Friday, June 24, 2011

ಪುಸ್ತಕ ಬಂದಿದೆ...


‘ಮೇಧಾ ಪಾಟ್ಕರ್’ ನನ್ನ ಎರಡನೇ ಪುಸ್ತಕ. ಎಸ್.ದಿವಾಕರ್ ಮುಖ್ಯ ಸಂಪಾದಕರಾಗಿರುವ ‘ವಿಖ್ಯಾತರ ವ್ಯಕ್ತಿಚಿತ್ರ ಮಾಲಿಕೆ’ಯಲ್ಲಿ ವಸಂತ ಪ್ರಕಾಶನ ಹೊರ ತಂದಿರುವ ೨೭ ಹೊತ್ತಿಗೆಗಳಲ್ಲಿ ಇದೂ ಒಂದು.

ನನ್ನ ನಂಬಿಕೆ ಹೇಳಬೇಕೆಂದರೆ, ಮೇಧಾ ಪಾಟ್ಕರ್ ಬಗ್ಗೆ ಕನ್ನಡದಲ್ಲಿ ಬಂದಿರುವ ಪ್ರಪ್ರಥಮ ಪುಸ್ತಕ ಇದು. ಈ ಪುಸ್ತಕ ಬರೆಯಲು ಮಾಹಿತಿಗಾಗಿ ಮೇಧಾ ಪಾಟ್ಕರ್ ಬಗ್ಗೆ ಯಾವುದಾದರೂ ಇಂಗ್ಲಿಷ್ ಪುಸ್ತಕ ಬಂದಿದೆಯಾ ಅಂತ ಹುಡುಕಿಕೊಂಡು ಬೆಂಗಳೂರಿನ ಎಲ್ಲ ದೊಡ್ಡ ದೊಡ್ಡ ಇಂಗ್ಲಿಷ್ ಪುಸ್ತಕ ಮಳಿಗೆಗಳಿಗೆ ಎಡತಾಕಿದೆ. ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳಲ್ಲಿ ಬೆವರು ಸುರಿಸಿದೆ. ಮಿತ್ರರಿಗೆಲ್ಲ ಕೇಳಿದೆ.

ಎಲ್ಲೂ ಏನೂ ಸಿಗಲಿಲ್ಲ. ಮೇಧಾ ಅವರ ಸಹ ಚಳವಳಿಕಾರ ಟಿ.ಆರ್.ಭಟ್ ಅವರನ್ನು ಸಂಪರ್ಕಿಸಿದೆ. ಅವರಿಂದ ಮೇಧಾ ಅವರ ಆಪ್ತ ಸಹಾಯಕ ಮಧುರೇಶ್ ಅವರ ದೂರವಾಣಿ ಸಂಖ್ಯೆ ಸಿಕ್ಕಿತು. ಅವರನ್ನೇ ಮಾತಾಡಿಸಿದೆ. ಮೇಧಾ ಬಗ್ಗೆ ಯಾವ ಇಂಗ್ಲಿಷ್ ಪುಸ್ತಕವೂ ಬಂದಿಲ್ಲವೆಂದೂ, ಅರುಣ್‌ಕುಮಾರ್ ತ್ರಿಪಾಠಿ ಎಂಬವರು ಬರೆದ ಹಿಂದಿ ಪುಸ್ತಕವೊಂದಿದೆಯೆಂದೂ, ಅದರ ಕಾಪಿಗಳು ಮುಗಿದಿದ್ದು, ತಮ್ಮ ಬಳಿಯೂ ಇಲ್ಲವೆಂದೂ ಅವರು ಹೇಳಿದರು.

ಹೀಗಾಗಿ, ಮೇಧಾ ಬಗ್ಗೆ ಮೊದಲಿಗೆ ಕನ್ನಡದಲ್ಲಿ ಬರೆದ ಹೆಗ್ಗಳಿಕೆ ನನ್ನದು. ಇಂಗ್ಲಿಷ್‌ನ ಯಾವ ದೊಡ್ಡ ಪ್ರಕಾಶನವೂ ಮಾಡದ ಒಳ್ಳೆಯ ಕೆಲಸವನ್ನು- ಇಂಥ ಮಹನೀಯರ ಬಗ್ಗೆ ಬರೆಸುವ ಮೂಲಕ- ವಸಂತ ಪ್ರಕಾಶನ ಮಾಡಿದೆ. ಈ ಮಾಲಿಕೆಯಲ್ಲಿ ವಂದನಾ ಶಿವ, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್ ಮುಂತಾದ ಮಹನೀಯರ ಬಗ್ಗೆ ಕೃತಿಗಳಿವೆ. ಹೆಚ್ಚಿನ ಕೃತಿಗಳನ್ನು ನನ್ನ ಪತ್ರಕರ್ತ ಮಿತ್ರರೇ ಬರೆದಿದ್ದಾರೆ.

ಪುಸ್ತಕಕ್ಕೆ ಮಾಹಿತಿ ಮೂಲ :- ಮೇಧಾ ಒಡನಾಡಿಗಳು, ಇಂಟರ್‌ನೆಟ್.

ಪುಟಗಳು ೭೦, ಬೆಲೆ ೩೦ ರೂ.

ಪ್ರತಿಗಳಿಗಾಗಿ- ವಸಂತ ಪ್ರಕಾಶನ, ಜಯನಗರ, ಬೆಂಗಳೂರು (ಮುರಳಿ ಶ್ರೀನಿವಾಸನ್- ೯೮೮೬೩೯೯೧೨೫)

ನನ್ನನ್ನೂ ಸಂಪರ್ಕಿಸಬಹುದು- ೯೯೮೦೧೮೯೮೪೯.

Saturday, June 11, 2011

ಏನೂ ಮಿಸ್ಟೇಕ್ ಆಗ್ಲಿಲ್ಲ


ಸಣ್ಣ ಕತೆಗಳನ್ನು ಜೋಡಿಸಿ ನಾಟಕ ರೂಪದಲ್ಲಿ ರಂಗದ ಮೇಲೆ ತರುವುದು ಹೊಸತೇನಲ್ಲ. ಹೀಗೆ ಕತೆಗಳನ್ನು ಜೋಡಿಸಿ ರಂಗರೂಪ ಸಿದ್ಧಪಡಿಸುವಾಗ, ಬಿಡಿ ಕತೆಗಳನ್ನು ಒಂದಾಗಿ ಬೆಸೆಯುವ ಎಳೆಯೊಂದು ಅವುಗಳಲ್ಲಿ ಇರಬೇಕಾದ್ದು ಅವಶ್ಯ. ದೇವನೂರು ಮಹಾದೇವರ ಕತೆಗಳನ್ನು ಜೋಡಿಸಿ ಮಾಡಿದ, ದಲಿತ ಜೀವನದ ಮುಖ್ಯಧಾರೆ ಹೊಂದಿದ್ದ ‘ದ್ಯಾವನೂರು’ ನಾಟಕ ಇಂಥದು. ಸಾದತ್ ಹಸನ್ ಮಾಂಟೋ ಅವರ ಕತೆಗಳ ರಂಗರೂಪ ‘ಮಿಸ್ಟೇಕ್’ ಕೂಡ ಇಂಥದೇ. ದೇಶ ವಿಭಜನೆಯ ದಿನಗಳ ಕರಾಳ ಹಿಂಸೆಯ, ಮನುಷ್ಯನ ಅಂತರಂಗದ ಅವನತಿಯ ಕಥನವಿದು. ಇತ್ತೀಚೆಗೆ ಉಡುಪಿಯ ‘ರಥಬೀದಿ ಗೆಳೆಯರು’ ತಂಡ ಈ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿತು.

ಮಾಂಟೋ ಕತೆಗಳಿಗೆ ಬೆಚ್ಚಿ ಬೀಳಿಸುವ ಗುಣವಿದೆ. ಆದರೆ ಬೆಚ್ಚಿಸುವುದೇ ಆತನ ಉದ್ದೇಶವಲ್ಲ. ಇದೇನು ಹೀಗಾಯಿತಲ್ಲ, ಮನುಷ್ಯ ಮನುಷ್ಯರನ್ನು ಒಂದಾಗಿಸಬೇಕಾದ ಧರ್ಮ, ಪ್ರಾದೇಶಿಕ ಭಿನ್ನತೆಗಳು ಮನುಷ್ಯರನ್ನು ಒಡೆದು ಜೀವನವನ್ನೇ ಛಿದ್ರಗೊಳಿಸಿವೆಯಲ್ಲ ಎಂಬ ವಿಷಾದವೇ ಆತನ ಕತೆಗಳಲ್ಲಿ ಸ್ಥಾಯಿಯಾಗಿ ಕಾಣುವಂಥದು. ಬೆಚ್ಚಿಸುವ ತಾತ್ಕಾಲಿಕ ಗುಣ ಹಾಗೂ ಅಂತರಂಗವನ್ನು ತೀವ್ರವಾಗಿ ಮಿಡಿಯುವ ಈ ವಿಷಾದ- ಎರಡೂ ಸೇರಿ ಮಾಂಟೋ ಕತೆಗಳಿಗೊಂದು ಅಪೂರ್ವವಾದ ನಾಟಕೀಯತೆ ಪ್ರಾಪ್ತವಾಗಿದೆ. ಹೀಗಾಗಿ ಈತನ ಕತೆಗಳ ರಂಗರೂಪಕ್ಕೆ ನಾಟಕೀಯತೆಯನ್ನು ಹೊರಗಿನಿಂದ ತರಬೇಕಾಗಿಲ್ಲ. ಇದು ನಿರ್ದೇಶಕರಿಗಿರುವ ಸೌಲಭ್ಯ.

ಆದರೆ ಸವಾಲು ಕೂಡ ಇದೇ ಆಗಿದೆ. ಮಾಂಟೋನ ಕೆಲ ಪುಟ್ಟ ಕತೆಗಳಲ್ಲಿರುವ ದಾರುಣ ವಾಸ್ತವ, ರಂಗದ ಮೇಲೆ ತೋರಿಸುವುದಕ್ಕೆ ಕೂಡ ಅಂಜಿಕೆಯಾಗುವಂಥದು. ಆದರೆ ಇದರ ಪರಿಣಾಮವನ್ನು ಮಸುಕುಗೊಳಿಸಿ ತೋರುವುದು ಕೂಡ ಮಾಂಟೋನ ದರ್ಶನಕ್ಕೆ ಅಪಚಾರ ಬಗೆದಂತೆ. ಹೀಗಾಗಿ ಇಲ್ಲಿ ನಿರ್ದೇಶಕರಿಗೆ ಕತ್ತಿಯ ಮೇಲಿನ ನಡಿಗೆ. ನಿರ್ದೇಶಕ ಡಾ.ಶ್ರೀಪಾದ ಭಟ್ ಶಿರಸಿ ಇದನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ರಥಬೀದಿ ಗೆಳೆಯರು ಕೂಡ ಸಹಜವಾಗಿ ಅಭಿನಯಿಸಿದ್ದಾರೆ.

ಮಿಸ್ಟೇಕ್ ನಾಟಕ ನಾಲ್ಕು ಕತೆಗಳನ್ನು ಜೋಡಿಸಿ ರೂಪಿಸಿದ್ದು. ನಾಟಕಕ್ಕೆ ಹೆಸರು ನೀಡಿದ ಕತೆ ತುಂಬಾ ಪುಟ್ಟದು. ನಾಲ್ಕೈದು ನಿಮಿಷದಲ್ಲಿ ಮುಗಿಯುವಂಥದು. ಕತೆಯನ್ನು ಓದಿಕೊಂಡಿರದೆ ಇದ್ದವರಿಗೆ ಈ ‘ಮಿಸ್ಟೇಕ್’ ಏನೆಂದು ಅರ್ಥವಾಗದು. ಮಿಸ್ಟೇಕ್ ಏನೆಂಬುದನ್ನು ಕತೆಗಾರ ಕೂಡ ವಾಚ್ಯಗೊಳಿಸುವುದಿಲ್ಲ. ಆದರೆ ಕತೆಯ ಪಠ್ಯಕ್ಕೆ ಸಂಪೂರ್ಣ ನಿಷ್ಠವಾಗಿರುವ ಶಿಸ್ತನ್ನು ಇಲ್ಲಿ ತುಸು ಸಡಿಲಿಸಬಹುದಿತ್ತೇನೊ.

‘ಓಪನ್ ಮಾಡು’, ‘ಶರೀಫನ್’ ಹಾಗೂ ‘ಪುರುಷಾರ್ಥ’ ಕತೆಗಳನ್ನಂತೂ ಸುಂದರವಾಗಿ ನಿರೂಪಿಸಲಾಗಿದೆ. ‘ಪುರುಷಾರ್ಥ’ದ ಮುಮ್ತಾಜ್‌ನ ಪಾತ್ರವಂತೂ ಇಡೀ ನಾಟಕಕ್ಕೆ ಜೀವ ತುಂಬುತ್ತದೆ. ಉಳಿದವರೂ ಅದಕ್ಕೆ ಪೋಷಕ ರೀತಿಯಲ್ಲಿ ದುಡಿದಿದ್ದಾರೆ. ಕಬೀರ, ದಾಸರ ಪದಗಳನ್ನು ಹಿತಮಿತವಾಗಿ ಹಿನ್ನೆಲೆಯಲ್ಲಿ ಅಳವಡಿಸಿಕೊಂಡದ್ದು ನಾಟಕಕ್ಕೆ ಇನ್ನಷ್ಟು ಶ್ರವ್ಯಸುಖ ಕೊಟ್ಟಿದೆ.

ಇಷ್ಟು ಹೇಳಿದರೆ ನಾಟಕದ ಪರಾಮರ್ಶೆಯೇನೋ ಮುಗಿಯುತ್ತದೆ. ಆದರೆ ಇದನ್ನು ನಾವು ನೋಡುತ್ತಿರುವ ಸಂದರ್ಭದ ಬಗ್ಗೆ ಒಂದು ಅಬ್ಸರ್ವೇಶನ್ ಹೇಳದೆ ಹೋದರೆ ತಪ್ಪಾಗುತ್ತದೆ. ಇತ್ತೀಚೆಗಂತೂ ಕರ್ನಾಟಕ, ಪ್ರಧಾನವಾಗಿ ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳು ಮತೀಯ ಮೂಲಭೂತವಾದ ಹಾಗೂ ಹಿಂಸೆಯ ಆಡುಂಬೊಲಗಳಾಗಿ ಹತಾಶೆಯ ಅಂಚಿಗೆ ತಲುಪಿರುವುದನ್ನು ನಾವು ಗಮನಿಸಿದ್ದೇವಷ್ಟೆ. ಇದನ್ನು ವಿರೋಸುವ ದನಿಗಳೂ ಅಲ್ಲಿಂದಲೇ ಹುಟ್ಟಿಕೊಂಡಿವೆ. ಈ ನಿಟ್ಟಿನಲ್ಲಿ ನೋಡಿದರೆ, ಮಿಸ್ಟೇಕ್ ನಾಟಕವನ್ನು ಉಡುಪಿಯ ತಂಡದವರೇ ಆಯ್ದುಕೊಂಡು ಅಭಿನಯಿಸಿರುವುದು ತುಂಬಾ ಅರ್ಥಪೂರ್ಣ. ಇದು ಈ ನಾಟಕ ಪ್ರದರ್ಶನಕ್ಕೆ ನೀಡಬಹುದಾದ ಭರತವಾಕ್ಯ.