Thursday, April 15, 2010

ಒಂದು ಒಳ್ಳೆ ಕಾರ್ಟೂನು



ಮಿತ್ರ ದಿನೇಶ್ ಕುಕ್ಕುಜಡ್ಕ ತುಂಬ ಒಳ್ಳೆಯ ವ್ಯಂಗ್ಯಚಿತ್ರವೊಂದನ್ನು ಬರೆದು ಕಳುಹಿಸಿದ್ದಾನೆ. ಇದಕ್ಕೆ
‘ಗಡಿ ದಾಟಿದ ಪ್ರೀತಿಯ ಕುಡಿ,
ಅದನ್ನೂ ಬಿಡದ ದ್ವೇಷದ ಕಿಡಿ’

ಎಂದೆಲ್ಲ ಹೆಡ್ಡಿಂಗ್ ಕೊಟ್ಟು ನಿಮ್ಮ ತಲೆ ತಿನ್ನಲು ಮನಸ್ಸಾಗುತ್ತಿದೆ. ಅದೆಲ್ಲ ಬೇಡ, ಚಿತ್ರ ಚೆನ್ನಾಗಿದೆ. ನಿಮ್ಮ ಅವಗಾಹನೆಗೆ:

Friday, April 9, 2010

ತಂಪಾಗೋಣ ಬನ್ನಿ







ನನ್ನ ಆತ್ಮೀಯ ಮಿತ್ರ, ಹಿರಿಯ ಸಹೋದ್ಯೋಗಿ ರಾಧಾಕೃಷ್ಣ ಭಡ್ತಿ ಅವರ ಐದು ಪುಸ್ತಕಗಳು ಭಾನುವಾರ ಬಿಡುಗಡೆಯಾಗುತ್ತಿವೆ. ನೀರಿನ ಕುರಿತು ಐದಾರು ವರ್ಷಗಳಿಂದ ಬರೆಯುತ್ತ ಬಂದ ಅಂಕಣ ಬರಹಗಳಿವು. ಅವರು ಬಹುಶಃ ನೀರಿನ ಕುರಿತು ಯೋಚಿಸಿದಷ್ಟು ಬೀರಿನ ಕುರಿತು ಯೋಚಿಸಿರಲಿಕ್ಕಿಲ್ಲ. ಈ ಸುಡು ಬೇಸಿಗೆಯಲ್ಲಿ ನೀರಿನ ಬಗ್ಗೆ ಮಾತನಾಡುವುದು, ಕೇಳುವುದು ತಂಪು ತಂಪು.
ಹಾಗೇ ಗೆಳೆಯ ಅಪಾರ ರಚಿಸಿದ ಸೊಗಸಾದ ಮುಖಪುಟಗಳನ್ನು ನೋಡುವುದು ಕೂಡ.
ಗಾಯನ ಸಮಾಜದ ಎದುರಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಬೆಳಗ್ಗೆ ೧೧ ಗಂಟೆಗೆ ಸಮಾರಂಭ. ನೀರೆಚ್ಚರದ ಪುಸ್ತಕಗಳು, ನೀರು, ಹಸಿರು ಪತ್ರಕರ್ತರಾದ ಶ್ರೀಪಡ್ರೆ, ನಾಗೇಶ್ ಹೆಗಡೆ ಮುಂತಾದವರ ಉಪಸ್ಥಿತಿ. ಎಲ್ಲ ನೀರುಮಯ.
ವಿ.ಸೂ.: ಬೆಳಗ್ಗೆ ತಿಂಡಿಯಿದೆ. ಆದ್ರೆ ನೀರು ದೋಸೆ, ವಾಟರ್ ಮೆಲನ್ ಜ್ಯೂಸ್ ಸಿಗುತ್ತದೆ ಅಂದ್ಕೋಬೇಡಿ ಮತ್ತೆ !

Wednesday, February 3, 2010

ಹಿಂತಿರುಗಿ ನೋಡಿದರೆ ಯಾರೂ ಇರಲಿಲ್ಲ...



ಭಾನುವಾರ ನಾಗೇಶ್ ಹೆಗಡೆ ಅವರ ಆರು ಪುಸ್ತಕಗಳ ಬಿಡುಗಡೆಯಾಯ್ತು. ಅಂದು ಕೆ.ವಿ.ಅಕ್ಷರ ಮಾತನಾಡಿದ್ದನ್ನು, ಅದು ತುಂಬ ಮುಖ್ಯ ಅನಿಸಿದ್ದರಿಂದ, ನನಗೆ ನಾನೇ ಇನ್ನಷ್ಟು ಮನನ ಮಾಡಿಕೊಳ್ಳುವುದಕ್ಕಾಗಿ ಸಂಗ್ರಹಿಸಿ ಇಲ್ಲಿ ದಾಖಲಿಸಿದ್ದೇನೆ.

*
ನಾಗೇಶ್ ಹೆಗಡೆ ಕನ್ನಡದ ಮುಖ್ಯ ಪತ್ರಕರ್ತರಲ್ಲೊಬ್ಬರು. ಆಕ್ಟಿವಿಸಂ ಗುಣ ಹೊಂದಿದ್ದ ಕನ್ನಡದ ಶ್ರೇಷ್ಠ ಪತ್ರಕರ್ತರು ಕೂಡ. ರಾಜ್ಯದ, ದೇಶದ ಸದ್ಯದ ತುರ್ತನ್ನು ಗ್ರಹಿಸಿಕೊಂಡು ಅವರು ಬರೀತಾರೆ ಮಾತ್ರವಲ್ಲ, ಅಗತ್ಯ ಬಿದ್ದರೆ ಕಣಕ್ಕೆ ಇಳೀತಾರೆ ಕೂಡ. ಅವರಿಗೆ ಹೋಲಿಸಬಹುದಾದರೆ, ನಮ್ಮ ದೇಶದಲ್ಲಿ ಕಾಣಿಸೋ ಇನ್ನೊಬ್ಬ ಪತ್ರಕರ್ತ ಅಂದ್ರೆ ಪಿ.ಸಾಯಿನಾಥ್ ಮಾತ್ರ.

ಪರಿಸರದ ಬಗ್ಗೆ ಹೆಗಡೆಯವರ ಬದ್ಧತೆ ಪ್ರಶ್ನಾತೀತವಾದದ್ದು. ಒಂದು ಸನ್ನಿವೇಶ ನೆನಪಾಗ್ತಿದೆ. ಶಿವರಾಮ ಕಾರಂತರು ಉತ್ತರ ಕನ್ನಡದಿಂದ ಚುನಾವಣೆಗೆ ನಿಂತಿದ್ದರು. ನಿಂತ ಮೇಲೆ ತಮ್ಮ ಪಾಡಿಗೆ ಅಮೆರಿಕಕ್ಕೆ ಹೋಗಿದ್ದರು. ಆದರೆ ನಮಗೊಂದು ಇತ್ತಲ್ಲ, ಶಿವರಾಮ ಕಾರಂತರು ಸೋಲಬಾರದು ಅಂತ. ಹೀಗಾಗಿ ಪ್ರಚಾರಕ್ಕೆ ಮುಂದಾಗಿದ್ವಿ. ನಾಗೇಶ ಹೆಗಡೆಯವರು ಒಂದು ಪುಟ್ಟ ರೂಮು ಬಾಡಿಗೆಗೆ ಹಿಡಿದು ಕುರ್ಚಿ ಹಾಕಿಕೊಂಡು ಕುಳಿತಿದ್ದರು. ಅವರೇ ಶಿವರಾಮ ಕಾರಂತರ ಚೀಫ್ ಎಲೆಕ್ಷನ್ ಆಫೀಸರ್ ! ಆ ಹಳ್ಳಿ, ಈ ಹಳ್ಳಿ ಅಂತ ನಮ್ಮನ್ನು ಪ್ರಚಾರ ಭಾಷಣಕ್ಕೆ ಕಳಿಸ್ತಿದ್ದರು.

ಭಾಷಣ ಕೇಳಿಸಿಕೊಳ್ಲಿಕ್ಕೆ ಎರಡು ಜನ ಸಹ ಬರ್ತಿರಲಿಲ್ಲ. ಹಳ್ಳಿ ಜನರಿಗೆ ಕಾರಂತರ ಹೆಸರು ಕೇಳಿ ಸಹ ಗೊತ್ತಿರಲಿಲ್ಲ. ಒಂದು ಹಳ್ಳೀಲಿ ಹೋಟೆಲ್ ಇಟ್ಟಿದ್ದ ಇನ್ನೊಬ್ಬ ಕಾರಂತರಿದ್ದರು. ಜನ ಅವರನ್ನು ಇವರೆಂದು ಕನ್‌ಫ್ಯೂಸ್ ಮಾಡಿಕೊಂಡು ‘ಆ ಕಾರಂತ್ರಿಗೆ ವೋಟ್ ಹಾಕಿದ್ರೆ ನಮಗೇನು ತಿಂಡಿ ಪುಗಸಟ್ಟೆ ಕೊಡ್ತಾರಾ ?’ ಎಂದು ಕೇಳಿದ್ದುಂಟು. ಕಾರಂತರು ಸೋಲೋದು ನಮಗೆ ಆಗ್ಲೇ ಖಚಿತವಾಗಿತ್ತು.
ಒಮ್ಮೆ ನಾಗೇಶ್ ಹೆಗಡೆ ನಮ್ಮಲ್ಲಿಗೆ ಉಪನ್ಯಾಸ ನೀಡೋದಕ್ಕೆ ಬಂದಿದ್ರು. ಪರಿಸರ, ಬೃಹತ್ ಯೋಜನೆಗಳ ಬಗ್ಗೆ ಮಾತಾಡಿದರು. ಆಗ ಅವರು ಹೇಳಿದ ಮಾತು ನಂಗೆ ಈಗ್ಲೂ ಜ್ಞಾಪಕದಲ್ಲಿದೆ. “ಕೈಗಾ ಮುಂತಾದ ಬೃಹತ್, ಪರಿಸರ ಹಾನಿಕಾರಕ ಯೋಜನೆಗಳು ಉತ್ತರ ಕನ್ನಡಕ್ಕೆ ಬಂದಾಗ ನಾವೆಲ್ಲ ಅದನ್ನು ವಿರೋಸಿ ಹೋರಾಟ ಆರಂಭಿಸಿದೆವು. ಪ್ರತಿಭಟನೆ ಶುರು ಹಚ್ಚಿಕೊಂಡೆವು. ಆರಂಭದಲ್ಲಿ ಪ್ರತಿಭಟನೆಗೆ ಒಳ್ಳೆಯ ಬೆಂಬಲವೂ ವ್ಯಕ್ತವಾಯ್ತು. ಹಾಗೇ ಮುಂದುವರಿದೆವು. ಹೋಗ್ತಾ ಹೋಗ್ತಾ ಒಂದು ಹಂತದಲ್ಲಿ ನಿಂತು ಹಿಂದೆ ತಿರುಗಿ ನೋಡ್ತೇವೆ- ನಮ್ಮ ಹಿಂದಿದ್ದೋರೆಲ್ಲ ಇಟ್ಟಿಗೆ ಹೊತ್ತುಕೊಂಡು ಅಯೋಧ್ಯೆಯ ಕಡೆಗೆ ಹೋಗಿದ್ದರು..."

ನಾಗೇಶ್ ಹೆಗಡೆ ಅವರ ಕಾಲದಲ್ಲಿ ಅಲ್ಲೊಂದು ಇಲ್ಲೊಂದು ಬೃಹತ್ ಯೋಜನೆಗಳು ಬರ್ತಿದ್ದವು. ಅದಕ್ಕೆ ಹೋರಾಟಗಳು ಹುಟ್ಟಿಕೊಳ್ಳುತ್ತಿದ್ದವು. ಹೆಗಡೆಯವರು ಅದರ ಧ್ವನಿಯಾಗಿ ಕೆಲಸ ಮಾಡಿದರು. ಆದ್ರೆ ‘ಪೋಸ್ಟ್ ನಾಗೇಶ್ ಹೆಗಡೆ’ ಕಾಲದಲ್ಲಿ ಏನಾಗ್ತಿದೆ ಅನ್ನೋದನ್ನೂ ನೋಡಬೇಕು.

ಸದ್ಯ ನಮ್ಮ ದೇಶದ ಕೃಷಿ ಕ್ಷೇತ್ರಕ್ಕೆ ಒದಗಿರುವ ಗಂಡಾಂತರವನ್ನು ಯಾರೂ ಸರಿಯಾಗಿ ಗ್ರಹಿಸಿದಂತಿಲ್ಲ. ಬಿಟಿ ಬದನೆ ಬರ್ತಿದೆ, ಬಿಟಿ ಹತ್ತಿ ಬೆಳೆದವರು ಆತ್ಮಹತ್ಯೆ ಮಾಡಿಕೊಂಡಿದಾರೆ, ಯಾವ ಬೆಳೆಗೂ ಸರಿಯಾದ ಬೆಲೆಯಿಲ್ಲ- ಇವೆಲ್ಲ ಇಶ್ಯೂಗಳಾಗಿವೆ ನಿಜ. ಆದರೆ ಕೃಷಿ ಎಂಬ ಒಂದು ಜೀವನ ವಿಧಾನವೇ ಇಲ್ಲವಾಗುತ್ತಿರೋದನ್ನು ಯಾರೂ ಮನಗಂಡ ಹಾಗಿಲ್ಲ.

ಇಲ್ಲಿಂದ ನೂರಾರು ಮೈಲು ದೂರದ ಒಂದು ಮಲೆನಾಡಿನ ಹಳ್ಳಿಯಲ್ಲಿ ಅಡಿಕೆ ಕೃಷಿ ಮಾಡಿಕೊಂಡು ಬದುಕುತ್ತಾ ಇರುವ ನನಗೆ ಇದು ಗೊತ್ತಾಗ್ತಿದೆ. ಮಲೆನಾಡಿನ ಅಡಿಕೆ ಕೃಷಿಕರಿಗೆ ಈಗಾಗಲೇ ತಮ್ಮ ಜಾಗ ಮಾರಿ ಪೇಟೆಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುಶಃ ಒಂದು ಎಕ್ರೆ, ಎರಡೆಕ್ರೆ ಇರುವ ಸಣ್ಣ ಹಿಡುವಳಿದಾರರು ಇನ್ನು ಹತ್ತು ವರ್ಷಗಳಲ್ಲಿ ಹೇಳ ಹೆಸರಿಲ್ಲದಂತಾಗುತ್ತಾರೆ. ಆಮೇಲೇನಿದ್ದರೂ ನೂರಾರು ಎಕರೆ ಹೊಂದಿದ ಜಮೀನ್ದಾರರು, ಕಂಪೆನಿಗಳು ದೊಡ್ಡ ಪ್ರಮಾಣದ ಕೃಷಿ ಮಾಡಿ ಬದುಕಿಕೊಳ್ಳಬಹುದಷ್ಟೇ.

ನನ್ನ ಊರಿನಿಂದ ನಾನು ಬೆಂಗಳೂರಿಗೆ ಬರಬೇಕಾದರೆ ಪೀಣ್ಯ, ದಾಸರಹಳ್ಳೀಲಿ ನಡೀತಿರೋ ಅಗಾಧವಾದ ಮೆಟ್ರೋ, ರಸ್ತೆ, ಬಿಲ್ಡಿಂಗ್ ಕೆಲಸಗಳು ಇವನ್ನೆಲ್ಲ ದಾಟಿಕೊಂಡು ಬರಬೇಕು. ಅಲ್ಲಿ ನಡೀತಿರೋ ಕೆಲಸ, ಆ ದೈತ್ಯಾಕಾರದ ಯಂತ್ರಗಳು, ವಾಹನ ಪ್ರಮಾಣ ಇವನ್ನೆಲ್ಲ ನೋಡ್ತಾ ನೋಡ್ತಾ ನನಗೆ ವಿಚಿತ್ರವಾದ ಹಗಲುಕನಸುಗಳು ಬೀಳಲು ಶುರುವಾಗ್ತವೆ. ಇವೆಲ್ಲ ಏನು ? ಇವೆಲ್ಲ ಯಾವತ್ತಾದರೂ ಮುಗಿಯೋ ಕೆಲಸಗಳಾ ? ಇವು ಮಗಿದಾಗ ಮತ್ತೂ ಎಷ್ಟು ಲಕ್ಷ ವಾಹನಗಳು ರಸ್ತೆಗಿಳೀತವೋ ? ಆಗ ಮತ್ತೆ ಇವೆಲ್ಲ ಮೊದ್ಲಿಂದ...

ನೀವು ಪ್ರಯಾಣ ಹೊರಟು ನೋಡಿ, ಪ್ರತಿ ಹತ್ತು ಕಿಲೋಮೀಟರ್‌ಗೆ ಒಂದು ಕಡೆ ರಸ್ತೆ ರಿಪೇರಿ ನಡೀತಿರೋದು ಕಾಣಿಸ್ತದೆ. ಯಾವತ್ತೂ ಮುಗಿಯದ ರಿಪೇರಿ ಅದು. ಅಗೆದಲ್ಲೇ ಮತ್ತೆ ಮತ್ತೆ ಅಗೀತಾರೆ, ಮುಚ್ತಾರೆ. ಅಂದರೆ, ಇದು ಸರಕಾರಿ ಪ್ರಾಯೋಜಿತ ಬೀದಿ ನಾಟಕ ಅಷ್ಟೆ. ಜನರಿಗೆ ತೋರಿಸಬೇಕು- ಅಭಿವೃದ್ಧಿ ಆಗ್ತಿದೆ ಅಂತ. ಆದ್ರೆ ನಿಜವಾಗಿ ಆಗಿರಬಾರದು. ಹಾಗಾಗಿ ಇದು ಅಭಿವೃದ್ಧಿಯ ಬೀದಿ ನಾಟಕ.

ಇದನ್ನೆಲ್ಲ ಅರ್ಥ ಮಾಡಿಕೊಂಡು ಬರೆಯೋರು ನಿಜವಾಗಿ ನಾಗೇಶ್ ಹೆಗಡೆ ಅವರ ಉತ್ತರಾಕಾರಿಗಳಾಗ್ತಾರೆ.

Thursday, August 6, 2009

ಅಡಿಗ ಮತ್ತು ಇಂಗ್ಲಿಷ್ ಸಾಹಿತ್ಯ


“ಮಂಗಳೂರು, ಭಾರತದ ಕರಾವಳಿಯ ಪಟ್ಟಣ. ಅಲ್ಲಿ ನಾನು ಸುಮಾರು ೧೬ ವರ್ಷ ವಯಸ್ಸಾಗುವವರೆಗೆ ಇದ್ದೆ. ಈಗ ಅದು ಮಾಲ್‌ಗಳು, ಕಾಲ್‌ಸೆಂಟರ್‌ಗಳಿಂದ ತುಂಬಿರುವ ಬೆಳೆದ ನಗರವಾಗಿದೆ. ೧೯೮೦ರ ದಶಕದಲ್ಲಿ ಅದು ಸಮಾಜವಾದಿ ದೇಶವೊಂದರ ದೇಸೀ ಮಾದರಿಯ ಪೇಟೆಯಾಗಿತ್ತು. ಪುಸ್ತಕಗಳು ಅಂದು ದುಬಾರಿಯೆನಿಸಿದ್ದವು. ಕೊಂಡುಕೊಳ್ಳುವವರು ಕಡಿಮೆ ಇದ್ದರು. ನಾವು ಸರ್ಕ್ಯುಲೇಟಿಂಗ್ ಲೈಬ್ರರಿಗಳಿಗೆ ಸೇರಿ ಪುಸ್ತಕ ತಂದು ಓದುತ್ತಿದ್ದೆವು- ಹದಿನೈದು ದಿನಕ್ಕೊಂದು ಕಾದಂಬರಿಗೆ ಎರಡು ರೂಪಾಯಿ, ಕಾಮಿಕ್ಸ್‌ಗೆ ೫೦ ಪೈಸೆ ಬಾಡಿಗೆ."

“ದೇಶಭಕ್ತಿಯ ಚರ್ಚೆಗಳು ನನ್ನ ತಲೆಮಾರಿಗಾಗಲೇ ಅಪ್ರಸ್ತುತವಾಗಿದ್ದವು. ನನ್ನ ಅಜ್ಜಂದಿರು ಹೇಳುತ್ತಿದ್ದ ‘ಕಿಂಗ್ಸ್ ಇಂಗ್ಲಿಷ್’ ನಮ್ಮ ಮಟ್ಟಿಗೆ ‘ನೆಹರೂ ಇಂಗ್ಲಿಷ್’ ಆಗಿತ್ತು. ೧೯೪೭ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಪ್ರಧಾನಿ ಮಾಡಿದ ಭಾಷಣದ ‘ವಿಯ ಜತೆ ಒಪ್ಪಂದ’, ಗಾಂಜಿ ಅವರ ಹತ್ಯೆಯಾದಾಗ ಅವರು ನುಡಿದ ‘ನಮ್ಮ ಜೀವನಗಳಿಂದ ಬೆಳಕು ಹೊರಟುಹೋಗಿದೆ’- ಇತ್ಯಾದಿಗಳು ಅಲ್ಲಲ್ಲಿ, ನಮ್ಮ ಪಠ್ಯಪುಸ್ತಕಗಳಲ್ಲಿ, ರೇಡಿಯೋಗಳಲ್ಲಿ, ಪತ್ರಿಕೆಗಳಲ್ಲಿ ತುಣುಕು ತುಣುಕಾಗಿ ಕಣ್ಣಿಗೆ ಬೀಳುತ್ತಿದ್ದವು."

“ದಕ್ಷಿಣ ಭಾರತೀಯ ಭಾಷೆಯಾದ ಕನ್ನಡ, ಭಾರತೀಯ ಪದಗಳಲ್ಲಿ ಹೇಳುವುದಾದರೆ ನನ್ನ ‘ಮಾತೃಭಾಷೆ’ (ಅಂದರೆ ಸಾಮಾನ್ಯವಾಗಿ ತಂದೆ ಮಾತನಾಡುತ್ತಿದ್ದ ಭಾಷೆ), ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಸೃಜಿಸಿದೆ. ಆದರೆ ಅದರ ಕವಿಗಳು ಹಾಗೂ ಸಾಹಿತಿಗಳಲ್ಲಿ ನನ್ನನ್ನು ಪ್ರಭಾವಿಸಿದವರು ಒಬ್ಬರು ಮಾತ್ರ- ಯು.ಆರ್.ಅನಂತಮೂರ್ತಿ (ಭಾರತದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು). ಅದೂ ಕೂಡ ಅವರ ಒಂದು ಕಾದಂಬರಿ ಸಿನೆಮಾ ಆಗಿದೆ ಎಬ ಕಾರಣದಿಂದ. ನನ್ನ ಹೈಸ್ಕೂಲ್ ಸಹಪಾಠಿಗಳಲ್ಲಿ ತರಗತಿಯಿಂದ ಆಚೆಗೆ ಕನ್ನಡ ಪುಸ್ತಕ ಓದುತ್ತಿದ್ದವರು ಅಪರೂಪ. ಅಲ್ಲಿ ನಮಗೆ ಒತ್ತಾಯದಿಂದ ಪದ್ಯ ಹಾಗೂ ಗದ್ಯದ ತುಣುಕುಗಳನ್ನು ಜೀವವೇ ಇಲ್ಲದ ನೀರಸ ರೀತಿಯಲ್ಲಿ, ೮೦ರ ದಶಕದ ಟಿಪಿಕಲ್ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಕಲಿಸಲಾಗುತ್ತಿತ್ತು. ನಮ್ಮನ್ನು ಸೆಳೆಯುತ್ತಿದ್ದ ಆಕರ್ಷಕ ಬರಹಗಳೆಲ್ಲ ಇಂಗ್ಲಿಷ್‌ನಲ್ಲಿದ್ದವು."

‘ಬಿಳಿ ಹುಲಿ’ಗೆ ಬೂಕರ್ ಪ್ರಶಸ್ತಿ ಪಡೆದ ಅರವಿಂದ್ ಅಡಿಗ ಈ ಬಾರಿ ‘ಬಿಟ್ವೀನ್ ದಿ ಅಸಾಸಿನೇಶನ್ಸ್’ ಎನ್ನುತ್ತ ಪ್ರತ್ಯಕ್ಷರಾಗಿದ್ದಾರೆ. ಇದು ೧೯೮೪ರಲ್ಲಿ ನಡೆದ ಇಂದಿರಾ ಗಾಂ ಹತ್ಯೆ ಹಾಗೂ ೧೯೯೧ರಲ್ಲಿ ನಡೆದ ರಾಜೀವ್ ಗಾಂ ಕಗ್ಗೊಲೆಗಳ ನಡುವಿನ ಕಾಲದಲ್ಲಿ ‘ಕಿತ್ತೂರು’ ಎಂಬ ಕಾಲ್ಪನಿಕ ಪಟ್ಟಣದಲ್ಲಿ ನಡೆಯುವ ಕತೆಗಳ ಸಂಕಲನ.

ಮಂಗಳೂರಿನ ಪರಿಸರ-ಬಾಲ್ಯ- ಸಾಹಿತ್ಯ ಪ್ರೇರಣೆ ಇತ್ಯಾದಿಗಳ ಬಗ್ಗೆ ಅವರು ಬರೆದುಕೊಂಡ ‘ಇಂಗ್ಲಿಷ್ ಸಾಹಿತ್ಯ ನನ್ನನ್ನು ಹೇಗೆ ರೂಪಿಸಿತು ?’ ಎಂಬ ಲೇಖನದಿಂದ ಆಯ್ದ ಭಾಗಗಳಿವು. ಇಡೀ ಲೇಖನ ಓದಬೇಕಾದರೆ ಇಲ್ಲಿದೆ : http://www.independent.co.uk/arts-entertainment/books/features/aravind-adiga-how-english-literature-shaped-me-1749429.html

Saturday, August 1, 2009

ಆ ಬರಹ ಮಾರ್ಕ್ವೆಜ್‌ನದಲ್ಲ !


ಮೊದಲ ಬಾರಿಗೆ, ನನ್ನ ಬರಹದ ಬಗ್ಗೆ ನನಗೇ ನಾಚಿಕೆಯಾಗುವಂಥ ಪರಿಸ್ಥಿತಿ ಬಂದಿದೆ. ಹೇಗೆ ಪಿಗ್ಗಿ ಬಿದ್ದೆ ಎಂಬುದನ್ನು ನೆನೆಸಿಕೊಂಡರೆ ಈಗ ನಗುವೂ ಬರುತ್ತಿದೆ.

ಕಳೆದ ಬಾರಿ ‘ಮಾರ್ಕ್ವೆಜ್ ಗುಡ್‌ಬೈ ಹೇಳುತ್ತಿದ್ದಾನೆ’ ಲೇಖನ ಪೋಸ್ಟ್ ಮಾಡಿದ್ದೆನಲ್ಲ. ಆ ಲೇಖನ ಮಾರ್ಕ್ವೆಜ್‌ನದಲ್ಲವೇ ಅಲ್ಲ ! ಅದು ‘ಜಾನ್ ವೆಲ್ಷ್’ ಎಂಬ ಹೆಸರಿನ ಎರಡನೇ ದರ್ಜೆಯ ಕವಿ ಬರೆದು ಮಾರ್ಕ್ವೆಜ್ ಹೆಸರಿನಲ್ಲಿ ತೇಲಿಬಿಟ್ಟದ್ದು. ಮೇಲ್ ಕಳಿಸಿದ ಮಿತ್ರರೇ ಇದನ್ನೂ ನನಗೆ ತಿಳಿಸಿದರು, ಆದರೆ ಗೊತ್ತಾಗುವಷ್ಟರಲ್ಲಿ ಅನಾಹುತ ಆಗಿಬಿಟ್ಟಿತ್ತು.

೨೦೦೦ನೇ ಇಸವಿಯಲ್ಲಿ ಪೆರುವಿನ ‘ಲಾ ರಿಪಬ್ಲಿಕಾ’ ಎಂಬ ಹೆಸರಿನ ಪತ್ರಿಕೆಯಲ್ಲಿ ಈ ಕವನ ಮೊದಲ ಬಾರಿ ಮಾರ್ಕ್ವೆಜ್ ಹೆಸರಿನಲ್ಲಿ ಪ್ರಕಟವಾಯಿತು. ಬಹಳ ಜನ ಇದನ್ನು ನಂಬಿಯೂಬಿಟ್ಟರು. ಹಾಗೇ ಅದು ಅಲ್ಲಿಂದ ಅಂತರ್ಜಾಲಕ್ಕೆ ಬಂತು. ಮೇಲ್‌ಗಳು ಹರಿದಾಡತೊಡಗಿದವು. ಹೇಗೂ ಮಾರ್ಕ್ವೆಜ್ ಅಸ್ವಸ್ಥ ಎಂಬ ಸುದ್ದಿ ನಿಜವೇ ಇತ್ತಲ್ಲ , ಇದೂ ನಿಜವೇ ಇರಬಹುದೆಂದುಕೊಂಡರು ಜನ.

ಇದು ಮಾರ್ಕ್ವೆಜ್ ಗಮನಕ್ಕೆ ಬಂದಾಗ ಆತ ನೊಂದುಕೊಂಡ. ಮೇಲ್ ಅನ್ನು ನೋಡಿ- “ಬರಿ ಸೆಂಟಿಮೆಂಟಲ್ ಕ್ರಾಪ್ ! ಇಂಥದ್ದನ್ನು ನಾನು ಬರೆದೇನು ಎಂದು ನೀವು ನಂಬುವಿರಾದರೂ ಹೇಗೆ !" ಎಂದನಂತೆ ಆತ !

ಇಂಟರ್‌ನೆಟ್ ಇಂಥ ಮಿಥ್‌ಗಳನ್ನು ಹರಡುವ ಕೇಂದ್ರವಾಗಿದೆ ಎಂಬುದು ಕೂಡ ನಮ್ಮ ಎಚ್ಚರಕ್ಕೆ ಹೊಸ ಕಾರಣವನ್ನು ಈಗ ಸೇರಿಸಿದೆ. ನನ್ನ ದುಡುಕಿಗೆ ಸಾಕ್ಷಿಯಾಗಿ ಈ ಬರಹ ಇರಲಿ ಎಂದು ಬ್ಲಾಗ್‌ನಲ್ಲಿ ಅಳಿಸದೇ ಹಾಗೇ ಬಿಟ್ಟಿದ್ದೇನೆ.

ಈ ಕವನದ ಹಿನ್ನೆಲೆ ಮುನ್ನೆಲೆಗಳ ಬಗ್ಗೆ ಇನ್ನಷ್ಟು ತಿಳಿಯಬೇಕಾದರೆ ಈ ಲಿಂಕ್ ನೋಡಿ: http://www.vahidnab.com/marquez.pdf

Sunday, July 26, 2009

ಮಾರ್ಕ್ವೆಜ್ ಗುಡ್‌ಬೈ ಹೇಳುತ್ತಿದ್ದಾನೆ


ಲ್ಯಾಟಿನ್ ಅಮೆರಿಕದ ಕಾದಂಬರಿಕಾರ ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್, ಸಾಹಿತ್ಯದ ಮೇಲೆ ಪ್ರೀತಿ ಹೊಂದಿದವರಿಗೆಲ್ಲ ಗೊತ್ತು.

ಆತನಿಗೀಗ ಮೆದೋಜೀರಕ ಗ್ರಂಥಿಯ ಕ್ಯಾನ್ಸರ್. ಎರಡನೆಯದೋ ಮೂರನೆಯದೋ ಹಂತದಲ್ಲಿರುವ ಅದು ಆತನ ಜೀವ ಹಿಂಡುತ್ತಿದೆ.

ಹಾಗಾಗಿ ಆತ ಸಾರ್ವಜನಿಕ ಜೀವನಕ್ಕೆ ಗುಡ್‌ಬೈ ಹೇಳಿದ್ದಾನೆ. ಇನ್ನು ಆತ ಭಾಷಣ ಮಾಡುವುದಿಲ್ಲ, ಫೋಟೋಗೆ ಪೋಸ್ ನೀಡುವುದಿಲ್ಲ, ಸಂದೇಶಗಳನ್ನು ಕೊಡುವುದಿಲ್ಲ.

ಬಹುಶಃ, ಏನನ್ನೂ ಬರೆಯುವುದೂ ಇಲ್ಲ.

‘ನೂರು ವರ್ಷದ ಏಕಾಂತ’ಕ್ಕೆ ತೆರಳುವ ಮುನ್ನ ತನ್ನ ಗೆಳೆಯರಿಗೆ, ಆತ್ಮೀಯರಿಗೆ ಸಂದೇಶವೊಂದನ್ನು ಕಳಿಸಿದ್ದಾನೆ. ಅದನ್ನು ನನ್ನ ಆತ್ಮೀಯರೊಬ್ಬರು ನನಗೆ ಕಳಿಸಿದರು. ನಿಮಗೆ ಅದನ್ನು ಹಂಚದೆ ಇರಲು ನನ್ನಿಂದ ಸಾಧ್ಯವೇ ಇಲ್ಲ ಅನಿಸಿತು.

ಅದು ಹೀಗಿದೆ :

“ನಾನೊಂದು ಕೇವಲ ಗೊಂಬೆ ಎಂಬುದನ್ನು ಮರೆತು, ದೇವರು ನನಗೆ ಇನ್ನೊಂದು ಜೀವನದ ತುಣುಕನ್ನು ನೀಡಿದರೆ, ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ರೀತಿಯಲ್ಲಿ ಅದನ್ನು ವಿನಿಯೋಗಿಸಲು ಯತ್ನಿಸುವೆ.

ನಾನು ಯೋಚಿಸಿರುವುದನ್ನೆಲ್ಲ ಹೇಳಲು ಆಗುತ್ತದೋ ಇಲ್ಲವೋ. ಆದರೆ ಹೇಳುವುದನ್ನೆಲ್ಲ ಯೋಚಿಸಿರುತ್ತೇನೆ.
ಯೋಚನೆಗಳು, ವಸ್ತುಗಳು ಎಷ್ಟು ಬೆಲೆ ಬಾಳುತ್ತವೆಂದಲ್ಲ, ಏನನ್ನು ಪ್ರತಿನಿಸುತ್ತವೆ ಎಂದು ಮೌಲ್ಯ ಕಟ್ಟುತ್ತೇನೆ.

ಕಡಿಮೆ ನಿದ್ರಿಸುತ್ತೇನೆ, ಹೆಚ್ಚು ಕನಸುತ್ತೇನೆ. ನಾವು ಕಣ್ಣು ಮುಚ್ಚಿಕೊಂಡಿರುವ ಪ್ರತಿ ನಿಮಿಷಕ್ಕೂ ೬೦ ಸೆಕೆಂಡುಗಳಷ್ಟು ಬೆಳಕು ನಷ್ಟವಾಗುತ್ತಿರುತ್ತದೆ.
ಎಲ್ಲ ಇತರರು ನಿಂತಿರುವರೋ ಅಲ್ಲಿ ಮುಂದುವರಿಯುವೆ ; ಎಲ್ಲಿ ಇತರರು ಮಲಗಿರುವರೋ ಅಲ್ಲಿ ಎದ್ದಿರುವೆ.

ಇನ್ನೊಂದು ತುಣುಕು ಜೀವನವನ್ನು ನನಗೆ ದೇವರು ನೀಡಿದರೆ...ಸರಳವಾಗಿ ಬಟ್ಟೆ ಧರಿಸಿ, ಕಿರಣಗಳಲ್ಲಿ ಹೊರಳಾಡಿ, ದೇಹವನ್ನಷ್ಟೇ ಅಲ್ಲ ಆತ್ಮವನ್ನೂ ಬೆಳಕಿಗೆ ತೆರೆದುಕೊಂಡಿರುತ್ತೇನೆ.

ವೃದ್ಧರಾದಂತೆ ಪ್ರೇಮಿಸುವುದು ಕಡಿಮೆಯಾಗುತ್ತದೆ ಎಂಬ ತಿಳಿವಳಿಕೆ ಎಷ್ಟು ತಪ್ಪೆಂದೂ, ಪ್ರೇಮಿಸದಿರುವುದರಿಂದಲೇ ವೃದ್ಧರಾಗುತ್ತೇವೆಂದೂ ಸಾಸಿ ತೋರಿಸುತ್ತೇನೆ.

ಮಕ್ಕಳಿಗೆ ರೆಕ್ಕೆಗಳನ್ನು ನೀಡುತ್ತೇನೆ, ಆದರೆ ಸ್ವತಂತ್ರವಾಗಿ ಹಾರಲು ಬಿಡುತ್ತೇನೆ.
ವಯಸ್ಸಾದಂತೆ ಸಾವು ಸನಿಹವಾಗುವುದಲ್ಲ, ಅದು ವಿಸ್ಮೃತಿಯಿಂದ ಎಂದು ವೃದ್ಧರಿಗೆ ತಿಳಿಹೇಳುತ್ತೇನೆ.

ನಾನು ನಿಮ್ಮಿಂದ ಎಷ್ಟೊಂದು ಕಲಿತೆ...

ಏರುವ ಪರಿಶ್ರಮದ ಕುರಿತು ಚಿಂತಿಸುವುದನ್ನು ಮರೆತು ಎಲ್ಲರೂ ಬೆಟ್ಟದ ತುದಿಯಲ್ಲಿ ಬದುಕಬೇಕು ಎಂದು ಚಿಂತಿಸುತ್ತಾರೆ ಎಂಬುದನ್ನು ; ಹಸುಳೆಯೊಂದು ತಂದೆಯ ಹೆಬ್ಬೆರಳು ತಬ್ಬಿಕೊಂಡರೆ ಅದು ಶಾಶ್ವತ ಬಾಂಧವ್ಯ ಬಯಸುತ್ತಿದೆ ಎಂಬುದನ್ನು ; ತನ್ನಿಂದ ಕೆಳಗಿರುವವರನ್ನು ನೋಡುವ ಹಕ್ಕು ಅವರನ್ನು ಎತ್ತಬಯಸುವವನಿಗೆ ಮಾತ್ರ ಇರುತ್ತದೆ ಎಂಬುದನ್ನು...


ಯಾವತ್ತೂ ನೀವು ಸ್ಪಂದಿಸಿರುವುದನ್ನೇ ಹೇಳಿ, ಯೋಚಿಸಿರುವುದನ್ನೇ ಮಾಡಿ.


ಇದೇ ಕೊನೆಯ ಬಾರಿಗೆ ನಾನು ನಿಮ್ಮನ್ನು ನೋಡುತ್ತಿರುವುದು ಎಂದು ನನಗೆ ಗೊತ್ತಾದರೆ, ಆಗ ನಾನು ನಿಮ್ಮ ಆತ್ಮದ ಪೋಷಕನಂತೆ ಬಿಗಿಯಾಗಿ ತಬ್ಬಿಕೊಳ್ಳುವೆ. ಇವೇ ನನ್ನ ಕೊನೆಯ ಕ್ಷಣಗಳು ಎಂದು ನನಗೆ ಗೊತ್ತಾದರೆ ನಾನು ನಿಮಗೆ ‘ಐ ಲವ್ ಯು’ ಎಂದು ಹೇಳಬಯಸುವೆ. ಅದು ನಿಮಗೆ ಅರ್ಥವಾಗುತ್ತದೋ ಇಲ್ಲವೋ ಎಂಬುದನ್ನು ಯೋಚಿಸಲಾರೆ.


ಯಾವಾಗಲೂ ಇನ್ನೊಂದು ಬೆಳಗು ಇರುತ್ತದೆ ; ಎಲ್ಲವನ್ನು ಉತ್ತಮಗೊಳಿಸಲು ಜೀವನ ನಮಗೆ ಮತ್ತೊಂದು ಅವಕಾಶ ಕೊಡುತ್ತದೆ.


ಯಾವಾಗಲೂ ನಿಮ್ಮ ಪ್ರೀತಿಪಾತ್ರರ ಸನಿಹದಲ್ಲಿರಿ ; ನೀವು ಅವರನ್ನು ಎಷ್ಟೊಂದು ಪ್ರೀತಿಸುತ್ತೀರಿ ಹಾಗೂ ನಿಮಗೆ ಅವರ ಅಗತ್ಯ ಎಷ್ಟಿದೆ ಎಂಬುದನ್ನು ಹೇಳುತ್ತಿರಿ ; ನಿಮಗೆ ಗೊತ್ತಿರುವ ಎಲ್ಲ ಪ್ರೀತಿ ತುಂಬಿದ ಪದಗಳನ್ನು ಬಳಸಿ.


ನಿಮ್ಮ ಯೋಚನೆಗಳು ಗುಪ್ತವಾಗಿಯೇ ಇದ್ದರೆ ನಿಮ್ಮನ್ನು ಯಾರೂ ನೆನೆಯಲಾರರು ; ಅವುಗಳನ್ನು ಅಭಿವ್ಯಕ್ತಿಗೊಳಿಸಿ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ತೋರಿಸಿ.


ಈ ಸಂದೇಶವನ್ನು ನೀವು ಪ್ರೀತಿಸುವ ಎಲ್ಲರಿಗೆ ಕಳಿಸಿ.

ನೀವು ಕಳಿಸದಿದ್ದರೆ, ನಾಳೆಯು ಕೂಡ ಇಂದಿನಂತೆಯೇ ಇರುತ್ತದೆ.

ಇದೀಗ ನಿಮ್ಮ ಸಂದೇಶದ ಸಮಯ.


ನಿಮ್ಮ ಪ್ರೀತಿಯ -
- ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್"

Sunday, July 12, 2009

ಅವರು ಮೊದಲು ಕಮ್ಯುನಿಸ್ಟರಿಗಾಗಿ ಬಂದರು...


ಅವರು ಮೊದಲು ಕಮ್ಯುನಿಸ್ಟರಿಗಾಗಿ ಬಂದರು.
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕಮ್ಯುನಿಸ್ಟನಾಗಿರಲಿಲ್ಲ.

ಆಮೇಲೆ ಅವರು ಯಹೂದಿಗಳಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ.

ನಂತರ ಅವರು ಕಾರ್ಮಿಕರಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕಾರ್ಮಿಕನಾಗಿರಲಿಲ್ಲ.

ಬಳಿಕ ಅವರು ಕೆಥೊಲಿಕ್ಕರಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಪ್ರೊಟೆಸ್ಟೆಂಟನಾಗಿದ್ದೆ.

ಕೊನೆಗೆ ಅವರು ನನಗಾಗಿಯೇ ಬಂದರು
ಆ ಹೊತ್ತಿಗೆ ನನ್ನ ಪರ ಮಾತನಾಡಲು
ಯಾರೂ ಉಳಿದಿರಲಿಲ್ಲ.

*
ಈ ಪದ್ಯವನ್ನು ಬರೆದವನು ಜರ್ಮನಿಯ ಮಾರ್ಟಿನ್ ನೀಮ್ಯುಲರ್ (೧೮೯೨- ೧೯೮೪) ಎಂಬ ಪಾದ್ರಿ. ನಾಝಿ ದೌರ್ಜನ್ಯ ಹಾಗೂ ಯಹೂದಿ ಜನಾಂಗಹತ್ಯೆಯ ವಿರುದ್ಧ ಮಾತನಾಡಿದವನು. ಈತ ಬರೆದ ಈ ಪದ್ಯ ಈತನಿಗಿಂತ ಪ್ರಸಿದ್ಧ.

*
ಮೈಸೂರಿನಲ್ಲಿ ನನ್ನ ಒಬ್ಬ ಗೆಳೆಯನಿದ್ದಾನೆ. ಆತ ನಿನ್ನೆ ಫೋನ್ ಮಾಡಿ ಹೀಗೆ ಹೇಳಿದ :

ಅವರು ಮೊದಲು ಅಯೋಧ್ಯೆಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಅಯೋಧ್ಯೆಯಲ್ಲಿರಲಿಲ್ಲ.

ಬಳಿಕ ಅವರು ಗುಜರಾತಿಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಗುಜರಾತಿನಲ್ಲಿರಲಿಲ್ಲ.

ನಂತರ ಅವರು ಕರಾವಳಿಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕರಾವಳಿಯಲ್ಲೂ ಇರಲಿಲ್ಲ.

ಕೊನೆಗೆ ಅವರು ಮೈಸೂರಿಗೇ ಬಂದರು
ನಾನು ಈಗಲೂ ಮಾತನಾಡುವುದಿಲ್ಲ
ಯಾಕೆಂದರೆ ಅವರು ಬಂದದ್ದು ನನಗಾಗಿಯಲ್ಲ !

*
ಇತರರು ‘ಮೈಸೂರು’ ಎಂದಿದ್ದಲ್ಲಿ ತಮ್ಮ ಊರಿನ ಹೆಸರು ಸೇರಿಸಿ ಓದಿಕೊಳ್ಳಬಹುದು.