Sunday, December 14, 2008

ಬೇಕು ಬೆಂಕಿಯ ಸಂಗ

‘ಬೆಂಕಿಯ ನೆನಪು - ಭಾಗ ಎರಡು -

‘ಬೆಂಕಿಯ ನೆನಪು’ ಕೃತಿಯ ಬಗ್ಗೆ ಏನು ಬರೆಯಹೊರಟರೂ ನನ್ನ ಕೈ ತಡೆಯುತ್ತದೆ ; ಅದಕ್ಕೆ ಕಾರಣ ಅದು ಉಕ್ಕಿಸುವ ಆಕ್ರಮಣ, ದೌರ್ಜನ್ಯ, ಅಮಾನವೀಯತೆ, ಹೋರಾಟ, ಚಳವಳಿ, ಕ್ರಾಂತಿಗಳ ಉರಿಯುವ ನೆನಪು. ನಮ್ಮ ನಾಡಿನಲ್ಲೂ ನಡೆದ ಅನೇಕ ಚಳವಳಿಗಳ ಅವಸಾನ ; ಮೂಲಭೂತವಾದ ಹಾಗೂ ಸರ್ವಾಕಾರಗಳ ಉತ್ಥಾನವನ್ನು ನೋಡಿ, ಓದಿ ಅರಿತವರಿಗೆ ಇದು ಅರ್ಥವಾಗಬಹುದು. ಪ್ರಭುತ್ವ ಎಲ್ಲವನ್ನೂ ಹೊಸಕಿ ಹಾಕಿಬಿಡುತ್ತದೆ ; ಎಲ್ಲವನ್ನೂ.


ಹಾಗೆಂದೇ ಇದರ ಬಗ್ಗೆ ಪ್ರತ್ಯೇಕವಾಗಿ ಏನನ್ನೂ ಬರೆಯದೆ, ಮುನ್ನುಡಿಯಿಂದ ಆಯ್ದ ಎರಡು ಭಾಗವನ್ನು ನಿಮಗೆ ಕೊಡುತ್ತೇನೆ. ಇದನ್ನು ಬರೆದವರು ರೊವಿನಾ ಹಿಲ್ ಎಂಬ ವೆನಿಜುವೆಲಾದ ಕವಯಿತ್ರಿ.
**
ಲ್ಯಾಟಿನ್ ಅಮೆರಿಕಾದ ಬಗ್ಗೆ ಆಸಕ್ತಿ ಇರುವವರು ಯಾವ ಸಂಘರ್ಷಗಳು ಅದನ್ನು ರೂಪಿಸಿದವು, ಅದರ ಕಾಣ್ಕೆ, ಮೌಲ್ಯಗಳೇನು ಎಂಬುದನ್ನೆಲ್ಲಾ ಅಕಾಡೆಮಿಕ್ಕಾದ ರಾಜಕೀಯ, ಚಾರಿತ್ರಿಕ ವಿಶ್ಲೇಷಣೆಗಳ ಉದ್ಗ್ರಂಥಗಳ ಉಸಾಬರಿಗೆ ಹೋಗದೆ ಅರಿಯಬೇಕೆಂದಿರುವವರು ಎಡುವರ್ಡೊ ಗೆಲಿಯಾನೊನ ‘ಬೆಂಕಿಯ ನೆನಪು’ ಓದಬೇಕು.


ಆದರೆ ಓದುಗನಿಗೊಂದು ಮುನ್ನೆಚ್ಚರಿಕೆ. ಚರಿತ್ರಕಾರನ ಶಿಸ್ತಿನ ಜವಾಬ್ದಾರಿಯಿಂದ ನುಣುಚಿಕೊಂಡು ಮೇಲ್ಪದರ ಕೆರೆವ ವಿವರ ಇದಲ್ಲ. ಇದು ಪುನರ್ ಸೃಷ್ಟಿಸುವ ಬೆಂಕಿ ಸುಟ್ಟೀತು. ಇಲ್ಲಿನ ಪ್ರತಿಮೆ ಮತ್ತು ಪದಗಳಿಗೆ ನೀವು ಸಂವೇದನಾಶೀಲರಾಗಿದ್ದರೆ, ಇಲ್ಲಿನ ಉರಿವ ಜ್ಞಾನದುಂಡೆ ಕೆಂಡಗಳು ನಿಮ್ಮಲ್ಲಿ ಅಳಿಸಲಾರದ ಗುರುತು ಮೂಡಿಸಿಯಾವು. ಕಣ್ಣೀರು, ನಗು, ಸುಸ್ತು, ಜಿಗುಪ್ಸೆ, ಮೆಚ್ಚುಗೆ, ದಿಗ್ಭ್ರಾಂತಿ- ಹೀಗೆ ಭಾವವಲಯಗಳು ಒಂದಾದ ಮೇಲೊಂದರಂತೆ ನಿಮ್ಮನ್ನು ಆವರಿಸುತ್ತಾ ಹೋಗುತ್ತವೆ, ಈ ತುಣುಕುಗಳ ಧಾರಾವಾಹಿ ಬಿಚ್ಚಿದಂತೆಲ್ಲಾ.


ಈ ಗ್ರಂಥ ಮೂರು ಸಂಪುಟಗಳನ್ನೊಳಗೊಂಡಿದೆ. ಪ್ರತಿ ಸಂಪುಟವೂ ಚಿಕ್ಕಪುಟ್ಟ ಘಟನೆಗಳ ವಿವರ, ವಿವರಣೆ, ವ್ಯಾಖ್ಯಾನಗಳನ್ನೊಳಗೊಂಡಿದೆ. ಕೆಲವು ಕೆಲವೇ ಸಾಲು. ದೀರ್ಘವೆಂಬುದು ಎರಡು ಪುಟ ಮೀರುವುದಿಲ್ಲ.
**
ಈ ತ್ರಿವಳಿ ಸಂಪುಟಗಳ ಹಿನ್ನೆಲೆಯಲ್ಲಿ ಲ್ಯಾಟಿನ್ ಅಮೆರಿಕ ಮತ್ತು ಭಾರತ ಭೂಖಂಡಗಳೆರಡರಲ್ಲೂ ಘಟಿಸಿದ ವಸಾಹತುಶಾಹಿ ಪ್ರಕ್ರಿಯೆ ಮತ್ತು ತದನಂತರ ನಮಗೆ ಅಂಟಿಕೊಂಡ ‘ತೃತೀಯ ವಿಶ್ವ’ ಸ್ಥಾನಮಾನದ ಇತಿಹಾಸವನ್ನು ಯಾರಾದರೂ ತೌಲನಿಕವಾಗಿ ಅಧ್ಯಯನ ಮಾಡಬೇಕು.


ಭಾರತವನ್ನು ಜಯಿಸಿದ ಬ್ರಿಟಿಷರು ಭಾರತೀಯರೊಂದಿಗೆ ಹೆಚ್ಚೇನೂ ಬೆರೆಯಲಿಲ್ಲ. ಇಲ್ಲಿ ಚದುರಿದಂತಿರುವ ಆಂಗ್ಲೋ ಇಂಡಿಯನ್ನರ ಸಂಖ್ಯೆಯೂ ನಗಣ್ಯ. ಆದರೆ ಲ್ಯಾಟಿನ್ ಅಮೆರಿಕದ ಮೇಲಿನ ಆಕ್ರಮಣ ಅಕ್ಷರಶಃ ಅಲ್ಲಿನ ಮಹಿಳೆಯರ ಮೇಲೆ ನಡೆದ ಆಕ್ರಮಣ. ಇಂಡಿಯನ್ ಗಂಡಸರ ಸಮೂಹ ಹತ್ಯೆಯಾದ ಬೆನ್ನಿಗೇ ಈ ದೈಹಿಕ ಅತ್ಯಾಚಾರವೂ ನಡೆಯುತ್ತಾ ಬಂದಿತ್ತು. ಉದಾಹರಣೆಗೆ ಇಂದಿನ ವೆನಿಜುವೆಲಾದ ಬಹುಪಾಲು ಜನಸಂಖ್ಯೆಯ ಪೂರ್ವಿಕರು ಕೇವಲ ಮೂವತ್ತು ಮಂದಿ ಸ್ಪಾನಿಶ್ ದಾಳಿಕೋರರು !


ಹೊಸ ವ್ಯಕ್ತಿತ್ವಕ್ಕಾಗಿನ ಪ್ರಯತ್ನ, ಪ್ರಭಾವ, ಒತ್ತಡಗಳನ್ನು ಅರಗಿಸಿಕೊಳ್ಳುವ ಪ್ರಕ್ರಿಯೆ ನಮ್ಮಲ್ಲಿ ಅಕ್ಷರಶಃ ಭೌತಿಕ. ಇಂದು ಈ ಸಂಕರ ಜನಾಂಗದ ಸಂಖ್ಯೆ ಮೂಲನಿವಾಸಿಗಳಿಗಿಂತಲೂ ಹೆಚ್ಚು ಎಂಬುದೇ ಈ ದುರಂತಕ್ಕೆ ಸಾಕ್ಷಿ.


ಆದರೆ ಭಾರತದಲ್ಲಿ ವಸಾಹತುಶಾಹಿ ಅನುಭವ ಮತ್ತು ಅರಗಿಸಿಕೊಳ್ಳುವಿಕೆ ಮೂಲತಃ ಸಾಂಸ್ಕೃತಿಕ ಸ್ವರೂಪದ್ದು.
ವಸಾಹತುಶಾಹಿ ಪ್ರಕ್ರಿಯೆ ವಿಭಿನ್ನ ಚರಿತ್ರೆಗಳನ್ನು ಸೃಷ್ಟಿಸಿದೆ. ಆದರೆ ಗಾರ್ಸಿಯಾ ಮಾರ್ಕ್ವೆಜ್ ಹೇಳಿದಂತೆ, ಜಾಗತೀಕರಣ ಯುಗದಲ್ಲಿ ನಮ್ಮ ಸಂಸ್ಕೃತಿ, ಜೀವನ ವಿಧಾನಗಳನ್ನು ಸಂರಕ್ಷಿಸಿಕೊಳ್ಳುವ ಹೋರಾಟದ ನೆಲೆ ಭಾರತಕ್ಕೂ ಲ್ಯಾಟಿನ್ ಅಮೆರಿಕಕ್ಕೂ ಒಂದೇ.


ಆದ್ದರಿಂದಲೇ ಈ ಹೋರಾಟದಲ್ಲಿ ನಾವು ಪರಸ್ಪರರನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸುತ್ತಾ, ಅರ್ಥೈಸಿಕೊಳ್ಳುತ್ತಾ, ಬೆಂಬಲಿಸುತ್ತಾಕ್ರಿಯಾಶೀಲರಾಗಬೇಕೇ ಹೊರತು ಮುಂದುವರಿದ ದೇಶಗಳನ್ನು ನಮ್ಮ ಲಕ್ಷ್ಯವಾಗಿಟ್ಟುಕೊಂಡಿರಬಾರದು.
**


ಮುಂದಿನ ಕಂತಿನಲ್ಲಿ ಕೃತಿಯ ಹೃದಯಂಗಮವಾದ ಎರಡು ತುಣುಕುಗಳೊಂದಿಗೆ ಇದನ್ನು ಮುಗಿಸುತ್ತೇನೆ.

1 comment:

ಹರೀಶ ಮಾಂಬಾಡಿ said...

ವಿವರಣೆ ಚೆನ್ನಾಗಿದೆ.
-‘ಬೆಂಕಿಯ ನೆನಪು’ ಓದಬೇಕು.