Sunday, October 9, 2011

ಗುಲಾಬಿ ಹುಡುಗಿ



೧೯೯೭ರಲ್ಲಿ ಜೇಮ್ಸ್ ಕ್ಯಾಮರೂನ್‌ನ ‘ಟೈಟಾನಿಕ್’ ಸಿನಿಮಾ ಬಂತು; ಇಡೀ ಜಗತ್ತಿನ ಪ್ರೇಕ್ಷಕರೆಲ್ಲ ನೀರಿನಲ್ಲಿ ಮುಳುಗಿಹೋಗುವ ವೈಭವದ ಟೈಟಾನಿಕ್ ಹಡಗನ್ನು ನೋಡಿ ಒಂದೆಡೆ ಕಣ್ಣೀರು ಮಿಡಿದರು; ಅದೇ ಹೊತ್ತಿಗೆ, ಮುಳುಗದೆ ಉಳಿದು ಹಲಗೆಯ ಮೇಲೆ ತೇಲಿ ಬದುಕುವ ‘ರೋಸ್ ಡೆವಿಟ್ ಬುಕಾಟರ್’ ಎಂಬ ತುಂಬಿದೆದೆಗಳ, ಉಬ್ಬಿದ ಕಪೋಲದ, ಗುಂಗುರುಕೂದಲಿನ, ಯವ್ವನ ಉಕ್ಕಿ ಚೆಲ್ಲುವರಿಯುವ ತರುಣಿಯನ್ನು ಕಣ್ತುಂಬಿಕೊಂಡರು. ರೋಸ್ ಮತ್ತು ಲಿಯೊನಾರ್ಡೊ ಡಿಕ್ಯಾಪ್ರಿಯೊನ ಪ್ರೇಮಪ್ರಸಂಗದ ಬಿಸಿಬಿಸಿ ದೃಶ್ಯಗಳನ್ನು ಎದೆಗಿಳಿಸಿಕೊಂಡು ಬೆಚ್ಚಗಾದರು. ಟೈಟಾನಿಕ್ ಮುಳುಗಿತು; ಆದರೆ ಈ ನಟಿಯ ಬದುಕು ಊಹೆಗೂ ನಿಲುಕದ ಎತ್ತರದಲ್ಲಿ ತೇಲಿತು. ಈಕೆ ಕೇಟ್ ವಿನ್ಸ್‌ಲೆಟ್.


ಈಕೆ ಹುಟ್ಟಿದೂರು ಇಂಗ್ಲೆಂಡಿನಲ್ಲಿ ಈಗಲೂ ಆಕೆಯನ್ನು ಕರೆಯೋದು ‘ರೋಸ್’ ಅಂತಲೇ. ಜನಿಸಿದ್ದು ಅಕ್ಟೋಬರ್ ೨೫ರಂದು; ಭೂಮಿ ಮೇಲೆ ಅವತರಿಸಿ ೩೬ ವರ್ಷಗಳಾದವು; ತವರು ಇಂಗ್ಲೆಂಡಿನ ಬರ್ಕ್‌ಶೈರ್; ಎತ್ತರ ಐದಡಿ ಆರೂವರೆ ಇಂಚು... ಎಂಬುದೆಲ್ಲ ಈಕೆಯ ಬಗ್ಗೆ ತುಸು ಆಸಕ್ತಿ ಹುಟ್ಟಿಸಬಹುದಾದ ವಿವರಗಳು. ಅವೆಲ್ಲ ಇರಲಿ; ಈಕೆಯ ಬಯಾಗ್ರಫಿಯ ಇತರೆ ಸಂಗತಿಗಳೂ ಶ್ಯಾನೆ ಕುತೂಹಲಕರವಾಗಿವೆ.


ಈಕೆ ಹುಟ್ಟಿದ್ದು ರಂಗಭೂಮಿ ಹಿನ್ನೆಲೆಯಿದ್ದ ಫ್ಯಾಮಿಲಿಯಲ್ಲಿ. ಎಲ್ಲ ಹುಡುಗಿಯರಂತೆ ಹರೆಯಕ್ಕೆ ಬಂದ ಈಕೆಯಲ್ಲಿ ಆಸೆ ಹಾಗೂ ಕನಸುಗಳು ಮೊಳೆಯತೊಡಗಿದ್ದವು. ೧೧ರ ಹರೆಯದಲ್ಲೇ ಜಾಹಿರಾತಿಗೆ ನಟಿಸಿದ ಈಕೆ ಅಲ್ಲಿಂದಾಚೆ ವೇದಿಕೆ ಮೇಲೆ ನಾಟಕವಾಡತೊಡಗಿದಳು. ೧೭ರ ಹೊತ್ತಿಗೆ ಈಕೆಯ ದೇಹ ಪುಷ್ಟವಾಗಿ ಚಿಮ್ಮತೊಡಗಿತ್ತು; ಯವ್ವನ ದೇಹದಿಂದ ಆಚೆ ಪುಟಿಯುತ್ತಿತ್ತು. ಕೆಲವು ‘ಎ’ ಸರ್ಟಿಫಿಕೇಟ್ ಫಿಲಂಗಳು ಈಕೆಯನ್ನು ಕರೆದವು. ಈಕೆಯೂ ಹೆಚ್ಚಿಗೇನು ಯೋಚಿಸದೆ ತನ್ನ ಮೈತೆರೆದು ಚಿತ್ರರಂಗದಲ್ಲಿ ಒಂದಾದಳು. ಹುಡುಗರು ನೋಡಿ ಒದ್ದಾಡುವಂತೆ ಈಕೆಯನ್ನು ನಿರ್ದೇಶಕರು ತೋರಿಸಿದರು. ‘ಎ’ ಮೂವಿಗಳಿಂದ ಶೇಕ್ಸ್‌ಪಿಯರ್ ಟ್ರಾಜಿಡಿಗಳವರೆಗೆ ಎಲ್ಲ ವಿಧದ ಫಿಲಂಗಳಲ್ಲಿ ಅಭಿನಯಿಸಿದಳು.


ಆದರೆ ಈಕೆಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟದ್ದು ಮಾತ್ರ ಟೈಟಾನಿಕ್. ದಿನ ಬೆಳಗಾಗುವುದರೊಳಗೆ ಈಕೆ ಸಿನೆರಸಿಕರ ಮನೆಮಾತಾಗಿ ಹೋದಳು. ಲೋಕಾದ್ಯಂತ ಪಡ್ಡೆ ಹುಡುಗಿಯರು ತಾವೂ ರೋಸ್‌ಳಂತಿರಬೇಕೆಂದು, ಸಾವಿನಂಚಿನಲ್ಲೂ ತಮ್ಮ ಬೆರಳಿಗೆ ಬೆರಳು ಬೆಸೆದು ಕೂರಬಹುದಾದ ಹುಡುಗನಿಗಾಗಿ ಹುಡುಕತೊಡಗಿದರು. ಈಕೆ ಮಾತ್ರ ಎರಡೆರಡು ಆಸ್ಕರ್ ಪ್ರಶಸ್ತಿ ಮಡಿಲಿಗೆ ಹಾಕಿಕೊಂಡು ಹಾಲಿವುಡ್ ಟಾಪ್ ನಟಿಯರ ಸಾಲಿಗೆ ಚಿಮ್ಮಿಬಿಟ್ಟಳು.


ಸಕ್ಸಸ್‌ಫುಲ್ ನಟನಟಿಯರ ವೈವಾಹಿಕ ಜೀವನ ಮಾತ್ರ ಅದ್ಯಾಕೆ ಹಾಗಿರುತ್ತದೆಯೋ. ಫ್ಲರ್ಟಿಂಗ್, ಪ್ರೇಮ, ದಾಂಪತ್ಯ, ಡೈವೋರ್ಸ್... ಇವರ ಬದುಕಿನ ನಿತ್ಯಚಕ್ರ. ಈಕೆಯೂ ಮೂರು ಮೂರು ಗಂಡಂದಿರನ್ನು ಕಂಡವಳೇ. ೧೯೯೮ರಲ್ಲಿ ಜಿಮ್ ತ್ರೀಪಲ್‌ಟನ್ ಎಂಬ ನಿರ್ದೇಶಕನನ್ನು ಮದುವೆಯಾದಳು. ಒಬ್ಬಳು ಮಗಳು ಹುಟ್ಟಿದಳು. ಮೂರು ವರ್ಷದಲ್ಲಿ ಆತನಿಂದ ವಿಚ್ಛೇದನ ಪಡೆದಳು. ಅದಾಗಿ ಎರಡು ವರ್ಷದಲ್ಲಿ ಮತ್ತೊಬ್ಬ ನಿರ್ದೇಶಕ ಸ್ಯಾಮ್ ಮೆಂಡೆಸ್‌ನನ್ನು ಮದುವೆಯಾದಳು. ಒಬ್ಬ ಮಗ ಹುಟ್ಟಿದ. ಇಬ್ಬರೂ ಏಳು ವರ್ಷ ಜತೆಗಿದ್ದರು. ಕಳೆದ ವರ್ಷ ಬೇರೆಯಾದರು.


ರೋಸ್ ಬದುಕು ಈಗ ಮತ್ತೊಮ್ಮೆ ಪಥ ಬದಲಿಸಿದೆ. ಅವಳೀಗ ಇನ್ನೊಂದು ಪ್ರೇಮದ ಅನ್ವೇಷಣೆಯಲ್ಲಿದ್ದಾಳೆ. ಮೊನ್ನೆ ಈಕೆ ಕೆರಿಬಿಯನ್ ದ್ವೀಪಕ್ಕೆ ವಿಹಾರಾರ್ಥ ಹೋದಾಗ ಈಕೆಯ ಜತೆಗೆ ಲೂಯಿಸ್ ಡೌಲರ್ ಎಂಬ ಮಾಡೆಲ್ ಪ್ರಿಯತಮನಿದ್ದ. ಅಲ್ಲೇನಾಯಿತೋ ಗೊತ್ತಾಗಲಿಲ್ಲ. ವಾಪಸ್ ಪ್ಲೇನ್ ಹತ್ತಿದಾಗ ಆಕೆಯ ಜತೆಗಿದ್ದವನು ನೆಡ್ ರಾಕ್‌ನ್ರಾಲ್. ಈತ ವರ್ಜಿನ್ ಸಂಸ್ಥೆಯ ರಿಚರ್ಡ್ ಬ್ರಾಸ್ನನ್ ಇದ್ದಾನಲ್ಲ, ಆತನ ಸಹೋದರನ ಮಗ.


ವಯಸ್ಸು ಮೂವತ್ತಾರು ಎಂದರೆ ಸೆಟಲ್ ಆಗಬೇಕಾದ ಪ್ರಾಯವೇ. ಆಗಲಿ ಬಿಡಿ. ಟೈಟಾನಿಕ್ ಆದಂತೆ ಆಕೆಯ ಬದುಕು ಆಗದಿರಲಿ.

No comments: