Sunday, March 15, 2009

ಕಣ್ಣು


ಸಂಜೆ. ಸಣ್ಣ ಗುಡುಗು. ಮಳೆ ಹೊಯ್ಯುವಂತಿದೆ.
ದನಿ ಮಾಡದೆ ಧಾವಿಸುವ ಮೆಲ್ಲನೆ ಗುಡ್ಡದ ತುದಿಗೆ
ಇದೊ ಈ ಮರದ ಬುಡದಲ್ಲಿ ಕುಳ್ಳಿರುವ.
ನಿನಗೊಂದು ಅಚ್ಚರಿ ತೋರಿಸಬೇಕು ಈಗ.


ಸಣ್ಣಗೆ ಮಳೆ ಹನಿಯುತ್ತಿದೆಯ
ಈ ಗುಡ್ಡದ ಬುಡದ ಪೊದರುಗಳೊಳಗಿಂದ
ಮೈ ನಡುಗಿಸುವ ಕೇಕೆ ಕೇಳುತ್ತಿದೆಯ
ರೆಕ್ಕೆ ಕೊಡವುತ್ತ ಹೆಣ್ಣು ನವಿಲೊಂದು
ಹೊರಬಂದಿದೆಯ
ಹೆಣ್ಣ ಬೆನ್ನಟ್ಟಿ ಒಂದು ಗಂಡು ನವಿಲು ತನ್ನ
ಸಾವಿರ ಕಣ್ಣುಗಳ ದಿಟ್ಟಿ ಹೆಣ್ಣ ಮೇಲೇ
ನೆಟ್ಟು


ಅಹಹ ! ಒಂದು ಹೆಣ್ಣು
ನೂರು ಕಣ್ಣು
ನೋಡಿ
ಕೇಳಿ


ಮುಸ್ಸಂಜೆ. ಮಳೆ ಇನ್ನೂ ಜೋರಾಗಿ ಸುರಿಯುತ್ತಿದೆ.
ಕೊಂಚ ಹತ್ತಿರ ಬಾ.
ನಿನ್ನೊಡನೆ ಏನೋ ಹೇಳಬೇಕು.
ಅಥವಾ
ಹೇಳದಿದ್ದರೂ ನಡೆಯುತ್ತದೆ.

Sunday, February 22, 2009

ನಾಲಗೆಯ ಮೇಲೆ ಕುರುಕ್ಷೇತ್ರ

ಮಹಾಭಾರತದ ಹರಿಕತೆ ನಡೆದಿರುವಾಗ
ದಾಸರು ನಾಲಗೆ ತಪ್ಪಿ
ನಾಗರಿಕತೆ ಎಂದರೆ ಹಿಂಸೆಯ ಕತೆ
ಎಂದುಬಿಟ್ಟರು

ಆಮೇಲೆ ಚಡಪಡಿಸಿದರು
ತಮ್ಮ ಮಾತನ್ನು ಅಲ್ಲೇ ಬಿಡುವುದೋ
ವ್ಯಾಖ್ಯಾನಿಸುವುದೋ ಅರಿಯದ ಸಂದಿಗ್ದದಲ್ಲಿ
ಮುಂದೆ ಕುಳಿತ ಮಂದಿಯ ಮುಖ ನೋಡಿದರು

ಉದ್ದ ಅಡ್ಡ ನಾಮಗಳು ಮುದ್ರೆಗಳು
ಮುಗಿದ ಕೈಗಳು ಬೋಳಿಸಿದ ತಲೆಗಳು
ಬಿಟ್ಟ ಮೈ ಹೊದ್ದ ಶಲ್ಯ ಇಣುಕುವ ಜನಿವಾರ
ಬೊಜ್ಜು ಮೈ ಹುಳಿ ತೇಗು
ತರಹೇವಾರಿ ಶಿಖೆಗಳು
ಕಾಸಿನಗಲದ ಕುಂಕುಮ ತಲೆಗೆ ಸೆರಗು
ಮುತ್ತೈದೆಯರ ಸಕಲ ಭೂಷಿತಗಳು

ಮಾತುಗಳು ಗಂಟಲಲ್ಲೇ ಉಳಿದವು
ಕುರುಕ್ಷೇತ್ರದ ನೆತ್ತರ ನದಿ ಹಾಗೇ ಮುಂದುವರಿಯಿತು

ಬಾಯಿ ಬಿಡುವ ಭೂಮಿ ಎದೆ ಸೀಳಿದ ಗದೆ
ನೀರ ತಡಿಯಲ್ಲಿ ಅನಾಥ ಹೆಣ ಕತ್ತಲಲ್ಲಿ ಕುಣಿವ ಕತ್ತಿ
ಧರ್ಮದ ವಿಜಯಕ್ಕೆ ನಾರಿಯರ ಆರ್ತನಾದದ ಬೆಂಬಲ
ಭಗ್ನ ಬ್ರಹ್ಮಾಸ್ತ್ರಕ್ಕೆ ಅರ್ಧ ಭ್ರೂಣ

ಇತ್ತೀಚೆಗೆ ದಾಸರು
ವಿಪರೀತ ತಡವರಿಸುತ್ತಾರೆ
ಅನ್ನುತ್ತಾರೆ ಎಲ್ಲರೂ

Friday, February 13, 2009

ಸಂಪೂರ್ಣ ರಕ್ಷಣೆ

ಒಂದು ವ್ಯಾಪಾರಿ ಸಂಸ್ಥೆಯ ನೌಕರರು ವರ್ಷಾಂತ್ಯದ ಪ್ರವಾಸ ಹೊರಟಿದ್ದರು. ಮೈಸೂರು, ಬೆಂಗಳೂರು, ಊಟಿ.
ಅಲ್ಲಿ ಹಿಂದೂಗಳಿದ್ದರು. ಮುಸ್ಲಿಮರು, ಕ್ರೈಸ್ತರು ಕೂಡ.
ಬಸ್ಸು ನಗರ ಬಿಡುತ್ತಿದ್ದಂತೆ ಅದನ್ನು ಗುಂಪೊಂದು ನಿಲ್ಲಿಸಿತು. ಕೆಂಪು ತಿಲಕ ಹಚ್ಚಿ ದೊಣ್ಣೆ ಹಿಡಿದ ಗುಂಪು ಒಳಗೆ ನುಗ್ಗಿತು.
ಕಾರಣ : ಹಿಂದೂ ಹುಡುಗಿಯರು ಮುಸ್ಲಿಮರ ಜತೆಗೆ ಪ್ರವಾಸ ಹೊರಟದ್ದು.
ದಾಳಿ ಮಾಡಿದವರು : ಯಥಾಪ್ರಕಾರ, ಸಂಸ್ಕೃತಿ ರಕ್ಷಕರು.
ಪರಿಣಾಮ : ಹುಡುಗ- ಹುಡುಗಿಯರ ಮೇಲೆ ಹಲ್ಲೆ. ಅವರು ಧರಿಸಿದ್ದ ಆಭರಣಗಳ ಲೂಟಿ.
ಗುಂಪಿನ ನಾಯಕನ ಕಣ್ಣು ಒಬ್ಬ ಮಹಿಳೆ ಧರಿಸಿದ್ದ ಆಭರಣದ ಮೇಲೆ ಬಿತ್ತು. ‘ಅದನ್ಯಾಕೆ ಬಿಟ್ಟಿದ್ದೀ, ಕಿತ್ತುಕೋ...’ ಕಾರ್‍ಯಕರ್ತನಿಗೆ ಆದೇಶಿಸಿದ.
"ಅಣ್ಣಾ, ಅದು ತಾಳಿ..."
"ಏನಾದರೇನು, ಚಿನ್ನ ತಾನೆ ? ಕಿತ್ತುಕೋ"
ತಾಳಿಯನ್ನು ಕಿತ್ತುಕೊಂಡು ಸಂಸ್ಕೃತಿ ರಕ್ಷಣೆಯನ್ನು ಸಂಪೂರ್ಣಗೊಳಿಸಲಾಯಿತು.
(೨೦೦೬ರಲ್ಲಿ ಮಂಗಳೂರಿನಲ್ಲಿ ನಡೆದ ನಿಜ ಘಟನೆ)

Friday, February 6, 2009

ಸಾಹಿತ್ಯ ಸಮ್ಮೇಳನ : ವರದಿಯಾಗದ ಸಂಗತಿಗಳು

ಬಿಸಿಲು, ಧೂಳು, ಸೆಕೆ ; ಊಟ ಸಿಗಲಿಲ್ಲ ಎಂಬ ಆರ್ತನಾದಕ್ಕೆ ಕರಗದ ದುರ್ಗದ ಕಲ್ಲುಗಳು ; ಮುಷ್ಕರಗಳು ; ಕಸಾಪ ಘಟಕಗಳ ನಡುವೆ ಭಿನ್ನಮತ ; ಆಯೋಜಕರ ಬೇಜವಾಬ್ದಾರಿ ; ಮೆರೆದ ಖಾದಿ, ಕಾವಿಗಳು...

ಇವೆಲ್ಲ ಎಲ್ಲ ಪತ್ರಿಕೆಗಳಲ್ಲಿ, ಚಾನೆಲ್‌ಗಳಲ್ಲಿ ಈಗಾಗಲೇ ವರದಿಯಾಗಿವೆ. ನಮ್ಮ ದೃಷ್ಟಿ ಏನಿದ್ದರೂ ವರದಿಯಾಗದ ಸಂಗತಿಗಳ ಕಡೆಗೆ.

***

ಸಮ್ಮೇಳನ ಉದ್ಘಾಟನೆಯ ಸಂದರ್ಭ. ಮಾನ್ಯ ಮುಖ್ಯಮಂತ್ರಿಗಳು ದೀಪ ಬೆಳಗಬೇಕು. ಆಚೆಗೂ ಈಚೆಗೂ ಎರಡು ಮೂರು ಮಾನ್ಯ ಶ್ರೀಶ್ರೀಶ್ರೀಗಳು, ಉಸ್ತುವಾರಿ ಸಚಿವರು, ಶಾಸಕರು, ಸ್ಥಳೀಯ ಪುಢಾರಿಗಳು, ಕಸಾಪ ಅಧ್ಯಕ್ಷರು... ಎಲ್ಲರೂ ಸೇರಿ ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಅವರನ್ನು ಹಿಂದಕ್ಕೆ ತಳ್ಳಿಬಿಟ್ಟರು. ಮುಖ್ಯಮಂತ್ರಿ ದೀಪ ಉರಿಸುತ್ತಿದ್ದಾರೆ, ಬಸವರಾಜು ಕಾಣಿಸುತ್ತಲೇ ಇಲ್ಲ.

ಕಡೆಗೆ ಯಾರೋ ಮಾಧ್ಯಮದವರು ಕೂಗಿದರು. "ಅಧ್ಯಕ್ಷರು, ಅಧ್ಯಕ್ಷರು..."

ಈಗ ವೇದಿಕೆಯ ಮೇಲಿದ್ದವರಿಗೆ ಜ್ಞಾನೋದಯ. ಹಿಂದೆಲ್ಲೋ ನೂಕಲ್ಪಟ್ಟಿದ್ದ ಬಸವರಾಜು ಅವರನ್ನು ಮತ್ತೆ ದೀಪದ ಹತ್ತಿರಕ್ಕೆ ದೂಡಲಾಯಿತು.

ಖಾದಿ ಮತ್ತು ಕಾವಿ. ಇದರ ನಡುವೆ ಕಡೆಗಣಿಸಲ್ಪಡುವ ಸಾಹಿತಿ. ಇದು ನಮ್ಮ ರಾಜ್ಯದ ಇಂದಿನ ಸ್ಥಿತಿಗೆ ರೂಪಕ ಅಂತ ನಿಮಗೆ ಅನಿಸುತ್ತಿಲ್ಲವೆ ?

***

ಮಾನ್ಯ ಉಸ್ತುವಾರಿ ಸಚಿವರು- ಕರುಣಾಕರ ರೆಡ್ಡಿಯವರು- ಉದ್ಘಾಟನೆ ಸಂದರ್ಭ ಭರ್ರನೆ ಹೆಲಿಕಾಪ್ಟರ್‌ನಲ್ಲಿ ಬಂದರು. ಅಂದ ಹಾಗೆ, ದುರ್ಗದಲ್ಲೇ ಇರುವ ಅವರ ಮನೆಗೂ ಸಮ್ಮೇಳನದ ಸ್ಥಳಕ್ಕೂ ಎರಡು ಮೈಲಿಗಿಂತ ಹೆಚ್ಚು ದೂರವಿಲ್ಲ. ಇಷ್ಟು ದೂರಕ್ಕೂ ಅವರು ಕಾರು ಬಳಸುವುದಿಲ್ಲ. ಎಲ್ಲಿಗೆ ಹೋಗುವುದಾದರೂ ಹೆಲಿಕಾಪ್ಟರ್. ಇದರಲ್ಲೇ ಮುಖ್ಯಮಂತ್ರಿ ಕೂಡ ಪ್ರಯಾಣಿಸಿದರು. ನೆರೆದ ಜನ ನಿಬ್ಬೆರಗಾಗಿ ನೋಡಿದರು. ಯಾರಪ್ಪನ ಮನೆ ದುಡ್ಡು !

***

ಬರೆಯುವುದಾದರೆ ಮಧ್ಯಮ ಪ್ರತಿನಿಗಳದೇ ಒಂದು ದೊಡ್ಡ ರಾಮಾಯಣ. ಸಮ್ಮೇಳನದ ಹಿಂದಿನ ದಿನ ಬೆಂಗಳೂರಿನಿಂದ ಬಂದ ರಿಪೋರ್ಟರ್‌ಗಳಿಗೆ ಹೊಟೆಲ್ ಕೊಠಡಿ ಬುಕ್ ಮಾಡಲಾಗಿತ್ತು. ರಾತ್ರಿಯಾಗಿತ್ತು. ಆಯೋಜಕರ ಮೇಲೆ ಕೂಗಾಡಿ ಕೆಲವು ವರದಿಗಾರರು ತೈಲಾಭ್ಯಂಗ ಮಾಡಿಸಿಕೊಂಡಿದ್ದರು. ಹೀಗೆ ಟೈಟಾಗಿ ತೂರಾಡುತ್ತಿದ್ದ ತಮಿಳು ಮೂಲದ ಟಿವಿಯೊಂದರ ವರದಿಗಾರ- ಹೆಸರು ಹನುಮಂತ ಎಂದಿಟ್ಟುಕೊಳ್ಳಿ- ಬೇರೊಂದು ಟಿವಿ ಚಾನೆಲ್ ವರದಿಗಾರ್ತಿಗೆ ಎಂದು ನಿಗದಿಪಡಿಸಲಾಗಿದ್ದ ಕೊಠಡಿಗೆ ನುಗ್ಗಿ ಬಟ್ಟೆ ಬಿಚ್ಚಿ ಬಿದ್ದುಕೊಂಡ.

ಕೊಂಚ ತಡವಾಗಿ ಆಗಮಿಸಿದ ವರದಿಗಾರ್ತಿ ಈತನ ಅವತಾರ ಕಂಡು ದಂಗಾದಳು. ಕೊಠಡಿ ಬಿಟ್ಟುಕೊಡುವಂತೆ ಎಷ್ಟು ಒತ್ತಾಯಿಸಿದರೂ ಈ ಆಸಾಮಿ ಕದಲಲು ಸಿದ್ಧನಿಲ್ಲ. ಕಡೆಗೂ ಆ ವರದಿಗಾರ್ತಿಗೆ ಆಯೋಜಕರು ಬೇರೆ ರೂಮಿನ ವ್ಯವಸ್ಥೆ ಮಾಡಬೇಕಾಯಿತು. ಇನ್ನು ಈತನ ಉಳಿದ ಮೂರು ದಿನಗಳ ಅವತಾರದ ಬಗ್ಗೆ ಬರೆಯಹೋದರೆ ಅದು ಮಹಾಭಾರತ !

***

ಹೆಚ್ಚಿನ ವರದಿಗಳು ಆಗಮಿಸಲಿವೆ !

Friday, January 30, 2009

ಖಯ್ಯಾಮನ ದುರಂತ

‘ಹೆಂಡ, ಹೆಣ್ಣು , ತಣ್ಣೆಳಲು, ರೊಟ್ಟಿಯ ತುಂಡು- ನನಗಿಷ್ಟು ಸಾಕು’ ಎಂದ ಕವಿ, ದಾರ್ಶನಿಕ ಉಮರ್ ಖಯ್ಯಾಮ್ ಇದೀಗ ಪಡಖಾನೆಯಲ್ಲಿ ಮಧು ಹೀರಿ ಉನ್ಮತ್ತ. ಜೀವೋತ್ಸಾಹ ತುಂಬಿದ ಒಂದಿಷ್ಟು ಹುಡುಗ- ಹುಡುಗಿಯರ ನರ್ತನ ಅವನ ಸುತ್ತ.

ಯಾರೋ ಎಚ್ಚರಿಸಿದರು : ‘ಏಳಯ್ಯ ಖಯ್ಯಾಮ್, ಸಂಸ್ಕೃತಿಯ ರಕ್ಷಕರು ಬರುತ್ತಿದ್ದಾರೆ. ಈ ತರುಣಿಯರು, ಅವರ ಕುಡಿತ, ಜತೆಗೆ ನೀನು ! ಅವರು ಒಂದಿಷ್ಟೂ ಸಹಿಸುವುದಿಲ್ಲ !’

ಖಯ್ಯಾಮ್ ಕಡೆಗಣ್ಣಿನಿಂದ ನೋಡಿ ಕುಡಿತ ಮುಂದುವರಿಸಿದ.

ಕೊಂಚ ಹೊತ್ತಿನಲ್ಲೇ ಹೊರಗೆ ಗದ್ದಲ ಜೋರು ಜೋರಾಗತೊಡಗಿತು. ಜತೆಗಿದ್ದ ತರುಣರು ಓಡುತ್ತಾ ಕೂಗಿದರು- ‘ಖಯ್ಯಾಮ್, ಓಡಿ ಜೀವ ಉಳಿಸಿಕೋ. ಅವರು ಬಂದೇ ಬಿಟ್ಟರು. ಇಲ್ಲೇ ಇದ್ದರೆ ದುರಂತ ಖಂಡಿತ’

ಖಯ್ಯಾಮ್ ಕಡೆಗಣ್ಣು ತೆರೆದು ಹೇಳಿದ : "ಮೂರ್ಖರೇ ! ದುರಂತ ಎಂದೋ ಆರಂಭವಾಗಿದೆ. ಚಲಿಸುತ್ತಿದೆ. ಅದು ಶುರುವಾದಾಗ ನೀವೆಲ್ಲ ನಿದ್ರಿಸುತ್ತಿದ್ದಿರಿ ! ಈಗ ಅದನ್ನು ನೀವಾದರೂ ಹೇಗೆ ತಡೆಯಬಲ್ಲಿರಿ ?!"

ಅಷ್ಟು ಹೇಳಿ ಮತ್ತೆ ಮತ್ತೊಂದು ಬಾಟಲಿ ಬಿರಡೆ ಬಿಚ್ಚಿದ.

Saturday, December 20, 2008

ಬಂತೋ ಬಂತು ಕಾಲದ ನಾವೆ


ಅಪಾರ ಕಾಲದ ಕಡಲನ್ನು ದಾಟಿ ಬಂದ ಪುಟ್ಟ ನಾವೆಯೊಂದು ಇದೀಗ ನಮ್ಮ ನಿಮ್ಮ ಬದುಕಿನ ಬಂದರಿನಲ್ಲಿ ಲಂಗರು ಹಾಕಿದೆ. ನಾವೆಗೆ ಹನ್ನೆರಡು ಹಾಯಿಗಳು, ಇಪ್ಪತ್ನಾಲ್ಕು ಹಗ್ಗಗಳು, ಒಂದೇ ಒಂದು ಮೀಟುಗೋಲು. ಪಟಪಟಿಸುವುದು ಹಾಯಿ, ಕರೆಯುವುದು ದೂರ ತೀರಕ್ಕೆ.


ಅಂಗೈಯೊಳಗೆ ಕನಸುಗಳ ಬೆಚ್ಚನೆ ಬಚ್ಚಿಟ್ಟುಕೊಂಡ ಎಲ್ಲರ ಬದುಕಿಗೂ ಇಂಥ ಒಂದು ಪುಟ್ಟ ನಾವೆ ಬರಲಿ.
ನಿದ್ದೆಯಲ್ಲೇ ಅಕಾರಣ ನಗುವ ಸಣ್ಣ ಕಂದನ ತೊಟ್ಟಿಲಿಗೆ, ಬೆವರಿನಲ್ಲಿ ಮಿಂದ ಕೈಗಳು ಚಾಚಿದ ಅನ್ನದ ಬಟ್ಟಲಿಗೆ, ಒಳಮನೆಯ ಹಳೆ ಮಂದಿ ಕೆಮ್ಮುತ್ತ ತಡವುತ್ತ ಬಂದು ಕುಂತ ಮನೆಯ ಮೆಟ್ಟಿಲಿಗೆ ತೇಲುತ್ತ ಈ ನಾವೆ ಸಮೀಪಿಸಲಿ.


ಈಗಷ್ಟೆ ಮದುವೆಯಾಗಿ ಬಂದ ಹೊಸ ಸೊಸೆ ದೇವರೊಳಕೋಣೆಯಲ್ಲಿ ಹಚ್ಚಿಟ್ಟ ನಂದಾದೀಪಕ್ಕೆ, ತಂಟೆಕೋರ ಮಕ್ಕಳ ಮೇಲೆ ಸುಳ್ಳುಸುಳ್ಳೇ ಮುನಿಸಿಕೊಳ್ಳುವ ಹಿರಿಯರ ಕೋಪಕ್ಕೆ, ಐಸ್‌ಕ್ಯಾಂಡಿ ಮಾರಾಟವಾಗದೆ ಬಿಸಿಲಿನಲ್ಲಿ ಕರಗುತ್ತ ತಲೆ ಮೇಲೆ ಕೈಹೊತ್ತ ಶ್ರಮಜೀವಿಯ ತಾಪಕ್ಕೆ ಈ ಪುಟ್ಟ ನಾವೆ ಒದಗಿ ಬರಲಿ.


ಮಾಗಿ ಚಳಿಗೆ ಎಲೆ ಉದುರಿಸಿಕೊಂಡು ಬೋಳುಬೋಳಾಗಿ ನಿಂತ ಹಳೆಯ ಮರಗಳಿಗೆ, ದಶಂಬರದ ಫಲಗಾಳಿಗೆ ಮೆಲ್ಲನೆ ಕಂಪಿಸುತ್ತ ಹೂಗಳ ಹೊತ್ತು ಲಜ್ಜೆಯಿಂದ ನಿಂತ ಮಾಮರಗಳಿಗೆ, ಚಿಗುರಿನ ಚೊಗರಿಗೆ ಕಾತರಿಸಿ ಎಲ್ಲಿಂದಲೋ ಬರುವ ಹಕ್ಕಿಗಳಿಗೆ, ಹುಲ್ಲುಗರಿಕೆಯ ಮೇಲೆ ಮೆಲ್ಲನೆ ಇಳಿದ ಎಳಬೆಳಗಿನ ಮಿದುವಾದ ಇಬ್ಬನಿಗೆ, ಅಂಗಳದಲ್ಲಿ ರೈತನ ಉಸಿರಿನಂತೆ ಹರಡಿರುವ ಕೊಯಿಲಿಗೆ ಈ ನಾವೆಯ ಹಾಯಿ ಬೀಸಿದ ತಂಗಾಳಿ ತಾಕಲಿ.


ತಮ್ಮ ಕನಸುಗಳಲ್ಲಿ ಬಂದ ಚೆಲುವೆಯರ ಬೆನ್ನು ಬಿದ್ದು ಅರಸುತ್ತಿರುವ ಹುಡುಗರ ಬಿರುಸಾದ ಶ್ವಾಸಗಳಿಗೆ, ಕನ್ನಯ್ಯನಿಂದ ಮೊದಲ ಪ್ರೇಮಪತ್ರ ಬರೆಸಿಕೊಂಡು ಕುಪ್ಪಸದೊಳಗೆ ಬಚ್ಚಿಟ್ಟುಕೊಂಡ ರಾಧೆಯ ಝಲ್ಲೆನುವ ಎದೆಗೆ, ಗ್ರೀಟಿಂಗ್ಸ್ ಹಂಚುತ್ತ ಸುಸ್ತಾಗಿರುವ ಗಂಜಿ ಇಸ್ತ್ರಿಯ ಅಂಚೆಯಣ್ಣನ ಸಮವಸ್ತ್ರದೊಳಕ್ಕೆ, ದೇಹವಿಲ್ಲದೆ ಅತ್ತಿಂದಿತ್ತ ಹಾರಾಡುತ್ತ ಎಳೆನಗುವನ್ನು ಎಲ್ಲೆಡೆ ಹರಡಿಬಿಡುವ ಎಸ್ಸೆಮ್ಮೆಸ್‌ಗಳಿಗೆ ಈ ನಾವೆ ಬಂದುಬಿಡಲಿ.


ಆಸ್ಪತ್ರೆಯಲ್ಲಿರುವ ಪುಟ್ಟ ಕಂದನಿಗೆ ಹಾಲು ತರಲು ಓಡುತ್ತಿರುವ ಎಳೆ ತಾಯಿಯ ಫ್ಲಾಸ್ಕಿಗೆ, ಕಚೇರಿಯಿಂದ ಹಿಂದಿರುಗುವಾಗ ಮಕ್ಕಳಿಗೆ ಸಿಹಿ ತರಲು ಮರೆಯಿತೆಂದು ಚಡಪಡಿಸುವ ಗುಮಾಸ್ತೆಯ ಚೀಲದೊಳಕ್ಕೆ, ಇರುಳು ನಿದ್ರೆ ತೊರೆದು ಮನೆಯನ್ನೂ ಮರೆತು ಅಕ್ಷರಗಳು ಕತೆಯಾಗುವ ನಡುವೆ ಕಳೆದುಹೋದ ಪತ್ರಕರ್ತನ ಪೆನ್ನಿಗೆ, ತಾಯಿ ಕಣ್ಣು ತೆರೆದು ಮಿಸುಕಾಡುವುದನ್ನೇ ಕಾಯುತ್ತ ಐಸಿಯು ಹೊರಗೆ ನಿಂತಿರುವ ಮಕ್ಕಳ ಕಂಗಳೊಳಕ್ಕೆ, ಲಾರಿಯಿಂದ ಗುದ್ದಿಸಿಕೊಂಡು ಮಲಗಿರುವ ಗಂಡನಿಗೆ ರಕ್ತ ನೀಡುತ್ತಿರುವ ಬಾಡಿದ ಮುಖದ ಮಹಿಳೆಯ ತೋಳುಗಳಿಗೆ- ಈ ನಾವೆ ತೇಲಿ ಬಂದು ಅಪಾರ ಬಲ ತುಂಬಲಿ.


ಮತ್ತು... ಮತ್ತು... ಎಲ್ಲಕ್ಕಿಂತ ಮುಖ್ಯವಾಗಿ, ಯಾರದೋ ಕೋಪ ತಾಪ ದ್ವೇಷಗಳಿಗೆ ಸಂಬಂದವೇ ಇಲ್ಲದಂತೆ ಬಲಿಯಾದ ಅಮಾಯಕರ ಗೋರಿಗಳಿಗೆ, ಅವರ ಬೂದಿ ಮಣ್ಣು ಮಾಡಿದ ನಡುಗುವ ಕೈಗಳಿಗೆ, ಭಯ ಆತಂಕ ದುಃಖ ಗದ್ಗದಗಳನ್ನು ಬೈತಿಟ್ಟುಕೊಂಡು ಮರುಗುತ್ತಿರುವ ದೀಪಗಳಿಲ್ಲದ ಪಡಸಾಲೆಗಳಿಗೆ ಈ ಪುಟ್ಟ ನಾವೆ ಹಾಯಿಗಳ ಬೀಸುತ್ತ ಝಗಮಗಿಸುತ್ತ ಬರಲಿ.


ಅನ್ಯಜೀವಗಳ ವಿನಾಕಾರಣ ಪ್ರೀತಿಸುವ ಎಲ್ಲರೂ ತಮ್ಮ ಕನಸುಗಳಲ್ಲಿ ಈ ಬೆರಗಿನ ನಾವೆಯನ್ನೇರಿ ವಿಸ್ಮಿತರಾಗಲಿ.

ಮುಗಿಯದ ಇತಿಹಾಸದ ಆರಂಭ

ಬೆಂಕಿಯ ನೆನಪು- ಅಂತಿಮ ಕಂತು
-೧-
ಇಸವಿ ೧೪೯೨- ಗುವಾನ್ಹನಿ
ತಿಂಗಳಿಂದಲೂ ಸರಿಯಾಗಿ ನಿದ್ದೆಯಿಲ್ಲದೆ ಬೇಗುದಿಯಲ್ಲಿದ್ದ ಕೊಲಂಬಸ್ ಮೊಣಕಾಲೂರಿ, ಗಳಗಳ ಅಳುತ್ತ ನೆಲವನ್ನು ಚುಂಬಿಸಿದ್ದಾನೆ. ಮತ್ತೆ ತಡವರಿಸುತ್ತ ಎದ್ದು ಹೆಜ್ಜೆ ಮುಂದಿಟ್ಟು ಎದುರಿಗಿರುವ ಗಿಡಗಳ ರುಂಡ ಹಾರಿಸಿದ್ದಾನೆ, ತನ್ನ ಖಡ್ಗದಿಂದ. ಮತ್ತೆ ಧ್ವಜ ಹಾರಿಸಿ, ಮೊಣಕಾಲೂರಿ ಬಾನಿಗೆ ಕಣ್ಣೊಡ್ಡಿ, ತನ್ನ ರಾಜ ಫರ್ಡಿನಾಂಡ್, ರಾಣಿ ಇಸಬೆಲ್ಲಾಳ ಹೆಸರು ಘೋಷಿಸಿದ್ದಾನೆ. ಅವನ ಪಕ್ಕ ಭಾಷಾಂತರಕಾರ, ದಸ್ತಾವೇಜು ಬರಹಗಾರ ರೊಡ್ರಿಗೋ ಡಿ ಎಸ್ಕೋಬೇಡೋ ನಿಂತಿದ್ದಾನೆ.

ಈಗ ರೊಡ್ರಿಗೋ ದಾಖಲೆ ಬರೆಯುತ್ತಾನೆ. ಇಂದಿನಿಂದ ಇವೆಲ್ಲಾ ಖಂಡಾಂತರದಾಚೆ ದೂರದ ರಾಜನಿಗೆ ಸೇರಿದ್ದು, ಹವಳದ ಸಮುದ್ರ, ಹೊಳೆವ ದಂಡೆ, ಹಸುರು ಶಿಲೆಗಳು, ಕಾಡುಗಳು, ಹಕ್ಕಿಗಳು, ಬಟ್ಟೆ... ಪಾಪ. ಹಣ ಎಂದರೆ ಏನೆಂದು ಅರಿಯದೇ ಇವರನ್ನೇ ಅರೆಬೆತ್ತಲೆ ಅಚ್ಚರಿಯ ಕಣ್ಣುಗಳಿಂದ ದಿಟ್ಟಿಸುತ್ತಿರುವ ಈ ಮನುಷ್ಯರು...

ಅರೆಬೆತ್ತಲೆ ಮನುಷ್ಯರು ಬೆಪ್ಪು ಕೌತುಕತೆಯಲ್ಲಿ ನೋಡುತ್ತಿದ್ದಂತೆ ರೊಡ್ರಿಗೋ ಹೀಬ್ರೂ ಭಾಷೆಯಲ್ಲಿ ಕೇಳುತ್ತಾನೆ. ‘ಸಾಮ್ರಾಟ್ ಖಾನ್‌ನ ಸಾಮ್ರಾಜ್ಯ ಎಲ್ಲಿದೆ ? ನಿಮ್ಮ ಕಿವಿ ಮೂಗುಗಳ ಚಿನ್ನವೆಲ್ಲಿಂದ ಬಂತು ?’ ಮತ್ತೆ ಅದೇ ಬೆಪ್ಪು ಬೆರಗಿನ ಕಣ್ಣುಗಳು.

ರೊಡ್ರಿಗೋ ತನಗೆ ಗೊತ್ತಿರುವ ಅಷ್ಟಿಷ್ಟು ಚಾಲ್ಡಿಯನ್ ಭಾಷೆಯಲ್ಲಿ ಕೇಳುತ್ತಾನೆ. ‘ಚಿನ್ನ ? ದೇಗುಲ ? ಅರಮನೆಗಳು, ಸಾಮ್ರಾಟ ?’ ಮತ್ತೆ ಅರೇಬಿಕ್‌ನಲ್ಲಿ ಕೇಳುತ್ತಾನೆ. ‘ಜಪಾನ್, ಚೈನಾ, ಚಿನ್ನ ?’

ಬಳಿಕ ಕೊಲಂಬಸ್‌ನ ಕ್ಷಮೆ ಯಾಚಿಸುತ್ತಾನೆ. ಕೊಲಂಬಸ್ ಹತಾಶೆಯಲ್ಲಿ ಶಪಿಸುತ್ತಾ, ಸಾಮ್ರಾಟ್ ಖಾನ್‌ಗೆಂದೇ ಲ್ಯಾಟಿನ್‌ನಲ್ಲಿ ಬರೆದು ತಂದಿದ್ದ ತನ್ನ ಪರಿಚಯ ಪತ್ರವನ್ನು ನೆಲಕ್ಕೊಗೆಯುತ್ತಾನೆ.

ಅರೆಬೆತ್ತಲೆ ಮನುಷ್ಯರು ತಮ್ಮ ದಡದಲ್ಲಿ ಪ್ರತ್ಯಕ್ಷವಾದ ಅಪರಿಚಿತ ಮನುಷ್ಯನ ಕ್ರೋಧವನ್ನು ಗಮನಿಸಿದ್ದಾರೆ. ಅಲೆಅಲೆಯಾಗಿ ಸಂದೇಶ ಹರಡುತ್ತದೆ.

‘ಬಾನಿಂದಿಳಿದ ಮನುಷ್ಯರನ್ನು ನೋಡಬನ್ನಿ. ಕುಡಿಯಲು ಪಾನೀಯ, ತಿನ್ನಲು ಆಹಾರ ತನ್ನಿ.’
-೨-
ನೆರುಡಾನ ಮನೆ
ಇಸವಿ ೧೯೭೩
ಈ ವಿನಾಶದ ಮಧ್ಯೆ, ಛಿದ್ರಗೊಂಡ ಮನೆಯಲ್ಲಿ ಕವಿ ನೆರುಡಾ ಅಸು ನೀಗಿದ್ದಾನೆ. ಕ್ಯಾನ್ಸರಿನಿಂದ, ದುಃಖದಿಂದ. ಅವನು ಸತ್ತರೆ ಸಾಲದು, ಅವನ ವಸ್ತುಗಳು ನಾಶವಾಗಬೇಕು ಎಂದು ಮಿಲಿಟರಿ ಆಡಳಿತ ನಿರ್ಧರಿಸಿದೆ.

ಅದಕ್ಕೇ ಪುಂಡ ಸೈನಿಕರು ಅವನ ಟೇಬಲ್ಲು, ಮಂಚವನ್ನು ಒಡೆದು ಹಾಕಿದ್ದಾರೆ. ನೆಲಹಾಸನ್ನು ಚಿಂದಿ ಮಾಡಿದ್ದಾರೆ. ಪುಸ್ತಕಗಳ ಸಂಗ್ರಹವನ್ನು ಸುಟ್ಟು ಹಾಕಿದ್ದಾರೆ. ಅವನ ಅಮೂಲ್ಯ ದೀಪಗಳು, ಬಣ್ಣದ ವೈವಿಧ್ಯಮಯ ವಿನ್ಯಾಸದ ಬಾಟಲುಗಳನ್ನು, ಕಂಭಗಳನ್ನು, ಪೇಂಟಿಂಗ್‌ಗಳನ್ನು, ಚಿಪ್ಪಿನ ಸಂಗ್ರಹವನ್ನು ವ್ಯವಸ್ಥಿತವಾಗಿ ಪುಡಿಮಾಡಿ ನಾಶ ಮಾಡಿದ್ದಾರೆ. ಗೋಡೆ ಗಡಿಯಾರದ ಪೆಂಡ್ಯುಲಮ್ಮನ್ನು ಕಿತ್ತು ಹಾಕಿದ್ದಾರೆ. ಗೋಡೆಯಲ್ಲಿದ್ದ ಅವನ ಪತ್ನಿಯ ತೈಲಚಿತ್ರದ ಹೊಳೆವ ಕಣ್ಣುಗಳನ್ನು ಬಯೊನೆಟ್ಟಿನಿಂದ ಚುಚ್ಚಿ ಕಿತ್ತಿದ್ದಾರೆ.

ನೀರು ಕೆಸರು ತುಂಬಿದ ಭಗ್ನ ಮನೆಯಿಂದ ಕವಿ ಸ್ಮಶಾನಕ್ಕೆ ಯಾತ್ರೆ ಹೊರಟಿದ್ದಾನೆ. ಕವಿಯ ಆಪ್ತಮಿತ್ರರು ಶವಪೆಟ್ಟಿಗೆ ಹೊತ್ತಿದ್ದಾರೆ. ಮಾಟೆಲ್ಡಾ ಉರುಶಿಯಾ ಯಾತ್ರೆಯನ್ನು ಮುನ್ನಡೆಸಿದ್ದಾಳೆ.

‘ನೀನಿರುವಾಗ ಬದುಕೋದು ಎಷ್ಟು ಸುಂದರ’ ಎಂದು ನೆರುಡಾ ಆಕೆಯ ಬಗ್ಗೆ ಬರೆದಿದ್ದ.

ಒಂದೊಂದೇ ಬೀದಿ ದಾಟುತ್ತಿದ್ದಂತೆ ಶವಯಾತ್ರೆಯ ಹಿಂಬಾಲಕರ ಸಂಖ್ಯೆ ಹೆಚ್ಚಿದೆ.ಮಿಲಿಟರಿ ಟ್ರಕ್‌ಗಳು, ಮೆಶಿನ್‌ಗನ್ ಹಿಡಿದ ಸೈನಿಕರು, ಬೈಕ್‌ನಲ್ಲಿರುವ ಪಹರೆ ಪೊಲೀಸರು, ಭಯ ದಮನದ ಬೀಜ ಬಿತ್ತುತ್ತಿದ್ದರೂ ಜನತೆ ಸ್ಪಂದಿಸಿದೆ. ಮನೆಗಳ ಬಾಲ್ಕನಿಯಿಂದ ಕರವಸ್ತ್ರಗಳು ಧ್ವಜದಂತೆ ಹಾರಾಡಿವೆ. ಕಿಟಕಿಯ ಹಿಂದೆ ಕೈಗಳು ವಂದಿಸಿ ವಿದಾಯ ಹೇಳಿವೆ.ಹನ್ನೆರಡು ದಿನಗಳ ಕ್ರೌರ್‍ಯ ಆಘಾತಗಳ ಬಳಿಕ ಈಗ ಹೋರಾಟದ ಹಾಡೊಂದು ಪಿಸುಗುಟ್ಟಿದೆ.ತಪ್ತ ದುಃಖದಲ್ಲಿ ಗುನುಗಿದೆ. ನೋಡನೋಡುತ್ತಿದ್ದಂತೆ ಜನರ ಸಾಲು ಮೆರವಣಿಗೆಯಾಗಿದೆ. ಮೆರವಣಿಗೆ ಜನಸಾಗರವಾಗಿದೆ. ಭಯದ ವಿರುದ್ಧ ಜನತೆ ಸಾಂಟಿಯಾಗೋದ ಬೀದಿಗಳಲ್ಲಿ ಎದೆ ಸೆಟೆಸಿ ನಡೆದಿದ್ದಾರೆ, ದನಿ ಎತ್ತಿ ಹಾಡಿದ್ದಾರೆ.

ನೆರುಡಾನಿಗೆ, ಕವಿ ನೆರುಡಾನಿಗೆ, ತಮ್ಮ ಕವಿ ನೆರುಡಾನಿಗೆ, ತಮ್ಮ ಮಣ್ಣಿನ ಕವಿ ನೆರುಡಾನಿಗೆ, ಅವನು ಹೆಮ್ಮೆ ಪಡಬಹುದಾದ ರೀತಿಯಲ್ಲಿ, ಅವನ ಅಂತಿಮ ಯಾತ್ರೆಯಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.