ಅರ್ಜಿಯಲ್ಲಿ ನನ್ನ ಹೆಸರನ್ನು ಸರಿಯಾಗಿಯೇ ಬರೆದು ಕೊಟ್ಟಿದ್ದೆ ; ಇತರ ವಿವರಗಳನ್ನೂ ಸ್ಪಷ್ಟವಾಗಿ ಕಾಣುವಂತೆ ನಮೂದಿಸಿದ್ದೆ. ಆದರೆ ಮತದಾರರ ಪಟ್ಟಿ ತಯಾರಿಸುವ ಅಕಾರಿಗಳು ನನ್ನ ಹೆಸರನ್ನು ‘ಹರೀಶ್ ಕೀರೆ’ ಅಂತ ಬರೆದು ಅಧ್ವಾನ ಮಾಡಿಬಿಟ್ಟಿದ್ದರು. ಪಕ್ಷವೊಂದರ ಕಾರ್‍ಯಕರ್ತರು ಮನೆಗೆ ಬಂದು ಹೆಸರಿದ್ದ ಚೀಟಿ ಕೊಟ್ಟಾಗಲೇ ನನಗೆ ಮೈ ಉರಿದು ಹೋಗಿತ್ತು. ತಿದ್ದುಪಡಿಗೆ ನೀಡಲು ಸಮಯವಿರಲಿಲ್ಲ ; ಅದನ್ನೇ ಹಿಡಿದುಕೊಂಡು ಮತಗಟ್ಟೆಗೆ ಹೋದೆ.
ಜನರೇ ಇರಲಿಲ್ಲ. ಒಂದು ಕ್ಷಣ ಇಲ್ಲಿ ಮತದಾನ ನಡೆಯುತ್ತಿದೆಯೇ ಇಲ್ಲವೇ ಅಂತ ಅನುಮಾನ ಬಂತು. ಶಾಲೆಯ ಹೊರಗಿದ್ದ ಪೊಲೀಸರನ್ನೂ ಒಳಗೆ ನಾನಾ ಚಟುವಟಿಕೆಗಳನ್ನೂ ಕಂಡು ಅನುಮಾನ ಪರಿಹಾರವಾಯಿತು. ಒಳಗೆ ನುಗ್ಗಿ ಅಕಾರಿಗೆ ಚೀಟಿ ತೋರಿಸಿದೆ. ಆತ ನನ್ನ ಮುಖ ಕೂಡ ನೋಡದೆ, ಮತದಾರರ ಪಟ್ಟಿ ನೋಡುತ್ತ ಏನನ್ನೋ ಗಾಢವಾಗಿ ಹುಡುಕಿದ. ಬಳಿಕ ‘ಹರೀಶ್ ಕೀರೆ’ ಅಂತ ಘೋಷಿಸಿ, ಈತ ಯಾರೋ ದಕ್ಷಿಣ ಆಫ್ರಿಕಾದ ಪ್ರಜೆಯೇ ಇರಬೇಕು ಎಂಬ ಗುಮಾನಿಯಿಂದ ತಲೆ ಎತ್ತಿ ನೋಡಿದ.
ನಾನು ಪೆಚ್ಚು ನಗು ನಕ್ಕು ‘ಹರೀಶ್ ಕೇರ’ ಅಂದೆ.
‘ಹರೀಶ್ ಕೀರೆ’ ಅಂತ ಒತ್ತಿ ಹೇಳುತ್ತ ಆತ ಅನುಮಾನದಿಂದ ನನ್ನನ್ನೇ ನೋಡಿದ.
‘ಕೀರೆ ಅಲ್ಲ ಕೇರ’
‘ಮತ್ತೆ ಇಲ್ಲಿ ಕೀರೆ ಅಂತಿದೆ’
‘ಇರುತ್ತೆ, ಕನ್ನಡ ಸರಿಯಾಗಿ ಗೊತ್ತಿಲ್ಲದೋರು ಲಿಸ್ಟ್ ಮಾಡಿದರೆ ಹಾಗೇ ಇರುತ್ತೆ’ ಇಷ್ಟು ಹೊತ್ತಿಗೆ ನನ್ನ ಸಹನೆ ಮುಗಿದಿತ್ತು.
‘ನಿಮ್ಮ ಐಡಿ ಕಾರ್ಡ್ ತೋರಿಸಿ’ ಆತ ಕೇಳುವ ಮೊದಲೇ ಡ್ರೈವಿಂಗ್ ಲೈಸೆನ್ಸ್ ತೆಗೆದು ಕೊಟ್ಟೆ . ಆತ ಫೋಟೋ ತಾಳೆ ಹಾಕಿ ಓಕೆ ಅಂದ. ಅವನ ಪಕ್ಕ ಕೂತಿದ್ದ ಹೆಂಗಸು ನನ್ನ ಎಡ ತೋರು ಬೆರಳಿಗೆ ನಾಮ ಹಾಕಿದಳು. ಅದು ಚುನಾವಣಾ ಆಯುಕ್ತ ಗೋಪಾಲಸ್ವಾಮಿ ನಾಮದಂತೆಯೇ ಉದ್ದಕ್ಕಿತ್ತು.
ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನ ಮುಂದೆ ನಿಂತೆ. ಹೆಸರುಗಳು ಒಂದೊಂದಾಗಿ ಕಂಡವು- ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಚ್.ಎಂ.ರೇವಣ್ಣ, ಲೋಕೇಶ್ ಗೌಡ, ಮಲ್ಲಿಕಾರ್ಜುನ ಬೊಮ್ಮಾಯಿ...
ಒಬ್ಬ ಭೂಗಳ್ಳ. ಬೆಂಗಳೂರು ಸುತ್ತಮುತ್ತಲಿನ ಭೂಮಿಯನ್ನು ಹರಿದು ಹಂಚಿ ಸ್ವಲಾಭಕ್ಕೂ ಜಾತಿವಸ್ತರಿಗೂ ಪಕ್ಷದವರಿಗೂ ನೀಡಿ ಕೋಟಿಗಟ್ಟಲೆ ಕೊಳ್ಳೆಹೊಡೆದವನು. ಇನ್ನೊಬ್ಬ ಅವನಿಗಿಂತ ಕಡಿಮೆಯಿಲ್ಲದ ಅತ್ಯಾಚಾರಿ. ಮತ್ತೊಬ್ಬ ಪುಡಿ ರೌಡಿಗಳನ್ನು ಇಟ್ಟುಕೊಂಡು ಪ್ರದೇಶದಲ್ಲಿ ದಾಂಧಲೆ ಎಬ್ಬಿಸುವವನು. ಮಗದೊಬ್ಬ ನರಸತ್ತವನು...
ಮಹಾ ಭ್ರಷ್ಟರು, ನೀಚರು, ದಗಲ್ಬಾಜಿಗಳು ತುಂಬಿಹೋಗಿರುವ ಆ ಪಟ್ಟಿಯಿಂದ ಒಂದೇ ಒಂದು ಸಭ್ಯ, ದೂರದರ್ಶಿತ್ವ ಉಳ್ಳ ನಾಯಕನನ್ನು ಹೆಕ್ಕಿ ತೆಗೆಯುವುದು ನನಗೆ ಅಸಾಧ್ಯವೆನ್ನಿಸತೊಡಗಿತು. ದಗಾಕೋರರಿಂದ ತುಂಬಿಹೋಗಿರುವ ಈ ದೇಶಕ್ಕೆ ಭವಿಷ್ಯವೇ ಇಲ್ಲ ಅಂತ ತೀವ್ರವಾಗಿ ಅನ್ನಿಸಿತು. ಹಿಂದೆ ಬೋ ಮರದ ಕೆಳಗೆ ನಿಂತ ಸಿದ್ಧಾರ್ಥನಿಗೆ ಆಗಿತ್ತಲ್ಲ ; ಅಂಥದೇ ಒಂದು ಮಹತ್ ದರ್ಶನ ಈ ಯಃಕಶ್ಚಿತ್ ಯಂತ್ರದ ಮುಂದೆ ನಿಂತುಕೊಂಡು ನನಗೆ ಆಗತೊಡಗಿತ್ತು. ಈ ನಾಲಾಯಕ್ ಮಂದಿಯಲ್ಲಿ ಯಾರಿಗೆ ಮತ ಹಾಕಲಿ ? ನಾನು ಮತ ಹಾಕಿದ ವ್ಯಕ್ತಿ ಒಂದೇ ಒಂದು ಮತದ ಅಂತರದಿಂದ ಆರಿಸಿ ಬಂದರೂ ನನ್ನನ್ನು ಜೀವನಪರ್‍ಯಂತ ಪಾಪಪ್ರಜ್ಞೆ ಕಾಡಬಹುದು ಅನ್ನಿಸಿ ಕಣ್ಣು ಸುತ್ತಿ ಬಂತು.
ನಾನು ಯಂತ್ರದ ಮುಂದೆ ನಿಂತು ಧ್ಯಾನಮಗ್ನನಾದುದನ್ನು ಕಂಡು ಅಲ್ಲಿ ಕುಳಿತಿದ್ದ ಅಕಾರಿ ಎದ್ದು ‘ಎನಿ ಪ್ರಾಬ್ಲಮ್ ?’ ಎನ್ನುತ್ತ ನನ್ನ ಕಡೆಗೆ ಬರತೊಡಗಿದ. ನಾನು ಎಚ್ಚೆತ್ತುಕೊಂಡು, ‘ಏನೂ ಪ್ರಾಬ್ಲಮ್ ಇಲ್ಲ ಕಣ್ರೀ, ಈ ಕಳ್ಳ ನನ್ ಮಕ್ಕಳಲ್ಲಿ ಯಾರಿಗೆ ಹಾಕೋದು ಗೊತ್ತಾಗ್ತಾಯಿಲ್ಲ’ ಅಂದೆ.
ನನ್ನ ಪ್ರಶ್ನೆಗೆ ಆತ ಕಕ್ಕಾಬಿಕ್ಕಿಯಾದ. ರೂಮಿನೊಳಗೆ ಸಣ್ಣ ನಗೆಯ ಅಲೆಗಳು ಎದ್ದವು. ಕಣ್ಣು ಮುಚ್ಚಿ ಒಂದು ನೀಲಿ ಬಟನ್ ಒತ್ತಿ ಈಚೆ ಬಂದೆ.
ಹೊರಗೆ ‘ನನ್ನ ಹೆಸರು ಪಟ್ಟಿಯಿಂದ ಕಿತ್ತು ಹಾಕಿದ್ದಾರೆ’ ಎಂದು ಒಬ್ಬ ಗಲಾಟೆ ಮಾಡತೊಡಗಿದ್ದ. ಈಗ ತಾನೇ ವ್ಯಾನಿನಿಂದ ಇಳಿದ ಚಾನೆಲ್ ಒಂದರ ಹುಡುಗಿ ಮೈಕ್ ಹಿಡಿದುಕೊಂಡು ಅವನ ಕಡೆ ಧಾವಿಸುತ್ತಿದ್ದಳು.
ಚುನಾವಣೆ ರಾಜಕೀಯದ ಬಗ್ಗೆ ಆಳವಾಗಿ ಚಿಂತಿಸುವ ಪ್ರಗತಿಪರರ ಕಳವಳಗಳು, ರಜೆ ಇದ್ದರೂ ಮತ ಹಾಕಲು ಹೋಗದ ವಿದ್ಯಾವಂತರ ಸಂಕಟಗಳು ಕೊಂಚ ಕೊಂಚವಾಗಿ ಅರ್ಥವಾಗತೊಡಗಿದ್ದವು.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
4 months ago
5 comments:
ನಿಜ. ಇದು ಕೋಲು ಕೊಟ್ಟು ಹೊಡೆಸಿಕೊಂಡಂತೆ.ಓಟು ಮಾಡಲು ಹೋಗಿ ಜಗಳಮಾಡಿ ಬರುವುದಕ್ಕಿಂತ ಸುಮ್ಮನಿರುವುದೇ ಮೇಲು ಅಂತ ಹೆಚ್ಚಿನವರ ಭಾವನೆ.
Harish,
reminded me of the time when my partner Shashikanth magically became 'Shabir Khan'(?!!?) in his voters ID card. We wondered how they managed to do so inspite of shashi repeatedly spelling his name very clearly. To get back to his proper name, he had to wage a war, literally!! Maybe it will take ages to get over these fasaards.
-Tina
dear kera,
vote note chennagide.
ravi mavakhanda
girish, ravi, tina
thanks.
shashikanth- shabir khan...
ha ha ha...!
Harish kera
Registration- Seminar on the occasion of kannadasaahithya.com 8th year Celebration
ಪ್ರೀತಿಯ ಅಂತರ್ಜಾಲ ಸ್ನೇಹಿತರೆ,
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
-ಕನ್ನಡಸಾಹಿತ್ಯ.ಕಾಂ ಬಳಗ
Post a Comment