Saturday, March 22, 2008

ನಗರ ಸಾಗರದಲ್ಲಿ ಹಳ್ಳಿಯ ನಡುಗಡ್ಡೆ

(ಸುಧನ್ವನ ‘ಪೇಟೆಯ ಪಾಡ್ದನ’ಕ್ಕೆ ಒಂದು ಪ್ರತಿಕ್ರಿಯೆ)
ಪ್ರಿಯ ಸುಧನ್ವ,
ನಿನ್ನ ಪೇಟೆಯ ಪಾಡ್ದನವನ್ನು ಬಿಡದೆ ಓದುತ್ತಿದ್ದೇನೆ. ಇದುವರೆಗೆ ಬಂದಿರುವ ಕಮೆಂಟುಗಳಿಗಿಂತ ಕೊಂಚ ದೀರ್ಘವಾಗಿಯೇ ಪ್ರತಿಕ್ರಿಯಿಸುತ್ತಿದ್ದೇನೆ, ಅದು ನಿನ್ನ ಪ್ರಯತ್ನಕ್ಕೆ ಅಗತ್ಯವಾಗಿಯೂ ಇದೆ. ಇಲ್ಲಿ ನನ್ನ ಗಮನ ನಿನ್ನ ಪನ್ ಸಾಮರ್ಥ್ಯದ ಬಗೆಗಾಗಲೀ, ಪದ ಚಮತ್ಕಾರಗಳ ಬಗೆಗಾಗಲೀ ಅಲ್ಲ- ವಸ್ತು ಹಾಗೂ ಅದನ್ನು ನೀನು ನಿರ್ವಹಿಸುವ ಕ್ರಮದ ಬಗೆಗೆ.
ನಗರ ಪ್ರಜ್ಞೆಯ ಕವಿತೆಗಳು ಕನ್ನಡದಲ್ಲಿ ಇಲ್ಲ(ಕಾಯ್ಕಿಣಿ ಕತೆಗಳು ಹಾಗೂ ಇತ್ತೀಚಿನ ವಿ.ಎಂ.ಮಂಜುನಾಥ್ ಕವನಗಳು ಇದಕ್ಕೆ ಅಪವಾದ) ನಿಜ. ಈ ದೃಷ್ಟಿಯಿಂದ ನಿನ್ನ ಪದ್ಯಗಳು ಹೊಸಾ ಪ್ರಯತ್ನಗಳೇ ಸರಿ. ತುಸು ಗಂಭೀರವಾಗಿ ಪರಿಗಣಿಸಿದರೆ (ನೀನು ಮತ್ತು ಓದುಗರು) ಈ ಪದ್ಯಗಳು ಕನ್ನಡಕ್ಕೆ ಉತ್ತಮ ಕೊಡುಗೆಯಾಗಬಲ್ಲವು.
ನೀನು ಮೂಲತಃ ನಗರದವನಲ್ಲ ಎಂಬುದು ನಿನ್ನ ಪದ್ಯ ಓದುವಾಗಲೇ ಗೊತ್ತಾಗುತ್ತದೆ. ನಗರದ ಮೇಲಿನ ಪದ್ಯ ಬರೆಯಲು ನಗರದವನಾಗಿರಲೇ ಬೇಕಾಗಿಲ್ಲ ಎಂಬುದೂ ನಿಜ. ಅದೇ ಈ ಕವಿತೆಗಳ ಮುಖ್ಯ ಲಕ್ಷಣ ಕೂಡ. ಯಾಕೆಂದರೆ ನೀನು ನಗರದ ಮೇಲೆ ಕಟ್ಟುವ ಪ್ರತಿಯೊಂದು ಪದ್ಯದಲ್ಲೂ ನಿನ್ನ ಊರು, ಜನ ಬೆರೆತುಕೊಂಡು ಬರುತ್ತವೆ. ಪೇಟೆಯ ಲೈಟುಗಳ ಮಧ್ಯೆ ಹಳ್ಳಿಯ ಚಿಮಣಿ, ಇಲ್ಲಿನ ಝಗಮಗದ ನಡುವೆ ಅಲ್ಲಿನ ಕತ್ತಲು, ಇಲ್ಲಿನ ಯುವತಿಗೆ ಅಲ್ಲಿನ ಅಮ್ಮ, ನಗರದ ದೇವತೆಗಳಿಗೆ ಹಳ್ಳಿಯ ಹವಿಸ್ಸು ! ಅದು ನಿನ್ನ ಅರಿವಿಲ್ಲದೆಯೂ ಇರಬಹುದು. ಹೀಗಾಗಿ ನಿನ್ನ ಪದ್ಯಗಳು ಸಂಪೂರ್ಣ ನಗರ ಪದ್ಯಗಳೂ ಅಲ್ಲ. ಅವು ‘ಪೇಟೆ- ಹಳ್ಳಿ ಪದ್ಯಗಳು’ ಅಷ್ಟೆ. ಬಹುಶಃ ಹಳ್ಳಿಯಿಂದ ಬಂದು ಇಲ್ಲಿ ನೆಲೆಯೂರಿ ಬರೆಯುವ ಯಾರಿಗೂ ಸಂಪೂರ್ಣ ನಗರ ಪ್ರಜ್ಞೆಯೆಂಬುದು ಇಲ್ಲವೇ ಇಲ್ಲ. ಬಹುಶಃ ಅದು ನಮ್ಮ ಮುಂದಿನ ತಲೆಮಾರಿಗೆ ಮಾತ್ರ ಅದು ಲಭ್ಯ.
ಬೇಕಾಗಿಯೋ ಬೇಡವಾಗಿಯೋ ನಾವೆಲ್ಲರೂ ಶಹರದಲ್ಲಿ ಬದುಕುತ್ತಿದ್ದೇವೆ. (ಇದ್ದಕ್ಕಿದ್ದಂತೆ ಈ ಪದ ಯಾಕೆ ಬಂತು ? ಪೇಟೆ, ನಗರ ಅನ್ನುವುದಕ್ಕಿಂತ ಇದೇ ಯಾಕೋ ಚೆನ್ನಾಗಿದೆ ! ‘ಶಹರ’ ಅನ್ನುವಾಗ ಪಕ್ಕನೆ ‘ಕುಹರ’ ನೆನಪಾದದ್ದು ಆಕಸ್ಮಿಕ ಇರಲಾರದು. ಹಾಗೇ ‘ಶಹಾ’ ಕೂಡ ! ಇದ್ಯಾಕೋ ನಿನ್ನ ‘ಪನ್‌ಗಾಳಿ’ ನನಗೂ ಹೊಡೆದಂತಿದೆ !) ಇದು ನಮ್ಮ ಕಾಲದ ಯುವಜನರ ಹಣೆಬರಹ. ಹಾಗೇ ನಮ್ಮ ಅನೇಕ ಗೆಳೆಯರು, ದಾಯಾದಿಗಳು ಹಳ್ಳಿಗಳಲ್ಲಿದ್ದಾರೆ. ನಾವು ತೊರೆದು ಬಂದ ಹಳ್ಳಿಗೆ ನಾವು ಬಯಸಿದಾಗ ಮುಖಾಮುಖಿಯಾಗಬಲ್ಲೆವು. ಹಾಗೇ ನಮ್ಮ ಹಳ್ಳಿಯ ದಾಯಾದಿಗಳೂ ಶಹರಕ್ಕೆ ಬರಬಲ್ಲರು. ಆದರೆ ನಾವು ಹಳ್ಳಿಗೆ ಹೋಗುವುದು ಮತ್ತು ಅವರು ಪೇಟೆಗೆ ಬರುವುದು ಎರಡೂ ಒಂದೇ ಅಲ್ಲವಲ್ಲ. ಎರಡೂ ಅತ್ಯಂತ ಭಿನ್ನವಾದವು. ಇದನ್ನು ತೂಗಿ ನೋಡಬೇಕು ಅಂತ ನಿನಗೆ ಎಂದೂ ಅನಿಸಿಯೇ ಇಲ್ಲವೆ ?
ಕವಿತೆಯಲ್ಲಿ ಏನು ಇಲ್ಲವೋ ಅದನ್ನು ಎತ್ತಿಕೊಂಡು ಕಮೆಂಟು ಹೊಡೆಯುತ್ತಿದ್ದಾನೆ ಅಂತ ತಿಳಿಯಬೇಡ. ಈಗ ಕವಿತೆಯಲ್ಲಿ ಇರುವುದನ್ನೇ ಎತ್ತಿಕೊಳ್ಳುವಾ. ಈ ಹುಡುಗಿಯದು ಹೇಳಲೂ ಆಗದ ಅನುಭವಿಸಲೂ ಆಗದ ಪಾಡು. ಎಲ್ಲೆಂದರಲ್ಲಿ ಅಂಟುವ ಚೂಯಿಂಗ್ ಗಮ್ ನಗರದ ಉಸಿರುಗಟ್ಟಿಸುವ ಸ್ಥಿತಿ. ಇದು ಬಂದಿರುವ ರೀತಿ ಸೊಗಸಾಗಿದೆ. ಹಾಗೇ ಬಬಲ್ ಗಮ್ಮು ಮತ್ತು ಕಾಮಾಲೆ ಕಣ್ಣುಗಳು ಅವಳಿಗೆ ಅಂಟುವ ರೀತಿಯನ್ನು ರಿಲೇಟ್ ಮಾಡಿದ ಬಗೆಯೂ ಚೆನ್ನಾಗಿದೆ. (ಈ ‘ಚೆನ್ನಾಗಿದೆ’, ‘ಸೊಗಸಾಗಿದೆ’ ಎಂಬ ಪದಗಳನ್ನು ಕನಿಷ್ಠ ಹತ್ತು ವರ್ಷ ಬ್ಯಾನ್ ಮಾಡಬೇಕು ನೋಡು !) ಆದರೆ ಆಕೆಗೆ ಪೇಟೆ ಅನಿವಾರ್‍ಯವಾಗಿಯೂ ಇರುವುದರಿಂದ ಈ ಬಬಲ್ ಗಮ್ಮನ್ನೂ ಸುತ್ತ ಅಂಟಿಕೊಂಡಿರುವ ಕಣ್ಣುಗಳನ್ನೂ ಒಂದು ಬಗೆಯಲ್ಲಿ ಪ್ರತಿರೋಸುವ, ಒಂದು ಹದದಲ್ಲಿ ಎಂಜಾಯ್ ಮಾಡುವ ಹಾಗೂ ಈ ಎಲ್ಲವೂ ಉಂಟು ಮಾಡುವ ಒಂದು ಭಾವ ವರ್ತುಲದಿಂದ ಕೊಂಚವೇ ಹೊತ್ತಿನಲ್ಲಿ ಪಾರಾಗಿ ಮತ್ತೆ ದಿನಚರಿಗೆ ಮರಳಿ ಬಿಡುವ ವರ್ತನೆಯೂ ಇದೆಯಲ್ಲವೆ ? ಇದು ಹೀಗಿದ್ದಾಗ, ನೀನು ಬರೆದ ಅಮ್ಮನ ನೆನಪು, ಕಣ್ಣ ಕೊನೆ ಒರೆಸುವುದು ಇವೆಲ್ಲಾ ಒಂದು ಬಗೆಯ ಹುಸಿ ಅಂತ ನಿನಗೇ ಅನಿಸುವುದಿಲ್ಲವೆ ? ನನಗಂತೂ ಅನಿಸಿದೆಯಪ್ಪ.
ಈ ಪದ್ಯಗಳಲ್ಲಿ ಇನ್ನೂ ಒಂದು ಸಮಸ್ಯೆ ಇದೆ ಅಂತ ನನಗೆ ಅನಿಸುತ್ತದೆ. ಅದು ಪೇಟೆಯ ಮಧ್ಯಮ ವರ್ಗವೊಂದು ಈಗಾಗಲೇ ಸೃಷ್ಟಿಸಿ ಇಟ್ಟಿರುವ ಒಂದು ಸಿದ್ಧ ಮಾದರಿಯ, ಸಿದ್ಧ ಜಾಡಿಗೆ ಬೀಳುವ ಭಯ. ನಾವೆಲ್ಲರೂ ಈ ವರ್ಗದ ‘ಪ್ರಾಡಕ್ಟು’ಗಳೇ. ಈ ವರ್ಗ ಹಳ್ಳಿಯ ಸಂಬಂಧವನ್ನು ಸಂಪೂರ್ಣ ಕಳಚಿಕೊಂಡೂ ಇಲ್ಲ, ಹಾಗೆಯೇ ಅದನ್ನು ಸಂಪೂರ್ಣ ಸೃಜನಶೀಲವಾಗಿಯೂ ಇಟ್ಟಿಲ್ಲ. ಹಳ್ಳಿಯಲ್ಲಿರುವ ಅಮ್ಮನ ನೆನಪಾಗಿ ಹಳಹಳಿಸುವುದು, ಅಲ್ಲಿಯೇ ಇದ್ದು ಪ್ರಗತಿಪರ ಕೃಷಿಕನಾಗಬಹುದಿತ್ತು ಎಂದು ಹಂಬಲಿಸುವುದು, ಆದರೆ ಈಗ ಹಳ್ಳಿಯಲ್ಲಿರುವವರ ಪಾಡು ನೆನಪಾಗಿ ಭಯಪಟ್ಟು ಸುಮ್ಮನಾಗುವುದು, ಒಂದು ವಾರದ ರಜೆ ಸಿಕ್ಕಿದಾಗ ಹಳ್ಳಿಗೆ ಓಡುವುದು, ಅಲ್ಲಿರುವ ಅಣ್ಣನ ಅಥವಾ ತಮ್ಮನ ಸಂಸಾರದ ಜತೆ ಬೆರೆಯಲು ಯತ್ನಿಸುವುದು, ಎಷ್ಟು ಯತ್ನಿಸಿದರೂ ಅವರಿಗೂ ತಮಗೂ ಕಂದಕವೊಂದು ಏರ್ಪಟ್ಟಿದೆ ಎಂದು ಮರುಗುವುದು, ಪೇಟೆಯ ಸಹವಾಸ ರೇಜಿಗೆ ಹುಟ್ಟಿಸಿದಾಗ ಊರಿನಲ್ಲಿ ಎಷ್ಟು ಚೆಂದವಿತ್ತು ಎಂದುಕೊಳ್ಳುವುದು, ಹಳ್ಳಿಯ ರಾಜಕೀಯಗಳು ಗೊತ್ತಾದಾಗ ದಿಗಿಲಾಗಿ ನಮ್ಮ ಹಳ್ಳಿಯೂ ಹಾಳಾಯಿತೇ ಎಂದು ಹಲುಬುವುದು ಇತ್ಯಾದಿಗಳಲ್ಲಿ ಇದು ಜೀವಂತವಾಗಿದೆ. ಈ ವರ್ಗದ ಕವಿಗಳೂ ಕತೆಗಾರರೂ ಒಂದು ಹುಸಿ ಭಾವುಕತೆಯ ಪ್ರಪಂಚವನ್ನು ನಮ್ಮ ನಡುವೆ ಸೃಷ್ಟಿಸಿ ಅಲ್ಲಿ ಪೇಟೆಯ ಹಾಗೂ ಹಳ್ಳಿಯ ಅನೇಕ ಚಪ್ಪಟೆ ಕ್ಯಾರೆಕ್ಟರುಗಳನ್ನು ನಡೆದಾಡಲು, ವರ್ತಿಸಲು ಬಿಡುತ್ತಾರೆ. ಬಳಿಕ ತಾವು ತಮ್ಮ ಭಾವುಕತೆಗಾಗಿ ಸೃಷ್ಟಿಸಿದ ಕಲ್ಪನೆಗಳನ್ನೇ ನಿಜವೆಂದು ನಂಬಲೂ ತೊಡಗುತ್ತಾರೆ. ನಿನ್ನ ಪದ್ಯಗಳು ಇಂಥ ಜಾಡು ಹಿಡಿದರೆ ಮುಕ್ಕಾದವೆಂದೇ ತಿಳಿ.
ಇದನ್ನು ಹೇಳುತ್ತಿರುವಾಗಲೇ ನನಗೊಂದು ದ್ವಂದ್ವ ಕಾಣಿಸುತ್ತಿದೆ- ಹೀಗೆ ಹಳ್ಳಿಯ ಬಗ್ಗೆ ಭಾವುಕವಾಗಿರುವುದು ಮತ್ತು ಪೇಟೆಯ ಬಗ್ಗೆ ಕಟುವಾಗಿರುವುದು ನಮ್ಮ ತಲೆಮಾರಿನ ದೃಷ್ಟಿಯಿಂದ ಅಗತ್ಯ ಕೂಡ. ಆದ್ದರಿಂದಲೇ ನಾವು ಬರೆಯುವುದು ಕಾಲ ದೇಶಗಳ ದೃಷ್ಟಿಯಿಂದ ಸಮಂಜಸವಾಗಿದೆಯೇ ಅಥವಾ ರಾಜಕೀಯವಾಗಿ ಸರಿಯಾಗಿದೆಯೇ ಅಂತೆಲ್ಲ ನೋಡುವುದು ತಪ್ಪು ಅಂತ ಕೂಡ ಅನೇಕ ಸಲ ಅನಿಸುತ್ತದೆ. ಇದನ್ನೂ ತೊರೆದು, ಅದನ್ನೂ ಕೈಬಿಟ್ಟರೆ ಮೂರನೇ ದಾರಿಯೊಂದು ಇದೆಯೇ ಎಂಬುದು ನನಗಿರುವ ಸಂಶಯ.
ಆದರೆ ನಿನ್ನ ಯತ್ನವಂತೂ ಗಂಭೀರವಾದದ್ದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಬದುಕೊಂದನ್ನು ಎಮ್ಮೆ ಕರುವಿನಂತೆ ಹಾಗೇ ಬದುಕುವುದಕ್ಕಿಂತ ಇದನ್ನು ವಿಮರ್ಶಿಸುತ್ತಾ ಸಾಧ್ಯವಾದಷ್ಟು ಸೃಜನಶೀಲವಾಗಿರಲು ಯತ್ನಿಸುತ್ತಾ ಇರುವುದು ಮೇಲು. ಆ ಪ್ರಯತ್ನ ನಡೆದಿರುವುದರಿಂದಲೇ ಇದು ನಮಗೆಲ್ಲ ಪ್ರೀತಿಯ ಅಂಕಣವಾಗಿದೆ ಎಂಬುದನ್ನು ಇಲ್ಲಿ ನೆನೆಯುತ್ತೇನೆ.

7 comments:

ಸುಧನ್ವಾ ದೇರಾಜೆ. said...

ಕೇರ ಪ್ರಿಯ,
*‘ನಗರದ ಮೇಲೆ ಕಟ್ಟುವ ಪ್ರತಿಯೊಂದು ಪದ್ಯದಲ್ಲೂ ನಿನ್ನ ಊರು-ಜನ ಬೆರೆತುಕೊಂಡು ಬರುತ್ತವೆ. ಹಾಗಾಗಿ ಅವು ಪೇಟೆ-ಹಳ್ಳಿ ಪದ್ಯಗಳು’ ಎಂದಿದ್ದೀರಿ.’ ಖಂಡಿತ ಸತ್ಯ ಮತ್ತು ಅದು ನನ್ನ ಅರಿವಿನಲ್ಲೇ ಇದೆ. ಹಳ್ಳಿಯಿಂದ ಬಂದು ಇಲ್ಲಿ ನೆಲೆಯೂರಿರುವವರಿಗೆ ಅದನ್ನು ಯಾವುದೇ ದಾರಿಯಲ್ಲಾಗಲಿ ತೊರೆದು ಸಾಗುವುದು ಎಷ್ಟು ಕಷ್ಟ ಎನ್ನುವುದು ಈ ಪದ್ಯಗಳನ್ನು ಬರೆಯುತ್ತಿರುವಾಗ ನನಗೆ ಸ್ಪಷ್ಟವಾಯಿತು. ಹಾಗೆ ನೋಡಿದರೆ ಮೊದಲ ಪಾಡ್ದನವಾದ ‘ಅಗೋ ಆ ಬೆದರುಗೊಂಬೆಯೂ ಮಾರಾಟವಾಯಿತು’ ಹಳ್ಳಿಯ ಸೋಂಕಿಲ್ಲದ ಒಂದೇಒಂದು ಪದ್ಯ.
ಇನ್ನು, ಹಳ್ಳಿಯ ಬಗ್ಗೆ ಭಾವುಕವಾಗಿರುವುದು ಮತ್ತು ಪೇಟೆಯ ಬಗ್ಗೆ ಕಟುವಾಗಿರುವುದೂ ಪದ್ಯದಲ್ಲಿ ಆಗಬಾರದು ಅನ್ನುವವನು ನಾನು. ನಗರಕ್ಕಷ್ಟೇ ಸೀಮಿತವಾದ ಭಾವವನ್ನೂ ಕವಿತೆಯಲ್ಲಿ ತರುವ ದಿಸೆಯಲ್ಲಿ ನನ್ನ ಯತ್ನವಂತೂ ಇದೆ.

*ಇತ್ತೀಚೆಗಿನ ಚ್ಯೂಯಿಂಗ್‌ಗಮ್ ಪದ್ಯದ ಬಗ್ಗೆ ಹೇಳುತ್ತಾ-ಕೊಂಚ ಹೊತ್ತಿನಲ್ಲಿ ಭಾವ ವರ್ತುಲದಿಂದ ಪಾರಾಗಿ ದಿನಚರಿಗೆ ಮರಳಿಬಿಡುವ ವರ್ತನೆಯೂ ಇದೆಯಲ್ಲವೆ? - ಎಂದಿದ್ದೀರಿ. ಖಂಡಿತ ಇದೆ ಮತ್ತು ಅದನ್ನು ಬದುಕಿನ ನಡೆಯಲ್ಲಿ ಗಮನಿಸುತ್ತಾ ಇದ್ದೇನೆ . ಆದರೆ ಆ ಕಾರಣಕ್ಕೆ ಅಮ್ಮನ ನೆನಪು, ನಾನು ಕಣ್ಣ ಕೊನೆ ಒರೆಸುವುದು ಹುಸಿ ಅಂತ ಹೇಗೆ ಹೇಳುತ್ತೀರಿ? ಜತೆಗೆ ನಾನಿಲ್ಲಿರುವುದರಿಂದಲೇ, ಊರಲ್ಲಿರುವ ಅಮ್ಮನ ಕಣ್ಣಲ್ಲೂ ಆಗಾಗ ನೀರಾಡುತ್ತದೆ ಮತ್ತು ಅದನ್ನು ಒರೆಸಿಕೊಳ್ಳುವ ತಾಕತ್ತೂ ಆಕೆಗೆ ಬಂದಿದೆ. ಹಾಗಾಗಿ ನಾನೂ ಕಣ್ಣ ಕೊನೆ ಒರೆಸಿಕೊಂಡು ಕೆಲಸಕ್ಕೆ ಹೊರಡುತ್ತೇನೆ. ನಗರವ ಜಗಿಯುತ್ತಿರುತ್ತೇನೆ . ಜಗಿಯುವುದರಲ್ಲಿ ಸುಃಖ, ದುಃಖ, ಒಂದು ಥರದ ಸ್ಟೈಲು (ಫೋಸು) ಕೂಡಾ ಇದೆ !

*ಭಾವುಕತೆ ಎಂಬ ಪದವನ್ನು ಉದ್ದಕ್ಕೂ ಗಮನಿಸಿದೆ. ಹೌದು, ಎಲ್ಲಾ ಪದ್ಯಗಳಲ್ಲಿ ಸೆಂಟಿ ಆಗಿ ಮೆಂಟಲ್ ಆಗಬಾರದು ! ಸಿಟಿ ಗೀತ ಎಲ್ಲಿ ಪಿಟಿ ಗೀತ ಆಗುತ್ತೋ ಅಂತ ನನಗೂ ಪಿಟಿಪಿಟಿಯಾಗುತ್ತಿರುತ್ತದೆ.

*ನಾವು ಹಳ್ಳಿಗೆ ಹೋಗುವುದು, ನಮ್ಮ ದಾಯಾದಿಗಳು ಪೇಟೆಗೆ ಬರುವುದು ಭಿನ್ನವಾಗಿದೆ ಅಂದಿದ್ದೀರಿ. ನನಗದು ಅಷ್ಟೊಂದು ಸ್ಪಷ್ಟವಾಗಿಲ್ಲ. ಭಾವ ವರ್ತುಲಕ್ಕೂ ಬಂದಂತಿಲ್ಲ.
*ಪದ್ಯಗಳ ಬಗ್ಗೆ ಕೇರ್ ತಗೊಂಡಿರೋದಕ್ಕೆ ಥ್ಯಾಂಕ್ಸ್ . ಪೇಟೆಯ ಪಾಡ್ದನ ಮುಗಿಸಿಲ್ಲದಿರುವುದೇ ನನಗೀಗ ಧೈರ್ಯ !

ಸಿಂಧು sindhu said...

ಹರೀಶ್,

ಬೆಟ್ಟದಡಿಯಿಂದ ಬಂದು ಶಿಖರವನ್ನೇ ಚೂಪು ತೋರಿಸುವ ಒಳ್ಳೆಯ ಅವಲೋಕನ ಬರೆದಿದ್ದೀರ. ಹೊಸಯೋಚನೆಗಳು ಮತ್ತು ಹೊಸ ನೋಟಗಳ ಶ್ರೇಣಿ ಎದುರಿಗಿದೆ. ಹತ್ತಲು ಪ್ರೀತಿಯ ಆಹ್ವಾನದಂತಹ ಬರಹವಿದು.

ಇಲ್ಲಿ ಸುಧನ್ವ ಅವರ ಬರಹದ ಬಗ್ಗೆ ಬರೆಯುತ್ತ, ನಮ್ಮ ನಗರಪ್ರಜ್ಞೆಯನ್ನ,ಗೋಕುಲದಿಂದ ಮಧುರೆಗೆ ತಾವೇ ಬಯಸಿ ಬಂದ ಗೊಲ್ಲರಂತಹ ನಮ್ಮ ಮನದ ಇಬ್ಬಂದಿತನವನ್ನ ಬರೆದಿದ್ದೀರಿ. ಬರೆಯಲು ಶಕ್ತರಿರುವವರ ಮಿತಿ ಏನಿರಬಹುದು ಮತ್ತು ಒಬ್ಬ ಪ್ರಜ್ಞಾವಂತ ಓದುಗನ ನಿರೀಕ್ಷೆ ಏನಿರಬಹುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಯಾವ ಅಂತಃಸತ್ವ ಮತ್ತು ಸ್ಪಷ್ಟತೆ ಬರಹವೊಂದರ ಯಾವತ್ತೂ ಶಕ್ತಿಯಾಗಬಹುದು ಎಂಬುದನ್ನ ತುಂಬ ಸರಳವಾಗಿ ಬರೆದಿದ್ದೀರಿ.
ನಿಮ್ಮ ಕುಮಾರಪರ್ವತಕ್ಕೆ ಮನಸೋತವಳು ನಾನು. ಈಗ ಬೆಟ್ಟದಡಿಯಿಂದ ಬಂದವರ ಬರಹಗಳಿಗೂ ಮರುಳಾಗಿದ್ದೇನೆ.
ಎಲ್ಲ ಬರಹಗಳನ್ನೂ ಓದಿದೆ. ತುಂಬ ಸೊಗಸಾಗಿದೆ ಮತ್ತು ಚೆನ್ನಾಗಿದೆಯನ್ನು ನೀವು ಬ್ಯಾನ್ ಮಾಡಲು ಹೊರಟಿರುವುದರಿಂದ ಪಕ್ಕಾ ಮಲೆನಾಡಿಗಳ ಶೈಲಿಯಲ್ಲಿ ಚೊಲೋ ಇದ್ದು ಮಾರಾಯ್ರೆ, ರಾಶಿ ಇಷ್ಟ ಆಯ್ತು ಅಂತ ಹೇಳಬಯಸುತ್ತೇನೆ.
ಹೀಗೆ ಹೊಸ ಶ್ರೇಣಿಗಳ ಹಲನೋಟಗಳನ್ನ ಬೆಟ್ಟದಡಿಯಿಂದ ತೋರಿಸುತ್ತಿರಿ.

ಪ್ರೀತಿಯಿಂದ
ಸಿಂಧು

Shanmukharaja M said...

hi harishanna,

this is shanmukha!!!

http://swarachitha.blogspot.com/

chetana said...

ನಮಸ್ತೇ,
ಸುಧನ್ವರು ಕೊಟ್ಟ ಲಿಂಕಿನ ಮೂಲಕ ಇಲ್ಲಿ ಬಮ್ದೆ. ಅವರ ಪೇಟೆಯ ಪಾಡ್ದನ ಪ್ರಿಯರಲ್ಲಿ ನಾನೂ ಒಬ್ಬಳು. ಬಹುಶಃ ಹಳ್ಳಿ ಬಿಟ್ಟು ಬಂದು ನಗರದಲ್ಲಿ ಅದೆಅದೇ ಭಾವಗಳನ್ನ ಅನುಭವಿಸ್ತಿರೋದ್ರಿಂದ ಈ ಪಾಡ್ದನಗಳು ನಮ್ಮ ಎದೆದನಿಯೇ ಅನಿಸಿರಲಿಕ್ಕೂ ಸಾಕು.
ಆದರೆ,ಹಳ್ಳಿಯ ಅನುಭವ ಇರುವವರಿಗಷ್ಟೇ ಪೇಟೆ ಭಿನ್ನವಾಗಿ ಕಾಣತ್ತಲ್ಲವೇ, ಪಟ್ಟಣಿಗರಿಗೆ ಹಳ್ಳಿ ಕಂಡಹಾಗೆ? ಬರಿಯ ಪಟ್ಟಣ ಈ ಬಗೆಯ ವಿಶಿಷ್ಟ ದನಿಯನ್ನ ಹೊರಡಿಸಲಾರದು ಅಂತ ನನಗನ್ನಿಸುತ್ತದೆ.
ಜೊತೆಗೆ, ಸುಧನ್ವರೇ ಹೇಳಿಕೊಂಡ ಹಾಗೆ ಸಿಟಿ ಗೀತ ಬರೀ ಪಿಟಿಗೀತ (ನಾನು ಅಂದುಕೊಂಡ ಪದಗಳು ಬೇರೆ) ಆಗಬಾರದು ಅಂತ ನನಗೂ ಅನ್ನಿಸಿದ್ದಿದೆ.
ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ. ಬ್ಲಾಗ್ ಕೂಡ.

ಹರೀಶ್ ಕೇರ said...

ಪ್ರಿಯ ಸುಧನ್ವ,
ಭಾವುಕಗೊಳ್ಳುವುದು ತಪ್ಪು ಅಂತ ನಾನು ಹೇಳಲಿಲ್ಲ. ಆದರೆ ಭಾವುಕತೆಯ ಆಕ್ರಮಣಕಾರಿ ಗುಣಗಳು ಅಪಾಯಕಾರಿ. ಉದಾಹರಣೆಗೆ ‘ಕನ್ನಡ ಓರಾಟ’.
ಹಾಗೇ ಭಾವಗಳಲ್ಲಿ ಸ್ಥಾಯಿ ಮತ್ತು ಸಂಚಾರಿ ಎಂದಷ್ಟೇ ವ್ಯತ್ಯಾಸ. ಸಂಚಾರಿ ಭಾವದಲ್ಲಿ ಹುಲುಸಾಗಿ ಕಾಣಿಸಿಕೊಳ್ಳುವ ‘ಹುಸಿತನ’ದ ಬಗ್ಗೆ ನನ್ನ ಟೀಕೆ.
ನಾವು ಹಳ್ಳಿಗೆ ಹೋಗುವಾಗ ಒತ್ತಡವಿಲ್ಲದ ದಿನಗಳ ನಿರೀಕ್ಷೆ, ನೆಮ್ಮದಿಯ ಅನ್ವೇಷಣೆ, ಬಂಧುಗಳ ಭೇಟಿ ಇವೆಲ್ಲ ಆದ್ಯತೆಗಳು. ನಮ್ಮ ದಾಯಾದಿಗಳು ಪೇಟೆಗೆ ಬರುವಾಗ ನೌಕರಿಯ ಹುಡುಕಾಟ, ಪ್ರಮುಖ ಕೆಲಸವೊಂದನ್ನು ಮಾಡಿಸಿಕೊಳ್ಳಬೇಕಾದ ಅಗತ್ಯ, ಎಲ್ಲ ಅಕಾರಗಳೂ ಕೇಂದ್ರೀಕೃತವಾಗಿರುವ ಪೇಟೆಯನ್ನು ಓಲೈಸಲೇಬೇಕಾದ ಅನಿವಾರ್‍ಯತೆ ಇವು ಆದ್ಯತೆ. ನಮ್ಮಲ್ಲಿ ಅಹಂ ಇದ್ದರೆ, ಅವರಲ್ಲಿ ಆರ್ತತೆ ! ಇದೇ ವ್ಯತ್ಯಾಸ. (ಇದು ಇಷ್ಟು ಸರಳವಾಗಿಲ್ಲದೆಯೂ ಇರಬಹುದು).

ಪ್ರಿಯ ಸಿಂಧು,
ನನ್ನ ಈ ‘ಎಲ್ಲ ನೋಟಗಳಾಚೆ ’ ಯಾವ ಚಿತ್ರ ಉಳಿಯುತ್ತದೆ ಎಂಬ ಕುತೂಹಲ ನನಗೆ ! ನಾನು ನಿಮ್ಮ ಬ್ಲಾಗಿನ ರೆಗ್ಯುಲರ್ ಯಾತ್ರಿಕ, AN ARDENT ADMIRER OF YOUR BLOG ! ಬರೆಯುತ್ತಿರಿ.

ಪ್ರಿಯ ಚೇತನಾ,
ನಿಮ್ಮ ಒಳನೋಟ ಸರಿ. ಹಳ್ಳಿಗರಿಗೇ ಪಟ್ಟಣ ವಿಶಿಷ್ಟವಾಗಿ, ಅದರ ಎಲ್ಲ ಬಣ್ಣಗಳೊಂದಿಗೆ ಕಾಣೋದು. ಜರ್ಮನಿಯಿಂದ ಬಂದು ಕನ್ನಡ ನಿಘಂಟು ಬರೆದಿಟ್ಟ ಕಿಟೆಲ್ ಒಂದು ಥರ ; ಭಾರತಕ್ಕೆ ರಾಯಭಾರಿಯಾಗಿ ಬಂದು ಇಲ್ಲಿನ ರೂಪ ರಸ ಗಂಧಗಳನ್ನು ಉಂಡು ಕವನ ಬರೆದ ಪಾಬ್ಲೊ ನೆರುಡ ಒಂದು ಥರ. ಕಿಟೆಲ್ ದಾಖಲಿಸಿದವನು, ನೆರೂಡ ಅನುಭವಿಸಿ ಬರೆದವನು. ಇದೇ ವ್ಯತ್ಯಾಸ.
ಆಮೇಲೆ, ನಿಮ್ಮ ‘ಭಾಮಿನಿ ಷಟ್ಪದಿ’ ನಮ್ಮನ್ನೆಲ್ಲ ಎಚ್ಚರದಲ್ಲಿಟ್ಟಿರುವ ಅಂಕಣ. ಹಾಗೇ ನಿಮ್ಮ ಬ್ಲಾಗ್ ಕೂಡ ನನಗಿಷ್ಟ.
ನಿಮ್ಮೆಲ್ಲರ ಕಮೆಂಟುಗಳು ನನ್ನ ಬರಹಕ್ಕೆ ಚೈತನ್ಯ ನೀಡಬಲ್ಲವು.

ಹಾಯ್ ಷಣ್ಮುಖ,
ಯಾವ ಕಾಡಿನಿಂದ ದಿಢೀರನೆ ಹೊರಗೆ ಬಂದೆ ಮಾರಾಯ ?
ಪ್ರೀತಿಯಿಂದ,
ಹರೀಶ್ ಕೇರ

Shanmukharaja M said...

ದೇರಾಜೆಯವರ ಬ್ಲಾಗ್ ಮೇದು ನಿಮ್ಮ ಬ್ಲಾಗಿಗೆ ಬಂದೆ:-)

ನರೇಂದ್ರ ಪೈ said...

ಪ್ರೀತಿಯ ಹರೀಶ್,
ನಮಸ್ಕಾರ.
ನೀವು ಬರೆದಿದ್ದು ಓದಿ ತುಂಬ ಖುಶಿಯಾಯಿತು. ನೀವು ನನ್ನ ಬ್ಲಾಗ್ ಗಮನಿಸಿದ್ದೇ ನನಗೊಂದು ಖುಶಿಯ ಸಂಗತಿ. ನನಗೆ ನೀವು ಬೆಂಗಳೂರಿಗೆ ಹೋಗಿರುವುದು ಕೂಡ ತಿಳಿದಿರಲಿಲ್ಲ. ವಿನಾಯಕ್ ಭಟ್ ನಮ್ಮ ಜೊತೆ ಬಿಸಿಲೆಗೆ ಬಂದವರು ಹೇಳಿದಾಗಲೇ ಗೊತ್ತಾಗಿದ್ದು. ಈಗ ನಿಮ್ಮ ಬ್ಲಾಗ್ ಕೂಡ ನಿಧಾನವಾಗಿ ಓದಿ ಮುಗಿಸಿದೆ. ಸುಧನ್ವ ದೇರಾಜೆಯವರ ಕಾಲಂ ಬಗ್ಗೆ ನೀವು ಬರೆದ ಮಾತುಗಳು ತುಂಬ ಹಿತವಾದ ಮತ್ತು ಸಂತುಲಿತವಾದ ಬರವಣಿಗೆ. ತುಂಬ ಇಷ್ಟವಾಯಿತು. ಹಾಗೆಯೇ ಕಾಗಿನೆಲೆಯವರ ಕಾದಂಬರಿ ಕುರಿತ ಬರಹ ಕೂಡ. ಚಿರತೆ ಕುರಿತ, ಕೊಲಂಬಿಯದ ಕುರಿತ ಲೇಖನಗಳು ತುಂಬ ಕುತೂಹಲ ಹುಟ್ಟಿಸಿದವು. ಉಮ್ಮರ್ ಖಯ್ಯಾಂ ಬಗ್ಗೆ ನನಗೆ ತಿಳಿದಿರುವುದು ಕಡಿಮೆ. ಒಟ್ಟಾರೆ, ನಿಮ್ಮ ಕೆಲವಾದರೂ ಬರಹಗಳು ಓದಲು ಸಿಕ್ಕಿದ್ದು ಸಂತೋಷ ಕೊಟ್ಟಿತು. ಇತ್ತೀಚೆಗೆ ಜಯಂತ್ ಸಿಕ್ಕಿದ್ದಾಗ ನೀವು ಬರೆಯುವುದನ್ನು ನಿಲ್ಲಿಸಿದ ಬಗ್ಗೆಯೇ ನಿಮ್ಮನ್ನು ಇಬ್ಬರೂ ದೂರಿಕೊಂಡಿದ್ದೆವು. ಇದು ಸ್ವಲ್ಪ ಸಮಾಧಾನ ನೀಡಿದೆ. ನನ್ನ ಗೆಳೆಯರಿಗೂ ಹೇಳುತ್ತೇನೆ. ಒಳ್ಳೊಳ್ಳೆ ಬರಹ ಬರುತ್ತಿರಲಿ ಹೀಗೇ...