‘ಗಾತಾ ರಹೇ ಮೇರಾ ದಿಲ್’ ಎಂಬ ಅವರ ಕೂಗಿಗೆ ಕಾಡು ಕಣಿವೆಗಳು ಸ್ಪಂದಿಸಿವೆ. ‘ದಿನ್ ಢಲ್ ಜಾಯೆ ಹಾಯೇ ರಾತ್ ನ ಜಾಯೆ...’ ಎಂದು ವಿಸ್ಕಿ ಸುರಿದುಕೊಳ್ಳುತ್ತ ಆರ್ತನಾಗಿ ಹಾಡುತ್ತಿದ್ದಾನೆ ಹೀರೋ. ಮುಹಮ್ಮದ್ ರಫಿಯ ಹಾಡಿನ ಮಧುರ ಕಂಪನದೊಂದಿಗೆ ತಟ್ಟುತ್ತಿರುವ ‘ಗೈಡ್’ನ ದುರಂತಕ್ಕೆ ಅಲ್ಲೆಲ್ಲೋ ದೂರದಲ್ಲಿ ನಲುಗಿದ್ದಾಳೆ ವಹೀದಾ ರೆಹಮಾನ್. ‘ವಹಾಂ ಕೌನ್ ತೇರಾ ಮುಸಾಫಿರ್’ ಎಂದು ತಾನರಿಯದ ಗಮ್ಯದೆಡೆಗೆ ಸಾಗುತ್ತಿದ್ದಾನೆ ನಾಯಕ. ‘ಮಾನಾ ಜನಾಬ್ ನೆ ಪುಕಾರಾ ನಹೀಂ’ ಎಂದು ಸೈಕಲ್ ಮೇಲೆ ನಾಯಕಿಯ ಬೆನ್ನು ಹತ್ತುತ್ತಿದ್ದಾನೆ ‘ಪೇಯಿಂಗ್ ಗೆಸ್ಟ್’. ‘ಫೂಲೋಂ ಕೆ ರಂಗ್ ಸೆ ದಿಲ್ ಕಿ ಕಲಂ ಸೆ’ ಎಂದು ಹಾಡಿ ಕುಣಿಯುವ ‘ಪ್ರೇಮ ಪೂಜಾರಿಯ’ ಉಲ್ಲಾಸಕ್ಕೆ ಮಕ್ಕಳೂ ಸ್ಪಂದಿಸುತ್ತಿವೆ.
ದೇವಾನಂದ್ ಎಂದ ಕೂಡಲೆ ಹೀಗೆ ಸಾಲು ಸಾಲು ನೆನಪುಗಳು.
ನಮ್ಮ ಪ್ರೇಕ್ಷಕನಿಗೆ ರಾಜ್‌ಕಪೂರ್‌ನ ಅಲೆಮಾರಿತನ ಇಷ್ಟ. ಶಮ್ಮಿ ಕಪೂರ್‌ನ ಧಾಳಾಧೂಳಿ ಇಷ್ಟ. ಶಶಿಕಪೂರ್‌ನ ಕಿಲಾಡಿತನ, ಅಮಿತಾಭ್ ಬಚ್ಚನ್‌ನ ನವಯುವಕನ ಸಿಟ್ಟು, ಧರ್ಮೇಂದ್ರನ ಅಬ್ಬರ... ಎಲ್ಲವೂ ಇಷ್ಟ. ಆದರೆ ದೇವಾನಂದ್‌ನ ಪ್ರಣಯ ಇದೆಯಲ್ಲ, ಅದು ಇದೆಲ್ಲಕ್ಕಿಂತ ಒಂದು ತೂಕ ಹೆಚ್ಚು.
೬೦ರ ದಶಕದ ಯುವಕರನ್ನು ಕೇಳಿ ನೋಡಿ, ಅವರೆಲ್ಲ ತಮ್ಮ ಪ್ರೇಮ ಪ್ರಕರಣಗಳಿಗೆ ‘ತೇರೆ ಮೇರೆ ಸಪ್ನೆ ಅಬ್ ಏಕ್ ರಂಗ್ ಹೈ’ ಎಂಬ ಗೈಡ್‌ನ ಹಾಡನ್ನು ಬಳಸಿಕೊಂಡಿರದೆ ಇರಲಿಕ್ಕಿಲ್ಲ. ಇಂಗ್ಲಿಷ್‌ನ ಗ್ರೆಗರಿ ಪೆಕ್ ಥರವೇ ವಿಶಾಲ ಭುಜ, ಉದ್ದನ್ನ ಮೂಗು, ಹಿಂದಕ್ಕೆ ಬಾಚಿದ ತಲೆಗೂದಲು, ತುಂಟಾಟ ಸೂಸುವ ಕಣ್ಣುಗಳ ಈ ಹೀರೋ ಒಂದು ಬಾರಿ ನಮ್ಮ ಕನಸಿನಲ್ಲಿ ಬರಬಾರದೆ ಎಂದು ಆ ಕಾಲದ ಹುಡುಗಿಯರು ಕನಸದೆ ಇದ್ದಿರಲಿಕ್ಕಿಲ್ಲ.
ಕಳೆದ ವರ್ಷವಷ್ಟೇ ಒಂದು ಕಾರ್‍ಯಕ್ರಮದಲ್ಲಿ ದೇವಾನಂದ್‌ನನ್ನು ತಮ್ಮ ಫಿಲಂನ ಡೈಲಾಗ್ ಹೇಳುವಂತೆ ಯಾರೋ ಕೇಳಿದ್ದರು. ಅದಕ್ಕಾತ ಹೀಗೆ ಉತ್ತರಿಸಿದ್ದ : ‘ಅದ್ಯಾವುದೂ ನನಗೆ ನೆನಪಿದ್ದಂತಿಲ್ಲ. ನಾನೇನು ಹೇಳಿದ್ದೇನೋ ಅದೆಲ್ಲ ಜಗತ್ತಿಗೆ ಸಂದಿದೆ. ಅದನ್ನು ಲೋಕ ನೆನಪಿಟ್ಟುಕೊಂಡಿದೆ, ನಾನು ಅದನ್ನಲ್ಲೇ ಬಿಟ್ಟು ಮುನ್ನಡೆದಿದ್ದೇನೆ...’
ಹೌದು, ದೇವ್‌ಜೀ... ನೀವು ಮುಂದೆ ನಡೆದು ಬಿಟ್ಟಿರಿ. ನಾವು ನಿಮ್ಮ ಡೈಲಾಗುಗಳನ್ನೂ ಹಾಡನ್ನೂ ಗುನುಗುತ್ತ ಇಲ್ಲೇ ಇದ್ದೇವೆ ಇನ್ನೂ !
ಈ ವರ್ಷ ಸೆಪ್ಟೆಂಬರ್‌ನಲ್ಲಿ ದೇವಾನಂದ್‌ಗೆ ೮೮ ವರ್ಷ ತುಂಬಿತ್ತು. ಅದಕ್ಕೊಂದು ಸಮಾರಂಭವನ್ನೂ ಮಾಡಲಾಗಿತ್ತು. ಬದುಕಿನ ಸಂಧ್ಯೆಯಲ್ಲಿದ್ದರೂ ಆತನ ಯೋಜನೆಗಳು ಹಲವಾರಿದ್ದವು. ತನ್ನ ಯಶಸ್ವಿ ಚಿತ್ರ ‘ಹರೇ ರಾಮ ಹರೇ ಕೃಷ್ಣ’ದ ಎರಡನೇ ಭಾಗ ತರುವ ಕನಸಿತ್ತು ಆತನಿಗೆ. ಕೊನೆಯ ಚಿತ್ರ ‘ಚಾರ್ಜ್‌ಶೀಟ್’ ತಯಾರಾಗಿ ಡಬ್ಬಾದಲ್ಲಿ ಕುಳಿತಿತ್ತು. ೨೦೦೫ರಲ್ಲಿ ‘ಮಿ.ಪ್ರೈಮ್ ಮಿನಿಸ್ಟರ್’ ಎಂಬ ಚಿತ್ರ ಬಂದಿತ್ತು. ತೊಡೆ ನಡುಗುತ್ತಿದ್ದರೂ ಅದರಲ್ಲಿ ಆತ ಪ್ರಧಾನಿ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ. ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ವಿಫಲವಾಗಿತ್ತು. ಆತನ ಇತ್ತೀಚಿನ ಚಿತ್ರಗಳು ಯವ್ವನದ ದಿನಗಳ ಪ್ರಣಯಚೇಷ್ಟೆಗಳನ್ನು ದಾಟಿ, ರಾಜಕೀಯ ಚಿಂತನೆಯ ಕಡೆಗೆ ತುಡಿದಿದ್ದವು. ಅದು ಆತನ ರೆಗ್ಯುಲರ್ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ.
ಯಾಕೆಂದರೆ ದೇವಾನಂದ್ ಅಂದರೆ ನಮ್ಮ ಮನದಲ್ಲಿ ಮೂಡುವ ಚಿತ್ರವೇ ಬೇರೆ. ಆತ ಎಂದೆಂದೂ ಚಿರಯವ್ವನಿಗ. ಆತನ ಓರಗೆಯ ನಾಯಕರಿಗೆ ವಯಸ್ಸಾಗಿರಬಹುದು. ನಾಯಕಿಯರ ಗಲ್ಲಗಳಲ್ಲಿ ಸುಕ್ಕುಗಳು ಮೂಡಿರಬಹುದು. ದೇವಾನಂದ್‌ನ ಯವ್ವನದ ಹದ ಆರುವುದೇ ಇಲ್ಲ. ಆತನ ಸಭ್ಯತೆಯ ಕೂದಲು ಕೂಡ ಕೊಂಕುವುದಿಲ್ಲ. ಒಂದಾದರೂ ಚಿತ್ರದಲ್ಲಿ ಆತನ ಬರಿ ಮೈ ನೋಡಿದ್ದೀರಾ ನೀವು ? ಆತ ಶರ್ಟ್ ಕಾಲರ್ ಕೆಳಗೆ ಸರಿಸಿದ್ದರೆ, ಮೇಲಿನ ಒಂದು ಬಟನ್ ಬಿಚ್ಚಿದ್ದರೆ ನಿಮ್ಮಾಣೆ. ಆತ ಸಿಕ್ಸ್ ಪ್ಯಾಕ್ ಅಲ್ಲ, ಅಂಗಸಾಧನೆ ಮಾಡಿರಲಿಕ್ಕಿಲ್ಲ, ಶತ್ರುಗಳನ್ನು ಹೊಡೆದುರುಳಿಸಿರಲಿಕ್ಕಿಲ್ಲ. ಆದರೆ ಆದರೆ ಆತನ ಅಭಿಮಾನಿಗಳು ಎಂದೂ ಆತನನ್ನು ತೊರೆದು ಹೋಗಲೇ ಇಲ್ಲ.
ದೇವ್ ದಾದಾನ ಪ್ರಣಯ ಜೀವನ ಮೂರ್ನಾಲ್ಕು ಚೆಲುವೆಯರೊಂದಿಗೆ ತಳುಕು ಹಾಕಿಕೊಂಡಿದೆ. ಅದರಲ್ಲಿ ಸುರೈಯಾ, ಜೀನತ್ ಅಮಾನ್ ಮುಂತಾದವರೆಲ್ಲ ಬಂದುಹೋಗುತ್ತಾರೆ. ಸುರೈಯಾದಂತೂ ಮನ ಕದಡುವ ಕತೆ. ದೇವಾನಂದ್ ಫೀಲ್ಡ್‌ಗೆ ಬರುವಾಗಲಾಗಲೇ ಆಕೆ ಹೆಸರು ಮಾಡಿದ್ದಳು. ಇಬ್ಬರೂ ಆರು ಚಲನಚಿತ್ರಗಳಲ್ಲಿ ಒಟ್ಟಿಗೇ ನಟಿಸಿದರು. ಒಂದು ಹಾಡಿನ ಸನ್ನಿವೇಶದ ಚಿತ್ರೀಕರಣದ ಸಂದರ್ಭದಲ್ಲಿ ದೋಣಿಯೊಂದು ತಲೆಕೆಳಗಾದಾಗ, ಮುಳುಗುತ್ತಿದ್ದ ಸುರೈಯಾಳನ್ನು ದೇವಾನಂದ್ ರಕ್ಷಿಸಿದ್ದ. ಈ ಘಟನೆ ಅವರ ಪ್ರೇಮದ ರೂಪಕ ಎಂಬಂತಿತ್ತು. ಆದರೆ ಸುರೈಯಾ ಮುಸ್ಲಿಮಳಾಗಿದ್ದರಿಂದ ಅವಳ ಅಜ್ಜಿ ಈ ಸಂಬಂಧಕ್ಕೆ ತನ್ನ ವಿರೋಧ ವ್ಯಕ್ತಪಡಿಸಿದಳು. ದೇವ್ ಮೇಲೆ ಕಂಪ್ಲೇಂಟ್ ಕೂಡ ನೀಡಿದಳು. ಇಬ್ಬರೂ ಜತೆಗೆ ನಟಿಸುವುದೇ ಅಸಾಧ್ಯವಾಯಿತು. ಮುಂದೆ ಸುರೈಯಾ ಚಿತ್ರರಂಗದಿಂದಲೇ ಹಿಂತೆಗೆದಳು. ಜೀವನವಿಡೀ ಅವಿವಾಹಿತೆಯಾಗಿಯೇ ಉಳಿದಳು.
‘ಹರೇ ರಾಮ...’ ಚಿತ್ರದ ಯಶಸ್ಸಿನ ಬಳಿಕ ಜೀನತ್- ದೇವ್ ನಡುವೆ ಪ್ರಣಯ ಇದೆ ಎಂದು ಮಾಧ್ಯಮಗಳು ಬರೆಯತೊಡಗಿದವು. ಅದು ನಿಜ ಕೂಡ ಆಗಿತ್ತು. ಇಬ್ಬರೂ ನಿಕಟವಾಗುತ್ತಿದ್ದರು. ಒಂದು ದಿನ ತನ್ನ ಪ್ರೀತಿಯನ್ನು ಜೀನತ್‌ಗೆ ಹೇಳಲು ದೇವಾನಂದ್ ನಿರ್ಧರಿಸಿದ. ಅದಕ್ಕೆ ಮುಂಬಯಿಯ ತಾಜ್ ಹೋಟೆಲನ್ನು ಆಯ್ಕೆ ಮಾಡಿಕೊಂಡು ಜೀನತ್‌ಳನ್ನು ಅಲ್ಲಿಗೆ ಬರಹೇಳಿದ. ಆ ಸಂಜೆ ಆತ ಅಲ್ಲಿಗೆ ಹೋದಾಗ, ಆತನ ಪ್ರತಿಸ್ಪರ್ಧಿ ನಟನಾಗಿದ್ದ ರಾಜ್‌ಕಪೂರ್ ಜತೆ ಜೀನತ್ ನಿಕಟವಾಗಿರುವುದನ್ನು ಕಂಡ. ‘ನನ್ನ ಹೃದಯ ಒಡೆದು ಚೂರಾಯಿತು. ಏನೂ ಹೇಳದೆ ಅಲ್ಲಿಂದ ಬಂದುಬಿಟ್ಟೆ’ ಎಂದು ತನ್ನ ಆತ್ಮಚರಿತ್ರೆ ‘ರೊಮಾನ್ಸಿಂಗ್ ವಿತ್ ಲೈಫ್’ನಲ್ಲಿ ದೇವ್ ಬರೆದುಕೊಳ್ಳುತ್ತಾನೆ.
ದೇವಾನಂದ್ ‘ರೊಮ್ಯಾಂಟಿಕ್ ಹೀರೋ’ ಆಗಿದ್ದದ್ದು ಯಾಕೆಂದು ಈಗ ಅರ್ಥವಾಯಿತೆ ?
No comments:
Post a Comment