು ಔಷಧ ಕೊಟ್ಟರು. ಅಂದು ಕ್ಯೂನ ಮೊದಲಲ್ಲಿದ್ದವರಿಗೆ ಮದ್ದು ಸಿಕ್ಕಿದ್ದು ಕೊನೆಗೆ.

ಪ್ರತಿಸಲ ನಾನು ಹೋದಾಗಲೂ ಹಲವಾರು ವಿಚಿತ್ರ ಕೇಸುಗಳು ಕಾಣುತ್ತಿದ್ದವು. ಇದ್ದಕ್ಕಿದ್ದಂತೆ ಸಾಲಿನಲ್ಲಿ ನಿಂತವಳೊಬ್ಬಳು ಧಡ್ಡನೆ ಬಿದ್ದುಬಿಡುತ್ತಿದ್ದಳು. ಕೆಲವರ ಮೈಮೇಲೆ ಏನೋ ಆವೇಶವಾಗುತ್ತಿತ್ತು. ಗುಲ್ಬರ್ಗ, ಕೇರಳದ ಕಲ್ಲಿಕೋಟೆ ಹೀಗೆ ದೂರದೂರದಿಂದ ಬಂದವರು ಕೂಡ ಕ್ಯೂನಲ್ಲಿ ನಿಂತಿರುತ್ತಿದ್ದರು. ಪುಟ್ಟ ಹುಡುಗಿಯೊಬ್ಬಳನ್ನು ಕಲ್ಲಿನ ಮೇಲೆ ಕೂರಿಸಿ ಆಕೆಯ ಅಪ್ಪ ಕ್ಯೂನಲ್ಲಿ ನಿಂತಿರುತ್ತಿದ್ದ. ಆಕೆಗೆ ರಕ್ತದ ಕ್ಯಾನ್ಸರ್. ಒಮ್ಮೆ ಕ್ಯೂನ ಮಧ್ಯದಲ್ಲಿದ್ದವನು ತನಗೆ ಎಚ್‌ಐವಿ ಇದೆ ಎಂದು ದೊಡ್ಡ ಗಂಟಲಿನಲ್ಲಿ ಸಾರುತ್ತಿದ್ದ. ವೈದ್ಯರಿಂದ ಚಕ್ಕೆ ಇಸಿದುಕೊಳ್ಳುವಾಗಲಂತೂ ಎಲ್ಲರ ಮುಖದಲ್ಲೂ ಒಂದು ಬೆಳ್ಳಿ ಬೆಳಕು ಕೋರೈಸಿದಂತಾಗುತ್ತಿತ್ತು. ಭಟ್ಟರು ದೊಡ್ಡ ದನಿಯಲ್ಲಿ ಮಾತನಾಡುತ್ತ ಚಕ್ಕೆ ಎಣಿಸಿ ಕೈಗಿಡುತ್ತಿದ್ದರು.

ಬದುಕು ಹಾಗೂ ಸಾವಿನ ನಡುವಿನ ಒಂದು ಅಲ್ಪವಿರಾಮದಂತಿದ್ದ ಈ ಮನೆ, ರೋಗಿಗಳ ಸುಖ ಹಾಗೂ ಸಂಕಟಗಳು ಜತೆಯಾಗುವ ಒಂದು ಸ್ಥಳವಾಗಿತ್ತು. "ನಮ್ಮ ತಂದೆಗೆ ಕ್ಯಾನ್ಸರ್. ಮನೆಗೆ ಕೊಂಡೋಗಿ ಅಂತ ಡಾಕ್ಟರ್ ಹೇಳಿದ್ದರು. ಇವರ ಮದ್ದಿನಲ್ಲಿ ಒಂದು ವರ್ಷದಿಂದ ಸುಖವಾಗಿದ್ದಾರೆ" ಎಂದು ಒಬ್ಬ ಹೇಳುತ್ತಾನೆ. ಪಕ್ಕದಲ್ಲಿ ನಿಂತ ಪೇಷೆಂಟ್‌ಗೆ ಅದು ಬರೀ ಮಾತಲ್ಲ, ಕಾರ್ಗತ್ತಲಲ್ಲಿ ಹೊಳೆಯುವ ಬೆಳ್ಳಿ ರೇಖೆ. ಹಾಗೇ, ಬರಿಯ ಬ್ಲಡ್‌ಪ್ರೆಶರ್ ಹೊಂದಿರುವಾತನಿಗೆ ಕ್ಯಾನ್ಸರ್ ರೋಗಿಯ ವೇದನೆಯ ಮುಂದೆ ತನ್ನದು ಏನೂ ಅಲ್ಲ ಎಂಬ ಅರಿವು. ಹಾಗೇ ಅದು ಎಲ್ಲರ ಒಡಲಲ್ಲೂ ಇದ್ದುಕೊಂಡು ಹೊಂಚು ಹಾಕುವ ಸಾವಿನ, ವೇದನೆಯ ಕಿಂಚಿತ್ ದರ್ಶನ.

ಇಂಥ ವೈದ್ಯರಲ್ಲಿಗೆ ತಿಂಗಳಿಗೊಂದು ಬಾರಿಯಂತೆ ಹೋಗುತ್ತಿದ್ದ ನಾನು ಇನ್ನು ಹೋಗುವ ಸಂಭವವಿಲ್ಲ. ಯಾಕೆಂದರೆ ಅಲ್ಲಿಂದ ತಂದ ಮದ್ದನ್ನು ಅಷ್ಟೊಂದು ಶ್ರದ್ಧೆಯಿಂದ ಸೇವಿಸಿದರೂ ನನ್ನ ಅಮ್ಮ ಮೊನ್ನೆ ಮೊನ್ನೆಯಷ್ಟೇ ತೀರಿಕೊಂಡಳು. ಅವಳಿಗೆ ಪಿತ್ಥಕೋಶದ ಕ್ಯಾನ್ಸರ್ ಆಗಿತ್ತು. ಅದು ಗೊತ್ತಾದ ಬಳಿಕ ಆಕೆ ನಮ್ಮ ಜತೆಗಿದ್ದದ್ದು ನಾಲ್ಕೇ ತಿಂಗಳು.

Saturday, March 22, 2008

ನಗರ ಸಾಗರದಲ್ಲಿ ಹಳ್ಳಿಯ ನಡುಗಡ್ಡೆ

(ಸುಧನ್ವನ ‘ಪೇಟೆಯ ಪಾಡ್ದನ’ಕ್ಕೆ ಒಂದು ಪ್ರತಿಕ್ರಿಯೆ)
ಪ್ರಿಯ ಸುಧನ್ವ,
ನಿನ್ನ ಪೇಟೆಯ ಪಾಡ್ದನವನ್ನು ಬಿಡದೆ ಓದುತ್ತಿದ್ದೇನೆ. ಇದುವರೆಗೆ ಬಂದಿರುವ ಕಮೆಂಟುಗಳಿಗಿಂತ ಕೊಂಚ ದೀರ್ಘವಾಗಿಯೇ ಪ್ರತಿಕ್ರಿಯಿಸುತ್ತಿದ್ದೇನೆ, ಅದು ನಿನ್ನ ಪ್ರಯತ್ನಕ್ಕೆ ಅಗತ್ಯವಾಗಿಯೂ ಇದೆ. ಇಲ್ಲಿ ನನ್ನ ಗಮನ ನಿನ್ನ ಪನ್ ಸಾಮರ್ಥ್ಯದ ಬಗೆಗಾಗಲೀ, ಪದ ಚಮತ್ಕಾರಗಳ ಬಗೆಗಾಗಲೀ ಅಲ್ಲ- ವಸ್ತು ಹಾಗೂ ಅದನ್ನು ನೀನು ನಿರ್ವಹಿಸುವ ಕ್ರಮದ ಬಗೆಗೆ.
ನಗರ ಪ್ರಜ್ಞೆಯ ಕವಿತೆಗಳು ಕನ್ನಡದಲ್ಲಿ ಇಲ್ಲ(ಕಾಯ್ಕಿಣಿ ಕತೆಗಳು ಹಾಗೂ ಇತ್ತೀಚಿನ ವಿ.ಎಂ.ಮಂಜುನಾಥ್ ಕವನಗಳು ಇದಕ್ಕೆ ಅಪವಾದ) ನಿಜ. ಈ ದೃಷ್ಟಿಯಿಂದ ನಿನ್ನ ಪದ್ಯಗಳು ಹೊಸಾ ಪ್ರಯತ್ನಗಳೇ ಸರಿ. ತುಸು ಗಂಭೀರವಾಗಿ ಪರಿಗಣಿಸಿದರೆ (ನೀನು ಮತ್ತು ಓದುಗರು) ಈ ಪದ್ಯಗಳು ಕನ್ನಡಕ್ಕೆ ಉತ್ತಮ ಕೊಡುಗೆಯಾಗಬಲ್ಲವು.
ನೀನು ಮೂಲತಃ ನಗರದವನಲ್ಲ ಎಂಬುದು ನಿನ್ನ ಪದ್ಯ ಓದುವಾಗಲೇ ಗೊತ್ತಾಗುತ್ತದೆ. ನಗರದ ಮೇಲಿನ ಪದ್ಯ ಬರೆಯಲು ನಗರದವನಾಗಿರಲೇ ಬೇಕಾಗಿಲ್ಲ ಎಂಬುದೂ ನಿಜ. ಅದೇ ಈ ಕವಿತೆಗಳ ಮುಖ್ಯ ಲಕ್ಷಣ ಕೂಡ. ಯಾಕೆಂದರೆ ನೀನು ನಗರದ ಮೇಲೆ ಕಟ್ಟುವ ಪ್ರತಿಯೊಂದು ಪದ್ಯದಲ್ಲೂ ನಿನ್ನ ಊರು, ಜನ ಬೆರೆತುಕೊಂಡು ಬರುತ್ತವೆ. ಪೇಟೆಯ ಲೈಟುಗಳ ಮಧ್ಯೆ ಹಳ್ಳಿಯ ಚಿಮಣಿ, ಇಲ್ಲಿನ ಝಗಮಗದ ನಡುವೆ ಅಲ್ಲಿನ ಕತ್ತಲು, ಇಲ್ಲಿನ ಯುವತಿಗೆ ಅಲ್ಲಿನ ಅಮ್ಮ, ನಗರದ ದೇವತೆಗಳಿಗೆ ಹಳ್ಳಿಯ ಹವಿಸ್ಸು ! ಅದು ನಿನ್ನ ಅರಿವಿಲ್ಲದೆಯೂ ಇರಬಹುದು. ಹೀಗಾಗಿ ನಿನ್ನ ಪದ್ಯಗಳು ಸಂಪೂರ್ಣ ನಗರ ಪದ್ಯಗಳೂ ಅಲ್ಲ. ಅವು ‘ಪೇಟೆ- ಹಳ್ಳಿ ಪದ್ಯಗಳು’ ಅಷ್ಟೆ. ಬಹುಶಃ ಹಳ್ಳಿಯಿಂದ ಬಂದು ಇಲ್ಲಿ ನೆಲೆಯೂರಿ ಬರೆಯುವ ಯಾರಿಗೂ ಸಂಪೂರ್ಣ ನಗರ ಪ್ರಜ್ಞೆಯೆಂಬುದು ಇಲ್ಲವೇ ಇಲ್ಲ. ಬಹುಶಃ ಅದು ನಮ್ಮ ಮುಂದಿನ ತಲೆಮಾರಿಗೆ ಮಾತ್ರ ಅದು ಲಭ್ಯ.
ಬೇಕಾಗಿಯೋ ಬೇಡವಾಗಿಯೋ ನಾವೆಲ್ಲರೂ ಶಹರದಲ್ಲಿ ಬದುಕುತ್ತಿದ್ದೇವೆ. (ಇದ್ದಕ್ಕಿದ್ದಂತೆ ಈ ಪದ ಯಾಕೆ ಬಂತು ? ಪೇಟೆ, ನಗರ ಅನ್ನುವುದಕ್ಕಿಂತ ಇದೇ ಯಾಕೋ ಚೆನ್ನಾಗಿದೆ ! ‘ಶಹರ’ ಅನ್ನುವಾಗ ಪಕ್ಕನೆ ‘ಕುಹರ’ ನೆನಪಾದದ್ದು ಆಕಸ್ಮಿಕ ಇರಲಾರದು. ಹಾಗೇ ‘ಶಹಾ’ ಕೂಡ ! ಇದ್ಯಾಕೋ ನಿನ್ನ ‘ಪನ್‌ಗಾಳಿ’ ನನಗೂ ಹೊಡೆದಂತಿದೆ !) ಇದು ನಮ್ಮ ಕಾಲದ ಯುವಜನರ ಹಣೆಬರಹ. ಹಾಗೇ ನಮ್ಮ ಅನೇಕ ಗೆಳೆಯರು, ದಾಯಾದಿಗಳು ಹಳ್ಳಿಗಳಲ್ಲಿದ್ದಾರೆ. ನಾವು ತೊರೆದು ಬಂದ ಹಳ್ಳಿಗೆ ನಾವು ಬಯಸಿದಾಗ ಮುಖಾಮುಖಿಯಾಗಬಲ್ಲೆವು. ಹಾಗೇ ನಮ್ಮ ಹಳ್ಳಿಯ ದಾಯಾದಿಗಳೂ ಶಹರಕ್ಕೆ ಬರಬಲ್ಲರು. ಆದರೆ ನಾವು ಹಳ್ಳಿಗೆ ಹೋಗುವುದು ಮತ್ತು ಅವರು ಪೇಟೆಗೆ ಬರುವುದು ಎರಡೂ ಒಂದೇ ಅಲ್ಲವಲ್ಲ. ಎರಡೂ ಅತ್ಯಂತ ಭಿನ್ನವಾದವು. ಇದನ್ನು ತೂಗಿ ನೋಡಬೇಕು ಅಂತ ನಿನಗೆ ಎಂದೂ ಅನಿಸಿಯೇ ಇಲ್ಲವೆ ?
ಕವಿತೆಯಲ್ಲಿ ಏನು ಇಲ್ಲವೋ ಅದನ್ನು ಎತ್ತಿಕೊಂಡು ಕಮೆಂಟು ಹೊಡೆಯುತ್ತಿದ್ದಾನೆ ಅಂತ ತಿಳಿಯಬೇಡ. ಈಗ ಕವಿತೆಯಲ್ಲಿ ಇರುವುದನ್ನೇ ಎತ್ತಿಕೊಳ್ಳುವಾ. ಈ ಹುಡುಗಿಯದು ಹೇಳಲೂ ಆಗದ ಅನುಭವಿಸಲೂ ಆಗದ ಪಾಡು. ಎಲ್ಲೆಂದರಲ್ಲಿ ಅಂಟುವ ಚೂಯಿಂಗ್ ಗಮ್ ನಗರದ ಉಸಿರುಗಟ್ಟಿಸುವ ಸ್ಥಿತಿ. ಇದು ಬಂದಿರುವ ರೀತಿ ಸೊಗಸಾಗಿದೆ. ಹಾಗೇ ಬಬಲ್ ಗಮ್ಮು ಮತ್ತು ಕಾಮಾಲೆ ಕಣ್ಣುಗಳು ಅವಳಿಗೆ ಅಂಟುವ ರೀತಿಯನ್ನು ರಿಲೇಟ್ ಮಾಡಿದ ಬಗೆಯೂ ಚೆನ್ನಾಗಿದೆ. (ಈ ‘ಚೆನ್ನಾಗಿದೆ’, ‘ಸೊಗಸಾಗಿದೆ’ ಎಂಬ ಪದಗಳನ್ನು ಕನಿಷ್ಠ ಹತ್ತು ವರ್ಷ ಬ್ಯಾನ್ ಮಾಡಬೇಕು ನೋಡು !) ಆದರೆ ಆಕೆಗೆ ಪೇಟೆ ಅನಿವಾರ್‍ಯವಾಗಿಯೂ ಇರುವುದರಿಂದ ಈ ಬಬಲ್ ಗಮ್ಮನ್ನೂ ಸುತ್ತ ಅಂಟಿಕೊಂಡಿರುವ ಕಣ್ಣುಗಳನ್ನೂ ಒಂದು ಬಗೆಯಲ್ಲಿ ಪ್ರತಿರೋಸುವ, ಒಂದು ಹದದಲ್ಲಿ ಎಂಜಾಯ್ ಮಾಡುವ ಹಾಗೂ ಈ ಎಲ್ಲವೂ ಉಂಟು ಮಾಡುವ ಒಂದು ಭಾವ ವರ್ತುಲದಿಂದ ಕೊಂಚವೇ ಹೊತ್ತಿನಲ್ಲಿ ಪಾರಾಗಿ ಮತ್ತೆ ದಿನಚರಿಗೆ ಮರಳಿ ಬಿಡುವ ವರ್ತನೆಯೂ ಇದೆಯಲ್ಲವೆ ? ಇದು ಹೀಗಿದ್ದಾಗ, ನೀನು ಬರೆದ ಅಮ್ಮನ ನೆನಪು, ಕಣ್ಣ ಕೊನೆ ಒರೆಸುವುದು ಇವೆಲ್ಲಾ ಒಂದು ಬಗೆಯ ಹುಸಿ ಅಂತ ನಿನಗೇ ಅನಿಸುವುದಿಲ್ಲವೆ ? ನನಗಂತೂ ಅನಿಸಿದೆಯಪ್ಪ.
ಈ ಪದ್ಯಗಳಲ್ಲಿ ಇನ್ನೂ ಒಂದು ಸಮಸ್ಯೆ ಇದೆ ಅಂತ ನನಗೆ ಅನಿಸುತ್ತದೆ. ಅದು ಪೇಟೆಯ ಮಧ್ಯಮ ವರ್ಗವೊಂದು ಈಗಾಗಲೇ ಸೃಷ್ಟಿಸಿ ಇಟ್ಟಿರುವ ಒಂದು ಸಿದ್ಧ ಮಾದರಿಯ, ಸಿದ್ಧ ಜಾಡಿಗೆ ಬೀಳುವ ಭಯ. ನಾವೆಲ್ಲರೂ ಈ ವರ್ಗದ ‘ಪ್ರಾಡಕ್ಟು’ಗಳೇ. ಈ ವರ್ಗ ಹಳ್ಳಿಯ ಸಂಬಂಧವನ್ನು ಸಂಪೂರ್ಣ ಕಳಚಿಕೊಂಡೂ ಇಲ್ಲ, ಹಾಗೆಯೇ ಅದನ್ನು ಸಂಪೂರ್ಣ ಸೃಜನಶೀಲವಾಗಿಯೂ ಇಟ್ಟಿಲ್ಲ. ಹಳ್ಳಿಯಲ್ಲಿರುವ ಅಮ್ಮನ ನೆನಪಾಗಿ ಹಳಹಳಿಸುವುದು, ಅಲ್ಲಿಯೇ ಇದ್ದು ಪ್ರಗತಿಪರ ಕೃಷಿಕನಾಗಬಹುದಿತ್ತು ಎಂದು ಹಂಬಲಿಸುವುದು, ಆದರೆ ಈಗ ಹಳ್ಳಿಯಲ್ಲಿರುವವರ ಪಾಡು ನೆನಪಾಗಿ ಭಯಪಟ್ಟು ಸುಮ್ಮನಾಗುವುದು, ಒಂದು ವಾರದ ರಜೆ ಸಿಕ್ಕಿದಾಗ ಹಳ್ಳಿಗೆ ಓಡುವುದು, ಅಲ್ಲಿರುವ ಅಣ್ಣನ ಅಥವಾ ತಮ್ಮನ ಸಂಸಾರದ ಜತೆ ಬೆರೆಯಲು ಯತ್ನಿಸುವುದು, ಎಷ್ಟು ಯತ್ನಿಸಿದರೂ ಅವರಿಗೂ ತಮಗೂ ಕಂದಕವೊಂದು ಏರ್ಪಟ್ಟಿದೆ ಎಂದು ಮರುಗುವುದು, ಪೇಟೆಯ ಸಹವಾಸ ರೇಜಿಗೆ ಹುಟ್ಟಿಸಿದಾಗ ಊರಿನಲ್ಲಿ ಎಷ್ಟು ಚೆಂದವಿತ್ತು ಎಂದುಕೊಳ್ಳುವುದು, ಹಳ್ಳಿಯ ರಾಜಕೀಯಗಳು ಗೊತ್ತಾದಾಗ ದಿಗಿಲಾಗಿ ನಮ್ಮ ಹಳ್ಳಿಯೂ ಹಾಳಾಯಿತೇ ಎಂದು ಹಲುಬುವುದು ಇತ್ಯಾದಿಗಳಲ್ಲಿ ಇದು ಜೀವಂತವಾಗಿದೆ. ಈ ವರ್ಗದ ಕವಿಗಳೂ ಕತೆಗಾರರೂ ಒಂದು ಹುಸಿ ಭಾವುಕತೆಯ ಪ್ರಪಂಚವನ್ನು ನಮ್ಮ ನಡುವೆ ಸೃಷ್ಟಿಸಿ ಅಲ್ಲಿ ಪೇಟೆಯ ಹಾಗೂ ಹಳ್ಳಿಯ ಅನೇಕ ಚಪ್ಪಟೆ ಕ್ಯಾರೆಕ್ಟರುಗಳನ್ನು ನಡೆದಾಡಲು, ವರ್ತಿಸಲು ಬಿಡುತ್ತಾರೆ. ಬಳಿಕ ತಾವು ತಮ್ಮ ಭಾವುಕತೆಗಾಗಿ ಸೃಷ್ಟಿಸಿದ ಕಲ್ಪನೆಗಳನ್ನೇ ನಿಜವೆಂದು ನಂಬಲೂ ತೊಡಗುತ್ತಾರೆ. ನಿನ್ನ ಪದ್ಯಗಳು ಇಂಥ ಜಾಡು ಹಿಡಿದರೆ ಮುಕ್ಕಾದವೆಂದೇ ತಿಳಿ.
ಇದನ್ನು ಹೇಳುತ್ತಿರುವಾಗಲೇ ನನಗೊಂದು ದ್ವಂದ್ವ ಕಾಣಿಸುತ್ತಿದೆ- ಹೀಗೆ ಹಳ್ಳಿಯ ಬಗ್ಗೆ ಭಾವುಕವಾಗಿರುವುದು ಮತ್ತು ಪೇಟೆಯ ಬಗ್ಗೆ ಕಟುವಾಗಿರುವುದು ನಮ್ಮ ತಲೆಮಾರಿನ ದೃಷ್ಟಿಯಿಂದ ಅಗತ್ಯ ಕೂಡ. ಆದ್ದರಿಂದಲೇ ನಾವು ಬರೆಯುವುದು ಕಾಲ ದೇಶಗಳ ದೃಷ್ಟಿಯಿಂದ ಸಮಂಜಸವಾಗಿದೆಯೇ ಅಥವಾ ರಾಜಕೀಯವಾಗಿ ಸರಿಯಾಗಿದೆಯೇ ಅಂತೆಲ್ಲ ನೋಡುವುದು ತಪ್ಪು ಅಂತ ಕೂಡ ಅನೇಕ ಸಲ ಅನಿಸುತ್ತದೆ. ಇದನ್ನೂ ತೊರೆದು, ಅದನ್ನೂ ಕೈಬಿಟ್ಟರೆ ಮೂರನೇ ದಾರಿಯೊಂದು ಇದೆಯೇ ಎಂಬುದು ನನಗಿರುವ ಸಂಶಯ.
ಆದರೆ ನಿನ್ನ ಯತ್ನವಂತೂ ಗಂಭೀರವಾದದ್ದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಬದುಕೊಂದನ್ನು ಎಮ್ಮೆ ಕರುವಿನಂತೆ ಹಾಗೇ ಬದುಕುವುದಕ್ಕಿಂತ ಇದನ್ನು ವಿಮರ್ಶಿಸುತ್ತಾ ಸಾಧ್ಯವಾದಷ್ಟು ಸೃಜನಶೀಲವಾಗಿರಲು ಯತ್ನಿಸುತ್ತಾ ಇರುವುದು ಮೇಲು. ಆ ಪ್ರಯತ್ನ ನಡೆದಿರುವುದರಿಂದಲೇ ಇದು ನಮಗೆಲ್ಲ ಪ್ರೀತಿಯ ಅಂಕಣವಾಗಿದೆ ಎಂಬುದನ್ನು ಇಲ್ಲಿ ನೆನೆಯುತ್ತೇನೆ.

Thursday, March 6, 2008

ನ್ಯಾಯ

"ಎಲ್ಲಿಗೆ ಓಡುತ್ತಿದ್ದೀ, ನಿಲ್ಲು. ಬುರ್ಖಾ ತೆಗೆ"
"ನನ್ನನ್ನೇನೂ ಮಾಡಬೇಡಿ, ಪ್ಲೀಸ್"
"ಇಲ್ಲ ಏನೂ ಮಾಡುವುದಿಲ್ಲ. ಆದರೆ ಕೊಂಚ ನ್ಯಾಯ ವಿಚಾರಣೆ ನಡೆಸಬೇಕಾಗಿದೆ"
"ಏನದು ?"
"ನಿನ್ನೆ ನಮ್ಮ ಬೀದಿಯಲ್ಲಿ ನಮ್ಮ ಧರ್ಮದವನೊಬ್ಬನ ಕೊಲೆಯಾಯಿತು. ಅದನ್ನು ಮಾಡಿದ್ದು ನಿನ್ನ ಧರ್ಮದವರು"
"ಕೊಲೆಗಾರರು ಯಾರೆಂದು ನನಗೆ ಗೊತ್ತಿಲ್ಲ. ಆ ಧರ್ಮದಲ್ಲಿ ಹುಟ್ಟಿದ್ದು ನನ್ನ ತಪ್ಪಲ್ಲ. ನಿಮ್ಮ ಧರ್ಮದಲ್ಲಿ ಹುಟ್ಟುವುದು ನನ್ನ ಕೈಯಲ್ಲಿ ಇರಲಿಲ್ಲ"
"ನಾವು ಪ್ರಶ್ನೆ ಕೇಳದಿದ್ದರೆ ನೀನು ಉತ್ತರಿಸುವುದು ಬೇಕಾಗಿಲ್ಲ. ನಿನಗೆಷ್ಟು ಮಕ್ಕಳು ?"
"ಐದು ಮಂದಿ"
"ಅವರು ಈ ಕೊಲೆ ಮಾಡಿರಬಹುದು !"
"ಅವರೆಲ್ಲ ಮುಗ್ದ ಹೆಣ್ಣುಮಕ್ಕಳು"
"ಅಂದರೆ ಅವರು ನಮ್ಮ ಧರ್ಮದವರ ತಲೆ ಕೆಡಿಸಿ ನೀತಿ ತಪ್ಪಿಸುತ್ತಿರಬಹುದು. ಇರಲಿ, ನಿನ್ನ ಹೆಣ್ಣುಮಕ್ಕಳು ಇರುವಲ್ಲಿಗೆ ನಮ್ಮನ್ನೀಗ ಕರೆದೊಯ್ದರೆ ನಿನಗೆ ಈ ವಿಚಾರಣೆಯಿಂದ ಮಾಫಿ"
"ಅವರೆಲ್ಲ ಹಲವಾರು ವರ್ಷಗಳ ಹಿಂದೆ ಮದುವೆಯಾಗಿ ಈ ಊರನ್ನೇ ತೊರೆದು ಹೋಗಿದ್ದಾರೆ"
"ಹಾಗಿದ್ದರೆ ನಿನ್ನ ವಿಚಾರಣೆ ಮುಂದುವರಿಯುತ್ತದೆ. ನಮ್ಮ ಧರ್ಮದ ಅನೇಕ ಮಂದಿಯನ್ನು ಈ ಹಿಂದೆ ಕೊಲ್ಲಲಾಗಿದೆ. ಅದನ್ನು ನಿನ್ನ ಗಂಡ ಅಥವಾ ತಂದೆ ಮಾಡಿರಬಹುದು"
"ಅವರಿಬ್ಬರೂ ಸತ್ತು ಹಲವು ವರ್ಷಗಳಾದವು"
"ಅಂದರೆ ದೇವರು ಅವರಿಗೆ ಆಗಲೇ ಶಿಕ್ಷೆ ಕರುಣಿಸಿದ್ದಾನೆ ಅನ್ನು. ನಮ್ಮ ಧರ್ಮದ ಅನೇಕ ಮಹಿಳೆಯರ ಮೇಲೆ ನಿಮ್ಮ ಧರ್ಮದವರು ಅತ್ಯಾಚಾರ ಮಾಡಿದ್ದಾರೆ. ಅವರ ಆತ್ಮಗಳು ನ್ಯಾಯಕ್ಕಾಗಿ ಪರಿತಪಿಸುತ್ತಿವೆ"
"ಸರಿ, ನೀವು ನನಗೆ ಶಿಕ್ಷೆ ನೀಡುವುದಂತೂ ಖಚಿತ. ಈ ಕೃತ್ಯಗಳು ಯಾವಾಗ ನಡೆದವೆಂದು ಹೇಳಿ"
"೫೦೦ ವರ್ಷಗಳ ಹಿಂದೆ !"

Wednesday, March 5, 2008

ಗುರುಪ್ರಸಾದ್ ಕಾಗಿನೆಲೆಗೊಂದು ಪತ್ರ

ಪ್ರಿಯ ಗುರುಪ್ರಸಾದ್,
ನಿಮ್ಮ ‘ಬಿಳಿಯ ಚಾದರ’ ಓದಿದೆ. ‘ಚೆನ್ನಾಗಿದೆ’ ಎಂಬ ಲೋಕಾಭಿರಾಮದ ಮಾತಿಗೆ ಹೊರತುಪಡಿಸಿ, ಮೊದಲನೇ ಓದಿಗೆ ದಕ್ಕಿದ ಕೆಲವು ಟಿಪ್ಪಣಿಗಳು ಇಲ್ಲಿ.

ಮೊದಲು ಇದು ಅಮೆರಿಕದಲ್ಲಿರುವ ಯುವ ಭಾರತೀಯರ ಬದುಕಿನ ಕಥನ ಅನಿಸಿತು. ಅದು ಅಷ್ಟೇ ಅಲ್ಲ, ಅದರಾಚೆಗೂ ಚಾಚಿದೆ ಅನಿಸಿದ್ದು ಡ್ರಗ್ ಲಾಬಿ, ಸಾಫ್ಟ್‌ವೇರ್ ವ್ಯವಸ್ಥೆಯ ಒಳಸುಳಿಗಳು ಅವರ ಬದುಕಿನೊಳಗೆ ಹೆಣೆದುಕೊಂಡು ಬಂದಾಗ. ಹಾಗೇ ಇದು ಬೇರು ಕಳೆದುಕೊಂಡವರ ಕಥನವೂ ಹೌದು. ಇವರಿಗೆ ಬೇರು ಮಾತ್ರವಲ್ಲ, ಭವಿಷ್ಯವೂ ಇಲ್ಲ ಅನಿಸುವುದು ರಶ್ಮಿಯ ಸಾವಿನೊಂದಿಗೆ. ಇದು ಶ್ರೀಧರ, ನಾಗೇಶರ ವಿಚಾರದಲ್ಲಿ ಕೂಡ ನಿಜ. ಎಲ್ಲ ಭಾರತೀಯರೂ ‘ಗೋಕುಲ ನಿರ್ಗಮನ’ ಮಾಡುತ್ತಿರುವುದು ಇಂಥ ಬದುಕಿಗಾಗಿ ಹಂಬಲಿಸಿಯೆ ?

ಮುಖ್ಯವಾಗಿ, ಇದು ನನಗೆ ಇಷ್ಟವಾಗಿರುವುದು ರಶ್ಮಿ ಎಂಬ ಪಾತ್ರದ ಮೂಲಕ. ಆಕೆ ಆಧುನಿಕ ಬದುಕಿನ ಶಕ್ತಿಶಾಲಿ ರೂಪಕ. ಆಕೆ ಇಲ್ಲಿರುವ ಎಲ್ಲರಿಗಿಂತ ಭಿನ್ನ. ಇದನ್ನು ಓದಿದಾಗ ನನಗೆ ಶಾಂತಿನಾಥರ ‘ಕ್ಷಿತಿಜ’ದ ಮಂದಾಕಿನಿ ನೆನಪಾದದ್ದರಲ್ಲಿ ಅಸಹಜತೆಯೇನಿಲ್ಲ. ಶ್ರೀಧರ, ನಾಗೇಶ ಮುಂತಾದವರು ತಮಗಿನ್ನೂ ಅಪರಿಚಿತವಾದ ಅಮೆರಿಕನ್ ಪ್ರಜ್ಞೆಯೆಡೆಗೆ ನಡೆಯಲು ಸಂಕೋಚದಿಂದ ಮೈ ಹಿಡಿ ಮಾಡಿಕೊಳ್ಳುತ್ತಿರುವಾಗ ಈಕೆ ದುರಂತದ ಅರಿವಿದ್ದೂ ಹಿಂಜರಿಯದೆ ನುಗ್ಗಿಬಿಡುತ್ತಾಳೆ.

ಇದು ಪ್ರಸ್ತುತದ ಒಂದು ಕಾಣ್ಕೆಯೂ ಹೌದು. ಏನಿದ್ದರೂ ಹೊಸ ಸಂಸ್ಕೃತಿಗಳು ನಮ್ಮನ್ನು ಗಾಢವಾಗಿ ಒಳಗೊಳ್ಳುವುದು ಅವು ನಮ್ಮ ಹೆಣ್ಣು ಮಕ್ಕಳನ್ನು ಆವರಿಸಿದಾಗಲೇ. ಆಗಲೇ ಎಲ್ಲವೂ ಬದಲಾಗುವುದು. ಇದು ಭಾರತೀಯ ಸ್ತ್ರೀ ಮಾಡಿಕೊಳ್ಳುತ್ತಿರುವ ಹೊಸ ಆಯ್ಕೆಗಳ ರೂಪಕದ ಹಾಗಿದೆ. ಕಾದಂಬರಿಯ ನಿಜವಾದ ಯಶಸ್ಸು ಇರುವುದು ರಶ್ಮಿಯ ಚಿತ್ರಣದಲ್ಲಿಯೇ. ರಶ್ಮಿಯ ಆಕಸ್ಮಿಕ ಅಂತ್ಯವೇ ಇಲ್ಲಿನ ದುರಂತದ ಸ್ವರೂಪದ ಅರಿವು ಮೂಡಿಸುವುದರಿಂದ, ಅಂತ್ಯ ಸಹಜವಾಗಿಲ್ಲ ಎಂಬ ಅನಂತಮೂರ್ತಿಯವರ ಟೀಕೆಯನ್ನು ನಾನು ಒಪ್ಪಲಾರೆ.

ಮತ್ತು ನಿಮ್ಮ ಕಾದಂಬರಿ ಎನ್ನಾರೈಗಳ ಬಗ್ಗೆ ಇದುವರೆಗೆ ಇರುವ ಸಂಕಥನಗಳನ್ನೇನೂ ಬದಲಾಯಿಸುವುದಿಲ್ಲ. ಅದೇ ಅನಾಥಪ್ರಜ್ಞೆ, ಅದೇ ಬೇರು ಕಳೆದುಕೊಂಡ ಜನ, ಮನುಷ್ಯನ ಬದುಕನ್ನು ಆತನಿಗರಿವಿಲ್ಲದೆ ನಿಯಂತ್ರಿಸುವ ಬೇರೆಬೇರೆ ಲಾಬಿಗಳು... ಇವನ್ನೆಲ್ಲ ಈ ಮೊದಲು ಎಲ್ಲಿಯೋ ಓದಿದಂತಿದೆ ಎಂಬಂತೆ. ಆದರೆ, ವಾಸ್ತವವೇ ಹಾಗಿದ್ದಾಗ ನೀವಾದರೂ ಬೇರೆಯ ಚಿತ್ರಣವನ್ನು ಎಲ್ಲಿಂದ ತರುವುದು ಅಲ್ಲವೆ ?

ಆಮೇಲೆ ನೀವು ಮಾಡಿರುವ ಇಂಗ್ಲಿಷ್ ಪದಗಳ ಕನ್ನಡೀಕರಣದ ಪ್ರಯತ್ನ ಅಂಥ ಮಹತ್ವದ್ದು ಅಂತ ನನಗೆ ಅನಿಸುವುದಿಲ್ಲ. ಉದಾ: ಲ್ಯಾಪ್‌ಟಾಪ್‌ಗೆ ‘ತೊಡೆಯ ಮೇಲಿಗ’ಎಂಬ ರೂಪ ಕಿರಿಕಿರಿಯನ್ನಷ್ಟೇ ಉಂಟುಮಾಡಬಲ್ಲುದು. ‘ಸ್ವಯಂವರ ಲೋಕ’ ನಾಟಕದಲ್ಲಿ ಕೆ.ವಿ.ಅಕ್ಷರ ಇದೇ ಲ್ಯಾಪ್‌ಟಾಪ್‌ಗೆ ‘ತೊಡೆಗಣಕ’ ಎಂಬ ರೂಪ ನೀಡಿದ್ದಾರೆ. ಯಾವುದು ಸಹ್ಯ ಅನಿಸುತ್ತದೆ ?
- ಪ್ರೀತಿಯಿಂದ
ಹರೀಶ್ ಕೇರ,

Sunday, January 20, 2008

ಸುಖಕ್ಕೆ ಕತೆಯಿಲ್ಲ

.... ಸುಖವಾಗಿದ್ದರು ಎಂಬಲ್ಲಿಗೆ, ಭದ್ರಂ ಶುಭಂ ಮಂಗಳಂ. ಆಮೇಲೆ ?
ಅಲ್ಲಿಗೆ ಕತೆ ಮುಗಿಯುತ್ತದೆ. ಆಮೇಲೆ ಯಾವ ಕತೆಯೂ ಇಲ್ಲ. ಸುಖವಾಗಿದ್ದರು ಎಂದ ಮೇಲೆ ಅವರ ಕತೆಯನ್ನಾದರೂ ಯಾರು, ಯಾಕೆ ಕೇಳಬೇಕು ? ಹೇಳುವವರಾದರೂ ಯಾರು ?
ಸುಖದ ಕಡೆಗೆ ವಿಡಿಯೋ ಕೆಮರಾ ತಿರುಗುವುದಿಲ್ಲ. ಹಾಗೆ ತಿರುಗುವುದಿದ್ದರೆ ಅದು ಮದುವೆ ವಿಡಿಯೋ ಮಾತ್ರ.
ನಮಗೆ ಯಾರದಾದರೂ ಕಷ್ಟದ, ಸಂಕಟದ ಕತೆ ಹೇಳಿ. ದುಃಖದ ಕತೆ ನಿರೂಪಿಸಿ. ಹಾಗಂತ ಜನ ಕೇಳುತ್ತಾರೆ. ಸುಖವಾಗಿರುವ ಸಂಸಾರವನ್ನು ಟಿವಿಯಲ್ಲಿ ತೋರಿಸಿ. "ಎಷ್ಟು ಚೆನ್ನಾಗಿದ್ದಾರೆ ನೋಡಿ’ ಎಂದು ಬೊಮ್ಮಡ ಬಜಾಯಿಸಿ. ಯಾರೂ ನೋಡುವುದಿಲ್ಲ. ಟಿವಿ ಆಫ್ ಮಾಡಿ ಅವರ ಪಾಡಿಗೆ ಎದ್ದು ಹೋಗುತ್ತಾರೆ.
ಬರ್ಬರ ಕೊಲೆಯಾದ ವ್ಯಕ್ತಿ, ಹೊತ್ತಿನ ತುತ್ತಿಗೆ ಆತನನ್ನೇ ನಂಬಿದ್ದ ಅವನ ಮನೆಯವರು, ಆತ ತರುತ್ತಾನೆಂದಿದ್ದ ಐಸ್‌ಕ್ರೀಮ್ ನಂಬಿ ಕುಳಿತಿದ್ದ ಆತನ ಅಮಾಯಕ [ಟ್ಟ ಮಗಳು- ಎಲ್ಲವನ್ನೂ ತೋರಿಸಿ ಒಂದು ಕ್ರೈಂ ಡೈರಿ ಮಾಡಿ. ಮರುದಿನವೂ ಅದೇ ಹೊತ್ತಿಗೆ ಜನ ಟಿವಿ ಮುಂದೆ ಕುಳಿತಿರದಿದ್ದರೆ ಕೇಳಿ.
ಟಿವಿ ಸೀರಿಯಲ್‌ಗಳಲ್ಲಿ ಕೂಡ ಯಾರೂ ಸುಖವಾಗಿಲ್ಲ. ಎಲ್ಲರಿಗೂ ಅವರವರದೇ ಪಾಡು. ಗಂಡನಿಗೆ ಹೆಂಡತಿ ಕಾಟ, ಹೆಂಡತಿಗೆ ಗಂಡ ಇಟ್ಟುಕೊಂಡವಳ ಕಾಟ, ಅತ್ತೆಗೆ ಸೊಸೆ ಕಾಟ, ಸೊಸೆಗೆ ಸವತಿ ಕಾಟ, ಮಗುವಿಗೆ ಶಾಲೆಯ ಕಾಟ, ಪಾತ್ರಧಾರಿಗಳಿಗೆ ನಿರ್ದೇಶಕರ ಕಾಟ, ನಿರ್ದೇಶಕರಿಗೆ ಟಿಆರ್‌ಪಿ ಕಾಟ !
ಹೊಸ ಕತೆಗಳ ವಿಷಯ ಬಿಡಿ, ಹಳೆಯ ಕತೆಗಳನ್ನೇ ನೋಡಿ. ಅಪ್ಪ ಕೊಟ್ಟ ಮಾತು ಉಳಿಸಿಕೊಳ್ಳಲು ರಾಮ ಇಷ್ಟವಿಲ್ಲದಿದ್ದರೂ ಕಾಡಿಗೆ ಹೋದದ್ದು, ಅವನ ಹಿಂದೆ ಕಲ್ಲುಮುಳ್ಳುಗಳ ಮೇಲೆ ಸೀತೆ ನಡೆದದ್ದು, ಆಕೆಯನ್ನು ರಾವಣ ಹೊತ್ತು ಒಯ್ದದ್ದು, ವಾಲಿಯ ಹತ್ಯೆ, ಶೂರ್ಪನಖಿಯ ಆಕ್ರೋಶ, ರಾಮನ ವಿರಹ, ಸೀತೆಯ ಕಣ್ಣೀರು, ಅಣ್ಣನಿಗೆ ಕೈಕೊಟ್ಟ ವಿಭೀಷಣ, ಮಕ್ಕಳನ್ನೂ ಬಂಧುಗಳನ್ನು ಬಲಿಕೊಟ್ಟ ರಾವಣ, ಆಮೇಲೆ ರಾಮ ಸೀತೆಯನ್ನು ತೊರೆದದ್ದು, ಲವಕುಶರ ಕತೆಯನ್ನೂ ವಿಸ್ತಾರವಾಗಿ ವರ್ಣಿಸುತ್ತಾನೆ ವಾಲ್ಮೀಕಿ.ಆಮೇಲೆ ರಾಮ ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಮಾಡಿಸಿಕೊಂಡು ಹದಿನಾರು ಸಾವಿರ ವರ್ಷ ಸುಖವಾಗಿದ್ದ ಎಂದು ಒಂದೇ ವಾಕ್ಯದಲ್ಲಿ ಮುಗಿಸುತ್ತಾನೆ.
ಹದಿನಾಲ್ಕು ವರ್ಷದ ಸಂಕಟದ ಕತೆಗೆ ಹತ್ತಾರು ಕಾಂಡಗಳು, ಸಾವಿರಾರು [ಟಗಳು. ಹದಿನಾರು ಸಾವಿರ ವರ್ಷದ ಸುಖದ ಕತೆಗೆ ಒಂದು ವಾಕ್ಯ !
ಸುಖದಿಂದ ಇದ್ದರೆ ರಾಮಾಯಣ ಆಗುವುದಿಲ್ಲ. ಅಲ್ಲಿರುವುದು ರಾಮನ ದುಃಖ, ಸೀತೆಯ ವಿರಹ, ರಾವಣನ ವ್ಯಗ್ರತೆ, ಊರ್ಮಿಳೆಯ ಮೌನ.
ಮಹಾಭಾರತದಲ್ಲೂ ಅಷ್ಟೇ. ಗಂಗೆಯ ಮಾತಿಗೆ ತಪ್ಪಿದ ಶಂತನು ಮಹಾರಾಜನಿಂದ ಶುರುವಾಗುತ್ತದೆ ಮಾತು ಕೊಡುವ, ಮಾತಿಗೆ ತ[ವ, ಮಾತು ಉಳಿಸಿಕೊಳ್ಳುವ, ಶಪಥ ಮಾಡುವ, ಶಪಥಕ್ಕಾಗಿ ಮಹಾಸಂಗ್ರಾಮ ಮಾಡುವ ಕತೆ. ಕಷ್ಟದಿಂದ ಸುಖಕ್ಕೆ, ಸುಖದಿಂದ ಸಂಕಟಕ್ಕೆ, ಸಂಕಟದಿಂದ ವಿಷಾದಕ್ಕೆ ಜಿಗಿಯುತ್ತ ಹೋಗುವ ಮಹಾಭಾರತದ ಕತೆ ದ್ರೌಪದಿಯ ಸೀರೆಯಂತೆ ಬೆಳೆಯುತ್ತ ಹೋಗುತ್ತದೆ.
ಹುಡುಕಿ ನೋಡಿ ಬೇಕಿದ್ದರೆ- ಮಹಾಭಾರತದಲ್ಲಿ ಸುಖೀ ಮನುಷ್ಯರೇ ಇಲ್ಲ. ಇದು ಅವಮಾನ, ಬೇಗುದಿ, ಪ್ರತೀಕಾರಗಳ ಕತೆ. ಇವೆಲ್ಲದರ ಹಿನ್ನೆಲೆಯಲ್ಲಿ ನಡೆದ ಸಂಗ್ರಾಮದ ಬಳಿಕ ರಾಜ್ಯ ಪಡೆದ ಧರ್ಮರಾಯ ಸಿಂಹಾಸನದಲ್ಲಿ ಎಷ್ಟು ಕಾಲ ಕುಳಿತಿದ್ದ ಎಂಬ ವಿವರವನ್ನು ವ್ಯಾಸರು ನಾಲ್ಕೇ [ಟಗಳಲ್ಲಿ ಮುಗಿಸುತ್ತಾರೆ.
ಆಧುನಿಕ ಕಾಲದ ಎಲ್ಲ ಕತೆಗಾರರು, ಕಾದಂಬರಿಕಾರು ಬಾಯಿಬಿಟ್ಟು ಹೇಳದಿದ್ದರೂ ಈ ಒಂದು ವಿಷಯವನ್ನು ಒಪ್ಪುತ್ತಾರೆ. ಸುಖವೆಂದರೆ ಒಂದೇ ತೆರನಾಗಿರುತ್ತದೆ. ಆದರೆ ಎಲ್ಲರ ದುಃಖವೂ ಬೇರೆಬೇರೆ. ಎಲ್ಲ ಕತೆಗಳಿಗೂ ಇದೇ ಮೂಲ.
ದುಃಖದಲ್ಲಿ ಜಗತ್ತು ತನ್ನ ವೈವಿಧ್ಯಮಯ ವಿನ್ಯಾಸಗಳನ್ನು ತೋರಿಸಿ ಹೊಳೆಯುತ್ತದೆ.
ಟಾಲ್‌ಸ್ಟಾಯ್ ಹೇಳಿದ ಒಂದು ಮಾತನ್ನು ಕೂಡ ಇಲ್ಲಿ ನೆನೆಯಬಹುದು- ಎಲ್ಲ ಸುಖೀ ಸಂಸಾರಗಳೂ ಒಂದೇ ಥರ. ಆದರೆ ಪ್ರತಿಯೊಂದು ಸಂಸಾರವೂ ಅದರದೇ ಆದ ರೀತಿಯಲ್ಲಿ ದುಃಖಿ.