Saturday, December 20, 2008

ಬಂತೋ ಬಂತು ಕಾಲದ ನಾವೆ


ಅಪಾರ ಕಾಲದ ಕಡಲನ್ನು ದಾಟಿ ಬಂದ ಪುಟ್ಟ ನಾವೆಯೊಂದು ಇದೀಗ ನಮ್ಮ ನಿಮ್ಮ ಬದುಕಿನ ಬಂದರಿನಲ್ಲಿ ಲಂಗರು ಹಾಕಿದೆ. ನಾವೆಗೆ ಹನ್ನೆರಡು ಹಾಯಿಗಳು, ಇಪ್ಪತ್ನಾಲ್ಕು ಹಗ್ಗಗಳು, ಒಂದೇ ಒಂದು ಮೀಟುಗೋಲು. ಪಟಪಟಿಸುವುದು ಹಾಯಿ, ಕರೆಯುವುದು ದೂರ ತೀರಕ್ಕೆ.


ಅಂಗೈಯೊಳಗೆ ಕನಸುಗಳ ಬೆಚ್ಚನೆ ಬಚ್ಚಿಟ್ಟುಕೊಂಡ ಎಲ್ಲರ ಬದುಕಿಗೂ ಇಂಥ ಒಂದು ಪುಟ್ಟ ನಾವೆ ಬರಲಿ.
ನಿದ್ದೆಯಲ್ಲೇ ಅಕಾರಣ ನಗುವ ಸಣ್ಣ ಕಂದನ ತೊಟ್ಟಿಲಿಗೆ, ಬೆವರಿನಲ್ಲಿ ಮಿಂದ ಕೈಗಳು ಚಾಚಿದ ಅನ್ನದ ಬಟ್ಟಲಿಗೆ, ಒಳಮನೆಯ ಹಳೆ ಮಂದಿ ಕೆಮ್ಮುತ್ತ ತಡವುತ್ತ ಬಂದು ಕುಂತ ಮನೆಯ ಮೆಟ್ಟಿಲಿಗೆ ತೇಲುತ್ತ ಈ ನಾವೆ ಸಮೀಪಿಸಲಿ.


ಈಗಷ್ಟೆ ಮದುವೆಯಾಗಿ ಬಂದ ಹೊಸ ಸೊಸೆ ದೇವರೊಳಕೋಣೆಯಲ್ಲಿ ಹಚ್ಚಿಟ್ಟ ನಂದಾದೀಪಕ್ಕೆ, ತಂಟೆಕೋರ ಮಕ್ಕಳ ಮೇಲೆ ಸುಳ್ಳುಸುಳ್ಳೇ ಮುನಿಸಿಕೊಳ್ಳುವ ಹಿರಿಯರ ಕೋಪಕ್ಕೆ, ಐಸ್‌ಕ್ಯಾಂಡಿ ಮಾರಾಟವಾಗದೆ ಬಿಸಿಲಿನಲ್ಲಿ ಕರಗುತ್ತ ತಲೆ ಮೇಲೆ ಕೈಹೊತ್ತ ಶ್ರಮಜೀವಿಯ ತಾಪಕ್ಕೆ ಈ ಪುಟ್ಟ ನಾವೆ ಒದಗಿ ಬರಲಿ.


ಮಾಗಿ ಚಳಿಗೆ ಎಲೆ ಉದುರಿಸಿಕೊಂಡು ಬೋಳುಬೋಳಾಗಿ ನಿಂತ ಹಳೆಯ ಮರಗಳಿಗೆ, ದಶಂಬರದ ಫಲಗಾಳಿಗೆ ಮೆಲ್ಲನೆ ಕಂಪಿಸುತ್ತ ಹೂಗಳ ಹೊತ್ತು ಲಜ್ಜೆಯಿಂದ ನಿಂತ ಮಾಮರಗಳಿಗೆ, ಚಿಗುರಿನ ಚೊಗರಿಗೆ ಕಾತರಿಸಿ ಎಲ್ಲಿಂದಲೋ ಬರುವ ಹಕ್ಕಿಗಳಿಗೆ, ಹುಲ್ಲುಗರಿಕೆಯ ಮೇಲೆ ಮೆಲ್ಲನೆ ಇಳಿದ ಎಳಬೆಳಗಿನ ಮಿದುವಾದ ಇಬ್ಬನಿಗೆ, ಅಂಗಳದಲ್ಲಿ ರೈತನ ಉಸಿರಿನಂತೆ ಹರಡಿರುವ ಕೊಯಿಲಿಗೆ ಈ ನಾವೆಯ ಹಾಯಿ ಬೀಸಿದ ತಂಗಾಳಿ ತಾಕಲಿ.


ತಮ್ಮ ಕನಸುಗಳಲ್ಲಿ ಬಂದ ಚೆಲುವೆಯರ ಬೆನ್ನು ಬಿದ್ದು ಅರಸುತ್ತಿರುವ ಹುಡುಗರ ಬಿರುಸಾದ ಶ್ವಾಸಗಳಿಗೆ, ಕನ್ನಯ್ಯನಿಂದ ಮೊದಲ ಪ್ರೇಮಪತ್ರ ಬರೆಸಿಕೊಂಡು ಕುಪ್ಪಸದೊಳಗೆ ಬಚ್ಚಿಟ್ಟುಕೊಂಡ ರಾಧೆಯ ಝಲ್ಲೆನುವ ಎದೆಗೆ, ಗ್ರೀಟಿಂಗ್ಸ್ ಹಂಚುತ್ತ ಸುಸ್ತಾಗಿರುವ ಗಂಜಿ ಇಸ್ತ್ರಿಯ ಅಂಚೆಯಣ್ಣನ ಸಮವಸ್ತ್ರದೊಳಕ್ಕೆ, ದೇಹವಿಲ್ಲದೆ ಅತ್ತಿಂದಿತ್ತ ಹಾರಾಡುತ್ತ ಎಳೆನಗುವನ್ನು ಎಲ್ಲೆಡೆ ಹರಡಿಬಿಡುವ ಎಸ್ಸೆಮ್ಮೆಸ್‌ಗಳಿಗೆ ಈ ನಾವೆ ಬಂದುಬಿಡಲಿ.


ಆಸ್ಪತ್ರೆಯಲ್ಲಿರುವ ಪುಟ್ಟ ಕಂದನಿಗೆ ಹಾಲು ತರಲು ಓಡುತ್ತಿರುವ ಎಳೆ ತಾಯಿಯ ಫ್ಲಾಸ್ಕಿಗೆ, ಕಚೇರಿಯಿಂದ ಹಿಂದಿರುಗುವಾಗ ಮಕ್ಕಳಿಗೆ ಸಿಹಿ ತರಲು ಮರೆಯಿತೆಂದು ಚಡಪಡಿಸುವ ಗುಮಾಸ್ತೆಯ ಚೀಲದೊಳಕ್ಕೆ, ಇರುಳು ನಿದ್ರೆ ತೊರೆದು ಮನೆಯನ್ನೂ ಮರೆತು ಅಕ್ಷರಗಳು ಕತೆಯಾಗುವ ನಡುವೆ ಕಳೆದುಹೋದ ಪತ್ರಕರ್ತನ ಪೆನ್ನಿಗೆ, ತಾಯಿ ಕಣ್ಣು ತೆರೆದು ಮಿಸುಕಾಡುವುದನ್ನೇ ಕಾಯುತ್ತ ಐಸಿಯು ಹೊರಗೆ ನಿಂತಿರುವ ಮಕ್ಕಳ ಕಂಗಳೊಳಕ್ಕೆ, ಲಾರಿಯಿಂದ ಗುದ್ದಿಸಿಕೊಂಡು ಮಲಗಿರುವ ಗಂಡನಿಗೆ ರಕ್ತ ನೀಡುತ್ತಿರುವ ಬಾಡಿದ ಮುಖದ ಮಹಿಳೆಯ ತೋಳುಗಳಿಗೆ- ಈ ನಾವೆ ತೇಲಿ ಬಂದು ಅಪಾರ ಬಲ ತುಂಬಲಿ.


ಮತ್ತು... ಮತ್ತು... ಎಲ್ಲಕ್ಕಿಂತ ಮುಖ್ಯವಾಗಿ, ಯಾರದೋ ಕೋಪ ತಾಪ ದ್ವೇಷಗಳಿಗೆ ಸಂಬಂದವೇ ಇಲ್ಲದಂತೆ ಬಲಿಯಾದ ಅಮಾಯಕರ ಗೋರಿಗಳಿಗೆ, ಅವರ ಬೂದಿ ಮಣ್ಣು ಮಾಡಿದ ನಡುಗುವ ಕೈಗಳಿಗೆ, ಭಯ ಆತಂಕ ದುಃಖ ಗದ್ಗದಗಳನ್ನು ಬೈತಿಟ್ಟುಕೊಂಡು ಮರುಗುತ್ತಿರುವ ದೀಪಗಳಿಲ್ಲದ ಪಡಸಾಲೆಗಳಿಗೆ ಈ ಪುಟ್ಟ ನಾವೆ ಹಾಯಿಗಳ ಬೀಸುತ್ತ ಝಗಮಗಿಸುತ್ತ ಬರಲಿ.


ಅನ್ಯಜೀವಗಳ ವಿನಾಕಾರಣ ಪ್ರೀತಿಸುವ ಎಲ್ಲರೂ ತಮ್ಮ ಕನಸುಗಳಲ್ಲಿ ಈ ಬೆರಗಿನ ನಾವೆಯನ್ನೇರಿ ವಿಸ್ಮಿತರಾಗಲಿ.

5 comments:

ದಿನೇಶ್ ಕುಮಾರ್ ಎಸ್.ಸಿ. said...

ಅನ್ಯಜೀವಗಳ ವಿನಾಕಾರಣ ಪ್ರೀತಿಸುವ ಎಲ್ಲರೂ ತಮ್ಮ ಕನಸುಗಳಲ್ಲಿ ಈ ಬೆರಗಿನ ನಾವೆಯನ್ನೇರಿ ವಿಸ್ಮಿತರಾಗಲಿ...
ಹರೀಶ್,
ತುಂಬ ಸೊಗಸಾಗಿ ಬರೀತೀರಿ.
ಮಡಿಲಲ್ಲಿ ಮಲಗಿದ ಕಂದನಿಗೆ ತಾಯಿ ನೇವರಿಸಿದಂತೆ ನಿಮ್ಮ ಮಾತು.
ನಿರಾಶೆಯಲ್ಲಿ, ಹತಾಶೆಯಲ್ಲಿ ಕಳೆದುಹೋಗುತ್ತಿರುವ, ಭಗ್ನಗೊಳ್ಳುತ್ತಿರುವವರ ನಡುವೆ ನೀವು ಹೊಸ ಭರವಸೆ, ಆಶೆಗಳನ್ನು ಹೊತ್ತು ತಂದಿದ್ದೀರಿ.
ನಿಮ್ಮ ಬೆರಗಿನ ನಾವೆಯಲ್ಲಿ ನನಗೂ ಒಂದು ಸೀಟು ರಿಜರ್ವ್ ಮಾಡಿಕೊಡಿ

Anonymous said...

ಹರೀಶ್,
ಈ ಡಿಸೆಂಬರ್‌ ಎಲ್ಲೆಡೆ ಎಲ್ಲರಿಗೂ ಕೆಡುಕನ್ನೇ ಮಾಡುತ್ತಿದೆಯೇನೋ ಎಂಬ ಭಾವನೆ ಬರುವಷ್ಟು ಎಲ್ಲಾ ಕಡೆ ಸಮಸ್ಯೆಯ ಸಾಗರ. ಅಂಥ ಸಾಗರದೊಳಗೆ ನೀವು ತೇಲಿಬಿಟ್ಟ ಭರವಸೆಯ ನಾವೆ, ಯಾವತ್ತೂ ಅಲ್ಲೇ ಸುತ್ತಾಡುತ್ತಾ ಸೆಳೆಯುತ್ತಾ ನೋವು ಕಳೆಯುತ್ತಾ ಇರಲಿ. ಈ ಭವಸಾಗರದ ಎಲ್ಲಾ ಶಾರ್ಕ್‌, ತಿಮಿಂಗಿಲಗಳೂ ಆ ನಿಮ್ಮ ನಾವೆಯನ್ನು ಕಂಡು ಖುಷಿಯಿಂದ ಹಾಗೇ ನಿಂತುಬಿಡಲಿ. ಮುಗ್ಧರು, ಸಿದ್ಧರು, ಬುದ್ಧರು ಎಲ್ಲರಿಗೂ ಇಂಥ ನಾವೆ, ದಿಕ್ಕು ತೋರಲಿ.
-ವಿಕಾಸ ನೇಗಿಲೋಣಿ

ಆಲಾಪಿನಿ said...

ಹರೀಶ್... ಮುದ್ದಾದ ಕಂದನ ನಗುವಿನಂತೆ ಬಿಚ್ಚಿಕೊಳ್ಳುವ ಸಾಲುಗಳು. ಎಷ್ಟು ಜೋಪಾನವಾಗಿ ಹಿಡಿದಿಟ್ಟಿದ್ದೀರಿ... ಖುಷಿಯಾಯ್ತು

Anonymous said...

ಈ ಭಾವ ಈವಾಗಲೂ ನಿಮ್ಮಲ್ಲಿ ಜಾಗೃತವಾಗಿರಲಿ ಎಂದು ಆಶಿಸುವ,
ನಿಮ್ಮ ಹಿತೈಷಿ

sakkat chef said...

Dear friend

We are the regular viewers (and also readers) of your blog.. Hats off to you..

We are running a food catering company, named "Sakkat" in Bangalore. You can go through the website www.sakkatfood.com for complete details.. There, we have a special service called "Food for thought". We need very interesting, innovative, fresh, thought provoking, damn good writing for our customers.. We believe that your writing has that power. We gladly appreciate if you can contribute for this service by giving us your masterpiece writings.. Our Head-H.R.Section will get back to you if you need any clarifications about the mode of work we expect from you.

You can also feel free to reach us via e-mail (service@sakkatfood.com, sakkatchef@gmail.com) or via phone (94814 71560).

Expecting your positive response :)
Sakkat team