Saturday, July 26, 2008

ತಸ್ಲಿಮಾಳ ಇನ್ನೊಂದು ಕವನ

ಇದು ಬಾಂಗ್ಲಾದ ಲೇಖಕಿ ತಸ್ಲಿಮಾ ನಸ್ರೀನ್ ಬರೆದ ಮತ್ತೊಂದು ಕವನ. ಈ ಕವನ ಬಾಂಗ್ಲಾದ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿತ್ತು. ಕವನದಲ್ಲಿ ಪ್ರವಾದಿ ಮುಹಮ್ಮದ್‌ರನ್ನು ಅವಹೇಳನ ಮಾಡಲಾಗಿದೆ ಎಂದು ಅವರ ದೂರು.
ಅದಕ್ಕಿಂತಲೂ ಈ ಕವನ ನನಗೆ ಆಪ್ತವಾಗಲು ಕಾರಣ- ನನ್ನ ಅಮ್ಮ. ಆಕೆ ಈಗಿಲ್ಲ.

ಅಮ್ಮ
-೧-
ಕೊನೆಗಾಲದಲ್ಲಿ ನನ್ನಮ್ಮನ ಕಂಗಳು ಮೊಟ್ಟೆಯ ಲೋಳೆಯಂತೆ ಹಳದಿಯಾಗಿದ್ದವು
ನೀರು ತುಂಬಿದ ಚೀಲದಂತೆ ಆಕೆಯ ಹೊಟ್ಟೆ ದಿನದಿಂದ ದಿನಕ್ಕೆ ಊದಿಕೊಂಡು
ಯಾವುದೇ ಕ್ಷಣದಲ್ಲಿ ಸಿಡಿಯುವಂತಾಗಿತ್ತು
ನಿಲ್ಲಲಾಗದೆ, ಕುಳಿತಿರಲೂ ಆಗದೆ, ಬೆರಳುಗಳ ಚಲಿಸಲಾಗದೆ
ಆಕೆ ಮಲಗಿದಲ್ಲಿಯೇ ಇರುತ್ತಿದ್ದಳು
ಕೊನೆಕೊನೆಗೆ ಆಕೆ ಅಮ್ಮನಂತೆಯೂ ಕಾಣುತ್ತಿರಲಿಲ್ಲ

ಪ್ರತಿ ಸಂಜೆ ಪ್ರತಿ ಹಗಲು ಬಂಧುಗಳು ಬರುತ್ತಿದ್ದರು
ಸಿದ್ಧವಾಗಿರಲು ಸೂಚಿಸುತ್ತ
ಪವಿತ್ರ ಶುಕ್ರವಾರ ಹತ್ತಿರದಲ್ಲಿದೆ, ನಿರಾಶಳಾಗದಂತೆ ಆಕೆಗೆ ಹೇಳುತ್ತ,
ಲಾ ಇಲಾಹ್ ಇಲ್ಲಲ್ಲಾಹ್- ಅಲ್ಲಾಹು ಒಬ್ಬನೇ ಅನ್ನುತ್ತ
ಪ್ರಶ್ನೆಗಳ ಕೇಳಲು ಇಬ್ಬರು ದೇವತೆಗಳು ಬರುವರು- ಮುಂಕಾರ್ ಮತ್ತು ನಕೀರ್
ಕೋಣೆ, ಜಗಲಿಗಳ ಪರಿಶುದ್ಧಗೊಳಿಸಲು ಹೇಳುವರು
ಕೊನೆಗೊಮ್ಮೆ ಮೃತ್ಯು ಬರುವಾಗ ಸುರ್ಮಾ ಹಾಗೂ ಅತ್ತರು ಕೈಯಲ್ಲಿರಬೇಕು ಅನ್ನುವರು

ಹಸಿದ ಕಾಯಿಲೆ ಈಗ ನರ್ತಿಸುತ್ತಿದೆ ಅಮ್ಮನ ದೇಹದ ಮೇಲೆ
ಆಕೆಯಲ್ಲಿ ಉಳಿದ ಕೊನೆಯ ಬಲವನ್ನೂ ಹೀರಿದೆ
ಅವಳ ಕಣ್ಣುಗಳು ಸಿಡಿದುಹೋಗುವಂತೆ ಉಬ್ಬಿವೆ
ನಾಲಿಗೆ ಒಣಗಿದೆ
ಎದೆಯಲ್ಲಿದ್ದ ಗಾಳಿಯನ್ನೂ ಕಸಿದಿದೆ
ಅವಳು ಉಸಿರಾಡಲು ಒದ್ದಾಡುತ್ತಿರುವಂತೆ
ಹಣೆ, ಹುಬ್ಬುಗಳು ವೇದನೆಯಿಂದ ಗಂಟಿಕ್ಕುತ್ತಿರುವಂತೆ
ಮನೆಯವರು ಒಂದಾಗಿ ನಿಂತು ಆಕೆಗಾಗಿ ಪ್ರಾರ್ಥಿಸಿದೆವು
ಆಕೆಯ ಶಾಂತಿಗಾಗಿ ಪ್ರವಾದಿಗೆ ಬೇಡಿದೆವು
ಆಕೆ ಜನ್ನತುಲ್ ಫಿರ್ದೌಸ್ ಸ್ವರ್ಗಕ್ಕೆ ಹೋಗುತ್ತಾಳೆಂಬುದರಲ್ಲಿ ನಮಗೆ ಅನುಮಾನವಿಲ್ಲ

ಒಂದು ರಮಣೀಯ ಸಂಜೆ ಸ್ವರ್ಗದ ಉದ್ಯಾನದಲ್ಲಿ
ಮುಹಮ್ಮದರ ಕೈಗೆ ಕೈ ಬೆಸೆದು ನಡೆದು
ಇಬ್ಬರೂ ಹಕ್ಕಿ ಮಾಂಸದ ಊಟ, ವೈನು ಸೇವಿಸಿ...
ತಾಯಿಯ ಜೀವಿತದ ಕನಸಾಗಿತ್ತು ಅದು

ಆದರೆ ಈಗ, ತಿರೆಯ ತೊರೆಯುವ ವೇಳೆ, ಅವಳು ಅಂಜಿದಳು ಎಂಬುದೇ ಅಚ್ಚರಿ
ಹೊರಗೆ ಕಾಲಿಡುವ ಬದಲು ಅವಳು ನನಗೆ ಬಿರಿಯಾನಿ ಮಾಡಿಕೊಡಲು
ಹಿಲ್ಸಾ ಮೀನನ್ನು ಕರಿದು ಕೊಡಲು
ಕೆಂಪು ಆಲೂಗಳಿಂದ ಸಾಗು ತಯಾರಿಸಲು
ತೋಟದ ದಕ್ಷಿಣ ಮೂಲೆಯ ಮರದಿಂದ ಎಳನೀರು ಕಿತ್ತುಕೊಡಲು
ಕೈ ಬೀಸಣಿಕೆಯಿಂದ ಗಾಳಿ ಹಾಕಲು
ಹಣೆಯ ಮೇಲೆ ಕುಣಿದಾಡುತ್ತಿದ್ದ ಕುರುಳನ್ನು ಅತ್ತ ಸರಿಸಲು
ನನ್ನ ಹಾಸಿಗೆಯ ಮೇಲೆ ಹೊಸ ಚಾದರ ಹೊದಿಸಲು
ಕಸೂತಿ ಎಳೆದ ಹೊಸ ಫ್ರಾಕು ಹೆಣೆಯಲು
ಬರಿಗಾಲಿನಲ್ಲಿ ಜಗಲಿಯ ಮೇಲೆ ನಡೆಯಲು
ಸಣ್ಣ ಪಪ್ಪಾಯಿ ಗಿಡಕ್ಕೊಂದು ಊರುಗೋಲಿಡಲು
ತೋಟದಲ್ಲಿ ಸಣ್ಣಗೆ ಹಾಡುತ್ತ ಕುಳಿತಿರಲು -
"ಇಂಥ ಸುಂದರ ಚಂದ್ರ ಹಿಂದೆಂದೂ ಬರಲಿಲ್ಲ,
ಇಷ್ಟು ಸೊಬಗಿನ ಇರುಳು ಹಿಂದೆಂದೂ ಇರಲಿಲ್ಲ..."

ನನ್ನಮ್ಮ ಬದುಕಲು ಎಷ್ಟೊಂದು ಹಾತೊರೆದಿದ್ದಳು.

-೨-
ನನಗೀಗ ಗೊತ್ತಿದೆ, ಪುನರ್ಜನ್ಮವಿಲ್ಲ
ಕೊನೆಯ ತೀರ್ಪಿನ ದಿನವೂ ಇಲ್ಲ
ಸ್ವರ್ಗ, ಹಕ್ಕಿ ಮಾಂಸದ ಊಟ, ವೈನು, ಗುಲಾಬಿ ಕನ್ಯೆಯರು
ಇವೆಲ್ಲ ಧರ್ಮಗುರುಗಳು ಹೆಣೆದ ಭ್ರಮೆಯ ಜಾಲ
ನನ್ನಮ್ಮ ಸ್ವರ್ಗಕ್ಕೆ ಹೋಗುವುದಿಲ್ಲ
ಯಾವ ಉದ್ಯಾನದಲ್ಲೂ ಯಾರ ಜತೆಗೂ ನಡೆಯುವುದಿಲ್ಲ
ಕೆಟ್ಟ ನರಿಗಳು ಅವಳ ಗೋರಿಯ ಹೊಕ್ಕು, ಮಾಂಸ ಮುಕ್ಕುವವು
ಅವಳ ಬಿಳಿ ಎಲುಬುಗಳು ಗಾಳಿಗೆ ಚದುರಿ ಹರಡುವವು

ಆದರೂ, ಸ್ವರ್ಗವೊಂದಿದೆಯೆಂದು ನಾನು ನಂಬುವೆ
ಏಳು ಆಕಾಶಗಳ ಮೇಲೆ ಒಂದು ಅತಿಭವ್ಯ ಸ್ವರ್ಗ
ಕಷ್ಟಕರ ಸೇತುವೆ ಪಲ್ಸಿರತ್ತನ್ನು ನಿರಾಯಾಸ ದಾಟಿ ನನ್ನಮ್ಮ ಅಲ್ಲಿಗೆ ತಲುಪಿರುವಳು
ಸುಂದರಾಂಗ ಪ್ರವಾದಿ ಮುಹಮ್ಮದ್ ಆಕೆಯ ಸ್ವಾಗತಿಸುವನು
ತನ್ನ ಪೊದೆಗೂದಲ ಎದೆಯ ಮೇಲೆ ಕರಗುವಂತೆ ಆಕೆಯ ತಬ್ಬುವನು
ಕಾರಂಜಿಯಲ್ಲಿ ಮೀಯಲು, ನರ್ತಿಸಲು, ಉಲ್ಲಾಸದಿಂದ ಜಿಗಿಯಬಯಸುವಳು
ಚಿನ್ನದ ತಪ್ಪಲೆಯಲ್ಲಿ ಹಕ್ಕಿ ಮಾಂಸ ತರಿಸಿ
ಎದೆ ಉಕ್ಕಿ ಬಿರಿಯುವಂತೆ ಸೇವಿಸುವಳು
ಆಕೆಯ ನೋಡಲು ಸ್ವತಃ ಅಲ್ಲಾಹು ಉದ್ಯಾನಕ್ಕೆ ಬರುವನು
ಅವಳ ತಲೆಗೆ ಕೆಂಪು ಹೂವು ಮುಡಿಸಿ ವ್ಯಾಮೋಹದಿಂದ ಚುಂಬಿಸುವನು
ಹಕ್ಕಿಗರಿಗಳ ಹಾಸಿಗೆಯ ಮೇಲೆ ಆಕೆ ಮೃದುವಾಗಿ ಪವಡಿಸುವಳು
ಏಳುನೂರು ಹುರ್ ಕನ್ನೆಯರು ಆಕೆಗೆ ಗಾಳಿ ತೀಡುವರು
ನವಯವ್ವನದ ಗೆಲ್ಬನ್ ದೇವತೆಗಳು ಬೆಳ್ಳಿ ತಟ್ಟೆಯಲ್ಲಿ ತಣ್ಣಗಿನ ನೀರು ಕೊಡುವರು
ಸಂತೋಷದ ಉಬ್ಬರದಲ್ಲಿ ಮೈ ಕುಲುಕುವಂತೆ ಆಕೆ ನಗುವಳು
ನೆಲದ ಮೇಲೆ ಕಳೆದ ಸಂಕಟದ ದಿನಗಳನು ಆಕೆ ಮರೆತೇ ಬಿಡುವಳು

ನಾನು ನಾಸ್ತಿಕಳು ನಿಜ
ಆದರೆ ಅಲ್ಲೆಲ್ಲೋ ಒಂದು ಸ್ವರ್ಗವಿದೆಯೆಂದು
ನಂಬುವುದು ಎಂಥ ಸುಖ.

Friday, July 11, 2008

ದಿನೇಶ ಕಂಡ ಹಣದುಬ್ಬರ


ನಾವೆಲ್ಲಾ ಊರು ಬಿಟ್ಟೆವು. ತುತ್ತು ಕೂಳಿಗಾಗಿ, ಹಣಕ್ಕಾಗಿ, ಸೂರಿಗಾಗಿ. ನನ್ನ ಗೆಳೆಯ ದಿನೇಶ್ ಕುಕ್ಕುಜಡ್ಕ ಮಾತ್ರ ಬಿಡಲಿಲ್ಲ.
ನಾನು ಬಿಟ್ಟುಬಂದ ಬಂಟಮಲೆಯ ತಪ್ಪಲಿನ ಕುಕ್ಕುಜಡ್ಕ ಎಂಬ ಪುಟ್ಟ ಊರಿನಲ್ಲೇ ಉಳಿದು, ಜಗತ್ತಿನ ಅತ್ಯುತ್ತಮ ಸಾಹಿತಿಗಳನ್ನೂ ಅತಿಶ್ರೇಷ್ಠ ಚಿತ್ರಕಾರರನ್ನೂ ಅದು ಹೇಗೋ ಮುಖಾಮುಖಿಯಾಗುತ್ತ, ಸಮಕಾಲೀನ ವಿದ್ಯಮಾನಗಳಿಗೆ ತೀಕ್ಷ್ಣ ಪ್ರತಿಕ್ರಿಯೆಗಳನ್ನು ತನ್ನ ವ್ಯಂಗ್ಯಚಿತ್ರಗಳ ಮೂಲಕ ನೀಡುತ್ತ ಬರುತ್ತಿದ್ದಾನೆ. ಆತ ಈಗ ಕೊಡಗಿನ ‘ಶಕ್ತಿ’ ಪತ್ರಿಕೆಯ ವ್ಯಂಗ್ಯಚಿತ್ರ ಕಲಾವಿದ.
ನನ್ನ ಭವಿಷ್ಯ ನನ್ನ ಗೆರೆಗಳಲ್ಲಿಯೇ ಇದೆ ಎಂದು ನಂಬಿರುವ ದಿನೇಶ, ಊರಿನ ಭ್ರಷ್ಟರನ್ನು ಎದುರು ಹಾಕಿಕೊಳ್ಳಲೂ ಅಂಜಿದವನಲ್ಲ. ಆತ ಮೊನ್ನೆ ಮೊನ್ನೆ ಬರೆದ ಈ ಕಾರ್ಟೂನನ್ನು ನೋಡಿದಾಗ ಅದರ ಹಿಂದಿನ ಕರಾಳ ವ್ಯಂಗ್ಯ ಕಂಡು ಮೈ ಜುಮ್ಮೆಂದಿತು.
ನೀವೂ ನೋಡಿದರೆ ಚೆನ್ನಾಗಿರ್‍ತುತದೆಂದು ಬ್ಲಾಗಿಸಿದ್ದೇನೆ.

Friday, July 4, 2008

ತಸ್ಲಿಮಾಳ ಒಂದು ಕೆಂಡದಂಥ ಕವಿತೆ

ಮೂಲಭೂತವಾದಿಗಳ ಪ್ರತಿರೋಧವನ್ನೂ, ಗಂಡಸರ ಅಸಹನೆಯನ್ನೂ ಬೆನ್ನಿಗಿಟ್ಟುಕೊಂಡು ತಸ್ಲಿಮಾ ನಸ್ರೀನ್ ಎಂಬ ಹುಡುಗಿ ದೇಶದಿಂದ ದೇಶಕ್ಕೆ ಅಲೆಯುತ್ತಲೇ ಇದ್ದಾಳೆ. ಬೆನ್ನಟ್ಟುತ್ತಿರುವ ಬೇಟೆ ನಾಯಿಗಳ ಕಾರಣ ಆಕೆಯ ಧೈರ್‍ಯವೂ ಕೊಂಚ ಉಡುಗಿದಂತಿದೆ. ಆದರೆ ಅಷ್ಟು ಸುಲಭಕ್ಕೆಲ್ಲಾ ತನ್ನೊಳಗಿನ ಬೆಂಕಿಯನ್ನು ಆರಲು ಬಿಡದ ತಸ್ಲಿಮಾ ಆತ್ಮಚರಿತ್ರೆ ಬರೆದು ಬಾಂಗ್ಲಾದ ಮುಸ್ಲಿಮರನ್ನು ಇನ್ನಷ್ಟು ಚಚ್ಚಲು ಹವಣಿಸುತ್ತಿದ್ದಾಳೆ. ಈಕೆಯ ಧೈರ್‍ಯಕ್ಕೆ ಒಂದು ನಮಸ್ಕಾರ ಸಲ್ಲಿಸುತ್ತ, ಈಕೆ ಬರೆದ ಒಂದು ಪುಟ್ಟ ಪದ್ಯವನ್ನು ಅನುವಾದಿಸಿ ಕೊಟ್ಟಿದ್ದೇನೆ. ಇದು ಆಕೆಯ ಒಳ್ಳೆಯ ಪದ್ಯವಲ್ಲ, ಪ್ರಾತಿನಿಕವೂ ಅಲ್ಲ. ಆದರೆ, ಆಕೆ ಗಂಡಸರಿಂದ ಪದೇ ಪದೇ ಏಟು ತಿನ್ನಲು ಏನು ಕಾರಣ ಎಂಬುದು ಈ ಪದ್ಯದಿಂದ ಸ್ವಲ್ಪ ಮಟ್ಟಿಗೆ ಗೊತ್ತಾಗುವಂತಿದೆ !

ಹಸ್ತಮೈಥುನ
(ಗಂಡಿಲ್ಲದ ಹೆಣ್ಣು ಸೈಕಲಿಲ್ಲದ ಮೀನು !)

ಗಂಡಿಲ್ಲದೆ ಹೆಣ್ಣು ಉಳಿಯಲಾರಳೆ ?
ಹ್ಹ , ಎಂಥ ತರ್ಕ, ಭೂತದ ಮಾತು !
ಎಸೆದುಬಿಡು ಚೆಂಡು
ಆರ್ಕಿಡ್‌ಗಳು ನಿನ್ನ ತಬ್ಬಲು ಎಂದಿಗೂ ಬಿಡದಿರು
ವಿಷ ತುಂಬಿದ ಇರುವೆಗಳೆಡೆ ಹೋಗದಿರು
ಮೈಮನದಲ್ಲಿ ಉದ್ರೇಕ ತುಂಬಿಕೋ
ನಿನ್ನಲ್ಲಿ ಬಿಲ್ಲಿದೆ, ಬಾಣವೂ ಇದೆ
ಬಾ ಹುಡುಗಿ, ಹಸ್ತಮೈಥುನ ಮಾಡಿಕೊ !

Monday, June 30, 2008

ಬಾಸ್

ತಲವಾರು, ಲಾಠಿಗಳ ಮೇಲಿದ್ದ ರಕ್ತದ ಕಲೆಗಳನ್ನು ತೊಳೆದುಕೊಳ್ಳುತ್ತ ಅವರು ಮಾತಾಡುತ್ತಿದ್ದರು :
"ನಮ್ಮ ಕೆಲಸ ಸುಲಭವಾದದ್ದು ಟೆಲಿಕಾಂ ಅಕಾರಿಯಿಂದಾಗಿ. ಅವರು ಆ ಕೇರಿಯ ಅಷ್ಟೂ ಫೋನ್ ಸಂಪರ್ಕಗಳಿಗೆ ಕನೆಕ್ಷನ್ ತಪ್ಪಿಸಿದ್ದರು"
"ಆದರೆ ವಿದ್ಯುತ್ ಇಲಾಖೆಯ ಸಚಿವರು ನೆರವಾಗದಿದ್ದರೆ ಇದೆಲ್ಲಾ ನಡೆಯುತ್ತಿರಲಿಲ್ಲ. ಅವರು ನೋಡಿ, ನಮ್ಮ ಕೆಲಸ ಮುಗಿಯುವವರೆಗೂ ಇಡೀ ಗಲ್ಲಿಗೆ ಕರೆಂಟ್ ಬಾರದಂತೆ ನೋಡಿಕೊಂಡರು"
"ಊಹೂಂ, ಇದೆಲ್ಲಾ ಗೃಹ ಸಚಿವರ ಕೃಪೆ. ನಾವು ಎಲ್ಲಾ ಮುಗಿಸಿ ಬಂದರೂ ಇನ್ನೂ ಅಲ್ಲಿಗೆ ಪೊಲೀಸರು ಕಾಲಿಟ್ಟಿಲ್ಲ ನೋಡಿ"
"ಮೂರ್ಖರೇ" ತಂಡದ ಮುಖಂಡ ಗದರಿಸಿದ ; "ನಿಮಗೆಲ್ಲ ಇನ್ನೂ ಅರ್ಥವಾಗಿಲ್ಲ. ಅವರೆಲ್ಲಾ ನಮ್ಮ ಬಾಸ್‌ನ ಮಾತನ್ನು ಪಾಲಿಸಿದರು ಅಷ್ಟೇ !"
"ಯಾರವರು ?"
"ನಮ್ಮ ಮುಖ್ಯಮಂತ್ರಿಗಳು"

Saturday, June 7, 2008

ಪಾಪ

... ಆಮೇಲೆ
ನಾನು ಅವಳನ್ನು ಬಿಗಿಹಿಡಿದು ಕೂಡಿದೆ
ಅವಳು ಅತ್ತರೂ ಬಿಡದೆ.

ಉರಿವ ನನ್ನ ಪಾಪದ ನಿರಂತರ ಸುಪರ್ದಿಗೆ
ನನ್ನ ಬಿಟ್ಟು ಅವಳು ತೆರಳಿದಾಗ
ನಾನು ಅನಾಥನಂತೆ ನಿಂತು ನೋಡಿದೆ

ಅವಳ ಬಿಕ್ಕುವಿಕೆಗೆ ಕೊನೆ ಎಲ್ಲೋ ಇದ್ದಿರಬಹುದು
ನನ್ನೊಳಗಿನ ದಹನಕ್ಕೆ ಅಂತ್ಯವೇ ಇರಲಿಲ್ಲ

ಆ ಘಳಿಗೆಯ ಅವಳ ಉರಿವ ದೃಷ್ಟಿಗಳಿಂದ
ಕೆದರಿದ ಕೂದಲ ಜ್ವಾಲೆಗಳಿಂದ
ಮುಕ್ತನಾಗುವ ತಡಕಾಟದಲ್ಲಿ
ನಾಶವಾದವು ನನ್ನ ನಾಳೆಗಳು

ಇದೀಗ ನನ್ನ ಮೇಲೆ ನಡೆದಿರುವ
ಅಂಥ ನಿನ್ನೆಗಳ ಕರಾಳ ಕೈಗಳ
ಅಮಾನುಷ ಹಲ್ಲೆಯ ಹೇಗೆ ವಿವರಿಸಲಿ ?

Sunday, May 11, 2008

ಮತದಾನ ಪ್ರಸಂಗ

ಅರ್ಜಿಯಲ್ಲಿ ನನ್ನ ಹೆಸರನ್ನು ಸರಿಯಾಗಿಯೇ ಬರೆದು ಕೊಟ್ಟಿದ್ದೆ ; ಇತರ ವಿವರಗಳನ್ನೂ ಸ್ಪಷ್ಟವಾಗಿ ಕಾಣುವಂತೆ ನಮೂದಿಸಿದ್ದೆ. ಆದರೆ ಮತದಾರರ ಪಟ್ಟಿ ತಯಾರಿಸುವ ಅಕಾರಿಗಳು ನನ್ನ ಹೆಸರನ್ನು ‘ಹರೀಶ್ ಕೀರೆ’ ಅಂತ ಬರೆದು ಅಧ್ವಾನ ಮಾಡಿಬಿಟ್ಟಿದ್ದರು. ಪಕ್ಷವೊಂದರ ಕಾರ್‍ಯಕರ್ತರು ಮನೆಗೆ ಬಂದು ಹೆಸರಿದ್ದ ಚೀಟಿ ಕೊಟ್ಟಾಗಲೇ ನನಗೆ ಮೈ ಉರಿದು ಹೋಗಿತ್ತು. ತಿದ್ದುಪಡಿಗೆ ನೀಡಲು ಸಮಯವಿರಲಿಲ್ಲ ; ಅದನ್ನೇ ಹಿಡಿದುಕೊಂಡು ಮತಗಟ್ಟೆಗೆ ಹೋದೆ.

ಜನರೇ ಇರಲಿಲ್ಲ. ಒಂದು ಕ್ಷಣ ಇಲ್ಲಿ ಮತದಾನ ನಡೆಯುತ್ತಿದೆಯೇ ಇಲ್ಲವೇ ಅಂತ ಅನುಮಾನ ಬಂತು. ಶಾಲೆಯ ಹೊರಗಿದ್ದ ಪೊಲೀಸರನ್ನೂ ಒಳಗೆ ನಾನಾ ಚಟುವಟಿಕೆಗಳನ್ನೂ ಕಂಡು ಅನುಮಾನ ಪರಿಹಾರವಾಯಿತು. ಒಳಗೆ ನುಗ್ಗಿ ಅಕಾರಿಗೆ ಚೀಟಿ ತೋರಿಸಿದೆ. ಆತ ನನ್ನ ಮುಖ ಕೂಡ ನೋಡದೆ, ಮತದಾರರ ಪಟ್ಟಿ ನೋಡುತ್ತ ಏನನ್ನೋ ಗಾಢವಾಗಿ ಹುಡುಕಿದ. ಬಳಿಕ ‘ಹರೀಶ್ ಕೀರೆ’ ಅಂತ ಘೋಷಿಸಿ, ಈತ ಯಾರೋ ದಕ್ಷಿಣ ಆಫ್ರಿಕಾದ ಪ್ರಜೆಯೇ ಇರಬೇಕು ಎಂಬ ಗುಮಾನಿಯಿಂದ ತಲೆ ಎತ್ತಿ ನೋಡಿದ.

ನಾನು ಪೆಚ್ಚು ನಗು ನಕ್ಕು ‘ಹರೀಶ್ ಕೇರ’ ಅಂದೆ.

‘ಹರೀಶ್ ಕೀರೆ’ ಅಂತ ಒತ್ತಿ ಹೇಳುತ್ತ ಆತ ಅನುಮಾನದಿಂದ ನನ್ನನ್ನೇ ನೋಡಿದ.

‘ಕೀರೆ ಅಲ್ಲ ಕೇರ’

‘ಮತ್ತೆ ಇಲ್ಲಿ ಕೀರೆ ಅಂತಿದೆ’

‘ಇರುತ್ತೆ, ಕನ್ನಡ ಸರಿಯಾಗಿ ಗೊತ್ತಿಲ್ಲದೋರು ಲಿಸ್ಟ್ ಮಾಡಿದರೆ ಹಾಗೇ ಇರುತ್ತೆ’ ಇಷ್ಟು ಹೊತ್ತಿಗೆ ನನ್ನ ಸಹನೆ ಮುಗಿದಿತ್ತು.

‘ನಿಮ್ಮ ಐಡಿ ಕಾರ್ಡ್ ತೋರಿಸಿ’ ಆತ ಕೇಳುವ ಮೊದಲೇ ಡ್ರೈವಿಂಗ್ ಲೈಸೆನ್ಸ್ ತೆಗೆದು ಕೊಟ್ಟೆ . ಆತ ಫೋಟೋ ತಾಳೆ ಹಾಕಿ ಓಕೆ ಅಂದ. ಅವನ ಪಕ್ಕ ಕೂತಿದ್ದ ಹೆಂಗಸು ನನ್ನ ಎಡ ತೋರು ಬೆರಳಿಗೆ ನಾಮ ಹಾಕಿದಳು. ಅದು ಚುನಾವಣಾ ಆಯುಕ್ತ ಗೋಪಾಲಸ್ವಾಮಿ ನಾಮದಂತೆಯೇ ಉದ್ದಕ್ಕಿತ್ತು.

ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನ ಮುಂದೆ ನಿಂತೆ. ಹೆಸರುಗಳು ಒಂದೊಂದಾಗಿ ಕಂಡವು- ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಚ್.ಎಂ.ರೇವಣ್ಣ, ಲೋಕೇಶ್ ಗೌಡ, ಮಲ್ಲಿಕಾರ್ಜುನ ಬೊಮ್ಮಾಯಿ...

ಒಬ್ಬ ಭೂಗಳ್ಳ. ಬೆಂಗಳೂರು ಸುತ್ತಮುತ್ತಲಿನ ಭೂಮಿಯನ್ನು ಹರಿದು ಹಂಚಿ ಸ್ವಲಾಭಕ್ಕೂ ಜಾತಿವಸ್ತರಿಗೂ ಪಕ್ಷದವರಿಗೂ ನೀಡಿ ಕೋಟಿಗಟ್ಟಲೆ ಕೊಳ್ಳೆಹೊಡೆದವನು. ಇನ್ನೊಬ್ಬ ಅವನಿಗಿಂತ ಕಡಿಮೆಯಿಲ್ಲದ ಅತ್ಯಾಚಾರಿ. ಮತ್ತೊಬ್ಬ ಪುಡಿ ರೌಡಿಗಳನ್ನು ಇಟ್ಟುಕೊಂಡು ಪ್ರದೇಶದಲ್ಲಿ ದಾಂಧಲೆ ಎಬ್ಬಿಸುವವನು. ಮಗದೊಬ್ಬ ನರಸತ್ತವನು...

ಮಹಾ ಭ್ರಷ್ಟರು, ನೀಚರು, ದಗಲ್ಬಾಜಿಗಳು ತುಂಬಿಹೋಗಿರುವ ಆ ಪಟ್ಟಿಯಿಂದ ಒಂದೇ ಒಂದು ಸಭ್ಯ, ದೂರದರ್ಶಿತ್ವ ಉಳ್ಳ ನಾಯಕನನ್ನು ಹೆಕ್ಕಿ ತೆಗೆಯುವುದು ನನಗೆ ಅಸಾಧ್ಯವೆನ್ನಿಸತೊಡಗಿತು. ದಗಾಕೋರರಿಂದ ತುಂಬಿಹೋಗಿರುವ ಈ ದೇಶಕ್ಕೆ ಭವಿಷ್ಯವೇ ಇಲ್ಲ ಅಂತ ತೀವ್ರವಾಗಿ ಅನ್ನಿಸಿತು. ಹಿಂದೆ ಬೋ ಮರದ ಕೆಳಗೆ ನಿಂತ ಸಿದ್ಧಾರ್ಥನಿಗೆ ಆಗಿತ್ತಲ್ಲ ; ಅಂಥದೇ ಒಂದು ಮಹತ್ ದರ್ಶನ ಈ ಯಃಕಶ್ಚಿತ್ ಯಂತ್ರದ ಮುಂದೆ ನಿಂತುಕೊಂಡು ನನಗೆ ಆಗತೊಡಗಿತ್ತು. ಈ ನಾಲಾಯಕ್ ಮಂದಿಯಲ್ಲಿ ಯಾರಿಗೆ ಮತ ಹಾಕಲಿ ? ನಾನು ಮತ ಹಾಕಿದ ವ್ಯಕ್ತಿ ಒಂದೇ ಒಂದು ಮತದ ಅಂತರದಿಂದ ಆರಿಸಿ ಬಂದರೂ ನನ್ನನ್ನು ಜೀವನಪರ್‍ಯಂತ ಪಾಪಪ್ರಜ್ಞೆ ಕಾಡಬಹುದು ಅನ್ನಿಸಿ ಕಣ್ಣು ಸುತ್ತಿ ಬಂತು.

ನಾನು ಯಂತ್ರದ ಮುಂದೆ ನಿಂತು ಧ್ಯಾನಮಗ್ನನಾದುದನ್ನು ಕಂಡು ಅಲ್ಲಿ ಕುಳಿತಿದ್ದ ಅಕಾರಿ ಎದ್ದು ‘ಎನಿ ಪ್ರಾಬ್ಲಮ್ ?’ ಎನ್ನುತ್ತ ನನ್ನ ಕಡೆಗೆ ಬರತೊಡಗಿದ. ನಾನು ಎಚ್ಚೆತ್ತುಕೊಂಡು, ‘ಏನೂ ಪ್ರಾಬ್ಲಮ್ ಇಲ್ಲ ಕಣ್ರೀ, ಈ ಕಳ್ಳ ನನ್ ಮಕ್ಕಳಲ್ಲಿ ಯಾರಿಗೆ ಹಾಕೋದು ಗೊತ್ತಾಗ್ತಾಯಿಲ್ಲ’ ಅಂದೆ.

ನನ್ನ ಪ್ರಶ್ನೆಗೆ ಆತ ಕಕ್ಕಾಬಿಕ್ಕಿಯಾದ. ರೂಮಿನೊಳಗೆ ಸಣ್ಣ ನಗೆಯ ಅಲೆಗಳು ಎದ್ದವು. ಕಣ್ಣು ಮುಚ್ಚಿ ಒಂದು ನೀಲಿ ಬಟನ್ ಒತ್ತಿ ಈಚೆ ಬಂದೆ.

ಹೊರಗೆ ‘ನನ್ನ ಹೆಸರು ಪಟ್ಟಿಯಿಂದ ಕಿತ್ತು ಹಾಕಿದ್ದಾರೆ’ ಎಂದು ಒಬ್ಬ ಗಲಾಟೆ ಮಾಡತೊಡಗಿದ್ದ. ಈಗ ತಾನೇ ವ್ಯಾನಿನಿಂದ ಇಳಿದ ಚಾನೆಲ್ ಒಂದರ ಹುಡುಗಿ ಮೈಕ್ ಹಿಡಿದುಕೊಂಡು ಅವನ ಕಡೆ ಧಾವಿಸುತ್ತಿದ್ದಳು.

ಚುನಾವಣೆ ರಾಜಕೀಯದ ಬಗ್ಗೆ ಆಳವಾಗಿ ಚಿಂತಿಸುವ ಪ್ರಗತಿಪರರ ಕಳವಳಗಳು, ರಜೆ ಇದ್ದರೂ ಮತ ಹಾಕಲು ಹೋಗದ ವಿದ್ಯಾವಂತರ ಸಂಕಟಗಳು ಕೊಂಚ ಕೊಂಚವಾಗಿ ಅರ್ಥವಾಗತೊಡಗಿದ್ದವು.

Thursday, May 8, 2008

ಮೌಲ್ಯ

"ಸಾರ್, ನನಗೆ ರಕ್ಷಣೆ ನೀಡಿ"
"ಏನಾಯಿತು, ಯಾರು ನೀನು ?"
"ನಾನು ಬೀದಿಯಲ್ಲಿ ಬರುತ್ತಿದ್ದಾಗ ಹಲವಾರು ಮಂದಿ ತಲವಾರು ಝಳಪಿಸುತ್ತ ನನ್ನ ಬೆನ್ನು ಹತ್ತ್ತಿದರು. ಅವರಿಂದ ಪಾರಾಗಲು ಗಲ್ಲಿ ಬಿದ್ದು ಇಲ್ಲಿಗೆ ಬಂದೆ"
"ನಿನ್ನ ಹೆಸರೇನು ?"
"......"
"ಹೆದರಬೇಡ. ಶರಣಾಗತರಿಗೆ ರಕ್ಷಣೆ ನೀಡಬೇಕೆಂದು ನಮ್ಮ ಧರ್ಮದಲ್ಲಿದೆ. ಬಾ ಇಲ್ಲಿ ಅವಿತುಕೋ"
ಸ್ವಲ್ಪವೇ ಹೊತ್ತಿನಲ್ಲಿ ಕ್ರೋಧದಿಂದ ಉನ್ಮತ್ತವಾಗಿದ್ದ ಒಂದು ಗುಂಪು ಅಲ್ಲಿಗೆ ಬಂತು.
"ಇತ್ತ ಕಡೆ ಓಡಿ ಬಂದ ಆ ನೀಚ ಎಲ್ಲಿ ಹೋದ ?"
"ಸುಳ್ಳು ಹೇಳಬಾರದೆಂದು ನಮ್ಮ ಧರ್ಮದಲ್ಲಿ ಹೇಳಿದೆ. ಇದೋ ಇಲ್ಲಿ ಅವಿತಿದ್ದಾನೆ ನೋಡಿರಿ"