Saturday, September 6, 2008

ವ್ಯಾಸಂಗ !


ಕತೆಗಾರ ವ್ಯಾಸರು ತಮ್ಮ ಕೂದಲನ್ನು ಹಿಂದಕ್ಕೆ ಕೆದರಿ ಬಿಟ್ಟುಕೊಂಡು ಒಂದು ಕೋನದಿಂದ ನೋಡಿದಾಗ ಬೆಂದ್ರೆಯವರಂತೆ ಕಾಣಿಸುತ್ತಾ, ಪದೇ ಪದೇ ನನ್ನ ಕನಸಿನಲ್ಲಿ ಇಣುಕುತ್ತಿದ್ದರು. ನಾನು ಅಳುಕುತ್ತಾ “ವ್ಯಾಸರೇ ಇನ್ನೊಂದು ಕತೆ ಹೇಳಿ" ಎಂದು ವ್ಯಾಕುಲನಾಗಿ ಅವರ ಹಿಂದೆ ಅಲೆಯುತ್ತಿದ್ದೆ. ಅವರು ನನ್ನ ಕೈಯಿಂದ ತಪ್ಪಿಸಿಕೊಂಡು ದುರ್ಗಾಪುರದ ಸಂದುಗೊಂದುಗಳಲ್ಲಿ ಮಾಯವಾಗುತ್ತಿದ್ದರು.

ಇನ್ನೊಂದು ಕನಸಿನಲ್ಲಿ ಅವರು ಶಂಕರೀನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ವಿಘ್ನನಿವಾರಕ ಗಣಪತಿ ಬಂದು “ವ್ಯಾಸರೇ ನೀವು ಮಹಾಭಾರತ ಹೇಳುತ್ತೇನೆಂದು ಹೇಳಿ ಎಲ್ಲಿ ಮಾಯವಾದಿರಿ. ನಾನು ಅದನ್ನು ಬರೆಯಲು ಕಾದು ಕುಳಿತಿದ್ದೇ ಬಂತು. ಈಗ ಸಿಕ್ಕಿದಿರಲ್ಲಾ ಕತೆ ಹೇಳಿ" ಎಂದು ಬೆನ್ನು ಹತ್ತಿದ. ವ್ಯಾಸರು ಗಾಬರಿಯಾಗಿ, “ಮಾರಾಯ ನಾನು ಮಹಾಭಾರತದ ವ್ಯಾಸನಲ್ಲ. ನನ್ನ ಭಾರತವೇ ಬೇರೆ, ನನ್ನ ಭಾರಗಳೇ ಬೇರೆ, ನನ್ನ ಕತೆಗಳೇ ಬೇರೆ. ನನ್ನ ದುಸ್ವಪ್ನಗಳನ್ನು ನೀನು ಬರೆಯಲಾರೆ" ಎಂದು ಗಣೇಶನಿಂದ ಪಾರಾಗಲು ದಾರಿ ಹುಡುಕುತ್ತಾ ಇದ್ದರು.

ಐದಾರು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನನ್ನ ಕವನ ಸಂಕಲನ ಅವರ ಕೈಗೆ ಸಿಕ್ಕಿ, ‘ಕೇರನ ಕವನಗಳು ಚೆನ್ನಾಗಿವೆಯಲ್ಲಾ’ ಎಂದು ಅವರಿವರ ಬಳಿ ಹೇಳಿ, ಪತ್ರ ಬರೆದಿದ್ದರು. ಆಮೇಲೆ ಹೇಗೋ ನನ್ನ ಪೋನ್ ನಂಬರ್ ಸಂಪಾದಿಸಿಕೊಂಡು ಒಂದು ಮಧ್ಯಾಹ್ನ ರಿಂಗ್ ಮಾಡಿದ್ದರು. ನಾನು ವ್ಯಾಸರ ಫೋನೆಂದರಿಯದೆ ರಿಸೀವ್ ಮಾಡಿ, ಅವರು ಪರಿಚಯ ಮಾಡಿಕೊಂಡು ಮಾತಾಡಿದಾಗ ದಂಗಾಗಿ ಹೋಗಿದ್ದೆ. “ಚೆನ್ನಾಗಿ ಬರೆದಿದ್ದಿ ಮಾರಾಯ ಇನ್ನೂ ಬರಿ. ನಿನ್ನ ‘ಪಾಪ’ ಕವನ ತುಂಬಾ ಇಷ್ಟವಾಯಿತು" ಅಂತೆಲ್ಲಾ ಹೇಳಿ, ಪದ್ಯದ ಸಾಲು ಸಾಲುಗಳನ್ನೂ ಕೋಟ್ ಮಾಡಿ ನಾನೇ ಪಾಪಿ ಅನ್ನಿಸುವಂತೆ ಮಾಡಿದ್ದರು. ಅಂಥವರ ಜತೆ ನಾನೇನು ಮಾತಾಡಲಿ ಎಂದು ತೊದಲಿ ಫೋನ್ ಇಟ್ಟ ಬಳಿಕ ನಿಜಕ್ಕೂ ನಾನು ಪಾಪಿ ಅನ್ನಿಸಲು ಶುರುವಾಗಿತ್ತು.

ಆಮೇಲೆ ಅವರ ಸ್ವಗತದಂಥ ಧ್ವನಿಯ ಮಂದ್ರಸ್ಥಾಯಿಗೂ ಅವರ ಕತೆಗಳಿಗೂ ಏನೋ ಸಂಬಂಧವಿದೆ ಅನ್ನಿಸಲು ತೊಡಗಿತ್ತು. ಅಷ್ಟು ಹೊತ್ತು ನನ್ನ ಜತೆ ಅವರು ಮಾತಾಡಿದ್ದರೂ ಅದು ತಮಗೆ ತಾವೇ ಮಾತಾಡಿಕೊಂಡಂತೆ ಇತ್ತಲ್ಲವೆ ಅನ್ನಿಸಿ ಕುತೂಹಲವಾಗಿ, ಅವರ ಕತೆಗಳ ದಾರುಣ ಅನುಭವಗಳೂ ದುಸ್ವಪ್ನದಂಥ ಬದುಕುಗಳೂ ಚಿಂತಾಮಗ್ನ ಪಾತ್ರಗಳೂ ಸದಾ ಉರಿಯುವ ಭಾವಗಳೂ ನೆನಪಿಗೆ ಬಂದಿದ್ದವು.

ಆಮೇಲೆ ಅವರು ಆಗಾಗ ಫೋನ್ ಮಾಡುತ್ತಿದ್ದರು ; ನಾನೂ ಮಾಡುತ್ತಿದ್ದೆ. ಒಮ್ಮೊಮ್ಮೆ ತಿಂಗಳುಗಟ್ಟಲೆ ನಾನು ಫೋನ್ ಮಾಡಲು ಮರೆತಾಗ ಅವರೇ ಲೈನ್ ಹಚ್ಚುತ್ತ ನನ್ನಲ್ಲಿ ಪಾಪಪ್ರಜ್ಞೆ ಮೂಡಿಸುತ್ತಿದ್ದರು. ಮನೆಗೆ ಯಾವಾಗ ಬರುತ್ತೀರಿ ಎಂದು ದುಂಬಾಲು ಬೀಳುತ್ತಿದ್ದರು. ನಾನು ಅವರಿಂದ ಪಾರಾಗುವ ದಾರಿ ಹುಡುಕುತ್ತಿದ್ದೆ. ಅವರು ತಮ್ಮ ‘ಸ್ನಾನ’ ಕತೆ ಓದಿ ಆತ್ಮಹತ್ಯೆ ಮಾಡಿಕೊಂಡ ವಿರಾಗಿಯ ಬಗೆಗೂ, ತಾವಾಗಿ ತಮ್ಮ ಬಳಿ ಬಂದು ಕತೆ ಬರೆಸಿಕೊಂಡ ವಿಕ್ಷಿಪ್ತ ಪಾತ್ರಗಳ ಬಗೆಗೂ ಹೇಳಿ ಭಯವನ್ನೂ ಕುತೂಹಲವನ್ನೂ ಏಕಕಾಲದಲ್ಲಿ ಹುಟ್ಟಿಸುತ್ತಿದ್ದರು.

ಕಾಸರಗೋಡಿನಲ್ಲಿ ಮಿತ್ರ ಗೋಪಾಲಕೃಷ್ಣನ ಮದುವೆಗೆ ಹೋದಾಗ ನಿಜಕ್ಕೂ ಅವರು ಎದುರು ಬಂದೇ ಬಿಟ್ಟರು. ಮನೆಗೆ ಯಾಕೆ ಬರಲಿಲ್ಲ ಅಂತ ಬೆಂಡ್ ತೆಗೆಯುತ್ತಾರೆ ಅಂತ ಭಯವಾಗಿ ದೇವಸ್ಥಾನದ ಸುತ್ತ ಸುತ್ತಿ ಪರಾರಿಯಾಗುವ ಹುನ್ನಾರ ಮಾಡಿದರೆ ಅದನ್ನೆಲ್ಲ ವಿಫಲಗೊಳಿಸಿ ನಗುತ್ತಾ ಎದುರಿಗೆ ಬಂದು ಹಿಡಿದುಕೊಂಡೇ ಬಿಟ್ಟರು. ನೂರಾರು ವರ್ಷಗಳ ಆತ್ಮೀಯತೆ ಹೊಂದಿರುವವರ ಥರ ಗಂಟೆಗಟ್ಟಲೆ ಮಾತಾಡಿದರು.

ಒಂದು ಪತ್ರದಲ್ಲಿ ಅವರು ಹೀಗೆ ಬರೆದಿದ್ದರು : “...ಇತ್ತೀಚೆಗಿನ ಕವಿಗಳು ಎಂದರೆ ನನಗೆ ತುಂಬಾ ಇಷ್ಟ. ಸಂಧ್ಯಾದೇವಿಯವರ ‘ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ’ಓದಿದೆ. ಹಾಡಲಾಗದ ಗಜಲ್‌ಗಳಂತೆ, ಹತಾಶೆಯೇ ತೃಪ್ತಿ ಎಂಬಂತೆ, ಕವಿತೆಗಳನ್ನು ಬರೆದಿದ್ದಾರೆ. ಕೆಲವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಸಿಕ್ಕಿದ್ದರು. ‘ನಿಮ್ಮ ಕೃತಿ ಓದಿದೆ. ರಾತ್ರಿಯಿಡೀ ಅಳುತ್ತಿದ್ದೆ’ ಎಂದರು. ಆಮೇಲೆ ಅನೇಕ ಪತ್ರಗಳನ್ನು ಬರೆದರು. ಮೀರಾ ಭಜನೆಗಳಂತಿರುವ ಈ ಕವಿತೆಗಳನ್ನು ಓದಿದರೆ ಮನಸ್ಸು ಅರಳುತ್ತಿರುತ್ತದೆ. ಬಾಡದ ಹೂವಿನಂತೆ. ನಿಮ್ಮ ಸಂಕಲನದಲ್ಲಿ ಜಯಂತ ಕಾಯ್ಕಿಣಿ ಮುನ್ನುಡಿ ನಿಮ್ಮನ್ನು ಸರಿಯಾಗಿ ಪರಿಚಯಿಸುತ್ತದೆ. ಜಯಂತ ನನ್ನ ಇನ್ನೊಂದು ಜೀವದ ಹಾಗೆ. ಅವರ ಒತ್ತಾಯದಿಂದ ನಾನು ಮತ್ತೆ ಬರೆಯಲಾರಂಭಿಸಿದೆ..."

ಹೀಗೆ ಕತೆಗಳು, ಪತ್ರಗಳು, ಮಾತುಗಳ ಮೂಲಕ ನನ್ನೊಳಗೆ ಬೆಳೆಯುತ್ತ ಹೋದ ವ್ಯಾಸರು ಆವತ್ತೊಮ್ಮೆ ಫೋನ್ ಮಾಡಿ “ನನ್ನ ಗೆಳೆಯರು, ನನಗಿಂತಲೂ ಸಣ್ಣವರೆಲ್ಲ ಒಬ್ಬೊಬ್ಬರೇ ಹೋಗುತ್ತಾ ಇದ್ದಾರೆ. ನಮ್ಮದೆಲ್ಲ ಆಗ್ತಾ ಬಂತು" ಎಂದಿದ್ದರು. “ಹಾಗೆಲ್ಲ ಹೇಳ್ಬೇಡಿ. ನಿಮಗಿಂತ ಮೊದಲೇ ನಾವು ಹೋದರೂ ಹೋಗ್ಬಹುದು" ಎಂದು ಚೇಷ್ಟೆ ಮಾಡಿ ಫೋನಿಟ್ಟಿದ್ದೆ. ನೀಗಿಕೊಳ್ಳುವುದಕ್ಕೆ ಎರಡು ದಿನ ಮುನ್ನ ಫೋನ್ ಮಾಡಿದ್ದರು. “ಚಿಕುನ್ ಗುನ್ಯಾ ಆಗಿದೆ ಮಾರಾಯ್ರೆ. ಗಂಟು ಗಂಟು ಬೇನೆ. ಎದ್ದು ನಡಿಲಿಕ್ಕೆ ಕೂಡುದಿಲ್ಲ" ಎಂದಿದ್ದರು. ಅದಾಗಿ ಎರಡು ದಿನಗಳಲ್ಲಿ ಸುದ್ದಿ ಬಂತು.

“ಮುನ್ನೂರಕ್ಕೂ ಹೆಚ್ಚು ಕತೆ ಬರೆದ ನಿಮಗೆ ವಿಮರ್ಶೆಯೂ ಸಿಗಲಿಲ್ಲವಲ್ಲಾ ಮಾರಾಯರೇ" ಎಂದು ಯಾರಾದರೂ ಹೇಳಿದರೆ ಒಂದು ಪೇಲವ ನಗೆ ಬಿಟ್ಟು ಬೇರೆ ಉತ್ತರ ಕೊಡದ ವ್ಯಾಸ ; ಯಾವ ಸಾಹಿತ್ಯ ಸಮ್ಮೇಳನದಲ್ಲೂ ಸಂವಾದಗಳಲ್ಲೂ ಭಾಗವಹಿಸದ ವ್ಯಾಸ ; ಸನ್ಮಾನ ಮಾಡುತ್ತೇನೆಂದು ಕರೆದರೆ ಬಾಂಬ್ ಕಂಡವರಂತೆ ಭಯಪಟ್ಟು ನಾಪತ್ತೆಯಾಗುವ ವ್ಯಾಸ ; ಚಿಕ್ಕಂದಿನಲ್ಲೇ ತಂದೆಯ ಕಗ್ಗೊಲೆಯಾದುದನ್ನು ಕಣ್ಣಾರೆ ಕಂಡು ಆ ನೆತ್ತರ ಕಲೆಗಳನ್ನು ಜೀವಮಾನದುದ್ದಕ್ಕೂ ಹೊತ್ತು ತಿರುಗಿದ ವ್ಯಾಸ ; ನನ್ನಂಥ ಚಿಕ್ಕವರನ್ನು ತಲೆ ಮೇಲೆ ಹೊತ್ತು ಮೆರೆಸಿದ ವ್ಯಾಸ ; ದುರ್ಗಾಪುರದಲ್ಲೂ ಶಂಕರೀನದಿಯಲ್ಲೂ ಇಡೀ ಜಗತ್ತಿನ ಮನುಷ್ಯರ ಆಳದಾಳದ ಹೊಯ್ಲುಗಳನ್ನು ಕಂಡ ವ್ಯಾಸ.

ನಾನು ಹೀಗೆಲ್ಲ ಬರೆದಿದ್ದೇನೆಂದು ಗೊತ್ತಾದರೆ ಅವರು ಖಂಡಿತ ನನ್ನ ಕನಸಿನಲ್ಲಿ ಬಂದು “ಇದೆಲ್ಲ ಎಂತದಕ್ಕೆ ಮಾರಾಯರೇ. ನೆಟ್ಟಗೆ ಒಂದು ಕತೆ ಬರಿಯಿರಿ ನೋಡುವ" ಎಂದು ತಾಕೀತು ಮಾಡಿ ಸುಮ್ಮನೆ ನಗುತ್ತಾ ಕೂರಲಿಕ್ಕುಂಟು.

12 comments:

sunaath said...

ವ್ಯಾಸರ ಕತೆಗಳನ್ನು ನಾನೂ ಓದಿ ಖುಶಿಪಟ್ಟಿದ್ದೇನೆ. ನಿಮ್ಮ ಲೇಖನದಿಂದ ಅವರ ವ್ಯಕ್ತಿತ್ವದ ಒಂದು ಮಗ್ಗಲು ತಿಳಿದಂತಾಯಿತು. ಧನ್ಯವಾದಗಳು.

Chamaraj Savadi said...

ಅದ್ಭುತ ಬರವಣಿಗೆ ಹರೀಶ್‌. ವ್ಯಾಸ ನನ್ನ ನೆಚ್ಚಿನ ಕತೆಗಾರರಲ್ಲಿ ಒಬ್ಬರು. ಕಾಲೇಜಿನ ಪ್ರಾರಂಭದ ವರ್ಷಗಳಲ್ಲಿ ಅವರ ಕತೆಯ ಹುಚ್ಚು ಹೊಕ್ಕಿತ್ತು. ಬಹುಶಃ ಇಪ್ಪತ್ನಾಲ್ಕು ವರ್ಷಗಳ ಹಿಂದೆ ಅವರ ಕತೆಯನ್ನು ಮೊದಲ ಬಾರಿ ಓದಿದ್ದೆ. ಈಗ ಓದಿದರೂ ಅದೇ ಪ್ರಭಾವ ಮನಸ್ಸಿನ ತುಂಬ.

ಸ್ವಗತದಂತೆ, ಕನವರಿಕೆಯಂತೆ, ಏನೋ ತೊಳಲಾಟದಂತೆ ಹೊರಬರುವ ನಿಮ್ಮ ಬರವಣಿಗೆ ನಿಜಕ್ಕೂ ವ್ಯಾಸರ ವ್ಯಕ್ತಿತ್ವವನ್ನು ಮುಕ್ಕಿಲ್ಲದಂತೆ ಕಟ್ಟಿಕೊಟ್ಟಿದೆ. ವ್ಯಾಸ ಅವರು ಇನ್ನಿಲ್ಲ ಎಂಬ ಸುದ್ದಿ ಬಂದಾಗ, ಮನಸ್ಸು ಮೊದಲು ಓದಿದ ದಿನಗಳಿಗೆ ಹೋಗಿತ್ತು. ಅದಿನ್ನೂ ಅಲ್ಲೇ ಉಳಿದಿದೆ. ಎಂದಾದರೂ ಒಂದಿನ ವ್ಯಾಸರ ಬಗ್ಗೆ ಬರೆದೇನು.

ಆಗ ನಿಮ್ಮ ಈ ಬರಹವೂ ಮನಸ್ಸಿನಲ್ಲಿ ಖಂಡಿತ ಸುಳಿಯುತ್ತದೆ ಎಂದು ಮಾತ್ರ ಹೇಳಬಲ್ಲೆ.

- ಚಾಮರಾಜ ಸವಡಿ

ಹರೀಶ ಮಾಂಬಾಡಿ said...

ವ್ಯಾಸರನ್ನು ಮತ್ತೆ ನೋಡಿದಂತಾಯಿತು...

ಆಲಾಪಿನಿ said...

ನಿಜ ಹೇಳಲಾ ಹರೀಶ್‌. ನನಗೆ ವ್ಯಾಸರ್‍ ಬಗ್ಗೆ ಪೂರ್ತಿ ಗೊತ್ತಾಗಿದ್ದು ಅವರು ತೀರಿದ ಬಳಿಕವೇ. ಆದರೆ ನಿಮ್ಮ ಹಾಗೇ ಎಷ್ಟೋ ಜನ ಬರೆದ ಲೇಖನ ಓದಿದ ಮೇಲೆಯೇ ಅವರ ಬಗ್ಗೆ ಗೊತ್ತಾಗಿದ್ದು. ಬೇಜಾರಾಗ್ತಿದೆ.

Anonymous said...

ತುಂಬಾ ಆಪ್ತವಾಗಿದೆ ಹರೀಶ್
ವ್ಯಾಸರು ಕಣ್ಮುಂದೆ ಬಂದರು
ಅವರ ಪ್ರೀತಿ ಅಗಾಧ ಮತ್ತು ಗಾಢ.
-ಜೋಗಿ

PRANJALE said...

thumba chennagide vyasara haage ee barahavoo ishta aaythu. thanks alot...

ಹಳ್ಳಿಕನ್ನಡ said...

ಒಮ್ಮೆ ವ್ಯಾಸರನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು. ಅದು ನನ್ನ ಕಲಿಗ್ ವಿದ್ಯಾರಶ್ಮಿ ಮದುವೆಯ ದಿನ. ಪೆರ್ಲದಿಂದ ವಿಟ್ಲದವರೆಗೂ ಬಸ್ ನಲ್ಲಿ ಜೊತೆಯಾಗಿ ಪ್ರಯಾಣಿಸಿದ್ದೆವು. ನಿರಂಜನರಬಗ್ಗೆ ಸಾಕಸ್ಟು ಮಾತನಾಡಿದ್ದೆವು. ಅವೆಲ್ಲ ನೆನಪು.

mruganayanee said...

so touchy.. ಓದಿ ಕಣ್ಗಳು ಒದ್ದೆ...

Anonymous said...

ವ್ಯಾಸರಿಗೆ ಎಷ್ಟೊಂದು ಅಭಿಮಾನಿಗಳು !
ಎಲ್ಲರಿಗೂ ಥ್ಯಾಂಕ್ಸ್.
- ಹರೀಶ್ ಕೇರ

ಕಾರ್ತಿಕ್ ಪರಾಡ್ಕರ್ said...

ಶಂಕರಿ ನದಿ,ಬೆಟ್ಟ ಮರೆತೆನೆಂದರೂ ಮರೆಯಲಿ ಹ್ಯಾಂಗ?
ಅವರ ಕತೆಗಳ ಕಡುಮೌನ ಅವರಷ್ಟೇ ಅಜ್ಞಾತವಾಗಿ ನಮ್ಮೊಳಗೆ ಉಳಿದು ಬಿಟ್ಟಿದೆ.

Anonymous said...

vyasa...oh!badukemba nigooda bettada yavudo parshwa guheyalli koothu 'yavudo divyada yathaneyalli 'badukidda yogiyalva harish? allindale hariyutthiddirabeku shankari nadi!adara kavalugaleega illi...nammedeyalli.... -dinesh kukkujadka

Anonymous said...

ಹರೀಶ್, ನಿಮ್ಮ ಹೆಸರು ಮೊದಲ ಬಾರಿ ಕೇಳಿದ್ದು ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ. ಅವತ್ತು ಒಂದಷ್ಟು ಮರಿಕವಿಗಳನ್ನು ಸೇರಿಸಿ ಒಂದು ಸಮಾರಂಭ ಮಾಡಲಾಗುತ್ತದೆ ಅಂತ ಅಶ್ವಿನಿ ಕೀರಿಕ್ಕಾಡು ಹೇಳಿದ ನೆನೆಪು. ಅದಕ್ಕೀಗ ಹಲವು ವರ್ಷಗಳು ಕಳೆದರೂ ನಿಮ್ಮನ್ನು ಭೇಟಿ ಮಾತ್ರ ಮಾಡಲಾಗಲಿಲ್ಲ. ಇಂದು ನೀವು ಸಿಕ್ಕಿದ್ದು ಅನಿರೀಕ್ಷಿತ ಸಂತೋಷ . ತುಂಬ ಆಪ್ತವಾಗಿ ಬರೆಯಬಲ್ಲ ನಿಮ್ಮ ಹಲವು ಬರಹಗಳನ್ನು ಓದಿದ್ದೇನೆ. ಅದೇ ಒರಿಜಿನಲ್ ಆಪ್ತತೆ 'ವ್ಯಾಸ' ರಲ್ಲಿ ಕೂಡ. ಅಂದ ಹಾಗೆ, ನಾನು 'ಶಮ' ಅಂತ. ಬೆಳ್ತಂಗಡಿಯ ನಂದಿಬೆಟ್ಟದ ಹುಡುಗಿ. ಸದ್ಯ ಬೆಂಗಳೂರಿನಲ್ಲಿ ಉದ್ಯೋಗಿಯಾಗಿ ಕಳೆದು ಹೋಗಿರುವಾಕೆ.