Wednesday, February 3, 2010

ಹಿಂತಿರುಗಿ ನೋಡಿದರೆ ಯಾರೂ ಇರಲಿಲ್ಲ...



ಭಾನುವಾರ ನಾಗೇಶ್ ಹೆಗಡೆ ಅವರ ಆರು ಪುಸ್ತಕಗಳ ಬಿಡುಗಡೆಯಾಯ್ತು. ಅಂದು ಕೆ.ವಿ.ಅಕ್ಷರ ಮಾತನಾಡಿದ್ದನ್ನು, ಅದು ತುಂಬ ಮುಖ್ಯ ಅನಿಸಿದ್ದರಿಂದ, ನನಗೆ ನಾನೇ ಇನ್ನಷ್ಟು ಮನನ ಮಾಡಿಕೊಳ್ಳುವುದಕ್ಕಾಗಿ ಸಂಗ್ರಹಿಸಿ ಇಲ್ಲಿ ದಾಖಲಿಸಿದ್ದೇನೆ.

*
ನಾಗೇಶ್ ಹೆಗಡೆ ಕನ್ನಡದ ಮುಖ್ಯ ಪತ್ರಕರ್ತರಲ್ಲೊಬ್ಬರು. ಆಕ್ಟಿವಿಸಂ ಗುಣ ಹೊಂದಿದ್ದ ಕನ್ನಡದ ಶ್ರೇಷ್ಠ ಪತ್ರಕರ್ತರು ಕೂಡ. ರಾಜ್ಯದ, ದೇಶದ ಸದ್ಯದ ತುರ್ತನ್ನು ಗ್ರಹಿಸಿಕೊಂಡು ಅವರು ಬರೀತಾರೆ ಮಾತ್ರವಲ್ಲ, ಅಗತ್ಯ ಬಿದ್ದರೆ ಕಣಕ್ಕೆ ಇಳೀತಾರೆ ಕೂಡ. ಅವರಿಗೆ ಹೋಲಿಸಬಹುದಾದರೆ, ನಮ್ಮ ದೇಶದಲ್ಲಿ ಕಾಣಿಸೋ ಇನ್ನೊಬ್ಬ ಪತ್ರಕರ್ತ ಅಂದ್ರೆ ಪಿ.ಸಾಯಿನಾಥ್ ಮಾತ್ರ.

ಪರಿಸರದ ಬಗ್ಗೆ ಹೆಗಡೆಯವರ ಬದ್ಧತೆ ಪ್ರಶ್ನಾತೀತವಾದದ್ದು. ಒಂದು ಸನ್ನಿವೇಶ ನೆನಪಾಗ್ತಿದೆ. ಶಿವರಾಮ ಕಾರಂತರು ಉತ್ತರ ಕನ್ನಡದಿಂದ ಚುನಾವಣೆಗೆ ನಿಂತಿದ್ದರು. ನಿಂತ ಮೇಲೆ ತಮ್ಮ ಪಾಡಿಗೆ ಅಮೆರಿಕಕ್ಕೆ ಹೋಗಿದ್ದರು. ಆದರೆ ನಮಗೊಂದು ಇತ್ತಲ್ಲ, ಶಿವರಾಮ ಕಾರಂತರು ಸೋಲಬಾರದು ಅಂತ. ಹೀಗಾಗಿ ಪ್ರಚಾರಕ್ಕೆ ಮುಂದಾಗಿದ್ವಿ. ನಾಗೇಶ ಹೆಗಡೆಯವರು ಒಂದು ಪುಟ್ಟ ರೂಮು ಬಾಡಿಗೆಗೆ ಹಿಡಿದು ಕುರ್ಚಿ ಹಾಕಿಕೊಂಡು ಕುಳಿತಿದ್ದರು. ಅವರೇ ಶಿವರಾಮ ಕಾರಂತರ ಚೀಫ್ ಎಲೆಕ್ಷನ್ ಆಫೀಸರ್ ! ಆ ಹಳ್ಳಿ, ಈ ಹಳ್ಳಿ ಅಂತ ನಮ್ಮನ್ನು ಪ್ರಚಾರ ಭಾಷಣಕ್ಕೆ ಕಳಿಸ್ತಿದ್ದರು.

ಭಾಷಣ ಕೇಳಿಸಿಕೊಳ್ಲಿಕ್ಕೆ ಎರಡು ಜನ ಸಹ ಬರ್ತಿರಲಿಲ್ಲ. ಹಳ್ಳಿ ಜನರಿಗೆ ಕಾರಂತರ ಹೆಸರು ಕೇಳಿ ಸಹ ಗೊತ್ತಿರಲಿಲ್ಲ. ಒಂದು ಹಳ್ಳೀಲಿ ಹೋಟೆಲ್ ಇಟ್ಟಿದ್ದ ಇನ್ನೊಬ್ಬ ಕಾರಂತರಿದ್ದರು. ಜನ ಅವರನ್ನು ಇವರೆಂದು ಕನ್‌ಫ್ಯೂಸ್ ಮಾಡಿಕೊಂಡು ‘ಆ ಕಾರಂತ್ರಿಗೆ ವೋಟ್ ಹಾಕಿದ್ರೆ ನಮಗೇನು ತಿಂಡಿ ಪುಗಸಟ್ಟೆ ಕೊಡ್ತಾರಾ ?’ ಎಂದು ಕೇಳಿದ್ದುಂಟು. ಕಾರಂತರು ಸೋಲೋದು ನಮಗೆ ಆಗ್ಲೇ ಖಚಿತವಾಗಿತ್ತು.
ಒಮ್ಮೆ ನಾಗೇಶ್ ಹೆಗಡೆ ನಮ್ಮಲ್ಲಿಗೆ ಉಪನ್ಯಾಸ ನೀಡೋದಕ್ಕೆ ಬಂದಿದ್ರು. ಪರಿಸರ, ಬೃಹತ್ ಯೋಜನೆಗಳ ಬಗ್ಗೆ ಮಾತಾಡಿದರು. ಆಗ ಅವರು ಹೇಳಿದ ಮಾತು ನಂಗೆ ಈಗ್ಲೂ ಜ್ಞಾಪಕದಲ್ಲಿದೆ. “ಕೈಗಾ ಮುಂತಾದ ಬೃಹತ್, ಪರಿಸರ ಹಾನಿಕಾರಕ ಯೋಜನೆಗಳು ಉತ್ತರ ಕನ್ನಡಕ್ಕೆ ಬಂದಾಗ ನಾವೆಲ್ಲ ಅದನ್ನು ವಿರೋಸಿ ಹೋರಾಟ ಆರಂಭಿಸಿದೆವು. ಪ್ರತಿಭಟನೆ ಶುರು ಹಚ್ಚಿಕೊಂಡೆವು. ಆರಂಭದಲ್ಲಿ ಪ್ರತಿಭಟನೆಗೆ ಒಳ್ಳೆಯ ಬೆಂಬಲವೂ ವ್ಯಕ್ತವಾಯ್ತು. ಹಾಗೇ ಮುಂದುವರಿದೆವು. ಹೋಗ್ತಾ ಹೋಗ್ತಾ ಒಂದು ಹಂತದಲ್ಲಿ ನಿಂತು ಹಿಂದೆ ತಿರುಗಿ ನೋಡ್ತೇವೆ- ನಮ್ಮ ಹಿಂದಿದ್ದೋರೆಲ್ಲ ಇಟ್ಟಿಗೆ ಹೊತ್ತುಕೊಂಡು ಅಯೋಧ್ಯೆಯ ಕಡೆಗೆ ಹೋಗಿದ್ದರು..."

ನಾಗೇಶ್ ಹೆಗಡೆ ಅವರ ಕಾಲದಲ್ಲಿ ಅಲ್ಲೊಂದು ಇಲ್ಲೊಂದು ಬೃಹತ್ ಯೋಜನೆಗಳು ಬರ್ತಿದ್ದವು. ಅದಕ್ಕೆ ಹೋರಾಟಗಳು ಹುಟ್ಟಿಕೊಳ್ಳುತ್ತಿದ್ದವು. ಹೆಗಡೆಯವರು ಅದರ ಧ್ವನಿಯಾಗಿ ಕೆಲಸ ಮಾಡಿದರು. ಆದ್ರೆ ‘ಪೋಸ್ಟ್ ನಾಗೇಶ್ ಹೆಗಡೆ’ ಕಾಲದಲ್ಲಿ ಏನಾಗ್ತಿದೆ ಅನ್ನೋದನ್ನೂ ನೋಡಬೇಕು.

ಸದ್ಯ ನಮ್ಮ ದೇಶದ ಕೃಷಿ ಕ್ಷೇತ್ರಕ್ಕೆ ಒದಗಿರುವ ಗಂಡಾಂತರವನ್ನು ಯಾರೂ ಸರಿಯಾಗಿ ಗ್ರಹಿಸಿದಂತಿಲ್ಲ. ಬಿಟಿ ಬದನೆ ಬರ್ತಿದೆ, ಬಿಟಿ ಹತ್ತಿ ಬೆಳೆದವರು ಆತ್ಮಹತ್ಯೆ ಮಾಡಿಕೊಂಡಿದಾರೆ, ಯಾವ ಬೆಳೆಗೂ ಸರಿಯಾದ ಬೆಲೆಯಿಲ್ಲ- ಇವೆಲ್ಲ ಇಶ್ಯೂಗಳಾಗಿವೆ ನಿಜ. ಆದರೆ ಕೃಷಿ ಎಂಬ ಒಂದು ಜೀವನ ವಿಧಾನವೇ ಇಲ್ಲವಾಗುತ್ತಿರೋದನ್ನು ಯಾರೂ ಮನಗಂಡ ಹಾಗಿಲ್ಲ.

ಇಲ್ಲಿಂದ ನೂರಾರು ಮೈಲು ದೂರದ ಒಂದು ಮಲೆನಾಡಿನ ಹಳ್ಳಿಯಲ್ಲಿ ಅಡಿಕೆ ಕೃಷಿ ಮಾಡಿಕೊಂಡು ಬದುಕುತ್ತಾ ಇರುವ ನನಗೆ ಇದು ಗೊತ್ತಾಗ್ತಿದೆ. ಮಲೆನಾಡಿನ ಅಡಿಕೆ ಕೃಷಿಕರಿಗೆ ಈಗಾಗಲೇ ತಮ್ಮ ಜಾಗ ಮಾರಿ ಪೇಟೆಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುಶಃ ಒಂದು ಎಕ್ರೆ, ಎರಡೆಕ್ರೆ ಇರುವ ಸಣ್ಣ ಹಿಡುವಳಿದಾರರು ಇನ್ನು ಹತ್ತು ವರ್ಷಗಳಲ್ಲಿ ಹೇಳ ಹೆಸರಿಲ್ಲದಂತಾಗುತ್ತಾರೆ. ಆಮೇಲೇನಿದ್ದರೂ ನೂರಾರು ಎಕರೆ ಹೊಂದಿದ ಜಮೀನ್ದಾರರು, ಕಂಪೆನಿಗಳು ದೊಡ್ಡ ಪ್ರಮಾಣದ ಕೃಷಿ ಮಾಡಿ ಬದುಕಿಕೊಳ್ಳಬಹುದಷ್ಟೇ.

ನನ್ನ ಊರಿನಿಂದ ನಾನು ಬೆಂಗಳೂರಿಗೆ ಬರಬೇಕಾದರೆ ಪೀಣ್ಯ, ದಾಸರಹಳ್ಳೀಲಿ ನಡೀತಿರೋ ಅಗಾಧವಾದ ಮೆಟ್ರೋ, ರಸ್ತೆ, ಬಿಲ್ಡಿಂಗ್ ಕೆಲಸಗಳು ಇವನ್ನೆಲ್ಲ ದಾಟಿಕೊಂಡು ಬರಬೇಕು. ಅಲ್ಲಿ ನಡೀತಿರೋ ಕೆಲಸ, ಆ ದೈತ್ಯಾಕಾರದ ಯಂತ್ರಗಳು, ವಾಹನ ಪ್ರಮಾಣ ಇವನ್ನೆಲ್ಲ ನೋಡ್ತಾ ನೋಡ್ತಾ ನನಗೆ ವಿಚಿತ್ರವಾದ ಹಗಲುಕನಸುಗಳು ಬೀಳಲು ಶುರುವಾಗ್ತವೆ. ಇವೆಲ್ಲ ಏನು ? ಇವೆಲ್ಲ ಯಾವತ್ತಾದರೂ ಮುಗಿಯೋ ಕೆಲಸಗಳಾ ? ಇವು ಮಗಿದಾಗ ಮತ್ತೂ ಎಷ್ಟು ಲಕ್ಷ ವಾಹನಗಳು ರಸ್ತೆಗಿಳೀತವೋ ? ಆಗ ಮತ್ತೆ ಇವೆಲ್ಲ ಮೊದ್ಲಿಂದ...

ನೀವು ಪ್ರಯಾಣ ಹೊರಟು ನೋಡಿ, ಪ್ರತಿ ಹತ್ತು ಕಿಲೋಮೀಟರ್‌ಗೆ ಒಂದು ಕಡೆ ರಸ್ತೆ ರಿಪೇರಿ ನಡೀತಿರೋದು ಕಾಣಿಸ್ತದೆ. ಯಾವತ್ತೂ ಮುಗಿಯದ ರಿಪೇರಿ ಅದು. ಅಗೆದಲ್ಲೇ ಮತ್ತೆ ಮತ್ತೆ ಅಗೀತಾರೆ, ಮುಚ್ತಾರೆ. ಅಂದರೆ, ಇದು ಸರಕಾರಿ ಪ್ರಾಯೋಜಿತ ಬೀದಿ ನಾಟಕ ಅಷ್ಟೆ. ಜನರಿಗೆ ತೋರಿಸಬೇಕು- ಅಭಿವೃದ್ಧಿ ಆಗ್ತಿದೆ ಅಂತ. ಆದ್ರೆ ನಿಜವಾಗಿ ಆಗಿರಬಾರದು. ಹಾಗಾಗಿ ಇದು ಅಭಿವೃದ್ಧಿಯ ಬೀದಿ ನಾಟಕ.

ಇದನ್ನೆಲ್ಲ ಅರ್ಥ ಮಾಡಿಕೊಂಡು ಬರೆಯೋರು ನಿಜವಾಗಿ ನಾಗೇಶ್ ಹೆಗಡೆ ಅವರ ಉತ್ತರಾಕಾರಿಗಳಾಗ್ತಾರೆ.