Monday, October 10, 2011

ಕಳಚಿಬಿದ್ದ ಸೇಬಿಗೊಂದು ಚರಮವಾಕ್ಯ

ಗೆಳೆಯ ಸ್ಟೀವ್,



ನೀನೊಬ್ಬನಿದ್ದಿ ಎಂದು ಜಗತ್ತಿಗೆ ಗೊತ್ತಾಗುವುದಕ್ಕೆ ಸಾಯಬೇಕಿರಲಿಲ್ಲ. ಇಲ್ಲಿ ಪ್ರತಿಯೊಬ್ಬನ ಕೈಯಲ್ಲೂ ಮೆರೆಯುವ ಐಫೋನ್, ಐಪಾಡ್, ಐಪ್ಯಾಡ್‌ಗಳೇ ನಿನ್ನಂಥ ಪ್ರತಿಭಾವಂತನ ಇರುವಿಕೆಯನ್ನು ಸಾರಿ ಸಾರಿ ಹೇಳುತ್ತಿದ್ದವು. ಸರಿಯಾಗಿ ಆರು ವರ್ಷ ಹಿಂದೆ ಸ್ಟಾನ್‌ಫರ್ಡ್ ಯೂನಿವರ್ಸಿಟಿಯ ಹಾಲ್‌ನಲ್ಲಿ ನಿಂತು ನೀನು ಹೀಗೆ ಘೋಷಿಸಿದ್ದೆ: ‘ಸಾವೆಂಬುದು ಬಹುಶಃ ಈ ಜೀವನ ಕಂಡುಕೊಂಡ ಶ್ರೇಷ್ಠ ಸಂಶೋಧನೆ. ಅದು ಬದುಕಿನ ಬದಲಾವಣೆಯ ಚೋದಕ’. ಆಮೇಲೆ ಹೀಗೂ ಹೇಳಿದ್ದೆ: ‘ನಿಮ್ಮಲ್ಲಿ ಹಸಿವಿರಲಿ, ಮೂರ್ಖತನವಿರಲಿ’. ಸಾವು ಹಸಿದಿತ್ತು. ಮರೆಯಲ್ಲಿ ಕಾದು ನಿಂತಿತ್ತು. ನೀನು ಅದರ ಜತೆ ಹೊರಡಲು ರೆಡಿಯಾಗಿದ್ದೆ. ಒಂದು ಅಪೂರ್ವ ರಾಗವನ್ನು ತಟ್ಟನೆ ನಿಲ್ಲಿಸಿ ಗಾಯಕ ಎದ್ದು ಹೋದಂತೆ, ಇನ್ನೇನು ಜೀವ ಬರಲಿರುವ ವರ್ಣಚಿತ್ರದತ್ತ ಕಲಾವಿದ ಕೈಕೊಡವಿ ನಡೆದಂತೆ ನೀನು ಸತ್ತು ಹೋಗಿಬಿಟ್ಟೆ.


ನೀನು ತೀರಿಕೊಂಡಂದಿನಿಂದ ಜಗತ್ತಿನಾದ್ಯಂತ ನಿನ್ನ ಗುಣಗಾನಗಳೇ ಕೇಳಿ ಬರುತ್ತಿವೆ. ಬಿಲ್ ಗೇಟ್ಸ್ ಬಿಟ್ಟರೆ ನಮ್ಮ ಮಾಧ್ಯಮಗಳ ಇಷ್ಟೊಂದು ಸ್ಪೇಸ್ ಪಡೆದುಕೊಂಡ ತಂತ್ರಜ್ಞಾನ ಕ್ಷೇತ್ರದ ಇನ್ನೊಬ್ಬನಿರಲಿಕ್ಕಿಲ್ಲ. ನೀನು ರಾಜಕಾರಣಕ್ಕೆ ಕಾಲಿಡಲಿಲ್ಲ, ಸಂಗೀತ ನುಡಿಸಲಿಲ್ಲ, ಸಾಹಿತ್ಯ ಬರೆಯಲಿಲ್ಲ. ಆದರೂ ನಮ್ಮ ಯುವಜನರಿಗೆ ಏಕ್‌ದಂ ಇಷ್ಟವಾಗಿಹೋದೆ. ರೀಡ್ ಕಾಲೇಜಿನಿಂದ ನೀನು ಡ್ರಾಪೌಟ್ ಎಂಬುದು ನಮ್ಮ ಕಾಲೇಜ್ ಸ್ಟೂಡೆಂಟ್ಸ್‌ಗೆ ಇಷ್ಟವಾಯ್ತು. ಬಡತನದ ಬಾಲ್ಯ ಹಾಗೂ ಹರೆಯ ಅನುಭವಿಸಿ ಈ ಮಟ್ಟಕ್ಕೆ ಬೆಳೆದವ ಎಂಬುದು ನಮ್ಮಲ್ಲಿ ಉದ್ಯೋಗ ಹುಡುಕುತ್ತ ಗಲ್ಲಿ ಅಲೆವ ಬಡ ಯುವಕರ ಕನಸುಕಂಗಳಲ್ಲಿ ಆಸೆ ಚಿಗುರಿಸಿತು. ಕ್ಯಾನ್ಸರ್ ರೋಗ ಖಚಿತವಾದ ಮೇಲೂ ಹೊಸ ಹೊಸ ಚಿಂತನೆ, ಅನ್ವೇಷಣೆ ಬಿಟ್ಟುಕೊಡಲಿಲ್ಲ ಎಂಬುದು ಜೀವನಪ್ರೀತಿ ಇರುವವರೆಲ್ಲರಿಗೂ ಮೆಚ್ಚುಗೆಯಾಯ್ತು. ಏನಯ್ಯಾ ನಿನ್ನ ಜಾದು ?


ಕಂಪ್ಯೂಟರೊಂದಕ್ಕೆ ‘ಆಪಲ್’ ಎಂಬ ಹೆಸರಿಡಬಹುದು ಎಂದು ಯೋಚಿಸಿದಾಗಲೇ ನೀನು ಬಹುತೇಕ ಗೆದ್ದುಬಿಟ್ಟಿದ್ದೆ. ಅದರಲ್ಲೊಂದು ಅಪೂರ್ವ ಸೌಂದರ್‍ಯಪ್ರಜ್ಞೆ, ಕಲೆಗಾರಿಕೆಯಿತ್ತು. ನೀನು ಸತ್ತಾಗ ನಿನ್ನ ಗೆಳೆಯನೊಬ್ಬ ಹೇಳಿದ್ದಿಷ್ಟು- ‘ಆತ ಮೊಜಾರ್ಟ್, ಪಿಕಾಸೊಗಳ ಸಾಲಿಗೆ ಸೇರುವ ಕಲೆಗಾರ’. ನಿನ್ನ ಕಂಪನಿಯ ಉತ್ಪನ್ನಗಳನ್ನು ಬಳಸುವ ಯಾರಿಗೇ ಆದರೂ ಈ ಹೇಳಿಕೆಯ ಧ್ವನಿ ತಟ್ಟನೆ ಹೊಳೆಯುತ್ತದೆ. ಹತ್ತು ವರ್ಷಗಳ ಈಚಿನ ತಲೆಮಾರು, ಆಪಲ್ ಎಂದ ಕೂಡಲೇ ಐಪಾಡು ಐಫೋನ್‌ಗಳ ಕಡೆ ನೋಡುತ್ತದೆ. ಅದೊಂದು ಹಣ್ಣು ಎಂಬ ಅರ್ಥವನ್ನೇ ಎರಡನೇ ಸ್ಥಾನಕ್ಕೆ ಸರಿಸಿದೆಯಲ್ಲ, ಗ್ರೇಟ್ ಕಣಯ್ಯಾ ನಿನ್ನ ಜಾಬ್.


ಆದರೂ, ನಿನ್ನ ಕೆಲಸ ಮುಗಿಸಿ ನೀನು ಹೋದ ಬಳಿಕ, ನಿನ್ನ ಕೊಡುಗೆ ಏನು ಎಂದು ಚಿಂತಿಸುತ್ತಾ ಕೂತಿರುವಾಗ, ಒಂದಷ್ಟು ಮೆಚ್ಚುಗೆಯೂ ಇನ್ನಿಷ್ಟು ತಕರಾರೂ ಒಟ್ಟಿಗೆ ಮೂಡುತ್ತಿವೆ. ಮೆಚ್ಚುಗೆ ಯಾಕೆಂದರೆ, ವಯರ್‌ಗಳಿಂದ ಗೋಜಲಾದ, ಒರಟು ಸಿಲಿಕಾನ್ ಪ್ಲೇಟುಗಳ ತಂತ್ರಜ್ಞಾನದ ಕ್ಷೇತ್ರವನ್ನು ಆಪಲ್ ಹಣ್ಣಿನಷ್ಟೇ ನಯವಾಗಿ, ತಾಜಾ ಆಗಿ ಕಾಣುವಂತೆ ರೂಪಿಸಿದೆಯಲ್ಲ, ಅದಕ್ಕೆ. ನಿನ್ನ ಒಂದೊಂದು ಉತ್ಪನ್ನವೂ ಒಂದೊಂದು ಕಾವ್ಯದಂತೆ ಇದ್ದವಲ್ಲ, ಅದಕ್ಕೆ. ಉದಾಹರಣೆಗೆ ನಿನ್ನ ಐಫೋನ್. ಇದರಲ್ಲಿ ಎಷ್ಟೊಂದು ಅಪ್ಲಿಕೇಶನ್‌ಗಳಿವೆ ಎಂದು ಲೆಕ್ಕ ಹಾಕುತ್ತ ಕೂರುವವನಿಗೆ ಜೀವನ ಬೇಕಾದೀತು. ಆದರೆ ಅದೆಲ್ಲವನ್ನೂ ಸರಳವಾದ ಒಂದೆರಡು ಸ್ಪರ್ಶಗಳಿಂದಲೇ ಜೀವಂತವಾಗುವಂತೆ ಮಾಡಿದೆಯಲ್ಲ. ನೆನೆದಾಗ ಥಟ್ಟನೆ ಬಂದು ಸ್ವರಮೇಳ ಶುರುಮಾಡುವ ಅಪ್ಸರೆಯರಂತೆ ನಿನ್ನ ಐಪ್ಯಾಡುಗಳು ಹಾಡು ಗುನುಗುತ್ತಿದ್ದವಲ್ಲ. ಇದೆಲ್ಲ ನಿನ್ನ ಕನಸಲ್ಲಿ ಹೊಳೆದವೋ ಯಾ ಎಚ್ಚರದಲ್ಲೋ ?


ಸೊನ್ನೆಯಿಂದ ಆರಂಭಿಸಿ ಸಾಮ್ರಾಜ್ಯ ಕಟ್ಟಬಹುದು ಎಂಬುದು ಎಲ್ಲೋ ಕೆಲವರಿಗಷ್ಟೇ ಹೊಳೆಯುವ ಸಾಧ್ಯತೆ. ನೀನು ಹಾಗೆ, ಅಪ್ಪನ ಗ್ಯಾರೇಜಿನಿಂದ ಆರಂಭಿಸಿದವನು ಟ್ರೇಡ್ ಸೆಂಟರ್‌ನ ತುತ್ತ ತುದಿ ಮುಟ್ಟಿದೆಯಲ್ಲ. ಹಾಗೆ ಮತ್ತೆ ಮತ್ತೆ ಸೊನ್ನೆಗೆ ಹಿಂದಿರುಗಿ ಅಲ್ಲಿಂದ ಆರಂಭಿಸಿ ಮತ್ತೊಂದು ಸಾಮ್ರಾಜ್ಯ ಕಟ್ಟುವುದು ಯಾರಿಗೂ ಸಲೀಸಲ್ಲ. ಒಂದು ದಿನ ನೀನೇ ಕಟ್ಟಿದ ಆಪಲ್ ಸಂಸ್ಥೆಯಿಂದ ಪದಚ್ಯುತನಾಗಿ ಹೊರಬಿದ್ದೆ. ಮರಳಿ ಮತ್ತೆ ಗ್ಯಾರೇಜಿನಿಂದಲೇ ಆರಂಭಿಸಿ ಇನ್ನೊಂದು ಕಂಪನಿ ಸೃಷ್ಟಿಸಿ, ಅದರ ಮುಂದೆ ಆಪಲ್ ಡೊಗ್ಗಾಲೂರುವಂತೆ ಮಾಡಿದೆಯಲ್ಲ. ಆನಿಮೇಶನ್ ಫಿಲಂ ಕ್ಷೇತ್ರದಲ್ಲಿ ಕೂಡ ಪಿಕ್ಸರ್, ಟಾಯ್ ಸ್ಟೋರಿಗಳೊಂದಿಗೆ ಇತಿಹಾಸ ಸೃಷ್ಟಿಸಿ ಧೂಳಿನಿಂದ ಎದ್ದು ಬಂದೆಯಲ್ಲ.


ಅದಿರಲಿ, ನೀನು ಸಾವಿನ ಕಣ್ಣಲ್ಲಿ ಕಣ್ಣಿಟ್ಟು, ‘ಏ ಇರು, ಕೆಲಸವಿದೆ...’ ಅಂತ ಅದನ್ನು ಕಾಯಿಸಿದ್ದು ಮಾತ್ರ ಧೀರೋದಾತ್ತವೇ. ಅಂತಕನ ದೂತರು ಮರೆಯಲ್ಲಿ ನಿಂತಿದ್ದಾರೆ ಎಂದು ಗೊತ್ತಾದ ಮೇಲೂ ಮೊದಲಿನ ಹುರುಪಿನೊಂದಿಗೆ ಕೆಲಸ ಮಾಡುವುದು ಸಾಮಾನ್ಯರಿಂದ ಆಗುವಂಥದ್ದಲ್ಲ. ಆಮೇಲೆ ನೀನು ತಂದ ಐಫೋನ್ ಹಾಗೂ ಐಪ್ಯಾಡ್‌ಗಳು ಆ ಸಾವಿನ ಕ್ರೂರ ಮುಖದೆದುರು ನೀನು ಹಿಡಿದ ಜಾಜ್ವಲ್ಯಮಾನ ಸೊಗಸಿನ ಜೀವನೋಲ್ಲಾಸದ ತುಣುಕುಗಳಂತಿದ್ದವು. ಅದು ನೀನು ಮೃತ್ಯುವಿಗೆ ಕೊಟ್ಟ ಉತ್ತರದಂತಿತ್ತು.


ನಮ್ಮ ದೇಶಕ್ಕೂ ನಿನಗೂ ತುಸು ಕಹಿ-ಸಿಹಿ ಸಂಬಂಧವಿದೆ. ನಿನಗೆ ೧೮ ವರ್ಷವಿದ್ದಾಗ, ೧೯೭೪ರಲ್ಲಿ, ನೀನು ಅಧ್ಯಾತ್ಮದ ಹುಡುಕಾಟದಲ್ಲಿ ಭಾರತಕ್ಕೆ ಬಂದೆಯಂತೆ. ಒಬ್ಬ ಬಾಬಾ ನಿನಗೆ ಜ್ಞಾನೋದಯ ಮಾಡಿಸುತ್ತೇನೆಂದು ಹೇಳಿ, ನಿನ್ನ ತಲೆ ಬೋಳಿಸಿ, ಸರಿಯಾಗಿಯೇ ಕೈಕೊಟ್ಟನಂತೆ. ಈ ಮಾತಿನ ಅಧ್ಯಾತ್ಮಗಳೆಲ್ಲ ಬೊಗಳೆ ಎಂಬುದು ನಮಗೆ ಅರ್ಥವಾಗುವ ಮೊದಲೇ ನಿನಗೆ ಅರ್ಥವಾಯಿತಲ್ಲ ! ನಂತರ ಬೌದ್ಧ ತತ್ವಗಳಿಗೆ ಮಾರುಹೋಗಿ ನೀನು ಬೌದ್ಧ ಧರ್ಮ ಅಂಗೀಕರಿಸಿದ್ದು, ಕಾಯಕದಲ್ಲೇ ಅಧ್ಯಾತ್ಮವನ್ನು ಕಂಡದ್ದು ಎಲ್ಲ ೨೧ನೇ ಶತಮಾನದ ಟೆಕ್ ಐಕಾನ್ ಸಂತನೊಬ್ಬನಿಗೆ ಹೇಳಿ ಮಾಡಿಸಿದಂತೆಯೇ ಇದೆ. ನಿನ್ನ ಕಾಯಕಕ್ಕೆ ನಮ್ಮ ಕೈಲಾಸವೂ ತುಸು ಕೊಡುಗೆ ನೀಡಿದೆ ಎಂದು ನಾವು ಸುಳ್ಳೇ ಹೆಮ್ಮೆಪಟ್ಟುಕೊಳ್ಳಬಹುದೇನೊ.


ಇರಲಿ ಮಾರಾಯ, ನೀನು ದೊಡ್ಡವನು. ನಿನ್ನ ಕನಸುಗಳು, ನಿನ್ನ ಸಾಧನೆ ಎಲ್ಲವೂ ದೊಡ್ಡದೇ. ಆದರೆ ನಿನ್ನ ಬಗ್ಗೆ ನಮಗೆ ತುಸು ತಕರಾರುಗಳೂ ಇವೆ, ಕೇಳಿಸಿಕೊ. ನಾವು ಭಾರತೀಯರಿದ್ದೇವಲ್ಲ, ಗಾಂಧಿಯನ್ನೂ ಟೀಕಿಸದೆ ಬಿಟ್ಟವರಲ್ಲ. ಇನ್ನು ನಿನ್ನನ್ನು ಬಿಡುತ್ತೇವ ?


ಇತ್ತೀಚೆಗೆ ಫೋರ್ಬ್ಸ್ ಲೆಕ್ಕ ಹಾಕಿದಂತೆ ನಿನ್ನ ಒಟ್ಟಾರೆ ಆಸ್ತಿಯ ಮೌಲ್ಯ ೭ ಶತಕೋಟಿ ಡಾಲರ್. ಅಂದರೆ ಏಳರ ಮುಂದೆ ಎಷ್ಟು ಸೊನ್ನೆ ಹಾಕಬೇಕೊ, ನಮಗೆ ಗೊತ್ತಿಲ್ಲ. ಅಷ್ಟಿದ್ದವನು, ಮಾರಾಯ, ಒಂದು ಡಾಲರ್ ಆದರೂ ಕೈ ಎತ್ತಿ ಬಡ ರಾಷ್ಟ್ರಗಳ ಹಸಿದವರಿಗೆ ಹಂಚಬಹುದಿತ್ತಲ್ಲ ? ಹೆಮ್ಮೆಯ ಧ್ವಜವನ್ನು ಎತ್ತೆತ್ತೆಲ್ಲ ಹರಡಿಬಿಡುವ ನಿನ್ನ ಅಮೆರಿಕಾ ರಾಷ್ಟ್ರದ ಸಂಪತ್ತೆಲ್ಲ ಅನ್ಯ ವಸಾಹತು ದೇಶಗಳನ್ನು ಉಪಭೋಗ ಸಾಮಗ್ರಿಗಳ ಮೂಲಕ ಕೊಳ್ಳೆ ಹೊಡೆದು ತಂದದ್ದು- ಅದರಲ್ಲಿ ನಿನ್ನದೂ ಪಾಲಿದೆ ಎಂಬುದು ನಿನಗೆ ಗೊತ್ತಿಲ್ಲದ್ದಾಗಿತ್ತೆ ? ಹಾಗೆ ಲೂಟಿಯಿಂದ ಪಡೆದ ಸಂಪತ್ತಿನಲ್ಲಿ ಒಂದು ಪೈಸೆಯನ್ನೂ ಅಲ್ಲಿಗಾಗಲೀ ನಿನ್ನದೇ ದೇಶದ ನಿರುದ್ಯೋಗಿಗಳಿಗಾಗಲೀ ವಿನಿಯೋಗಿಸಬೇಕು ಎಂಬ ಮಾನವೀಯ ಅಂತಃಕರಣ ನಿನ್ನಲ್ಲಿಲ್ಲದೆ ಹೋಯ್ತೆ ? ಆ ವಿಷಯದಲ್ಲಿ ನಿನ್ನ ನಿಡುಗಾಲದ ಪ್ರತಿಸ್ಪರ್ಧಿ, ಗೆಳೆಯ ಬಿಲ್ ಗೇಟ್ಸ್‌ನೇ ಎಷ್ಟೋ ವಾಸಿ ಮಾರಾಯ.


ಇನ್ನು ನಿನ್ನ ಪ್ರಾಡಕ್ಟ್‌ಗಳನ್ನೇ ನೋಡು. ಶ್ರೇಷ್ಠತೆ, ಕುಸುರಿಗಾರಿಕೆಯ ಮೂಲಕ ನೀನು ಅತ್ಯಂತ ಗುಣಮಟ್ಟದವುಗಳನ್ನೇ ತಯಾರಿಸಿದೆ ನಿಜ, ಆದರೆ ನಮ್ಮಂತ ಬಡ, ಮಧ್ಯಮ ವರ್ಗದವರ್‍ಯಾರೂ ಮುಟ್ಟಲಾಗದ ಬೆಲೆಗಳನ್ನೇ ಇಟ್ಟೆ. ಇಂದು ಆಪಲ್ ಶ್ರೇಷ್ಠತೆಗೆ ಹೆಸರಾಗಿರಬಹುದು. ಆದರೆ ನಮ್ಮಂಥ ಅಭಿವೃದ್ಧಿಶೀಲ ರಾಷ್ಟ್ರಗಳ ಮಧ್ಯಮ ವರ್ಗದವರಿಗೆ ಗಗನಕುಸುಮ. ಇರಲಿ, ನಾವು ಗಾಂಧಿಯ ಸರಳತೆ ಹಾಗೂ ಮಾನವೀಯ ಮಾರ್ವಾಡಿತನಗಳಿಗೆ ಮನಸೋತವರು. ಆಧುನಿಕ ಜಗತ್ತಿನ ಕತ್ತು ಕುಯ್ಯುವ ವ್ಯಾಪಾರಿ ಪೈಪೋಟಿಯಲ್ಲಿ ನೀನು ಪಳಗಿದವನು. ಡಾಲರ್ ಹೊರತು ಬೇರೇನೂ ಚಿಂತಿಸದವನು. ನಮಗಿದು ಆಗಿಬರುವುದಿಲ್ಲ.


ಅದಿರಲಿ, ನೀನೇಕೆ ಅಷ್ಟೊಂದು ಸ್ವಾರ್ಥಿ, ಸ್ವಕೇಂದ್ರಿತ, ಮುಂಗೋಪಿ ಮತ್ತು ಒರಟನಾಗಿದ್ದೆ ? ನಿನ್ನ ಆತ್ಮೀಯ ಗೆಳೆಯರಿಗೂ ನಿನ್ನನ್ನು ಸಹಿಸಿಕೊಳ್ಳುವುದು ಕಷ್ಟವಿತ್ತಂತೆ ಹೌದೆ ? ನಿನ್ನ ಯೋಚನೆಗಳನ್ನು ಯಾರಿಗೂ ಬಿಟ್ಟುಕೊಡದೆ ಕೊನೆಯವರೆಗೂ ನಿಗೂಢವಾಗಿ ಇಟ್ಟುಕೊಳ್ಳುತ್ತಿದ್ದೆ. ಹೀಗಾಗಿ ಕಂಪನಿಯಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕೊನೆಕೊನೆಯ ದಿನಗಳಲ್ಲಿ ಕಾರ್‍ಯಭಾರದ ಒತ್ತಡ ತಡೆಯಲಾಗದೆ ಸಿಕ್ಕಸಿಕ್ಕವರ ಮೇಲೆಲ್ಲ ನಿಷ್ಕಾರಣ ರೇಗುತ್ತಿದ್ದೆಯಂತೆ. ಸಾವಿನ ಸಮೀಪದಲ್ಲಿ ನಿಂತು ನೀನು ತತ್ವಜ್ಞಾನಿಯಂತೆ ಮಾತಾಡಿದೆ ನಿಜ, ಆದರೆ ಒಳಗೊಳಗೇ ನೀನು ಕುಸಿಯುತ್ತಿದ್ದುದು ಗೊತ್ತಾಗುತ್ತಿತ್ತು.


ಹೋಗಲಿ ಬಿಡು, ಇವೆಲ್ಲ ಇಲ್ಲದೆ ಹೋಗಿದ್ದರೆ, ನೀನು ನಡೆದಾಡುವ ದೇವತೆಯೇ ಆಗಿಬಿಡುತ್ತಿದ್ದೆಯಲ್ಲ ! ಆ ಅಪಾಯದಿಂದ ಪಾರಾದೆ.ಎಲ್ಲ ತಕರಾರುಗಳೊಂದಿಗೆ, ಪ್ರೀತಿಪೂರ್ವಕ ವಿದಾಯ. ಹೋಗಿಬಾ.


ಹಸಿವಿರಲಿ, ಮೂರ್ಖತನವಿರಲಿ
ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ಟೀವ್ ಮಾಡಿದ ಐತಿಹಾಸಿಕ ಭಾಷಣ
ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯದಲ್ಲಿ ಮಾತಾಡಲು ಸಿಕ್ಕಿದ ಗೌರವಕ್ಕಾಗಿ ಸಂತೋಷವಾಗಿದೆ. ನಿಜವೆಂದರೆ, ಪದವಿಗೆ ನಾನು ಹತ್ತಿರ ಬಂದದ್ದು ಎಂದರೆ ಇಂದೇ. ನಾನು ಯಾವ ಕಾಲೇಜಿನಿಂದಲೂ ಪದವಿ ಪಡೆದವನಲ್ಲ. ನಿಮಗೆ ನನ್ನ ಜೀವನದ ಮೂರು ಕತೆಗಳನ್ನು ಹೇಳುತ್ತೇನೆ, ಅಷ್ಟೇ.
ಮೊದಲ ಕತೆ- ಬಿಂದುಗಳನ್ನು ಸೇರಿಸುವ ರೀತಿಯ ಬಗ್ಗೆ.
ರೀಡ್ ಕಾಲೇಜಿಗೆ ನಾನು ಆರು ತಿಂಗಳು ಹೋದ ಬಳಿಕ ಅಲ್ಲಿಂದ ಹೊರಬಿದ್ದೆ. ಯಾಕೆ ? ಅದು ನನ್ನ ಹುಟ್ಟಿನಿಂದಲೇ ಬಂದುದು. ನನ್ನ ಹೆತ್ತ ತಾಯಿ, ಪದವಿ ವಿದ್ಯಾರ್ಥಿನಿಯಾಗಿದ್ದಳು. ಪದವೀಧರ ದಂಪತಿಗೇ ನನ್ನನ್ನು ದತ್ತು ಕೊಡಬೇಕೆಂಬುದು ಆಕೆಯ ಅಭಿಲಾಷೆಯಾಗಿತ್ತು. ಮೊದಲು ಒಪ್ಪಿಕೊಂಡ ದಂಪತಿಗಳು ಹೆಣ್ಣು ಮಗು ಬೇಕೆಂದಿದ್ದರು. ಗಂಡು ಹುಟ್ಟಿದ ಕೂಡಕಲೇ ವೇಟಿಂಗ್ ಲಿಸ್ಟ್‌ನಲ್ಲಿದ್ದ ದಂಪತಿಗೆ ಫೋನ್ ಮಾಡಿ ‘ಮಗು ಬೇಕಾ ?’ ಎಂದು ಕೇಳಲಾಯಿತು. ಅವರು ಪದವಿ ಪಡೆದವರಲ್ಲ ಎಂಬುದು ದತ್ತು ಕೊಟ್ಟ ಮೇಲಷ್ಟೇ ತಾಯಿಗೆ ಗೊತ್ತಾಯಿತು. ಮಗುವನ್ನು ಕಾಲೇಜಿಗೆ ಖಂಡಿತ ಕಳಿಸಬೇಕೆಂದು ಆಕೆ ಅವರಲ್ಲಿ ಭಾಷೆ ಪಡೆದಳು !
೧೭ ವರ್ಷ ನಂತರ ನಾನು ಕಾಲೇಜಿಗೆ ಹೋದೆ. ಆದರೆ ನನ್ನ ತಂದೆ- ತಾಯಿ ಗಳಿಸಿದ್ದೆಲ್ಲಾ ನನ್ನ ನಟ್ಯೂಷನ್‌ಗೇ ಖರ್ಚಾಗುತ್ತಿತ್ತು. ಮೇಲಾಗಿ, ನನ್ನ ಜೀವನದಲ್ಲಿ ನಾನೇನು ಮಾಡಬೇಕಾಗಿದೆ ಮತ್ತು ಅದಕ್ಕೆ ಈ ಶಿಕ್ಷಣದಿಂದ ಪ್ರಯೋಜನವಾದರೂ ಏನಿದೆ ಎಂದು ಕೇಳಿಕೊಂಡೆ. ಬಗೆಹರಿಯಲಿಲ್ಲ. ಕಾಲೇಜು ಬಿಟ್ಟೆ. ಆಗ ಭಯವಾಗಿತ್ತು. ಈಗ ನೋಡಿದರೆ ಅದು ಸರಿಯಾದ ನಿರ್ಧಾರವಾಗಿತ್ತು ಎನಿಸುತ್ತದೆ.
ಅದು ಅಷ್ಟೇನೂ ರೊಮ್ಯಾಮಟಿಕ್ ಆಗಿರಲಿಲ್ಲ. ನನಗೆ ಕೋಣೆಯಿಲಿಲ್ಲ, ಗೆಳೆಯರ ಮನೆಯಲ್ಲಿ ಮಲಗುತ್ತಿದ್ದೆ. ಕೋಕ್‌ನ ಖಾಲಿ ಬಾಟಲು ಮರಳಿಸಿ ಕಾಸು ಹುಟ್ಟಿಸಿಕೊಂಡು ಆಹಾರ ಪಡೆಯುತ್ತಿದ್ದೆ. ಭಾನುವಾರ ರಾತ್ರಿ ೭ ಮೈಲು ನಡೆದು ಹರೇ ಕೃಷ್ಣ ದೇವಸ್ಥಾನದಲ್ಲಿ ಊಟ ಮಾಡುತ್ತಿದ್ದೆ. ಆದರೆ ಅದನ್ನೆಲ್ಲ ನಾನು ಪ್ರೀತಿಸಿದೆ. ಅಂದು ಕಲಿತ ಪಾಠಗಳೆಲ್ಲ ಮುಂದೆ ಪ್ರಯೋಜನಕ್ಕೆ ಬಂದವು.
ಒಂದು ಉದಾಹರಣೆ- ಕಾಲೇಜಿನಿಂದ ಹೊರಬಿದ್ದ ನಾನು ಅಲ್ಲೇ ನಡೆಯುತ್ತಿದ್ದ ಕ್ಯಾಲಿಗ್ರಫಿ ಕ್ಲಾಸಿಗೆ ಹೋಗುತ್ತಿದ್ದೆ. ಅಲ್ಲಿ ಕಲಿತ ಅಕ್ಷರಗಳ ಅಂದಚಂದ, ಮುಂದೆ ಹತ್ತು ವರ್ಷ ಬಳಿಕ ಮ್ಯಾಕಿಂಟಾಷ್ ಕಂಪ್ಯೂಟರ್ ತಯಾರಿಸುವಾಗ ಉಪಯೋಗಕ್ಕೆ ಬಂದವು. ಅದು ಜಗತ್ತಿನಲ್ಲೇ ಅತ್ಯಂತ ಸುಂದರವಾಗಿ ಟೈಪೋಗ್ರಫಿ ಮಾಡಲಾಗಿದ್ದ ಕಂಪ್ಯೂಟರಾಗಿತ್ತು. ಮುಂದೆ ವಿಂಡೋಸ್ ಅದನ್ನು ಕಾಪಿ ಮಾಡಿತು. ಹೀಗೆ ಕಾಲೇಜಿನಿಂದ ಡ್ರಾಪೌಟ್ ಆಗಿದ್ದರೂ ಕ್ಯಾಲಿಗ್ರಫಿ ಕ್ಲಾಸನ್ನು ಬಿಡದೆ ಇದ್ದದ್ದು ಎಷ್ಟು ಉಪಯೋಗವಾಯಿತೆಂದು ಈಗ ಅರಿವಾಗುತ್ತಿದೆ.
ನೀವು ಮುಂದೆ ನೋಡುತ್ತ ಬಿಂದುಗಳನ್ನು ಸೇರಿಸಲಾರಿರಿ; ಅದಕ್ಕೆ ನಿಮ್ಮ ಹಿಂದೆ ನೋಡಬೇಕು. ಆದರೆ ಅದು ಭವಿಷ್ಯವನ್ನು ರೂಪಿಸುವುದೆಂಬ ನಂಬಿಕೆಯಿರಬೇಕು. ನಿಮಗೊಂದು ನಂಬಿಕೆ ಇರಬೇಕು- ನಿಮ್ಮ ಧೈರ್‍ಯ, ವಿಧಿ, ಜೀವನ, ಕರ್ಮ, ಅದ್ಯಾವುದೇ ಇರಲಿ. ಇದು ನನ್ನ ಜೀವನದಲ್ಲಿ ಬದಲಾವಣೆ ತಂದ ತತ್ವ.
ನನ್ನ ಎರಡನೇ ಕತೆ ನನ್ನ ಪ್ರೇಮ ಹಾಗೂ ನಷ್ಟಕ್ಕೆ ಸಂಬಂಧಿಸಿದ್ದು.ನಾನು ಅದೃಷ್ಟವಂತ- ಹರೆಯದಲ್ಲೇ ಏನು ಮಾಡಬೇಕೆಂದುಕೊಂಡಿದ್ದೆನೋ ಅದನ್ನೇ ಮಾಡಿದೆ. ವೋಜ್ನಿಕ್ ಹಾಗೂ ನಾನು ನನ್ನ ಹೆತ್ತವರ ಗ್ಯಾರೇಜಿನಲ್ಲಿ ನಾನು ೨೦ ವರ್ಷದವನಿದ್ದಾಗ ಆಪಲ್ ಆರಂಭಿಸಿದೆವು. ೧೦ ವರ್ಷಗಳಲ್ಲಿ ಅದು ೨ ಶತಕೋಟಿ ಡಾಲರ್ ಮೌಲ್ಯ ಹಾಗೂ ೪೦೦೦ ಉದ್ಯೋಗಿಗಳಷ್ಟು ಬೆಳೆಯಿತು. ನನಗೆ ೩೦ ವರ್ಷವಾದಾಗ, ನಮ್ಮ ಉತ್ಕೃಷ್ಟ ಉತ್ಪನ್ನ- ಮ್ಯಾಕಿಂಟಾಷ್ ಕಂಪ್ಯೂಟರನ್ನು ಬಿಡುಗಡೆಗೊಳಿಸಿದೆವು. ಆಮೇಲೆ ನನ್ನನ್ನು ಸಂಸ್ಥೆಯಿಂದ ಕಿತ್ತೊಗೆಯಲಾಯಿತು. ನಾನೇ ಸ್ಥಾಪಿಸಿದ ಸಂಸ್ಥೆ ನನ್ನನ್ನು ತೆಗೆಯಲು ಹೇಗೆ ಸಾಧ್ಯ ? ತುಂಬ ಪ್ರತಿಭಾವಂತರೆಂದು ನಾನು ಭಾವಿಸಿದ್ದವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದೆ. ಮೊದಲ ವರ್ಷ ಸರಿಯಾಗಿಯೇ ಇತ್ತು. ಬಳಿಕ ಆಡಳಿತ ಮಂಡಳಿ ಸದಸ್ಯರು ಅವರ ಪರ ನಿಂತರು. ಹೀಗಾಗಿ ನಾನು ಹೊರಬಿದ್ದೆ.
ಅದು ಸರ್ವನಾಶದ ಹಂತ. ಏನು ಮಾಡಬೇಕಲೆಂದು ತೋಚಲಿಲ್ಲ. ಸಿಲಿಕಾನ್ ವ್ಯಾಲಿಯಿಂದ ಓಡಿಬಿಡುವ ವರೆಗೂ ಯೋಚಿಸಿದೆ. ಆದರೆ, ನಾನೇನು ಮಾಡುತ್ತಿದ್ದೆನೋ ಅದನ್ನು ಪ್ರೀತಿಸಿದ್ದೆ. ಆಪಲ್ ಬದಲಾಗಿರಲಿಲ್ಲ. ನಾನು ತಿರಸ್ಕಾರಕ್ಕೊಳಗಾಗಿದ್ದೆ, ಆದರೆ ನನ್ನಲ್ಲಿನ್ನೂ ಆ ಬಗ್ಗೆ ಪ್ರೀತಿಯಿತ್ತು. ಪುನಃ ಆರಂಭಿಸುವ ಬಗ್ಗೆ ಯೋಚಿಸಿದೆ. ಆಗ ಅದು ನನಗೆ ಗೊತ್ತಾಗಲಿಲ್ಲ, ಆಪಲ್‌ನಿಂದ ಹೊರಹಾಕಿದ್ದು ನನ್ನ ಜೀವನದ ಅತ್ಯುತ್ತಮ ಘಟನೆ. ಯಶಸ್ವಿತನದ ಭಾರವನ್ನು ಖಾಲಿ ಕೈಯ ಆರಂಭಿಕನ ಲಘುತ್ವವು ಸ್ಥಳಾಂತರಿಸಿತ್ತು. ಬದುಕಿನ ಅತ್ಯಂತ ಸೃಜನಶೀಲ ಕ್ಷಣಗಳು ಅವಾಗಿದ್ದವು. ನೆಕ್ಟ್ಸ್ ಕಂಪನಿ ಆರಂಭಿಸಿದೆ. ನಂತರ ಪಿಕ್ಸರ್ ಆರಂಬಿಸಿದೆ. ಮುಂದೆ ನನ್ನ ಹೆಂಡತಿಯಾದ ಹುಡುಗಿಯ ಜತೆ ಪ್ರೀತಿಗೆ ಬಿದ್ದೆ. ಪಿಕ್ಸರ್ ಜಗತ್ತಿನ ಮೊದಲ ಸೂಪರ್‌ಹಿಟ್ ಅನಿಮೇಶನ್ ಚಿತ್ರ ‘ಟಾಯ್ ಸ್ಟೋರಿ’ಯನ್ನು ತಯಾರಿಸಿತು. ಬಳಿಕ ಆಪಲ್, ನೆಕ್ಸ್ಟ್‌ನ್ನು ಕೊಂಡಿತು. ಆಪಲ್‌ಗೆ ಮರಳಿದೆ. ನೆಕ್ಸ್ಟ್‌ನಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಇಂದು ಆಪಲ್‌ನ ಹೃದಯದಲ್ಲಿದೆ. ಲೌರೀನ್ ಮತ್ತು ನಾನು ಒಳ್ಳೆಯ ದಾಂಪತ್ಯ ನಡೆಸಿದವು.
ಆಪಲ್‌ನಿಂದ ಹೊರಬೀಳದಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ. ಅದೊಂದು ಕಹಿಗುಳಿಗೆ. ಆದರೆ ರೋಗಿಗೆ ಅಗತ್ಯವಾಗಿತ್ತು. ನಾನೇನನ್ನು ಪ್ರೀತಿಸಿದ್ದೆನೋ ಅದು ನನ್ನನ್ನು ಮುಂದುವರಿಯುವಂತೆ ಪ್ರೇರೇಪಿಸಿತು. ನೀವು ಪ್ರೀತಿಸುವುದನ್ನೇ ಮಾಡಿ. ನಿಮ್ಮ ಸಂಬಂಧಗಳಿಂದ, ಕೆಲಸದ ವರೆಗೂ ಅದು ನಿಜ. ನೀವು ಪ್ರೀತಿಸಬಹುದಾದುದನ್ನು ಕಂಡುಹಿಡಿಯುವವರೆಗೆ ವಿರಮಿಸಬೇಡಿ.
ನನ್ನ ಮೂರನೇ ಕತೆ ಸಾವಿಗೆ ಸಂಬಂಧಿಸಿದ್ದು. ಪ್ರತಿದಿನ ಬೆಳಗ್ಗೆ ನಾನು ಕನ್ನಡಿಯ ಮುಂದೆ ನಿಂತಾಗಲೂ ಕೇಳಿಕೊಳ್ಳುತ್ತೇನೆ: ‘ಇಂದು ನನ್ನ ಜೀವನದ ಕೊನೆಯ ದಿನವಾದರೆ, ನಾನೇನು ಮಾಡಬೇಕೆಂದಿದ್ದೆನೋ ಅದನ್ನು ಮುಗಿಸಬಲ್ಲೆನೆ ?’ ನಾನು ಸಾಯಲಿದ್ದೇನೆ ಎಂದು ನೆನಪಿಸಿಕೊಳ್ಳುವುದೇ, ನಾವು ಕಳೆದುಕೊಂಡಿರುವುದರ ಮೇಲಿನ ಚಿಂತೆಯನ್ನು ಬಿಡುವ ಅತ್ಯುತ್ತಮ ಉಪಾಯ. ಒಂದು ವರ್ಷ ಹಿಂದೆ ಡಯಾಗ್ನೋಸಿಸ್ ನಡೆಸಿದಾಗ ನನಗೆ ಮೆದೋಜೀರಕ ಗ್ರಂಥಿಯ ಕ್ಯಾನ್ಸರ್ ಆಗಿರುವುದು ಗೊತ್ತಾಯಿತು. ನನಗೆ ಮೆದೋಜೀರಕ ಅಂದರೆ ಏನೆಂಬುದೂ ಗೊತ್ತಿರಲಿಲ್ಲ. ಇದು ಚಿಕಿತ್ಸೆಯಿಲ್ಲದ ರೋಗ, ಮೂರರಿಂದ ಆರು ತಿಂಗಳು ಮಾತ್ರ ಬದುಕಬಲ್ಲೆ ಎಂದು ವೈದ್ಯರು ಹೇಳಿದರು. ಇನ್ನು ಗುಡ್‌ಬೈ ಹೇಳಲು ಸಿದ್ಧತೆ ನಡೆಸಬಹುದು ಎಂಬರ್ಥದಲ್ಲಿ ಮಾತನಾಡಿದರು.
ಆ ದಿನವಿಡೀ ರೋಗಶೋಧ ನಡೆಯಿತು. ಸಂಜೆ ಹೊತ್ತಿಗೆ ವೈದ್ಯರು ಅಳತೊಡಗಿದರು. ಇದೊಂದು ಅತ್ಯಪರೂಪದ ಕ್ಯಾನ್ಸರ್, ತೀವ್ರ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು ಎಂಬುದು ಅವರಿಗೆ ಗೊತ್ತಾಗಿತ್ತು. ಸರ್ಜರಿಯಾಯಿತು, ನಾನೀಗ ಗುಣಮುಖಿ.
ಇದು ನಾನು ಮೃತ್ಯುವಿನ ಅತ್ಯಂತ ಸಮೀಪ ಹೋಗಿಬಂದ ಸನ್ನಿವೇಶ. ಸಾಯಲು ಯಾರೂ ಬಯಸುವುದಿಲ್ಲ. ಆದರೆ ಅದು ಎಲ್ಲರೂ ಹಂಚಿಕೊಳ್ಳುವ, ಯಾರೂ ತಪ್ಪಿಸಿಕೊಳ್ಳಲಾಗದ ಗುರಿ. ಸಾವೆಂಬುದು ಈ ಜೀವನದ ಬಹುದೊಡ್ಡ ಅನ್ವೇಷಣೆ. ಅದು ಬದುಕಿನ ಬದಲಾವಣೆಯ ಚೋದಕ. ಅದು ಹಳತನ್ನ ಸರಿಸಿ ಹೊಸತಿಗೆ ಜಾಗ ಮಾಡಿಕೊಡುತ್ತದೆ. ನಿಮ್ಮ ಸಮಯ ಸೀಮಿತ. ಹೀಗಾಗಿ ಇನ್ನೊಬ್ಬರ ಬದುಕನ್ನು ನೀವು ಜೀವಿಸಬೇಡಿ. ಇನ್ನೊಬ್ಬರ ಧ್ವನಿ ನಿಮ್ಮ ಒಳಧ್ವನಿಯನ್ನು ಆವರಿಸದಿರಲಿ. ತುಂಬಾ ಮುಖ್ಯವಾದ್ದೆಂದರೆ, ನಿಮ್ಮ ಹೃದಯ ಹಾಗೂ ಒಳನೋಟವನ್ನು ಹಿಂಬಾಲಿಸುವ ಧೈರ್‍ಯ.
ನಾನು ಸಣ್ಣವನಿದ್ದಾಗ ‘ಹೋಲ್ ಅರ್ತ್ ಕೆಟಲಾಗ್’ ಎಂದೊಂದಿತ್ತು. ಅದು ಈಗಿನ ಗೂಗಲ್‌ನ ಪುಸ್ತಕ ರೂಪದಂತಿತ್ತು. ಅದರ ಕೊನೆಯ ಸಂಚಿಕೆಯ ಹಿಂಬದಿಯಲ್ಲಿ ಸಾಹಸಯಾತ್ರೆಯ ಹಾದಿಯ ಚಿತ್ರ. ಅದರ ಕೆಳಗೆ ಹೀಗೆ ಬರೆದಿತ್ತು: ‘ನಿಮ್ಮಲ್ಲಿ ಹಸಿವಿರಲಿ, ಮೂರ್ಖತನವಿರಲಿ’. ನಾನು ಅದಾಗಬೇಕೆಂದು ಬಯಸಿದ್ದೆ. ನೀವೂ ಹಾಗಾಬೇಕೆಂದು ನನ್ನ ಬಯಕೆ.

No comments: