Monday, October 4, 2010

ಚರಕ ಕ್ರಾಂತಿ




‘ಏನು ದರಿದ್ರ ಊರು ರೀ ಇದು, ಬಂದ್ರೆ ಅತ್ತಿತ್ತ ಹೋಗೋಕಾಗಲ್ಲ, ಸ್ನೇಹಿತರನ್ನು ಮಾತಾಡ್ಸೋಕಾಗೊಲ್ಲ. ಬಂದು ಆರು ದಿನವಾಯ್ತು. ಯಾವಾಗ ವಾಪಸ್ಸು ಹೆಗ್ಗೋಡಿಗೆ ಹೋಗ್ತೀನೋ ಅನ್ನಿಸ್ತಿದೆ...’ ಅಂತ ಗೊಣಗಿದರು ಪ್ರಸನ್ನ. ಪೂರ್ಣಚಂದ್ರ ತೇಜಸ್ವಿಯವರೂ ಹೀಗೆಯೇ ಹೇಳುತ್ತಿದ್ದರು ಅಂತ ನೆನಪಾಯಿತು.

ಸರಳ ಜುಬ್ಬಾ- ಪೈಜಾಮ ಧರಿಸುವ ಪ್ರಸನ್ನ ಹಳ್ಳಿಗೆ ಮರಳಲು ಚಡಪಡಿಸುವುದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ದೇಸಿ ಸಂಸ್ಥೆಯ ಶುದ್ಧ ಹತ್ತಿ ಕೈಮಗ್ಗದ ಸೀರೆಯಂಗಡಿ ಗಾಂ ಜಯಂತಿಯಂದೇ ಉದ್ಘಾಟನೆಯಾಗುವುದು, ಅದನ್ನು ರಾಜೇಶ್ವರಿ ತೇಜಸ್ವಿ ಅವರು ಉದ್ಘಾಟಿಸುವುದು, ನೇಕಾರಿಕೆ ಸಂಸ್ಥೆಯ ಹೆಸರು ‘ಚರಕ’ ಎಂದೇ ಇರುವುದು... ಇವೆಲ್ಲ ಕಾಕತಾಳೀಯ ಇರಲಾರದು.

ಅ.೨ರಂದು ಶ್ರೀನಿವಾಸ ನಗರದಲ್ಲಿ ಉದ್ಘಾಟನೆಯಾದದ್ದು ದೇಸಿಯ ಎಂಟನೇ ಮಳಿಗೆ. ಈಗಾಗಲೇ ಹೆಗ್ಗೋಡು, ಸಾಗರ, ಶಿವಮೊಗ್ಗ, ದಾವಣಗೆರೆಗಳಲ್ಲಿ ಒಂದೊಂದಿವೆ. ಮೈಸೂರಿನಲ್ಲಿ ಇಷ್ಟರಲ್ಲೇ ಒಂದು ತೆರೆಯಲಿದೆ. ಬೆಂಗಳೂರಿನಂತಹ ಬೆಂಗಳೂರಿನಲ್ಲಿದು ನಾಲ್ಕನೇ ಅಂಗಡಿ. ಜನರೆಲ್ಲ ರೆಡಿಮೇಡ್ ಹಾಗೂ ವಿದೇಶಿ ಉಡುಪುಗಳಿಗೆ ಮೊರೆ ಹೋಗುತ್ತಿರುವಾಗ, ಸ್ಥಳೀಯವಾಗಿ ತಯಾರಾಗುವ ದಿರಸುಗಳಿಗೆ ಈ ಪಾಟಿ ಬೇಡಿಕೆ ಬರುತ್ತಿದೆ ಅಂದರೆ ಅದು ನಿಜಕ್ಕೂ ಒಳ್ಳೆಯ ನ್ಯೂಸೇ. ಖಾದಿ ಹಾಗೂ ಕೈಮಗ್ಗದ ಬಟ್ಟೆಗಳಿಗೆ ಇಂದಿಗೂ ಒಂದು ವಲಯದಲ್ಲಿರುವ ಬೇಡಿಕೆ, ಯುವಜನರಲ್ಲಿ ದೇಸಿ ಉಡುಪುಗಳ ಬಗ್ಗೆ ಹೆಚ್ಚುತ್ತಿರುವ ಪ್ರೀತಿಗೆ ಇದು ದ್ಯೋತಕ ಅನ್ನಬಹುದಾ ? ಐಟಿ ಬಿಟಿ ಹುಡುಗರೂ ದೇಸಿ ಉಡುಪು ಹುಡುಕಿಕೊಂಡು ಬಂದು ಧರಿಸುವಂತಹ ಟ್ರೆಂಡ್ ಕ್ರಿಯೇಟ್ ಮಾಡಿದ ಅಗ್ಗಳಿಕೆ ಮಾತ್ರ ಪ್ರಸನ್ನರಿಗೇ ಸಲ್ಲುತ್ತದೆ.

ಈ ಅಂಗಡಿಗೆ ಕಾಲಿಟ್ಟರೆ ನೀವೊಂದು ಆರ್ಟ್ ಗ್ಯಾಲರಿಗೆ ಹೊಕ್ಕ ಅನುಭವ ಪಡೆಯುತ್ತೀರಿ. ‘ನೇಕಾರ್ತಿ ನಗುವಂತೆ ಮಾಡಿ’ ‘೫೦೦೦ ವರ್ಷಗಳ ಪರಂಪರೆಯಿದು’ ಎನ್ನುವ ಭಿತ್ತಿಪತ್ರಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೆಗ್ಗೋಡಿನ ಹೆಣ್ಣುಮಕ್ಕಳು ಕೈಯಾರೆ ನೇಯ್ದ ಸ್ಥಳೀಯ ಸೊಗಡು ಸೂಸುವ ಡಿಸೈನ್ ಕಾಟನ್ ಸೀರೆಗಳ ಜತೆ ಒರಿಸ್ಸಾದ ಇಕ್ಕತ್ ಸೀರೆ, ಬಂಗಾಲದ ತಾಂಗಾಯ್, ಆಂಧ್ರದ ಚಿರಾಲ, ಭಾಗಲ್ಪುರದ ಟಸ್ಸರ್ ಸಿಲ್ಕ್, ಕರ್ನಾಟಕದ ಇಳಕಲ್ ಸೀರೆಗಳೆಲ್ಲ ನಿಮಗಿಲ್ಲಿ ಸಿಗಬಹುದು.

ಇಲ್ಲಿ ಮೂರಡಿ ಎತ್ತರದವರೆಗಷ್ಟೇ ಬಟ್ಟೆಯ ರ್‍ಯಾಕುಗಳಿವೆ. ಅದರಿಂದ ಮೇಲೆ ? ‘ಅಲ್ಲಿ ಬೇರೆ ಬೇರೆ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುತ್ತೇವೆ. ಆ ಮೂಲಕ ಇದು ಕಲೆಯನ್ನೂ- ಕುಶಲ ಕಲೆಯನ್ನೂ ಬೆಸೆಯುವ ಯತ್ನ’ ಅನ್ನುತ್ತಾರೆ ಪ್ರಸನ್ನ. ‘ಒಂದು ಡಬ್ಬಿ ಇಡ್ತೀವಿ. ಐದುನೂರು ರೂಪಾಯಿ ಸೀರೆ ಖರೀದಿಸಬೇಕೆಂದು ಬಂದವರು ೪೫೦ ರೂಪಾಯಿಯ ಸೀರೆ ಖರೀದಿಸಿದರೆ, ಉಳಿದ ಹಣವನ್ನು ಅದರಲ್ಲಿ ಹಾಕಿ ಹೋಗಬಹುದು. ಹಾಗೆ ಸಂಗ್ರಹವಾದ ಹಣವನ್ನು ಬಯಲುಸೀಮೆಯ ಬಡ ಕುಟುಂಬಗಳಿಗೆ ಕಂಬಳಿ ನೀಡಲು ವಿನಿಯೋಗಿಸುತ್ತೇವೆ. ಹೀಗೆ ವಸ್ತ್ರದಾನ ಮಾಡಿದ ಪುಣ್ಯವೂ ನಿಮ್ಮದಾಗುತ್ತದೆ...’ ಎಂದು ನಗುತ್ತಾರೆ ಪ್ರಸನ್ನ.

ಎಲ್ಲಿಯ ಪ್ರಸನ್ನ, ಎಲ್ಲಿಯ ಹೆಗ್ಗೋಡು, ಎಲ್ಲಿಯ ಚರಕ. ಇದೆಲ್ಲವನ್ನೂ ಬೆಸೆದ ಕೊಂಡಿಗಳು ಹಲವಾರು... ರಂಗಭೂಮಿ, ಸಮಾಜವಾದ, ಗಾಂ ಚಿಂತನೆ, ಪರಿಸರ ಕಾಳಜಿ, ಅಧ್ಯಾತ್ಮ... ಹೀಗೆ ಅದು ಪರಿಕಲ್ಪನೆಗಳ ಕಲಸುಮೇಲೋಗರ. ಅಥವಾ ಇವೆಲ್ಲವನ್ನೂ ಮೇಳೈಸಿದ ‘ಪ್ರಸನ್ನ ಚಿಂತನೆ’ ಅಂದರೂ ಸೈ. ಎಂಬತ್ತರ ದಶಕದ ಸುಮಾರಿಗೇ ಪ್ರತಿಭಾವಂತ ನಿರ್ದೇಶಕರೆಂದು ಹೆಸರು ಮಾಡಿದ್ದ ಪ್ರಸನ್ನ, ನೀನಾಸಂ ಸಂಸ್ಥೆಯ ರಂಗಭೂಮಿ ಚಟುವಟಿಕೆಗಳ ಜತೆಗೆ ಸಕ್ರಿಯರಾಗಿದ್ದರು. ಅದೇ ಹೊತ್ತಿಗೆ ಮಲೆನಾಡಿನಲ್ಲಿ ಕೃಷಿಗಾಗಿ ನಡೆದಿದ್ದ ನಿರಂತರ ಕಾಡಿನ ಸವೆತ ಅವರ ಮನ ಕೊರೆಯುತ್ತಿತ್ತು. ಇದಕ್ಕೊಂದು ಪರಿಹಾರ ಸಾಧ್ಯವಿಲ್ಲವೆ ಎಂಬ ಹಪಹಪಿ. ಹಾಗೆ ೧೯೯೬ರಲ್ಲಿ, ಭೀಮನಕೋಣೆಯ ಗುಡ್ಡವೊಂದರ ಮೇಲೆ ಪಾಳುಬಿದ್ದ ಸರಕಾರಿ ಷೆಡ್‌ನಲ್ಲಿ, ಒಂದೆರಡು ಹೊಲಿಗೆ ಯಂತ್ರಗಳೊಂದಿಗೆ ‘ಚರಕ’ ಆರಂಭವಾಯ್ತು.

ಪ್ರಸನ್ನರ ಪ್ರಕಾರ, ಮಲೆನಾಡಿನ ತುಂಗಾ ನದಿಯ ತೀರ, ನೈಸರ್ಗಿಕ ಬಣ್ಣಗಾರಿಕೆಗೆ ಹೇಳಿ ಮಾಡಿಸಿದ ಪ್ರದೇಶ. ಇಲ್ಲಿ ದೊರೆಯುವ ಸಿಹಿ ನೀರು ಬಣ್ಣಗಾರಿಕೆಗೆ ವರ.
ಅಡಕೆ ಚೊಗರು, ಅಳಲೆಕಾಯಿ, ದಾಳಿಂಬೆ ಸಿಪ್ಪೆ, ಇಂಡಿಗೋ ನೀಲಿ, ರಂಗಮಾಲೆ ಬೀಜ, ಅಂಟುವಾಳ, ಶೀಗೆ ಮುಂತಾದ ಸ್ಥಳೀಯ ಕಾಡುತ್ಪತ್ತಿಗಳೇ ಇಲ್ಲಿ ಬಣ್ಣಗಾರಿಕೆಗೆ ಕಚ್ಚಾ ಮಾಲುಗಳು. ಇದರಿಂದ ರಾಸಾಯನಿಕಗಳು ಕುಡಿಯುವ ನೀರಿಗಾಗಲೀ, ಅಂತರ್ಜಲಕ್ಕಾಗಲೀ ಸೇರುವ ಪ್ರಶ್ನೆಯಿಲ್ಲ. ನೇಕಾರರ ಆರೋಗ್ಯ ಕೆಡುವ ಪ್ರಸಕ್ತಿಯಿಲ್ಲ. ಒಟ್ಟಿನಲ್ಲಿ ಇದು ಎಕಾಲಾಜಿಕಲ್ ಇಂಡಸ್ಟ್ರಿ- ಪರಿಸರಸ್ನೇಹಿ ಉದ್ಯಮ. ೨೦ ರೂಪಾಯಿಯ ಬಟ್ಟೆಗೆ ಆಮದು ಬಣ್ಣಗಳನ್ನು ತರಿಸಿಕೊಂಡು ಹಚ್ಚಿ ಮಾರುವುದಾದರೆ ೬೦ ರೂ. ಬೀಳುತ್ತದೆ. ಅದೇ ಬಟ್ಟೆಗೆ ನೈಸರ್ಗಿಕ ಬಣ್ಣಗಳನ್ನು ಹಚ್ಚಿದರೆ ಇನ್ನೂ ಕಡಿಮೆ ಬೆಲೆಗೆ ಮಾರಿ, ನೇಕಾರರಿಗೆ ಲಾಭಾಂಶವನ್ನೂ ನೀಡಬಹುದು ಎಂಬುದು ಪ್ರಸನ್ನರ ಲೆಕ್ಕಾಚಾರ.

ಚರಕ, ದೇಸಿ, ಇಂದು ಇಷ್ಟು ಬೆಳೆದಿದ್ದರೂ, ತಾನು ಬಂಡವಾಳಶಾಹಿಯಾಗದಿರಲು ನಿರ್ಧರಿಸಿದೆ. ದೇಸಿಯಲ್ಲಿ ಮಾರಾಟವಾಗದೆ ಉಳಿಯುವ ಮಾಲು ಇಲ್ಲ. ಇಲ್ಲಿನ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಹಾಗೆಂದು ಚರಕ ವಿಸ್ತರಣಾಕಾಂಕ್ಷಿಯಲ್ಲ. ಪ್ರತಿಯೊಂದು ಊರೂ ತನ್ನದೇ ಆದ ಇಂತಹ ಘಟಕವನ್ನು ರೂಪಿಸಿ ಬೆಳೆಸಬೇಕು, ಅಲ್ಲಿನವರಿಗೇ ಉದ್ಯೋಗ ದೊರೆಯಬೇಕು ಎಂಬುದು ಪ್ರಸನ್ನರ ಚಿಂತನೆ. ಇಂದು ಹೆಗ್ಗೋಡಿನ ಚರಕದಲ್ಲಿ ಹತ್ತಿರತ್ತಿರ ೪೦೦ ಮಹಿಳೆಯರು ದುಡಿಯುತ್ತಿದ್ದಾರೆ. ಎಲ್ಲರೂ ಬಡ, ಮಧ್ಯಮ ವರ್ಗದ ಮಹಿಳೆಯರೇ. ಹಾಗೆಂದು ಊರಿನ ಕೃಷಿ ಚಟುವಟಿಕೆ ಬರ್ಬಾದ್ ಆಗಿಲ್ಲ. ಯಾಕೆಂದರೆ ಸುತ್ತಮುತ್ತಲಿನ ಊರುಗಳವರೂ ಇಲ್ಲಿ ದುಡಿಯುತ್ತಾರೆ. ಅದು ಬರೀ ಕೆಲಸವಲ್ಲ, ಸಂತೃಪ್ತಿ ನೀಡುವ ಕಲೆಗಾರಿಕೆ. ಇಲ್ಲಿ ವಿದ್ಯುತ್‌ಚಾಲಿತ ಯಂತ್ರಗಳಿಲ್ಲ. ಮಳೆನೀರು ಸಂಗ್ರಹ, ಮಣ್ಣಿನ ಗೋಡೆ, ಹಂಚಿನ ಕಟ್ಟಡಗಳಿವೆ. ಕೊಳವೆ ಬಾವಿ ಬದಲು ತೆರೆದ ಬಾವಿಯಿದೆ. ಇಂಗುಗುಂಡಿಗಳಿವೆ.

ಒಟ್ಟಾರೆ ಚರಕ- ದೇಸಿಯ ಬಗ್ಗೆ ಪ್ರಸನ್ನರ ದರ್ಶನ ಅಥವಾ ಕಾಣ್ಕೆ ಏನು ?
‘ಕೈಮಗ್ಗ ಉದ್ಯಮ ರೋಗಿಷ್ಟ, ಅದರಿಂದ ಪ್ರಯೋಜನವಿಲ್ಲ ಎಂಬ ಭಾವನೆ ಹಬ್ಬಿಸಲಾಗುತ್ತಿದೆ. ಅದು ಸುಳ್ಳು. ನಮ್ಮ ಚರಕವನ್ನೇ ತೆಗೆದುಕೊಳ್ಳಿ. ಈಗ ಇದರ ವಾರ್ಷಿಕ ವಹಿವಾಟು ೯ ಕೋಟಿ. ಇಲ್ಲಿ ಅಪಾರ ಸಾಧ್ಯತೆಗಳಿವೆ. ಹಳ್ಳಿಯ ಬಡ ನೇಕಾರರು ತಯಾರಿಸಿದ ಬಟ್ಟೆಯನ್ನು ನಗರದ ಜನ ಕೊಳ್ಳುತ್ತಾರೆ. ಹಳ್ಳಿ- ಪೇಟೆ ಪರಸ್ಪರ ಶತ್ರುಗಳು ನಿಜ. ಆದರೆ ಹಳ್ಳಿಯ ಜನ- ಪೇಟೆಯ ಜನ ಶತ್ರುಗಳಲ್ಲ. ಅವರು ತಮ್ಮ ಕೌಶಲಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಚರಕಕ್ಕೆ ಇದುವರೆಗೂ ನಯಾಪೈಸೆ ಫಾರಿನ್ ಹಣ ತೆಗೆದುಕೊಂಡಿಲ್ಲ. ಸರಕಾರದ ನೆರವನ್ನು ಹತ್ತು ಶೇಕಡಕ್ಕಿಂತ ಹೆಚ್ಚಿಗೆ ಬಳಸಿಕೊಂಡಿಲ್ಲ. ಯಾಕೆಂದರೆ ಅದಕ್ಕಿಂತ ಹೆಚ್ಚಾದರೆ ಯಾವುದೇ ಇಂಡಸ್ಟ್ರಿಯೂ ನೆಲ ಕಚ್ಚುತ್ತದೆ. ಚರಕದಲ್ಲಿ ದುಡಿಯುವ ಬಡ, ಅನಕ್ಷರಸ್ಥ ಹೆಣ್ಣುಮಗಳೂ ಇಂದು ಸ್ವಂತ ಸಂಪಾದನೆಯನ್ನು ಮನೆಗೆ ಒಯ್ಯುತ್ತಾಳೆ. ಅಲ್ಲಿನ ಕಂಪ್ಯೂಟರನ್ನೂ ಅವರೇ ನಿಭಾಯಿಸುತ್ತಾರೆ...’

ಒಂದು ಕಾಲದಲ್ಲಿ ಪ್ರಸನ್ನ ಚಳುವಳಿಗಳಲ್ಲಿ ಓಡಾಡಿದವರು. ಅದಕ್ಕೆಲ್ಲ ಈಗ ಫುಲ್‌ಸ್ಟಾಪಾ ? ‘ಜನಪರ ಅಂತ ಹೇಳಿಕೊಳ್ಳುವ ಮಂದಿಯನ್ನು ನೋಡಿ ಸಾಕಾಗಿದೆ. ಜನಪರ ಅಲ್ಲ, ಜನರ ಜತೆಗೆ ನಾವಿರಬೇಕು. ಲೇಖಕರು, ಕಲಾವಿದರಿಗೆ ಜನರ ಜತೆಗೆ ಸಾವಯವ ಸಂಬಂಧವಿರಬೇಕು. ಕುಶಲಕಲೆಗಳ ಮೂಲಕ ಅದು ಸಾಧ್ಯ. ಮೊದಲು ಸರಿಯಾದ ಬದುಕು ಕಟ್ಟಿಕೊಳ್ಳೋಣ. ಮತ್ತೆಲ್ಲ ಮತ್ತೆ.’

‘ರಂಗಭೂಮಿಯನ್ನು ಸಂಪೂರ್ಣ ಬಿಟ್ಟಿಲ್ಲ. ಚರಕದ ಕೆಲಸಗಳೇ ಸಾಕಷ್ಟಿರುವುದರಿಂದ ರಂಗಭೂಮಿ ಹೆಚ್ಚು ಹಚ್ಚಿಕೊಳ್ಳುವುದಕ್ಕಾಗುತ್ತಿಲ್ಲ. ಅಲ್ಲೂ ಪ್ರತಿವರ್ಷ ಚರಕ ಉತ್ಸವ ಮಾಡಿ, ಸಾಂಸ್ಕೃತಿಕ ವಾತಾವರಣ ರೂಪಿಸುತ್ತಿದ್ದೇವೆ. ನಾನು ಬರೆದ ‘ಕೊಂದವರಾರು’ ನಾಟಕ ಕಳೆದ ವರ್ಷ ಬಿಡುಗಡೆಯಾಯ್ತು, ಒಂದು ವರ್ಷದಲ್ಲಿ ಎಂಟು ಪ್ರಿಂಟ್ ಕಂಡಿತು. ಅಂದ್ರೆ ಮಕ್ಕಳ ರಂಗಭೂಮಿಯಲ್ಲಿ ಅಪಾರ ಸಾಧ್ಯತೆ ಇದೆ ಅಂತ ಅರ್ಥ. ಮಕ್ಕಳಿಗಾಗಿ ನಾವು ಕೆಲಸ ಮಾಡಬೇಕು.’

‘ನಟನೆಯ ಬಗ್ಗೆ ಪುಸ್ತಕಗಳು ಬೇಕಾದ್ರೆ ನಾವು ಸ್ಟಾನಿಸ್ಲಾವ್‌ಸ್ಕಿ ಮುಂತಾದ ವಿದೇಶೀಯರ ಮೊರೆ ಹೋಗುತ್ತೇವೆ. ನಮ್ಮದೇ ಅನಿಸುವ ಕೃತಿಗಳಿಲ್ಲ. ಈ ಕೊರತೆ ತುಂಬಲು ‘ಭಾರತೀಯ ರಂಗಭೂಮಿಯಲ್ಲಿ ನಟನೆ’ಯ ಬಗ್ಗೆ ಇಂಗ್ಲಿಷ್‌ನಲ್ಲಿ ಒಂದು ಪುಸ್ತಕ ಬರೀತಿದೇನೆ.’

2 comments:

Jagadeesh Balehadda said...

ಸದಭಿರುಚಿಯ ಬರಹ.
ಮಾಹಿತಿಗಾಗಿ ಧನ್ಯವಾದಗಳು.

rangamarakini said...

hi,
simple, good write up. i remember prasanna when i interviewed for ETV after he resigned from Rangayana.