Tuesday, August 12, 2008

ಸಿದ್ದೇಶ್ವರನೂ, ದರ್ಗಾ ದೇವರೂ
ಶ್ರೀರಾಮನು ಕೃತಯುಗದಲ್ಲಿ ಶರಯಂ ದಾಟುವುದಕ್ಕೆ ಬಳಸಿದಂಥ ಪರಮಾಯಿಷಿ ಬಂಡೆಗಳಿಂದ ಕೂಡಿದುದೂ, ಭೂಮಿಯಿಂದ ಮುಗಿಲಿನೆತ್ತರಕ್ಕೆ ತನ್ನ ಶಿಖರವಂ ಚಾಚಿ ಹೆದರಿಸುತ್ತಿರುವುದೂ, ರುದ್ರಭಯಾನಕವೂ ಬೀಭತ್ಸವೂ ಆದ ಬೆಟ್ಟದ ಬುಡದಲ್ಲಿ ನಾವು ನಿಂತು ಅದನ್ನು ಹೀಗೆ ಅವಲೋಕಿಸುತ್ತಿರಲಾಗಿ... ಸಂಡೇ ಮಾರ್ನಿಂಗ್ ಹತ್ತು ಗಂಟೆಯಾಗಿತ್ತು. ಹೊಗೆ ಧೂಳು ಜನರಿಂದ ತುಂಬಿ ಗಿಜಿಗುಟ್ಟುವ ಬೆಂಗಳೂರಿನಿಂದ ಹೇಗಾದರೂ ಪಾರಾಗಬೇಕೆಂದು ನಾವೊಂದು ಹತ್ತಾರು ಹುಡುಗರು ಬೈಕುಗಳನ್ನೇರಿ ಸಿಟಿಯಿಂದ ಐವತ್ತು ಕಿ.ಮೀ. ದೂರದಲ್ಲಿರುವ ಬೆಟ್ಟದ ಬುಡ ತಲುಪಿದ್ದೆವು.


ಬೆಟ್ಟದ ಒಂದು ಬದಿಯಿಂದ ಪಾವಟಿಗೆ ಏರಿ ಜನ ಹೋಗುತ್ತಿದ್ದರು. ಎಲ್ಲರೂ ಹೋದ ದಾರಿಯಲ್ಲಿ ನಾವೂ ಹೋದರೆ ಅದು ಚಾರಣ ಹೇಗಾಗುತ್ತದೆ ? ಬೆಟ್ಟದ ಇನ್ನೊಂದು ಬದಿಯಲ್ಲಿ ತುದಿಯವರೆಗೂ ಮುಳ್ಳುಕಂಟಿ, ಕುರುಚಲು, ಬಂಡೆಗಳೇ ತುಂಬಿ ಕಾಲಿಡಲು ತೆರಪಿರಲಿಲ್ಲ. ನಮಗಂತೂ ಅದೇ ಬೇಕಿತ್ತು. ಎಂಟು ಹುಡುಗರು, ಮೂವರು ಹುಡುಗಿಯರ ಜೈತ್ರಯಾತ್ರೆ ಮುಳ್ಳುಗಿಡಗಳಿಗೆ ಬಯ್ಯುತ್ತ ಆರಂಭವಾಯಿತು.


ತುಸು ಎತ್ತರಕ್ಕೆ ಏರುವಷ್ಟರಲ್ಲೇ ನಮ್ಮ ಗುಂಪಿನ ಹುಡುಗಿಯರ ಪಾದಾರವಿಂದಗಳು ಮುಳ್ಳು ತರಚಿ ರಕ್ತರಂಜಿತವಾಗಿ ಕಂಗೊಳಿಸಿದವು. ಅವರ ಸುಕೋಮಲವಾದ ಮುಖದ ಮೇಲೆಲ್ಲ ಮುಳ್ಳುಗಳು ಹರಿದಾಡಿ ಮುತ್ತಿಕ್ಕಿ ನಮ್ಮಲ್ಲಿ ಈರ್ಷ್ಯೆ ಹುಟ್ಟಿಸದೆ ಇರಲಿಲ್ಲ. ಈ ಹುಡುಗಿಯರನ್ನು ಬಂಡೆ ಹತ್ತಿಸುವ ನೆವದಲ್ಲಿ ಅವರ ಮೃದುಮಧುರ ಕುಸುಮಸಮವಾದ ಕರಕಮಲಗಳ ಹಾಗೂ ಪಾದಕಮಲಗಳ ಸ್ಪರ್ಶದ ಭಾಗ್ಯವು ನಮ್ಮದಾಯಿತು. ಬೆವರಿದುದರಿಂದ ತನುಗಂಧವೂ ತಂಗಾಳಿಯೂ ತೀಡಿತು.


‘ಬೆಂಗಳೂರ್ ಮಿರರ್’ನ ಶ್ರೀಧರ್ ವಿಡಿಯೋ ಕೆಮರಾ ಹಿಡಿದು, ‘ಹೀಗೆ ಬನ್ನಿ, ಹಾಗೆ ಬನ್ನಿ’ ಎಂದು ನಿರ್ದೇಶಿಸುತ್ತಾನಾವೆಲ್ಲಾ ಸಾಧ್ಯವಾದಷ್ಟೂ ಬಂಡೆಯ ಎಡೆಯಲ್ಲೂ ಕೊರಕಲಿನಲ್ಲೂ ಮುಳ್ಳುಗಿಡಗಳ ಮೇಲಿನಿಂದಲೂ ಮೈಕೈ ತರಚಿಸಿಕೊಂಡು ಪರಚಿಸಿಕೊಂಡೇ ಬರುವಂತೆ ನಿಗಾ ವಹಿಸಿದರು. ಇಷ್ಟೆಲ್ಲಾ ಮಾಡಿ, ಗುಡ್ಡದ ತುದಿ ಎಂದು ಭಾವಿಸಿದಲ್ಲಿ ಮೇಲೆ ಬಂದು ನೋಡಿದರೆ, ಬೆಟ್ಟ ಇನ್ನೂ ಅರ್ಧಾಂಶವೂ ಮುಗಿದಿರಲಿಲ್ಲ. ಅಲ್ಲಿಂದ ಬಳಿಕ ಬಂಡೆಗಳು ೯೦ ಡಿಗ್ರಿ ಕೋನದಲ್ಲಿ ನಿಂತಿದ್ದರಿಂದ ಅವುಗಳ ಮೇಲೆ ಏರುವಂತೆಯೂ ಇರಲಿಲ್ಲ. ಅನಿವಾರ್‍ಯವಾಗಿ ಪಕ್ಕಕ್ಕೆ ಬಂದು ಮಾಮೂಲಿ ಯಾತ್ರಿಕರು ನಡೆಯುವ ಮೆಟ್ಟಿಲುಗಳ ದಾರಿಯನ್ನೇ ಹಿಡಿದೆವು.


ಇದು ಬೆಂಗಳೂರು- ತುಮಕೂರು ರಸ್ತೆಯ ಪಕ್ಕದಲ್ಲಿರುವ ಸಿದ್ದರಬೆಟ್ಟ. ಗುಡ್ಡದ ತುದಿಯಲ್ಲಿ ಸಿದ್ದೇಶ್ವರ ಸ್ವಾಮಿಯ ಗುಡಿಯಿದೆ. ಗುಡಿಯೆಂದರೆ ಗುಡಿಯಲ್ಲ- ಚಪ್ಪರದಂತೆ ಹಾಸಿದ ಬಂಡೆಗಳ ನಡುವೆ ಪೂಜಿಸಲ್ಪಡುವ ಒಂದು ಕಲ್ಲು. ನಾವು ಹೋದ ದಿನ ಭಕ್ತರು ಬೆಟ್ಟ ಏರಿ ಬಂದು ದೇವರ ಮುಂದೆ ಕೋಳಿ, ಕುರಿ ಬಲಿ ಕೊಟ್ಟು ಬೆಟ್ಟದ ಕೆಳಗೆ ಕೊಂಡೊಯ್ದು ಅಡುಗೆ ಮಾಡಿ ಉಣ್ಣುತ್ತಿದ್ದರು. ದೇವರ ಮುಂದಿನ ನೆಲದ ಮಣ್ಣು ರಕ್ತದಿಂದ ತೊಯ್ದು ಕೆಸರಾಗಿತ್ತು. ಒಂದಿಬ್ಬರು ಕುಂತುಕೊಂಡು ನಿರಂತರವಾಗಿ ತಮಟೆ ಬಾರಿಸುತ್ತಿದ್ದರು. ಅಲ್ಲಿ ಪೂಜಾರಿಯಾಗಲೀ ಪೂಜೆಯಾಗಲೀ ಕಾಣಿಸಲಿಲ್ಲ. "ಬ್ರಾಂಬ್ರೂ ಲಿಂಗಾಯಿತ್ರೂ ಬಂದ್ರೆ ತರಕಾರಿ ಅಡುಗೆ ಮಾಡ್ಕೊಂಡೋಯ್ತಾರೆ. ಶೂದ್ರರು ಮರಿ, ಕೋಳಿ ಕೂದು ಉಣ್ತಾರೆ. ಗುರುವಾರ ಶನಿವಾರ ಜನ ಬರೋದು ಹೆಚ್ಚು" ಎಂಬ ವಿವರವೂ ಇಲ್ಲೇ ಸಿಕ್ಕಿತು.


ಸಿದ್ದೇಶ್ವರ ಸ್ವಾಮಿಯ ಆಚೆ ಪಕ್ಕದಲ್ಲೇ ‘ದರ್ಗಾ ದೇವರು’ ಇದ್ದರು. ಇದೂ ಕೂಡ ಮಸೀದಿಯಲ್ಲ. ಬಂಡೆಗಳ ಕೆಳಗೆ ಒಂದು ಗೋರಿಯಂಥ ರಚನೆ, ಹಸಿರು ಹೊದಿಕೆ, ಕಾಣಿಕೆ ಡಬ್ಬಿ- ಇಷ್ಟೆ. ಜನಪದೀಯ ಸಿದ್ದ ದೇವರೂ ಸಾಬರ ದೇವರೂ ಇಲ್ಲಿ ಏಟೋ ವರ್ಷಗಳಿಂದ ಅಕ್ಕಪಕ್ಕದಲ್ಲೇ ಕುಂತು ಮಾತಾಡಿಕೋತ ನಕ್ಕು ಮಲಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಇಲ್ಲಿ ಬಂದ ಹಿಂದೂಗಳೂ ಮುಸಲರೂ ತಾವು ಯಾವ ಜಾತಿಮತವೆಂಬುದನ್ನೂ ಮರೆತು ಇಲ್ಲಿರುವ ಎರಡೂ ದೇವರಿಗೆ ಕಾಯಿಕರ್ಪೂರ ಸಲ್ಲಿಸುತ್ತಾರೆ. ದರ್ಗಾದೇವರಿಗೆ ಕುಂಕುಮ ಹಚ್ಚಬೇಡಿರೆಂದೂ ಸಿದ್ದೇಶ್ವರನಿಗೆ ನಮಾಜು ಮಾಡಬೇಡಿರೆಂದೂ ಇನ್ನೂ ಯಾವ ತಲೆಮಾಸಿದ ಸಂಘಟನೆಯೂ ಇಲ್ಲಿ ಕ್ಯಾತೆ ತೆಗೆದಂತಿಲ್ಲ.


ಇಲ್ಲಿ ನಮಗೆ ಕಿರಣ ಎಂಬ ಅಲ್ಲಿನ ಪುಟ್ಟ ಹುಡುಗನೊಬ್ಬ ಗಂಟುಬಿದ್ದ. "ಇಲ್ಲೇ ಬೆಟ್ಟದ ಮ್ಯಾಲೆ ಕಲ್ಡಿಗಳದಾವೆ. ಗುಹೆ ತೋರುಸ್ತೀನಿ ಬನ್ನಿ" ಎಂದ. ಕುತೂಹಲದಿಂದ ಅವನನ್ನು ಹಿಂಬಾಲಿಸಿದ್ದಾಯಿತು. ಅಲ್ಲಿರುವ ಕಲ್ಲುಕಲ್ಲಿಗೂ ಏನೋ ಕತೆ ಕಟ್ಟಿ ನಮ್ಮನ್ನು ಯಾಮಾರಿಸಲು ನೋಡುತ್ತಿದ್ದ. ಒಂದು ಕಡೆ ಪಾಳು ಮಂಟಪವೊಂದರ ಮೇಲೆ ಬಿಳಲುಗಳನ್ನು ಬಿಟ್ಟುಕೊಂಡು ಕುಳಿತಿದ್ದ ಆಲದ ಮರವನ್ನು ತೋರಿಸಿ, "ಇದರೆಡೇಲಿ ನಾಣ್ಯ ಸಿಕ್ಕಿಸಿಬಿಟ್ಟು ಹೋದ್ರೆ ನಿಮ್ಮ ಆಶೆ ಇದ್ದಂಗೇ ಆಗ್ತದೆ" ಅಂದ. ಅಲ್ಲಿ ನಾಣ್ಯ ಸಿಕ್ಕಿಸಿದ ಗುರುತುಗಳಿದ್ದವು. ನಾವ್ಯಾರೂ ರೂಪಾಯಿ ಕಳೆದುಕೊಳ್ಳಲು ತಯಾರಿರಲಿಲ್ಲವಾದ್ದರಿಂದ ಅವನಿಗೆ ನಿರಾಶೆಯಾಯಿತು.


ಆಮೇಲೆ ಕಲ್ಡಿ ವಾಸಿಸುವ ಗುಹೆ ಅಂತ ಒಂದಷ್ಟು ಬಂಡೆಗಳ ಸಮೂಹ ತೋರಿಸಿದ. ಅಲ್ಲಿ ಕಲ್ಡಿಯೇನು, ಇಲಿ ಕೂಡ ಇರುವಂತೆ ಕಾಣಲಿಲ್ಲ. ಆದರೆ ಬಂಡೆಗೊಂದು ಕತೆ ಕಟ್ಟಿ ರಂಜಿಸುತ್ತಿದ್ದ ಈ ಹುಡುಗ ಮುಂದೆ ಒಬ್ಬ ಪ್ರತಿಭಾವಂತ ಕತೆಗಾರನಾಗುವ ಎಲ್ಲ ಸಾಧ್ಯತೆಯೂ ಕಂಡವು. ಆತನ ಚುರುಕುತನದಿಂದ ಖುಷಿಯಾಗಿ ನಾವು ದುಡ್ಡು ನೀಡದೆ ಇರಲಿಲ್ಲ.


ಬೆಟ್ಟದ ತುತ್ತ ತುದಿಯಲ್ಲಿ ಒಂದೆರಡು ಪಾಳು ಗುಡಿಗಳು, ಮಂಟಪಗಳೂ ಇದ್ದವು. ಇದೆಲ್ಲ ಒಂದು ಕಾಲದಲ್ಲಿ ತುಂಬ ಜನ ಓಡಿಯಾಡಿದ, ನೆಲೆನಿಂತ, ಪೂಜೆ ಸಲ್ಲಿಸಿಕೊಂಡ, ಕೀರ್ತಿ ಗಳಿಸಿಕೊಂಡ ಕಟ್ಟೋಣಗಳಾಗಿದ್ದಿರಬಹುದು. ಈಗ ಮಾತ್ರ ಅವುಗಳ ನಡುವಿನಿಂದ ಸೀಳಿಕೊಂಡು ಬರುವ ಗಾಳಿ ಪಾಳು ವಾಸನೆಯನ್ನೂ ಸ್ಮಶಾನದಿಂದ ಹೊರಬೀಳುವ ಸಿಳ್ಳಿನ ಶಬ್ದವನ್ನೂ ನೆನಪಿಸಿ ನಡುಗಿಸುತ್ತದೆ.


ಬೆಟ್ಟ ಇಳಿದು ಬರುವಾಗ ಪುಟ್ಟ ಪುಟ್ಟ ಮಕ್ಕಳೂ, ಮುಪ್ಪಾನು ಮುದುಕಿಯರೂ ಬೆಟ್ಟ ಹತ್ತಿ ಹೋಗುವುದು ಕಂಡಿತು. ಮುಖದ ಮೇಲೆ ನೂರಾರು ಸುಕ್ಕುಗಳನ್ನು ಧರಿಸಿ ಹಲವಾರು ಶತಮಾನಗಳಷ್ಟು ಹಳೆಯದಾಗಿರಬಹುದಾಗಿದ್ದ ಅಜ್ಜಿಯೊಬ್ಬಳು ತನ್ನನ್ನು ನಡೆಸುತ್ತಿದ್ದ ಮಗನಿಗೆ, "ನೀನು ಸಣ್ಣೋನಿದ್ದಾಗ..." ಅಂತ ಹಳೆಯ ಭೇಟಿಯ ಕತೆಯನ್ನು ನಮಲುತ್ತಿದ್ದಳು. ಅವನು ಕೋಳಿಯನ್ನು ತೂಗಾಡಿಸುತ್ತಾ "ಸಾಕು ನಡಿಯಬೇ" ಎನ್ನುತ್ತಿದ್ದ.
*

5 comments:

Anonymous said...

ok. I found an information here that i want to look for.

ರಾಜೇಶ್ ನಾಯ್ಕ said...

ಹರೀಶ್,
ಆ ಕಥೆಗಾರ ಹುಡುಗನನ್ನು ಬಣ್ಣಿಸಿದ ರೀತಿ ನಗು ಬರಿಸಿತು. ಸಿದ್ಧರ ಬೆಟ್ಟ ಕಲ್ಲಿನ ಬೆಟ್ಟದಂತೆ ತೋರುತ್ತಿದೆ. ಕುರುಚಲು ಕಾಡು ಇದೆಯೇ?

ಹಳ್ಳಿಕನ್ನಡ said...

ಬರಹ ಚೆನ್ನಾಗಿದೆ.
ನಾನೂ ಎರಡು ವರ್ಷಗಳ ಹಿಂದೆ ಸಿದ್ದರ ಬೆಟ್ಟಕ್ಕೆ ಚಾರಣ ಹೋಗಿದ್ದೆ.
"ದರ್ಗಾದೇವರಿಗೆ ಕುಂಕುಮ ಹಚ್ಚಬೇಡಿರೆಂದೂ ಸಿದ್ದೇಶ್ವರನಿಗೆ ನಮಾಜು ಮಾಡಬೇಡಿರೆಂದೂ ಇನ್ನೂ ಯಾವ ತಲೆಮಾಸಿದ ಸಂಘಟನೆಯೂ ಇಲ್ಲಿ ಕ್ಯಾತೆ ತೆಗೆದಂತಿಲ್ಲ." ಸರಿಯಾಗೇ ಹೇಳಿದ್ದೀರಿ. ಪರಸ್ಪರ ನಂಬಿಕೆ,ಸಹ ಬಾಳ್ವೆ ನಡೆಸುತ್ತಿರುವ ಮುಗ್ದ ಜನರಲ್ಲಿ ಧರ್ಮದ ಅಫೀಮು ತಿನ್ನಿಸಿ, ಮತ್ತಿನಿಂದ ಕಾದಾಡುವಂತೆ ಮಾಡುವವರಿಂದ ದೇಶವನ್ನು ರಕ್ಷಿಸಬೇಕಿದೆ.
-ಮಂಜುನಾಥ ಸ್ವಾಮಿ

ಹರೀಶ್ ಕೇರ said...

ಥ್ಯಾಂಕ್ಸ್
ರಾಜೇಶ್, ಮಂಜುನಾಥ್.
ರಾಜೇಶ್,
ಅಂಥ ಕಡಿದಾದ ಬೆಟ್ಟವೇನೂ ಅಲ್ಲ. ಕೆಳಗೆ ಕುರುಚಲಿದೆ. ಮಾಮೂಲಿ ದಾರಿ ತೊರೆದು ಹೋದರೆ ಥ್ರಿಲ್ಲು !
- ಹರೀಶ್ ಕೇರ

ಆಲಾಪಿನಿ said...

good. ಸಕತ್ ಎಂಜಾಯ್ ಮಾಡಿದ ಹಾಗಿದೆ-writeup ನೋಡಿದ್ರೆ. ಹೊಟ್ಟೆಕಿಚ್ಚೂ ಆಗ್ತಿದೆ :)