Saturday, September 29, 2007

ರೊಟ್ಟಿ, ಮದಿರೆ, ಮಾನಿನಿ, ಕಾವ್ಯ...

ಮಹಾ ವ್ಯಾಮೋಹಿಯಂತೆ, ವಿರಾಗಿಯಂತೆ ಕಾಣುತ್ತಿದ್ದ ಉಮರ್ ಖಯ್ಯಾಮ್ ವಿಶಿಷ್ಟ ಕಾವ್ಯಪ್ರೇಮಿಯಾಗಿದ್ದ. ತನ್ನ ಹಿಂದಿನ ಧಾರ್ಮಿಕ ಪರಂಪರೆಯಿಂದ ಸಿಡಿದು ಬೇರೆಯಾದವನು ಆತ. ಆತ ಮುತ್ತಿನಂಥ ಒಂದು ಮಾತು ಹೇಳುತ್ತಾನೆ:
ರೊಟ್ಟಿ, ತಣ್ಣೆಳಲು, ಮಧುಪಾತ್ರೆ, ಮಾನಿನಿ ಮತ್ತು ನಲ್ಗಾವ್ಯ- ಇಷ್ಟಿದ್ದರೆ ಸಾಕು. ಅದು ನನ್ನ ಸ್ವರ್ಗ.
ಅದೇನೋ ಸರಿಯೇ. ಆದರೆ ಇಲ್ಲೊಂದು ವಿಚಿತ್ರವಿದೆ. ಅವನ ಹೇಳಿಕೆಯಲ್ಲಿ ನಲ್ಗಾವ್ಯ ಮೊದಲು ಬರಬಹುದಿತ್ತು. ಆದರೆ ಹೊಟ್ಟೆಯ ಪಾಡು ನೋಡಿ ! ಅದಕ್ಕಾಗಿ ರೊಟ್ಟಿ, ಮದಿರೆ ಮೊದಲು. ಆಮೇಲೆ ಸಿಕ್ಕಿದರೆ ಮಾನಿನಿ. ಅದೆಲ್ಲ ಆದ ಮೇಲೆ ನಲ್ಗಾವ್ಯ !
ಕಾವ್ಯಕ್ಕೆ. ಪುಸ್ತಕಕ್ಕೆ ಈ ಪಾಡೇ ಅನ್ನಬಾರದು. [ಸ್ತಕ ಇರುವುದೇ ಅದಕ್ಕೆ. ಅದು ದೈನಂದಿನ ಹೊಟ್ಟೆಬಟ್ಟೆಯ ಪಾಡುಗಳೆಲ್ಲ ತೀರಿದ ಮೇಲೆ ನೆನಪಾಗುವಂಥದು. "ಪುಸ್ತಕ ಓದಿದರೆ ಹೊಟ್ಟೆ ತುಂಬುವುದಿಲ್ಲ’ ಅಂತ ನನ್ನ ಅಜ್ಜಿ ಬೈಯುತ್ತಿದ್ದುದರ ಹಿಂದೆ ಈ ಬವಣೆಯೇ ಇದ್ದೀತು.
"ಓದಿ ಓದಿ ಮರುಳಾದ ಕೂಚುಭಟ್ಟ’ ಎಂಬ ಗಾದೆಯೇ ಇದೆಯಲ್ಲ. ಓದುವುದೂ, ಓದಿ ಮರುಳಾಗುವುದೂ ಹಿಂದಿನಿಂದ ಇದ್ದದ್ದೇ. ಓದಿ ಉದ್ಧಾರವಾದವರು ಯಾರಿದ್ದಾರೆ ಎಂಬ ಸವಾಲಿಗೆ ಉತ್ತರವಾಗಿ ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ತೋರಿಸಬಹುದು. ಅವರ ನಿಜವಾದ ಆಯುಷ್ಯ ೪೦ ವರ್ಷ ಮಾತ್ರ ಎಂಬ ಮಾತು ಕೀಟಲೆಯದ್ದೇ ಇರಬಹುದು.
]ರ್ಣಚಂದ್ರ ತೇಜಸ್ವಿಯಂಥ ತೇಜಸ್ವಿ ಕೂಡ ತಮ್ಮ ಪಾಡಿಗೆ ಒಂದು ಸ್ವರ್ಗ ಕಟ್ಟಿಕೊಂಡಿದ್ದರು. ಕಾಡು, ತೋಟ, ಕಾಫಿಗಿಡಗಳು, ಕಿವಿ ಎಂಬ ನಾಯಿ, ಬಂದೂಕು, ಹಾರಾಡುವ ಹಾಡುಗಳಂಥ ಹಕ್ಕಿಗಳು... ಪುರುಸೊತ್ತಾದರೆ ಪುಸ್ತಕ. ಅವರು ಓದುತ್ತಿದ್ದುದಕ್ಕಿಂತ ಬರೆದದ್ದೇ ಹೆಚ್ಚು ಎಂದು ಹೇಳಿದರೆ ತೇಜಸ್ವಿ ಶಿಷ್ಯರಿಗೆ ಸಿಟ್ಟು ಬಂದೀತು. ಆದರೆ ಅವರ ಪ್ರಯಾರಿಟಿಯಲ್ಲಿ ಪುಸ್ತಕ ಎಲ್ಲಿತ್ತು ? ಗಾಢವಾದ ಜೀವನಪ್ರೀತಿಯಷ್ಟೇ ಇತ್ತು.
ಸಾಹಿತಿಯೊಬ್ಬ ಹೇಳುತ್ತಾನೆ- [ಸ್ತಕ ಅಂತರಂಗದ ಮಿತ್ರ, ಮನುಷ್ಯನ ಶತ್ರು.
ಹೇಳಿಕೆಯಂತೂ ಸ್ವಾರಸ್ಯಕರವಾಗಿದೆ. ಆತ ಯಾವ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಿದ್ದ ಅನ್ನುವುದು ನಮಗೆ ಗೊತ್ತಾಗುವಂತಿಲ್ಲ. ಆದರೆ ಹೇಗೆ ಪುಸ್ತಕ ಅಂತರಂಗದ ಮಿತ್ರ ? ಹಾಗೆ ಮಿತ್ರನಾಗಿದ್ದೂ ಮನುಷ್ಯನ ಶತ್ರುವಾಗುವುದು ಹೇಗೆ ?
ಇದ್ಯಾಕೋ ಕೊಂಚ ವಿಚಿತ್ರವಾಗಿದೆ.
ಪುಸ್ತಕದ ಗಾಢ ಓದು ಸಂತೆಯಲ್ಲಿ ನಡೆಯುವ ಕ್ರಿಯೆಯಲ್ಲ. ಅದಕ್ಕೊಂದು ದಿವ್ಯ ಏಕಾಂತ ಬೇಕು. ಸಂತೆಯೊಳಗಿದ್ದೂ ಏಕಾಂತ ಸಾಧಿಸುವವರ ಮಾತು ಬೇರೆ. ಓದಿದ ಅಕ್ಷರಗಳು ಒಳಗಿಳಿದು ಇಂಗಿ ಅಂತರಂಗದ ಮಣ್ಣನ್ನು ಒದ್ದೆಯಾಗಿಸುವುದು. ಅಕ್ಷರ ಅರ್ಥವಾಗುವುದೂ, ಭಾವವಾಗುವುದೂ ಅಂತರಂಗದಲ್ಲೇ. ಆದ್ದರಿಂದಲೇ ಅದು ಅಂತರಂಗದ ಮಿತ್ರ.
ಆದರೆ ಒಳ್ಳೆಯ ಕೃತಿಯೊಂದು ಮನುಷ್ಯನನ್ನು ಆತನ ಪಾಡಿಗೆ ಸುಮ್ಮನಿರಲು ಬಿಡುವುದಿಲ್ಲ. ಕುಂತಲ್ಲಿ ನಿಂತಲ್ಲಿ ಕಾಡುತ್ತದೆ. ಪ್ರಶ್ನೆ ಕೇಳಲು ಕಲಿಸುತ್ತದೆ. ರೂಢಿಗಿಂತ ಭಿನ್ನವಾಗಿ ಮಾತನಾಡಲು ಹೇಳಿಕೊಡುತ್ತದೆ. ವ್ಯವಸ್ಥೆಯನ್ನು ವಿರೋಧಿಸಿ ಚರ್ಚಿಸಲು ಕಲಿಸುತ್ತದೆ. ಆತ ಅಶಾಂತನಾಗುತ್ತಾನೆ. ಆದ್ದರಿಂದ ಅದು ಮನುಷ್ಯನ ಶತ್ರು.
ಅದ್ಯಾವನೋ ಹೀಗೆ ಹೇಳಿದನೆಂದು ಪುಸ್ತಕ ಓದುವುದನ್ನು ಯಾರೂ ಬಿಡಲಿಲ್ಲ. ಓದುವಿಕೆ ಕೂಡ ಅಫೀಮಿನಂತೆ ಚಟ. ಒಮ್ಮೆ ಹತ್ತಿದರೆ ಬಿಡಿಸಿಕೊಳ್ಳುವುದು ಕಡು ಕಷ್ಟ.
ಪುಸ್ತಕಗಳು ಅಭಯದಾಯಕವಾಗಿಯೂ, ಭಯಕಾರಕವಾಗಿಯೂ ನಮ್ಮ ನಡುವೆ ಇವೆ. ಅಭಯದಾಯಕ ಯಾವುದೆಂದರೆ ಭಗವದ್ಗೀತೆ, ಸಹಸ್ರನಾಮ, ವ್ರತಕಥೆ ಇತ್ಯಾದಿ.
ಪಠ್ಯಪುಸ್ತಕಗಳು ಭಯಕಾರಕ- ಮೇಷ್ಟರಿಗೂ, ಮಕ್ಕಳಿಗೂ !

ಪುಟ್ಟ ಸ್ತನಗಳೂ, ದೊಡ್ಡ ದೇಶವೂ...

ಪ್ರತಿವಾರ ಮಿಲಿಯಗಟ್ಟಲೆ ಕೊಲಂಬಿಯನ್ನರು ಟಿವಿ ಧಾರಾವಾಹಿಯೊಂದನ್ನು ನೋಡುತ್ತಾರೆ. ಪುಟ್ಟದಾಗಿರುವ ತನ್ನ ಸ್ತನಗಳನ್ನು ದೊಡ್ಡದಾಗಿಸಿಕೊಳ್ಳಬೇಕೆಂದು ಹಂಬಲಿಸುವ ಟೀನೇಜ್ ಹುಡುಗಿಯೊಬ್ಬಳು ಪಡುವ ವಿವಿಧ ಪಾಡುಗಳೇ ಈ ಸೀರಿಯಲ್ಲಿನ ತಿರುಳು.
ಈಕೆಯ ಹೆಸರು ಕತಲಿನಾ. ಬಡತನದ ಬೇಗೆ, ಶಾಲೆ ಕಲಿತರೂ ಸಿಗದ ಕೆಲಸದಿಂದಾಗಿ ಕತಲಿನಾ, ತನ್ನ ಗೆಳತಿಯರು ಮಾಡಿದ್ದನ್ನೇ ಮಾಡಲು ಬಯಸುತ್ತಾಳೆ. ಆಕೆಯ ಗೆಳತಿಯರು, ಸ್ತನ ಸರ್ಜರಿ ಮಾಡಿಸಿಕೊಂಡು, ಎದೆಯ ಗಾತ್ರ ಹಿಗ್ಗಿಸಿಕೊಂಡಿದ್ದರು. ಅದಕ್ಕೆ ಕಾರಣ, ಗ್ಯಾಂಗ್‌ಸ್ಟರ್ ಯುವಕರು ಅವರನ್ನು ಮೋಹಿಸಿ, ಅವರ ಬಗೆಗೆ ಕಾಳಜಿ ವಹಿಸುತ್ತಾರೆ ಎಂಬ ಆಶೆ.
ಸರ್ಜರಿಗೆ ಹಣ ಬೇಕು. ಅದನ್ನು ಭರಿಸಲು ಕತಲಿನಾ ವೇಶ್ಯಾವೃತ್ತಿಗೆ ಇಳಿಯುತ್ತಾಳೆ. ಆದರೆ, ಅವಳ ಸ್ತನಗಳ ಗಾತ್ರ ಚಿಕ್ಕದು ತಾನೆ ! ಇದರಿಂದಾಗಿ, ಗಿರಾಕಿಗಳೂ ಅವಳೆಡೆಗೆ ಆಕರ್ಷಿತರಾಗುವುದಿಲ್ಲ. ತನ್ನ ಸ್ತನ ದೊಡ್ಡದಾದೊಡನೆ ತನ್ನ ಬದುಕೂ ಈಗಿರುವ ಸ್ಥಿತಿಯಿಂದ ಸ್ವರ್ಗವಾಗಿ ಬಿಡಬಹುದೆಂಬ ಆಸೆಯಿಂದ ಕತಲಿನಾ ತನ್ನ ಯತ್ನ ಮುಂದುವರಿಸುತ್ತಾಳೆ. ಆಕೆಯ ಯತ್ನಗಳೆಲ್ಲ ಆಕೆಯನ್ನು ಇನ್ನಷ್ಟು ಅವಮಾನ, ಹಿಂಸೆಗಳ ಕಡೆಗೆ ಒಯ್ಯುತ್ತವೆ.
ನಿಜಘಟನೆಗಳಿಂದ ಪ್ರೇರೇಪಿತವಾಗಿರುವ ಈ ಸೀರಿಯಲ್ಲಿನ ಹೆಸರು "ವಿದೌಟ್ ಟಿಟ್ಸ್ ದೇರ್ ಈಸ್ ನೋ ಪ್ಯಾರಡೈಸ್.’ ಧಾರಾವಾಹಿಯನ್ನು ಮೆಚ್ಚುವವರೂ ಟೀಕಿಸುವವರೂ ಇಲ್ಲಿದ್ದಾರೆ. "ಈ ಧಾರಾವಾಹಿ ಕೊಲಂಬಿಯಾಕ್ಕೊಂದು ಅವಮಾನ’ ಎಂದು ಗರ್ಜಿಸುವವರಿದ್ದಾರೆ.
ಆದರೆ ಸೀರಿಯಲ್‌ನ ಕರಾಳ ವಿಡಂಬನೆಯಿಂದ ಖುಷಿಪಟ್ಟವರು, "ಇದು ಈ ದೇಶದ ವಿಲನ್‌ಗಳನ್ನು ವಿಡಂಬಿಸುತ್ತಿದೆ’ ಎನ್ನುತ್ತಿದ್ದಾರೆ.ಸುಲಭ ಹಣ ಗಳಿಕೆ ಜನಪ್ರಿಯವಾಗುತ್ತಿರುವ ಈ ದೇಶ ಜಗತ್ತಿನ ಅತಿ ದೊಡ್ಡ ಕೊಕೇನ್ ರಫ್ತುದಾರ. ಮಾದಕ ದ್ರವ್ಯ ವ್ಯವಹಾರದಿಂದ ಸೃಷ್ಟಿಯಾದ ಅಂತರ್ಯುದ್ಧ ನಾಲ್ಕು ದಶಕಗಳಾದರೂ ಮುಂದುವರಿದಿದೆ ಇಲ್ಲಿ. ಈಗಷ್ಟೇ ಕೊಲಂಬಿಯಾ ಚೇತರಿಸಿಕೊಳ್ಳುತ್ತಿದೆ.
ಇಲ್ಲಿನ ಗ್ಯಾಂಗ್‌ಸ್ಟರ್‌ಗಳು "ಟ್ರಾಕ್ವೆಟೋ’ಗಳು ಎಂದೇ ಕುಖ್ಯಾತರು. ಅದಕ್ಕೆ ಕಾರಣ- "ಟ್ರಕ್ವಾ ಟ್ರಕ್ವಾ ಟ್ರಕ್ವಾ’ ಎಂದು ದನಿ ಮಾಡುವ ಅವರ ಅಟೋಮ್ಯಾಟಿಕ್ ರೈಫಲ್‌ಗಳು. ಇವರು ತಮ್ಮ ಪ್ರೇಯಸಿಯರ ಅಂದಕ್ಕೆ, ಸೌಂದರ್‍ಯದ ಸರ್ಜರಿಗಳಿಗೆ ಖರ್ಚು ಮಾಡುವವರು.
ಹಾಗೇ ಇಲ್ಲಿನ ಹುಡುಗಿಯರು ; ಇಂಥ ಒಬ್ಬ ಪಾತಕಿ ತಮ್ಮನ್ನು ಇಟ್ಟುಕೊಳ್ಳಲಿ ಎಂದು ಬಯಸುವವರು."ಶ್ರೀಮಂತಿಕೆ ನಮ್ಮ ಹುಡುಗಿಯರನ್ನು ಸೆಳೆದುಬಿಟ್ಟಿದೆ. ಇಂಥದ್ದೆಲ್ಲ ಮಾಡುವಂತೆ ಪ್ರೇರೇಪಿಸುತ್ತಿದೆ. ಅದನ್ನು ನಾವು ಗುರುತಿಸುತ್ತಿದ್ದೇವೆ ಅಷ್ಟೆ’ ಅನ್ನುತ್ತಾಳೆ ಸೀರಿಯಲ್ಲಿನ ಒಬ್ಬ ನಟಿ ಮಾರ್ಗರಿಟಾ ರೋಸಾ. ಈಕೆಗೆ ದೊಡ್ಡ ಎದೆಗಳಿವೆ ; ಕತಲಿನಾ ಇವಳನ್ನು ಅನುಕರಿಸಲು ಯತ್ನಿಸುತ್ತಾಳೆ. ಈಕೆ ಕೂಡ ತನ್ನ ೨೮ರ ವಯಸ್ಸಿನಲ್ಲಿ ಎದೆಗೆ ಸರ್ಜರಿ ಮಾಡಿಸಿಕೊಂಡಿದ್ದಳು.
ಸೀರಿಯಲ್ಲಿನ ಮುಖ್ಯ ಪಾತ್ರ, ಗುಸ್ತಾವೋ ಬೊಲಿವರ್ ಎಂಬ ಕಾದಂಬರಿಕಾರ ಬರೆದ ಕಾದಂಬರಿಯ ಮುಖ್ಯ ಪಾತ್ರ. ಆತನ ಕತೆಯ ಕೇಂದ್ರ, ಪಿರೇರಾ ಎಂಬ ನಗರ, ಅಲ್ಲಿನ ೧೪ ವರ್ಷದ ಚಪ್ಪಟೆ ಎದೆಯ ಹುಡುಗಿ. ಕೃತಿ ಬಿಡುಗಡೆಯಾದಾಗ, ಪಿರೇರಾದ ಜನ ಕ್ರುದ್ಧರಾಗಿದ್ದರು ; ಈಗ ಸೀರಿಯಲ್ ಗಾಯಕ್ಕೆ ಉ[ ಎರೆದಂತಾಗಿದೆ. ಪಿರೇರಾದ ವ್ಯವಹಾರಸ್ಥರು ನಗರದ "ಇಮೇಜ್ ಪರಿಪಡಿಸಲು’ ಯತ್ನಿಸುತ್ತಿದ್ದಾರೆ.
ಪಿರೇರಾ ಕೊಲಂಬಿಯಾದ ಕಾಫಿ ಬೆಳೆಯುವ ಪ್ರದೇಶದ ಹೃದಯ, ದೇಶದ ಪ್ರಮುಖ ನಗರ. ಡ್ರಗ್ ಸ್ಮಗ್ಲರುಗಳು, ಕಾಫಿ ಕಾರ್ಮಿಕರು, ಟ್ರಕ್ ಡ್ರೈವರುಗಳು ಸುಂದರ ವೇಶ್ಯೆಯರ ಮೇಲೆ ಹಣ ಚೆಲ್ಲಾಡುವ ಸ್ಥಳ. ಸೀರಿಯಲ್ಲನ್ನು ಸಮರ್ಥಿಸುವವರು, ಇದು ಪಿರೇರಾದಂಥ ನಗರಗಳಲ್ಲಿ ಕತಲಿನಾಳಂಥ ತರುಣಿಯರು ಎದುರಿಸುತ್ತಿರುವ ಸಮಸ್ಯೆಗಳ ದರ್ಶನ ಮಾಡಿಸುತ್ತಿದೆ ಎಂದು ಮೆಚ್ಚಿಕೊಂಡಿದ್ದಾರೆ.
ಇತ್ತ ಕೊಲಂಬಿಯಾದಲ್ಲಿ ನಡೆಯುತ್ತಿರುವ ಕೊಲೆಗಳ ಸಂಖ್ಯೆ, ಬಡತನದಿಂದ ತಪ್ಪಿಸಿಕೊಳ್ಳಲು ಡ್ರಗ್ ಮಾಫಿಯಾ ಸೇರಿಕೊಳ್ಳುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ.ದೊಡ್ಡ ದೇಶ, ಹೆಚ್ಚುತ್ತಿರುವ ಸೌಂದರ್‍ಯ ಸ್ಪರ್ಧೆಗಳು ಮತ್ತು ಸಮಸ್ಯೆಗಳು, ಪುಟ್ಟ ಸ್ತನಗಳ ಹುಡುಗಿಯರು, ಬಾಹುಗಳನ್ನು ಚಾಚಿರುವ ಡ್ರಗ್ ಆಕ್ಟೋಪಸ್, ಪ್ರತಿ ನಗರದಲ್ಲೂ ಭೂಗತ ಮಾಫಿಯಾ, ಚೆಲ್ಲಾಡುತ್ತಿರುವ ಹಣ
...ಥೇಟ್ ಭಾರತದಂತೆ.

Saturday, September 8, 2007

ಚಿರತೆ ಊರಿಗೆ ಯಾಕೆ ಬರುತ್ತೆ ?

ಇದೆಲ್ಲ ಪೂರ್ಣಚಂದ್ರ ತೇಜಸ್ವಿ ಅವರ ಕತೆಗಳಲ್ಲಿ ಮಾತ್ರ ನಡೆಯುವಂಥದು. ಅಷ್ಟೊಂದು ಅಸಂಗತ. ಆದರೂ ನಡೆಯಿತು.
ಒಂದು ಮುಂಜಾನೆ ಮಂಗಳೂರು ಮಹಾನಗರದ ನಟ್ಟ ನಡುವೆ ಚಿರತೆಯೊಂದು ಪ್ರತ್ಯಕ್ಷವಾಗಿಬಿಟ್ಟಿತು. ಅರ್ಧ ಕಟ್ಟಿದ ಕಟ್ಟಡವೊಂದರ ಪಿಲ್ಲರುಗಳ ನಡುವೆ ಅದು ಮಲಗಿತ್ತು. ಬೆಳಗ್ಗೆ ನೀರು ಹಾಕಲು ಬಂದ ಕೆಲಸಗಾರರಿಗೆ ಚಿರತೆ ಕಂಡಿತು. ಅರೆಕ್ಷಣವಾದರೂ ಅವರಿಗೆ, ತಾವು ದಟ್ಟಾರಣ್ಯದ ನಡುವಿನ ಪಾಳು ಭವನಕ್ಕೆ ಬಂದುಬಿಟ್ಟಿದ್ದೇವೆ ಅನಿಸಿದ್ದರೆ ಆಶ್ಚರ್‍ಯವಿಲ್ಲ.
ಅಲ್ಲಿಂದ ಓಡಿಹೋದ ಅವರು ಸುದ್ದಿ ಹಬ್ಬಿಸಿ ಜನ ಸೇರಿಸಿದರು. ಮನುಷ್ಯನನ್ನು ಕಂಡು ಭಯಪಡದಿರಲು ಅದೇನು ಮೃಗಾಲಯದಿಂದಾಗಲೀ, ಸರ್ಕಸ್ಸಿನಿಂದಾಗಲೀ ತಪ್ಪಿಸಿಕೊಂಡ ಚಿರತೆಯಲ್ಲ. ಅವರೆಲ್ಲ ಅಲ್ಲಿಗೆ ಬರುವಷ್ಟರಲ್ಲಿ ಚಿರತೆ ಮತ್ತೊಂದು ಕಟ್ಟಡ ಹುಡುಕಿಕೊಂಡು ಹೋಗಿತ್ತು. ಜನ ಅಲ್ಲಿಗೂ ನುಗ್ಗಿದರು. ಬಲೆ ಹರಡಿ ಚಿರತೆ ಹಿಡಿಯುವ ಕೆಲಸ ಶುರುವಾಯಿತು. ಆದರೆ ಚಿರತೆ ಭಲೇ ಚುರುಕು. ಅದು ಜನರ ಗಮನ ತನ್ನ ಮೇಲೆ ಬೀಳುವಷ್ಟರಲ್ಲೇ ಇನ್ನೊಂದೆಡೆಗೆ ಮಿಂಚಿನಂತೆ ನುಗ್ಗಿಬಿಡುತ್ತಿತ್ತು. ಜನ "ಅದೋ ಅಲ್ಲಿ’ ಎಂದು ಕೈತೋರಿಸುತ್ತಿದ್ದಾಗಲೇ ಯಾವುದೋ ಮಾಯಕದಲ್ಲಿ ಮತ್ತೊಂದು ಕಂಪೌಂಡ್ ಹಾರಿ ಅವಿತು ಕುಳಿತುಬಿಡುತ್ತಿತ್ತು.
ಅದೊಂದು ಅಸಂಗತ ಮುಖಾಮುಖಿ. ದಟ್ಟ ಕಾಡಿನ ಮಧ್ಯದಿಂದೆಲ್ಲಿಂದಲೋ ಬಂದ ಚಿರತೆ. ಅದನ್ನು ನೋಡಲು ಮುಗಿಬಿದ್ದ ನಗರದ ಜನತೆ. ಚಿರತೆ ಬೋನಿನೊಳಗಿದ್ದರೆ ಅಷ್ಟೊಂದು ಮಂದಿ ನೋಡಲು ಬರುತ್ತಿದ್ದರೋ ಇಲ್ಲವೋ. ಚಿರತೆ ಸ್ವತಂತ್ರವಾಗಿ ಓಡಾಡುತ್ತಿದೆ ಎಂಬುದೇ ಎಲ್ಲರಿಗೂ ಕುತೂಹಲ, ವಿಸ್ಮಯ, ಭಯ ಬೆರೆತ ಸನ್ನಿವೇಶ.
ಕೊನೆಗೂ ಅದನ್ನು ಹಿಡಿದರು. ಅರಿವಳಿಕೆ ಮದ್ದು ಚುಚ್ಚಿಸಿಕೊಂಡು ಪ್ರಜ್ಞೆ ತಪ್ಪಿದ ಚಿರತೆಯ ಮುಂದೆ ಒಂದಷ್ಟು ಧೀರರು ಫೋಟೋ ಹೊಡೆಸಿಕೊಂಡರು. ವಿಪರ್‍ಯಾಸವೆಂದರೆ, ನಿಸರ್ಗಧಾಮವೊಂದಕ್ಕೆ ಕೊಂಡೊಯ್ಯಲಾದ ಚಿರತೆ ಮುಂದಿನೆರಡು ದಿನಗಳಲ್ಲಿ ಸತ್ತುಹೋಯ್ತು. ಹಿಡಿಯುವಾಗ ಆದ ದೈಹಿಕ ಹಾಗೂ ಮಾನಸಿಕ ಆಘಾತವೇ ಸಾವಿಗೆ ಕಾರಣ ಅಂತ ಗೊತ್ತಾಯಿತು.
ಅದಿರಲಿ, ಚಿರತೆ ನಗರದ ನಟ್ಟ ನಡುವಿಗೆ ಹೇಗೆ ಬಂತು ?ಅದು ಯಾರಿಗೂ ಗೊತ್ತಾಗಲಿಲ್ಲ. ಶಿರಾಡಿ ಘಾಟಿಯಲ್ಲಿ ನಿಲ್ಲಿಸಿದ ಕೋಳಿ ಫಾರಂ ಲಾರಿಗೆ ವಾಸನೆ ಹಿಡಿದು ಏರಿದ ಚಿರತೆ, ಕೆಳಗಿಳಿಯಲಾಗದೆ ಅಲ್ಲೇ ಸಿಕ್ಕಾಕಿಕೊಂಡು ನಗರಕ್ಕೆ ಬಂದಿರಬೇಕು. ಅಥವಾ ನಗರದ ಪಕ್ಕ ಉಳಿದಿರುವ ಕುರುಚಲು ಕಾಡೊಗಳೊಳಗೆಲ್ಲೋ ಅದು ಇದ್ದಿರಬೇಕು ಎಂಬ ಅಭಿಪ್ರಾಯಗಳು ಕೇಳಿಬಂದವು.
ಕಾರಣಗಳು ಬಹುತೇಕ ಬಾರಿ ಚಿಲ್ಲರೆ. ಪರಿಣಾಮಗಳು ಯಾವಾಗಲೂ ಘೋರ.
ಇಂಥ ಘಟನೆಗಳು ರಾಜ್ಯದ ನಾನಾ ಕಡೆ ಆಗಾಗ ನಡೆಯುತ್ತಲೇ ಇವೆ. ಪಡುಬಿದ್ರಿಯಲ್ಲಿ ನಾಯಿ ಹಿಡಿಯಲು ರಾತ್ರಿ ಬಂದ ಚಿರತೆ ಬಾವಿಗೆ ಬಿತ್ತು. ಶಿಬಾಜೆಯಲ್ಲಿ ಅರಿವಳಿಕೆ ಕೊಡಲು ಬಂದ ವೈದ್ಯರಿಗೆ ಕಚ್ಚಿ ಗಾಯಗೊಳಿಸಿ ಬಳಿಕ ಸತ್ತುಹೋಯ್ತು. ಕುಂದಾ[ರದ ಹಳ್ಳಿಯೊಂದಕ್ಕೆ ಬಂದ ಚಿರತೆಯನ್ನು ಜನ ಕಲ್ಲು ಹೊಡೆದೇ ಸಾಯಿಸಿದರು.
ಪ್ರಶ್ನೆ ಇರುವುದು ಇದು : ನಾಗರಿಕ ಸಮಾಜ ಹಾಗೂ ವನ್ಯಜೀವಿಗಳ ಮುಖಾಮುಖಿ ಯಾವಾಗಲೂ ಯಾಕೆ ದುರಂತದಲ್ಲೇ ಕೊನೆಗೊಳ್ಳಬೇಕು ?
ದಟ್ಟ ಕಾಡಿದ್ದ ಪ್ರದೇಶದಲ್ಲಿ ಬಂದು ಮನೆ ಕಟ್ಟಿದ ಕಾಲದ ಕತೆಗಳನ್ನು ನಮ್ಮಜ್ಜಿ ಹೇಳುತ್ತಿದ್ದರು. ಕಾಡಿನ ದಾರಿಗಳಲ್ಲಿ ಓಡಾಡುವಾಗ ಹುಲಿ ಎದುರಾಗುತ್ತಿತ್ತಂತೆ. ಹಾಗೆ ಎದುರಾದ ಹುಲಿ ಮನುಷ್ಯನತ್ತ ನಿರ್ಲಕ್ಷ್ಯದಿಂದ ನೋಡಿ ಬೆನ್ನು ತಿರುಗಿಸಿ ಕಾಡಿನೊಳಗೆ ಮಾಯವಾಗುತ್ತಿತ್ತಂತೆ.ಅದು ಮಾನವ ಸಮುದಾಯಕ್ಕೂ ಮೃಗಲೋಕಕ್ಕೂ ನಡೆಯುವ ಆರೋಗ್ಯಕರ ಮುಖಾಮುಖಿ. "ನನ್ನ ಸೀಮೆಗೆ ನೀನು ಬರಬೇಡ, ನಿನ್ನ ಊರಿಗೆ ನಾನು ಕಾಲಿಡುವುದಿಲ್ಲ’ ಎಂಬ ಮೌನ ಒಪ್ಪಂದ, ಘನತೆಯ ನಡವಳಿಕೆ.
ಈ ಒಪ್ಪಂದ, ಘನತೆಯನ್ನು ಮನುಷ್ಯ ಮೊದಲು ಮುರಿದ. ಊರು ದಾಟಿ ಕಾಡಿನೊಳಗೆ ಹೋಗಿ ಕಂಡದ್ದನ್ನೆಲ್ಲ ಬಾಚಿದ, ತಿನ್ನಬಹುದಾದ್ದನ್ನು ತಿಂದ, ಉಳಿದದ್ದನ್ನು ಮಾರಿದ. ಈಗ ಮೃಗಗಳು ಊರಿಗೆ ಬರಬಾರದೆಂದು ಯಾಕೆ ಹೇಳುತ್ತೀರಿ ? ಒಪ್ಪಂದವನ್ನು ಮನುಷ್ಯನೇ ಮೊದಲು ಮುರಿದ ಮೇಲೆ, ಮೃಗಗಳು ಮುರಿಯಬಾರದೆಂದು ಹೇಳುವ ಹಕ್ಕು ಎಲ್ಲಿದೆ ?
ಇಲ್ಲೊಂದು ಕುತೂಹಲಕರ ವಿಚಾರವಿದೆ. ಅದೇನೆಂದರೆ, ನಾಡಿಗೆ ಮೃಗ ಬಂದಾಗ ನೋಡಲು ಜನಸಾಗರವೇ ನೆರೆಯುತ್ತದೆ. ಕಾಡಿಗೆ ಮನುಷ್ಯ ಹೋದಾಗ ಮೃಗಗಳೆಲ್ಲಾ ಆಸುಪಾಸಿನಿಂದ ಪೇರಿ ಕೀಳುತ್ತವೆ. ಅವುಗಳಿಗೆ ಮನುಷ್ಯನೆಂದರೆ ಅಷ್ಟೊಂದು ಹೇವರಿಕೆಯಾ ?