Saturday, December 20, 2008

ಮುಗಿಯದ ಇತಿಹಾಸದ ಆರಂಭ

ಬೆಂಕಿಯ ನೆನಪು- ಅಂತಿಮ ಕಂತು
-೧-
ಇಸವಿ ೧೪೯೨- ಗುವಾನ್ಹನಿ
ತಿಂಗಳಿಂದಲೂ ಸರಿಯಾಗಿ ನಿದ್ದೆಯಿಲ್ಲದೆ ಬೇಗುದಿಯಲ್ಲಿದ್ದ ಕೊಲಂಬಸ್ ಮೊಣಕಾಲೂರಿ, ಗಳಗಳ ಅಳುತ್ತ ನೆಲವನ್ನು ಚುಂಬಿಸಿದ್ದಾನೆ. ಮತ್ತೆ ತಡವರಿಸುತ್ತ ಎದ್ದು ಹೆಜ್ಜೆ ಮುಂದಿಟ್ಟು ಎದುರಿಗಿರುವ ಗಿಡಗಳ ರುಂಡ ಹಾರಿಸಿದ್ದಾನೆ, ತನ್ನ ಖಡ್ಗದಿಂದ. ಮತ್ತೆ ಧ್ವಜ ಹಾರಿಸಿ, ಮೊಣಕಾಲೂರಿ ಬಾನಿಗೆ ಕಣ್ಣೊಡ್ಡಿ, ತನ್ನ ರಾಜ ಫರ್ಡಿನಾಂಡ್, ರಾಣಿ ಇಸಬೆಲ್ಲಾಳ ಹೆಸರು ಘೋಷಿಸಿದ್ದಾನೆ. ಅವನ ಪಕ್ಕ ಭಾಷಾಂತರಕಾರ, ದಸ್ತಾವೇಜು ಬರಹಗಾರ ರೊಡ್ರಿಗೋ ಡಿ ಎಸ್ಕೋಬೇಡೋ ನಿಂತಿದ್ದಾನೆ.

ಈಗ ರೊಡ್ರಿಗೋ ದಾಖಲೆ ಬರೆಯುತ್ತಾನೆ. ಇಂದಿನಿಂದ ಇವೆಲ್ಲಾ ಖಂಡಾಂತರದಾಚೆ ದೂರದ ರಾಜನಿಗೆ ಸೇರಿದ್ದು, ಹವಳದ ಸಮುದ್ರ, ಹೊಳೆವ ದಂಡೆ, ಹಸುರು ಶಿಲೆಗಳು, ಕಾಡುಗಳು, ಹಕ್ಕಿಗಳು, ಬಟ್ಟೆ... ಪಾಪ. ಹಣ ಎಂದರೆ ಏನೆಂದು ಅರಿಯದೇ ಇವರನ್ನೇ ಅರೆಬೆತ್ತಲೆ ಅಚ್ಚರಿಯ ಕಣ್ಣುಗಳಿಂದ ದಿಟ್ಟಿಸುತ್ತಿರುವ ಈ ಮನುಷ್ಯರು...

ಅರೆಬೆತ್ತಲೆ ಮನುಷ್ಯರು ಬೆಪ್ಪು ಕೌತುಕತೆಯಲ್ಲಿ ನೋಡುತ್ತಿದ್ದಂತೆ ರೊಡ್ರಿಗೋ ಹೀಬ್ರೂ ಭಾಷೆಯಲ್ಲಿ ಕೇಳುತ್ತಾನೆ. ‘ಸಾಮ್ರಾಟ್ ಖಾನ್‌ನ ಸಾಮ್ರಾಜ್ಯ ಎಲ್ಲಿದೆ ? ನಿಮ್ಮ ಕಿವಿ ಮೂಗುಗಳ ಚಿನ್ನವೆಲ್ಲಿಂದ ಬಂತು ?’ ಮತ್ತೆ ಅದೇ ಬೆಪ್ಪು ಬೆರಗಿನ ಕಣ್ಣುಗಳು.

ರೊಡ್ರಿಗೋ ತನಗೆ ಗೊತ್ತಿರುವ ಅಷ್ಟಿಷ್ಟು ಚಾಲ್ಡಿಯನ್ ಭಾಷೆಯಲ್ಲಿ ಕೇಳುತ್ತಾನೆ. ‘ಚಿನ್ನ ? ದೇಗುಲ ? ಅರಮನೆಗಳು, ಸಾಮ್ರಾಟ ?’ ಮತ್ತೆ ಅರೇಬಿಕ್‌ನಲ್ಲಿ ಕೇಳುತ್ತಾನೆ. ‘ಜಪಾನ್, ಚೈನಾ, ಚಿನ್ನ ?’

ಬಳಿಕ ಕೊಲಂಬಸ್‌ನ ಕ್ಷಮೆ ಯಾಚಿಸುತ್ತಾನೆ. ಕೊಲಂಬಸ್ ಹತಾಶೆಯಲ್ಲಿ ಶಪಿಸುತ್ತಾ, ಸಾಮ್ರಾಟ್ ಖಾನ್‌ಗೆಂದೇ ಲ್ಯಾಟಿನ್‌ನಲ್ಲಿ ಬರೆದು ತಂದಿದ್ದ ತನ್ನ ಪರಿಚಯ ಪತ್ರವನ್ನು ನೆಲಕ್ಕೊಗೆಯುತ್ತಾನೆ.

ಅರೆಬೆತ್ತಲೆ ಮನುಷ್ಯರು ತಮ್ಮ ದಡದಲ್ಲಿ ಪ್ರತ್ಯಕ್ಷವಾದ ಅಪರಿಚಿತ ಮನುಷ್ಯನ ಕ್ರೋಧವನ್ನು ಗಮನಿಸಿದ್ದಾರೆ. ಅಲೆಅಲೆಯಾಗಿ ಸಂದೇಶ ಹರಡುತ್ತದೆ.

‘ಬಾನಿಂದಿಳಿದ ಮನುಷ್ಯರನ್ನು ನೋಡಬನ್ನಿ. ಕುಡಿಯಲು ಪಾನೀಯ, ತಿನ್ನಲು ಆಹಾರ ತನ್ನಿ.’
-೨-
ನೆರುಡಾನ ಮನೆ
ಇಸವಿ ೧೯೭೩
ಈ ವಿನಾಶದ ಮಧ್ಯೆ, ಛಿದ್ರಗೊಂಡ ಮನೆಯಲ್ಲಿ ಕವಿ ನೆರುಡಾ ಅಸು ನೀಗಿದ್ದಾನೆ. ಕ್ಯಾನ್ಸರಿನಿಂದ, ದುಃಖದಿಂದ. ಅವನು ಸತ್ತರೆ ಸಾಲದು, ಅವನ ವಸ್ತುಗಳು ನಾಶವಾಗಬೇಕು ಎಂದು ಮಿಲಿಟರಿ ಆಡಳಿತ ನಿರ್ಧರಿಸಿದೆ.

ಅದಕ್ಕೇ ಪುಂಡ ಸೈನಿಕರು ಅವನ ಟೇಬಲ್ಲು, ಮಂಚವನ್ನು ಒಡೆದು ಹಾಕಿದ್ದಾರೆ. ನೆಲಹಾಸನ್ನು ಚಿಂದಿ ಮಾಡಿದ್ದಾರೆ. ಪುಸ್ತಕಗಳ ಸಂಗ್ರಹವನ್ನು ಸುಟ್ಟು ಹಾಕಿದ್ದಾರೆ. ಅವನ ಅಮೂಲ್ಯ ದೀಪಗಳು, ಬಣ್ಣದ ವೈವಿಧ್ಯಮಯ ವಿನ್ಯಾಸದ ಬಾಟಲುಗಳನ್ನು, ಕಂಭಗಳನ್ನು, ಪೇಂಟಿಂಗ್‌ಗಳನ್ನು, ಚಿಪ್ಪಿನ ಸಂಗ್ರಹವನ್ನು ವ್ಯವಸ್ಥಿತವಾಗಿ ಪುಡಿಮಾಡಿ ನಾಶ ಮಾಡಿದ್ದಾರೆ. ಗೋಡೆ ಗಡಿಯಾರದ ಪೆಂಡ್ಯುಲಮ್ಮನ್ನು ಕಿತ್ತು ಹಾಕಿದ್ದಾರೆ. ಗೋಡೆಯಲ್ಲಿದ್ದ ಅವನ ಪತ್ನಿಯ ತೈಲಚಿತ್ರದ ಹೊಳೆವ ಕಣ್ಣುಗಳನ್ನು ಬಯೊನೆಟ್ಟಿನಿಂದ ಚುಚ್ಚಿ ಕಿತ್ತಿದ್ದಾರೆ.

ನೀರು ಕೆಸರು ತುಂಬಿದ ಭಗ್ನ ಮನೆಯಿಂದ ಕವಿ ಸ್ಮಶಾನಕ್ಕೆ ಯಾತ್ರೆ ಹೊರಟಿದ್ದಾನೆ. ಕವಿಯ ಆಪ್ತಮಿತ್ರರು ಶವಪೆಟ್ಟಿಗೆ ಹೊತ್ತಿದ್ದಾರೆ. ಮಾಟೆಲ್ಡಾ ಉರುಶಿಯಾ ಯಾತ್ರೆಯನ್ನು ಮುನ್ನಡೆಸಿದ್ದಾಳೆ.

‘ನೀನಿರುವಾಗ ಬದುಕೋದು ಎಷ್ಟು ಸುಂದರ’ ಎಂದು ನೆರುಡಾ ಆಕೆಯ ಬಗ್ಗೆ ಬರೆದಿದ್ದ.

ಒಂದೊಂದೇ ಬೀದಿ ದಾಟುತ್ತಿದ್ದಂತೆ ಶವಯಾತ್ರೆಯ ಹಿಂಬಾಲಕರ ಸಂಖ್ಯೆ ಹೆಚ್ಚಿದೆ.ಮಿಲಿಟರಿ ಟ್ರಕ್‌ಗಳು, ಮೆಶಿನ್‌ಗನ್ ಹಿಡಿದ ಸೈನಿಕರು, ಬೈಕ್‌ನಲ್ಲಿರುವ ಪಹರೆ ಪೊಲೀಸರು, ಭಯ ದಮನದ ಬೀಜ ಬಿತ್ತುತ್ತಿದ್ದರೂ ಜನತೆ ಸ್ಪಂದಿಸಿದೆ. ಮನೆಗಳ ಬಾಲ್ಕನಿಯಿಂದ ಕರವಸ್ತ್ರಗಳು ಧ್ವಜದಂತೆ ಹಾರಾಡಿವೆ. ಕಿಟಕಿಯ ಹಿಂದೆ ಕೈಗಳು ವಂದಿಸಿ ವಿದಾಯ ಹೇಳಿವೆ.ಹನ್ನೆರಡು ದಿನಗಳ ಕ್ರೌರ್‍ಯ ಆಘಾತಗಳ ಬಳಿಕ ಈಗ ಹೋರಾಟದ ಹಾಡೊಂದು ಪಿಸುಗುಟ್ಟಿದೆ.ತಪ್ತ ದುಃಖದಲ್ಲಿ ಗುನುಗಿದೆ. ನೋಡನೋಡುತ್ತಿದ್ದಂತೆ ಜನರ ಸಾಲು ಮೆರವಣಿಗೆಯಾಗಿದೆ. ಮೆರವಣಿಗೆ ಜನಸಾಗರವಾಗಿದೆ. ಭಯದ ವಿರುದ್ಧ ಜನತೆ ಸಾಂಟಿಯಾಗೋದ ಬೀದಿಗಳಲ್ಲಿ ಎದೆ ಸೆಟೆಸಿ ನಡೆದಿದ್ದಾರೆ, ದನಿ ಎತ್ತಿ ಹಾಡಿದ್ದಾರೆ.

ನೆರುಡಾನಿಗೆ, ಕವಿ ನೆರುಡಾನಿಗೆ, ತಮ್ಮ ಕವಿ ನೆರುಡಾನಿಗೆ, ತಮ್ಮ ಮಣ್ಣಿನ ಕವಿ ನೆರುಡಾನಿಗೆ, ಅವನು ಹೆಮ್ಮೆ ಪಡಬಹುದಾದ ರೀತಿಯಲ್ಲಿ, ಅವನ ಅಂತಿಮ ಯಾತ್ರೆಯಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

1 comment:

Anonymous said...

Tumba chennagide.
-sri