Saturday, September 29, 2007

ರೊಟ್ಟಿ, ಮದಿರೆ, ಮಾನಿನಿ, ಕಾವ್ಯ...

ಮಹಾ ವ್ಯಾಮೋಹಿಯಂತೆ, ವಿರಾಗಿಯಂತೆ ಕಾಣುತ್ತಿದ್ದ ಉಮರ್ ಖಯ್ಯಾಮ್ ವಿಶಿಷ್ಟ ಕಾವ್ಯಪ್ರೇಮಿಯಾಗಿದ್ದ. ತನ್ನ ಹಿಂದಿನ ಧಾರ್ಮಿಕ ಪರಂಪರೆಯಿಂದ ಸಿಡಿದು ಬೇರೆಯಾದವನು ಆತ. ಆತ ಮುತ್ತಿನಂಥ ಒಂದು ಮಾತು ಹೇಳುತ್ತಾನೆ:
ರೊಟ್ಟಿ, ತಣ್ಣೆಳಲು, ಮಧುಪಾತ್ರೆ, ಮಾನಿನಿ ಮತ್ತು ನಲ್ಗಾವ್ಯ- ಇಷ್ಟಿದ್ದರೆ ಸಾಕು. ಅದು ನನ್ನ ಸ್ವರ್ಗ.
ಅದೇನೋ ಸರಿಯೇ. ಆದರೆ ಇಲ್ಲೊಂದು ವಿಚಿತ್ರವಿದೆ. ಅವನ ಹೇಳಿಕೆಯಲ್ಲಿ ನಲ್ಗಾವ್ಯ ಮೊದಲು ಬರಬಹುದಿತ್ತು. ಆದರೆ ಹೊಟ್ಟೆಯ ಪಾಡು ನೋಡಿ ! ಅದಕ್ಕಾಗಿ ರೊಟ್ಟಿ, ಮದಿರೆ ಮೊದಲು. ಆಮೇಲೆ ಸಿಕ್ಕಿದರೆ ಮಾನಿನಿ. ಅದೆಲ್ಲ ಆದ ಮೇಲೆ ನಲ್ಗಾವ್ಯ !
ಕಾವ್ಯಕ್ಕೆ. ಪುಸ್ತಕಕ್ಕೆ ಈ ಪಾಡೇ ಅನ್ನಬಾರದು. [ಸ್ತಕ ಇರುವುದೇ ಅದಕ್ಕೆ. ಅದು ದೈನಂದಿನ ಹೊಟ್ಟೆಬಟ್ಟೆಯ ಪಾಡುಗಳೆಲ್ಲ ತೀರಿದ ಮೇಲೆ ನೆನಪಾಗುವಂಥದು. "ಪುಸ್ತಕ ಓದಿದರೆ ಹೊಟ್ಟೆ ತುಂಬುವುದಿಲ್ಲ’ ಅಂತ ನನ್ನ ಅಜ್ಜಿ ಬೈಯುತ್ತಿದ್ದುದರ ಹಿಂದೆ ಈ ಬವಣೆಯೇ ಇದ್ದೀತು.
"ಓದಿ ಓದಿ ಮರುಳಾದ ಕೂಚುಭಟ್ಟ’ ಎಂಬ ಗಾದೆಯೇ ಇದೆಯಲ್ಲ. ಓದುವುದೂ, ಓದಿ ಮರುಳಾಗುವುದೂ ಹಿಂದಿನಿಂದ ಇದ್ದದ್ದೇ. ಓದಿ ಉದ್ಧಾರವಾದವರು ಯಾರಿದ್ದಾರೆ ಎಂಬ ಸವಾಲಿಗೆ ಉತ್ತರವಾಗಿ ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ತೋರಿಸಬಹುದು. ಅವರ ನಿಜವಾದ ಆಯುಷ್ಯ ೪೦ ವರ್ಷ ಮಾತ್ರ ಎಂಬ ಮಾತು ಕೀಟಲೆಯದ್ದೇ ಇರಬಹುದು.
]ರ್ಣಚಂದ್ರ ತೇಜಸ್ವಿಯಂಥ ತೇಜಸ್ವಿ ಕೂಡ ತಮ್ಮ ಪಾಡಿಗೆ ಒಂದು ಸ್ವರ್ಗ ಕಟ್ಟಿಕೊಂಡಿದ್ದರು. ಕಾಡು, ತೋಟ, ಕಾಫಿಗಿಡಗಳು, ಕಿವಿ ಎಂಬ ನಾಯಿ, ಬಂದೂಕು, ಹಾರಾಡುವ ಹಾಡುಗಳಂಥ ಹಕ್ಕಿಗಳು... ಪುರುಸೊತ್ತಾದರೆ ಪುಸ್ತಕ. ಅವರು ಓದುತ್ತಿದ್ದುದಕ್ಕಿಂತ ಬರೆದದ್ದೇ ಹೆಚ್ಚು ಎಂದು ಹೇಳಿದರೆ ತೇಜಸ್ವಿ ಶಿಷ್ಯರಿಗೆ ಸಿಟ್ಟು ಬಂದೀತು. ಆದರೆ ಅವರ ಪ್ರಯಾರಿಟಿಯಲ್ಲಿ ಪುಸ್ತಕ ಎಲ್ಲಿತ್ತು ? ಗಾಢವಾದ ಜೀವನಪ್ರೀತಿಯಷ್ಟೇ ಇತ್ತು.
ಸಾಹಿತಿಯೊಬ್ಬ ಹೇಳುತ್ತಾನೆ- [ಸ್ತಕ ಅಂತರಂಗದ ಮಿತ್ರ, ಮನುಷ್ಯನ ಶತ್ರು.
ಹೇಳಿಕೆಯಂತೂ ಸ್ವಾರಸ್ಯಕರವಾಗಿದೆ. ಆತ ಯಾವ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಿದ್ದ ಅನ್ನುವುದು ನಮಗೆ ಗೊತ್ತಾಗುವಂತಿಲ್ಲ. ಆದರೆ ಹೇಗೆ ಪುಸ್ತಕ ಅಂತರಂಗದ ಮಿತ್ರ ? ಹಾಗೆ ಮಿತ್ರನಾಗಿದ್ದೂ ಮನುಷ್ಯನ ಶತ್ರುವಾಗುವುದು ಹೇಗೆ ?
ಇದ್ಯಾಕೋ ಕೊಂಚ ವಿಚಿತ್ರವಾಗಿದೆ.
ಪುಸ್ತಕದ ಗಾಢ ಓದು ಸಂತೆಯಲ್ಲಿ ನಡೆಯುವ ಕ್ರಿಯೆಯಲ್ಲ. ಅದಕ್ಕೊಂದು ದಿವ್ಯ ಏಕಾಂತ ಬೇಕು. ಸಂತೆಯೊಳಗಿದ್ದೂ ಏಕಾಂತ ಸಾಧಿಸುವವರ ಮಾತು ಬೇರೆ. ಓದಿದ ಅಕ್ಷರಗಳು ಒಳಗಿಳಿದು ಇಂಗಿ ಅಂತರಂಗದ ಮಣ್ಣನ್ನು ಒದ್ದೆಯಾಗಿಸುವುದು. ಅಕ್ಷರ ಅರ್ಥವಾಗುವುದೂ, ಭಾವವಾಗುವುದೂ ಅಂತರಂಗದಲ್ಲೇ. ಆದ್ದರಿಂದಲೇ ಅದು ಅಂತರಂಗದ ಮಿತ್ರ.
ಆದರೆ ಒಳ್ಳೆಯ ಕೃತಿಯೊಂದು ಮನುಷ್ಯನನ್ನು ಆತನ ಪಾಡಿಗೆ ಸುಮ್ಮನಿರಲು ಬಿಡುವುದಿಲ್ಲ. ಕುಂತಲ್ಲಿ ನಿಂತಲ್ಲಿ ಕಾಡುತ್ತದೆ. ಪ್ರಶ್ನೆ ಕೇಳಲು ಕಲಿಸುತ್ತದೆ. ರೂಢಿಗಿಂತ ಭಿನ್ನವಾಗಿ ಮಾತನಾಡಲು ಹೇಳಿಕೊಡುತ್ತದೆ. ವ್ಯವಸ್ಥೆಯನ್ನು ವಿರೋಧಿಸಿ ಚರ್ಚಿಸಲು ಕಲಿಸುತ್ತದೆ. ಆತ ಅಶಾಂತನಾಗುತ್ತಾನೆ. ಆದ್ದರಿಂದ ಅದು ಮನುಷ್ಯನ ಶತ್ರು.
ಅದ್ಯಾವನೋ ಹೀಗೆ ಹೇಳಿದನೆಂದು ಪುಸ್ತಕ ಓದುವುದನ್ನು ಯಾರೂ ಬಿಡಲಿಲ್ಲ. ಓದುವಿಕೆ ಕೂಡ ಅಫೀಮಿನಂತೆ ಚಟ. ಒಮ್ಮೆ ಹತ್ತಿದರೆ ಬಿಡಿಸಿಕೊಳ್ಳುವುದು ಕಡು ಕಷ್ಟ.
ಪುಸ್ತಕಗಳು ಅಭಯದಾಯಕವಾಗಿಯೂ, ಭಯಕಾರಕವಾಗಿಯೂ ನಮ್ಮ ನಡುವೆ ಇವೆ. ಅಭಯದಾಯಕ ಯಾವುದೆಂದರೆ ಭಗವದ್ಗೀತೆ, ಸಹಸ್ರನಾಮ, ವ್ರತಕಥೆ ಇತ್ಯಾದಿ.
ಪಠ್ಯಪುಸ್ತಕಗಳು ಭಯಕಾರಕ- ಮೇಷ್ಟರಿಗೂ, ಮಕ್ಕಳಿಗೂ !

No comments: