Friday, August 22, 2008

ಪತ್ರಗಳಲ್ಲಿ ಕಂಡ ಚೆಕಾವ್


ಆಂಟನ್ ಪಾವ್ಲೊವಿಚ್ ಚೆಕಾವ್(೧೮೬೦-೧೯೦೪) ರಷ್ಯಾದ ಬಹುದೊಡ್ಡ ಕತೆಗಾರ. ತನಗಿಂತ ಕಿರಿಯರಿಗೆ, ಓರಗೆಯ ಬರಹಗಾರರಿಗೆ ಆತ ಬರೆಯುತ್ತಿದ್ದ ಪತ್ರಗಳಲ್ಲಿ ಕತೆ ಕಟ್ಟುವ ಕಲೆಯ ಬಗ್ಗೆ ಆಗಾಗ ವಿವರಿಸಿದ್ದನ್ನು ಕಾಣುತ್ತೇವೆ. ಮ್ಯಾಕ್ಸಿಂ ಗಾರ್ಕಿಯಂಥ ಕಾದಂಬರಿಕಾರನಿಗೆ ಈತ ಮಾರ್ಗದರ್ಶನ ನೀಡಿದ್ದ ಎಂಬುದಿಲ್ಲಿ ಉಲ್ಲೇಖಾರ್ಹ.

ಅಂಥ ಕೆಲವು ಬರಹಗಳು ಇಲ್ಲಿವೆ. ಇಂದಿಗೆ ಇವು ತುಂಬ ಸರಳವಾದ, ನಾವು ಈಗಾಗಲೇ ತಿಳಿದುಕೊಂಡಿರುವ ಸೂತ್ರಗಳಂತೆ ಕಾಣಬಹುದು. ಆದರೆ ಚೆಕಾವ್ ಇವುಗಳನ್ನು ೧೮೮೦ರಷ್ಟು ಹಿಂದೆಯೇ ಹೇಳಿದ್ದ ಎಂಬುದನ್ನಿಲ್ಲಿ ನೆನೆಯಬೇಕು.

ವಿವರಗಳು

ಕತೆಯ ಮೊದಲ ಭಾಗದಲ್ಲಿ ಗೋಡೆಯ ಮೇಲೆ ಒಂದು ಗನ್ ಕಾಣಿಸಿಕೊಂಡರೆ, ಕತೆಯ ಕೊನೆಗೆ ಅದು ಗುಂಡು ಉಗುಳಬೇಕು.

ನನಗೆ ಅನ್ನಿಸುವಂತೆ, ಪ್ರಕೃತಿಯ ವರ್ಣನೆಗಳು ಆದಷ್ಟೂ ಚಿಕ್ಕದಾಗಿ, ಸಂದರ್ಭಕ್ಕೆ ಒದಗುವಂತೆ ಬರಬೇಕು. “ಅಸ್ತಮಿಸುತ್ತಿರುವ ಸೂರ್‍ಯ, ಕಪ್ಪಿಡುತ್ತಿರುವ ಸಮುದ್ರದ ಅಲೆಗಳ ನಡುವೆ ಮುಳುಗುತ್ತಿದ್ದ , ಹೊಂಬಣ್ಣದ ಕಿರಣಗಳು ಚೆಲ್ಲಾಡಿದ್ದವು" ಮುಂತಾದ ತೀರಾ ಸಾಮಾನ್ಯ, ಬಳಸಿ ಸವಕಲಾದ ವರ್ಣನೆಗಳನ್ನು ತಪ್ಪಿಸಿ. ನಿಸರ್ಗದ ಬಣ್ಣನೆಯ ಹೊತ್ತಿನಲ್ಲೂ ತುಂಬಾ ಸೂಕ್ಷ್ಮ ವಿವರಗಳನ್ನು ಬಳಸಬಹುದು. ಅದು ಹೇಗಿರಬೇಕೆಂದರೆ, ಓದಿ ಬದಿಗಿಟ್ಟು ಕಣ್ಮುಚ್ಚಿ ಕಲ್ಪಿಸಿಕೊಂಡರೆ ಅದು ಒಟ್ಟು ಸಂದರ್ಭ ನೆನಪಾಗಬಲ್ಲಂತಿರಬೇಕು. ಉದಾಹರಣೆಗೆ, ಬೆಳದಿಂಗಳ ರಾತ್ರಿಯ ಕಲ್ಪನೆಯನ್ನು ಈ ಬಗೆಯ ವಿವರಗಳಿಂದ ಕಟ್ಟಿಕೊಡಬಹುದು- ‘ನೀರಿನ ಮೇಲೆ ತೇಲುತ್ತಿದ್ದ ಬಾಟಲಿಯ ಚೂರು ನಕ್ಷತ್ರದಂತೆ ಮಿನುಗಿತು, ದೂರದಲ್ಲಿ ತೋಳದ ಕಪ್ಪು ನೆರಳು ಚೆಂಡಿನಂತೆ ಉರುಳಿಹೋಯ್ತು...’ ಇತ್ಯಾದಿ. ಮನಶ್ಶಾಸ್ತ್ರದ ದೃಷ್ಟಿಯಿಂದಲೂ ವಿವರಗಳು ಬೇಕು. ದೇವರು ನಿಮ್ಮನ್ನು ಕ್ಲೀಷೆಗಳಿಂದ ಕಾಪಾಡಲಿ !

ಕತೆಯ ಪಾತ್ರಗಳ ಮಾನಸಿಕ, ಆಧ್ಯಾತ್ಮಿಕ ವಿವರಗಳನ್ನೇನೂ ನೀವು ನೀಡಬೇಕಾಗಿಲ್ಲ. ಅದು ಅವರ ವರ್ತನೆಗಳಿಂದಲೇ ಹೊರ ಹೊಮ್ಮುವಂತಿರಬೇಕು. ಒಮ್ಮೆಗೇ ಹಲವಾರು ಪಾತ್ರಗಳನ್ನು ತರುವುದೂ ಬೇಡ. ಎಲ್ಲ ಗುರುತ್ವಬಲವೂ ಈ ಎರಡರ ನಡುವೆಯೇ ಇರುತ್ತದೆ- ಅವನು ಮತ್ತು ಅವಳು.

- ೧೮೮೬ ಮೇ ೧೦ರಂದು ಬರೆದ ಒಂದು ಪತ್ರ


ಕಲೆಗಾರನ ಕೆಲಸ

ಕಲೆಗಾರನೊಬ್ಬ ತನ್ನ ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಕಟೆಯಬೇಕು ಎಂಬ ನಿನ್ನ ವಾದವನ್ನು ನಾನು ಒಪ್ಪುತ್ತೇನೆ. ಆದರೆ, ‘ಸಮಸ್ಯೆಯ ಪರಿಹಾರ’ ಮತ್ತು ‘ಸಮಸ್ಯೆಯ ಸಮರ್ಪಕವಾದ ಮಂಡನೆ’- ಈ ಎರಡು ವಿಚಾರಗಳಲ್ಲಿ ನಿನಗೆ ಗೊಂದಲವಿದೆ. ಕಲೆಗಾರನಿಗೆ ಎರಡನೆಯದಷ್ಟೇ ಬೇಕಾಗಿರುವುದು.

- ಅಲೆಕ್ಸಿ ಸುವೊರಿನ್‌ಗೆ ಬರೆದ ಪತ್ರ, ೧೮೮೮ ಅಕ್ಟೋಬರ್ ೨೭


ಸಿದ್ಧಾಂತ

ನನ್ನ ಕತೆಯ ಸಾಲುಗಳ ಮಧ್ಯೆ ಸಿದ್ಧಾಂತವೊಂದನ್ನು ಹುಡುಕಲು ಯತ್ನಿಸುವವರನ್ನು ಕಂಡರೆ ನನಗೆ ಭಯ. ಇಂಥವರು ನಾನು ಉದಾರವಾದಿಯೋ, ಸಂಪ್ರದಾಯವಾದಿಯೋ ಎಂಬುದನ್ನು ಕಂಡುಹಿಡಿಯಲು ಯತ್ನಿಸುತ್ತಾರೆ. ನಾನು ಉದಾರವಾದಿಯೂ ಅಲ್ಲ, ಸಂಪ್ರದಾಯವಾದಿಯೂ ಅಲ್ಲ. ಸಂತನೂ ಅಲ್ಲ, ವಿಶಿಷ್ಟತಾವಾದಿಯೂ ಅಲ್ಲ. ನಾನು ಮುಕ್ತ ಕಲಾಕಾರನಲ್ಲದೆ ಬೇರೇನೂ ಆಗಲು ಬಯಸುವುದಿಲ್ಲ. ಆದರೆ ಅಂಥ ಶಕ್ತಿ ದೇವರು ನನಗೆ ನೀಡಿಲ್ಲ ಎಂಬುದು ವಿಷಾದಕರ.

- ಅಲೆಕ್ಸಿ ಲೆಷೆಯೇವ್‌ಗೆ ಬರೆದ ಪತ್ರ, ೧೮೮೮ ಅಕ್ಟೋಬರ್ ೪


ನ್ಯಾಯಾಶನಲ್ಲ, ಸಾಕ್ಷಿ

ನನ್ನ ಕೆಲವು ಕತೆಗಳಲ್ಲಿ ನಾನು ಏನು ಹೇಳಲು ಉದ್ದೇಶಿಸಿದ್ದೆ ಎಂದು ಕೇಳುವವರಿದ್ದಾರೆ. ಇಂಥ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ಬರೆಯುವುದು ನನ್ನ ಕಾಳಜಿ, ಬೋಸುವುದಲ್ಲ. ನಾನು ಯಾವುದರ ಬಗ್ಗೆ ಬರೆಯಬೇಕೆಂದು ಹೇಳಿ, ಬರೆಯುತ್ತೇನೆ. ಮೇಜಿನ ಮೇಲಿರುವ ಈ ಬಾಟಲಿಯ ಬಗ್ಗೆ ಬರೆಯಲು ಹೇಳಿ, ‘ಬಾಟಲಿ’ ಎಂಬ ಹೆಸರಿನ ಕತೆ ಬರೆದು ಕೈಗಿಟ್ಟುಬಿಡುತ್ತೇನೆ. ಪ್ರಾಮಾಣಿಕ ಅನುಭವ ವಿವರಗಳಿಂದ ಕೂಡಿದ ಪ್ರತಿಮೆಗಳು ಚಿಂತನೆಯನ್ನು ಸೃಜಿಸಬಲ್ಲವು, ಆದರೆ ಚಿಂತನೆಯು ಪ್ರತಿಮೆಯನ್ನಲ್ಲ. ದೇವರು, ಆಸ್ತಿಕತೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವುದು ಬರಹಗಾರನ ಕೆಲಸವಲ್ಲ. ಯಾರು ಯಾವಾಗ ಎಂಥ ಸಂದರ್ಭದಲ್ಲಿ ದೇವರ ಬಗೆಗೆ ಅಥವಾ ಆಸ್ತಿಕತೆಯ ಬಗೆಗೆ ಹೇಗೆ ಚಿಂತಿಸಿದರು, ಹೇಗೆ ನಡೆದುಕೊಂಡರು ಎಂಬುದನ್ನು ಹೇಳುವುದಷ್ಟೇ ನಮ್ಮ ಕೆಲಸ. ತನ್ನ ಪಾತ್ರಗಳ ನ್ಯಾಯಾಶನಾಗುವುದಲ್ಲ, ಪಕ್ಷಪಾತರಹಿತನಾದ ಸಾಕ್ಷಿಯಾಗುವುದು.

- ಅಲೆಕ್ಸಿ ಸುವೊರಿನ್‌ಗೆ ಬರೆದ ಪತ್ರ, ೧೮೮೮ ಮೇ ೩೦


ತಣ್ಣಗೆ ಹೇಳಿ

ದುಃಖಿಗಳು ಮತ್ತು ನಿರ್ಭಾಗ್ಯವಂತರ ಬಗ್ಗೆ ನೀವು ಬರೆಯುತ್ತಿದ್ದೀರಿ, ಓದುಗನಲ್ಲಿ ಅವರ ಬಗ್ಗೆ ಸಹಾನುಭೂತಿ ಉಕ್ಕಬೇಕಾಗಿದೆ ಎಂದಿಟ್ಟುಕೊಳ್ಳಿ. ಕತೆಯನ್ನು ತಣ್ಣಗೆ ಹೇಳಲು ಯತ್ನಿಸಿ. ಇನ್ನೊಬ್ಬರ ದುಃಖಕ್ಕೆ ಅದು ಹಿನ್ನೆಲೆಯಾಗಿ ಅದರಿಂದಲೇ ಪಾತ್ರದ ದುಃಖವು ಎದ್ದು ಕಾಣಿಸುತ್ತದೆ. ಅಂದರೆ ನಿಮ್ಮ ಪಾತ್ರದ ಬಿಕ್ಕಳಿಕೆಗೆ ನೀವು ನಿಟ್ಟುಸಿರು ಬಿಡಬಹುದಷ್ಟೇ. ಹೆಚ್ಚು ತಣ್ಣಗಿರಿ, ವಿವರಗಳಿಗೆ ನಿಷ್ಠರಾಗಿದ್ದಷ್ಟೂ ನೀವು ಹೆಚ್ಚು ಪರಿಣಾಮ ಬೀರಬಲ್ಲಿರಿ.

- ಲಿಡಿಯಾ ಅವಿಲೊವಾಗೆ ಬರೆದ ಪತ್ರ, ೧೮೯೨ ಏಪ್ರಿಲ್ ೨೯


ವಿಶೇಷಣವೇಕೆ ?

ಇದೊಂದು ಉಪದೇಶ: ನೀನು ಬರೆದದ್ದರ ಪ್ರೂಫ್ ನೋಡುವಾಗ ಅದರಲ್ಲಿರುವ ಗುಣವಾಚಕಗಳು ಹಾಗೂ ಕ್ರಿಯಾವಿಶೇಷಣಗಳನ್ನು ಎಷ್ಟು ಸಾಧ್ಯವೋ ಅಷ್ಟು ಕಿತ್ತುಹಾಕು. ಇವು ಎಂಥ ಅಡ್ಡಿಗಳೆಂದರೆ, ಇದರಿಂದ ಓದುಗ ಬರಹವನ್ನು ಬದಿಗಿಟ್ಟು ಎದ್ದು ಹೋಗುತ್ತಾನೆ.

“ಅವನು ಹುಲ್ಲಿನ ಮೇಲೆ ಕುಳಿತಿದ್ದ" ಎಂದು ನಾನು ಬರೆದರೆ ಅದು ಸ್ಪಷ್ಟವಾಗಿ ಅರ್ಥವಾಗುತ್ತದೆ ಮತ್ತು ಓದುಗನ ಲಕ್ಷ್ಯವನ್ನು ಕತ್ತರಿಸುವುದಿಲ್ಲ. “ಪಾದಚಾರಿಗಳು ಈಗಾಗಲೇ ಬೇಕಾದಷ್ಟು ಓಡಾಡಿ ತುಳಿದುಹಾಕಿದ್ದ ಹಸಿರು ಹುಲ್ಲಿನ ಮೇಲೆ ಎತ್ತರದ, ಸಪೂರ ಎದೆಯ, ಕೆಂಪು ಗಡ್ಡದ ಆ ಮನುಷ್ಯ ಆತಂಕದಿಂದ ಸುತ್ತಮುತ್ತಲನ್ನು ಗಮನಿಸುತ್ತ ಮೌನವಾಗಿ ಕುಳಿತಿದ್ದ"- ಹೀಗೆ ಬರೆದರೆ ಓದುವುದೂ, ಮೆದುಳನ್ನು ಒಂದೆಡೆ ಹಿಡಿದಿಡುವುದೂ ಕಷ್ಟಸಾಧ್ಯ. ಪ್ರಜ್ಞೆ ಇಷ್ಟೊಂದು ವಿವರವನ್ನು ಒಮ್ಮೆಲೇ ಖಂಡಿತ ಹಿಡಿದಿಡಲಾರದು.

ಮನುಷ್ಯನನ್ನು ತಕ್ಷಣವೇ ಆಕರ್ಷಿಸುವಂತೆ ಮಾಡುವುದೇ ಕಲೆ. ನೀನು ಸಹಜವಾಗಿಯೇ ಬರಹಗಾರ, ನಿನ್ನ ಆತ್ಮವೇ ಮೃದುವಾದುದು. ನಿಂದನೆ, ಕೂಗಾಟ, ಲೇವಡಿ, ಆಕ್ರೋಶ ನಿನ್ನ ಪ್ರತಿಭೆಗೆ ತಕ್ಕುದಲ್ಲ. ಆದ್ದರಿಂದ, ನಿನ್ನ ‘ಲೈಫ್’ ಕೃತಿಯ ಬರವಣಿಗೆಯಲ್ಲಿ ಅಲ್ಲಲ್ಲಿ ಕಾಣಿಸುವ ‘ಸೂಳೆಮಕ್ಕಳು’, ‘ಪಶುಗಳು’ ಮುಂತಾದ ವಿಶೇಷಣಗಳನ್ನೆಲ್ಲ ಇನ್ನೊಮ್ಮೆ ಪ್ರೂಫ್ ನೋಡುವಾಗ ತೆಗೆದುಹಾಕು.

- ಮ್ಯಾಕ್ಸಿಂ ಗಾರ್ಕಿಗೆ ಬರೆದ ಪತ್ರ, ೧೮೯೯ ಸೆಪ್ಟೆಂಬರ್ ೩


ವಿಮರ್ಶಕರು

ವಿಮರ್ಶಕರು ಎತ್ತುಗಳ ಮೈಮೇಲೆ ಹಾರಾಡುವ ಚಿಕ್ಕಾಡುಗಳಿದ್ದಂತೆ. ಎತ್ತು ತನ್ನ ಪಾಡಿಗೆ ತಾನಿದ್ದರೂ ಈ ನೊಣ ಅದರ ಮೇಲೆ ಹಾರಾಡುತ್ತ, ಗುಂಜಾರವ ಮಾಡುತ್ತ ಬೆನ್ನಿನ ಮೇಲೆ ಕುಳಿತು ಕುಟುಕುತ್ತದೆ. ಎತ್ತಿನ ಚರ್ಮ ಕಂಪಿಸುತ್ತದೆ, ಬಾಲ ಬೀಸುತ್ತದೆ. ನೊಣದ ಗೊಣಗಾಟ ಏನಿರಬಹುದು ? ಅಸ್ಥಿರವಾಗಿರುವುದು ಅದರ ಸ್ವಭಾವ. “ನೋಡು, ನಾನು ಜೀವಂತ ಇದ್ದೇನೆ. ನೋಡು, ನನಗೆ ನಿಂದಿಸುವುದು ಗೊತ್ತು, ನಾನು ಯಾರನ್ನು ಬೇಕಾದರೂ ಬಯ್ಯಬಲ್ಲೆ" ಎನ್ನುತ್ತದೆ.

ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಕತೆಗಳ ಬಗ್ಗೆ ಬರುತ್ತಿರುವ ವಿಮರ್ಶೆಗಳನ್ನು ಓದುತ್ತಲೇ ಇದ್ದೇನೆ. ಯಾವುದರಲ್ಲೂ ನೆನಪಿಡಬಹುದಾದ ಒಂದೇ ಒಂದು ಸಾಲು, ಒಳ್ಳೆಯ ಒಂದು ಸಲಹೆ ನನಗೆ ಸಿಕ್ಕಿಲ್ಲ. ಹ್ಹಾ, ನನ್ನ ಮೇಲೆ ಪ್ರಭಾವ ಬೀರಿದ ಒಂದು ಸಾಲು ನೆನಪಿದೆ, ಕಾಬಿಕೆವ್‌ಸ್ಕಿ ಬರೆದದ್ದು- “ಈ ಮನುಷ್ಯ ಕುಡಿದು ಗಟಾರದಲ್ಲಿ ಬಿದ್ದು ಸಾಯಲಿದ್ದಾನೆ" ಎಂದಾತ ಸರಿಯಾಗಿಯೇ ಭವಿಷ್ಯ ನುಡಿದಿದ್ದ !

- ಮ್ಯಾಕ್ಸಿಂ ಗಾರ್ಕಿಯ ‘ಆನ್ ಲಿಟರೇಚರ್’ ಕೃತಿಯಲ್ಲಿ ಉಲ್ಲೇಖ

3 comments:

ಆಲಾಪಿನಿ said...

ಹರೀಶ್‌, ನಿಜವಾಗಲೂ ಖುಷಿಕೊಟ್ಟವು ಈ ಪತ್ರಗಳು. ಓದುತ್ತ ಓದುತ್ತ ನಮ್ಮ ಬರೆವಣಿಗೆಯತ್ತ ತಿರುಗಿ ನೋಡುವಂತೆ ಮಾಡುವ ಶಕ್ತಿ ಈ ಪುಟ್ಟ ಪತ್ರಗಳಲ್ಲಿ ಅಡಗಿತ್ತು.ಮತ್ತೆ ಬರೀತಾ ಇರ್‍ರಿ ಹೀಗೆ.. ನಾವು ಕಾಯುತ್ತಿದ್ದೇವೆ

ಪ್ರಿಯಾ ಕೆರ್ವಾಶೆ said...

ಚೆಕಾವ್ ಬರಹಗಳ ಶಕ್ತಿ ಅದ್ಭುತ.ಆತನ ತಣ್ಣನೆಯ ಮಾರ್ಮಿಕ ಬರಹಗಳು ಬಹಳ ಕಾಡುತ್ತವೆ.ಬಹುಶಃ ಈ ಅಂಶದಿಂದಲೇ ಆತ ಭಿನ್ನವಾಗಿ ನಿಲ್ಲುತ್ತಾನೆ.

tumkurnaveed said...

harish,chekov na odalu nimma baraha olleya pravesha peethike.