ಅಪಾರ ಕಾಲದ ಕಡಲನ್ನು ದಾಟಿ ಬಂದ ಪುಟ್ಟ ನಾವೆಯೊಂದು ಇದೀಗ ನಮ್ಮ ನಿಮ್ಮ ಬದುಕಿನ ಬಂದರಿನಲ್ಲಿ ಲಂಗರು ಹಾಕಿದೆ. ನಾವೆಗೆ ಹನ್ನೆರಡು ಹಾಯಿಗಳು, ಇಪ್ಪತ್ನಾಲ್ಕು ಹಗ್ಗಗಳು, ಒಂದೇ ಒಂದು ಮೀಟುಗೋಲು. ಪಟಪಟಿಸುವುದು ಹಾಯಿ, ಕರೆಯುವುದು ದೂರ ತೀರಕ್ಕೆ.
ಅಂಗೈಯೊಳಗೆ ಕನಸುಗಳ ಬೆಚ್ಚನೆ ಬಚ್ಚಿಟ್ಟುಕೊಂಡ ಎಲ್ಲರ ಬದುಕಿಗೂ ಇಂಥ ಒಂದು ಪುಟ್ಟ ನಾವೆ ಬರಲಿ.
ನಿದ್ದೆಯಲ್ಲೇ ಅಕಾರಣ ನಗುವ ಸಣ್ಣ ಕಂದನ ತೊಟ್ಟಿಲಿಗೆ, ಬೆವರಿನಲ್ಲಿ ಮಿಂದ ಕೈಗಳು ಚಾಚಿದ ಅನ್ನದ ಬಟ್ಟಲಿಗೆ, ಒಳಮನೆಯ ಹಳೆ ಮಂದಿ ಕೆಮ್ಮುತ್ತ ತಡವುತ್ತ ಬಂದು ಕುಂತ ಮನೆಯ ಮೆಟ್ಟಿಲಿಗೆ ತೇಲುತ್ತ ಈ ನಾವೆ ಸಮೀಪಿಸಲಿ.
ಈಗಷ್ಟೆ ಮದುವೆಯಾಗಿ ಬಂದ ಹೊಸ ಸೊಸೆ ದೇವರೊಳಕೋಣೆಯಲ್ಲಿ ಹಚ್ಚಿಟ್ಟ ನಂದಾದೀಪಕ್ಕೆ, ತಂಟೆಕೋರ ಮಕ್ಕಳ ಮೇಲೆ ಸುಳ್ಳುಸುಳ್ಳೇ ಮುನಿಸಿಕೊಳ್ಳುವ ಹಿರಿಯರ ಕೋಪಕ್ಕೆ, ಐಸ್‌ಕ್ಯಾಂಡಿ ಮಾರಾಟವಾಗದೆ ಬಿಸಿಲಿನಲ್ಲಿ ಕರಗುತ್ತ ತಲೆ ಮೇಲೆ ಕೈಹೊತ್ತ ಶ್ರಮಜೀವಿಯ ತಾಪಕ್ಕೆ ಈ ಪುಟ್ಟ ನಾವೆ ಒದಗಿ ಬರಲಿ.
ಮಾಗಿ ಚಳಿಗೆ ಎಲೆ ಉದುರಿಸಿಕೊಂಡು ಬೋಳುಬೋಳಾಗಿ ನಿಂತ ಹಳೆಯ ಮರಗಳಿಗೆ, ದಶಂಬರದ ಫಲಗಾಳಿಗೆ ಮೆಲ್ಲನೆ ಕಂಪಿಸುತ್ತ ಹೂಗಳ ಹೊತ್ತು ಲಜ್ಜೆಯಿಂದ ನಿಂತ ಮಾಮರಗಳಿಗೆ, ಚಿಗುರಿನ ಚೊಗರಿಗೆ ಕಾತರಿಸಿ ಎಲ್ಲಿಂದಲೋ ಬರುವ ಹಕ್ಕಿಗಳಿಗೆ, ಹುಲ್ಲುಗರಿಕೆಯ ಮೇಲೆ ಮೆಲ್ಲನೆ ಇಳಿದ ಎಳಬೆಳಗಿನ ಮಿದುವಾದ ಇಬ್ಬನಿಗೆ, ಅಂಗಳದಲ್ಲಿ ರೈತನ ಉಸಿರಿನಂತೆ ಹರಡಿರುವ ಕೊಯಿಲಿಗೆ ಈ ನಾವೆಯ ಹಾಯಿ ಬೀಸಿದ ತಂಗಾಳಿ ತಾಕಲಿ.
ತಮ್ಮ ಕನಸುಗಳಲ್ಲಿ ಬಂದ ಚೆಲುವೆಯರ ಬೆನ್ನು ಬಿದ್ದು ಅರಸುತ್ತಿರುವ ಹುಡುಗರ ಬಿರುಸಾದ ಶ್ವಾಸಗಳಿಗೆ, ಕನ್ನಯ್ಯನಿಂದ ಮೊದಲ ಪ್ರೇಮಪತ್ರ ಬರೆಸಿಕೊಂಡು ಕುಪ್ಪಸದೊಳಗೆ ಬಚ್ಚಿಟ್ಟುಕೊಂಡ ರಾಧೆಯ ಝಲ್ಲೆನುವ ಎದೆಗೆ, ಗ್ರೀಟಿಂಗ್ಸ್ ಹಂಚುತ್ತ ಸುಸ್ತಾಗಿರುವ ಗಂಜಿ ಇಸ್ತ್ರಿಯ ಅಂಚೆಯಣ್ಣನ ಸಮವಸ್ತ್ರದೊಳಕ್ಕೆ, ದೇಹವಿಲ್ಲದೆ ಅತ್ತಿಂದಿತ್ತ ಹಾರಾಡುತ್ತ ಎಳೆನಗುವನ್ನು ಎಲ್ಲೆಡೆ ಹರಡಿಬಿಡುವ ಎಸ್ಸೆಮ್ಮೆಸ್‌ಗಳಿಗೆ ಈ ನಾವೆ ಬಂದುಬಿಡಲಿ.
ಆಸ್ಪತ್ರೆಯಲ್ಲಿರುವ ಪುಟ್ಟ ಕಂದನಿಗೆ ಹಾಲು ತರಲು ಓಡುತ್ತಿರುವ ಎಳೆ ತಾಯಿಯ ಫ್ಲಾಸ್ಕಿಗೆ, ಕಚೇರಿಯಿಂದ ಹಿಂದಿರುಗುವಾಗ ಮಕ್ಕಳಿಗೆ ಸಿಹಿ ತರಲು ಮರೆಯಿತೆಂದು ಚಡಪಡಿಸುವ ಗುಮಾಸ್ತೆಯ ಚೀಲದೊಳಕ್ಕೆ, ಇರುಳು ನಿದ್ರೆ ತೊರೆದು ಮನೆಯನ್ನೂ ಮರೆತು ಅಕ್ಷರಗಳು ಕತೆಯಾಗುವ ನಡುವೆ ಕಳೆದುಹೋದ ಪತ್ರಕರ್ತನ ಪೆನ್ನಿಗೆ, ತಾಯಿ ಕಣ್ಣು ತೆರೆದು ಮಿಸುಕಾಡುವುದನ್ನೇ ಕಾಯುತ್ತ ಐಸಿಯು ಹೊರಗೆ ನಿಂತಿರುವ ಮಕ್ಕಳ ಕಂಗಳೊಳಕ್ಕೆ, ಲಾರಿಯಿಂದ ಗುದ್ದಿಸಿಕೊಂಡು ಮಲಗಿರುವ ಗಂಡನಿಗೆ ರಕ್ತ ನೀಡುತ್ತಿರುವ ಬಾಡಿದ ಮುಖದ ಮಹಿಳೆಯ ತೋಳುಗಳಿಗೆ- ಈ ನಾವೆ ತೇಲಿ ಬಂದು ಅಪಾರ ಬಲ ತುಂಬಲಿ.
ಮತ್ತು... ಮತ್ತು... ಎಲ್ಲಕ್ಕಿಂತ ಮುಖ್ಯವಾಗಿ, ಯಾರದೋ ಕೋಪ ತಾಪ ದ್ವೇಷಗಳಿಗೆ ಸಂಬಂದವೇ ಇಲ್ಲದಂತೆ ಬಲಿಯಾದ ಅಮಾಯಕರ ಗೋರಿಗಳಿಗೆ, ಅವರ ಬೂದಿ ಮಣ್ಣು ಮಾಡಿದ ನಡುಗುವ ಕೈಗಳಿಗೆ, ಭಯ ಆತಂಕ ದುಃಖ ಗದ್ಗದಗಳನ್ನು ಬೈತಿಟ್ಟುಕೊಂಡು ಮರುಗುತ್ತಿರುವ ದೀಪಗಳಿಲ್ಲದ ಪಡಸಾಲೆಗಳಿಗೆ ಈ ಪುಟ್ಟ ನಾವೆ ಹಾಯಿಗಳ ಬೀಸುತ್ತ ಝಗಮಗಿಸುತ್ತ ಬರಲಿ.
ಅನ್ಯಜೀವಗಳ ವಿನಾಕಾರಣ ಪ್ರೀತಿಸುವ ಎಲ್ಲರೂ ತಮ್ಮ ಕನಸುಗಳಲ್ಲಿ ಈ ಬೆರಗಿನ ನಾವೆಯನ್ನೇರಿ ವಿಸ್ಮಿತರಾಗಲಿ.