Thursday, October 27, 2011

ತೋಮಾಸ್ ಕವಿತೆಗಳು

ನೊಬೆಲ್ ಪ್ರಶಸ್ತಿ ಪುರಸ್ಕೃತ ಸ್ವೀಡಿಷ್ ಕವಿ ತೋಮಾಸ್ ಟ್ರಾನ್ಸ್‌ಟ್ರಾಮರ್‌ನ ಒಂದಿಷ್ಟು ಕವಿತೆಗಳ ಅನುವಾದ ಇಲ್ಲಿದೆ.



ಜೋಡಿ


ಅವರು ದೀಪವ ಆರಿಸಿದರು.


ಬಿಳಿ ಲೈಟ್‌ಶೇಡ್ ಆರುವ ಮುನ್ನ ಒಂದು ಕ್ಷಣ ಮಸುಕಾಗಿ ಹೊಳೆಯಿತು.


ಕತ್ತಲಿನ ಗಾಜಿನೊಳಗೆ ಶಾಸನದಂತೆ. ಮತ್ತೆ ಮೇಲೆದ್ದಿತು.


ಹೋಟೆಲ್‌ನ ಗೋಡೆಗಳು ನೀಲಾಕಾಶಕ್ಕೆ ತೆರೆದುಕೊಂಡವು.


ಪ್ರೇಮದ ಚಲನೆಗಳು ತಣ್ಣಗಾದವು, ಅವರು ನಿದ್ರಿಸಿದರು.


ಆದರೆ ಅವರ ರಹಸ್ಯ ಯೋಚನೆಗಳು


ಬಾಲಕನ ಪೇಂಟಿಂಗ್‌ನ ಒದ್ದೆಕಾಗದದ ಮೇಲಿನ ಬಣ್ಣಗಳಂತೆ


ಮೆಲ್ಲನೆ ಸರಿದು ಮುಟ್ಟಿ ಬೆರೆಯತೊಡಗಿದವು. ಕತ್ತಲೆ ಹಾಗೂ ಮೌನ.


ಈ ರಾತ್ರಿ ನಗರ ಹತ್ತಿರ ಬರುತ್ತಿದೆ, ಬಿಗಿದುಕೊಂಡ ಕಿಟಕಿಗಳೊಂದಿಗೆ.


ಭವನಗಳು ನಿಕಟವಾಗುತಿವೆ. ನಿರ್ಭಾವ ಮುಖಗಳ ಗುಂಪು,


ಕಾಯುತ್ತಿರುವ ಜಂಗುಳಿಯ ನಡುವೆ ಅವರಿದ್ದಾರೆ.



ರಾಷ್ಟ್ರೀಯ ಅಭದ್ರತೆ


ಸಹ ಕಾರ್‍ಯದರ್ಶಿ ಮುಂದೆ ಬಾಗಿ ಎಕ್ಸ್ ಗುರುತು ಎಳೆಯುತ್ತಾಳೆ


ಅವಳ ಕಿವಿ ರಿಂಗುಗಳು ಡೆಮೊಕ್ಲಿಸನ ಖಡ್ಗಗಳಂತೆ ತೂಗಾಡುತ್ತವೆ


ಚುಕ್ಕಿ ಪಾತರಗಿತ್ತಿ ನೆಲದ ಬಣ್ಣಗಳಲ್ಲಿ ಮಾಯವಾಗುವ ಹಾಗೆ


ತೆರೆದ ಪತ್ರಿಕೆಯ ಪುಟಗಳಲ್ಲಿ ದೈತ್ಯ ಅಡಗುವ ಹಾಗೆ


ಯಾರೂ ಧರಿಸಿರದ ಮಕುಟ ಅಧಿಕಾರವ ಹಿಡಿದಿದೆ


ನೀರಿನಡಿಯಲ್ಲಿ ತಾಯಿ ಆಮೆ ಮೆಲ್ಲನೆ ಚಲಿಸಿದೆ.



ಒಂದು ಸಾವಿನ ಬಳಿಕ


ಒಮ್ಮೆ ಅಲ್ಲೊಂದು ಆಘಾತ


ಉಳಿಸಿಹೋದ ಸುದೀರ್ಘ ಉಲ್ಕೆಯ ಬಾಲ.


ಅದು ನಮ್ಮನೊಳಗೇ ಇಟ್ಟಿತು. ಟಿವಿ ಬಿಂಬಗಳ ಮಂಜಾಗಿಸಿತು.


ಟೆಲಿಫೋನ್ ತಂತಿಗಳಲ್ಲಿ ತಣ್ಣನೆಯ ಹನಿಗಳ ಕೂರಿಸಿತು.


ಚಳಿಗಾಲದ ಬಿಸಿಲ ನಡುವೆ ಮೆಲ್ಲನೆ ಮಂಜಿನಲ್ಲಿ ಜಾರುವುದು


ಕೆಲವೇ ಎಲೆಗಳು ನೇತಾಡುತ್ತಿರುವಲ್ಲಿ ನಡೆಯುವುದು


ಹಳೆಯ ಡೈರೆಕ್ಟರಿಯ ಹರಿದ ಪುಟಗಳ ಹೋಲುವುದು.


ಚಳಿ ನುಂಗಿದೆ ಹೆಸರುಗಳ.


ಎದೆಬಡಿತ ಆಲಿಸುವುದು ಈಗಲೂ ಎಂಥ ಚಂದ


ಆದರೀಗ ನೆರಳೇ ಶರೀರಕಿಂತ ನಿಜವೆನಿಸುತಿದೆ.


ಕಪ್ಪು ಡ್ರಾಗನ್ ಚಿಹ್ನೆಯ ಕವಚದ ಪಕ್ಕದಲ್ಲಿ


ಸಮರಯೋಧ ನಿಸ್ತೇಜನಾಗಿ ಕಾಣಿಸುತಿರುವ.



ದಾರಿ


ಮುಂಜಾನೆ ಎರಡು ಗಂಟೆ. ತಿಂಗಳ ಬೆಳಕು.


ಹೊಲಗಳ ಪಕ್ಕದಲ್ಲಿ ರೈಲು ನಿಂತಿದೆ.


ದೂರದ ದಿಗಂತದಲ್ಲಿ ನಗರವೊಂದರ ದೀಪಗಳು ತಣ್ಣಗೆ ಹೊಳೆಯುತಿವೆ.


ಮನುಷ್ಯ ಮುಳುಗಿಹೋದ ಗಾಢ ಕನಸಿನಿಂದ


ಎದ್ದಾಗ ತಾನಿದ್ದ ನೆಲೆಯ ಗುರುತಿಸಲರಿಯದಂತೆ.


ಅಥವಾ ಭಾರಿ ಕಾಯಿಲೆಯಿಂದ ಮಲಗಿದವನ


ದಿನಗಳ ಬರಿಯ ನಸುಮಿನುಗು, ಅಂಡಲೆತ, ನಿತ್ರಾಣ, ಶೀತಲ ದಿಗಂತದಂತೆ.


ರೈಲು ಸಂಪೂರ್ಣ ನಿಶ್ಚಲ.


ಗಂಟೆ ಎರಡು, ಗಾಢ ಬೆಳದಿಂಗಳು, ಕೆಲವೇ ತಾರೆಗಳು.




ಸೂರ್ಯರೊಂದಿಗೆ ಲ್ಯಾಂಡ್‌ಸ್ಕೇಪ್


ಮನೆಯ ಹಿಂಬದಿಯಿಂದ ಸೂರ್ಯ ಏಳುತ್ತಾನೆ


ಬೀದಿಯ ನಡುವಿನಲ್ಲಿ ನಿಲ್ಲುತ್ತಾನೆ


ನಮ್ಮ ಮೇಲೇ ಉಸಿರು ಚೆಲ್ಲುತ್ತಾನೆ


ತನ್ನ ಕೆಂಪು ಗಾಳಿಯೊಂದಿಗೆ.


ರಾಜಧಾನಿಯೇ ನಿನ್ನನ್ನೀಗ ನಾನು ಬಿಡಬೇಕು.


ಆದರೆ ನಾಳೆ ಇಲ್ಲೊಬ್ಬ ಉರಿಯುವ ಸೂರ್ಯನಿರಲಿದ್ದಾನೆ


ಎಲ್ಲಿ ನಾವು ದುಡಿಯಬೇಕು, ಬದುಕಬೇಕೋ


ಆ ಬೂದುಬಣ್ಣದ, ಅರ್ಧ ಸತ್ತ ಅರಣ್ಯದಲ್ಲಿ.

No comments: