Friday, October 31, 2008

ಇಳೆಯ ಮೌನ, ಚಳಿಯ ಧ್ಯಾನ


ಬದುಕು ನಡೆಯುವುದು ವೇಗದಿಂದಲ್ಲ , ಸಾವಧಾನದಿಂದ ಎಂಬುದು ಲೋಕಕ್ಕೇ ಗೊತ್ತಾಗುವುದು ವರ್ಷದ ಈ ಕೊನೆಯ ಭಾಗದಲ್ಲಿ. ಇಬ್ಬನಿಗೀಗ ಮುಂಜಾನೆ ಸಂಜೆ ರಾತ್ರಿ ಸುರಿವ ಬಿಡುವಿಲ್ಲದ ಪಾಳಿ. ಮರಗಳು ಮೌನ, ನೆಲ ಮೌನ, ಹನಿ ಮೌನ, ಸೂರ್‍ಯ ಮೌನ, ಮುಗಿಲು ಮೌನ.

ಹಕ್ಕಿ ಗೂಡಿನೊಳಗೂ ಮುಂಜಾನೆಯ ಕಟಕಟ. ನಿತ್ಯ ಬೆಳ್ಳಿ ಮೂಡಿ ಕೊಂಚವೇ ಹೊತ್ತಿಗೆಲ್ಲ ಕವಕವ ಆರಂಭಿಸುತ್ತಿದ್ದ ಕಾಗೆಗಳು ಇನ್ನೂ ಯಾಕೆ ಎದ್ದಿಲ್ಲ ? ಅಂಗಳದಲ್ಲಿ ಹರಡಿದ ಅಡಕೆಯ ಮಧ್ಯೆ ಸುಳಿವ ಹುಳಗಳಿಗಾಗಿ ಹೊಂಚುವ ಕುಪ್ಪುಳು ಹಕ್ಕಿಗೆ ಇನ್ನೂ ಪೊದೆಯೊಳಗಿಂದ ಹೊರಡುವ ಮನಸ್ಸಿಲ್ಲ. ಸೂರಿನಡಿಯ ಗುಬ್ಬಚ್ಚಿ ಗೂಡಿನಲ್ಲಿ ಚಿಂವುಚಿಂವು ದನಿಗೆ ನಿದ್ದೆ ತಿಳಿದೇ ಇಲ್ಲ.

ಚಳಿಗಾಲ. ಜಗತ್ತು ಮೌನವಾಗಿ ಮಲಗಿ ನಿದ್ರಿಸುವ ಕಾಲ. ಕೊರಿಯಾದ ಚಿತ್ರಕಾರನೊಬ್ಬನ ಚಿತ್ರ ಹೀಗಿದೆ : ಒಂದು ಚುಮುಚುಮು ಮುಂಜಾನೆ ಪುಟ್ಟ ಹುಡುಗಿಯೊಬ್ಬಳು ಹರಕು ಕಂಬಳಿ ಹೊದ್ದು ಮುದುಡಿ ಮುದ್ದೆಯಾಗಿ ನಿರ್ಜನ ರಸ್ತೆಯಲ್ಲಿ ಏನನ್ನೋ ಹುಡುಕುತ್ತ ನಡೆಯುತ್ತಿರುವಳು. ಸುತ್ತ ಕವಿದ ಮಂಜು. ದೂರದಲ್ಲಿ ಮಿನುಮಿನುಗು ನಕ್ಷತ್ರಗಳಂತೆ ಪಟ್ಟಣದ ಬೀದಿ ದೀಪಗಳು. ಚುಕ್ಕಿಗಳು, ಕತ್ತಲು, ಮಂಜು. ಚಿತ್ರ ನೋಡುವವರನ್ನೂ ನಖಶಿಖಾಂತ ನಡುಗಿಸುವ ಚಳಿ.

ಚೀನಾದಲ್ಲಿ, ಜಪಾನಿನಲ್ಲಿ, ಇಂಗ್ಲೆಂಡಿನಲ್ಲಿ- ಚಳಿ ಹೇಗಿರುತ್ತದೆ ? ನಮ್ಮೂರಿನ ಚಳಿಯ ಹಾಗೇ ಇರುತ್ತದೆಯೆ ? ಚೀನಾದ ಚೆರ್ರಿ ಗಿಡಗಳ ಅಡಿಯಲ್ಲಿ ಉದುರಿದ ಎಲೆಗಳು, ಲಂಡನ್ನಿನ ಥೇಮ್ಸ್ ನದಿಯ ದಡದಲ್ಲಿ ಇಳಿಜಾರು ಚಾವಣಿಯ ಮೇಲಿನ ಹಿಮರಾಶಿ, ಜಪಾನಿನ ಸಮುರಾಯ್‌ನ ಉಸಿರಿನೊಂದಿಗೆ ಬೆರೆತು ಬರುವ ಮಂಜುಗಾಳಿ... ಅವರ ಬದುಕಿನೊಂದಿಗೆ ತಳುಕು ಹಾಕಿಕೊಂಡಂತೆ ನಮ್ಮ ಬದುಕು, ಜಾನಪದ, ಸಾಹಿತ್ಯ, ಪ್ರೀತಿ ಪ್ರಣಯಗಳಲ್ಲೂ ಚಳಿ ಹಾಸು ಹೊಕ್ಕಾಗಿದೆಯೆ ? ಚಳಿಯನ್ನು ನೆನೆಯುತ್ತ ಇದೆಲ್ಲ ಧ್ಯಾನದೊಳಕ್ಕೆ ಬರುವ ಬಗೆ ಹೇಗೆ !

ಲಾರಾ ಇಂಗೆಲ್ಸ್ ವೈಲ್ಡರ್ ಜೀವನ ಕತೆ ಓದಿದವರಿಗೆ ಗೊತ್ತು. ಚಳಿಯ ಸುಳಿಯಲ್ಲಿ, ಪ್ಲಮ್ ನದಿಯ ತೀರದಲ್ಲಿ, ಪ್ರಯರಿ ಹುಲ್ಲುಗಾವಲಿನಲ್ಲಿ, ಪಾಪಾ, ಮಮ್ಮಿ ಮತ್ತು ಲಾರಾ, ಮತ್ತು ಅಕ್ಕ ಮೇರಿ. ಬೀಸುವ ಹಿಮಗಾಳಿ. ಮುಸುಕುವ ಮಂಜಿನಿಂದ, ಯಮಚಳಿಯಿಂದ ತಪ್ಪಿಸಿಕೊಳ್ಳಲು ನೂರೆಂಟು ಹೊಂಚು ಹಾಕುವ ಜೀವಗಳು. ಬೆಚ್ಚಗಿಡುವ ಬೆಂಕಿಯ ಗೂಡಿಗೂ ಥಂಡಿ. ಹೊರಬಂದರೆ ಹಿಸುಕಿ ಸಾಯಿಸಲು ಕಾದಿರುವ ಚಳಿಗಾಳಿ. ಒಳಗೆ ಬದುಕಿನ ಹೋರಾಟ, ಹಾಡು, ಕತೆ.

ಈ ಹೋರಾಟ ಈಗಲೂ ನಿಜವಲ್ಲವೆ. ಇಂಥ ಚಳಿಯಲ್ಲಿ ಬೆಚ್ಚಗಿರುವ ಭಾಗ್ಯ ಎಷ್ಟು ಮಂದಿಗೆ ? ನಡುಕದಿಂದಲೇ ಸಾಯುವ ಮಂದಿ ಅದೆಷ್ಟಿಲ್ಲ. ಚಳಿ ಬದುಕಿಗೆ ಸವಾಲು ಹಾಕುತ್ತದೆ. ಬದುಕು, ಉಳಿಯುವ ಛಲದಿಂದ ಚಳಿಯನ್ನು ಎದುರಿಸುತ್ತದೆ.

ಮಲೆನಾಡಿನ ಚಳಿಗೆ ಅದರದೇ ಸೌಂದರ್‍ಯ. ಚಳಿ ಲೆಕ್ಕ ಹಾಕುವ ಕ್ರಮವೇ ಸೊಗಸು : ಒಂದು ಕಂಬಳಿ ಚಳಿ, ಎರಡು ಕಂಬಳಿ ಚಳಿ, ಮೂರು ಕಂಬಳಿ ಚಳಿ. ಇಷ್ಟು ಹೊತ್ತಿಗೆ ರಾಜಸ್ಥಾನದಿಂದ ಕಂಬಳಿ ಮಾರುತ್ತ ಬರುವ ಭಯ್ಯಾಗಳೂ ಪ್ರತ್ಯಕ್ಷ. ಅಡಕೆ ಸಿಪ್ಪೆ, ತೆಂಗಿನ ಸಿಪ್ಪೆ ಹಾಕಿ ಹೊಗೆಯೆಬ್ಬಿಸಿ, ನುಸಿ ಓಡಿಸಿ ಮನೆತುಂಬಾ ತುಂಬಿಕೊಳ್ಳುವ ಬೆಚ್ಚಗಿನ ಘಾಟು ಅಗ್ಗಿಷ್ಟಿಕೆಯೊಂದೇ ಈಗ ಪರಿಹಾರ. ಒಯ್ಯಪ್ರೆಯ ಈಜಿಚೇರಿನಲ್ಲಿ ಕೂತು ತೂಕಡಿಸುವ ಅಜ್ಜಯ್ಯನನ್ನೂ ಅದು ಬೆಚ್ಚಗಿಟ್ಟಿದೆ. ಬೆಳಕಿಗೆ ಪುಳಕಗೊಂಡು ಬಳಿಗೆ ಬಂದ ಹಾತೆಗಳು ಬೆಂಕಿಯಲ್ಲಿ ಕರಕಲಾಗುತ್ತಿವೆ.

ಸುತ್ತ ಕುಳಿತವರ ಕಣ್ಣಿನಲ್ಲಿ ಅದೆಷ್ಟು ಅಗ್ಗಿಷ್ಟಿಕೆಗಳು ಕುಣಿಯುತ್ತಿವೆ. ಒಂದೊಂದೇ ಕತೆಗಳು ಚಳಿ ಕಾಯಿಸುತ್ತಿರುವ ಒಕ್ಕಲಿನ ಕೆಲಸದವರ ಬಾಯಿಯಿಂದ ಹೊರಹೊಮ್ಮುತ್ತಿವೆ- ಚಳಿಗಾಲದ, ಮಳೆಗಾಲದ, ಥಂಡಿಯ, ಕಾಡಿನ ಕತೆಗಳು. ಮಲೆನಾಡಿನ ನಿಗೂಢ ಮಲೆಕಾನನಗಳಲ್ಲಿ ಅಲೆದು ಬಂದ ರರು ಅವರು. ಇಂಥ ಅದೆಷ್ಟು ‘ಐತ’ರು ಅದೆಷ್ಟು ‘ಪೀಂಚಲು’ಗಳನ್ನು ಮಲೆಗಳಲ್ಲಿ ನಡೆಸಿ ತಮ್ಮ ಬಿಡಾರಕ್ಕೊಯ್ದಿಲ್ಲ ! ಹುಲಿಗೂ ಹೆದರದ ‘ಹುಲಿಯ’ ಹೆಸರಿನ ನಾಯಿಗಳದೆಷ್ಟು ! ಆ ಕತೆಗಳನ್ನು ಬೆಂಕಿಯ ಬೆಳಕಿನಲ್ಲಿ ಕುಳಿತು ಐತ ಹೇಳಬೇಕು, ಕೇಳಿಸಿಕೊಳ್ಳುತ್ತ ಸೆರಗಿನ ಮರೆಯಲ್ಲಿ ಪೀಂಚಲು ನಗಬೇಕು. ಮಕ್ಕಳು ಕೇಳಬೇಕು.

ಕತೆಗಳನ್ನು ಹೇಳುವುದಕ್ಕೂ ಕೇಳುವುದಕ್ಕೂ ಇದು ಸಕಾಲ. ಪುಟ್ಟ ಮಕ್ಕಳನ್ನು ಮಡಿಲಲ್ಲಿ ಮಲಗಿಸಿಕೊಂಡಿರುವ ಕೃಶ ಶರೀರದ ಅಜ್ಜಿಯ ಒಡಲಿನಲ್ಲಿ ಅಷ್ಟೊಂದು ಕತೆಗಳೆಲ್ಲಿದ್ದವೊ ! ಕತೆ ಕೇಳುತ್ತ ಕೇಳುತ್ತ ಮಕ್ಕಳು ನಿದ್ದೆಯ ಮಡಿಲು ಸೇರುವಾಗ ಅಜ್ಜಿ ತುಟಿಗೆ ಬಂದ ಇನ್ನೊಂದಷ್ಟು ಕತೆಗಳನ್ನು ನಾಳೆಗೆ ಎತ್ತಿಟ್ಟುಕೊಳ್ಳುತ್ತಾಳೆ.

ಇಂಥ ನಾಳೆಗಳು ಬರುತ್ತಲೇ ಇರುತ್ತವೆ. ಕತೆಗಳು ಮಾಯಾಮೋಹಕ ಜಗತ್ತೊಂದನ್ನು ನಿರ್ಮಿಸುತ್ತಲೇ ಇರುತ್ತವೆ. ಮಕ್ಕಳ ಅಂತರಂಗದ ನೆರಳಿನಲ್ಲಿ ಬೆಳಕಿನ ಛಾಯಾಜಗತ್ತೊಂದು ತನ್ನನ್ನು ಕಟ್ಟಿಕೊಳ್ಳುತ್ತ ಬೆಳೆಯುತ್ತಿರುತ್ತದೆ.

ಮಾಂತ್ರಿಕ ವಾಸ್ತವವಾದದ ಹರಿಕಾರ ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ ಹೇಳುತ್ತಾನೆ : ಈ ಕತೆಗಳನ್ನು ಹೆಣೆಯಲು ನಾನು ಅಷ್ಟೇನೂ ಕಷ್ಟಪಟ್ಟಿಲ್ಲ. ನನ್ನಜ್ಜಿಗೆ ಇದು ಸಹಜವಾಗಿತ್ತು. ಆಕೆ ಇಂಥ ಕತೆಗಳ ಸಾಗರವೇ ಆಗಿದ್ದಳು. ಹಬ್ಬಿದ ಕರ್ರಗಿನ ಕತ್ತಲು ಮತ್ತು ದೆವ್ವದಂಥ ಚಳಿಯ ಮಧ್ಯೆ ಆಕೆ ಕತೆಗಳ ಲೋಕ ಕಟ್ಟುತ್ತ ಅದರೊಳಕ್ಕೆ ನಮ್ಮನ್ನು ಒಯ್ಯುತ್ತ ಸಮ್ಮೋಹನಗೊಳಿಸುತ್ತಿದ್ದಳು.

ಕತೆಯೊಂದು ಅಂತರಂಗದಲ್ಲಿರುತ್ತದೆ. ನಡುಗಿಸುತ್ತದೆ. ನಡುಗುವ ಚಳಿಗೆ ಗರ್ಭದಲ್ಲೇ ನಡುಗುತ್ತ ಮಿಡುಕುತ್ತ ಬೆಳೆಯುತ್ತದೆ. ಬೆಳಕು ಸಿಕ್ಕಿದೆಡೆ ಬಾಗಿ ಹೊರಚಾಚುತ್ತದೆ. ಚಳಿಗಾಲದ ಬೆಳಕೂ ಚಳಿಯ ಹಿಡಿತದಲ್ಲಿರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹುಟ್ಟುವ ಕತೆ ಮಧುರವಾಗಿರುತ್ತದೆ. ಚಳಿಯಲ್ಲಿ ಹುಟ್ಟುವುದು ಸೃಷ್ಟಿಯ ಕತೆ, ಬೆಳವಣಿಗೆಯ ಕತೆ.

ಬೇಸಿಗೆಯಲ್ಲಿ, ಉರಿವ ಸೆಖೆಯಲ್ಲಿ ಎಂಥ ಕತೆ ಹುಟ್ಟುತ್ತದೆ ಗೊತ್ತೆ ? ಆಲ್ಬರ್ಟ್ ಕಾಮೂನ ‘ಔಟ್‌ಸೈಡರ್’ನ ಕಥಾನಾಯಕ (ಅಥವಾ ದುರಂತನಾಯಕ?) ಉರಿವ ಬೇಸಗೆಯಲ್ಲಿ ಬೆವರುತ್ತ, ಸೆಕೆಗೆ ಬೆಂಕಿಯಾಗಿ, ಒಬ್ಬ ವ್ಯಕ್ತಿಯ ಕೊಲೆ ಮಾಡುತ್ತಾನೆ- ಉದ್ದಿಶ್ಯವಿಲ್ಲದೆ.

ಆದರೆ ಚಳಿಯಲ್ಲಿ ಚಿಗುರುವುದು ಸೃಷ್ಟಿಯ ಕಥಾನಕ. ಹೌದೋ ಅಲ್ಲವೋ ನವದಂಪತಿಗಳನ್ನು ಕೇಳಿ !

ಚಳಿ ಪ್ರೀತಿಯನ್ನು ಕಲಿಸುವ ರೀತಿ ನೋಡಿ. ಪುಟ್ಟ ಕಂದಮ್ಮಗಳನ್ನು ಅಮ್ಮ ಅಪ್ಪಿಕೊಂಡು ಬೆಚ್ಚಗಿಡುವುದು, ಮೊಮ್ಮಕ್ಕಳನ್ನು ಅಜ್ಜಿ ಅವಚಿಕೊಂಡು ರಕ್ಷಿಸುವುದು, ಗೂಡಿನ ಪೊಟರೆಗೆ ಪುಕ್ಕ ಅಡ್ಡವಿಟ್ಟು ತಾಯಿ ಹಕ್ಕಿ ಮರಿಗಳನ್ನು ಒತ್ತಿಕೂತು ಬೆಚ್ಚಗೆ ಕಾಪಾಡುವುದು, ಒಪ್ಪಿಕೊಂಡ ಪ್ರೇಮಿಗಳು ಹಗಲೂರಾತ್ರಿ ಅಪ್ಪಿಕೊಂಡು ಚಳಿಯನ್ನು ಸೆಲೆಬ್ರೇಟ್ ಮಾಡುವುದು....

ಪ್ರೀತಿಯನ್ನು ಬೆಚ್ಚಗೆ ಉಳಿಸುವ ಈ ಚಳಿಗೆ ಶರಣು.

(೨೦೦೫ ಡಿಸೆಂಬರ್ ೧೮ರ ವಿಜಯಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ)

17 comments:

ಆಲಾಪಿನಿ said...

ಚಳಿಯನ್ನು ನೆನೆಯುತ್ತ ಏನೆಲ್ಲ ವಿಷಯ ಹೇಳಿದ್ದೀರಿ ಹರೀಶ್‌!. ಸಕತ್ತಾಗಿದೆ...

Anonymous said...

tumba chennagide. Jayant kaikini barahagalu nenapadavu.
- Vilas Kumar

ಶ್ರೀನಿಧಿ.ಡಿ.ಎಸ್ said...

tumba chanda baraha. liked it. aha..

ರಾಧಿಕಾ ವಿಟ್ಲ said...

ನನಗಿನ್ನೂ ನೆನಪಿದೆ ಹರೀಶ್‌..
.. ೨೦೦೫ರ ನವೆಂಬರ್‌ನಲ್ಲಿ ಮದುವೆಯಾಗಿ ಡಿಸೆಂಬರ್‌ನಲ್ಲಿ ಬರೆದ ಲೇಖನವಿದು ಅಲ್ಲವೇ?!... ಆಗ ಕಿಚಾಯಿಸಿದ್ದು ಈಗಲೂ ನೆನಪಿದೆ. ಚೆಂದದ ಲೇಖನ.
- ರಾಧಿಕಾ

Anonymous said...

lovely weite up.
- supreeth

Lakshmi Shashidhar Chaitanya said...

sakhattaagide.

Sushrutha Dodderi said...

ಚಂದ ಬರಹ..
ಜಯಂತ್ ನೆನಪಾದದ್ದು ನಿಜ.
ಚಳಿ ಚಳಿ!

Vijaya said...

'huliya' anno hesru naayige superragide, adanna mostly kadeetini :-)
tumbaa khushi aaytu lekhana odi!

ರಾಧಾಕೃಷ್ಣ ಆನೆಗುಂಡಿ. said...

ಚಳಿ ಬಗ್ಗೆ ಚೆನ್ನಾಗಿದೆ.........

ರಾಧಿಕಾ ಹೇಳಿದ ಮಾತು ಯಾಕೋ.......

ಯಜ್ಞೇಶ್ (yajnesh) said...

ಲೇಖನ ತುಂಬಾ ಚೆನ್ನಾಗಿದೆ. ಓದ್ತಾ ಓದ್ತಾ ಹಿಂದೆ ಕಳೆದ ಮದುರ ನೆನಪುಗಳು ಕಣ್ಮುಂದೆ ಬಂತು.

ನಾವಡ said...

ನಮಸ್ಕಾರ ಹರೀಶ್,
ಖುಷಿ ಕೊಟ್ಟಿತು ಲೇಖನ. ವಿಜಯ ಕರ್ನಾಟಕದಲ್ಲೂ ಓದಿದ್ದೆ. ಈಗ ಮತ್ತೊಮ್ಮೆ ಓದಿ...ಚಳಿಯಲ್ಲಿ ನನ್ನ ಮಗಳನ್ನು ಅಪ್ಪಿಕೊಂಡೆ..
ನಾವಡ

mayflower said...

yaake update aaguttilla?

ಚಿತ್ರಾ ಸಂತೋಷ್ said...

ತುಂಬಾ ಚಂದ ಉಂಟು ಸರ್...ನಂಗಿಷ್ಟ ಆಯ್ತು.
-ಚಿತ್ರಾ

Anonymous said...

brahmachariglige chaliya nenahu bahuvagi kaduttade nimma prayatnakke nammdau vandane....

Anonymous said...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

ಹರೀಶ್ ಕೇರ said...

ಎಲ್ಲರಿಗೂ ತುಂಬಾ ಥ್ಯಾಂಕ್ಸ್. ಮತ್ತೆ ಮತ್ತೆ ಬರುತ್ತಿರಿ.
- ಹರೀಶ್ ಕೇರ

Pailoor said...

Very Nice ....