Friday, July 11, 2008

ದಿನೇಶ ಕಂಡ ಹಣದುಬ್ಬರ


ನಾವೆಲ್ಲಾ ಊರು ಬಿಟ್ಟೆವು. ತುತ್ತು ಕೂಳಿಗಾಗಿ, ಹಣಕ್ಕಾಗಿ, ಸೂರಿಗಾಗಿ. ನನ್ನ ಗೆಳೆಯ ದಿನೇಶ್ ಕುಕ್ಕುಜಡ್ಕ ಮಾತ್ರ ಬಿಡಲಿಲ್ಲ.
ನಾನು ಬಿಟ್ಟುಬಂದ ಬಂಟಮಲೆಯ ತಪ್ಪಲಿನ ಕುಕ್ಕುಜಡ್ಕ ಎಂಬ ಪುಟ್ಟ ಊರಿನಲ್ಲೇ ಉಳಿದು, ಜಗತ್ತಿನ ಅತ್ಯುತ್ತಮ ಸಾಹಿತಿಗಳನ್ನೂ ಅತಿಶ್ರೇಷ್ಠ ಚಿತ್ರಕಾರರನ್ನೂ ಅದು ಹೇಗೋ ಮುಖಾಮುಖಿಯಾಗುತ್ತ, ಸಮಕಾಲೀನ ವಿದ್ಯಮಾನಗಳಿಗೆ ತೀಕ್ಷ್ಣ ಪ್ರತಿಕ್ರಿಯೆಗಳನ್ನು ತನ್ನ ವ್ಯಂಗ್ಯಚಿತ್ರಗಳ ಮೂಲಕ ನೀಡುತ್ತ ಬರುತ್ತಿದ್ದಾನೆ. ಆತ ಈಗ ಕೊಡಗಿನ ‘ಶಕ್ತಿ’ ಪತ್ರಿಕೆಯ ವ್ಯಂಗ್ಯಚಿತ್ರ ಕಲಾವಿದ.
ನನ್ನ ಭವಿಷ್ಯ ನನ್ನ ಗೆರೆಗಳಲ್ಲಿಯೇ ಇದೆ ಎಂದು ನಂಬಿರುವ ದಿನೇಶ, ಊರಿನ ಭ್ರಷ್ಟರನ್ನು ಎದುರು ಹಾಕಿಕೊಳ್ಳಲೂ ಅಂಜಿದವನಲ್ಲ. ಆತ ಮೊನ್ನೆ ಮೊನ್ನೆ ಬರೆದ ಈ ಕಾರ್ಟೂನನ್ನು ನೋಡಿದಾಗ ಅದರ ಹಿಂದಿನ ಕರಾಳ ವ್ಯಂಗ್ಯ ಕಂಡು ಮೈ ಜುಮ್ಮೆಂದಿತು.
ನೀವೂ ನೋಡಿದರೆ ಚೆನ್ನಾಗಿರ್‍ತುತದೆಂದು ಬ್ಲಾಗಿಸಿದ್ದೇನೆ.

Friday, July 4, 2008

ತಸ್ಲಿಮಾಳ ಒಂದು ಕೆಂಡದಂಥ ಕವಿತೆ

ಮೂಲಭೂತವಾದಿಗಳ ಪ್ರತಿರೋಧವನ್ನೂ, ಗಂಡಸರ ಅಸಹನೆಯನ್ನೂ ಬೆನ್ನಿಗಿಟ್ಟುಕೊಂಡು ತಸ್ಲಿಮಾ ನಸ್ರೀನ್ ಎಂಬ ಹುಡುಗಿ ದೇಶದಿಂದ ದೇಶಕ್ಕೆ ಅಲೆಯುತ್ತಲೇ ಇದ್ದಾಳೆ. ಬೆನ್ನಟ್ಟುತ್ತಿರುವ ಬೇಟೆ ನಾಯಿಗಳ ಕಾರಣ ಆಕೆಯ ಧೈರ್‍ಯವೂ ಕೊಂಚ ಉಡುಗಿದಂತಿದೆ. ಆದರೆ ಅಷ್ಟು ಸುಲಭಕ್ಕೆಲ್ಲಾ ತನ್ನೊಳಗಿನ ಬೆಂಕಿಯನ್ನು ಆರಲು ಬಿಡದ ತಸ್ಲಿಮಾ ಆತ್ಮಚರಿತ್ರೆ ಬರೆದು ಬಾಂಗ್ಲಾದ ಮುಸ್ಲಿಮರನ್ನು ಇನ್ನಷ್ಟು ಚಚ್ಚಲು ಹವಣಿಸುತ್ತಿದ್ದಾಳೆ. ಈಕೆಯ ಧೈರ್‍ಯಕ್ಕೆ ಒಂದು ನಮಸ್ಕಾರ ಸಲ್ಲಿಸುತ್ತ, ಈಕೆ ಬರೆದ ಒಂದು ಪುಟ್ಟ ಪದ್ಯವನ್ನು ಅನುವಾದಿಸಿ ಕೊಟ್ಟಿದ್ದೇನೆ. ಇದು ಆಕೆಯ ಒಳ್ಳೆಯ ಪದ್ಯವಲ್ಲ, ಪ್ರಾತಿನಿಕವೂ ಅಲ್ಲ. ಆದರೆ, ಆಕೆ ಗಂಡಸರಿಂದ ಪದೇ ಪದೇ ಏಟು ತಿನ್ನಲು ಏನು ಕಾರಣ ಎಂಬುದು ಈ ಪದ್ಯದಿಂದ ಸ್ವಲ್ಪ ಮಟ್ಟಿಗೆ ಗೊತ್ತಾಗುವಂತಿದೆ !

ಹಸ್ತಮೈಥುನ
(ಗಂಡಿಲ್ಲದ ಹೆಣ್ಣು ಸೈಕಲಿಲ್ಲದ ಮೀನು !)

ಗಂಡಿಲ್ಲದೆ ಹೆಣ್ಣು ಉಳಿಯಲಾರಳೆ ?
ಹ್ಹ , ಎಂಥ ತರ್ಕ, ಭೂತದ ಮಾತು !
ಎಸೆದುಬಿಡು ಚೆಂಡು
ಆರ್ಕಿಡ್‌ಗಳು ನಿನ್ನ ತಬ್ಬಲು ಎಂದಿಗೂ ಬಿಡದಿರು
ವಿಷ ತುಂಬಿದ ಇರುವೆಗಳೆಡೆ ಹೋಗದಿರು
ಮೈಮನದಲ್ಲಿ ಉದ್ರೇಕ ತುಂಬಿಕೋ
ನಿನ್ನಲ್ಲಿ ಬಿಲ್ಲಿದೆ, ಬಾಣವೂ ಇದೆ
ಬಾ ಹುಡುಗಿ, ಹಸ್ತಮೈಥುನ ಮಾಡಿಕೊ !

Monday, June 30, 2008

ಬಾಸ್

ತಲವಾರು, ಲಾಠಿಗಳ ಮೇಲಿದ್ದ ರಕ್ತದ ಕಲೆಗಳನ್ನು ತೊಳೆದುಕೊಳ್ಳುತ್ತ ಅವರು ಮಾತಾಡುತ್ತಿದ್ದರು :
"ನಮ್ಮ ಕೆಲಸ ಸುಲಭವಾದದ್ದು ಟೆಲಿಕಾಂ ಅಕಾರಿಯಿಂದಾಗಿ. ಅವರು ಆ ಕೇರಿಯ ಅಷ್ಟೂ ಫೋನ್ ಸಂಪರ್ಕಗಳಿಗೆ ಕನೆಕ್ಷನ್ ತಪ್ಪಿಸಿದ್ದರು"
"ಆದರೆ ವಿದ್ಯುತ್ ಇಲಾಖೆಯ ಸಚಿವರು ನೆರವಾಗದಿದ್ದರೆ ಇದೆಲ್ಲಾ ನಡೆಯುತ್ತಿರಲಿಲ್ಲ. ಅವರು ನೋಡಿ, ನಮ್ಮ ಕೆಲಸ ಮುಗಿಯುವವರೆಗೂ ಇಡೀ ಗಲ್ಲಿಗೆ ಕರೆಂಟ್ ಬಾರದಂತೆ ನೋಡಿಕೊಂಡರು"
"ಊಹೂಂ, ಇದೆಲ್ಲಾ ಗೃಹ ಸಚಿವರ ಕೃಪೆ. ನಾವು ಎಲ್ಲಾ ಮುಗಿಸಿ ಬಂದರೂ ಇನ್ನೂ ಅಲ್ಲಿಗೆ ಪೊಲೀಸರು ಕಾಲಿಟ್ಟಿಲ್ಲ ನೋಡಿ"
"ಮೂರ್ಖರೇ" ತಂಡದ ಮುಖಂಡ ಗದರಿಸಿದ ; "ನಿಮಗೆಲ್ಲ ಇನ್ನೂ ಅರ್ಥವಾಗಿಲ್ಲ. ಅವರೆಲ್ಲಾ ನಮ್ಮ ಬಾಸ್‌ನ ಮಾತನ್ನು ಪಾಲಿಸಿದರು ಅಷ್ಟೇ !"
"ಯಾರವರು ?"
"ನಮ್ಮ ಮುಖ್ಯಮಂತ್ರಿಗಳು"

Saturday, June 7, 2008

ಪಾಪ

... ಆಮೇಲೆ
ನಾನು ಅವಳನ್ನು ಬಿಗಿಹಿಡಿದು ಕೂಡಿದೆ
ಅವಳು ಅತ್ತರೂ ಬಿಡದೆ.

ಉರಿವ ನನ್ನ ಪಾಪದ ನಿರಂತರ ಸುಪರ್ದಿಗೆ
ನನ್ನ ಬಿಟ್ಟು ಅವಳು ತೆರಳಿದಾಗ
ನಾನು ಅನಾಥನಂತೆ ನಿಂತು ನೋಡಿದೆ

ಅವಳ ಬಿಕ್ಕುವಿಕೆಗೆ ಕೊನೆ ಎಲ್ಲೋ ಇದ್ದಿರಬಹುದು
ನನ್ನೊಳಗಿನ ದಹನಕ್ಕೆ ಅಂತ್ಯವೇ ಇರಲಿಲ್ಲ

ಆ ಘಳಿಗೆಯ ಅವಳ ಉರಿವ ದೃಷ್ಟಿಗಳಿಂದ
ಕೆದರಿದ ಕೂದಲ ಜ್ವಾಲೆಗಳಿಂದ
ಮುಕ್ತನಾಗುವ ತಡಕಾಟದಲ್ಲಿ
ನಾಶವಾದವು ನನ್ನ ನಾಳೆಗಳು

ಇದೀಗ ನನ್ನ ಮೇಲೆ ನಡೆದಿರುವ
ಅಂಥ ನಿನ್ನೆಗಳ ಕರಾಳ ಕೈಗಳ
ಅಮಾನುಷ ಹಲ್ಲೆಯ ಹೇಗೆ ವಿವರಿಸಲಿ ?

Sunday, May 11, 2008

ಮತದಾನ ಪ್ರಸಂಗ

ಅರ್ಜಿಯಲ್ಲಿ ನನ್ನ ಹೆಸರನ್ನು ಸರಿಯಾಗಿಯೇ ಬರೆದು ಕೊಟ್ಟಿದ್ದೆ ; ಇತರ ವಿವರಗಳನ್ನೂ ಸ್ಪಷ್ಟವಾಗಿ ಕಾಣುವಂತೆ ನಮೂದಿಸಿದ್ದೆ. ಆದರೆ ಮತದಾರರ ಪಟ್ಟಿ ತಯಾರಿಸುವ ಅಕಾರಿಗಳು ನನ್ನ ಹೆಸರನ್ನು ‘ಹರೀಶ್ ಕೀರೆ’ ಅಂತ ಬರೆದು ಅಧ್ವಾನ ಮಾಡಿಬಿಟ್ಟಿದ್ದರು. ಪಕ್ಷವೊಂದರ ಕಾರ್‍ಯಕರ್ತರು ಮನೆಗೆ ಬಂದು ಹೆಸರಿದ್ದ ಚೀಟಿ ಕೊಟ್ಟಾಗಲೇ ನನಗೆ ಮೈ ಉರಿದು ಹೋಗಿತ್ತು. ತಿದ್ದುಪಡಿಗೆ ನೀಡಲು ಸಮಯವಿರಲಿಲ್ಲ ; ಅದನ್ನೇ ಹಿಡಿದುಕೊಂಡು ಮತಗಟ್ಟೆಗೆ ಹೋದೆ.

ಜನರೇ ಇರಲಿಲ್ಲ. ಒಂದು ಕ್ಷಣ ಇಲ್ಲಿ ಮತದಾನ ನಡೆಯುತ್ತಿದೆಯೇ ಇಲ್ಲವೇ ಅಂತ ಅನುಮಾನ ಬಂತು. ಶಾಲೆಯ ಹೊರಗಿದ್ದ ಪೊಲೀಸರನ್ನೂ ಒಳಗೆ ನಾನಾ ಚಟುವಟಿಕೆಗಳನ್ನೂ ಕಂಡು ಅನುಮಾನ ಪರಿಹಾರವಾಯಿತು. ಒಳಗೆ ನುಗ್ಗಿ ಅಕಾರಿಗೆ ಚೀಟಿ ತೋರಿಸಿದೆ. ಆತ ನನ್ನ ಮುಖ ಕೂಡ ನೋಡದೆ, ಮತದಾರರ ಪಟ್ಟಿ ನೋಡುತ್ತ ಏನನ್ನೋ ಗಾಢವಾಗಿ ಹುಡುಕಿದ. ಬಳಿಕ ‘ಹರೀಶ್ ಕೀರೆ’ ಅಂತ ಘೋಷಿಸಿ, ಈತ ಯಾರೋ ದಕ್ಷಿಣ ಆಫ್ರಿಕಾದ ಪ್ರಜೆಯೇ ಇರಬೇಕು ಎಂಬ ಗುಮಾನಿಯಿಂದ ತಲೆ ಎತ್ತಿ ನೋಡಿದ.

ನಾನು ಪೆಚ್ಚು ನಗು ನಕ್ಕು ‘ಹರೀಶ್ ಕೇರ’ ಅಂದೆ.

‘ಹರೀಶ್ ಕೀರೆ’ ಅಂತ ಒತ್ತಿ ಹೇಳುತ್ತ ಆತ ಅನುಮಾನದಿಂದ ನನ್ನನ್ನೇ ನೋಡಿದ.

‘ಕೀರೆ ಅಲ್ಲ ಕೇರ’

‘ಮತ್ತೆ ಇಲ್ಲಿ ಕೀರೆ ಅಂತಿದೆ’

‘ಇರುತ್ತೆ, ಕನ್ನಡ ಸರಿಯಾಗಿ ಗೊತ್ತಿಲ್ಲದೋರು ಲಿಸ್ಟ್ ಮಾಡಿದರೆ ಹಾಗೇ ಇರುತ್ತೆ’ ಇಷ್ಟು ಹೊತ್ತಿಗೆ ನನ್ನ ಸಹನೆ ಮುಗಿದಿತ್ತು.

‘ನಿಮ್ಮ ಐಡಿ ಕಾರ್ಡ್ ತೋರಿಸಿ’ ಆತ ಕೇಳುವ ಮೊದಲೇ ಡ್ರೈವಿಂಗ್ ಲೈಸೆನ್ಸ್ ತೆಗೆದು ಕೊಟ್ಟೆ . ಆತ ಫೋಟೋ ತಾಳೆ ಹಾಕಿ ಓಕೆ ಅಂದ. ಅವನ ಪಕ್ಕ ಕೂತಿದ್ದ ಹೆಂಗಸು ನನ್ನ ಎಡ ತೋರು ಬೆರಳಿಗೆ ನಾಮ ಹಾಕಿದಳು. ಅದು ಚುನಾವಣಾ ಆಯುಕ್ತ ಗೋಪಾಲಸ್ವಾಮಿ ನಾಮದಂತೆಯೇ ಉದ್ದಕ್ಕಿತ್ತು.

ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನ ಮುಂದೆ ನಿಂತೆ. ಹೆಸರುಗಳು ಒಂದೊಂದಾಗಿ ಕಂಡವು- ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಚ್.ಎಂ.ರೇವಣ್ಣ, ಲೋಕೇಶ್ ಗೌಡ, ಮಲ್ಲಿಕಾರ್ಜುನ ಬೊಮ್ಮಾಯಿ...

ಒಬ್ಬ ಭೂಗಳ್ಳ. ಬೆಂಗಳೂರು ಸುತ್ತಮುತ್ತಲಿನ ಭೂಮಿಯನ್ನು ಹರಿದು ಹಂಚಿ ಸ್ವಲಾಭಕ್ಕೂ ಜಾತಿವಸ್ತರಿಗೂ ಪಕ್ಷದವರಿಗೂ ನೀಡಿ ಕೋಟಿಗಟ್ಟಲೆ ಕೊಳ್ಳೆಹೊಡೆದವನು. ಇನ್ನೊಬ್ಬ ಅವನಿಗಿಂತ ಕಡಿಮೆಯಿಲ್ಲದ ಅತ್ಯಾಚಾರಿ. ಮತ್ತೊಬ್ಬ ಪುಡಿ ರೌಡಿಗಳನ್ನು ಇಟ್ಟುಕೊಂಡು ಪ್ರದೇಶದಲ್ಲಿ ದಾಂಧಲೆ ಎಬ್ಬಿಸುವವನು. ಮಗದೊಬ್ಬ ನರಸತ್ತವನು...

ಮಹಾ ಭ್ರಷ್ಟರು, ನೀಚರು, ದಗಲ್ಬಾಜಿಗಳು ತುಂಬಿಹೋಗಿರುವ ಆ ಪಟ್ಟಿಯಿಂದ ಒಂದೇ ಒಂದು ಸಭ್ಯ, ದೂರದರ್ಶಿತ್ವ ಉಳ್ಳ ನಾಯಕನನ್ನು ಹೆಕ್ಕಿ ತೆಗೆಯುವುದು ನನಗೆ ಅಸಾಧ್ಯವೆನ್ನಿಸತೊಡಗಿತು. ದಗಾಕೋರರಿಂದ ತುಂಬಿಹೋಗಿರುವ ಈ ದೇಶಕ್ಕೆ ಭವಿಷ್ಯವೇ ಇಲ್ಲ ಅಂತ ತೀವ್ರವಾಗಿ ಅನ್ನಿಸಿತು. ಹಿಂದೆ ಬೋ ಮರದ ಕೆಳಗೆ ನಿಂತ ಸಿದ್ಧಾರ್ಥನಿಗೆ ಆಗಿತ್ತಲ್ಲ ; ಅಂಥದೇ ಒಂದು ಮಹತ್ ದರ್ಶನ ಈ ಯಃಕಶ್ಚಿತ್ ಯಂತ್ರದ ಮುಂದೆ ನಿಂತುಕೊಂಡು ನನಗೆ ಆಗತೊಡಗಿತ್ತು. ಈ ನಾಲಾಯಕ್ ಮಂದಿಯಲ್ಲಿ ಯಾರಿಗೆ ಮತ ಹಾಕಲಿ ? ನಾನು ಮತ ಹಾಕಿದ ವ್ಯಕ್ತಿ ಒಂದೇ ಒಂದು ಮತದ ಅಂತರದಿಂದ ಆರಿಸಿ ಬಂದರೂ ನನ್ನನ್ನು ಜೀವನಪರ್‍ಯಂತ ಪಾಪಪ್ರಜ್ಞೆ ಕಾಡಬಹುದು ಅನ್ನಿಸಿ ಕಣ್ಣು ಸುತ್ತಿ ಬಂತು.

ನಾನು ಯಂತ್ರದ ಮುಂದೆ ನಿಂತು ಧ್ಯಾನಮಗ್ನನಾದುದನ್ನು ಕಂಡು ಅಲ್ಲಿ ಕುಳಿತಿದ್ದ ಅಕಾರಿ ಎದ್ದು ‘ಎನಿ ಪ್ರಾಬ್ಲಮ್ ?’ ಎನ್ನುತ್ತ ನನ್ನ ಕಡೆಗೆ ಬರತೊಡಗಿದ. ನಾನು ಎಚ್ಚೆತ್ತುಕೊಂಡು, ‘ಏನೂ ಪ್ರಾಬ್ಲಮ್ ಇಲ್ಲ ಕಣ್ರೀ, ಈ ಕಳ್ಳ ನನ್ ಮಕ್ಕಳಲ್ಲಿ ಯಾರಿಗೆ ಹಾಕೋದು ಗೊತ್ತಾಗ್ತಾಯಿಲ್ಲ’ ಅಂದೆ.

ನನ್ನ ಪ್ರಶ್ನೆಗೆ ಆತ ಕಕ್ಕಾಬಿಕ್ಕಿಯಾದ. ರೂಮಿನೊಳಗೆ ಸಣ್ಣ ನಗೆಯ ಅಲೆಗಳು ಎದ್ದವು. ಕಣ್ಣು ಮುಚ್ಚಿ ಒಂದು ನೀಲಿ ಬಟನ್ ಒತ್ತಿ ಈಚೆ ಬಂದೆ.

ಹೊರಗೆ ‘ನನ್ನ ಹೆಸರು ಪಟ್ಟಿಯಿಂದ ಕಿತ್ತು ಹಾಕಿದ್ದಾರೆ’ ಎಂದು ಒಬ್ಬ ಗಲಾಟೆ ಮಾಡತೊಡಗಿದ್ದ. ಈಗ ತಾನೇ ವ್ಯಾನಿನಿಂದ ಇಳಿದ ಚಾನೆಲ್ ಒಂದರ ಹುಡುಗಿ ಮೈಕ್ ಹಿಡಿದುಕೊಂಡು ಅವನ ಕಡೆ ಧಾವಿಸುತ್ತಿದ್ದಳು.

ಚುನಾವಣೆ ರಾಜಕೀಯದ ಬಗ್ಗೆ ಆಳವಾಗಿ ಚಿಂತಿಸುವ ಪ್ರಗತಿಪರರ ಕಳವಳಗಳು, ರಜೆ ಇದ್ದರೂ ಮತ ಹಾಕಲು ಹೋಗದ ವಿದ್ಯಾವಂತರ ಸಂಕಟಗಳು ಕೊಂಚ ಕೊಂಚವಾಗಿ ಅರ್ಥವಾಗತೊಡಗಿದ್ದವು.

Thursday, May 8, 2008

ಮೌಲ್ಯ

"ಸಾರ್, ನನಗೆ ರಕ್ಷಣೆ ನೀಡಿ"
"ಏನಾಯಿತು, ಯಾರು ನೀನು ?"
"ನಾನು ಬೀದಿಯಲ್ಲಿ ಬರುತ್ತಿದ್ದಾಗ ಹಲವಾರು ಮಂದಿ ತಲವಾರು ಝಳಪಿಸುತ್ತ ನನ್ನ ಬೆನ್ನು ಹತ್ತ್ತಿದರು. ಅವರಿಂದ ಪಾರಾಗಲು ಗಲ್ಲಿ ಬಿದ್ದು ಇಲ್ಲಿಗೆ ಬಂದೆ"
"ನಿನ್ನ ಹೆಸರೇನು ?"
"......"
"ಹೆದರಬೇಡ. ಶರಣಾಗತರಿಗೆ ರಕ್ಷಣೆ ನೀಡಬೇಕೆಂದು ನಮ್ಮ ಧರ್ಮದಲ್ಲಿದೆ. ಬಾ ಇಲ್ಲಿ ಅವಿತುಕೋ"
ಸ್ವಲ್ಪವೇ ಹೊತ್ತಿನಲ್ಲಿ ಕ್ರೋಧದಿಂದ ಉನ್ಮತ್ತವಾಗಿದ್ದ ಒಂದು ಗುಂಪು ಅಲ್ಲಿಗೆ ಬಂತು.
"ಇತ್ತ ಕಡೆ ಓಡಿ ಬಂದ ಆ ನೀಚ ಎಲ್ಲಿ ಹೋದ ?"
"ಸುಳ್ಳು ಹೇಳಬಾರದೆಂದು ನಮ್ಮ ಧರ್ಮದಲ್ಲಿ ಹೇಳಿದೆ. ಇದೋ ಇಲ್ಲಿ ಅವಿತಿದ್ದಾನೆ ನೋಡಿರಿ"

Sunday, April 13, 2008

ಕವಿತೆಯೆಂಬ ನುಡಿಸಿರಿ

ಮೂಡುಬಿದಿರೆಯಲ್ಲಿ ಪ್ರತಿವರ್ಷ ನಡೆಯುವ "ನುಡಿಸಿರಿ’ ಸಾಹಿತ್ಯ- ಸಂಸ್ಕೃತಿ ಸಮ್ಮೇಳನದಲ್ಲಿ "ಕವಿಸಮಯ’ ಎಂಬ ವಿಶಿಷ್ಟ ಕಾರ್‍ಯಕ್ರಮ ನಡೆಯುತ್ತದೆ. ಇಪ್ಪತ್ತು ನಿಮಿಷದ ಈ ಕಾರ್‍ಯಕ್ರಮವನ್ನು ಒಬ್ಬನೇ ಕವಿಯ ಮೇಲೆ ಫೋಕಸ್ ಮಾಡಲಾಗಿರುತ್ತದೆ. ಆತ ತನ್ನ ಕವಿತೆ- ಪ್ರೇರಣೆಗಳ ಬಗ್ಗೆ ಮಾತನಾಡುತ್ತಾನೆ, ಕವಿತೆ ಓದುತ್ತಾನೆ, ಅದನ್ನು ಗಾಯಕರು ಹಾಡುತ್ತಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ನುಡಿಸಿರಿಯ ಕವಿಸಮಯದಲ್ಲಿ ನಾನು ಕವಿತೆ ಓದಿದ್ದೆ. ಆಗ ನಾನು ನನ್ನ ಕವಿತೆಗಳ ಬಗ್ಗೆ ಮಾತನಾಡಿದ್ದು ಇಲ್ಲಿದೆ...

ನಿಜ ದುಃಖ ನುಡಿದಾಗ

ಮಾತು ಮುಗಿದ ಬಳಿಕ ಉಳಿಯುವುದು ಕವಿತೆ ಎಂಬ ನಂಬಿಕೆ ನನ್ನದು. ಕವಿತೆಯೆಂಬ ಅಸ್ಪಷ್ಟ ಹಾಗೂ ಮೈತಡವಿ ಸಂತೈಸುವ ತಹತಹದ ಕಾಡಿನಲ್ಲಿ ನನಗಿಂತ ಮೊದಲು ನಡೆದು ಹಾದಿ ಹಾಕಿಕೊಟ್ಟ ಅನೇಕರಿಗೆ ನಾನು ಋಣಿ. ಅವರೆಲ್ಲ ಎಂಥ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಅಂತ ಗೊತ್ತಾಗುವುದಕ್ಕೂ ಮುನ್ನವೇ ನಾನು ಕವಿತೆಯೆಂದು ತಿಳಿದುಕೊಂಡ ಸಾಲುಗಳನ್ನು ಬರೆದೆ.

ಅವು ನಾನು ಹುಟ್ಟಿ ಬೆಳೆದ ಸುಳ್ಯ ಸುಬ್ರಹ್ಮಣ್ಯ ಪರಿಸರದ ದಟ್ಟ ಹಸಿರು ಕಾಡಿನಿಂದ, ಅಲ್ಲಿನ ಶಾಂತಿ ಹಾಗೂ ಅಶಾಂತ ನಿಗೂಢತೆಯಿಂದ ಉದ್ಭವವಾಗಿದ್ದವು. ಸಂಜೆ ಮುಂಜಾನೆಗಳಲ್ಲಿ ಅಲ್ಲಿನ ಕಾಡುಗಳ ಎಲೆಗಳ ನಡುವೆ ನೆಲಮುಟ್ಟಲು ಕಷ್ಟಪಡುತ್ತಿದ್ದ ಸೂರ್‍ಯಕಿರಣಗಳು, ಗಾಳಿ ಬೀಸಿದಾಗ ಸದ್ದು ಮಾಡುತ್ತಾ ಬೀಳುತ್ತಿದ್ದ ಒಣಗಿದ ಎಲೆಗಳು, ಕಣ್ಣಿಗೆ ಕಾಣಿಸದಂತೆ ಕೂತುಕೊಂಡು ಕೂಗುತ್ತಿದ್ದ ನಾನಾ ಹಕ್ಕಿಗಳು, ರಾತ್ರಿಯ ನೀರವದಲ್ಲಿ ಚಿತ್ರವಿಚಿತ್ರ ಸದ್ದುಗಳನ್ನು ಹೊರಡಿಸುತ್ತಿದ್ದ ಸಾವಿರಾರು ಮೃಗ ಪಕ್ಷಿ ಕೀಟ ಜಾತಿ, ಇವೆಲ್ಲದರ ನಡುವೆ ಬದುಕಿಗಾಗಿ ಬವಣೆಪಡುತ್ತಿದ್ದ ಜನಗಳು... ಇವೆಲ್ಲ ಹೇಗೆ ಇವೆ ಮತ್ತು ಯಾಕೆ ಹಾಗಿವೆ ಅಂತ ಯೋಚಿಸುತ್ತ ಯೋಚಿಸುತ್ತ ಬಹುಶಃ ನನ್ನ ಕಾವ್ಯದ ಮೊದಲ ಸಾಲುಗಳು ಹುಟ್ಟಿಕೊಂಡವು ಅಂತ ಕಾಣುತ್ತದೆ.

ಇದೆಲ್ಲ ಬಾಲ್ಯದಲ್ಲಿ. ಆಮೇಲೆ ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಪಟ್ಟಣಕ್ಕೆ ಬಂದು ಕಾಲೇಜಿಗೆ ಸೇರಿಕೊಂಡು ಇಂಗ್ಲಿಷ್ ಮಾಧ್ಯಮವನ್ನು ಎದುರಿಸಬೇಕಾದಾಗ ನನ್ನಂಥ ಹಳ್ಳಿ ಗಮಾರನಲ್ಲಿ ಎಂಥ ಕೀಳರಿಮೆ ಹುಟ್ಟಿರಬಹುದು ಯೋಚಿಸಿ. ಈ ಕೀಳರಿಮೆ ದಾಟಲು ನಾನು ಕಂಡುಕೊಂಡ ಒಂದು ಉಪಾಯ ಬರವಣಿಗೆ. ಆಮೇಲೆ ನಿಮಗೆ ಗೊತ್ತಿರುತ್ತದೆ- ಹುಡುಗರು ಹುಡುಗಿಯರನ್ನು ಇಂಪ್ರೆಸ್ ಮಾಡುವುದಕ್ಕೆ ಬರೆಯುವುದು ಇತ್ಯಾದಿ...

ಆದರೆ ಒಂದಾಯ್ತು- ಮಾಯಾಕಿನ್ನರಿ ಪದ್ಯದಲ್ಲಿ ಬೇಂದ್ರೆ ಹೇಳುವಂತೆ - "ಮರುಳು ಮಾಡಾಕ ಹೋಗಿ ಮರುಳ ಸಿದ್ಧನ ನಾರಿ ಮರುಳಾದಳೋ ಜಂಗಮಯ್ಯಗ...’ ಜಂಗಮಯ್ಯನನ್ನು ಮರುಳು ಮಾಡಲು ಹೋಗಿ ಆತನ ಮೋಡಿಗೆ ತಾನೇ ಒಳಗಾದ ನಾರಿಯ ಹಾಗೆ, ವಿನೋದಕ್ಕೆ ನಾನು ಕೈಹಿಡಿದ ಕವಿತೆ ನನ್ನ ಮೇಲೆ ತುಂಬ ಗಾಢವಾದ ಮಾಯಾಜಾಲವೊಂದನ್ನು ಬೀಸಿ ಅದರ ನಿಗೂಢವಾದ ಕಣಿವೆಯ ಒಳಗೆ ಅಂಡಲೆಯುವಂತೆ ಮಾಡಿತು.

ನಾವು ಹೇಳಬೇಕು ಅಂದುಕೊಂಡದ್ದನ್ನು ಪೂರ್ತಿಯಾಗಿ ಕವಿತೆಯಲ್ಲಿ ಹೇಳಲಿಕ್ಕಾಗುತ್ತದೆಯೇ ಅನ್ನುವುದು ಒಂದು ಸಮಸ್ಯೆ. ಅಲ್ಲಮ ಹೇಳುವಂತೆ - "ಘನವ ಮನ ಕಂಡು ಅದನೊಂದು ಮಾತಿಂಗೆ ತಂದು ನುಡಿದು ನೋಡಿದಡೆ ಅದಕ್ಕದೆ ಕಿರಿದು ನೋಡಾ !’

ಕವಿತೆ ಅನ್ನುವುದು "ತಾಯ ಸೆರಗಿನ ನೂಲು ಮಗುವಿನ ಕೈಯಲ್ಲಿ ಉಳಿದಂತೆ’ ಅಂತ ಬೇಂದ್ರೆ ಕೂಡ ಹೇಳುತ್ತಾರೆ. ಅನುಭವ ಅನ್ನುವ ತಾಯಿ ಮಕ್ಕಳಾದ ನಮ್ಮನ್ನ್ನು ಮಲಗಿಸಿ ಅತ್ತ ಹೋಗುವಾಗ ನಮಗೆ ವರ್ಣಿಸಲು ಸಿಕ್ಕುವ ನಾಲ್ಕು ಸಾಲುಗಳು. ಸಮುದ್ರದ ಬಳಿಗೆ ಹೋದವನು ಬಯಸಿದರೂ ಸಮುದ್ರವನ್ನೇ ಮನೆಗೆ ತಂದಾನೆ ? ಒಂದು ಹಿಡಿ ಕಪ್ಪೆಚಿಪ್ಪು ತಂದಾನು ಅಷ್ಟೆ.

ಮಾತಿನಲ್ಲಿ ಹೇಳಲಿಕ್ಕಾಗದಿದ್ದುದನ್ನು ಕವಿತೆ ಅರ್ಥ ಮಾಡಿಸುತ್ತದೆ ಅಂತ ಅಲ್ಲ. ಅರ್ಥ ಮಾಡಿಸುವುದು ಬೇರೆ, ಅನುಭವ ಮಾಡಿಸುವುದೇ ಬೇರೆ. ಎಲ್ಲರ ಒಳಗಿರುವ ಅಂತಃಕರಣ ಲೋಕದ ಸುಖಸಂಕಟಗಳಿಗೆ ಮಿಡಿಯುತ್ತದಲ್ಲ - ಅದನ್ನು ಬೇಂದ್ರೆ "ನಿಜ ದುಃಖ’ ಅನ್ನುತ್ತಾರೆ. ಅಂದರೆ ದುಃಖಕ್ಕೂ ಮೀರಿದ್ದು- ಹೇಳಲಿಕ್ಕಾಗದ್ದು ಹಾಗೆಯೇ ಹೇಳದೆ ಇರಲಿಕ್ಕೂ ಆಗದ್ದು- "ಮಮತಾಜಳನು ಹುಗಿದು ತಾಜಮಹಲನು ಕಟ್ಟಿ ನಿಜ ದುಃಖ ಮರೆಸಬಹುದೆ ?’

ಹೀಗೆ ಕವಿತೆಯ ದಾರಿಯಲ್ಲಿ ನನಗೆ ಒಂದು ಸಮಸ್ಯೆ ಇದೆ. ಅದೇನೆಂದರೆ ನಾನು ನನಗೆ ಕಂಡದ್ದನ್ನು, ನಾನು ಉಂಡದ್ದನ್ನು ಹಾಗೇ ಹೇಳಬಲ್ಲೆನೇ ಅನ್ನುವುದು. ಮತ್ತೆ ಬೇಂದ್ರೆಯ ಉದಾಹರಣೆ ಕೊಡುವುದಾದರೆ- "ತೊಗಲ ನಾಲಗೆ ನಿಜವ ನುಡಿಯಲೆಳಸಿದರೆ ತಾನಂಗೈಲಿ ಪ್ರಾಣಗಳ ಹಿಡಿಯಬೇಕು, ಇಲ್ಲದಿದ್ದರೆ ನೀರಿನೊಲು ತಣ್ಣಗಿದ್ದವನದನು ಉರಿಯ ನಾಲಗೆಯಿಂದ ನುಡಿಯಬೇಕು.’ ನಮ್ಮ ಬದುಕಿನ ಸುತ್ತಮುತ್ತ, ನಮ್ಮೊಳಗೇ ಕಾಣುತ್ತಿರುವ ಕ್ರೌರ್‍ಯ, ಅಮಾನವೀಯತೆ, ಹಿಂಸೆ ಇವುಗಳನ್ನೆಲ್ಲ ಹಾಗೆಹಾಗೇ ಹಸಿಹಸಿಯಾಗಿ ನುಡಿಯುವುದು ಸಾಧ್ಯವಿದೆಯೆ ? ಲಂಕೇಶ್, ಅಡಿಗ, ಕಾಫ್ಕಾ, ಮಂಟೋರ ಹಾಗೆ ಕಟುವಾಗಿ, ತೀಕ್ಷ್ಣವಾಗಿ, ಕಾವ್ಯಾತ್ಮಕವಾಗಿ ಮತ್ತು ಸೊಗಸಾಗಿ ಬರೆಯಬಲ್ಲೆನೇ ಅನ್ನುವುದು ನಾನು ಮುಂದೆ ಯಾವ ಬಗೆಯ ಅನುಭವಗಳಿಗೆ ಹಾಗೂ ಅಕ್ಷರಗಳಿಗೆ ಒಡ್ಡಿಕೊಳ್ಳುತ್ತೇನೆ ಅನ್ನುವುದರ ಮೇಲೆ ನಿಂತಿದೆ.