Wednesday, April 12, 2017

ಹಾಗೆ ಹೋದ ಜೀವವೇ ಹೇಳು ಬಂದ ಕಾರಣ




ಬಿಸಿಲಿನಲ್ಲಿ ಬೆವರುತ್ತ ಕೆಫೆಯ ಬಾಗಿಲು ತೆರೆದು ಒಳಬಂದದ್ದೇ, ಒಳಗಿನ ತಂಪಿಗೆ ಹಾಯೆನಿಸಿತು. ದೃಷ್ಟಿ ಹಾಯಿಸಿದೆ. ಒಳಗೆ ಒಂದು ಮೂಲೆಯ ಟೇಬಲ್‌ನಲ್ಲಿ ಅವಳು ಕೂತಿದ್ದಳು. ಐದು ವರ್ಷ ಹಿಂದೆ ನೋಡಿದಾಗ ಹೇಗಿದ್ದಳೋ ಹಾಗೇ ಇದ್ದಳು. ದೇವತೆಗಳಿಗೆ ಮಾತ್ರ ಸಾಧ್ಯವಾಗುವ ಒಂದು ಸಾವಧಾನದಿಂದ ಕೂತಿದ್ದಳು. ನನ್ನನ್ನು ನೋಡಿ ನಕ್ಕಳು. ಆ ನಗುವೇ ತಾನೆ ನನ್ನನ್ನು ಕೆಡವಿದ್ದು. ಬಿಟ್ಟು ಹೋಗುವಾಗಲೂ..
ಅವಳೆದುರಿನ ಕುರ್ಚಿ ಎಳೆದುಕೊಂಡು ಕೂತೆ. ವೇಟರ್ ಹತ್ತಿರ ಬಂದ. "ಎರಡು ಕೋಲ್ಡ್ ಕಾಫಿ’ ಎಂದಳು. ನಗು ಬಂತು. ಯಾವುದನ್ನೂ ಆಕೆ ಮರೆತಿಲ್ಲ. ಬೇಸಿಗೆಯಲ್ಲಿ ಇಬ್ಬರೂ ಹೀಗೆ ಕುಳಿತು ಕೋಲ್ಡ್ ಕಾಫಿ ಕುಡಿಯುತಿದ್ದುದನ್ನೂ. ಬೇಡ, ಬೇರೇನಾದರೂ ಆರ್ಡರ್ ಮಾಡೋಣವೆನಿಸಿತಾದರೂ ಸುಮ್ಮನಾದೆ. ಎಷ್ಟೋ ದಿನಗಳ ಬಳಿಕ ಕರೆದಿದ್ದಾಳೆ. ಅವಳಿಷ್ಟದಂತೆಯೇ ಆಗಲಿ. ಏನಾದರೂ ಮಾತಾಡಬೇಕು. ಎಲ್ಲಿಂದ ಶುರುಮಾಡಲಿ?
"ತುಂಬಾ ಬಿಸಿಲು ಅಲ್ವಾ?’
"ಅದು ಬಿಟ್ಟು ಬೇರೇನಾದ್ರೂ ಮಾತಾಡು. ನೀನೇನು ಇಂಗ್ಲೆಂಡಿನವನಾ, ವೆದರ್ ವಿಷ್ಯ ಮಾತಾಡಕ್ಕೆ?’
"ಐದು ವರ್ಷ ಹಿಂದೆ ಹೇಗಿದ್ದೆಯೋ ಈಗ್ಲೂ ಹಾಗೇ ಇದೀಯ’
"ಸ್ವಲ್ಪ ದಪ್ಪಗಾಗಿದೀನಿ ನೋಡು. ಗಂಡ ಯಾವಾಗ್ಲೂ ಹೇಳ್ತಿರ್ತಾನೆ. ಯಾರು ತಾನೆ ಮೊದಲಿದ್ದಂತೆ ಇರ್ತಾರೆ ಹೇಳು. ದಿನದಿನ ಗಾಯಗಳು ಆಗುತ್ತಲೇ ಇರುತ್ತಲ್ಲ ಮನುಷ್ಯನಿಗೆ. ದೇಹಕ್ಕೂ ಮನಸ್ಸಿಗೂ..’
"ನಿಂಗೇನು ಗಾಯ ಆಗಿದೆ ಈಗ?’
"ಈಗ ವಿಷ್ಯಕ್ಕೆ ಬರ್ತಿದಿ ನೀನು. ಏನೂ ಇಲ್ಲ. ಅದೇ ಸಮಸ್ಯೆ’
"ಅರ್ಥಾಗ್ತಿಲ್ಲ ನಂಗೆ’
"ನೀನು ಯಾವತ್ತು ನನ್ನ ಅರ್ಥ ಮಾಡಿಕೊಂಡಿದಿ ಹೇಳು. ಹೆಣ್ಣು ನದಿ ಇದ್ದಂತೆ ಕಣೋ ಮೂಢ. ಹರೀತಾ ಇರಬೇಕು. ನೀನು ಕಟ್ಟೆ ಹಾಕುತೀ ಅಂದ್ರೆ ಅದು ನಿಲ್ಲಲ್ಲ.’
"ಸರಿ ಈಗ ಏನಾಗಿದೆ?’
"ಶ್ರೀಮಂತಿಕೆ ಹೆಚ್ಚಾಗಿದೆ. ಗಂಡ ಪ್ರೀತಿಸ್ತಿದಾನೆ. ಮಕ್ಕಳು ಆರಾಮಾಗಿವೆ. ನೆಮ್ಮದಿ ವಿಷವಾಗಿದೆ ನಂಗೆ’
"ನಿನ್ನಂಥೋರನ್ನ ಬೇರೆ ನೋಡಿಲ್ಲ ನಾನು. ಐದು ವರ್ಷ ಹಿಂದೇನೂ ಇದೇ ಮಾತು ಹೇಳಿದ್ದಿ ಅಲ್ಲ? ಎಷ್ಟೊಂದು ಗಾಢವಾಗಿ ಪ್ರೀತಿ ಮಾಡ್ತಿದ್ದೆ ನಿನ್ನ ನಾನು. ಅದೊಂದು ದಿನ ಬಂದು ನಾನು ಕೊಟ್ಟಿದ್ದನ್ನೆಲ್ಲಾ ವಾಪಸು ನಂಗೇ ಕೊಟ್ಟು, ನಿನ್ನ ಪ್ರೀತಿ ನಂಗೆ ಉಸಿರುಗಟ್ಟಿಸ್ತಿದೆ ಅಂತ ಹೇಳಿ ಹೋದವಳು ಮತ್ತೆ ಇವತ್ತೇ ಕಾಣಿಸ್ಕೊಳ್ತಿರೋದು. ನಾನು ಉಸಿರುಗಟ್ಟಿಸೋನಾಗಿದ್ರೆ ನಿನ್ನ ಮದುವೆ ಆಗೋಕೆ, ನೆಮ್ಮದಿಯಾಗೋಕೆ ಬಿಡ್ತಿದ್ನ? ಹೇಳು’
ಅವಳ ಕಣ್ಣಂಚಿನಲ್ಲಿ ಸಣ್ಣಗೆ ನೀರು ಕಾಣಿಸಿತಾ, ಇಲ್ಲ ಅದು ಭ್ರಮೆ. ಇವಳಿಗೆ ಬದುಕು ಎಲ್ಲವನ್ನೂ ಕೊಟ್ಟಿದೆ. ಕೊರತೆಯ ಅರಿವಿಲ್ಲದೆ ಇರೋರು ಹೀಗೇ ಇರೋದು.
"ನೋಡಲ್ಲಿ ಆ ಮೂಲೆಯ ಟೇಬಲ್. ಅಲ್ಲೊಬ್ರು ಅಜ್ಜಿ ಕೂತಿದಾರೆ ನೋಡಿದ್ಯಾ?’
"ಹೌದು, ಯಾರವರು?’
"ಆಕೆಯ ಹೆಸರು ರೀನಾ. ವಯಸ್ಸು ಎಪ್ಪತ್ತು. ಪ್ರತಿದಿನ ಬರುತ್ತಾರೆ. ಮಧ್ಯಾಹ್ನದ ಹೊತ್ತು ಬಂದು ಒಂಟಿಯಾಗಿ ಕೂತಿರುತ್ತಾರೆ. ಎರಡು ಕಪ್ಪಿಗಿಂತ ಹೆಚ್ಚಿಗೆ ಕಾಫಿ ಕುಡಿಯೊಲ್ಲ. ಟೇಬಲ್ ಮೇಲೆ ತನ್ನ ಹಳೇ ಗೆಳೆಯ ಬರೆದ ಪತ್ರಗಳನ್ನು ಹರಡಿಕೊಂಡು ಕೂತಿರುತ್ತಾಳೆ. ಒಂದೊಂದಾಗಿ ಓದುತ್ತಾಳೆ. ಕೆಲವೊಮ್ಮೆ ತನ್ನ ಎದುರಿಗೆ ಯಾರೋ ಕೂತಿದಾರೆ ಎಂಬಂತೆ, ಯಾರ ಜತೆಗೋ ಮಾತಾಡುತ್ತಿರುತ್ತಾಳೆ.’
"ಒಂದು ಸ್ಕ್ರೂ ಲೂಸಾ?’
"ಅಲ್ಲ ಅದು ಪ್ರೀತಿ. ಆಕೆ ಯಾರ ಪತ್ರಗಳನ್ನು ಓದ್ತಿರ್ತಾಳೋ ಅವನು ಈಗಿಲ್ಲ. ಆಕೆಯ ಗಂಡನೂ ಈಗ ಇಲ್ಲ. ಒಮ್ಮೆ ಗಂಡನ ಜೊತೆಗೆ, ಒಮ್ಮೆ ಗೆಳೆಯನ ಜೊತೆಗೆ ಇಲ್ಲಿಗೆ ಬರೋಳಂತೆ. ಆಗೆಲ್ಲ ಹ್ಯಾಪ್ಪಿಯಾಗಿದ್ದಳು. ಇಬ್ಬರೂ ತೀರಿಹೋದರು. ಆಮೇಲೆ ಒಂಟಿಯಾಗಿ ಬರತೊಡಗಿದಳು. ಶ್ರೀಮಂತೆ. ಮಕ್ಕಳೆಲ್ಲ ಸೆಟಲ್ ಆಗಿದಾರೆ. ಆದರೆ ಅವರ ಜೊತೆಗೆ ಇರಲೊಲ್ಲೆ ಅನ್ನೋ ಸ್ವಾಭಿಮಾನ.’
"ಇದೆಲ್ಲ ನಿಂಗೆ ಹೇಗೆ ಗೊತ್ತು?’
"ಆಕೆಗೆ ನಿತ್ಯ ಸರ್ವ್ ಮಾಡುವ ವೇಟರ್ ಹೇಳಿದ. ಇಷ್ಟು ವಿವರ ಸಿಕ್ಕಿದರೆ ಮುಂದಿನದನ್ನು ನಾವೇ ಊಹಿಸಿಕೊಳ್ಳಬಹುದು ಅಲ್ವ? ಆಕೆ ಯಾವಾಗ್ಲೂ ಯಾಕೆ ಇಲ್ಲಿಗೆ ಬರ್ತಾಳೆ. ಅದೇ ಟೇಬಲ್‌ನಲ್ಲಿ ಯಾಕೆ ಕೂರ್ತಾಳೆ. ಯಾರ‌್ಜೊತೆ ಒಂಟಿಯಾಗಿ ಮಾತಾಡ್ತಾಳೆ. ಅದರಿಂದ ಆಕೆಗೇನು ಸಿಗುತ್ತೆ...’
"ಏನು ಸಿಗುತ್ತೆ?’
"ಏನಂದ್ರೆ, ಈಗ ನೀನು ಇದೀಯಲ್ಲ ಹಾಗೇ. ನಿಂಗೆ ನಿನ್ನ ಮಾತನ್ನು ಕೇಳಿಸ್ಕೊಳ್ಳುವವರು ಬೇಕಾಗಿದೆ. ನಾನು ನೆಮ್ಮದಿಯಾಗಿದೀನಿ ಅಂತ ತಾನೂ ನಂಬಿ, ಇನ್ನೊಬ್ಬರೂ ನಂಬೋ ಥರ ಮಾಡುವುದು ಬೇಕಾಗಿದೆ. ಆದರೆ ಆಳದಲ್ಲಿ, ನನ್ನ ಜೊತೆಗೆ ಇನ್ಯಾರೋ ಬೇಕು ಬೇಕು ಅಂತ ಅನಿಸ್ತಾ ಇರುತ್ತೆ. ಆದ್ರೆ ಸದಾ ಜೊತೆಗೇ ಇರೋರು ಮಾತ್ರ ಬೇಡವಾಗಿರುತ್ತೆ. ಆಕೆಗೆ ಪ್ರೀತಿಸುವ ಹೆಣ್ಣುಮಕ್ಕಳಿದ್ದಾರೆ. ಆದರೆ ಎಂದೋ ಸತ್ತುಹೋದ ಗೆಳೆಯ ಪಕ್ಕದಲ್ಲಿ ಬಂದು ಕೂತು ಮಾತಾಡುತ್ತಾನೆ ಅಂದುಕೊಂಡಿದಾಳೆ. ಅವನ ಜೊತೆ ಗಂಟೆಗಟ್ಟಲೆ ಮಾತಾಡುತ್ತಾಳೆ. ಈಗ ನೀನು ಕೂಡ, ಅಷ್ಟೊಂದು ಪ್ರೀತಿಸ್ತಾನಲ್ಲ ಆ ಗಂಡನನ್ನು ಬಿಟ್ಟು, ನಿನ್ನ ಪಾಲಿಗೆ ಎಂದೋ ಸತ್ತುಹೋಗಿರಬಹುದಾದ ನನ್ನನ್ನು ಹುಡುಕಿಕೊಂಡು ಬಂದಿದೀಯ. ಹೌದು ತಾನೆ?’
ಅವಳು ಸುಮ್ಮನೆ ಆ ಅಜ್ಜಿಯನ್ನೇ ದಿಟ್ಟಿಸತೊಡಗಿದಳು. ಆ ಅಜ್ಜಿ ಈಗ ಮಾತಿಲ್ಲದೆ ಕಾಫಿ ಹೀರುತ್ತ ಕೂತಿತ್ತು. ಹುಡುಗಿ ಈಗ ಆಲೌಟ್ ಆಗಿರಬಹುದು ಅನಿಸಿತು. ಅವಳು ಈಗ ಮತ್ತೆ ನನ್ನೊಡನೆ ಪ್ರೀತಿಗೆ ಬೀಳಬಹುದಾ? ತುಂಬ ಇಂಪ್ರೆಸ್ಸಿವ್ ಆಗಿ ಮಾತಾಡಿದೀನಿ ಅಲ್ವಾ?
"ಪರವಾಗಿಲ್ವೆ ರೊಮ್ಯಾಂಟಿಕ್ ಆಗಿ ಮಾತಾಡೋದು ಕಲ್ತಿದೀಯ. ಈ ಐದು ವರ್ಷದಲ್ಲಿ ಇನ್ಯಾರ‌್ಯಾರು ನಿನ್ನ ಜೀವನದಲ್ಲಿ ಬಂದು ಹೋದರು ಹೇಳು. ಹೆಂಡ್ತಿ ಏನ್ ಮಾಡ್ತಿದಾಳೆ, ರೊಮ್ಯಾಂಟಿಕ್ಕಾಗಿದಾಳಾ, ಬೋರಿಂಗಾ? ನಾನು ಸಿಗ್ತೀನಿ ಅಂತ ಹೇಳಿದಾಗ ಓಡಿ ಬಂದಿದೀಯ ಅಂದ್ರೆ...’ ಅರ್ಧಕ್ಕೆ ನಿಲ್ಲಿಸಿದಳು.
ಹುಚ್ಚು ಹುಡುಗಿ. ಏನು ಹೇಳಲಿ ಇವಳಿಗೆ. ಕೆಲವು ಗಾಯಗಳು ಒಣಗುವುದಿಲ್ಲ. ಜೀವಮಾನದುದ್ದಕ್ಕೂ ಹಸಿಹಸಿಯಾಗಿರುತ್ತವೆ. ಮತ್ತೆ ಇವುಗಳ ಬಗ್ಗೆ ಕೂಡ ನಾವು ತಮಾಷೆ ಮಾಡುತ್ತ ಜೋಕ್ ಮಾಡುತ್ತ ಹಾಯಾಗಿರಬಹುದು. ಯಾವುದೇ ಪಾಪಪ್ರಜ್ಞೆ ಕಾಡದಂತೇ ಇರಲು ಅದೊಂದು ದಾರಿ ಕೂಡ ಅಂತ ಹೇಳಲೇ. ನೀನು ನೆಮ್ಮದಿಯಾಗಿರುವುದನ್ನು ನೋಡಿ ನನಗೆ ಹೊಟ್ಟೆಕಿಚ್ಚಾಗುತ್ತಿದೆ ಎನ್ನಲೇ. ನಾನು ನೆಮ್ಮದಿಯಾಗಿರುವುದು ಕೂಡ ಅವಳಲ್ಲಿ ಬೆಂಕಿ ಹಚ್ಚಿರಬಹುದು ಅಲ್ಲವೇ. ಆದರೆ ಇದನ್ನೆಲ್ಲ ಮಾತಿನಲ್ಲಿ ಹೇಳುವುದು ಹೇಗೆ.
"ಹೂಂ, ಮತ್ತೆ ಡೇಟಿಂಗ್ ಶುರು ಮಾಡೋಣ್ವಾ? ಎರಡು ದಿನ ರಜೆ ಹಾಕ್ತೀನಿ. ಊಟಿಗೆ ಹೋಗೋಣ’
"ಹೌದೌದು. ಗೊತ್ತಾದ್ರೆ ನನ್ನ ಗಂಡ ಸಾಯಿಸಿಬಿಡ್ತಾನೆ ಅಷ್ಟೆ. ಔಚ್, ಟೇಬಲ್ ಅಡಿಯಿಂದ ಕಾಲು ತಾಗಿಸೋದು ನೀನಿನ್ನೂ ಬಿಟ್ಟಿಲ್ವಾ?’
"ಇಲ್ಲ ಕಣೆ, ಕಾಲು ಸರಿಸ್ತಿರಬೇಕಾದರೆ ತಾಗಿದ್ದು ಅದು.’
"ಸುಳ್ಳೇ ಹೇಳ್ತೀಯ, ನಂಗೊತ್ತಿಲ್ವ ನಿನ್ನ ಬುದ್ಧಿ?’
"ಅಗೋ ಜಗಳ ತೆಗೀತಿದೀಯ ನೀನು. ಅಂದೂ ಈ ಥರ ಜಗಳಾಡ್ತಿದ್ದೆ ಅಲ್ವ. ಅದೆಲ್ಲ ಇರ‌್ಲಿ. ನೀನ್ಯಾಕೆ ಅಂದು ನನ್ನ ಬಿಟ್ಟು ಹೋಗಿದ್ದು? ಈಗ್ಲಾದ್ರೂ ಹೇಳಿ ಹೋಗು ಕಾರಣ..’
"ಬಿಟ್ಟು ಹೋಗಿದ್ರೆ ಮತ್ತೆ ಯಾಕೆ ಬರ್ತಿದ್ದೆ. ಏನು ಇದೇ ಕೊನೇ ಭೇಟಿ ಅಂತ ಮಾಡಿದೀಯ. ಇಲ್ಲ, ಮತ್ತೆ ಮತ್ತೆ ಹೀಗೆ ಬಂದು ನಿನ್ನ ಕಾಡ್ತಾ ಇರ್ತೀನಿ. ಫೋನು ಗೀನು ಮಾಡಲ್ಲ ಮತ್ತೆ. ವಾಟ್ಸಾಪ್ ಕೂಡ ಮಾಡಲ್ಲ. ಗಂಡನಿಗೆ ಗೊತ್ತಾಗುತ್ತೆ. ಪ್ರತಿ ಶನಿವಾರ ಇಲ್ಲೇ ಸಿಗುತ್ತೀನಿ, ಓಕೇನಾ?’
ಏನು ಹೇಳಬೇಕೋ ಗೊತ್ತಾಗಲಿಲ್ಲ. ಅವಳ ಗಂಡನಿಗೆ ಗೊತ್ತಾಗದಂತೆ ಅವಳೂ, ನನ್ನ ಹೆಂಡತಿಗೆ ಗೊತ್ತಾಗದಂತೆ ನಾನೂ... ಇದೆಲ್ಲ ಎಲ್ಲಿ ಹೋಗಿ ಹೇಗೆ ಮುಗಿಯಬಹುದೋ ಊಹಿಸಲಾಗದು ಎನಿಸಿತು.
"ಯೋಚನೆ ಮಾಡು. ಐದು ನಿಮಿಷ, ಇಲ್ಲೇ ವಾಷ್‌ರೂಂಗೆ ಹೋಗಿ ಬರ್ತೀನಿ..’ ಎಂದು ಎದ್ದು ಹೋದಳು.
ನಾನು ಕಿಟಕಿಯಾಚೆ ಹೂಬಿಟ್ಟು ನಿಂತಿದ್ದ ಬೋಗನ್‌ವಿಲ್ಲಾ ಮರಗಳನ್ನು ನೋಡುತ್ತಾ ಕುಳಿತೆ. ಹೊರಗೆ ಕೆಲವು ಕಾರುಗಳು ಮೆಲ್ಲಗೆ ಸರಿಯುತ್ತಿದ್ದವು. ಸೋಮಾರಿ ಮಧ್ಯಾಹ್ನದಲ್ಲಿ ಮರಗಳ ಕೆಳಗೆ ನಿಂತ ಕೆಲವು ಮಂದಿ ಅಲ್ಲೇ ತೂಕಡಿಸುತ್ತಿದ್ದರು. ಐದು ನಿಮಿಷ, ಹತ್ತು, ಹದಿನೈದು ನಿಮಿಷ, ಆಕೆ ಬರಲಿಲ್ಲ.
ವೇಟರ್ ಬಿಲ್ ತಂದಿಟ್ಟ. ಹಣ ಕೊಟ್ಟೆ. ಟಿಪ್ಸ್ ಬಿಟ್ಟು ಚಿಲ್ಲರೆ ವಾಪಸ್ ತೆಗೆದುಕೊಳ್ಳುತ್ತಾ ಇರಬೇಕಾದರೆ ಆತ ಕೇಳಿದ..
"ಸರ್, ಒಬ್ರೇ ಕೂತು ಅಷ್ಟೊತ್ತಿಂದ ಮಾತಾಡ್ತಾ ಇದ್ರಲ್ಲ. ಏನಾದ್ರೂ ಬೇಜಾರಾಗಿತ್ತಾ...?’
ನಾನು ಅವನನ್ನೇ ದಿಟ್ಟಿಸಿದೆ. ಅಜ್ಜಿ ಕೂತಿದ್ದ ಖಾಲಿ ಟೇಬಲ್ಲನ್ನು ಈಗ ಯಾರೋ ಕ್ಲೀನ್ ಮಾಡುತ್ತಿದ್ದರು. 

No comments: