Sunday, July 26, 2009

ಮಾರ್ಕ್ವೆಜ್ ಗುಡ್‌ಬೈ ಹೇಳುತ್ತಿದ್ದಾನೆ


ಲ್ಯಾಟಿನ್ ಅಮೆರಿಕದ ಕಾದಂಬರಿಕಾರ ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್, ಸಾಹಿತ್ಯದ ಮೇಲೆ ಪ್ರೀತಿ ಹೊಂದಿದವರಿಗೆಲ್ಲ ಗೊತ್ತು.

ಆತನಿಗೀಗ ಮೆದೋಜೀರಕ ಗ್ರಂಥಿಯ ಕ್ಯಾನ್ಸರ್. ಎರಡನೆಯದೋ ಮೂರನೆಯದೋ ಹಂತದಲ್ಲಿರುವ ಅದು ಆತನ ಜೀವ ಹಿಂಡುತ್ತಿದೆ.

ಹಾಗಾಗಿ ಆತ ಸಾರ್ವಜನಿಕ ಜೀವನಕ್ಕೆ ಗುಡ್‌ಬೈ ಹೇಳಿದ್ದಾನೆ. ಇನ್ನು ಆತ ಭಾಷಣ ಮಾಡುವುದಿಲ್ಲ, ಫೋಟೋಗೆ ಪೋಸ್ ನೀಡುವುದಿಲ್ಲ, ಸಂದೇಶಗಳನ್ನು ಕೊಡುವುದಿಲ್ಲ.

ಬಹುಶಃ, ಏನನ್ನೂ ಬರೆಯುವುದೂ ಇಲ್ಲ.

‘ನೂರು ವರ್ಷದ ಏಕಾಂತ’ಕ್ಕೆ ತೆರಳುವ ಮುನ್ನ ತನ್ನ ಗೆಳೆಯರಿಗೆ, ಆತ್ಮೀಯರಿಗೆ ಸಂದೇಶವೊಂದನ್ನು ಕಳಿಸಿದ್ದಾನೆ. ಅದನ್ನು ನನ್ನ ಆತ್ಮೀಯರೊಬ್ಬರು ನನಗೆ ಕಳಿಸಿದರು. ನಿಮಗೆ ಅದನ್ನು ಹಂಚದೆ ಇರಲು ನನ್ನಿಂದ ಸಾಧ್ಯವೇ ಇಲ್ಲ ಅನಿಸಿತು.

ಅದು ಹೀಗಿದೆ :

“ನಾನೊಂದು ಕೇವಲ ಗೊಂಬೆ ಎಂಬುದನ್ನು ಮರೆತು, ದೇವರು ನನಗೆ ಇನ್ನೊಂದು ಜೀವನದ ತುಣುಕನ್ನು ನೀಡಿದರೆ, ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ರೀತಿಯಲ್ಲಿ ಅದನ್ನು ವಿನಿಯೋಗಿಸಲು ಯತ್ನಿಸುವೆ.

ನಾನು ಯೋಚಿಸಿರುವುದನ್ನೆಲ್ಲ ಹೇಳಲು ಆಗುತ್ತದೋ ಇಲ್ಲವೋ. ಆದರೆ ಹೇಳುವುದನ್ನೆಲ್ಲ ಯೋಚಿಸಿರುತ್ತೇನೆ.
ಯೋಚನೆಗಳು, ವಸ್ತುಗಳು ಎಷ್ಟು ಬೆಲೆ ಬಾಳುತ್ತವೆಂದಲ್ಲ, ಏನನ್ನು ಪ್ರತಿನಿಸುತ್ತವೆ ಎಂದು ಮೌಲ್ಯ ಕಟ್ಟುತ್ತೇನೆ.

ಕಡಿಮೆ ನಿದ್ರಿಸುತ್ತೇನೆ, ಹೆಚ್ಚು ಕನಸುತ್ತೇನೆ. ನಾವು ಕಣ್ಣು ಮುಚ್ಚಿಕೊಂಡಿರುವ ಪ್ರತಿ ನಿಮಿಷಕ್ಕೂ ೬೦ ಸೆಕೆಂಡುಗಳಷ್ಟು ಬೆಳಕು ನಷ್ಟವಾಗುತ್ತಿರುತ್ತದೆ.
ಎಲ್ಲ ಇತರರು ನಿಂತಿರುವರೋ ಅಲ್ಲಿ ಮುಂದುವರಿಯುವೆ ; ಎಲ್ಲಿ ಇತರರು ಮಲಗಿರುವರೋ ಅಲ್ಲಿ ಎದ್ದಿರುವೆ.

ಇನ್ನೊಂದು ತುಣುಕು ಜೀವನವನ್ನು ನನಗೆ ದೇವರು ನೀಡಿದರೆ...ಸರಳವಾಗಿ ಬಟ್ಟೆ ಧರಿಸಿ, ಕಿರಣಗಳಲ್ಲಿ ಹೊರಳಾಡಿ, ದೇಹವನ್ನಷ್ಟೇ ಅಲ್ಲ ಆತ್ಮವನ್ನೂ ಬೆಳಕಿಗೆ ತೆರೆದುಕೊಂಡಿರುತ್ತೇನೆ.

ವೃದ್ಧರಾದಂತೆ ಪ್ರೇಮಿಸುವುದು ಕಡಿಮೆಯಾಗುತ್ತದೆ ಎಂಬ ತಿಳಿವಳಿಕೆ ಎಷ್ಟು ತಪ್ಪೆಂದೂ, ಪ್ರೇಮಿಸದಿರುವುದರಿಂದಲೇ ವೃದ್ಧರಾಗುತ್ತೇವೆಂದೂ ಸಾಸಿ ತೋರಿಸುತ್ತೇನೆ.

ಮಕ್ಕಳಿಗೆ ರೆಕ್ಕೆಗಳನ್ನು ನೀಡುತ್ತೇನೆ, ಆದರೆ ಸ್ವತಂತ್ರವಾಗಿ ಹಾರಲು ಬಿಡುತ್ತೇನೆ.
ವಯಸ್ಸಾದಂತೆ ಸಾವು ಸನಿಹವಾಗುವುದಲ್ಲ, ಅದು ವಿಸ್ಮೃತಿಯಿಂದ ಎಂದು ವೃದ್ಧರಿಗೆ ತಿಳಿಹೇಳುತ್ತೇನೆ.

ನಾನು ನಿಮ್ಮಿಂದ ಎಷ್ಟೊಂದು ಕಲಿತೆ...

ಏರುವ ಪರಿಶ್ರಮದ ಕುರಿತು ಚಿಂತಿಸುವುದನ್ನು ಮರೆತು ಎಲ್ಲರೂ ಬೆಟ್ಟದ ತುದಿಯಲ್ಲಿ ಬದುಕಬೇಕು ಎಂದು ಚಿಂತಿಸುತ್ತಾರೆ ಎಂಬುದನ್ನು ; ಹಸುಳೆಯೊಂದು ತಂದೆಯ ಹೆಬ್ಬೆರಳು ತಬ್ಬಿಕೊಂಡರೆ ಅದು ಶಾಶ್ವತ ಬಾಂಧವ್ಯ ಬಯಸುತ್ತಿದೆ ಎಂಬುದನ್ನು ; ತನ್ನಿಂದ ಕೆಳಗಿರುವವರನ್ನು ನೋಡುವ ಹಕ್ಕು ಅವರನ್ನು ಎತ್ತಬಯಸುವವನಿಗೆ ಮಾತ್ರ ಇರುತ್ತದೆ ಎಂಬುದನ್ನು...


ಯಾವತ್ತೂ ನೀವು ಸ್ಪಂದಿಸಿರುವುದನ್ನೇ ಹೇಳಿ, ಯೋಚಿಸಿರುವುದನ್ನೇ ಮಾಡಿ.


ಇದೇ ಕೊನೆಯ ಬಾರಿಗೆ ನಾನು ನಿಮ್ಮನ್ನು ನೋಡುತ್ತಿರುವುದು ಎಂದು ನನಗೆ ಗೊತ್ತಾದರೆ, ಆಗ ನಾನು ನಿಮ್ಮ ಆತ್ಮದ ಪೋಷಕನಂತೆ ಬಿಗಿಯಾಗಿ ತಬ್ಬಿಕೊಳ್ಳುವೆ. ಇವೇ ನನ್ನ ಕೊನೆಯ ಕ್ಷಣಗಳು ಎಂದು ನನಗೆ ಗೊತ್ತಾದರೆ ನಾನು ನಿಮಗೆ ‘ಐ ಲವ್ ಯು’ ಎಂದು ಹೇಳಬಯಸುವೆ. ಅದು ನಿಮಗೆ ಅರ್ಥವಾಗುತ್ತದೋ ಇಲ್ಲವೋ ಎಂಬುದನ್ನು ಯೋಚಿಸಲಾರೆ.


ಯಾವಾಗಲೂ ಇನ್ನೊಂದು ಬೆಳಗು ಇರುತ್ತದೆ ; ಎಲ್ಲವನ್ನು ಉತ್ತಮಗೊಳಿಸಲು ಜೀವನ ನಮಗೆ ಮತ್ತೊಂದು ಅವಕಾಶ ಕೊಡುತ್ತದೆ.


ಯಾವಾಗಲೂ ನಿಮ್ಮ ಪ್ರೀತಿಪಾತ್ರರ ಸನಿಹದಲ್ಲಿರಿ ; ನೀವು ಅವರನ್ನು ಎಷ್ಟೊಂದು ಪ್ರೀತಿಸುತ್ತೀರಿ ಹಾಗೂ ನಿಮಗೆ ಅವರ ಅಗತ್ಯ ಎಷ್ಟಿದೆ ಎಂಬುದನ್ನು ಹೇಳುತ್ತಿರಿ ; ನಿಮಗೆ ಗೊತ್ತಿರುವ ಎಲ್ಲ ಪ್ರೀತಿ ತುಂಬಿದ ಪದಗಳನ್ನು ಬಳಸಿ.


ನಿಮ್ಮ ಯೋಚನೆಗಳು ಗುಪ್ತವಾಗಿಯೇ ಇದ್ದರೆ ನಿಮ್ಮನ್ನು ಯಾರೂ ನೆನೆಯಲಾರರು ; ಅವುಗಳನ್ನು ಅಭಿವ್ಯಕ್ತಿಗೊಳಿಸಿ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ತೋರಿಸಿ.


ಈ ಸಂದೇಶವನ್ನು ನೀವು ಪ್ರೀತಿಸುವ ಎಲ್ಲರಿಗೆ ಕಳಿಸಿ.

ನೀವು ಕಳಿಸದಿದ್ದರೆ, ನಾಳೆಯು ಕೂಡ ಇಂದಿನಂತೆಯೇ ಇರುತ್ತದೆ.

ಇದೀಗ ನಿಮ್ಮ ಸಂದೇಶದ ಸಮಯ.


ನಿಮ್ಮ ಪ್ರೀತಿಯ -
- ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್"

9 comments:

ಶ್ರೀನಿವಾಸಗೌಡ said...

ಪ್ರಿಯ ಹರೀಶ್ ಕೇರ ಗ್ರೆಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನ ಸಂದೇಶ ತಲುಪಿಸಿದ್ದಕ್ಕೆ ಥ್ಯಾಂಕ್ಸ್, ಅದರಲ್ಲೂ ಆತನ ಸಂದೇಶವನ್ನು ಕನ್ನಡದಲ್ಲಿ ಮನಮುಟ್ಟುವಂತೆ ಅಭಿವ್ಯಕ್ತಿಸಿದ್ದೀರಿ ಅದಕ್ಕೂೆಯ ಥ್ಯಾಂಕ್ಸ್.
ಕಡೇ ಪ್ರಶ್ನೆ ನಿಮ್ಮ ಬತ್ತಳಿಕೆಯಲ್ಲಿ ಇನ್ನೂ ಏನೇನಿವೆ..?

Anonymous said...

ಪ್ರಿಯ ಹರೀಶ್,
ತುಂಬಾ ಚೆನ್ನಾಗಿದೆ ಬರಹ. ಆದ್ರೆ, ಯಾರೋ ಹೇಳಿದ್ದನ್ನೇ ಯಾಕೆ ಜಾಸ್ತಿ ಬರೀತೀರಾ?

rangamarakini said...

hai harish,
i have read many books and writings of marquez. infact week ago i received the his message through my friend. it was amazing. you can imagine the writing capacity of marquez.
rmarakini

Unknown said...

ಮಾರ್ಕ್ವೆಜೆನ ಜೀವನದ ಕೊನೆಸಾಲುಗಳಲಿನ ಜೀವ ಸೆಲೆಯ ಬನಿಯನ್ನು
ನಮಗೆ ನೀಡಿದಕ್ಕೆ ವಂದನೆಗಳು ಹರೀಶ್
sahayaatri.blogspot.com

Anonymous said...

ಹಹ, ಶ್ರೀನಿವಾಸ್, ಥ್ಯಾಂಕ್ಯು.
ಹಾಗೇನಿಲ್ಲ. ಹೇಳದೆ ಇರಲಾರೆ ಅನಿಸಿದ್ದನ್ನು ಮಾತ್ರವೇ ಬರೆಯುವುದು ನನ್ನ ಹವ್ಯಾಸ.
ಅನಾನಿ,
ಹೆಸರು ಹಾಕಿದರೇನು ಹಾನಿ !
ರಂಗನಾಥ್,
ನಿಮ್ಮನ್ನು ಇಲ್ಲಿ ನೋಡಿ ಖುಷಿಯಾಯ್ತು. ನಿಮ್ಮ ಬ್ಲಾಗ್ ನೋಡಿದೆ, ಇನ್ನಷ್ಟು ಬರೀರಲ್ಲ ?
ಈಶಕುಮಾರ್,
ನಿಮ್ಮ ಬೆಚ್ಚನೆಯ ಪ್ರೀತಿಗೆ ಧನ್ಯವಾದ.
- ಹರೀಶ್ ಕೇರ

raviraj said...

harish marquvege mahitige dhanyavada !

Anonymous said...

ಹೆಸರಲ್ಲೇನಿದೆ? ಗುಲಾಬಿಯನ್ನು...!
ಆದ್ರೂ ಮಾರ್ಕ್ವೆಜ್ ಅನುಭವೀ ಮಾತಿಗೆ ಸಲಾಂ..

ನೀರತೆರೆ said...

ಉತ್ತಮ ಬರಹಕ್ಕಾಗಿ ಧನ್ಯವಾದಗಳು

ಆಲಾಪಿನಿ said...

congrats. nice write up!